ಶನಿವಾರ, ಮೇ 8, 2021
25 °C

ತೆರೆದ ಮನದ ಜಿಎಸ್ಎಸ್‌ಗೆ ಸಲಾಂ

ಎಚ್.ಎಸ್.ಶಿವಪ್ರಕಾಶ್ Updated:

ಅಕ್ಷರ ಗಾತ್ರ : | |

ತೆರೆದ ಮನದ ಜಿಎಸ್ಎಸ್‌ಗೆ ಸಲಾಂ

ಸುಮಾರು ಎಂಬತ್ತೆಂಟು ವರ್ಷದ ತುಂಬು­ಬಾಳನ್ನು ಬಾಳಿದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರು ಕಳೆದ ವಾರ ನಿಧನ­ರಾ­ದರು. ಕನ್ನಡ ಸಾರಸ್ವತ ಲೋಕದ ಹಲವು ಗಣ್ಯರು, ಸಹೃದಯರು, ಸಮಾಜ ಮತ್ತು ರಾಜ­ಕಾರಣದ ಪ್ರತಿಷ್ಠಿತರು, ಅವರ ಅಸಂಖ್ಯಾತ ಅಭಿ­ಮಾನಿಗಳು, ವಿದ್ಯಾರ್ಥಿಗಳು ಕಂಬನಿ ಮಿಡಿದರು. ಅವರ ಸಾಧನೆ ಮತ್ತು ಸದ್ಗುಣಗಳನ್ನು ತುಂಬು­ಮನದಿಂದ ನೆನಪಿಸಿಕೊಂಡರು.

ಅವರ ಸಾವಿನಿಂದ ಶೋಕಗ್ರಸ್ತರಾದ ಅಸಂಖ್ಯಾತರಲ್ಲಿ ನಾನೂ ಒಬ್ಬ.ನನಗೆ ಅವರ ವಿದ್ಯಾರ್ಥಿಯಾಗುವ ಪುಣ್ಯ ಸಿಗ­ಲಿಲ್ಲ. ಅವರ ಎಲ್ಲ ವಿದ್ಯಾರ್ಥಿಗಳೂ ಅವರೊಬ್ಬ ಅದ್ಭುತ ಪ್ರಾಧ್ಯಾಪಕರೆಂದು ಹೇಳುತ್ತಿದ್ದರು. ನನ್ನ ಬರ­ವ­ಣಿಗೆಯ ಎಳೆಯ ಕಾಲದಲ್ಲಿ ಮೆಚ್ಚುಗೆ ಸೂಚಿಸಿ ನನಗೆ ಪ್ರೋತ್ಸಾಹ ನೀಡಿದ ಹಿರಿಯರಲ್ಲಿ ಜಿಎಸ್ಎಸ್ ಅವರೂ ಒಬ್ಬರು. ಕನ್ನಡದ ಹಿರಿಯಣ್ಣ­ನಾದ ಮೇಲೂ ಕಿರಿಯರ ಬರಹದ ಬಗ್ಗೆ ಜಿಎಸ್ಎಸ್ ಅವರಂತೆ ಆರೋಗ್ಯಪೂರ್ಣ ಕಾಳಜಿ ತೋರಿಸುವ ಬರಹಗಾರರ ಸಂಖ್ಯೆ ವಿರಳ. ಬಿಟ್ಟಿ ಸಂಬಳ ತಿನ್ನುವ ಅಧ್ಯಾಪಕರ ಸಂಖ್ಯೆ ಹೆಚ್ಚು­ತ್ತಿರುವ ಇಂದಿನ ಸನ್ನಿವೇಶದಲ್ಲಿ ಜಿಎಸ್ಎಸ್ ಅವರಂಥ ಆದರ್ಶ ಅಧ್ಯಾಪಕರು ಅನುಕರ­ಣೀಯರು. ಎರಡು ಅಥವಾ ಎರಡೂವರೆ ಪುಸ್ತಕ ಬರೆದು ಅದಕ್ಕೆ ಇಡೀ ಪ್ರಪಂಚವನ್ನೇ ಪ್ರತಿ­ಫಲ­ವಾಗಿ ಬೇಡುವ ಬರಹಗಾರರು