ಶನಿವಾರ, ಮೇ 8, 2021
25 °C

ಜೈನಧರ್ಮ ಮತ್ತು ಇಂದಿನ ಜಗತ್ತು

ಎಚ್.ಎಸ್.ಶಿವಪ್ರಕಾಶ್ Updated:

ಅಕ್ಷರ ಗಾತ್ರ : | |

ಜೈನಧರ್ಮ ಮತ್ತು ಇಂದಿನ ಜಗತ್ತು

ತ್ತೀಚೆಗೆ ಬರ್ಲಿನ್ನಿನ ಡಾಲೆಂ ವಸ್ತು ಸಂಗ್ರ ಹಾಲಯದ ಸಭಾಂಗಣದಲ್ಲಿ ಒಂದು ವಿಶೇಷ ಕಾರ್ಯಕ್ರಮ. ಜೈನಧರ್ಮದ ಬಗ್ಗೆ ತಲಸ್ಪರ್ಶಿ ಅಧ್ಯಯನ ನಡೆಸಿರುವ ಇಬ್ಬರು ಯೂರೋಪಿಯನ್ ವಿದ್ವಾಂಸರಿಗೆ ಪ್ರಾಕೃತ ಅಂತರರಾಷ್ಟ್ರೀಯ ಪ್ರಶಸ್ತಿ ನೀಡಲಾಯಿತು.

ಈ ಪ್ರಶಸ್ತಿ ಸ್ಥಾಪಿಸಿದವರು ಶ್ರವಣಬೆಳಗೊಳದ ಸ್ವಸ್ತಿ ಶ್ರೀಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ. ಕಾರ್ಯ ಕ್ರಮವನ್ನು ಏರ್ಪಡಿಸಿದ್ದವರು ಫ್ರೀ ವಿಶ್ವವಿದ್ಯಾ ಲಯದ ಜೈನ ಅಧ್ಯಯನ ಕೇಂದ್ರ. ಶ್ರವಣಬೆಳ ಗೊಳದ ಅಧ್ಯಯನ ಕೇಂದ್ರದ ಸ್ವಾಮೀಜಿಯವರ ಪ್ರತಿನಿಧಿಯಾಗಿ ನನ್ನ ವಿದ್ಯಾಗುರುಗಳಾದ ಪ್ರೊ.ಹಂಪನಾ ಅವರು ಕಾರ್ಯಕ್ರಮದ ಚುಕ್ಕಾಣಿ ಹಿಡಿದಿದ್ದರು. ತಮ್ಮ ಮಾಜಿ ವಿದ್ಯಾರ್ಥಿ ಯಾದ ನನ್ನ ಮೇಲಿನ ಅಭಿಮಾನದಿಂದ ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯನ್ನಾಗಿ ನನ್ನನ್ನು ಕರೆದಿದ್ದರು.ಭಾರತದಲ್ಲಿ ಮತ್ತು ವಿಶ್ವದ ಎಲ್ಲೆಡೆಗಳಲ್ಲಿ ಜೈನಧರ್ಮದ ತತ್ವಗಳ ಬಗ್ಗೆ ಹೆಚ್ಚಿನ ಪ್ರಚಾರ ಅತ್ಯವಶ್ಯ. ಕಾರಣಗಳು ಎರಡು. ಮೊದಲನೆ ಯದು, ವೇದಾಂತ, ಬೌದ್ಧಧರ್ಮ, ಯೋಗ, ಶೈವ, ವೈಷ್ಣವ ಪಂಥಗಳ ಬಗ್ಗೆ ಸಾಕಷ್ಟು ಪ್ರಚಾರ ವಾಗಿದೆ. ಆದರೆ ಜೈನಧರ್ಮದ ಪ್ರಚಾರ ಆ ಮಟ್ಟಿಗೆ ನಡೆದಿಲ್ಲ.

