ನಾನು ಮುಂಬೈಗೆ ಹೋದಾಗ ಪ್ರೇಮ್ ಗಣಪತಿ ಎಂಬ ವ್ಯಕ್ತಿಯನ್ನು ಸ್ನೇಹಿತರೊಬ್ಬರು ಪರಿಚಯಿಸಿದರು. ಆತ ತನ್ನ ಕಥೆ ಹೇಳಿದಾಗ ನಾನು ಬೆರಗಾದೆ. ಈತ ತಮಿಳುನಾಡಿನ ತೂತುಕುಡಿ ಜಿಲ್ಲೆಯ ನಾಗಲಾಪುರ ಗ್ರಾಮದ ಅತ್ಯಂತ ಬಡಕುಟುಂಬಕ್ಕೆ ಸೇರಿದವರು. ಹತ್ತನೇ ತರಗತಿಯ ಪರೀಕ್ಷೆ ಮುಗಿದ ಮೇಲೆ ಮದ್ರಾಸಿಗೆ ಹೋಗಿ ಜೀವನ ಅರಸಿದರು.

ಅಲ್ಲಲ್ಲಿ ಕೆಲಸ ಮಾಡಿದಾಗ ದೊರೆತ ಹಣದಲ್ಲಿ ತನ್ನ ಬದುಕೇ ಕಷ್ಟದ್ದೆನಿಸಿತು, ಮನೆಗೆ ಹಣ ಕಳಿಸುವುದಂತೂ ದೂರದ ಮಾತು. ಯಾರೋ ಪರಿಚಯದವರು ಮುಂಬೈನಲ್ಲಿ ಒಂದು ಕೆಲಸವಿದೆ, ಅಲ್ಲಿ ನಿನಗೆ ತಿಂಗಳಿಗೆ ಸಾವಿರ ರೂಪಾಯಿ ಸಂಬಳ ಕೊಡುತ್ತಾರೆಂದು ನಂಬಿಸಿ ಕಳುಹಿಸಿದರು. ಈತ ಬಂದು ಮುಂಬೈನಲ್ಲಿ ಇಳಿದಾಗ ಇವರನ್ನು ಕರೆದೊಯ್ಯಲು ಬಂದ ವ್ಯಕ್ತಿ ಪ್ರೇಮ್ ಬಳಿಯಿದ್ದ ಇನ್ನೊಂದು ರೂಪಾಯಿಯನ್ನು ಇಸಿದುಕೊಂಡು ಈಗ ಬರುತ್ತೇನೆಂದು ಹೇಳಿ ಮಾಯವಾದ.

ಕೈಯಲ್ಲಿ ಒಂದು ಕಾಸೂ ಇಲ್ಲ. ಮನೆಗೆ ಮರಳುವುದೆಂತು? ಮನೆಗೆ ಹೋಗಿ ಯಾವ ಮುಖ ತೋರಿಸುವುದು.? ಹದಿನೇಳರ ತರುಣ ಅಲ್ಲಿಯೇ ಇದ್ದು ಬದುಕು ಕಟ್ಟಲು ತೀರ್ಮಾನಿಸಿದ. ಒಂದು ಬೇಕರಿಯಲ್ಲಿ ಪಾತ್ರೆ ತೊಳೆಯುವ, ನೆಲ ಒರೆಸುವ ಕೆಲಸ ಒಪ್ಪಿಕೊಂಡ. ಆತನಿಗೆ ಅಲ್ಲಿಯೇ ರಾತ್ರಿ ಮಲಗಲು ಅವಕಾಶ ಕೊಟ್ಟದ್ದು ದೊಡ್ಡದೆನಿಸಿತು. ಎರಡು ವರ್ಷ ಬೇಕರಿಯಲ್ಲಿಯ ಚಾಕರಿಯೊಂದಿಗೆ ಮತ್ತು ಅಲ್ಲಲ್ಲಿ ಕೆಲಸ ಮಾಡಿ ಹೋಟೆಲ್ಲಿನ ಕೆಲಸವನ್ನು ಕಲಿತ.

ನಂತರ ತಾನು ಕೂಡಿಸಿಟ್ಟಿದ್ದ ಸಾವಿರ ರೂಪಾಯಿಯಲ್ಲಿ ಒಂದಿಷ್ಟು ಪಾತ್ರೆ, ಸ್ಟವ್, ಹಂಚುಗಳನ್ನು ಕೊಂಡು ಒಂದು ತಳ್ಳುವ ಗಾಡಿಯನ್ನು ಬಾಡಿಗೆ ತೆಗೆದುಕೊಂಡು ಮುಂಬೈನ ವಾಶಿ ರೇಲ್ವೆ ನಿಲ್ದಾಣದ ಮುಂದೆ ದೋಸೆ ಮಾಡಿ ಮಾರಲು ತೊಡಗಿದ. ನಿಧಾನವಾಗಿ ಅದು ಜನಪ್ರಿಯತೆ ಪಡೆಯಿತು. ತನ್ನ ಮನೆಗೆ ಫೋನ್ ಮಾಡಿ ತನ್ನಿಬ್ಬರು ತಮ್ಮಂದಿರನ್ನು ಕರೆಸಿಕೊಂಡ. ಅವರೂ ಕೆಲಸಕ್ಕೆ ಆಸರೆಯಾದರು. ತಾನು ಉಳಿದ ರಸ್ತೆಯಲ್ಲಿ ಆಹಾರ ಮಾಡುವವರಿಗಿಂತ ಭಿನ್ನವಾಗಬೇಕೆಂದು ನಿರ್ಧರಿಸಿದ.

