ಮಂಗಳವಾರ, ಜೂಲೈ 7, 2020
29 °C

ತಿರುಕನೋರ್ವ ಊರಮುಂದೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿರುಕನೋರ್ವ ಊರಮುಂದೆ...

‘ಅಮ್ಮಾ’ ‘ಹ್ಞಾ, ಬಂದ್ಯ, ಅಲ್ಲೇ ಕೂಕೊ, ಬಂದೆ’

ಕೂಗು ಕೇಳಿದೊಡನೆ ಅದು ಯಾರದೆಂತ ತಿಳಿದು ಮನೆಒಳಗಿಂದಲೇ ದನಿ ಬರುವುದು. ಎರಡೂ ಕೈಯಿಂದ ಕೋಲು ಮೀಟಿ ಕುಂಟುತ್ತಾ ಬರುವ ಆತ ಕೋಲನ್ನು ಒರಗಿಸಿ ಅಲ್ಲೇ ಹಲಸಿನ ಮರದ ಬುಡದಲ್ಲಿ ಹೆಗಲ ಮೇಲಿನ ಕಂಬಳಿ ಕೊಡಕಿ ಹಾಸಿಕೊಂಡು ಕುಳಿತುಕೊಳ್ಳುವ. ಆಚೆಈಚೆ ಹೋಗುತ್ತ ಕೆಲಸದ ಯಂಕನೋ, ಕಲ್ಯಾಣಿಯೋ, ‘ಯೇನ? ಎಲ್ಲೆಗ್ ಹೋಯಿತ್ತ್ ಸವಾರಿ ಇಷ್ಟ್ ದಿವ್ಸ?’ ಮುಂತಾಗಿ, ಕೆಲಸ ನಿಲ್ಲಿಸದೆ, ಮಾತು ಸುರುಮಾಡುವರು. ಆತನೂ ಅವರ ದೂರದ ನೆಂಟನೋಪಾದಿಯಲ್ಲಿ ತನ್ನ ಅನಾರೋಗ್ಯವನ್ನೋ, ಯಾವುದೋ ಹಬ್ಬದ ಗುಡಿಗೆ ಹೋಗಿದ್ದನ್ನೋ, ಒಟ್ಟಾರೆ ತನ್ನ ತಿರುಗಾಟದ ಕತೆ ಹೇಳುವ. ‘ಕುಂಟಂಗ್ ಯೆಂಟೂರಂಬ್ರ್’ ಗಾದೆಯಲ್ಲಿ ಛೇಡಿಸುತ್ತ ಅವರು ಆಚೆ ಜಾರಿಕೊಂಡರೂ ಇನ್ನೂ ಅಲ್ಲಿಯೇ ಇದ್ದಾರೆ ಎಂಬಂತೆ, ಅಥವಾ ಒಮ್ಮೆ ಸುರುಮಾಡಿದ ಮೇಲೆ ‘ಯಾರು ಕೇಳಲಿ ಬಿಡಲಿ’ ನಿಲ್ಲಿಸಲು ಸಾಧ್ಯವಿಲ್ಲದ ಕತೆ ಇದು ಎಂಬಂತೆ ಆತ ಹೇಳುವಿಕೆಯನ್ನು ಮುಂದರಿಸಿಕೊಂಡೇ ಇರುವ. ಮತ್ತೆ ತೇಲುತ್ತ ಇತ್ತ ಬರುವ ಕಲ್ಯಾಣಿ ‘ಅಯ್ಯ! ನಾನ್ ಉಪ್ಪರಿಗಿ ಎಲ್ಲ ವಡ್ಗೀ ಬಂದ್ರೂ ನೀನಿನ್ನೂ ಅದ್ರಂಗೇ ಇದ್ಯ ಮಾರಾಯ?’ ನಗುವಳು. ಆತನೂ ಜೊತೆನಗುವ. ‘ನಿಂಗ್ ಕೂಳ್ ತಯಾರ್ ಮಾಡಿ ಬೆಚ್ಚೀರ್ ಈಗ! ಅಲ್ದಾ? ಉಂಬೂಕ್ ಬಂದ್ಬಿಟ್ಟ ದ್ವಡ್ಡ್ ದ್ವರೆ ಮಗ!’ ಎಂದರೂ ಅದು ಅವಳ ಕುಶಾಲಿನ ರೀತಿ ಎಂದು ಬಲ್ಲವ ಆತ, ಅದಕ್ಕೂ ನಗುವ.ಆಗಲೇ ಮನೆಯ ಯಜಮಾಂತಿ ಬಾಳೆಲೆಗೆ ಊಟ ಬಡಿಸಿ ತರುತಿದ್ದಾಳೆ. ನೋಡಿದ್ದೇ ‘ಅಮ್ಮ್‌ನ್ ಕೈ ಊಂಟ್‌ದ್ ಋಣೊ ಅಲ್ದೆ ನಂಗೆ?’ ಎಂದು ಆತ ಹೇಳದೆ ಇರಲಾರ. ‘ನಿಂಗ್ ನಮ್ಮ್ ಋಣ್ವೋ, ನಮ್ಗ್ ನಿನ್ನ್ ಋಣ್ವೋ, ಯಂತಂತೆಳಿ ಯಾರ್ ಕಂಡಿದ?’ ಅಂತ ಯಜಮಾಂತಿಯೂ ಹೇಳದೇ ಇರಲಾರಳು. ಪ್ರತೀಸಲವೂ ಹೊಸತೇ ಎಂಬಂತೆ, ಪ್ರತೀಸಲ ಕಂಡಾಗಲೂ ಆಡಿಯೇ ಆಡುವ ಅವವೇ ಮಾತುಗಳಾದರೂ ಎಷ್ಟಿವೆ! ಎಲೆಯನ್ನು ಅವನೆದುರು ಇಟ್ಟು ‘ಉಣ್ಣ್, ಎಲ್ಲಿ ಹೋಯಿದ್ದೆ ಇಷ್ಟ್ ದಿವ್ಸ’ ಮತ್ತದೇ ಪ್ರಶ್ನೆ ಕೇಳಿ ಉತ್ತರ ಆಲಿಸುವಂತೆ ಕ್ಷಣ ನಿಂತು ‘ಆಯ್ತೆ, ಈಗ ಮೊದ್ಲ್ ಬಿಸಿಬಿಸಿ ಉಂಡ್ಕೊ’ ಎಂದು ಆಕೆ ಒಳಗೆ ಕರೆವಕೆಲಸದ ರಾಶಿಗೆ ಮರಳುವಳು. ಕಣ್ಣಿನಿಂದಲ್ಲ, ಮಾತಿನಿಂದಲ್ಲ, ಕೃತಿಯಲ್ಲೇ ಪ್ರೀತಿ ತೋರುವಾಕೆ. ಆತ ಉಂಡು, ಹಾಸಿದ ಕಂಬಳಿಯ ಮೇಲೆ ಮರದ ನೆರಳಿನಲ್ಲಿ ತುಸುಹೊತ್ತು ಕಣ್ಮುಚ್ಚಿ, ಕಣ್ಣು ತೆರೆಯುತ್ತಲೂ ಎದ್ದು ಯಂಕನೊಡನೆಯೋ ಕಲ್ಯಾಣಿಯೊಡನೆಯೋ, ಎದುರು ಅತ್ತ ಇತ್ತ ಸದಾ ಗಾಳಿಯಂತೆ ರುಂಯ್ಞ ಓಡಾಡುವ ಮಕ್ಕಳನ್ನು ಕರೆದು ನಿಲ್ಲಿಸಿಯೋ ಎರಡು ಮಾತಾಡಿ, ಒಳಗೆ ಕೇಳುವಂತೆ ‘ಹ್ವಾತ್ನೋ’ ಒಂದು ಕೂಗು ಹಾಕುತಿದ್ದ. ಅದು ತನಗೇ ಹೇಳಿದಂತೆ ಯಜಮಾಂತಿಯೂ ‘ಹೊರ್ಟ್ಯಾ? ಹ್ಞೂಂ ಎಲ್ಲಾದ್ರೂ ಬೀಳ್ಗೀಳ್ಬೇಡ, ಜಾಗ್ರತೆ’ ಎನ್ನುತಿದ್ದಳು. ಕೋಲು ಮೀಟುತ್ತಾ ಆತ ಹಾರು ನಡಿಗೆಯಲ್ಲಿ ಹೊರಟು ಹೋಗುತಿದ್ದ, ಮತ್ತೆ ಬರುವ ವಾರ ಬಂದರೆ ಬಂದ. ಇಲ್ಲವಾದರೆ ಇಲ್ಲ.