  ಎರಡನೆ ಕಾರಣ: ಅವುಗ ಳಷ್ಟೇ ಮೌಲಿಕ ಕೊಡುಗೆಗಳನ್ನು ಭಾರತೀಯ ಸಂಸ್ಕೃತಿಗೆ ನೀಡಿರುವುದಲ್ಲದೆ ಅವುಗಳೆಲ್ಲದರ ತಳ ದಲ್ಲಿ ಒಂದು ಅಂತರ್ಜಲದಂತೆ ಕೆಲಸ ಮಾಡಿ ರುವ ಜೈನಧರ್ಮದ ಬಗೆಗೆ ಹೊರರಾಷ್ಟ್ರಗಳಿಗೆ ದೊರಕಿರುವ ತಿಳಿವಳಿಕೆ ಅಪರೂಪ. ಇಂದಿನ ಜೀವಜಗತ್ತಿನ ಉಳಿವಿಗಾಗಿ ಜೈನಧರ್ಮದ ಮೂಲಭೂತ ತತ್ವಗಳು ಕೇವಲ ಜೈನರಿಗೆ ಮಾತ್ರವಲ್ಲ, ಇಡೀ ಜಗತ್ತಿಗೆ ಅಗತ್ಯವಾಗಿವೆ.ಟರ್ಕಿಯ ಕವಿ ನಿಸಿಮ್ ಹಿಕ್ಮತ್ ಕೇಳಿದ; ಯಾಕೆ ಈ ನೆಲದಲ್ಲಿ ದುಃಖವೊಂದೇ ಮೊಳೆಯು ತ್ತಿದೆ, ಬೆಳೆಯುತ್ತಿದೆ?