ಮೂವರೂ ಒಂದು ಯೂನಿಫಾರಂ ಮಾಡಿಕೊಂಡರು. ತಲೆಗೆ ಟೊಪ್ಪಿಗೆ ಹಾಕಿಕೊಂಡರು, ಕೈಗೆ ಕೈಚೀಲಗಳು ಬಂದವು. ಪಾತ್ರೆ, ಪ್ಲೇಟುಗಳನ್ನು ಸೋಪು ಹಾಕಿ ತೊಳೆದು ಶುಭ್ರವಾಗಿ ಒರೆಸಿದರು. ಯಾವಾಗ ಶುದ್ಧತೆ ಕಾಣತೊಡಗಿತೋ ಗಿರಾಕಿಗಳು ಹೆಚ್ಚಿದರು. ತಿಂಗಳಿಗೆ ಇಪ್ಪತ್ತು ಸಾವಿರ ರೂಪಾಯಿಗಳ ಆದಾಯ ಕಾಣತೊಡಗಿತು. ಮರುವರ್ಷ ವಾಶಿಯಲ್ಲಿಯೇ ಒಂದು ಕೋಣೆಯನ್ನು ಬಾಡಿಗೆಗೆ ತೆಗೆದುಕೊಂಡು ಅಲ್ಲಿ ದೋಸೆಯ ಹೋಟೆಲ್ ಆರಂಭಿಸಿದರು. ಅದಕ್ಕೆ ಪ್ರೇಮಸಾಗರ ದೋಸಾ ಪ್ಲಾಜಾ ಎಂದು ಹೆಸರಿಟ್ಟರು.

ಹತ್ತಿರದ ಕಾಲೇಜಿನ ವಿದ್ಯಾರ್ಥಿಗಳು ಇದಕ್ಕೆ ಲಗ್ಗೆ ಇಟ್ಟರು. ಕೈಕೆಳಗೆ ಮೂವರು ಕೆಲಸಗಾರರನ್ನಿಟ್ಟುಕೊಂಡರೂ ನಿಭಾಯಿಸುವುದು ಕಷ್ಟವಾಯಿತು. ಕಾಲೇಜು ಹುಡುಗರು ಪ್ರೇಮ್ಗೆ ಇಂಟರನೆಟ್ ಬಳಸುವುದನ್ನು ಕಲಿಸಿಕೊಟ್ಟರು. ಪ್ರೇಮ್ ಹಾಗೂ ಸಹೋದರರು ಅದನ್ನು ಬಳಸಿ ತರತರಹದ ದೋಸೆಗಳನ್ನು ಮಾಡುವುದನ್ನು ಪ್ರಾರಂಭಿಸಿದರು. ೨೦೦೨ ರ ಹೊತ್ತಿಗೆ ಹೋಟೆಲ್ಲಿನಲ್ಲಿ ನೂರಾ ಐದು ತರಹದ ದೋಸೆಗಳನ್ನು ಮಾಡುತ್ತಿದ್ದರಂತೆ.

ಮರುವರ್ಷ ಸೆಂಟರ್ ಒನ್ ಮಾಲ್ನಲ್ಲಿ ಇವರ ದೊಡ್ಡ ದೋಸೆ ಅಂಗಡಿ ಪ್ರಾರಂಭವಾಯಿತು. ಬೇರೆ ಬೇರೆ ಜನ ಇವರ ಸಹಯೋಗವನ್ನು ಬಯಸಿ ಬಂದರು. ಇದೇ ಹೆಸರಿನ ಹೋಟೆಲ್ಲುಗಳು ಸಹಯೋಗದಲ್ಲಿ ಪ್ರಾರಂಭವಾದವು. ಪರದೇಶದಿಂದಲೂ ಬೇಡಿಕೆ ಬಂತು. ಇಂದು ಪ್ರೇಮ್ ಗಣಪತಿ ಅವರ ನಲವತ್ಮೂರು ಹೋಟೆಲ್ಲುಗಳು ಭಾರತದ ಹನ್ನೊಂದು ರಾಜ್ಯಗಳಲ್ಲಿವೆ. ಇದರೊಂದಿಗೆ ನ್ಯೂಜಿಲೆಂಡಿನಲ್ಲಿ ಮೂರು, ದುಬೈನಲ್ಲಿ ಎರಡು, ಮಸ್ಕತ್ನಲ್ಲಿ ಒಂದು ಹೋಟೆಲ್ ಇದೆ.

ಕೇವಲ ಸಾವಿರ ರೂಪಾಯಿ ಬಂಡವಾಳ ಹಾಕಿ ಪ್ರಾರಂಭಿಸಿದ್ದು ಇಂದು ಮೂವತ್ತು ಕೋಟಿ ರೂಪಾಯಿಯ ಕಂಪನಿಯಾಗಿ ಬೆಳೆದಿದೆ. ಇಷ್ಟರಲ್ಲೇ ಐವತ್ತು ಕೋಟಿ ವ್ಯವಹಾರವನ್ನು ತಲುಪುವ ನಂಬಿಕೆ ಪ್ರೇಮ ಗಣಪತಿಯವರಿಗಿದೆ. ನಮ್ಮ ಬಳಿ ಏನೂ ಇಲ್ಲ, ನಾವೇನು ಮಾಡಬಲ್ಲೆವು ಎಂದು ಕೇಳುವವರಿಗೆ ಪ್ರೇಮ್ ಗಣಪತಿ ಉತ್ತರವಾಗಿ ನಿಂತಿದ್ದಾರೆ. ಹಣವಿಲ್ಲದಿದ್ದರೆ ತೊಂದರೆಯಿಲ್ಲ. ಆದರೆ, ಹೃದಯದಲ್ಲಿ ಸಾಧನೆಯ ಛಲವಿಲ್ಲದಿದ್ದರೆ ಏನೂ ಸಾಧ್ಯವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.