ಶುಕ್ರವಾರ, ಜೂನ್ 18, 2021
21 °C

ಛತ್ರಪತಿ ಶಾಹೂ ಮಹಾರಾಜರು

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ನಮ್ಮ ದೇಶದಲ್ಲಿ ಅನೇಕ ತರಹದ ರಾಜರುಗಳು ಆಗಿ ಹೋಗಿದ್ದಾರೆ.  ಕೆಲ­ವರು ತಮ್ಮ ಶೌರ್ಯದಿಂದ ಖ್ಯಾತಿ­ ಗಳಿಸಿದರೆ, ಮತ್ತೆ ಕೆಲವರು ದಾನ­ದಿಂದ. ಆದರೆ, ಕೆಲವರು ಕೇವಲ ಭೋಗದಿಂದ ಜನರ ಟೀಕೆಗೆ ಒಳಗಾದರೆ ಕೊಲ್ಹಾ­ಪುರದ ಶಾಹೂ ಮಹಾರಾಜ­ಅವರಂಥವರು ತಮ್ಮ ಪ್ರಜೆಗಳ ಹಕ್ಕುಗಳಿ­ಗಾಗಿ, ಸಮಾನತೆಗಾಗಿ, ಅವರ ಶಿಕ್ಷಣಕ್ಕಾಗಿ ಬಹುದೊಡ್ಡ ಕೆಲಸವನ್ನು ಮಾಡಿ ಜಗಮಾನ್ಯರಾದರು. 1884 ರಲ್ಲಿ ಜನಿ­ಸಿದ ಛತ್ರಪತಿ ಶಾಹೂ ಮಹಾರಾಜರು ಜನರ ಉತ್ಥಾನ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ನಂಬಿ ಸರ್ವರಿಗೂ ಶಿಕ್ಷಣದ ಅವಕಾಶ ಮಾಡಿ­ಕೊಟ್ಟರು. ಅದರಲ್ಲಿಯೂ ಸಮಾಜದ ಅತ್ಯಂತ ಕಡೆಯ ವರ್ಗವನೆನ್ನಿಸಿ­ಕೊಂಡವರಿಗೆ ಹೆಚ್ಚಿನ ಆದ್ಯತೆ ನೀಡಿ ವಸತಿ ಶಾಲೆಗಳನ್ನು ಸ್ಥಾಪಿಸಿ ಉಚಿತ ಹಾಗೂ ಕಡ್ಡಾಯದ ಶಿಕ್ಷಣ ದೊರಕಿಸಿದರು. ದಲಿತರ ಮುಖವಾಣಿ­ಯಾದರು. ಆಗಿನ ಕಾಲದಲ್ಲಿ ಅಸ್ಪೃಶ್ಯರು ಬಾವಿಯನ್ನು ಮುಟ್ಟುವಂತಿರಲಿಲ್ಲ.  ಯಾರಾದರೂ ಸವರ್ಣೀಯರು ಬಂದು ನೀರು ಸೇದಿ ಹಣಿಸಿದರೆ ಮಾತ್ರ ಅವರಿಗೆ ನೀರು. ಒಬ್ಬ ಅಸ್ಪೃಶ್ಯನಿಗೆ ತುಂಬ ಬಾಯಾರಿಕೆಯಾಗಿ ಅನೇಕರಿಗೆ ನೀರು ಕೊಡಿರೆಂದು ಹಲು­ಬುತ್ತಾನೆ.ಯಾರೂ ಕರುಣೆ ತೋರ­ದಿದ್ದಾಗ ಬಾಯಾರಿಕೆ­ಯನ್ನು ತಡೆಯದೇ ತಾನೇ ನೀರು ಸೇದಿಕೊಂಡು ಕುಡಿ­ಯುತ್ತಾನೆ. ಇದನ್ನು ಕಂಡ ಸವರ್ಣೀ­ಯರು ಆತನನ್ನು ಪ್ರಜ್ಞೆ ತಪ್ಪುವಂತೆ ಥಳಿಸುತ್ತಾರೆ. ಆ ಮನುಷ್ಯನ ಸ್ನೇಹಿತರು, ಪರಿವಾರದವರು ಅವನನ್ನು ಹೊತ್ತು-­ಕೊಂಡು ಅರಮನೆಗೆ ಬಂದು ಶಾಹೂ ಮಹಾರಾಜರನ್ನು ಕಂಡು ಸಂಗತಿಯನ್ನು ವಿವರಿಸುತ್ತಾರೆ.  ಆಗ ಮಹಾ­ರಾಜರು ಯಾವ ಯಾವ ಸವರ್ಣೀಯ ವ್ಯಕ್ತಿ ಈ ದೀನನನ್ನು ಹೊಡೆ­ದಿದ್ದಾನೋ ಅವರ­ನ್ನೆಲ್ಲ ಕರೆಸಿ ಇನ್ನೊಮ್ಮೆ ಆ ತರಹ ಮಾಡದಂತೆ ದಂಡಿಸುತ್ತಾರೆ. ಅಷ್ಟೇ ಅಲ್ಲ, ಆ ಅಸ್ಪೃಶ್ಯ ವ್ಯಕ್ತಿಗೆ ಹಣಕೊಟ್ಟು ಅರಮನೆಯ ಹತ್ತಿರವೇ ಒಂದು ಚಹಾದ ಅಂಗಡಿ ಹಾಕಿ ಕೊಡುತ್ತಾರೆ.  