ಒಟ್ಟು ಊರವರ ಮನೆಬಾಗಿಲಿಗೆ ಬಂದು ಹೋಗುವ ಅಕರಾಸ್ಥೆಯ ಮಂದಿಯಲ್ಲಿ ಅವನೂ ಒಬ್ಬನಾಗಿದ್ದ.ಆತನ ಎಡಗಾಲು ಕೊಯ್ದಂತೆ ಅರ್ಧವೇ ಇತ್ತು. ಚರ್ಮ ಜೋಡಿಕೊಂಡ ಅದರ ಮೋಟುಮುಂಡು ಆತ ನಡೆಯುವಾಗ ನೇತಾಡಿಕೊಂಡಿರುತಿತ್ತು. ‘ಅದ್ಯಂತ?’, ‘ಅದ್ಯಾಕೆ ನಿಂಗ್ ಮಾತ್ರ ಹಾಂಗೆ?’. ‘ಅದಾ? ನಾನ್ ಹುಟ್ಟಿದ್ದೇ ಹೀಂಗೆ ಮಗ, ದೇವ್ರ್ ಕಾಲು ಪೂರ ಕೊಡೂಕ್ ಮುಂಚೆಯೇ ಹೊತ್ತಾಯ್ತಾ ಹೊತ್ತಾಯ್ತಾ ಅಂದ್ ಅಮ್ಸ್‌ರಮ್ಸ್‌ರದಲ್‌ಲ್ ಹೊರ್ಟ್‌ಬಿಟ್ಟಿ. ಅದ್ಕೇ ಅಮ್ಸ್‌ರ ಮಾಡುಕಾಗ ಅಂಬ್ದ್’ ನಗುತಿದ್ದ.

