ಈ ಜಿರಾಫೆ ಒಂದು ಸುಂದರವಾದ ಪ್ರಾಣಿ. ನೋಡಲು ತುಂಬ ದೊಡ್ಡದಾದ ಪ್ರಾಣಿಯಾದರೂ ತುಂಬ ಸಾಧು. ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚೆನ್ನುವಷ್ಟು ಉದ್ದದ ಕತ್ತನ್ನು ಹೊತ್ತುಕೊಂಡು ಜೋಲಿ ಹೊಡೆಯುತ್ತಲೇ ನಡೆಯುತ್ತದೆ, ಓಡುತ್ತದೆ.

ಅಷ್ಟು ದೊಡ್ಡ ದೇಹವನ್ನು ಕೇವಲ ಸಸ್ಯಾಹಾರಿಯಾಗಿಯೇ ಕಾಪಾಡಿಕೊಳ್ಳುತ್ತದೆ. ಎದ್ದು ನಿಂತಂತೆಯೇ ಮರಿ ಹಾಕುವ ಅತ್ಯಂತ ದೊಡ್ಡದಾದ ಏಕಮಾತ್ರ ಸಸ್ತನಿ ಪ್ರಾಣಿ ಜಿರಾಫೆ.

ಆ ಎತ್ತರದಿಂದ ದೊಪ್ಪನೇ ಕೆಳಗೆ ಬೀಳುವ ಮರಿಗೆ ಹೇಗೆನ್ನಿಸುತ್ತದೋ ದೇವರೇ ಬಲ್ಲ. ತಾಯಿಯ ಹೊಟ್ಟೆಯಲ್ಲಿ ಬೆಚ್ಚಗೆ ಚಿಂತೆಯಲ್ಲದೇ ಕುಳಿತಿದ್ದ ಮರಿಗೆ ಹೊಸ ಜಗತ್ತಿನ ಪರಿಚಯವಾಗುವುದೇ ಬೀಳುವುದರಿಂದ. ಕೆಳಗೆ ಬಿದ್ದ ಪೆಟ್ಟಿನಿಂದ ಗಾಬರಿಯಾದ ಮರಿ ಚೇತರಿಸಿಕೊಳ್ಳುವುದರಲ್ಲಿಯೇ ಮತ್ತೊಂದು ಹೊಸ ಅನುಭವ ಅದಕ್ಕಾಗುತ್ತದೆ.

ಮರಿ ಸಾವರಿಸಿಕೊಂಡು, ತಡವರಿಸಿಕೊಂಡು ಮೊಣಕಾಲೂರಿ ಎದ್ದು ನಿಲ್ಲಲು ಪ್ರಯತ್ನಿಸುತ್ತದೆ. ಆಗ ತಾಯಿ ಜಿರಾಫೆ ಮಗುವಿಗೆ ಏಳಲು ಸಹಾಯಮಾಡುತ್ತದೆ. ಮರಿ ಸಾವಧಾನವಾಗಿ ಎದ್ದು ನಿಂತೊಡನೆ ಮುಂದೆ ಸರಿದು ತನ್ನ ಹಿಂದಿನ ಕಾಲಿನಿಂದ ಮರಿಯನ್ನು ಥಟ್ಟನೇ ಒದ್ದು ಕೆಡವಿಬಿಡುತ್ತದೆ.

ಮರಿಗೆ ಪೆಟ್ಟು ಬೀಳುವುದರೊಂದಿಗೆ ಬಿರುಸಾದ ನೆಲದ ಮೇಲೆ ಬಿದ್ದು ಗಾಬರಿಗೆ ಒಳಗಾಗುತ್ತದೆ. ಅಮ್ಮ ಹೀಗೇಕೆ ಮಾಡಿದಳು ಎಂದು ಯೋಚಿಸುತ್ತದೆ. ಮೊದಲು ಎದ್ದು ನಿಲ್ಲಲು ಸಹಾಯಮಾಡಿದ ತಾಯಿ ಮತ್ತೇಕೆ ಒದ್ದು ಕೆಡವಿದಳು ಎಂದುಕೊಳ್ಳುತ್ತ ದೈನ್ಯದಿಂದ ತಾಯಿಯ ಮುಖ ನೋಡುತ್ತದೆ.

ಆದರೆ, ತಾಯಿಯ ಮುಖದಲ್ಲಿ ಕೋಪವಿಲ್ಲ, ಉಗ್ರತೆಯಿಲ್ಲ. ಅದೇ ಪ್ರೀತಿ, ಅಂತಃಕರಣ ತುಂಬಿದ ಮುಖ. ತಾಯಿ ತನ್ನ ನಾಲಿಗೆ ಚಾಚಿ ಮಗುವನ್ನು ನೆಕ್ಕಿ ಪ್ರೀತಿ ತೋರುತ್ತದೆ, ಕಾಲಿನಿಂದ ತಿವಿದು ತಿವಿದು ಮತ್ತೆ ಎದ್ದು ನಿಲ್ಲುವಂತೆ ಪ್ರಚೋದಿಸುತ್ತದೆ, ನೆಲಕ್ಕೆ ಬಿದ್ದ ಮರಿಗೆ ಉತ್ತೇಜನ ಕೊಡುತ್ತದೆ.

