ಗುರುವಾರ , ಜನವರಿ 23, 2020
28 °C

ಜೈ ಭಗವಾನ್

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ನನ್ನ ಗುರುಗಳು ನನಗೆ ಮೇಲಿಂದ ಮೇಲೆ ಹೇಳುತ್ತಿದ್ದ ಕಥೆ ಇದು. ಅವನೊಬ್ಬ ರಾಜಪುರೋಹಿತ. ರಾಜನು ಮಾಡಬೇಕಾದ ಧರ್ಮಕಾರ್ಯಗಳಿಗೆಲ್ಲ ಯೋಜನೆ ಮಾಡಿ ನಡೆಸುವುದು ಅವನ ಕರ್ತವ್ಯ. ಆತ ಜ್ಞಾನಿ, ತುಂಬ ಸುಸಂಸ್ಕೃತ ಮನುಷ್ಯ.ಅವನ ವೇದಾಧ್ಯಯನ, ಶಾಸ್ತ್ರಗಳಲ್ಲಿ ಆಳವಾದ ತಿಳುವಳಿಕೆ ತುಂಬ ಮೆಚ್ಚುಗೆಯನ್ನು ಪಡೆದಿದ್ದವು. ಅವನು ಧರ್ಮಕಾರ್ಯಗಳಿಗಾಗಿ ರಾಜ್ಯದಲ್ಲೆಲ್ಲ ಸುತ್ತಾಡಬೇಕಾಗುತ್ತಿತ್ತು. ಅದಕ್ಕಾಗಿ ಅವನೊಂದು ಕುದುರೆಯನ್ನು ಸಾಕಿದ್ದ. ಅದೊಂದು ಅಪರೂಪದ ಕುದುರೆ.ಅದರ ರೂಪವೇನು? ಗತ್ತೇನು? ಎಲ್ಲರ ಗಮನವನ್ನು ಸೆಳೆಯುತ್ತಿತ್ತು. ರಾಜ ಕೂಡ ಅದಕ್ಕೆ ಮರುಳಾಗಿ ತನಗೆ ಅದನ್ನು ಕೊಡುತ್ತೀರಾ ಎಂದು ಕೇಳಿ ಪಡೆಯಲು ವಿಫಲನಾಗಿದ್ದ.ಆ ಕುದುರೆಯ ವಿಶೇಷವೆಂದರೆ ಅದರ ವೇಗ. ರಾಜಪುರೋಹಿತ ಅದರ ಮೇಲೆ ಕುಳಿತು  `ಜೈಭಗವಾನ್~ ಎಂದೊಡನೆ ಠಕ್ಕನೇ ಹಾರಿ ಓಡತೊಡಗುವುದು. ಉಳಿದ ಯಾವ ವಾಹನವೂ ಅದರ ವೇಗವನ್ನು ಸರಿಗಟ್ಟಲಾರದು. ಅದು ಓಡತೊಡಗಿದರೆ ಧೂಳು ಮೇಲೆದ್ದು ವಿಮಾನ ಹಾರಿದಂತೆ ತೋರುವುದು, ಪ್ರಪಂಚ ಗಿರ‌್ರನೇ ತಿರುಗಿದಂತೆ ಭಾಸವಾಗುವುದು. ರಾಜಪುರೋಹಿತನಿಗೆ ಈ ವೇಗ ಅಭ್ಯಾಸವಾಗಿದ್ದರಿಂದ ಗಟ್ಟಿಯಾಗಿ ಹಿಡಿದುಕೊಂಡು ಕುಳಿತಿರುತ್ತಿದ್ದ.ತಾನು ನಿಲ್ಲಬೇಕಾದ ಸ್ಥಳ ಬಂದೊಡನೆ ಆತ ಜೋರಾಗಿ  `ಓಂ ಶಾಂತಿ~ ಎನ್ನುವನು. ಅವನು ಹಾಗೆಂದ ತಕ್ಷಣ ಕುದುರೆ ತನ್ನ ನಾಲ್ಕೂ ಕಾಲುಗಳನ್ನು ನೆಲದಲ್ಲಿ ಭದ್ರವಾಗಿ ಊರಿ, ಹೂಂಕಾರ ಮಾಡುತ್ತ ಸರಿದು ಸರಿದು ನಿಲ್ಲುವುದು. ಅದು ನಿಲ್ಲುವ ರಭಸಕ್ಕೆ ಹತ್ತಾರು ಅಡಿ ನೆಲದ ಮಣ್ಣು ಕಿತ್ತು ಹೋಗಿ ವಿಪರೀತ ಧೂಳು ಎದ್ದು ಬಿಡುವುದು. ಅದು ಹಾರುವ, ನಿಲ್ಲುವ ಪರಿಯೇ ಅದ್ಭುತವಾದದ್ದು. ಬೇರೆ ಉತ್ತಮ ಕುದುರೆಗಳು ಒಂದು ಪ್ರವಾಸಕ್ಕೆ ನಾಲ್ಕು ತಾಸು ತೆಗೆದುಕೊಂಡರೆ ಈ ಕುದುರೆ ಕೇವಲ ಒಂದು ತಾಸಿನಲ್ಲಿ ತಲುಪಿಬಿಡುತ್ತಿತ್ತು.ಬಹಳ ಜನರಿಗೆ ಈ ಕುದುರೆಯ ಮೇಲೆ ಕಣ್ಣಿತ್ತು. ಅದರಲ್ಲೂ ಸೇನೆಯ ಸೇನಾಪತಿಗೆ ಇದನ್ನು ಕಂಡರೆ ಹೊಟ್ಟೆಕಿಚ್ಚಾಗುತ್ತಿತ್ತು. ಈ ಬ್ರಾಹ್ಮಣನಿಗೇಕೆ ಇಂಥ ಕುದುರೆ? ತನ್ನ ಹತ್ತಿರ ಅಂಥದೊಂದು ಕುದುರೆ ಇದ್ದರೆ ತನ್ನನ್ನು ಯಾರೂ ಎದುರಿಸುವುದು ಅಸಾಧ್ಯ. ತಾನೇ ಪುರೋಹಿತನನ್ನು ಕೇಳಿ ನೋಡಿದ. ಅವನು ಒಪ್ಪಲಿಲ್ಲ. ಕುದುರೆಯನ್ನು ಹೇಗೆ ತರಬೇತಿಗೊಳಿಸಿದಿರಿ ಎಂದು ಕೇಳಿದರೂ ಹೇಳಲಿಲ್ಲ. ಕೊನೆಗೆ ಅನಿವಾರ್ಯವಾಗಿ ಅವನನ್ನು ಹೊಡೆದು ಸೆರೆಮನೆಯಲ್ಲಿ ಕೂಡಿ ಹಾಕಿ ಅವನ ಕುದುರೆಯನ್ನು ವಶಪಡಿಸಿಕೊಂಡ.ಅದನ್ನೇರಿ ಕುಳಿತಾಗ ಅವನ ಸಂತೋಷಕ್ಕೆ ಪಾರವೇ ಇರಲಿಲ್ಲ. ಅದನ್ನು ಓಡಿಸಬೇಕೆಂದು  ಹೇ ಹೇ  ಎಂದ. ಅದು ಅಲುಗಾಡಲಿಲ್ಲ.  ನಡೀ ನಡೀ  ಎಂದು ಚಾವಟಿಯಿಂದ ಹೊಡೆದ. ಅದು ಮಿಸುಗಲಿಲ್ಲ. ಆಗ ಅವನಿಗೆ ರಾಜಪುರೋಹಿತ ಕುದುರೆ ಹತ್ತಿದ ಕೂಡಲೇ  `ಜೈ ಭಗವಾನ್~ ಎನ್ನುತ್ತಿದ್ದುದು ನೆನಪಾಯಿತು. ತಾನೂ ಜೋರಾಗಿ  `ಜೈ ಭಗವಾನ್~ ಎಂದ. ತಕ್ಷಣ ಕುದುರೆ ಹಾರಿ ಓಡತೊಡಗಿತು. ಮೊದಮೊದಲು ಸೇನಾಪತಿಗೆ ಆ ವೇಗದಿಂದ ಗಾಬರಿಯಾಯಿತು. ನಂತರ ಸ್ವಲ್ಪ ಹೊತ್ತಿಗೆ ಅಭ್ಯಾಸವಾಗಿ ಸಂಭ್ರಮವಾಯಿತು.ಕುದುರೆ ಕೆಲಕ್ಷಣಗಳಲ್ಲೇ ಪರ್ವತದ ತುದಿಯತ್ತ ನಡೆಯಿತು. ಇವನು ಏನು ಮಾಡಿದರೂ, ಲಗಾಮು ಎಳೆದರೂ ಅದು ನಿಲ್ಲುತ್ತಿಲ್ಲ. ಇವನ ಎದೆಬಡಿತ ನಿಂತೇ ಹೋಯಿತು. ಇನ್ನು ನೂರೇ ಅಡಿ ದೂರದಲ್ಲಿದ್ದ ಪ್ರಪಾತದಲ್ಲಿ ಬೀಳುವುದು ಖಚಿತವೆಂದಾಗ ಪುರೋಹಿತ,  `ಓಂ ಶಾಂತಿ~  ಎನ್ನುತ್ತಿದ್ದುದು ನೆನಪಾಗಿ ತಾನೂ  `ಓಂ ಶಾಂತಿ~ ಎಂದು ಅರಚಿದ. ಕುದುರೆ ತಕ್ಷಣ ನೆಲಕ್ಕೆ ಕಾಲು ಊರಿ ಸರಿಯುತ್ತ ಬಂದು ನಿಂತಿತು. ಪ್ರಪಾತ ಕೇವಲ ಐದು ಅಡಿಗಳಷ್ಟು ದೂರ ಮಾತ್ರ ಇದೆ!