*

ಆಗೆಲ್ಲ ಬೆಳಿಗ್ಗೆ ಒಮ್ಮೆ ಬಾಗಿಲು ತೆರೆಯಿತೆಂದರೆ ಮುಚ್ಚಿಕೊಳ್ಳುವುದು ಮತ್ತೆ ರಾತ್ರಿಯೇ. ಶನಿವಾರವಂತೂ ತಿರುಕರ ದಿನವೆಂತಲೇ ಲೆಕ್ಕ. ಬರುವ ತಿರುಕರೆಲ್ಲರೂ ಪರಿಚಿತರೇ, ವಾರಂತೆ ವಾರ ವಾರ ಬರುವವರೇ. ಯಾರೋ ಒಬ್ಬರು ಬರದಿದ್ದರೂ ಇವತ್ತು ಏನು ಅವ/ಅವಳು ಬರಲಿಲ್ಲ ಅಂತ ರಾತ್ರಿ  ಕೆಲಸವೆಲ್ಲ ಮುಗಿಸಿ ಕಾಲು ನೀಡಿ ಕುಳಿತಾಗ ನೆನೆದು ಸಣ್ಣಕೆ ಸಸೆಯುತಿದ್ದ ಕಾಲ. ಬೇಡುವವರು ಬರುವುದು ಸೀದ ಹಿಂಬಾಗಿಲಿಗೆಯೇ. ಒಂದೋ ‘ಅಮಾ’್ಮ ಎನ್ನುವರು, (ಸುತರಾಂ ‘ಅಪ್ಪಾ’ ಅಲ್ಲ!). ಇಲ್ಲ, ಡಬ್ಬ ಕುಲುಕಿ ನಾಣ್ಯದ ಸದ್ದು ಮಾಡುವರು. ಬೆಳಿಗ್ಗೆ ಎದ್ದೊಡನೆಯೇ ಅವರಿಗಾಗಿ ಪಾತ್ರೆಯೊಂದು ಅಕ್ಕಿ ತುಂಬಿಕೊಂಡು ಸಿದ್ಧವಿರುವುದು. ಅದರಿಂದ ಒಂದು ಮುಷ್ಟಿ ಅಕ್ಕಿಯನ್ನೋ, ಒಂದು ಪಾವಾಣೆಯನ್ನೋ ಅವರಿಗೆ ಹಾಕಿಬಿಟ್ಟರೆ ಸರಿ, ಮತ್ತೊಂದು ಮನೆಗೆ ತೆರಳುವರು. ಭಿಕ್ಷೆಗೆ ನೀಡುವ ಅಕ್ಕಿಗೆ ಪಡಿ ಎಂಬ ಹೆಸರೂ ಇದೆ. ಎಲ್ಲರ ಮನೆಯ ವಿವಿಧ ಬಗೆಯ ಅಕ್ಕಿ ಪಡಿ ಪಡೆದು ಬೇಸಿ ಉಂಬವರು ಅವರು. ಧರ್ಮಶಾಲೆಯಲ್ಲೊ ದಾರಿಪಕ್ಕದಲ್ಲೊ ಬೇಣದಲ್ಲೊ ಮೂರು ಕಲ್ಲು ಹೂಡಿ ಪಾತ್ರೆಯಲ್ಲಿ ಅಕ್ಕಿ ಬೇಸುತ್ತ ಬೆಂಕಿಯನ್ನು ಮುಂದೂಡುತ್ತ, ನಡುವೆ ಆಚೆಈಚೆ ಹೋಗುವ ಊರಮಂದಿಯನ್ನು ಕಂಡು ನಕ್ಕು (ಎಲ್ಲಿಗೆ ಎಂದುಕೇಳಬಾರದಾಗಿ!) ‘ದೂರವೆ?’ ಎಂದು ಕೇಳುತ್ತ ಮಂದಿ ಬದುಕಿನ ಪಾಲುದಾರರಂತೆಯೇ ಇದ್ದರಲ್ಲ ಅವರು. ಊರೆಂದರೆ ಅವರನ್ನು ಸೇರಿಸಿಕೊಂಡೇ ಇತ್ತು.