ಯಾಕೆ ಮನುಕುಲದ ಎಲ್ಲ ಪ್ರಗತಿಗಳೂ ದುರ್ಗತಿಗೆ ಎಡೆ ಮಾಡಿಕೊಡುತ್ತಿವೆ? ಯಾಕೆ ಹೊಸಹೊಸ ಮದ್ದುಗಳನ್ನು ಕಂಡುಹಿಡಿದು ಮಾರ್ಕೆಟ್ಟಿಗೆ ಬಿಟ್ಟೊಡನೆ ಹೊಸಹೊಸ ಕಾಯಿಲೆ ಗಳು ಹುಟ್ಟಿಕೊಳ್ಳುತ್ತಿವೆ? ಯಾಕೆ ಮಾನವ ಕೇಂದ್ರಿತ ಭೌತಿಕವಾದಿ ನಾಗರಿಕತೆ ಮುನ್ನಡೆದಂತೆ ಮಾನವಸಂಬಂಧಗಳು ಹೆಚ್ಚು ಹೆಚ್ಚು ಜಟಿಲವೂ ತ್ರಾಸದಾಯಕವೂ ಆಗುತ್ತಿವೆ? ಯಾಕೆ ಸಮಾಜ ಕಲ್ಯಾಣ ಕಾರ್ಯಕ್ರಮಗಳು ಸಮಾಜ ಕಲ್ಯಾಣ ವನ್ನು ಬಯಸಿದ ಮಟ್ಟಿಗೆ ಸಾಧಿಸುತ್ತಿಲ್ಲ? ಯಾಕೆ ವಿಜ್ಷಾನದ ಅಭೂತಪೂರ್ವ ಬೆಳವಣಿಗೆಯಾಗು ತ್ತಿದ್ದರೂ ಅಜ್ಞಾನಾಂಧಕಾರ ಕೊನೆಯಾಗುತ್ತಿಲ್ಲ? ಯಾಕೆ ಶಾಂತಿಯನ್ನು ಗುರಿಯಾಗಿರಿಸಿಕೊಂಡ ಕ್ರಾಂತಿ ಸಿದ್ಧಾಂತಗಳೂ ಪ್ರಯತ್ನಗಳು ಅಶಾಂತಿ ಯನ್ನು ಹುಟ್ಟುಹಾಕುತ್ತಿವೆ? ಇವು ಇಂದಿನ ಮೂಲಭೂತ ಪ್ರಶ್ನೆಗಳಲ್ಲಿ ಕೆಲವು.ನಾವೆಲ್ಲರೂ ಇಂದಿನ ಸಮಸ್ಯೆಗಳ ಕಾರಣ ಗಳನ್ನು ಭೌತಿಕ ಜಗತ್ತಿನಲ್ಲಿ, ಸಮಾಜ ರಚನೆ ಯಲ್ಲಿ, ಚರಿತ್ರೆ, ಭೂಗೋಳಗಳಲ್ಲಿ, ಬೇರೊಂದು ಧರ್ಮ ಅಥವಾ ಜಾತಿಯ ಅನ್ಯಾಯದಲ್ಲಿ, ಬೇರೊಂದು ಪಕ್ಷದ ದುರಾಡಳಿತದಲ್ಲಿ ಹುಡುಕು ತ್ತಿದ್ದೇವೆ. ಆಸ್ತಿಕ ಬಂಧುಗಳು ಅತ್ಯಂತ ಸುಲಭ ವಾಗಿ ಈ ವಿಷಮಪರಿಸ್ಥಿತಿಯ ಜವಾಬ್ದಾರಿ ಯನ್ನು ತಾವು ನಂಬುವ ದೇವರಿಗೆ ವರ್ಗಾಯಿಸಿ ಬಿಡುತ್ತಾರೆ. ಇವೆಲ್ಲವೂ ಭೌತಿಕ ದೃಷ್ಟಿಯ ಹಲವು ರೂಪಗಳು.ಇಂದು ಇಡೀ ಜಗತ್ತಿಗೆ ಅದರಲ್ಲೂ ಭಾರತಕ್ಕೆ ಮಾರಕವಾಗಿರುವ ಧಾರ್ಮಿಕ ಮತಾಂಧತೆ ಯನ್ನು ಹೇಗೆ ಪರಿಹರಿಸುವುದು? ಈ ಕೋಮಿನ ಮೂಲಭೂತವಾದಿಗಳು ಆ ಕೋಮಿನ ಮೇಲೆ ತಪ್ಪು ಹೊರಿಸುತ್ತಾ ಹಿಂಸೆಗೆ ಉತ್ತರವಾಗಿ ಪ್ರತಿ ಹಿಂಸೆಯನ್ನೇ ಎಸಗುತ್ತಾ ಹೋದರೆ ಇದಕ್ಕೆ ಕೊನೆ ಎಲ್ಲಿ?ಭೌತಿಕವಾದಿಗಳಾದ ಚಾರ್ವಾಕರನ್ನು ಹೊರತು­ಪಡಿಸಿದರೆ ಹೊರಗಿನ ಈ ಕುತ್ತುಗಳನ್ನು ಪರಿಹರಿಸಿಕೊಳ್ಳುವುದಕ್ಕೆ ಇನ್ನೊಂದು ಬಗೆಯ ವಿವೇಕಯುತ ದಾರಿಯನ್ನು ಹೇಳಿದವು ನಮ್ಮ ಆರ್ಷೇಯ ಮಾರ್ಗಗಳು. ಪುರೋಹಿತರ ನಂಬಿ ಪಶ್ಚಿಮಬುದ್ಧಿಯಾದ ನಾವು ಆ ವಿವೇಕವನ್ನು ಮರೆತಿದ್ದೇವೆ. ಆದ್ದರಿಂದಲೇ ಎಲ್ಲೆಲ್ಲೂ ಹಗೆಯ ನಂಜು. ಆ ಆರ್ಷೇಯ ವಿವೇಕವನ್ನು ಮಿಕ್ಕೆಲ್ಲ ಪಂಥಗಳಿಗಿಂತ ಮೊದಲು ಅತ್ಯಂತ ಸ್ಪಷ್ಟವಾಗಿ ಉಚ್ಚರಿಸಿದ್ದು, ಆಚರಿಸಿದ್ದು ಮತ್ತು ಪ್ರಚಾರ ಮಾಡಿದ್ದು ಜೈನಧರ್ಮ.  ಅತ್ಯಂತ ವಿಶಾಲ ಭಿತ್ತಿಯ ಜೈನಧರ್ಮದ ಆಧಾರಸ್ತಂಭಗಳಾದ ಎರಡು ಪ್ರಜ್ಞಪ್ತಿಗಳು ಇಂದು ಹಿಂದೆಂದಿ ಗಿಂತಲೂ ನಮಗೆ ಹೆಚ್ಚು ಮುಖ್ಯವಾಗುತ್ತಿವೆ.ಜೈನಧರ್ಮ ಅತ್ಯಂತ ನಿಷ್ಠುರವಾದ ತಾರ್ಕಿಕ ಧರ್ಮ. ಅದರಲ್ಲಿ ಶೈವ, ಶಾಕ್ತಗಳ ಅನುಗ್ರಹದ ಕಲ್ಪನೆಯಿಲ್ಲ. ಮೂಲ ಬೌದ್ಧದಂತೆ ಸಮಣ ಧರ್ಮವಾಗಿರುವ ಜೈನಧರ್ಮದಲ್ಲೂ ನಮ್ಮ ಬಂಧನಗಳನ್ನು ಬಿಡಿಸಿಕೊಳ್ಳುವ ಜವಾಬ್ದಾರಿ ನೇರವಾಗಿ ನಮ್ಮದೇ. ಬೇರೆ ಪಂಥಗಳಿಗೆ ಹೋಲಿ ಸಿದರೆ ಜೈನ ಸನ್ಯಾಸಿಗಳು ಪಾಲಿಸಬೇಕಾದ ನಿಯ ಮಗಳು ಕಠೋರ. ಆದ್ದರಿಂದ ಬಂಧ ವಿಮೋ ಚನೆಗೆ ಸುಲಭಮಾರ್ಗಗಳನ್ನು ಹೇಳುವ ಇತರ ಪಂಥಗಳಷ್ಟು ಜೈನಧರ್ಮ ಜನ ಪ್ರಿಯವಾಗಲಿಲ್ಲ.