ಅತೃಪ್ತಿ­ಯಿಂದ ಈಗ ವಿಧಾನಸೌಧದ ಮೆಟ್ಟಲಿನ ಮೇಲೋ ಅಥವಾ ಪ್ರಶಸ್ತಿ ಸಂಸ್ಥೆಗಳ ಬಾಗಿಲಲ್ಲೋ ಕಾಯುತ್ತಿರುವ ಸಂದರ್ಭದಲ್ಲಿ ಜಿಎಸ್ಎಸ್ ಅವರ ನಿರಂತರ ಸೃಜನತತ್ಪರತೆ ಒಂದು ಶ್ಲಾಘನೀಯ ಮಾದರಿಯಾಗಿತ್ತು.ಅಕಾ­ಡೆಮಿ ಅಧ್ಯಕ್ಷತೆ,  ಬ್ರಹ್ಮಪದವಿ ವಿಷ್ಣುಪದವಿ­ಗಳಿಗೂ ಅವರು ಕೈಯೊಡ್ಡುತ್ತಿರಲಿಲ್ಲ. ಪದವಿ­ಗಳು ತಾವಾಗಿಯೇ ಬಂದಾಗ ಅವನ್ನು ಜಾಗ­ರೂ­ಕತೆ ಮತ್ತು ಜವಾಬುದಾರಿಯಿಂದ ನಿಭಾಯಿ ಸುತ್ತಿ­­ದ್ದರು. ಪ್ರಶಸ್ತಿಗಳು ತಾವಾಗಿಯೇ ಬಂದಾಗ ಅವನ್ನು ಕೃತಜ್ಞತಾಪೂರ್ವಕವಾಗಿ, ಗಂಭೀರ­ವಾಗಿ­ ಸ್ವೀಕರಿಸುತ್ತಿದ್ದರು. ಅವರು ರಾಷ್ಟ್ರ­­ಕವಿ­ಗಳಾದಾಗ ನಮ್ಮೆಲ್ಲರಿಗೂ ಸಂತಸವಾಗಿತ್ತು.ಗದ್ಯ ಪದ್ಯಗಳೆರಡನ್ನೂ ಹಿತಮಿತ ಮೃದು ವಚನ­ಗಳಿಂದ ರಚನೆ ಮಾಡುತ್ತಿದ್ದ ಜಿಎಸ್ಎಸ್ ಅವರ ಅಭಿವ್ಯಕ್ತಿಯ ಗುಣ ಮತ್ತು ಗಾತ್ರಗಳೆ­ರಡೂ ಹಿರಿದು. ನವೋದಯದ ರಮ್ಯ ಸಂವೇದನೆ­­ಯಿಂದ ಬರೆಯಲಾರಂಭಿಸಿದ ಅವರು ನವ್ಯ ಬಂಡಾಯಾದಿಗಳಿಂದ ಕಲಿಯಬೇಕಾ­ದ್ದನ್ನು ಕಲಿತು ತಮ್ಮ ದಾರಿಯಲ್ಲೇ ಮುನ್ನಡೆ­ಯುತ್ತಾ ಹೋದರು. ಹೊಸತರ ಎಡೆ­ಬಿಡದ ಒಡಂಬಡಿಕೆಯಿಂದ ತಮ್ಮ ಬರಹ,-ಚಿಂತನೆ­ಗಳನ್ನು ವಿಸ್ತರಿಸುತ್ತಾ ಹೋಯಿತು ಅವರ ತೆರೆದ ಮನ.ಕುವೆಂಪು ಅವರ ಜಾತ್ಯತೀತ ಮತ್ತು ವಿಶ್ವಮಾನವ ತತ್ವಗಳನ್ನು  ರಕ್ತವಾಗಿಸಿ­ಕೊಂಡಿದ್ದರು ಜಿಎಸ್ಎಸ್. ಆ ಪರಿಧಿಯಲ್ಲೇ ಬರೆದರು, ಬದುಕಿದರು.