 

ಸೇನಾಪತಿ ಗಾಬರಿಯಿಂದ, ಬೆವರು ಸುರಿಸುತ್ತಾ, ಆಕಾಶದ ಕಡೆಗೆ ನೋಡಿ ಭಗವಂತನಿಗೆ ತನ್ನ ಕೃತಜ್ಞತೆ ಸಲ್ಲಿಸಲು, `ಜೈ ಭಗವಾನ್~ ಎಂದ. ಮುಂದೇನಾಯಿತು ಎಂದು ಹೇಳುವ ಅಗತ್ಯವಿದೆಯೇ? ಅರೆಕ್ಷಣದಲ್ಲಿ ಆತ ಕುದುರೆಯೊಂದಿಗೆ ಪ್ರಪಾತದ ತಳ ಸೇರಿದ್ದ.  ಮತ್ತೊಬ್ಬರ ವಸ್ತುಗಳಿಗೆ ಅಪೇಕ್ಷೆ ಮಾಡುವುದು, ಅವುಗಳನ್ನು ಹೇಗಾದರೂ ಕುಯುಕ್ತಿಗಳಿಂದ ಪಡೆಯುವುದು ನಮಗೆ ಒಳ್ಳೆಯದನ್ನು ಮಾಡಲಾರವು. ಮತ್ತೊಬ್ಬರ ಅನುಕರಣೆ ಕೂಡ ಆಪತ್ತು ತರುತ್ತದೆ.

ಪ್ರತಿಕ್ರಿಯಿಸಿ (+)