ಆದರೆ ಜೈನಧರ್ಮದ ಮೂಲ ತತ್ತ್ವಗಳಾದ ಅಹಿಂಸೆ ಮತ್ತು ಅನೇಕಾಂತವಾದ ಗಳ ಪ್ರಭಾವ ಇತರ ಎಲ್ಲ ಪಂಥಗಳನ್ನೂ ಹೆಚ್ಚು ಮಾನವೀಯ ವಾಗಿ ಮಾರ್ದವವಾಗಿ ಪರಿವರ್ತಿಸಿ ದವೆಂದು ನನ್ನ ಭಾವನೆ. ಅಲ್ಲದೆ ಇವತ್ತು ವೀರಶೈವ ಧರ್ಮದಲ್ಲಿ ಹುಟ್ಟಿ ಒಂದು ಘಟ್ಟದಲ್ಲಿ ಬೌದ್ಧ ನಾಗಲು ಬಯಸಿ ಈಗ ಕಾಶ್ಮೀರ ಶೈವ ಪರಂಪ ರೆಯ ಸ್ಪಂದದರ್ಶನದ ಅನುಯಾಯಿಯಾಗಿ ರುವ ನಾನು ಜೈನನಲ್ಲದಿದ್ದರೂ ಇಂದಿನ ಜಗತ್ತಿನ ಜಾಡ್ಯಗಳನ್ನು ನಿವಾರಿಸಲೋಸುಗ ಅಹಿಂಸೆ ಮತ್ತು ಅನೇಕಾಂತವಾದಗಳನ್ನು ಬಿಟ್ಟು ಬೇರೆ ಉಪಾಯಗಳು ನನಗೆ ಕಾಣುತ್ತಿಲ್ಲ.ಜೈನಧರ್ಮದ ಶ್ರದ್ಧಾವಂತರಾದ ಅನುಯಾ ಯಿಗಳು ಅದರಲ್ಲೂ ವಿಶೇಷವಾಗಿ ಸಾಧುಗಳು ಅನುಸರಿಸುವ ಮಾರ್ಗ ಎಲ್ಲರಿಗೂ ಸಾಧ್ಯವಿಲ್ಲ. ಅದಕ್ಕೆ ಬೇಕಾದ ಕಠೋರನಿಷ್ಠೆ ನಮ್ಮಂಥ ಸಾಮಾನ್ಯರಿಗಿಲ್ಲ. ಜೈನರ ಹಾಗೆ ಅಹಿಂಸೆಯನ್ನು ಆತ್ಯಂತಿಕವಾಗಿ ಆಚರಿಸುವುದಕ್ಕೂ ಅಪಾರವಾದ ತಾಳ್ಮೆ ಮತ್ತು ನಿರಹಂಕಾರಗಳು ಅಗತ್ಯ. ಅದು ನಮ್ಮಲ್ಲೆಲ್ಲಿದೆ? ಅಥವಾ ಎಲ್ಲ ಜೈನ ಪಂಥೀಯರ ಲ್ಲಾದರೂ ಎಲ್ಲಿದೆ? ಅವರನ್ನೂ ಒಳಗೊಂಡು ಯಾವ ಪಂಥದವರೂ ತಮ್ಮ ಪಂಥದ ಎಲ್ಲಾ ನಿಯಮಗಳನ್ನು ಪಾಲಿಸಲು ಅಸಮರ್ಥರು.