*

ಶನಿವಾರ ಬಂತೆಂದರೆ ಆ ಮೂಗಿ ಬಂದಳೆಂದೇ. ಆಗ ಹಿಂದಿನಂಗಳವೆಂದರೆ ಮುಖಾಭಿನಯದ ರಂಗಸ್ಥಳ. ಸಪುಸಪುರ ಚಾಟಿಯಂತಹ ದೇಹ, ಚೂಪು ತಿದ್ದಿ ಇಟ್ಟಂತಹ ಮುಖದ ಆಕೆ ಮೂಕಾಭಿನಯ ಪರಿಣತೆ. ಅವಳ ಮೂಕ ಪ್ರಶ್ನೆಗಳು, ಅದಕ್ಕೆ ಮನೆ ಮಕ್ಕಳ ಮೂಕ ಉತ್ತರಗಳು. ಸನ್ನೆಯಲ್ಲಿ ಏನು ಹೇಗಿದ್ದೀ? ಕೇಳಿದರೆ ಸಾಕು, ತಲೆಯಲ್ಲಾಡಿಸಿ ಓಹೋ ಚೆನ್ನಾಗಿದ್ದೇನೆ ಎಂಬಂತೆ ತೂಗುವಳು. ನಗೆನಗೆನಗೆ ಮುಖ. ಪುಸ್ತಕ ಓದುತಿದ್ದರೆ? ‘ಹೋ!ಪರೀಕ್ಷೆಯೇ? ಫಸ್ಟ್ ಕ್ಲಾಸ್ ಬರಲಿ’ ಮೂಕು ಸನ್ನೆಯಲ್ಲಿಯೇ ಹಾರೈಸುವಳು. ಅವಳು ಬಂದಾಗ ಕೆಲಬಾರಿ ಜಗಲಿಯಲ್ಲಿ ಯಾರಾದರೂ ಹೊಸಬರಿರುವುದುಂಟು. ಅವರು ಯಾರು ಏನು ಎಲ್ಲ ಬೇಕು ಅವಳಿಗೆ, ಕೆದಕಿ ಅವರನ್ನು ಅಚ್ಚರಿಯಲ್ಲಿ ಕೆಡವಿ, ತನ್ನ ವಿಚಾರ ಅವರು ಕೇಳದೆಯೂ ಮುಖವನ್ನೊಮ್ಮೆ ಮಗುವಿನಂತೆ ಬಾಡಿಸಿ ಬಾಯಲ್ಲಿ ಉಫ್ ಉಫ್ ಸದ್ದು ಹೊರಡಿಸಿ, (ಗಂಡನ ಸೂಚಕವಾಗಿ) ಮೀಸೆ ಮುಟ್ಟಿ ತಿರುವಿಕೊಂಡು ತನ್ನ ಗಂಡ ನಿಷ್ಪ್ರಯೋಜಕ ಎಂಬಂತೆ ಕೈ ಕೊಡವುವಳು. ಮನೆಯಲ್ಲಿ ಮದುವೆಯೆ? ನತ್ತು ಮುಟ್ಟಿಕೊಂಡು, ಕೈಯನ್ನು ಮನೆಯಾಚೆ ಬೀಸಿ, ಅಳುಮುಖ ಮಾಡಿ ‘ಹಾಗಾದರೆ ಸಣ್ಣಮ್ಮ ಹೋಗುವರೆ?’, ಮದುವೆಯಾದ ಮಗಳು ಮನೆಗೆ ಬಂದಳೋ, ಹೊಟ್ಟೆಯನ್ನು ಕೈಸನ್ನೆಯಲ್ಲೇ ದೊಡ್ಡದು ಮಾಡಿ ‘ಬಸುರಿಯೆ?’ ಕೇಳಿಯೇ ಕೇಳುವಳು. ಹೆತ್ತು ಮಲಗಿದ ಬಾಣಂತಿಗಂತೂ ಮೂಕಿ ಬಂದದ್ದು ತಿಳಿಯಿತೆಂದರೆ ಹೊರಬಂದು ಅವಳಿಗೆ ಮಗು ತೋರಿಸದೆ ಕಳೆಯದು. ಮೂಕಿ ಸಂಭ್ರಮಗೊಂಡು ಕೈಚಾಚಿ ದೃಷ್ಟಿ ತೆಗೆದು ನೆಟಿಗೆ ಮುರಿಯುವಳು. ಪರಸ್ಪರ ಯೋಗಕ್ಷೇಮ ಕೇಳಿ ಮುಗಿದಂತೆ ಎರಡೂ ಅಂಗೈಯನ್ನು ಗಾಳಿಗೆತ್ತಿ ಅರಳಿಸಿ ಮೇಲೆ ನೋಡಿ ದೇವರು ಚೆನ್ನಾಗಿ ಇಡಲಿ ಅಂತ ಕೈಮುಗಿಯುವಳು. ಮನೆಯ ಗಂಡುಮಕ್ಕಳು ಕೆಲಸ ಸಿಕ್ಕಿದಾಗ, ಹೆಣ್ಣು ಮಕ್ಕಳು ತವರಿಗೆ ಬಂದು ಹೋಗುವಾಗ ಕೊಡುವ ದುಡ್ಡು, ಸೀರೆ, ಅಕ್ಕಿ ಎಲ್ಲವನ್ನೂ ಮೀರಿ ಮಿಡಿಯುವ ಮೂಕಿಯ ಕರುಳಿಗೆ ಹೆಸರೇನು? ಆ ಅಂಗಳ, ಅದು ಅವಳು ಬಂದೊಡನೆ ಮೂಕಾಭಿನಯದ ರಂಗೇರಿಸಿಕೊಳ್ಳುವ ಪರಿ, ಬೇಕೆಂದೇ ಪ್ರಶ್ನೆ ಹಾಕಿ ಹಾಕಿ ಅವಳ ಅಭಿನಯ ನೋಡಿ, ಪ್ರತಿಅಭಿನಯ ಮಾಡಿ ಅಲ್ಲಲ್ಲೇ ಏಳುವ ನಗೆ ಬುಗ್ಗೆ, ಅದು ಹರಡುವ ರುಮುರುಮು ಉಲ್ಲಾಸ, ಮೇಲೆ ‘ಸೂರ್ಯನನ್ನು ನೋಡಿ’ ಎಂಬಂತೆ ಕೈ ತೋರಿ ಹೊತ್ತಾಯಿತೆಂದು ಹಣೆಹಣೆ ಬಡಿದುಕೊಂಡು, ಜಿಟಿಜಿಟಿ ನಗುತ್ತಲೇ ಚುರುಚುರುಕಾಗಿ ನಡೆದು ಹೋಗುವ ಅವಳು... 