ನಂತರ ಸಮಯ ದೊರೆತಾಗಲೆಲ್ಲ ಅವನ ಚಹಾದ ಅಂಗಡಿಗೆ ಹೋಗಿ ಅವನೇ ಮಾಡಿಕೊಟ್ಟ ಚಹಾವನ್ನು ಅವ­ನೊಂದಿಗೇ ಕುಡಿ­ಯುತ್ತಾರೆ.  ತಮ್ಮನ್ನು ಕಾಣಲು ಬಂದವ­ರನ್ನೆಲ್ಲ ಅದೇ ಚಹಾ ಅಂಗಡಿಗೆ ಕರೆಸಿ, ಅವರಿಗೂ ಆತ ಮಾಡಿದ ಚಹಾ ಕುಡಿಸಿ ಕಳಿಸುತ್ತಿದ್ದರು.  ಜಾತಿಯ ಅಹಂಕಾರ­ದಿಂದ ಮರೆಯು­ತ್ತಿದ್ದವರ ಭ್ರಮೆಗಳನ್ನು ಸ್ವತಃ ತಾವೇ ಮಾದರಿಯಾಗಿ ನಿಂತು ನಿವಾರಿ­ಸುತ್ತಿದ್ದರು. ಅವರು ಮೂಢನಂಬಿಕೆಯನ್ನೂ ಬಲವಾಗಿ ವಿರೋಧಿಸಿದ್ದರು.  ಒಮ್ಮೆ ಅವರ ಆಸ್ಥಾನಕ್ಕೆ ಒಬ್ಬ ಜ್ಯೋತಿಷಿ ಬಂದ. ಅವರ ಭವಿಷ್ಯವನ್ನು ಹೇಳುತ್ತೇನೆ ಎಂದ. ಶಾಹೂ ಮಹಾರಾಜರು ಅವನನ್ನು ಮರುದಿನ ಬೆಳಿಗ್ಗೆ ಅರಮನೆಗೆ ಬರುವಂತೆ ಹೇಳಿದರು. ಆತ ಹೇಳಿದಂತೆ ಬಂದೊಡನೆ ಅರಮನೆಯ ಸೈನಿಕರು ಅವನನ್ನು ಬಂಧಿಸಿ ಕಾರಾಗೃಹಕ್ಕೆ ತಳ್ಳಿದರು. ಜ್ಯೋತಿಷಿ ಗಾಬರಿಯಾದ, ತನ್ನ ತಪ್ಪೇನು ಎಂದು ಸೈನಿಕರನ್ನು ಕೇಳಿದ. ಅವರು ತಮಗೆ ಕಾರಣ ಗೊತ್ತಿಲ್ಲವೆಂತಲೂ, ಬಹುಶಃ ಮರುದಿನ ಬೆಳಿಗ್ಗೆ ಅವನಿಗೆ ನೇಣು ಹಾಕಲಾಗುತ್ತದೆಂದೂ ಹೇಳಿ­ದಾಗ ಆತ ಕಂಗಾಲಾಗಿ, ಹೊರಳಾಡಿ ಅತ್ತ, ರಾತ್ರಿಯೆಲ್ಲ ಒದ್ದಾಡಿದ ಆತನನ್ನು ಬೆಳಿಗ್ಗೆ ಶಾಹೂ ಮಹಾರಾಜರ ಮುಂದೆ ಕರೆತಂದರು.ಆತ ದೊಪ್ಪನೇ ಮಹಾರಾಜರ ಕಾಲಮೇಲೆ ಬಿದ್ದು, ‘ಸ್ವಾಮೀ, ನನ್ನಿಂದ ಯಾವ ಅಪ­ರಾಧವೂ ಆಗಿಲ್ಲ, ನನಗೆ ಏಕೆ ಈ ಶಿಕ್ಷೆ?’ ಎಂದು ಕೇಳಿದ.  ಆಗ ಮಹಾರಾಜರು, ‘ಅಲ್ಲಪ್ಪ, ನೀನು ನಿನ್ನೆ ಬೆಳಿಗ್ಗೆ ಅರಮನೆಗೆ ಬರುವಾಗ ನಿನ್ನನ್ನು ಜೈಲಿಗೆ ಹಾಕುತ್ತಾ­ರೆಂಬ ಭವಿಷ್ಯ ತಿಳಿದಿರಲಿಲ್ಲ. ನಿನಗೇ ನಾಳೆ ಏನಾಗುತ್ತದೆ ಎಂಬುದು ತಿಳಿಯದಿದ್ದಾಗ ನನ್ನ ಅಥವಾ ಮತ್ತೊಬ್ಬರ ಭವಿಷ್ಯ ನಿನಗೆ ಹೇಗೆ ತಿಳಿದೀತು? ಸಾಕು, ಇನ್ನೂ ಜನರನ್ನು ಮೋಸಮಾಡಬೇಡ’ ಎಂದು ತಾಕೀತು ಮಾಡಿ ಕಳುಹಿಸಿದರು. ಇಂತಹ ಸಾಮಾಜಿಕ ಕಳಕಳಿಯ, ಪ್ರಾಮಾಣಿಕ ಚಿಂತನೆಯ, ದೀನರಿಗೆ ಧ್ವನಿಯಾದ, ಸಮಾನತೆಯ ಹರಿಕಾರರಾದ ನಾಯ­ಕರು ಮಾನವತೆ ಮೆರೆಯುತ್ತಾರೆ. ಇದ್ದಾಗ ಅನೇಕ ಜನರಿಗೆ ಬೆಳಕಾಗು­ತ್ತಾರೆ. ಜೀವಿತದ ಅವಧಿ ಮುಗಿದ ಬಳಿಕವೂ ಉಜ್ವಲ ಪ್ರಭೆಯ ದಾರಿದೀಪವನ್ನು ತೋರುತ್ತಾರೆ.  ಅಂಥ ಮಹಾನುಭಾವರಲ್ಲಿ ಛತ್ರಪತಿ ಶಾಹೂ ಮಹಾರಾಜರೂ ಒಬ್ಬರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.