ಜೈನ ರಾಜರುಗಳೂ ಯುದ್ಧ ಮಾಡಬೇಕಾಗಿ ಬಂತು. ಜೈನಧರ್ಮೀಯರೂ ಎಲ್ಲರಂತೆ ಬದುಕಿನಲ್ಲಿ ಸಂಘರ್ಷಗಳನ್ನು ಎದುರಿಸಲೇಬೇಕು. ಪೂರ್ಣ ಅಹಿಂಸೆಯ ಪಥದಿಂದ ಅತ್ತಿತ್ತ ಹೋಗುತ್ತಲೇ ಇರಬೇಕು. ಅಂದರೆ ಪೂರ್ಣ ಅಹಿಂಸೆ ನಿತ್ಯ ಜೀವನದ ವಾಸ್ತವತೆಯಲ್ಲ. ಅದೊಂದು ಅವಶ್ಯಕ ಆದರ್ಶ. ನಾವು ಈಗಿರುವುದಕ್ಕಿಂತಾ ಆ ಗುರಿಯ ಕಡೆಗೆ ಇನ್ನೂ ಹತ್ತಿರಹೋಗಬಹುದು. ಅದನ್ನು ತಲುಪಿದ್ದೇವೆಂದು ಹೆಮ್ಮೆಪಡಲು ಸಾಧ್ಯವಿಲ್ಲ. ಇದೇ ರೀತಿ ಹಸಿದ ಸಿಂಹಗಳಿಗಾಗಿ ತಮ್ಮೊಡಲ ಭಾಗಗಳನ್ನು ಕತ್ತರಿಸಿ ಹಾಕುವ ಮಹಾಯಾನದ ಬೋಧಿಸತ್ವರೂ ಆದರ್ಶಪಾತ್ರಗಳು ಮಾತ್ರ.

ಆದರೆ ನೊಂದವರಿಗೆ ಸಾಂತ್ವನ ನೀಡುವ ಬೌದ್ಧ ಭಿಕ್ಷುಗಳು ಆ ಬೋಧಿಸತ್ವನ ಮಿತ ಅಭಿವ್ಯಕ್ತಿಗಳು. ಹಾಗೆಯೇ ತಮ್ಮ ಪದತಳದ ಸೂಕ್ಷ್ಮಜೀವಿಗಳು ಎಲ್ಲಿ ಸತ್ತಾವೋ ಎಂದು ಮುನ್ನೆಚ್ಚರಿಕೆ ವಹಿಸುವ ಜೈನ ಮುನಿಗಳು ಅಹಿಂಸಾ ತತ್ವದ ಅಪೂರ್ಣ ರೂಪಗಳು. ಶಾಂತಿಯ ಹಾಗೆ, ಪ್ರೀತಿಯ ಹಾಗೆ, ನ್ಯಾಯದ ಹಾಗೆ. ಇಂದು ನಮ್ಮ ಜಗತ್ತಿನ ಅಘೋ ಷಿತ ಆದರ್ಶ ಇದಕ್ಕೆ ವ್ಯತಿರಿಕ್ತ. ಗೋಳೀಕರಣದ ಮೂಲಮಂತ್ರ ಸ್ಪರ್ಧೆ. ಅದನ್ನು ಹೇರುವ ಮಿಲ ಟರಿವಾದದ ಬೀಜಾಕ್ಷರ ಸಂಘರ್ಷ.ಸಂಘರ್ಷಾ ತ್ಮಕ ದೃಷ್ಟಿಕೋನದ ಮೂಲಕಾರಣವನ್ನು ಫ್ರಾನ್ಸಿನ ಸಮಾಜ ವಿಜ್ಞಾನಿ ಲಿವಿಸ್ತ್ರಾಸ್ ಯಹೂದೀ ಧರ್ಮಗಳ ಲೋಕದೃಷ್ಟಿಯಲ್ಲಿ ಕಂಡ. ಚಾರಿತ್ರಿಕವಾಗಿ ಇದು ನಿಜವಿರಬಹು ದೇನೋ. ಆದರೆ ಹಾಗೆ ಜವಾಬುದಾರಿಯನ್ನು ಪರಧರ್ಮಗಳ ಮೇಲೆ ಹೇರುವುದೂ ಅಸಹ ನೆಗೆ, ಅನಂತರ ಹಿಂಸೆಗೆ ಆಹ್ವಾನ. ಅಲ್ಲಮನೆಂ ದಂತೆ ‘ಭೂಮಿಯಾಕಾಶವೆಂಬು ದೊಂದು ಜೀವ ನದುದರ’.