ಸಾಹಿತ್ಯ ಚಿಂತಕರಲ್ಲಿ ಅಗ್ರಗಣ್ಯರೂ, ಅಪ­ರೂಪರೂ ಆಗಿದ್ದ ಜಿಎಸ್ಎಸ್ ಅವರು ಸಂಸ್ಕೃತ ಕಾವ್ಯ­­ಮೀಮಾಂಸೆಯ ಬಹುದೊಡ್ಡ ವಿದ್ವಾಂಸ­ರಾಗಿ­ದ್ದರು. ಪಾಶ್ಚ್ಾತ್ಯ ಸೌಂದರ್ಯ ಮೀಮಾಂಸೆ­ಯನ್ನೂ ಚೆನ್ನಾಗಿ ಬಲ್ಲವರಾಗಿದ್ದರು. ಅವರ ಇನ್ನೊಂದು ವೈಶಿಷ್ಟ್ಯವೆಂದರೆ ಕನ್ನಡಕ್ಕೆ ತನ್ನದೇ ಆದ ಕಾವ್ಯಮೀಮಾಂಸೆಯ ವಿವೇಕವಿದೆಯೆಂದು ಪ್ರತಿ­ಪಾದಿಸಿದ್ದು.ಮುಂದೆ ಹಿರಿಯರಾದ ಕೆ.ವಿ. ಸುಬ್ಬಣ್ಣ ಅವರೂ ಈ ವಿಚಾರವನ್ನು ಇನ್ನೊಂದು ಬಗೆಯಲ್ಲಿ ಪ್ರತಿಪಾದಿಸಿದರು. ಭಾಷಾ ಪರಂಪರೆ­ಗಳಿಗೆ ಸಂಸ್ಕೃತೇತರ ಕಾವ್ಯವಿವೇಕ­ಗಳಿವೆಯೆಂದು ಶಿಸ್ತುಬದ್ಧವಾಗಿ ವಾದಿಸಿದವರು ಭಾರತೀಯ ಸಾಹಿತ್ಯದಲ್ಲೇ ವಿರಳ. ಗುಜರಾತಿಯ ಸೀತಾಂಶು ಯಶಸ್ಚಂದ್ರ, ಮರಾಠಿಯ ನೆಮಾಡೆ, ತಮಿಳಿನ ಜ್ಞಾನಕೂಟ್ಟನ್ ಹೀಗೆ ಎಲ್ಲೋ ಕೆಲವರು ನೆನಪಾ­ಗುತ್ತಾರೆ. ಈ ಸಾಲಿನಲ್ಲಿ ಜಿಎಸ್ಎಸ್ ಅವರಿಗೆ ಅಗ್ರಸ್ಥಾನ.ಇತರ ವಿಶ್ವವಿದ್ಯಾಲಯಗಳ ಕನ್ನಡ ವಿಭಾಗ­ಗಳು ಆ ಈ ಜಾತಿ-, ಉಪಜಾತಿಗಳ ಉದ್ಯೋಗ ಕೇಂದ್ರಗಳಾಗಿ ಮಾರ್ಪಡುತ್ತಿವೆಯೋ ಎಂಬ ಅನುಮಾನವಿದ್ದಾಗ ಜಿಎಸ್ಎಸ್, ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗವನ್ನು ಒಂದು ಜಾತ್ಯತೀತ ಗುಣಗ್ರಾಹಿ ಸಂಸ್ಥೆಯನ್ನಾಗಿ ಕಟ್ಟಿ­ದರು.ತಮ್ಮ ಕಿರಿಯ ತಲೆಮಾರಿನ ಪ್ರತಿಭಾ­ವಂತ­ರಾದ ಕೀರಂ, ಚಂದ್ರಶೇಖರ ಕಂಬಾರ, ಕೆಎಂಎಸ್, ಡಿ.ಆರ್. ನಾಗರಾಜ್, ಸಿದ್ದ­ಲಿಂಗಯ್ಯ, ಕೆ.ವಿ. ನಾರಾಯಣ, ಬರಗೂರು, ಕಾಳೇಗೌಡ ನಾಗವಾರ, ವಿದ್ಯಾಶಂಕರ್ ಮುಂತಾದ ಹಲವರನ್ನು ನೇಮಿಸಿ ಕನ್ನಡ ಸಾಹಿತ್ಯದ ಬೋಧನೆ ಮತ್ತು ಸಂಶೋಧನೆಗಳ ಒಂದು ಸುವರ್ಣಯುಗವನ್ನು ಪ್ರಾರಂಭಿಸಿದರು. ಪಂಪ­­ನಿಂದ ಹಿಡಿದು ಬೇಂದ್ರೆವರೆಗಿನ ಶ್ರೇಷ್ಠತಮ ಕವಿ­ಗಳ ಕುರಿತ, ಟಿ.