ಮರಿ ಮರುಪ್ರಯತ್ನ ಮಾಡುತ್ತ, ಓಲಾಡುತ್ತ ಕಷ್ಟಪಟ್ಟು ಎದ್ದು ನಿಲ್ಲುತ್ತದೆ. ಒಂದು ಬಾರಿ ಮರಿ ಪೂರ್ತಿ ಎದ್ದು ನಿಂತಿತೋ ತಕ್ಷಣ ಬೀಳುತ್ತದೆ ತಾಯಿಯ ಹಿಂಗಾಲಿನ ಒದೆತ. ಮತ್ತೆ ಮರಿ ನೆಲಕ್ಕೆ ಬೀಳುತ್ತದೆ.

ಇದೇ ರೀತಿ ಹಲವಾರು ಬಾರಿ ನಡೆಯುತ್ತದೆ. ದೂರ ನಿಂತು ನೋಡುವವರಿಗೆ ಇದೆಂಥ ತಾಯಿಯ ಪ್ರೀತಿ ಎನ್ನಿಸುತ್ತದೆ. ಅದೇನು ಆಟವೋ, ಪ್ರೀತಿ ತೋರಿಸುವ ರೀತಿಯೋ ಯಾರು ಬಲ್ಲರು.

ಆದರೆ, ಒಂದು ಮಾತು ನಿಜ, ಎಲ್ಲ ತಾಯಿಯರಂತೆ ಅದು ತನ್ನ ಮಗುವನ್ನು ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತದೆ. ಅದಕ್ಕೆ ಇನ್ನೊಂದು ವಿಷಯ ಚೆನ್ನಾಗಿ ಗೊತ್ತು. ಅದೆಂದರೆ ತನ್ನ ಪುಟ್ಟ ಮಗುವಿನ ರುಚಿಯಾದ ಮಾಂಸಕ್ಕಾಗಿ ಅನೇಕ ಕಾಡು ಪ್ರಾಣಿಗಳು ಕಾಯ್ದುಕೊಂಡು ಕುಳಿತಿವೆ.

ಅವುಗಳಿಂದ ತನ್ನ ಪುಟ್ಟ ಕಂದಮ್ಮ ಪಾರಾಗಬೇಕಾದರೆ ದೂರ ಹೋಗಬೇಕು. ಅದಕ್ಕಾಗಿ ಬೇಗ ಬೇಗ ನಡೆಯಬೇಕು. ಕಾಡಿನ ರಾಜ್ಯದಲ್ಲಿ ಕರುಣೆ ಇಲ್ಲ. ಪುಟ್ಟ ಮರಿ, ಇನ್ನೂ ಪಾಪ ಚಿಕ್ಕದು. ಬಿಟ್ಟು ಬಿಡೋಣವೆಂಬ ಧೋರಣೆ ಇಲ್ಲ. ಸಿಕ್ಕರೆ ಸಾಕು ಹೊಡೆದು ತಿನ್ನಲು ಹೊಂಚುಹಾಕಿವೆ ಮೃಗಗಳು.

ತನ್ನ ಮರಿಯನ್ನು ಅವುಗಳಿಂದ ಪಾರು ಮಾಡಲು ತಾಯಿಗೆ ಅದೊಂದೇ ದಾರಿ. ಒದ್ದು ಕೆಡವಿ, ಮತ್ತೆ ಮೇಲೆತ್ತಿ ಕಾಲುಗಳನ್ನು ಬೇಗ ಬಲಪಡಿಸಿ ಓಡಲು ಅನುವು ಮಾಡುವುದು. ಅದೇ ತಾಯಿ ತನ್ನ ಕಂದನಿಗೆ ತೋರುವ ಪ್ರೀತಿಯ ರೀತಿ. ಈ ಮಾರ್ಗ ಮನುಷ್ಯರಲ್ಲಿ ಸಾಧ್ಯವಿಲ್ಲ ಮತ್ತು ಬೇಕಿಲ್ಲ.

ಆದರೆ, ಮೂಲತತ್ವ ಎರಡರಲ್ಲೂ ಒಂದೇ. ನಮ್ಮವರಿಗೆ ನಾವು ಒಳ್ಳೆಯದನ್ನು ಮಾಡಲೇಬೇಕೆಂದು ಹೊರಟಾಗ ತೋರುವ ಮಾರ್ಗವೇ ಪ್ರೀತಿಯನ್ನು ತೋರುವ ರೀತಿ. ಆ ತಿದ್ದುವ ವಿಧಾನ ಸ್ವಲ್ಪ ಕಠೋರವಾಗಿರಬಹುದು, ಮನಸ್ಸಿಗೆ ಮುಜುಗರವಾಗಬಹುದು. ಅದನ್ನು ಆಗ ಜನ ಮೆಚ್ಚಿಕೊಳ್ಳಲಿಕ್ಕಿಲ್ಲ.

ಒರಟು ಎನ್ನಿಸಬಹುದು, ತಪ್ಪು ಎನ್ನಿಸಬಹುದು. ಆದರೆ, ಅದರಿಂದ ಪ್ರಯೋಜನವಾದ ಮೇಲೆ ಆಗ ಹಾಗೆ ಮಾಡಿದ್ದು ನನಗೆ ಒಳ್ಳೆಯದೇ ಆಯಿತು ಎನ್ನಿಸದಿರಲಿಕ್ಕಿಲ್ಲ. ನೋಟಕ್ಕೆ ಅಷ್ಟು ಪ್ರಿಯವಾಗದಿದ್ದ ನಡತೆ ಜೀವನಕ್ಕೆ ಪ್ರಯೋಜನಕಾರಿಯಾಗಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.