*

ಮುಖ್ಯರಸ್ತೆಯ ಒಂದು ಬದಿಯಿಂದ ಮಕ್ಕಳು ಶಾಲೆಗೆ ಹೋಗುತ್ತಿವೆ. ಆಚೆ ಬದಿಯಲ್ಲಿ ಎಂದಿನಂತೆಯೇ ಕೈಗೋಲಿಂದ ಊಟದ ತಟ್ಟೆಯನ್ನು ಸಶಬ್ದವಾಗಿ ದೂಡಿಕೊಂಡು ಕೈಂಪ ಬರುತಿದ್ದಾನೆ. ಅವನ ಹೆಸರು ಗಣಪ ಅಂತಿದ್ದರೂ ಬಾಯಿಹೋದ ಅವನು ಏನಾದರೂ ಮಾತಾಡಿದರೆ ಯಾರಿಗೂ ಅರ್ಥವೇ ಆಗುತ್ತಿರಲಿಲ್ಲವಾಗಿ ಅವನನ್ನು ಕೈಂಪ ಎನ್ನುವರು. ‘ಅಮಾಸೆ ಆಳಿದಾಗ’ ಆತ ತಟ್ಟೆಯನ್ನು ಫೋರ್ಸಿಂದ ದೂಡಿ ಕಿರುಚುತ್ತ ಹಾಗೆ ಹೀಗೆ ಕೈಬೀಸುತ್ತ ಬರುವ. ದಿನದಂತೆ ಆತ ಪ್ರಶಾಂತ, ಘನ ಮೌನಿ. ಆತನ ಲಕ್ಷಣ ದೊಡ್ಡದು, ಒಬ್ಬ ದೊಡ್ಡ ಆಫೀಸರ ಆಗಿದ್ದವ, ಗ್ರಹಚಾರ, ಒಮ್ಮೆ ಒಂದು ದೇವಸ್ಥಾನದ ಚಿನ್ನದ ಸಾಮಗ್ರಿ ಕದ್ದ, ಅಂದಿನಿಂದ ಚಿತ್ತಭ್ರಮೆಯಾಗಿ ಮಾತೂ ಕಳೆದು ಬೀದಿ ಪಾಲಾದ, ಮನೆಯವರು ಅವನನ್ನು ಬಿಟ್ಟೇ ಹಾಕಿದರು- ಅಂತೆಲ್ಲ ಅವನ ಕತೆ, ಕಟ್ಟಿದ್ದೋ ಸತ್ಯವೋ ಯಾರು ಬಲ್ಲ? ರಸ್ತೆ ಬಿಟ್ಟರೆ ಎಷ್ಟೊತ್ತಿಗೆ ಕಂಡರೂ ದೇವಸ್ಥಾನದ ಜಗಲಿಯಲ್ಲಿ ಮಲಗಿಯೋ ಕುಳಿತೋ ಇರುವ ಆತ ರಸ್ತೆ ಗುಡಿಸುವಷ್ಟು ಉದ್ದಾನುದ್ದದ ಲಂಗೋಟಿ ಹೊರತು ಬೇರೆ ಉಡುಗೆ ತೊಡದವ. ಎತ್ತರ ನೀಳದೇಹಿ, ಕೋಲುಮುಖ. ಆ ಮುಖ್ಯರಸ್ತೆಯ ಚಿತ್ರವೆಂದರೆ ಅವನ ಚಿತ್ರದ ಸಮೇತವೇ.ಆತನ ಶತಪಥ ಗಸ್ತು, ಕೂಗುಗಳೊಂದಿಗೇ ಊರ ಮಕ್ಕಳೆಲ್ಲರೂ ಬೆಳೆದು ಬಂದವು. ಅವಕ್ಕೇ ಗೊತ್ತಿಲ್ಲದಂತೆ ಮನದೊಳಗೆ ಆತ ಕುಳಿತು ಬಿಟ್ಟಿದ್ದ. ಹೋದಲ್ಲಿವರೆಗೂ ಅವರೊಡನೆ ಅವರಿಗೆ ಸುಳಿವೇ ಸಿಗದಂತೆ ಜೊತೆಗಿರುತಿದ್ದ.ತವರನ್ನು ಬಿಟ್ಟು ಕೆಲವರ್ಷಗಳ ಮೇಲೆ ಒಂದು ದಿನ, ಆತ ಸತ್ತ ಸುದ್ದಿ ಹೊತ್ತ ಪತ್ರ ಬಂತು. ಅಣ್ಣನ ಪತ್ರ ಓದಿ ತಂಗಿಯ ಉಸಿರೊಮ್ಮೆ ಗಕ್ಕನೆ ನಿಂತು ಹೋದಂತಾಯಿತು. ಮನೆ ಒಲ್ಲದ, ಮನೆಯೆಂಬುದಿಲ್ಲದ, ಮನೆಯವನಲ್ಲದವನಾಗಿಯೂ ಎಲ್ಲರ ಮನೆಯವನಂತಿದ್ದ ಎಲ್ಲರ ಕಣ್ಣೆದುರಲ್ಲೇ, ಯಾರ ರಗಳೆ ಅಡ್ಡಿ ಆತಂಕಗಳಿಲ್ಲದೆ, ತನಗೆ ಬೇಕಾದಂತೆ, ‘ಊರ ಯಜಮಾನನಂತೆ’ ಇದ್ದ ಕೈಂಪ ಹಿಂದಿನ ದಿನ ರಾತ್ರಿ ಎಂದಿನಂತೆ ದೇವಸ್ಥಾನದ ಜಗಲಿಯ ಮೇಲೆ ಮಲಗಿದವ ಬೆಳಿಗ್ಗೆ ಏಳಲಿಲ್ಲ. ಚಂದದ ಮರಣ, ಸರಿಯೆ. ಆದರೆ ಸುದ್ದಿ ಕೇಳಿ ಊರಿಗೆ ಊರೇ ಶೋಕಿಸಿತು. ಮನಸ್ಸು ಕೆರಳಿದಾಗ ಏನೇ ಕಿರಿಚಿದರೂ ಸುಮ್ಮಾನದಿಂದಲೇ ನೋಡಿದ, ಊಟ ನೀಡಿದ, ಅಂದಿನ ಸಾಮಾಜಿಕ ಅನುಕೂಲದಲ್ಲಿ ಅವನಿಗೆ ಇದಕ್ಕಿಂತ ಹೆಚ್ಚಿಗೆ ಮಾಡಲಾಗದ ಊರ ಮಂದಿ, ಅವನ ಸ್ಥಿತಿಯಲ್ಲಿ ಆತನಿಗದು ಬಿಡುಗಡೆಯೇ ಅಂತ ತಿಳಿದೂ ಅವನಿಂದ ಕಾಸಿನ ಉಪಯೋಗ ಇಲ್ಲವಾದರೂ ಆತನಿಲ್ಲದ ರಸ್ತೆಯನ್ನು ಊಹಿಸಲೇ ಸಾಧ್ಯವಿಲ್ಲವೆಂಬಷ್ಟು ತಲ್ಲಣಿಸಿತು. ಶವವನ್ನು ಊರ ಸಮಸ್ತರೂ ಸೇರಿ ಮೆರವಣಿಗೆಯಲ್ಲಿ ಕೊಂಡೊಯ್ದು ದಹನ ಮಾಡಿದರು... ಮನೆಯಲ್ಲಿ ತಮ್ಮೆಲ್ಲರ ತಳಮಳವನ್ನೂ ವಿವರವಾಗಿ ಬರೆದಿದ್ದ ಅಣ್ಣ. ಹ್ಞ! ಕೈಂಪ, ಪ್ರಾಥಮಿಕ ಶಾಲೆಗೆ ಹೋಗುವಾಗಿಂದಲೂ ರಸ್ತೆಯ ಮೇಲಿನ ತಮ್ಮ ಜೊತೆಗಾರ, ಹೋದನೆ? ಇನ್ನು ಇರಬಾರದವನು ಪಾಪ, ಹೋಗಬೇಕು, ಆದರೂ ಆಗುತಿರುವ ಸಂಕಟ, ಅದೇನದು?