ಎಸ್. ಎಲಿಯಟ್ ಮತ್ತು ಆಧು­ನಿಕತೆ ಕುರಿತ ಹಲವು ಸಮರ್ಥ ವಿಚಾರ­ಗೋಷ್ಠಿಗಳ ಆಯೋಜನೆ ಮಾಡಿ ವಿಮರ್ಶೆ, -ಚಿಂತನೆಗಳ ಗಡಿಗಳನ್ನು ವಿಸ್ತಾರಗೊಳಿಸಿದರು.ಜಿಎಸ್ಎಸ್ ಕರ್ನಾಟಕ ಸಾಹಿತ್ಯ ಅಕಾ­ಡೆಮಿಯ ಅಧ್ಯಕ್ಷರಾಗಿದ್ದು ನನ್ನ ಪ್ರೀತಿಯ ಕವಿ­ಗಳೂ ಮಿತ್ರರೂ ಆದ ಪ್ರೊ. ಕೆ.ಎಸ್. ನಿಸಾರ್ ಅಹಮದ್ ಅವರ ನಂತರ. ನಿಸಾರ್ ಅವರು, ನಿದ್ದೆ ಹೋಗಿದ್ದ ಅಕಾಡೆಮಿಯನ್ನು ಚುರುಕು­ಗೊಳಿಸಿ ಸಕ್ರಿಯವಾಗಿಸಿದ್ದರು. ಆ ನಂತರ ಜಿಎಸ್ಎಸ್ ಅದಕ್ಕೆ ಹೊಸಚಿಂತನೆಯ ಜೀವ ತುಂಬಿ­ದರು. ಪ್ರಕಟಣೆ ಮತ್ತು ಕಾರ್ಯಕ್ರಮ­ಗಳನ್ನು ಹಿಗ್ಗಿಸಿ ವೈವಿಧ್ಯಮಯಗೊಳಿಸಿದರು. ಅವರ ಸಂವೇದನಾತ್ಮಕ ವೈವಿಧ್ಯಕ್ಕೆ ಪೂರಕವಾಗಿ ಅವರ ನಂತರ ಅಧ್ಯಕ್ಷರಾದ ಬರಗೂರು ರಾಮ­ಚಂದ್ರಪ್ಪ ಅವರು ಅದಕ್ಕೊಂದು ಸಾಮಾಜಿಕ ವಿಸ್ತಾರವನ್ನು ತಂದುಕೊಟ್ಟರು.ಇ­ವೆಲ್ಲವೂ ಜಿಎಸ್ಎಸ್ ಅವರ ಸಾರ್ವಜನಿಕ ಕೊಡುಗೆಗಳು. ಆದರೆ ಅವರು ಸ್ನೇಹ­ಜೀವಿಯಾಗಿಯೂ ಲೋಕೋಪಕಾರಿಯೂ ಆಗಿದ್ದ­ರಿಂದ ಅವರ ಒಡನಾಟದಲ್ಲಿದ್ದ ಪ್ರತಿಯೊಬ್ಬನಿಗೂ ವಿಶಿಷ್ಟ ಅನುಭವಗಳಾಗಿವೆ. ಕಿಲಾರಿ ರೋಡಿನ ರೌಡಿಗಳ ಸಂಗಾತಿಯಾಗಿದ್ದ ನಾನು ಕಾವ್ಯದ ಗಂಭೀರ ವಿದ್ಯಾರ್ಥಿಯಾಗುವ ಪೂರ್ವ­ದಲ್ಲೇ ಜಿ.ಎಸ್. ಶಿವರುದ್ರಪ್ಪನವರ ಹೆಸರಿಗೆ ಪರಿಚಿತನಾಗಿದ್ದೆ. ಬೆಳಗ್ಗೆ ಹಾಸಿಗೆಯಲ್ಲಿ ಮಲಗಿರುವಾಗಲೇ ರೇಡಿಯೊದಲ್ಲಿ ಅವರಿಂದ ರಚಿತವಾದ ಏಳು ಸುತ್ತಿನ ಮಲ್ಲಿಗೆ, ಉಡುಗಣ­ವೇಷ್ಟಿತ ಚಂದ್ರಸುಶೋಭಿತ... ಮುಂತಾದ ಹಾಡು­­­ಗಳು ಕಿವಿ ಮನಸ್ಸುಗಳನ್ನು ತುಂಬು­ತ್ತಿ­ದ್ದವು. ಆದರೆ ಆ ಕವಿ ನನಗಿನ್ನೂ ದೂರದ ಬೆಟ್ಟ­ವಾಗಿ­­ದ್ದರು.