ಜೀವಾಜೀವಗಳ ಈ ಸಂಸಾರದಲ್ಲಿ ಸರ್ವವೂ ಪರಸ್ಪರಾವಲಂಬಿತ. ಈ ಪೂರ್ಣ ದೃಷ್ಟಿ ಯಲ್ಲಿ ನೋಡಿದಾಗ ನನಗಾಗುತ್ತಿರುವ ಎಲ್ಲ ಕೇಡುಗಳಿಗೆ ನಾನೂ ಕಾರಣ. ಇನ್ನೂ ಕೆಟ್ಟ ಧೈರ್ಯ ಮಾಡಿ ಹೇಳಬೇಕೆಂದರೆ ನಾನೇ ಕಾರಣ. ಆದ್ದರಿಂದ ಸುಧಾರಣೆ ಶುರುವಾಗಬೇಕಾದುದು ನಮ್ಮಿಂದಲೇ.ಸಂಘರ್ಷ ಪ್ರೇಮಿಗಳೂ ವಿಶ್ರಾಂತಿ ಬೇಕಾದಾಗ ಶಾಂತಿಗಾಗಿ ಹಪಹಪಿಸತೊಡಗುತ್ತಾರೆ. ಮತ್ತೆ  ಅವರು ಯಾಕೆ ಹಿಂಸಾತುರರಾಗುತ್ತಾರೆ? ಅಸಹ ನೆಯ ಬೆಂಕಿ ಯಾಕೆ ಅವರಲ್ಲಿ ಭುಗಿಲೇಳುತ್ತದೆ? ನಮ್ಮ ದೃಷ್ಟಿ ಮಾತ್ರ ಸರಿ, ಇತರರದು ತಪ್ಪು ಎಂದು ದೃಢವಾಗಿ ನಂಬತೊಡಗುತ್ತಾರೆ. ಹಿಂಸೆ ಒಂದು ಆಚಾರ. ಅದರ ಬುನಾದಿ ಅಸಹನಾ ಮೂಲದ ವಿಚಾರ. ನನ್ನ ದೃಷ್ಟಿಯೊಂದೇ ಸರಿಯೆ ನ್ನುವುದೇ ಏಕಾಂತವಾದ. ಇದರ ಮದ್ದು ಜೈನರ ಅನೇಕಾಂತವಾದ -ಅಹಿಂಸೆಯ ಬುನಾದಿ.

ನಾವೊಬ್ಬರೇ ಸರಿ, ನಮ್ಮ ಜಾತಿ-ಧರ್ಮ-ಪಂಥ- ಸಿದ್ಧಾಂತ- ಪಕ್ಷ- ನಿಲುವೇ ಎಲ್ಲಕ್ಕಿಂತಲೂ ಶ್ರೇಷ್ಠ- ಎಂಬ ಈ ಧೋರಣೆಯಿಂದಲೇ ಧರ್ಮ ಯುದ್ಧಗಳು, ರಕ್ತದ ಹೊನಲುಗಳು, ಹೆಣದ ಬಣವೆಗಳು, ಕಂಬನಿಯ ಕೋಡಿಗಳು, ಅಮಾಯ ಕರ ಹತ್ಯಾಕಾಂಡಗಳು.