*

ಹೆಂಡತಿ ಹೆಗಲ ಮೇಲೆ ಇರಿಸಿಕೊಂಡ ಕೋಲಿನ ಇನ್ನೊಂದು ತುದಿ ಹಿಡಿದು ಅವಳನ್ನು ಅನುಸರಿಸಿ ಬರುವ ಕುರುಡ ಪತಿ. ಮಲೆಯಾಳಿ ದಂಪತಿಗಳು ಅವರು, ಗುಡುಗುಡುಗುಡು ಬರುತ್ತಿದ್ದರೆ ಶಿವಶಿವೆಯರಂತೆ ಕಾಣುವರು. ಹೆಂಡತಿಯ ಕಿವಿಯಲ್ಲಿ ದೊಡ್ಡ ಮಲೆಯಾಳೀ ವಾಲೆ, ಅದು ಜಗ್ಗಿ ಉಂಟಾದ ದೊಡ್ಡ ತೂತು, ಬಂದು, ಪಡಿ ಪಡೆದು ಕೂಡಲೆ ಹೊರಡುವರೆ? ಉಹುಂ. ‘ಅಮ್ಮ’ನೊಡನೆ ಎರಡು ಸುಖದುಃಖ ವಿನಿಮಯವುಂಟು, ತಮ್ಮ ಮಕ್ಕಳ ಕತೆಯನ್ನೆಲ್ಲ ಹೇಳಲುಂಟು, ಇಲ್ಲಿನ ಮಕ್ಕಳ ಕುರಿತು ಕೇಳಲುಂಟು, ಹೊರಡುವುದು ಆನಂತರವೆ. ಮುಂದೆ ಹೆಂಡತಿ, ಹಿಂದೆ ಗಂಡ... ಹಣೆಯ ಮೇಲೆ ವಿಭೂತಿ ಪಟ್ಟೆ ಶಿವ-ಶಿವೆ, ಸುಖವೂ ಕೊನೆಯಿಲ್ಲದ ನೋವೂ ಕಟುಕಹಿಯೂ ತುಸುಸಿಹಿಯೂ ಪರ್ಯಟನ ಹೊರಟಂತೆ.ಮತ್ತು, ತುದಿಯವರೆಗೂ ಜಡೆ ಹೆಣೆದುಕೊಂಡು ತುದೀಯಲ್ಲಿ ಸತ್ತ ಇಲಿಯನ್ನು ಕಟ್ಟಿಕೊಂಡು ಊರೆಲ್ಲ ತಿರುಗುವ ಆ ‘ಅಯ್ಯಮ್’ ಪಾರ್ವತಿ! ಅದು ಅಯ್ಯಮ್ ಅಲ್ಲ, ‘ಐ ಆ್ಯಮ್’- ಅವಳಿಗೆ ಇಂಗ್ಲಿಷ್ ಗೊತ್ತಿತ್ತು ಅಂತೆಲ್ಲ ಅವಳ ಕುರಿತು ಹೇಳುತಿದ್ದರು. ತಾನೆಂದರೆ ಅವಳ ಸಮೇತವೇ ಅಂತಿತ್ತು ಆ ಊರು. ಇನ್ನು, ಬಸ್‌ಸ್ಟಾಂಡಿನಲ್ಲಿ ‘ಏನಾದರೂ ಕೊಡಿ, ಒಂದ್ರುಪಾಯಾದ್ರೂ ಕೊಡಿ’ (ಒಂದು ರುಪಾಯಿ ಅಂದರೆ ಬೆಲೆ ಇದ್ದ ಕಾಲ ಅದು) ಎಂದು ಕೇಳಿ, ‘ಸಾಕನ, ಒಂದ್ರುಪಾಯಿ ಸಾಕ ನಿಂಗೆ?’ ಎಂದು ನಗುತ್ತಾ ನೀಡುವ ಕಾಸನ್ನು, ಅದು ಒಂದು ರುಪಾಯಿ ಎಂದೇ ನಂಬುವ, ಈಗಲೂ ನೆನೆದವರಲ್ಲಿ ನಗೆ ಬರಿಸುವ ಹುಚ್ಚಿ- ಇದ್ದಕ್ಕಿದ್ದಂತೆ ಒಮ್ಮೆ ಕಾಣೆಯಾದಾಗ ದಿನವೂ ಆಚೀಚೆ ಓಡಾಡುವ ಪಯಣಿಗರ ಕಣ್ಣು ಅವಳನ್ನು ಅರಸಿತು. ಬಹುಕಾಲ ಆ ಇಡೀ ಬಸ್‌ಸ್ಟಾಂಡು ಮೌನಧಾರಣೆ ವ್ರತದಲ್ಲಿದ್ದಂತೆ ಇತ್ತು.

*

‘ಪಟ್ಟಿಶೀರೀ ಉಟ್ಟಿಕಂಡ್, ರೊಟ್ಟಿ ತಟ್ಟಿ ಕಟ್ಟೀಕಂಡ್’- ಆತನ ಹೆಸರು ಬಡೆಯ.

ಕೆಂಪು ಹೂವನ್ನು ಕಿವಿಗೇರಿಸಿಕೊಂಡು, ಬರುಬರುತ್ತಲೇ ರಾಗವೆಳೆಯುತ್ತ, ‘ಆಂಟ’ದ ಹೆಜ್ಜೆ ಧೊಪಾಧೊಪಾ ಹಾಕಿ ಅಂಗಳವಿಡೀ ಸುತ್ತು ಬರುವ ಅಡ್ಡದೇಹದ ಅಗಲ ಮುಖದ ಬಡೆಯ.‘ಬೆಳ್ಗಿಯಷ್ಟೆ ಸೆಗ್ಣಿ ವಡ್ಗಿದ್ದ್ ಎಲ್ಲ ಕ್ವೊಣ್ದ್ ಹ್ವೊಡಿ ಮಾಡ್ದ್ಯಲೆ! ಯಯ್ಡೊ ಸುತ್ತ್ ಬಿದ್ದ್ ಹ್ವಾಯಿತ್ತನ ಬೇವರ್ಸಿ ನಿಂಗೆ?’ ಗದರುವ ಕಲ್ಯಾಣಿಗೆ ‘ಭಾಮಿನೀ ನೀ ಬಾರೇ...’ ಎಂದು ಯಕ್ಷ-ಗಾನದಿಂದ ಕರೆಯುವ, ನಗುವ ನಗಿಸುವ ಗುಡಾಣ ಅವ. ‘ಇಡೀ ಈ ಭೂಮಂಡಲದಲ್ಲಿ, ಈ ನಮ್ಮ ಬಡೆಯನಷ್ಟು ಸುಂದರವಾಗಿ ಮಂಟಪ ನಿರ್ಮಿಸುವವರು ಯಾರಿದ್ದಾರೆ , ಹೇಳಿರೈ’ ಎನ್ನುತ್ತ ಎಲ್ಲಿದರೂ ಸರಿಯೆ, ತುಲಸೀ ಹಬ್ಬಕ್ಕೆ ಮಂಟಪ ಕಟ್ಟಲು ತಾನಾಗಿ ಹಾಜರಾಗುವ, ಮಂಟಪ ಕಟ್ಟುವ. ಹಾಗೆ ಮಂಟಪ ಕಟ್ಟುತ್ತ ಹಾಡುತ್ತ ಆಟ ಕುಣಿಯುತ್ತಲೇ ಒಂದು ದಿನ ಈ ಎಂದೂ ಮರವೆಯಾಗದವ, ಮರೆಯಾದ.  