ನಮ್ಮ ತಂದೆಯವರ ಲೈಬ್ರರಿ­ಯಲ್ಲಿದ್ದ ಅವರ ಕೆಲವು ಪುಸ್ತಕಗಳನ್ನು ಮುಂದೆ ಹುಡುಕಿ­ತೆಗೆದೆ. ಯಥಾಶಕ್ತಿ ಓದತೊಡಗಿದ್ದೆ. ತುಂಬುತೋಳಿನ ಷರಟು ಮತ್ತು ಕಚ್ಚೆಪಂಚೆಯ ಅವರನ್ನು ಕಂಡದ್ದು ಅವರು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಬಂದ ಹೊಸತರಲ್ಲಿ. ಬೆಂಗ­ಳೂರು ವಿ.ವಿ.ಯ ಸೆನೆಟ್‌ ಹಾಲಿನಲ್ಲಿ ಅವರು ನಡೆ­ಸಿದ ಕಾರ್ಯಕ್ರಮಕ್ಕೆ ನನ್ನ ತಂದೆಯವರ ಜೊತೆ­ಯಲ್ಲಿ ಹೋಗಿಬಂದೆ. ಆಗ ನಮ್ಮನ್ನು ಜಿಎಸ್ಎಸ್ ಅವರೇ ತಮ್ಮ ಕಾರಿನಲ್ಲಿ ಕರೆದೊ­ಯ್ದಿದ್ದರು. ಕಿರಿಯನಾದ ನನ್ನನ್ನು ಪ್ರೀತಿಯಿಂದ ಮಾತಾಡಿಸಿದ್ದರು.ಕುಸ್ತಿಪಟುವಾಗಿ ಭುವನಖ್ಯಾತಿಯನ್ನು ಪಡೆಯಬೇಕೆಂಬ ಕನಸಿನಲ್ಲಿ ತೇಲಾಡುತ್ತಿದ್ದ ನಾನು ಗೆಳೆಯ ಕೀರಂ ಅವರ ಜೊತೆಗಿನ ಪಾನ­ಗೋಷ್ಠಿ­ಗಳಲ್ಲಿ ಕವಿತೆಯ ಗೀಳು ಹತ್ತಿಸಿಕೊಂಡೆ. ಸಾಹಿತ್ಯ ಕಾರ್ಯಕ್ರಮಗಳಿಗೆ ಹೋಗತೊಡಗಿ ದಾಗ ಜಿಎಸ್ಎಸ್ ಅವರನ್ನು ನೋಡುವ ಅವ­ಕಾಶ ದೊರಕತೊಡಗಿತು. ಆ ಸಂದರ್ಭದಲ್ಲಿ ಶ್ರೀನಿವಾಸ­ರಾಜು ಸಂಪಾದಿಸುತ್ತಿದ್ದ ‘ಅಂಕಣ’­ದಲ್ಲಿ ನನ್ನ ಸಂದರ್ಶನ ಮಾಡಲಾಯಿತು.ಕನ್ನಡ ಕಾವ್ಯ­ಪರಂಪರೆಯ ಜೊತೆಗಿನ ನನ್ನ ನಂಟನ್ನು ಕುರಿತ ಪ್ರಶ್ನೆಗೆ ಉತ್ತರಿಸುತ್ತಾ ಬಿಎಂಶ್ರೀ ಅವರು ಪ್ರಾರಂಭಿಸಿದ ಆಧುನಿಕ ಕನ್ನಡದ ಕವಿರಾಜ­ಮಾರ್ಗ ನನ್ನದಲ್ಲವೆಂದೂ ಶಿಶುನಾಳರು, ಬೇಂದ್ರೆ­ಯವರು ನಿರ್ಮಿಸಿದ ಕವಿಪ್ರಜಾಮಾರ್ಗ ನನ್ನ­ದೆಂದೂ ಘೋಷಿಸಿಬಿಟ್ಟೆ. ಆಶ್ಚರ್ಯವೆಂದರೆ ಹಿರಿಯರಾದ ಜಿಎಸ್ಎಸ್ ಅವರು ಇದನ್ನು ಓದಿ ಮೆಚ್ಚಿಬಿಟ್ಟಿದ್ದರು. ನನ್ನನ್ನು ಉಲ್ಲೇಖಿಸಿ ಹಲವು ಕಡೆ ಈ ವಿಚಾರಕ್ಕೆ ಒತ್ತುಕೊಡುತ್ತಾ ಬಂದರು. ಆಗ ಹೆಮ್ಮೆಯ ಜೊತೆಗೆ ನನಗೆ ಸ್ವಲ್ಪ ದುರಹಂಕಾರವೂ ಬಂತು.