ಇಂಥಹ ಏಕಶಿಲಾವಾದ ಗಳಿಂದ ಬೇಸತ್ತ ಬೌದ್ಧಿಕ ಜಗತ್ತು ಇಂದು ಅನೇಕ ವಾದದ ಮೊರೆ ಹೊಕ್ಕಿದೆ. ಇದನ್ನು ಇಂಗ್ಲಿಷಿನಲ್ಲಿ ‘ಪ್ಲೂರಲಿಸಂ’ ಅನ್ನುತ್ತಾರೆ. ನವಉದಾರವಾದದ ಮುಖವಾಣಿಯಾಗಿರುವ ಈ ದೃಷ್ಟಿಕೋನದನು ಸಾರ ಎಲ್ಲವೂ ಎಷ್ಟು ಸರಿಯೋ ಅಷ್ಟೇ ತಪ್ಪು. ಎಲ್ಲ ನಿಲವುಗಳೂ ಸಾಪೇಕ್ಷ. ಇದನ್ನು ನಾವು ಆಚರಿಸಿ ದರೆ ಎಲ್ಲರಿಗೂ ವೋಟು ಹಾಕಬೇಕು ಅಥವಾ ಯಾರಿಗೂ ಹಾಕಬಾರದು. ಯಾವ ಆಯ್ಕೆ ಮಾಡಿದರೂ ತಪ್ಪಾದೀತು. ಆದ್ದರಿಂದ ಆಯ್ಕೆ ಗಳೇ ಬೇಡ.ನಿಷ್ಕ್ರಿಯರಾಗಿ ನವ್ಯ ಕಾವ್ಯದ  ಕಥಾ ನಾಯಕರಂತೆ ಎಲ್ಲದರ ನಿರರ್ಥ ಕತೆಯನ್ನು ಪುನ ರುಚ್ಚರಿಸುತ್ತಾ ಎಲ್ಲ ಸುಧಾರಣೆಗಳಿಗೂ ವಿದಾಯ ಹೇಳೋಣ. ಜೈನರ ಅನೇಕಾಂತವಾದದ ಅರ್ಥ ಅತ್ತ ಮತಾಂಧತೆಯ ರೋಗವೂ ಅಲ್ಲ, ಇತ್ತ ಅನೇಕ ವಾದದ ಅನಿಶ್ಚಿತತೆಯೂ ಅಲ್ಲ.  ಸತ್ಯದ ಒಂದು ವಿವರಣೆಯೇ ಪರಮವೆನ್ನುತ್ತದೆ. ಅನೇಕವಾದ ಸತ್ಯದ ಅಸ್ತಿತ್ವವನ್ನೇ ನಗಣ್ಯಗೊಳಿಸುತ್ತದೆ. ಅನೇ ಕಾಂತವಾದ ಇವೆರಡರಂತೂ ಅಲ್ಲ.ಅನೇಕಾಂತವಾದದ ಒಂದು ಉಪಮೆ ಅಂಧ ಗಜನ್ಯಾಯ: ಐದು ಮಂದಿ ಕುರುಡರು ಒಂದೇ ಆನೆಯ ಬೇರೆಬೇರೆ ಭಾಗಗಳನ್ನು ಮುಟ್ಟಿ ಅದಕ್ಕೆ ಬೇರೆಬೇರೆ ಹೆಸರು ಕೊಡುತ್ತಾರೆ. ಇವರೆಲ್ಲರ ಗ್ರಹಿ ಕೆಗಳೂ ಸತ್ಯದ ತುಣುಕುಗಳು. ಆದರೆ ಅಖಂಡ ಸತ್ಯ ಗೋಚರವಾಗಬೇಕಾದರೆ ಕುರುಡರಿಗೆ ಕಣ್ಣು ಬರಬೇಕು. ಆಗವರಿಗೆ ಆನೆಯ ಪೂರ್ಣರೂಪ ಕಾಣುತ್ತದೆ, ಇದೇರೀತಿ ಎಲ್ಲ ಗ್ರಹಿಕೆಗಳೂ ಆಯಾ ಮಟ್ಟಿಗೆ ಸರಿ.

ಆದರೆ ಯಾವ ಸಂದರ್ಭದಲ್ಲಿ ಯಾವುದು ಎಷ್ಟು ಸರಿ ಎಂದು ತೀರ್ಮಾನಿಸಿ ಅದನ್ನು ಆಚರಿಸುವ ಅಗತ್ಯ ದಿಂದ ನಮಗೆ ಬಿಡು ಗಡೆಯಿಲ್ಲ. ಆದರೆ ಆ ಕ್ಷಣಕ್ಕೆ, ಆ ಕಾಲಕ್ಕೆ, ಆ ಸಂದರ್ಭಕ್ಕೆ ಸರಿಯಾದದ್ದನ್ನು ಸಾರ್ವತ್ರಿಕ ಶಾಶ್ವತ ಸತ್ಯವೆಂದು ಬಗೆಯುವುದೇ ದಬ್ಬಾಳಿಕೆಯ ಎಡ ವಟ್ಟುಗಳಿಗೆ ಮೂಲ, ವಿಕಾಸಕ್ಕೆ ನಾವು ಹೇಳುವ ವಿದಾಯ. ಯಾಕೆಂದರೆ ಪೂರ್ಣಸತ್ಯ ಗೊತ್ತಾಗು ವುದು ಎಲ್ಲ ಸೀಮಿತ ದೃಷ್ಟಿಕೋನಗಳಿಂದ ವಿಮುಕ್ತಿ ಪಡೆದ ‘ಕೇವಲ ಜ್ಞಾನ’ದಿಂದ ಮಾತ್ರ. ಭವಾವಳಿ ಗಳನ್ನು ದಾಟಿ ನಿರ್ಮಲಚಿತ್ತರಾದ ತೀರ್ಥಂಕರ ರಿಗೆ ವೈಚಾರಿಕ ನಿಲವುಗಳ, ಭಾಷೆ-ಸಂಕೇತಗಳ ಮಧ್ಯಸ್ಥಿಕೆಯಿಲ್ಲದೆ ನಿಜದ ನೇರ  ದರ್ಶನವಾಗುತ್ತಿದೆ.

