ಸೋಮವಾರ, ಮೇ 16, 2022
28 °C

ಧಾರ್ಮಿಕ ಗಿಳಿಗಳು

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಚಕ್ರವರ್ತಿ ಕೃಷ್ಣದೇವರಾಯನಿಗೆ ಅನೇಕ ಆಸಕ್ತಿಗಳಿದ್ದವು. ಅದರಲ್ಲಿ ಗಿಳಿಗಳನ್ನು ಸಾಕುವುದೂ ಒಂದು. ಆತ ದೇಶ ವಿದೇಶಗಳಿಂದ ಆಕರ್ಷಕವಾದ ಗಿಳಿಗಳನ್ನು ತರಿಸಿ ಇಟ್ಟು ಸಾಕುತ್ತಿದ್ದನಂತೆ. ಅದರಲ್ಲೂ ಒಂದು ಜೊತೆ ಗಿಳಿಗಳು ಪರ್ಶಿಯಾದಿಂದ ಬಂದವುಗಳು ಅವನ ಹೃದಯವನ್ನೇ ಅಪಹರಿಸಿದ್ದವು. ಗಿಳಿಗಳನ್ನು ಉಸ್ತುವಾರಿ ಮಾಡುತ್ತಿದ್ದ ವ್ಯಕ್ತಿ ಆ ಗಿಳಿಗಳಿಗೆ ಮಾತನಾಡುವುದನ್ನು ಕಲಿಸಿದ್ದ. ಅವು ಬಹಳ ಮುದ್ದಾಗಿ  ರಾಮರಾಮ, ರಾಮರಾಮ  ಎನ್ನುತ್ತಿದ್ದವು.ಆ ಗಿಳಿಗಳು ಯಾವಾಗಲೂ ಗಂಭೀರವಾಗಿ, ಕಣ್ಣುಮುಚ್ಚಿಕೊಂಡು ರಾಮನಾಮ  ಹೇಳುವುದು ಮಹಾರಾಜನಿಗೆ ತುಂಬ ಇಷ್ಟವಾಗಿತ್ತು. ದಿನಾಲು ಒಂದೆರಡು ಗಂಟೆ ಅವುಗಳ ಮುಂದೆಯೇ ಕುಳಿತು ರಾಮನಾಮ ಕೇಳುವುದು ಅಭ್ಯಾಸವಾಯಿತು. ಬಹುಶಃ ಈ ಗಿಳಿಗಳು ಹಿಂದಿನ ಜನ್ಮದಲ್ಲಿ ಮಹಾನ್ ಸಂತರಾಗಿದ್ದಿರಬೇಕು, ಆ ಪೂರ್ವಜನ್ಮದ ವಾಸನೆಯಿಂದಲೇ, ಅವು ಈ ಜನ್ಮದಲ್ಲಿ ಅತ್ಯಂತ ಧಾರ್ಮಿಕ ಗಿಳಿಗಳಾಗಿ ಹುಟ್ಟಿವೆ ಎಂದು ನಂಬಿದ್ದ.ಅಂತೆಯೇ ಆತ ತನ್ನ ಆಸ್ಥಾನದಲ್ಲಿ ಎಲ್ಲರಿಗೂ ಗಿಳಿಗಳ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತ, `ಅಷ್ಟು ಧಾರ್ಮಿಕ ಜೀವಿಗಳನ್ನು ತಾನು ಇದುವರೆಗೂ ಕಂಡಿಲ್ಲ' ಎಂದ. ಇದು ಯಾಕೋ ತೆನ್ನಾಲಿ ರಾಮನಿಗೆ ಸರಿ ಬರಲಿಲ್ಲ. ಅವನೂ ಹೋಗಿ ಗಿಳಿಗಳನ್ನು ನೋಡಿಬಂದ. ಅವು ರಾಮರಾಮ ಎನ್ನುವುದನ್ನು ಬಿಟ್ಟರೆ ಯಾವ ಧಾರ್ಮಿಕತೆಯೂ ಕಾಣಲಿಲ್ಲ. ಅವನ ಸ್ವಭಾವದಂತೆ ಅದೇ ಮಾತನ್ನು ರಾಜನಿಗೆ ಹೇಳಿದ. ರಾಜನಿಗೆ ತನ್ನ ಗಿಳಿಗಳನ್ನು ಅವಹೇಳನ ಮಾಡುವ ರಾಮನ ಬಗ್ಗೆ ಸಿಟ್ಟು ಬಂತು.ರಾಮ ಹೇಳಿದ, `ಮಹಾಸ್ವಾಮಿ ಸಿಟ್ಟು ಮಾಡಿಕೊಳ್ಳಬೇಡಿ. ಗಿಳಿಗಳಿಗೆ ಬುದ್ಧಿ ಇಲ್ಲ. ಅವು ಹೇಳಿದ್ದನ್ನೇ ಬಡಬಡಿಸುತ್ತವೆ. ಅವುಗಳನ್ನು ನೋಡಿಕೊಳ್ಳುವವನು ರಾಮನಾಮದ ಬದಲಾಗಿ  ರಾವಣ, ರಾವಣ  ಎಂದು ಕಲಿಸಿದ್ದರೆ ಅವು ಹಾಗೆಯೇ ಹೇಳುತ್ತಿದ್ದವು. ಅವುಗಳಿಗೆ ಸ್ವಂತ ಜ್ಞಾನ ಎನ್ನುವುದು ಇಲ್ಲ' ಎಂದ. ಹಾಗಾದರೆ ಅವುಗಳಿಗೆ ಧಾರ್ಮಿಕ ಮನೋಭಾವ ಇಲ್ಲ, ಸ್ವಂತ ಚಿಂತನೆ ಇಲ್ಲ ಎನ್ನುವುದನ್ನು ತೋರಿಸಿಕೊಟ್ಟರೆ ಸಾವಿರ ಹೊನ್ನು ಕೊಡುವುದಾಗಿ ಮಹಾರಾಜ ಸವಾಲು ಒಡ್ಡಿದ. ತೆನ್ನಾಲಿ ರಾಮ ಒಪ್ಪಿಕೊಂಡ.ಮರುದಿನ ಮಹಾರಾಜನನ್ನು ಭೆಟ್ಟಿಯಾಗುವ ಅವಧಿಗಿಂತ ಅರ್ಧತಾಸು ಮೊದಲೇ ತೆನ್ನಾಲಿರಾಮ ಗಿಳಿಯನ್ನು ಇರಿಸಿದ ಕೊಠಡಿಗೆ ಹೋದ. ತನ್ನೊಂದಿಗೆ ಒಂದು ಪಂಜರ ತೆಗೆದುಕೊಂಡು ಹೋಗಿದ್ದ. ಅದರಲ್ಲಿ ಭಯ ಹುಟ್ಟಿಸುವಂತಹ ಎರಡು ಭಾರಿ  ಕರಿ  ಬೆಕ್ಕುಗಳಿದ್ದವು. ಪಂಜರದ ಮೇಲೆ ಒಂದು ಬಟ್ಟೆ ಮುಚ್ಚಿದ್ದ. ಪಂಜರವನ್ನು ಗಿಳಿಗಳ ಪಂಜರದ ಮುಂದಿಟ್ಟು ಬಟ್ಟೆ ಸರಿಸಿಬಿಟ್ಟ. ಆ ಬೆಕ್ಕುಗಳು ಗುರುಗುಟ್ಟಿದಾಗ ಅವನ್ನು ಕಂಡ ಗಿಳಿಗಳು ಹೆದರಿ ಹಾರಾಡತೊಡಗಿದವು. ಬೆಕ್ಕುಗಳ ಪಂಜರವನ್ನು ಇನ್ನಷ್ಟು ಮುಂದೆ ಸರಿಸಿದ ರಾಮ. ಗಿಳಿಗಳು ಹೌಹಾರಿ ಹೋದವು. ಪಾಪ! ಪಂಜರವನ್ನು ಬಿಟ್ಟು ಎಲ್ಲಿ ಹಾರಿ ಹೋದಾವು? ನಂತರ ರಾಮ ಬೆಕ್ಕಿನ ಪಂಜರಕ್ಕೆ ಬಟ್ಟೆ ಹೊದಿಸಿ ಸುಮ್ಮನೆ ಕುಳಿತುಬಿಟ್ಟ. ಗಿಳಿಗಳು ಈ ಪಂಜರವನ್ನೇ ಗಾಬರಿಯಿಂದ ನೋಡುತ್ತಿದ್ದವು. ಸ್ವಲ್ಪ ಹೊತ್ತಿಗೇ ಮಹಾರಾಜ ಬಂದ.  `ನೋಡಿದೆಯಾ ನನ್ನ ಧಾರ್ಮಿಕ ಗಿಳಿಗಳನ್ನು'  ಎಂದು ಕೇಳಿದ. ಆಗ ರಾಮ, `ಅದೇನು ಧಾರ್ಮಿಕತೆಯೋ ಮಹಾಸ್ವಾಮಿ, ಅರ್ಧಗಂಟೆಯಿಂದ ಅವುಗಳ ಮುಂದೆಯೇ ಕುಳಿತಿದ್ದೇನೆ, ಒಂದು ಬಾರಿಯೂ ರಾಮರಾಮ ಎನ್ನಲಿಲ್ಲ'  ಎಂದ. ಮಹಾರಾಜ ಹೇಳಿದರೂ ಗಿಳಿಗಳು ಬಾಯಿ ಬಿಡಲಿಲ್ಲ, ಬರೀ ರೆಕ್ಕೆ ಬಡಿದು ಹಾರಾಡಿದವು. ಅವುಗಳ ತರಬೇತುದಾರ ಬಂದ. ಏನೇನು ಪ್ರಯತ್ನ ಮಾಡಿದರೂ ಅವು ಪಂಜರದ ತುಂಬೆಲ್ಲ ಹಾರಾಡಿದವೇ ವಿನಾ ರಾಮನಾಮ ಹೇಳಲಿಲ್ಲ. ಆಗ ರಾಮ ಬೆಕ್ಕಿನ ಪಂಜರವನ್ನು ಹೊರಗೆ ಕಳುಹಿಸಿ, ಬಾಗಿಲು ಹಾಕಿದ ಅರ್ಧಗಂಟೆಯ ಮೇಲೆ ಗಿಳಿಗಳು ಮತ್ತೆ ಶಾಂತವಾಗಿ ರಾಮನಾಮ ಪ್ರಾರಂಭಿಸಿದವು.ರಾಮ ಹೇಳಿದ,  `ಮಹಾಪ್ರಭೂ ಈ ಗಿಳಿಗಳು ಧಾರ್ಮಿಕವಲ್ಲ, ಕಲಿತದ್ದನ್ನೇ ಬಡಬಡಿಸುತ್ತವೆ. ಎದುರಿಗೆ ಬೆಕ್ಕು ಬಂದಾಗ ಪ್ರಾಣಭಯದಿಂದ ಹೆದರಿ ಹಾರಾಡಿದವೇ ವಿನಾ  ರಾಮರಾಮ  ಎನ್ನಲಿಲ್ಲ. ನಮ್ಮ ಮನುಷ್ಯರಲ್ಲೂ ಧಾರ್ಮಿಕ ಜನ ಹಾಗೆಯೇ. ಎಲ್ಲವೂ ಶಾಂತವಿದ್ದಾಗ, ಸುಖವಿದ್ದಾಗ ರಾಮನಾಮ. ಆದರೆ ಕಷ್ಟದಲ್ಲಿದ್ದಾಗ ರಾಮನಾಮ ಮರೆತುಹೋಗುತ್ತದೆ' ಎಂದ. ರಾಜ ಒಪ್ಪಿದ. ನಮ್ಮಲ್ಲೂ ಅಂಥ ಗಿಳಿಗಳು ಎಲ್ಲೆಲ್ಲೂ ಕಾಣಬರುತ್ತವೆ.ವೇದಿಕೆಯ ಮೇಲೆ, ಉಪನ್ಯಾಸ ನೀಡುವಾಗ. ದೈವ, ದೇವರು, ಆತ್ಮ, ಪರಮಾತ್ಮದ ಮಾತುಗಳು ಸಾಲುಸಾಲಾಗಿ ಬರುತ್ತವೆ. ಪಂಜರದ ಧಾರ್ಮಿಕ ಗಿಳಿಗಳ ಮಾತಿನಂತೆ. ಆದರೆ, ಜೀವನದಲ್ಲಿ ಪರೀಕ್ಷಾ ಕಾಲ ಬಂದಾಗ ಅವೆಲ್ಲ ಮರೆತುಹೋಗಿಬಿಡುತ್ತವೆ. ಅದಕ್ಕೇ ಡಿ.ವಿ.ಜಿಯ ಕಗ್ಗ ಹೇಳುತ್ತದೆ.ಸರ್ವರುಂ ಸಾಧುಗಳೆ, ಸರ್ವರುಂ ಬೋಧಕರೆ

ಜೀವನಪರೀಕ್ಷೆ ಬಂದಿದಿರು ನಿಲುವನಕ,

ಭಾವಮರ್ಮಂಗಳೇಳುವಾಗ ತಳದಿಂದ

ದೇವರೇ ಗತಿಯಾಗ  ಮಂಕುತಿಮ್ಮ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.