ಆ ನಂತರ ತುಮಕೂರಿನಲ್ಲಿ ನೌಕರಿ ಹಿಡಿದೆ. ಅಲ್ಲಿ ನನ್ನಂತೆಯೇ ಭಿನ್ನಮತೀಯರಾದ ಕೆ.ಜಿ. ನಾಗ­ರಾಜಪ್ಪ ಅವರು ನನಗೆ ಹತ್ತಿರವಾದರು. ಜಿಎಸ್ಎಸ್ ಅವರ ಮತ್ತು ಕೆ.ಜಿ. ನಾಗರಾಜಪ್ಪ ಅವರ ಸ್ನೇಹ ಬಹಳ ಹಳೆಯದು. ಜಿಎಸ್ಎಸ್ ಆಗಾಗ ಕೆಜಿಎನ್ ಅವರ ಮನೆಯಲ್ಲಿ ಉಳಿಯು­ತ್ತಿ­ದ್ದರು.  ಆಗ ನಡೆದ ಸಂಭಾಷಣೆಗಳಲ್ಲಿ ಅವ­ರಿಂದ ಹಲವು ವಿಷಯಗಳನ್ನು ವಿಶೇಷವಾಗಿ ಕಾವ್ಯ ಮೀಮಾಂಸೆಯ ಬಗ್ಗೆ- ಕಲಿತೆ.ನನಗೆ ಬೆಂಗಳೂರಿಗೆ ವರ್ಗವಾದ ಮೇಲೆ ಅವ­ರನ್ನು ವ್ಯಕ್ತಿಗತವಾಗಿ ಕಾಣುವ ಸಂದರ್ಭಗಳು ಕಡಿಮೆಯಾದರೂ ಸಾಹಿತ್ಯಿಕ ಕಾರ್ಯಕ್ರಮ­ಗಳಲ್ಲಿ ಭೆಟ್ಟಿಯಾಗುತ್ತಿದ್ದೆವು. ನಾನು ಹೋಮ್‌ ಸೈನ್ಸ್ ಕಾಲೇಜಲ್ಲಿ ಕೆಲಸ ಮಾಡು­ತ್ತಿದ್ದೆ. ಆಗ ಕನ್ನಡ ವಿಭಾಗದಲ್ಲಿ ಇಂಗ್ಲಿಷ್ ಅಧ್ಯಾಪಕ ಹುದ್ದೆಗೆ ಜಾಹೀರಾತು ಪ್ರಕಟ­ವಾ­ಯಿತು. ನಾನು ಆ ಹುದ್ದೆಯ­ನ್ನಲಂಕ­ರಿಸ­ಬೇಕೆಂದು ಕೀರಂ ಒತ್ತಾಯಿಸಿದರು. ಜಿಎಸ್ಎಸ್‌  ನನ್ನನ್ನು ತೆಗೆದುಕೊಳ್ಳಲು ಒಪ್ಪಲಿಲ್ಲ. ಅವರಂತೆ ನಾನೂ ಜಾತಿಯಲ್ಲಿ ಲಿಂಗಾಯತನಾಗಿದ್ದರಿಂದ ನಾನು ಬೇಡವೆಂದೂ ಅನ್ಯ ಜಾತಿಯ ಯಾರ­ನ್ನಾ­ದರೂ ಸೂಚಿಸಬೇಕೆಂದೂ ಅವರು ಹೇಳಿದ­ರೆಂದು ಕೀರಂ ನನಗೆ ನೋವಿನಿಂದ ತಿಳಿಸಿದರು. ಅವರ ಜಾತ್ಯತೀತ ನಿಲವಿಗೆ ಇದೊಂದು ನಿದರ್ಶನ.ಆದರೂ ನನಗಾಗಲೀ ಅವರಿಗಾಗಲೀ ಜಾತಿ­ವಾದದ ಆರೋಪ ತಪ್ಪಲಿಲ್ಲ. ನನ್ನ ವಿದ್ಯಾ­ಗುರುಗಳಾದ ಎಸ್. ರಾಮಸ್ವಾಮಿ ಮತ್ತು ಆತ್ಮೀಯ ದಿವಂಗತ ಕೆ.