ಆ ಮಟ್ಟ ತಲುಪದ ನಾವು ಕ್ಷಣಭಂಗುರ ಸತ್ಯಗಳನ್ನು, ನಿಲವುಗಳನ್ನು ಆಖೈರಾದ ಸತ್ಯಗ ಳೆಂಬ ಭ್ರಮೆಗೊಳಗಾಗದಿದ್ದರೆ ಸಾಕು ಜಗತ್ತಿನ ಅನಗತ್ಯ ಸಂಘರ್ಷಗಳು ಎಷ್ಟೋ ಶಮನಗೊಳ್ಳು ತ್ತವೆ. ಈ ಸಂಘರ್ಷಮಯ ಜಗತ್ತಿನ ನಕಲಾ ಗಿರುವ ನಮ್ಮ ಮನದಲ್ಲಿ ನಡೆಯುತ್ತಿರುವ ಮಾರಕ ಯುದ್ಧಗಳೂ ಬಹುಮಟ್ಟಿಗೆ ಕಡಿಮೆ ಯಾಗಿ ನಭೋ ಭೂಮಿಗಳಲ್ಲಿ ಶಾಂತಿಗೆ ಅನು ವಾಗುತ್ತದೆ. ಆದ್ದರಿಂದ ಜೈನ ಧರ್ಮದ ಮೂಲ ತತ್ವಗಳಲ್ಲಿ ಬಹಳ ಮುಖ್ಯವಾದ ಅನೇಕಾಂತ ವಾದ ಮತ್ತು ಅಹಿಂಸೆ ಇಂದು ಜೈನರಿಗೆ ಮಾತ್ರವಲ್ಲ ಎಲ್ಲರಿಗೂ ಅನುಕರಣೀಯ.ಜರ್ಮನಿಯ ಪ್ರಮುಖ ವಿಶ್ವವಿದ್ಯಾಲಯ ದಲ್ಲಿ ಲೋಕಕಲ್ಯಾಣಕರವಾದ ಜೈನ ಧರ್ಮದ ಅಧ್ಯಯನ ಕೇಂದ್ರ ಸ್ಥಾಪನೆಗೆ ಕಾರಣೀಭೂತ ರಾದ ಶ್ರವಣಬೆಳಗೊಳದ ಸ್ವಾಮೀಜಿಯವರಲ್ಲಿ ಮತ್ತು ಹಂಪನಾ ಅವರಲ್ಲಿ ನನ್ನ ಇನ್ನೊಂದು ಮನವಿಯನ್ನು ನನ್ನ ಭಾಷಣದಲ್ಲಿ ಮಾಡಿ ಕೊಂಡೆ. ಕನ್ನಡ   ವಾಙ್ಮಯಕ್ಕೆ ಅಪಾರ ಕೊಡುಗೆ ನೀಡಿದೆ ಜೈನ ಧರ್ಮ. ಕನ್ನಡ ಸಾರಸ್ವತ ಲೋಕ ದಲ್ಲಿ ಪರಮಜಿನೇಂದ್ರವಾಣಿಯನ್ನು ಅತಿಶಯ ವಾಗಿ ಬೆಳಗಿದ ಆದಿಕವಿ ಪಂಪನ ಹೆಸರಿನಲ್ಲಿ ಅದೇ ವಿಶ್ವ ವಿದ್ಯಾಲಯದಲ್ಲಿ ಕನ್ನಡ ಪೀಠವನ್ನು ಅವರು ಸ್ಥಾಪಿಸುವಂತಾಗಲಿ.

ಯೂರೋಪಿನ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಪೀಠ ಸ್ಥಾಪಿಸ ಬೇಕೆಂದು ನಾನು ಕರ್ನಾಟಕದ ಇಬ್ಬರು ಮುಖ್ಯ ಮಂತ್ರಿಗಳಲ್ಲಿ ಮಾಡಿಕೊಂಡ ಬೇಡಿಕೆ ಅವರ ಕಿವಿಗಳಿಗೆ ತಲುಪಲೇ ಇಲ್ಲ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಗಳಾದರೂ ಈ ಬಗ್ಗೆ ನನ್ನ ಮನವಿಯನ್ನು ಕಡೆಗಾಣಿಸದಿರಲಿ. ಅರಮನೆಯ ವರು ಮಾಡಲಾಗದ್ದನ್ನು ಗುರುಮನೆಯವರಾ ದರೂ ನೆರವೇರಿಸಲಿ.ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.