*

ಭಿಕ್ಷುಕರೂ ಮರ್ಯಾದೆಯಿಂದ ಭಿಕ್ಷೆ ಎತ್ತುವ, ಬಂದ ಭಿಕ್ಷುಕನಲ್ಲೇ ಶಿವನ ಕಾಣುವ ಕಾಲವದು. ಅಂಥದ್ದು, ಇವತ್ತು ಬಾಗಿಲಿಗೆ ಸಾಕ್ಷಾತ್ ಶಿವನೇ ಬಂದರೂ, ಕಳ್ಳನೆ? ಸತ್ಯವೇ ಬಂದರೂ, ಸುಳ್ಳೆ? ವೇಷ ಮರೆಸಿದ ರಾವಣನೆ? ಭಯ. ಅದು ಈ ಕಾಲದ ಸಕಾರಣ ಭಯವೂ. (ಅಪಾರ್ಟ್‌ಮೆಂಟ್ ಪ್ರೀತಿ ಹೆಚ್ಚುವಲ್ಲಿ ಇದೂ ಒಂದು ಕಾರಣ ಎನ್ನುವುದಿದೆ). ‘ಇಲ್ಲ ಹೋಗಪ್ಪ’ ಎಂಬುದೂ ಇಲ್ಲದೆ ರಪ್ಪ ಬಾಗಿಲು ಹಾಕಿಬಿಡುವ ಅಥವಾ ಬಾಗಿಲನೆ ತೆರೆಯದಿರುವ ಮಂದಿಗೂ ಅವರಿಗೂ ನಡುವೆ ಕೊಂಡಿಯೇ ತಪ್ಪಿ ಹೋಗಿರುವ ಕಾಲ ತೆರೆದುಕೊಂಡಿದೆ.ಅವರನ್ನು ಬಿಟ್ಟು ಇವರಿಲ್ಲದ ಇವರನ್ನು ಬಿಟ್ಟು ಅವರಿಲ್ಲದ, ಹತ್ತಾರು ಸಮಸ್ತರಲ್ಲಿ ಇವರನ್ನೂ ಕಣ್ಣಿಗೆ ಕಾಣಿಸುತಿದ್ದ ಊರುಗಳು, ವಾಹನಗಳ ಸರಭರ ಇಲ್ಲದ ಅಲ್ಲಿನ ರಸ್ತೆಯ ಚಿತ್ರವೆಂದರೆ ಈ ಎಲ್ಲರನ್ನು ಒಳಗೊಂಡರಷ್ಟೇ ಪೂರ್ಣವಾಗುವುದು. ಈಗ ಅದೇ ಊರಿನ ಆ ರಸ್ತೆ, ಎಲ್ಲ ಊರುಗಳಂತೆ, ಗುರುತೇ ಬದಲಾಯಿಸಿದೆ. ಅಂದು ಎಂಬುದು ಇಂದಿನ ಹಾಗಲ್ಲ; ಇಂದು ಕೂಡ ಅಂದಿನ ಹಾಗೆ ಇರುವುದಾದರೆ ‘ಇಂದು’ ಎಂಬುದು ಯಾಕೆ ಬೇಕು? ನಿಜ, ಒಪ್ಪುವಂಥದೆ. ಇವತ್ತು ಹುಚ್ಚರು, ಭಿಕ್ಷುಕರು, ಅನಾಥರು, ತಲೆಹಿಡುಕರು ಇಲ್ಲವೇ ಇಲ್ಲ ಎಂದಾದರೆ ಒಪ್ಪುವುದಷ್ಟೇ ಅಲ್ಲ, ದೊಡ್ಡದಾಗಿ ಖುಷಿ ಪಡಬಹುದಿತ್ತು. ಬದಲು ಅವರ, (ಜೊತೆಗೆ ರಾವಣರದೂ ಕಳ್ಳರದೂ ಸುಳ್ಳರದೂ) ಸಂಖ್ಯೆ ಹೆಚ್ಚುತಿದೆಯೇಕೆ? ಒಂದೆಡೆಯ ಹತಾಶೆ ಹಸಿವಿನ ಕಾವು ಉಳಿದೆಡೆ ತಟ್ಟುತಿಲ್ಲವೇಕೆ?ನಮ್ಮೆಲ್ಲರನ್ನು ಒಟ್ಟು ಕಟ್ಟಿದ ಸೂತ್ರ ಬಳಬಳನೆ ಕಳಚಿ, ‘ಒಟ್ಟು ಹೊಣೆ’ ಸುಟ್ಟು ‘ಬಿಡಿ’ ಆಯಿತೆ?

ಕಟ್ಟುವುದುಂಟೆ ಇನ್ನು, ಯಾವುದನ್ನು?

(ಭಿಕ್ಷುಕರ ಕೇಂದ್ರದಲ್ಲಿನ ಸರಣಿ ಸಾವಿನ ಸಂದರ್ಭ ಬರೆದ ಲೇಖನ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.