ಎಸ್.ರಾಧಾಕೃಷ್ಣ ಈ ಇಬ್ಬರ ಜೊತೆ ನನ್ನನ್ನು  ಜಿಎಸ್ಎಸ್ ಅವರು ಅಕಾ­ಡೆಮಿಯ ಇಂಗ್ಲಿಷ್ ಪತ್ರಿಕೆ ‘ಅನಿಕೇತನ’ಕ್ಕೆ ಸಂಪಾದಕ­ನನ್ನಾಗಿ ನೇಮಿಸಿದರು. ಆಗ ಹಿಂದಿನ ಸಂಪಾದಕ ಮಂಡಲಿಯ ಒಬ್ಬ ಮಹನೀಯರು ಒಬ್ಬ ಸಾಹಿತ್ಯ ಪತ್ರಿಕೆಯ ಸಂಪಾದಕನ ಜೊತೆ ಸೇರಿ ನಾನು, ಜಿಎಸ್ಎಸ್ ಇಬ್ಬರೂ ಲಿಂಗಾ­ಯತ­ರಾಗಿದ್ದರಿಂದ ನನ್ನ ನೇಮಕಾತಿ­ಯಾಯಿ­ತೆಂದು ದುಶ್ಪ್ರಚಾರ ಮಾಡಿದರು. ಮಂಜಿನಂತೆ ಬೆಳ್ಳಗಿದ್ದರೂ, ಮಂಜುಗಡ್ಡೆಯಂತೆ ತಣ್ಣಗಿದ್ದರೂ ನೀನು ಅಪವಾದಗಳಿಂದ ತಪ್ಪಿಸಿಕೊಳ್ಳಲಾರೆ ಎಂಬ ಹ್ಯಾಮ್ಲೆಟ್ಟನ ಮಾತು ನೆನಪಾಯಿತು.ಸಾಹಿತ್ಯ ಅಕಾಡೆಮಿಯಲ್ಲಿ ಸಂಪಾದನ ಕೆಲಸ ಮಾಡುವ ಸಂದರ್ಭದಲ್ಲಿ ಜಿಎಸ್ಎಸ್ ಅವರ ಜೊತೆ ನಿಕಟ ಸಂಪರ್ಕ, -ಸಂಭಾಷಣೆಗಳಿಗೆ ಅವ­ಕಾಶ­ವಾಯಿತು. ದಿನಾ ಸಂಜೆ ಅವರು ಗಾಂಧಿ ಬಜಾರಿ­ನವರೆಗೆ ತಮ್ಮ ಕಾರಿನಲ್ಲಿ ನನ್ನನ್ನು ಬಿಟ್ಟುಹೋಗುತ್ತಿದ್ದರು. ನನ್ನ ಕವಿತೆಗಳನ್ನು ಓದಿಸಿ ಕೇಳಿಸಿಕೊಂಡು ಪ್ರೋತ್ಸಾಹಿಸುತ್ತಿದ್ದರು.ಆರು ತಿಂಗಳ ಹಿಂದೆ ಜರ್ಮನಿಯಿಂದ ನಾನು ಗುರು­ಗಳಾದ ಕೆಎಂಎಸ್ ಅವರಿಗೆ ಫೋನು ಮಾಡಿ­ದಾಗ ಕೊನೆಯ ಸಲ ಅವರ ಜೊತೆ ಮಾತಾಡಿದೆ. ನನ್ನ ‘ಪ್ರಜಾವಾಣಿ’ ಅಂಕಣ ಕುರಿತು ‘ತಪ್ಪದೆ ಓದುತ್ತಿದ್ದೇನೆ, ತುಂಬಾ ಚೆನ್ನಾಗಿ ಬರೆಯು­ತ್ತಿದ್ದೀರಾ’ ಎಂದು ಮೆಚ್ಚುಗೆಯ ಮಾತಾ­ಡಿದ್ದರು. ಬೆಂಗಳೂರಿಗೆ ಬಂದಾಗ ಬನ್ನಿ ಎಂದು ಕರೆ ನೀಡಿದರು.ಆದರೆ ಮತ್ತೆ ಅವರ ಭೆಟ್ಟಿಯಾಗುವುದರಲ್ಲಿ ಮರಣ ಅಡ್ಡ ಬಂತು.ಅವರ ವಿದ್ವತ್ತು ಮತ್ತು ಪ್ರತಿಭೆಗಳಿಗೆ ಸಲಾಮು. ಆದರೆ ಒಂದು ಪ್ರಶ್ನೆ ನನ್ನನ್ನು ಗಾಢ­ವಾಗಿ ಕಾಡಹತ್ತಿದೆ. ಆಧುನಿಕರಲ್ಲಿ ನನಗೆ ಪ್ರಿಯ­ರಾದ ಕುವೆಂಪು, ಪು.ತಿ.ನ., ಅಡಿಗ, ನರಸಿಂಹ­ಸ್ವಾಮಿ, ಲಂಕೇಶ್, ಕಂಬಾರರ ಕವಿತೆಗಳು ನನ್ನನ್ನು ಕಾಡಿದ ಹಾಗೆ ಜಿಎಸ್ಎಸ್ ಕಾವ್ಯ ಯಾಕೆ ನನ್ನನ್ನು ಕಾಡುತ್ತಿಲ್ಲ. ಬಹುಶಃ ಹೀಗಿರ­ಬಹುದು. ಅತಿಗಳನ್ನು ಅನುಮಾನಿಸಿದ ಅವರ ಕಾವ್ಯ ಮಧ್ಯಮಮಾರ್ಗವನ್ನು ಹಿಡಿಯಿತು.ಈ ಮಧ್ಯಮ ಮಾರ್ಗ ಅವರ ಕಾವ್ಯದ ಮಧ್ಯ­ಮ­ವರ್ಗೀಯತೆಯೂ ಹೌದು. ಅವರ ಕಾವ್ಯದ ಹಿತ­ವಾದ ತಂಗಾಳಿಯಲ್ಲಿ ನಾವು ಸುಖಪಡ­ಬ­ಹುದು. ಇದು ಯಥಾಸ್ಥಿತಿವಾದದ ಇನ್ನೊಂದು ಮುಖವೇ. ಪುತಿನ ಅವರ ಕಣಿವೆಯ ಮುದುಕ­ನಾಗಲಿ, ಅಡಿಗರ ವರ್ಧಮಾನವಾಗಲಿ, ಲಂಕೇಶರ ಅವ್ವನಾಗಲಿ, ಕೆಎಸ್‌ನ ಅವರ ತೆರೆದ ಬಾಗಿಲಿನ ವಿಹ್ವಲ ವಯೋವೃದ್ಧನಾಗಲಿ- ಈ ಎಲ್ಲರೂ ಮಧ್ಯಮ­ವರ್ಗೀಯ ಮಿತಿಗಳಾಚೆಗಿನ ಮಾನವ ಸಾಧ್ಯತೆಗಳು. ಕೊಲುವ, ಕೊಂದು ಬದುಕಿಸುವ ಜೀವನೋತ್ತರ ದನಿಗಳು. ತನ್ನೆಲ್ಲ ವಿಪುಲತೆ ಮತ್ತು ರಚನಾಕೌಶಲಗಳ ನಡುವೆಯೂ ಜಿಎಸ್ಎಸ್ ಅವರ ಕಾವ್ಯ ಇಂಥಾ ಸಾಧ್ಯತೆ­ಗಳಿಂದ ವಂಚಿತವಾಗಿದೆಯೆಂಬ ಆತಂಕ ನನ್ನದು.ಗೋಳೀಕರಣದ ಪಿಪಾಸೆಯಿಂದ ಜೀವ­ದಾಯಕ ನದಿ, ನೆಲ, ಕಾಡುಗಳನ್ನು ಕಳೆದು­ಕೊಂಡು ಬದುಕು- ಸಾವುಗಳೆರಡರಿಂದಲೂ ಗಡಿ­ಪಾರಾದ ನಮ್ಮ ಸೋದರಸೋದರಿಯರ ಆಕ್ರಂದನ­ಗಳಿಗೆ ನಾವು ಮಿಡಿಯದಂತೆ ಮಾಡು­ತ್ತಿ­ರುವುದು ಮಧ್ಯಮವರ್ಗದ ಬೆಚ್ಚಗಿನ ಮನೆಗಳೇ ಅಲ್ಲವೆ?ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.