ಗುರುವಾರ , ಮೇ 28, 2020
27 °C

ಬದಲಾವಣೆಗೆ ಒಗ್ಗದ ಎಡಪಕ್ಷಗಳು

ಶೇಖರ್‌ ಗುಪ್ತ Updated:

ಅಕ್ಷರ ಗಾತ್ರ : | |

ಬದಲಾವಣೆಗೆ ಒಗ್ಗದ ಎಡಪಕ್ಷಗಳು

ದೇಶದ ಎಡಪಕ್ಷಗಳ ಜತೆಗಿನ ನನ್ನ ಮೊದಲ ಅನುಭವವು, ಕ್ರಿಕೆಟ್‌ನಲ್ಲಿ ಮೊದಲ ಎಸೆತಕ್ಕೆ ಬ್ಯಾಟ್ಸಮನ್‌ ಔಟಾದಂತೆ ಇತ್ತು. 1975ರಲ್ಲಿ ನಾನು ಪತ್ರಿಕೋದ್ಯಮದ ವಿದ್ಯಾರ್ಥಿಯಾಗಿದ್ದೆ. ನನ್ನ ಸಹಪಾಠಿಗಳಲ್ಲಿ ಒಬ್ಬ, ಶಾಂತಿಯುತವಾಗಿಯೇ ನಕ್ಸಲ್‌ ವಾದ ಪ್ರತಿಪಾದಿಸುತ್ತಿದ್ದ ಏಕೈಕ ಕಾಮ್ರೇಡ್ ಜತೆ ಬಾಜಿಯೊಂದನ್ನು ಕಟ್ಟಿದ್ದೆ.

‘ಕಮ್ಯುನಿಸ್ಟ್‌ ಮುಖಂಡ ಇ.ಎಂ.ಎಸ್‌. ನಂಬೂದಿರಿಪಾಡ್‌ ಅವರು ಬದುಕಿರುವರೇ ಅಥವಾ ಮೃತಪಟ್ಟಿರುವರೆ’ ಎನ್ನುವ ಬಾಜಿಯಲ್ಲಿ ನಾನು ₹10ನ್ನು ಕಳೆದುಕೊಂಡಿದ್ದೆ. ಆ ದಿನಗಳಲ್ಲಿ 10 ರೂಪಾಯಿಗೆ ತುಂಬ ಬೆಲೆ ಇತ್ತು. ಹಾಸ್ಟೆಲ್‌ ಬಾಡಿಗೆ, ಊಟ ಮತ್ತು ಕಾಲೇಜ್‌ ಶುಲ್ಕ ಭರಿಸಲು ಪ್ರತಿ ತಿಂಗಳೂ ₹ 200 ಮನಿ ಆರ್ಡರ್‌ ಬರುವುದನ್ನೇ ನಾವು ಕಾತರದಿಂದ ಎದುರು ನೋಡುತ್ತಿದ್ದೆವು.

ಪತ್ರಿಕೋದ್ಯಮದ ನನ್ನ ಮೊದಲ ವಿಶೇಷ ವರದಿಯೂ ಕೇರಳಕ್ಕೆ ಸಂಬಂಧಿಸಿತ್ತು. ಎಡಪಕ್ಷಗಳು ಹಮ್ಮಿಕೊಂಡಿದ್ದ ಶಿಕ್ಷಣ ಅಭಿಯಾನದ ವರದಿ ಅದಾಗಿತ್ತು . ಕೇರಳದ ಅಂದಿನ ಮುಖ್ಯಮಂತ್ರಿಯಾಗಿದ್ದ ನಂಬೂದಿರಿಪಾಡ್‌ ಅವರನ್ನು ಮುಖತಃ ಭೇಟಿಯಾಗುವ ಅವಕಾಶವೂ ಒದಗಿ ಬಂದಿತ್ತು. ಹಿಂದೊಮ್ಮೆ ಬಾಜಿಯಲ್ಲಿ ನಾನು ಸೋತಿದ್ದನ್ನು ಅವರ ಗಮನಕ್ಕೆ ತಂದಿದ್ದೆ. ಆಗ ಅವರು ತಮ್ಮ ಕೈಯನ್ನು ನನ್ನ ಮುಂದೆ ಚಾಚಿ ‘ನೀವೇಕೆ ನನ್ನ ನಾಡಿಮಿಡಿತವನ್ನು ಪರೀಕ್ಷಿಸಬಾರದು’ ಎಂದು ಪ್ರಶ್ನಿಸಿದ್ದರು. ಆನಂತರ ನಿರ್ಲಿಪ್ತ ಭಾವದಿಂದ, ‘ನಿಮ್ಮ ಅಭಿಪ್ರಾಯ ಸರಿ ಇದ್ದಿರಬಹುದು. ಆ ಹಣವನ್ನು ನೀವಿಗ ಮರಳಿ ಪಡೆಯಬಹುದಲ್ಲ’ ಎಂದು ಹೇಳಿದಾಗ ಇಬ್ಬರೂ ಮನಸ್ಸು ಬಿಚ್ಚಿ ದೊಡ್ಡದಾಗಿ ನಕ್ಕಿದ್ದೆವು.

ನಾನೊಬ್ಬ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿದ್ದರೂ, ಎಡಪಕ್ಷಗಳ ಬಗ್ಗೆ ನನ್ನಲ್ಲಿ ಅಜ್ಞಾನ ಮನೆ ಮಾಡಿತ್ತು. ಇದಕ್ಕೆ ಪಂಜಾಬ್‌ ಮತ್ತು ಹರಿಯಾಣ ರಾಜ್ಯಗಳ ಸಣ್ಣ ಪಟ್ಟಣಗಳಲ್ಲಿ ನನ್ನ ಶಾಲಾ ಮತ್ತು ಕಾಲೇಜ್‌ ವಿದ್ಯಾಭ್ಯಾಸ ನಡೆದಿರುವುದೂ ಕಾರಣ ಇರಬಹುದು. ಆ ದಿನಗಳಲ್ಲಿ ಸಣ್ಣಪುಟ್ಟ ನಗರಗಳಲ್ಲಿ ರಾಜಕೀಯ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿರಲಿಲ್ಲ. ಅಲ್ಲಿ ಯಾವುದೇ ಕಾರ್ಮಿಕ ಸಂಘಟನೆಗಳೂ ಕಾರ್ಯನಿರ್ವಹಿಸುತ್ತಿರಲಿಲ್ಲ.

ಪತ್ರಿಕೋದ್ಯಮ ಕಲಿಯುವ ಸಂದರ್ಭದಲ್ಲಿ ನಾನು ದೇಶಿ ರಾಜಕೀಯದಲ್ಲಿನ ಎಡಪಕ್ಷಗಳ ಪಾತ್ರದ ಬಗ್ಗೆ ಕೆಲ ಸಂಗತಿಗಳನ್ನು ತಿಳಿದುಕೊಳ್ಳಬೇಕಾಗಿತ್ತು. ದಿನಗಳೆದಂತೆ ನಾನು ಎಡಪಕ್ಷಗಳ ಅದರಲ್ಲೂ ವಿಶೇಷವಾಗಿ ಅವುಗಳ ಆರ್ಥಿಕ ಸಿದ್ಧಾಂತ ಮತ್ತು ಸಾಮಾಜಿಕ – ರಾಜಕೀಯ ಬೂಟಾಟಿಕೆಯ ಕಟು ಟೀಕಾಕಾರನಾಗಿ ಬದಲಾಗಿದ್ದೆ.

ದಬ್ಬಾಳಿಕೆಯ ಶಕ್ತಿಯಿಂದ ಪ್ರಭಾವಿತಗೊಂಡಿರುವ ಎಡಪಕ್ಷಗಳು, ಪ್ರಜಾಪ್ರಭುತ್ವ ಮತ್ತು ಎಡಪಂಥೀಯ ಸಿದ್ಧಾಂತದ ಮಧ್ಯೆ ಹೇಗೆ ಕೊಂಡಿ ಬೆಸೆಯಲಿವೆ ಎನ್ನುವುದು ನನ್ನ ಪ್ರಶ್ನೆಯಾಗಿತ್ತು. ವಿದೇಶಗಳಲ್ಲಿ ಶಿಕ್ಷಣ ಪಡೆದ ಅಥವಾ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತ ಮೇಲ್ಜಾತಿಯವರ ನಿಯಂತ್ರಣದಲ್ಲಿ ಇದ್ದ ನಾಯಕತ್ವವು, ಸಮಾನತೆ ಮತ್ತು ಸಮಾಜದಲ್ಲಿನ ದುರ್ಬಲ ವರ್ಗಗಳ ಬಗ್ಗೆ ನಿರಂತರವಾಗಿ ಮಾತನಾಡುವುದು ನನ್ನಲ್ಲಿ ಹಲವು ಅನುಮಾನಗಳನ್ನು ಮೂಡಿಸುತ್ತಿತ್ತು.

ಎಡಪಕ್ಷಗಳ ಜತೆಗೆ ಮುಖಾಮುಖಿಯಾಗುವ ಅವಕಾಶವು ಇತ್ತೀಚಿನ ದಶಕಗಳಲ್ಲಿಯೇ ನನಗೆ ಯಾವತ್ತೂ ಎದುರಾಗಿಲ್ಲ. ಎಡಪಂಥೀಯ ಮುಖಂಡರ ಬೌದ್ಧಿಕ ಮತ್ತು ತತ್ವಜ್ಞಾನದ ದುರಹಂಕಾರದ ಬಗ್ಗೆ ನನ್ನಲ್ಲಿ ಅಸಮಾಧಾನ ಇದೆ. ಎಡಪಂಥೀಯರಲ್ಲಿ ಬಂಡವಾಳಶಾಹಿಯ ದಾಸ್ಯಮನೋಭಾವ ಪ್ರಬಲವಾಗಿ ಇರುತ್ತದೆ ಎನ್ನುವುದು ನನ್ನ ನಿಲುವಾಗಿದೆ. ಅವರ ಇಂತಹ ನಿಲುವಿನಿಂದಾಗಿಯೇ ಕಾಲಾನುಕ್ರಮದಲ್ಲಿ ಬೂರ್ಜ್ವಾ (ಮಧ್ಯಮ ವರ್ಗದವರು) ಶಬ್ದ ಬಳಕೆಗೆ ಬಂದಿದ್ದು, ಅಂತಿಮವಾಗಿ ಅವರೆಲ್ಲ ಹೊಸ ಉದಾರವಾದಿಗಳು ಎಂದು ಕರೆಯಿಸಿಕೊಳ್ಳುತ್ತಿದ್ದಾರೆ.

1989 ರಿಂದ 1993ರ ಅವಧಿಯಲ್ಲಿ ಪಂಜಾಬ್‌ ರಾಜ್ಯವು ಉಗ್ರರ ರಕ್ತಸಿಕ್ತ ಇತಿಹಾಸಕ್ಕೆ ಸಾಕ್ಷಿಯಾಗಿತ್ತು. ಗಡಿ ಜಿಲ್ಲೆಗಳಲ್ಲಿನ ಹಳ್ಳಿಗಳಲ್ಲಿ ಉಗ್ರರ ವಿರುದ್ಧ ಸೆಣಸಿ, ಬಲಿದಾನ ಕೊಟ್ಟವರಲ್ಲಿ ಕಠಿಣ ಪರಿಶ್ರಮದ ಕಾರ್ಯಕರ್ತರ ದೊಡ್ಡ ಪಡೆಯನ್ನೇ ಹೊಂದಿದ್ದ ಉದಾರವಾದಿ ಕಮ್ಯುನಿಸ್ಟರೇ ಮುಂಚೂಣಿಯಲ್ಲಿದ್ದರು ಎಂದು ಉಗ್ರಗಾಮಿಗಳೇ ಹೇಳಿಕೊಂಡಿದ್ದರು. ಉಗ್ರರ ವಿರುದ್ಧ ಹೋರಾಡಲು ಇಂತಹ ಕಾರ್ಯಕರ್ತರಿಗೆ ಪೊಲೀಸರೇ ಶಸ್ತ್ರಾಸ್ತ್ರಗಳನ್ನೂ ಒದಗಿಸಿದ್ದರು. ತನ್ನ ಕುಟುಂಬದ ಹಲವು ಸದಸ್ಯರನ್ನು ಕಳೆದುಕೊಂಡಿದ್ದ ಗ್ರಾಮವೊಂದರ ಯುವ ಮಹಿಳೆಯೊಬ್ಬಳು ಮನೆಯ ಚಾವಣಿ ಮೇಲೆ ಲೈಟ್‌ ಮಷಿನ್‌ ಗನ್‌ (ಎಲ್‌ಎಂಜಿ) ಬಳಸುತ್ತ ಮನೆಗೆ ರಕ್ಷಣೆ ಒದಗಿಸಿದ್ಧ ಘಟನೆಗೆ ನಾವೇ ಸಾಕ್ಷಿಯಾಗಿದ್ದೆವು.

ಪಂಜಾಬ್‌ ರಾಜ್ಯದಲ್ಲಿನ ಇಂತಹ ಬೆಳವಣಿಗೆಯೊಂದನ್ನು ಹೊರತುಪಡಿಸಿದರೆ ಎಡಪಕ್ಷಗಳ ಬಗ್ಗೆ ಉತ್ಸಾಹ ಮೂಡಿಸುವ ಬೇರೆ ಯಾವುದೇ ನಿದರ್ಶನವು ಸಿಗಲಾರದು.

2004ರಲ್ಲಿ ನಡೆದ ಚುನಾವಣೆಯಲ್ಲಿ ವಾಜಪೇಯಿ ಸರ್ಕಾರ ಅನಿರೀಕ್ಷಿತವಾಗಿ ಸೋಲು ಕಂಡಾಗ ಸಿಪಿಐನ ಎ.ಬಿ. ಬರ್ಧನ್‌ ಅವರು ಆಡಿದ, ‘ಷೇರು ವಿಕ್ರಯ ನೀತಿ ನರಕಕ್ಕೆ ಹೋಗಲಿ’ (ಭಾಡ್‌ ಮೇ ಜಾಯ್‌ ಡಿಸ್‌ಇನ್ವೆಸ್ಟ್‌ಮೆಂಟ್‌) ಎನ್ನುವ ಲೋಕಾಭಿರಾಮದ ಮಾತು ಕೇಳಿ ನಾನು ಸಿಡಿಮಿಡಿಗೊಂಡಿದ್ದೆ. ಅಮೆರಿಕದ ಜತೆಗಿನ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿದಂತೆ ನಡೆದ ಅವಿಶ್ವಾಸ ನಿರ್ಣಯ ಮೇಲಿನ ಚರ್ಚೆಯಲ್ಲಿ ಡಾ. ಮನಮೋಹನ್‌ ಸಿಂಗ್‌ ಸರ್ಕಾರ ಗೆಲುವು ಸಾಧಿಸಿದಾಗ ನಾನು ಖುಷಿಗೊಂಡಿದ್ದೆ. ಕೋಮುವಾದ, ಜಾತೀಯತೆಯ ಪಕ್ಷಗಳೆಂದು ಸ್ವತಃ ತಾವೇ ಜರಿಯುತ್ತಿದ್ದ ಬಿಜೆಪಿ ಮತ್ತು ಮಾಯಾವತಿ ಜತೆ ಎಡಪಕ್ಷಗಳು ಕೈಜೋಡಿಸಿದ್ದರ ಹೊರತಾಗಿಯೂ ಕಾಂಗ್ರೆಸ್‌ ಸರ್ಕಾರದ ಅಸ್ತಿತ್ವಕ್ಕೆ ಯಾವುದೇ ಧಕ್ಕೆ ಒದಗಿರಲಿಲ್ಲ.

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರು ಎಡಪಕ್ಷಗಳನ್ನು ದೂಳಿಪಟ ಮಾಡಿದಾಗಲೂ ನನಗೆ ಸಂತಸವಾಗಿತ್ತು. ದೇಶಿ ರಾಜಕಾರಣದಲ್ಲಿನ ಎಡಪಕ್ಷಗಳ ಕಥೆ ಮುಗಿಯಿತು ಎನ್ನುವುದು ಆಗ ಸಾಬೀತಾಗಿತ್ತು. ಪೂರ್ವ ಮಧ್ಯ ಭಾರತದಲ್ಲಿನ ಉಗ್ರಗಾಮಿ ನಿಲುವಿನ ಎಡಪಂಥೀಯರಿಗೂ ಮುಂದೆ ಇದೇ ಗತಿ ಕಾದಿದೆ ಎನ್ನುವ ಭಾವನೆ ಮೂಡಿಸಿತ್ತು.

ಲೆನಿನ್‌ ಪ್ರತಿಮೆ ಧ್ವಂಸ ಮಾಡಿದ್ದನ್ನು ನಾನೂ ಪ್ರತಿಭಟಿಸುವೆ ಎಂದು ನೀವು ನಿರೀಕ್ಷಿಸಿದ್ದರೆ ಅದು ತಪ್ಪು. ನಾನು ಖಂಡಿತವಾಗಿಯೂ ಹಾಗೆ ಮಾಡಲಾರೆ. ಬೇರೆಯೇ ಆದ ಮತ್ತು ಸ್ಪಷ್ಟ ಕಾರಣಗಳಿಗಾಗಿ ಮಾತ್ರ ನಾನು ಇಂತಹ ಕೃತ್ಯಗಳನ್ನು ಖಂಡಿಸುವೆ. ಭಾರತದಲ್ಲಿನ ಪ್ರತಿಯೊಬ್ಬರಿಗೂ ಅವರ ದೇವರನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಇದೆ. ಆದರೆ, ಇನ್ನೊಬ್ಬರು ಆರಾಧಿಸುವವರನ್ನು ಅಪವಿತ್ರ ಗೊಳಿಸುವ ಹಕ್ಕು ಯಾರೊಬ್ಬರಿಗೂ ಇಲ್ಲ ಎನ್ನುವುದನ್ನು ನಾನಿಲ್ಲಿ ಸ್ಪಷ್ಟಪಡಿಸಲು ಬಯಸುತ್ತೇನೆ.

ಎಂಬತ್ತನೇ ದಶಕದ ಕೊನೆಯ ಭಾಗದಲ್ಲಿ, ಜಾಗತಿಕವಾಗಿ ಕಮ್ಯುನಿಸ್ಟ್‌ ಚಿಂತನೆ ಬದಲಾವಣೆಗೊಳ್ಳಲು ಆರಂಭಿಸಿತು. ಸೋವಿಯತ್‌ ಒಕ್ಕೂಟವು ವಿಭಜನೆ ಹಾದಿಯಲ್ಲಿ ಸಾಗಿತ್ತು. ಅದು ಅಫ್ಗಾನಿಸ್ತಾನದಲ್ಲಿನ ಯುದ್ಧದಲ್ಲಿ ಸೋಲು ಕಂಡಿತ್ತು. ಗೊರ್ಬಚೇವ್‌ ಅವರು ಪುನರ್‌ರಚನೆ ಮತ್ತು ಹೆಚ್ಚು ಮುಕ್ತವಾದ ಧೋರಣೆ ಜಾರಿಗೆ ತರಲು ಮುಂದಾಗಿದ್ದರು. ಡೆಂಗ್‌ ಅವರೂ ಚೀನಾವನ್ನು ಮುಕ್ತ ದೇಶವನ್ನಾಗಿ ಪರಿವರ್ತಿಸಲು ಹೊರಟಿದ್ದರು. ‘ಇಲಿ ಹಿಡಿಯುವ ಸಾಮರ್ಥ್ಯ ಇರುವವರೆಗೆ ಬೆಕ್ಕು ಬಿಳಿ ಬಣ್ಣದ್ದಾದರೇನು, ಕಪ್ಪು ಬಣ್ಣದ್ದಾದರೇನು, ಯಾವುದೇ ವ್ಯತ್ಯಾಸ ಆಗಲಾರದು’ ಎಂದು ಅವರು ತಮ್ಮ ದೇಶಬಾಂಧವರಿಗೆ ಹೇಳಲು ಆರಂಭಿಸಿದ್ದರು.

ಈ ಹಿಂದೆ, ಸಿಪಿಎಂನ ರಾಜ್ಯ ಕಾರ್ಯದರ್ಶಿಯಾಗಿದ್ದ ಸರೋಜ್‌ ಮುಖರ್ಜಿ ಅವರನ್ನು ಭೇಟಿಯಾಗುವ ಅವಕಾಶ ನನಗೊಮ್ಮೆ ಒದಗಿ ಬಂದಿತ್ತು. ತಮ್ಮ ಪಕ್ಷದ ಪ್ರಧಾನ ಕಚೇರಿಯಲ್ಲಿ, ಲೆನಿನ್‌, ಸ್ಟಾಲಿನ್‌ ಮತ್ತು ಕಾರ್ಲ್‌ ಮಾರ್ಕ್ಸ್‌ನ ಆಳೆತ್ತರದ ಚಿತ್ರಪಟಗಳ ಕೆಳಗೆ ಅವರು ಕುಳಿತಿದ್ದರು. ‘ಗೊರ್ಬಚೇವ್‌ ಮತ್ತು ಡೆಂಗ್‌ ಬದಲಾಗುತ್ತಿದ್ದಾರೆ. ನೀವೇಕೆ ಬದಲಾಗುತ್ತಿಲ್ಲ’ ಎಂದು ನಾನವರನ್ನು ಪ್ರಶ್ನಿಸಿದ್ದೆ. ‘ನನ್ನ ಸಮತಾವಾದವು ಡೆಂಗ್‌ ಮತ್ತು ಗೊರ್ಬಚೇವ್‌ ಅವರಿಗಿಂತ ಹೆಚ್ಚು ಶುದ್ಧವಾದದ್ದು ’ ಎಂದು ಅವರು ಗಾಢ ನಂಬಿಕೆಯಿಂದಲೇ ಉತ್ತರಿಸಿದ್ದರು.

ಇದಾದ ಎರಡು ವರ್ಷಗಳ ನಂತರ ನಾನು ಮಾಸ್ಕೊಗೆ ಭೇಟಿ ನೀಡಿದ್ದೆ. ಸೋವಿಯತ್‌ ಒಕ್ಕೂಟದ ಗಣರಾಜ್ಯಗಳು ಸ್ವತಂತ್ರ ದೇಶಗಳಾಗಿ ವಿಭಜನೆಗೊಳ್ಳುತ್ತಿರುವಾಗ ಒಕ್ಕೂಟವು ಈ ಎಲ್ಲ ಸಿಕ್ಕುಗಳನ್ನು ಬಿಡಿಸಿಕೊಳ್ಳುವ ಪರಿಯನ್ನು ನಾನು ಹತ್ತಿರದಿಂದ ಗಮನಿಸುತ್ತಿದ್ದೆ. ರೊಮೇನಿಯಾದ ರಾಜಧಾನಿ ಬುಕಾರೆಸ್ಟ್‌ನ ಬೀದಿಗಳಲ್ಲಿ ಸೇನಾ ಟ್ಯಾಂಕ್‌ಗಳು ಗಸ್ತು ತಿರುಗುತ್ತಿದ್ದವು. ಕಮ್ಯುನಿಸ್ಟ್ ಮುಖಂಡ ನಿಕೊಲಾಯ್‌ ಚೌಸೆಸ್ಕೊ ಅವರ ಹತ್ಯೆ ಖಂಡಿಸಿ ಸಾವಿರಾರು ಜನರು ಬೀದಿಗಿಳಿದು ಪ್ರತಿಭಟಿಸುತ್ತಿದ್ದರೂ, ಅವರ ಮೇಲೆ ಸೇನೆ ಗುಂಡು ಹಾರಿಸಲು ಹಿಂದೇಟು ಹಾಕಿತ್ತು.

ಈ ಘಟನೆ ನಡೆಯುವ ಕೆಲವೇ ವಾರಗಳ ಹಿಂದೆ ಭಾರತದ ಎಡಪಕ್ಷಗಳ ನಿಯೋಗವು ರೋಮೇನಿಯಾದ ಕಮ್ಯುನಿಸ್ಟ್‌ ಪಕ್ಷದ ರಾಷ್ಟ್ರೀಯ ಕಾಂಗ್ರೆಸ್‌ ಸಮ್ಮೇಳನದಲ್ಲಿ ಭಾಗವಹಿಸಿ ಸ್ವದೇಶಕ್ಕೆ ಮರಳಿತ್ತು. ತಂಡದಲ್ಲಿದ್ದ ಕೆಲವರು ಪತ್ರಿಕೆಯಲ್ಲಿ ಲೇಖನ ಬರೆದು, ‘ಚೌಸೆಸ್ಕೊ ಅವರು ದಬ್ಬಾಳಿಕೆಯ ಆಡಳಿತ ನಡೆಸುತ್ತಿದ್ದು, ಅವರ ಸರ್ಕಾರ ಪತನದ ