ಗುರುವಾರ , ಜೂನ್ 17, 2021
22 °C

ದಡ್ಡನ ಬುದ್ಧಿವಂತಿಕೆ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಕಿಟ್ಟಣ್ಣ ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ. ಆದರೆ ಸದಾಕಾಲ ತಿರುಗುತ್ತಲೇ ಇರುತ್ತಿದ್ದ. ಅವನಿಗೆ ವಯಸ್ಸು ಇಪ್ಪತ್ತಾದರೂ ಯಾವ ಜವಾಬ್ದಾರಿಯೂ ಇಲ್ಲ. ಈತನ  ತಂದೆ-ತಾಯಿಯರು ಇವನಿಂದ ಯಾವ ಅಪೇಕ್ಷೆಯನ್ನು ಇಟ್ಟುಕೊಳ್ಳದೆ ಬಿಟ್ಟುಬಿಟ್ಟಿದ್ದರು. ಅವನು ಕೆಲವರ್ಷ ಶಾಲೆಗೆ ಹೋದದ್ದು ಕೇವಲ ಮಧ್ಯಾಹ್ನದ ಊಟಕ್ಕೆ. ಅವನಿಗೆ ಕಲಿಸಿ, ಕಲಿಸಿ ಶಿಕ್ಷಕರು ತಮ್ಮ ವಿಷಯಗಳನ್ನೇ ಮರೆತುಬಿಟ್ಟರು.  ಎಲ್ಲಿಯವರೆಗೆ ಗುರುಗಳೇ ಇವನನ್ನು ಫೇಲ್ ಮಾಡದೆ ಮುಂದಿನ ತರಗತಿಗಳಿಗೆ ತಳ್ಳಿದರೋ ಅಲ್ಲಿಯವರೆಗೆ ಆತ ಶಾಲೆಗೆ ಹೋದ.  ಇವನನ್ನು ಪಾಸು ಮಾಡುವ ಶಕ್ತಿ ಯಾವ ಪರೀಕ್ಷೆಗೂ ಇರಲಿಲ್ಲ, ಅವನಿಗೆ ಫೇಲ್ ಆದದ್ದಕ್ಕೆ ದುಃಖವೂ ಇರಲಿಲ್ಲ. ಬೀದಿಗಳಲ್ಲಿ ತಿರುಗುತ್ತ ಯಾರು ಕರೆದಲ್ಲಿಗೆ ಹೋಗಿ, ಕೊಟ್ಟಿದ್ದನ್ನೇ ಗೊಣಗದೇ ಪಟ್ಟಾಗಿ ತಿಂದು ಜಾಗ ಸಿಕ್ಕಲ್ಲಿಯೇ ಮಲಗಿ ತುಂಬ ಸುಖಿಯಾಗಿ ಬದುಕಿದ್ದ ಕಿಟ್ಟಣ್ಣ.ಆದರೆ ಅದೇಕೋ ಊರ ಜನ ಅವನನ್ನು ‘ದಡ್ಡ, ಮೂರ್ಖ’ ಎಂದು ಕರೆಯು­ತ್ತಿದ್ದರು. ಇವನ ವಯಸ್ಸಿನವನೇ ಆದ ಲಕ್ಷ್ಮಿಕಾಂತ ಬಹಳ ಬುದ್ಧಿವಂತನೆಂದು ಜನ ತಿಳಿದಿದ್ದರು. ಸಣ್ಣ ವಯಸ್ಸಿಗೇ ಒಂದು ಅಂಗಡಿಯನ್ನು ಹಾಕಿ ಚೆನ್ನಾಗಿ ವ್ಯಾಪಾರ ಮಾಡುತ್ತ ತುಂಬ ಶ್ರೀಮಂತನಾಗಿದ್ದ.  ಅವನಿಗೆ ಕಿಟ್ಟಣ್ಣನನ್ನು ಕಂಡರೆ ತುಂಬ ತಾತ್ಸಾರ. ಒಂದು ದಿನ ಅಂಗಡಿಯಲ್ಲಿ ಲಕ್ಷ್ಮಿಕಾಂತ ವ್ಯಾಪಾರ ಮಾಡುತ್ತ  ಕುಳಿತಾಗ ಅಲ್ಲಿಗೆ ಒಬ್ಬ ಹಿರಿಯರು ಬಂದರು.  ಅವರು ಲಕ್ಷ್ಮೀಕಾಂತನ ತಂದೆಯ ಸ್ನೇಹಿತರು. ಅವನನ್ನು ಆದರದಿಂದ ಬರಮಾಡಿಕೊಂಡು ಸತ್ಕರಿಸಿದ ಲಕ್ಷ್ಮೀಕಾಂತ. ಇಬ್ಬರೂ ಮಾತನಾಡುತ್ತ ಕುಳಿತಾಗ ಕಟ್ಟೆಯ ಮೇಲೆ ಮಲಗಿದ್ದ ಕಿಟ್ಟಣ್ಣನನ್ನು ನೋಡಿ ಹಿರಿಯರು, ‘ಏಕಪ್ಪ, ಈ ಹುಡುಗನಿಗೆ ಮೈ ಸರಿಯಿಲ್ಲವೇ? ಹೀಗೆ ಹೊದ್ದುಕೊಳ್ಳದೆ ಕಟ್ಟೆಯ ಮೇಲೆ ಮಲಗಿದ್ದಾನಲ್ಲ?’ ಎಂದು ಕೇಳಿದರು.ಅದಕ್ಕೆ ಲಕ್ಷ್ಮೀಕಾಂತ ಜೋರಾಗಿ ನಕ್ಕು ಹೇಳಿದ, ‘ಸರ್, ಈತನಿಗೆ ಏನೂ ಆಗಿಲ್ಲ. ಅವನು ಇರುವುದೇ ಹೀಗೆ. ಪ್ರಪಂಚದಲ್ಲಿಯ ಎಲ್ಲ ಮೂರ್ಖರಿಗೆ, ದಡ್ಡರಿಗೆ ಗುರು ಈತ.  ಇವನಂಥ ಧಡ್ಡನನ್ನು ಕಾಣುವುದೇ ಸಾಧ್ಯವಿಲ್ಲ’. ಅವರು ನಂಬಲಾಗದೇ, ‘ಹೌದೇ?’ ಎಂದರು. ಆಗ ಲಕ್ಷ್ಮೀಕಾಂತ, ‘ಇವನೆಷ್ಟು ದಡ್ಡ ಎಂಬುದನ್ನು ತೋರಿಸು­ತ್ತೇನೆ, ಇರಿ’ ಎಂದು ‘ಕಿಟ್ಟಣ್ಣ, ಬಾ ಇಲ್ಲಿ’ ಎಂದು ಕರೆದ.  ನಂತರ  ತನ್ನ  ಎಡಗೈಯಲ್ಲಿ  ಐವತ್ತು  ರೂಪಾಯಿಯ  ನೋಟು, ಬಲಗೈಯಲ್ಲಿ ಒಂದು ರೂಪಾಯಿಯ ಐದು ನಾಣ್ಯಗಳನ್ನು ಹಿಡಿದುಕೊಂಡ. ಹತ್ತಿರ ಬಂದ ಕಿಟ್ಟಣ್ಣನಿಗೆ ‘ಎ ದಡ್ಡಾ ಇವೆರಡರಲ್ಲಿ ಯಾವುದು ದೊಡ್ಡದೋ ಅದನ್ನು ಆರಿಸಿಕೋ’ ಎಂದು ಕೈ ಚಾಚಿದ. ಕಿಟ್ಟಣ್ಣ ಎರಡೂ ಕೈಗಳನ್ನು ಎರಡೆರಡು ಬಾರಿ ನೋಡಿ ಬಲಗೈ­ಯಲ್ಲಿದ್ದ ಐದು ನಾಣ್ಯಗಳನ್ನು ಕಸಿದುಕೊಂಡು ಓಡಿದ. ಲಕ್ಷ್ಮೀಕಾಂತ ಗಹಗಹಿಸಿ ನಕ್ಕು, ‘ಹೇಳಲಿಲ್ಲವೇ? ಈ ಮೂರ್ಖನಿಗೆ ಐದು ರೂಪಾಯಿಗಿಂತ ಐವತ್ತು ರೂಪಾಯಿ ದೊಡ್ಡದು ಎನ್ನುವುದೂ ಗೊತ್ತಿಲ್ಲ’ ಎಂದ. ಹಿರಿಯರೂ ಕಿಟ್ಟಣ್ಣನ ಮೂರ್ಖತನಕ್ಕೆ ಮರುಗಿದರು.ಅವರು ಮರಳಿ ಊರಿಗೆ ಹೊರಟಾಗ ಬಸ್ ನಿಲ್ದಾಣದ ಬಳಿ ಕಿಟ್ಟಣ್ಣ ಕಂಡ.  ಇವರು, ‘ಅಲ್ಲಪ್ಪ, ನಿನಗೆ ಐವತ್ತು ರೂಪಾಯಿ ದೊಡ್ಡದು ಎಂದು ತಿಳಿಯಲಿ­ಲ್ಲವೇ? ಏಕೆ ಐದು ರೂಪಾಯಿ ತೆಗೆದುಕೊಂಡೆ?’ ಎಂದು ಕೇಳಿದರು. ಕಿಟ್ಟಣ್ಣ, ‘ಅದು ನನಗೆ ಗೊತ್ತಿಲ್ಲವೇ? ನಾನು ದಡ್ಡ ಎಂದುಕೊಂಡು, ತನ್ನ ಬುದ್ಧಿವಂತಿಕೆ­ಯನ್ನು ತೋರಲು ಲಕ್ಷ್ಮೀಕಾಂತ ಪ್ರತಿದಿನ ಹೀಗೆ ಮಾಡುತ್ತಾನೆ. ಒಮ್ಮೆ ನಾನು ಐವತ್ತು ರೂಪಾಯಿ ತೆಗೆದುಕೊಂಡರೆ ಮರುದಿನದಿಂದ ನಿತ್ಯ ನನಗೆಲ್ಲಿ ಐದು ರೂಪಾಯಿ ಸಿಗುತ್ತದೆ? ಆಟ ನಿಂತೆ ಹೋಗುತ್ತದೆ’ ಎಂದು ಓಡಿದ.  ಹಿರಿಯರು ಬಾಯಿ ಮುಚ್ಚಲಿಲ್ಲ! ಬೇರೆಯವರು ದಡ್ಡರು, ಅವರಿಗೇನೂ ತಿಳಿಯುವುದಿಲ್ಲ ಎನ್ನುವುದು ಸರಿಯಲ್ಲ. ಅವರ ದಡ್ಡತನವನ್ನು ಎತ್ತಿ ತೋರಿಸುವ ಉಮೇದಿಯಲ್ಲಿ ನಮ್ಮ ಮೂರ್ಖತನವನ್ನು ಪ್ರದರ್ಶಿಸುತ್ತೇವೆ. ನಮ್ಮ ನಮ್ಮ ಬುದ್ಧಿವಂತಿಕೆ ನಮಗೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.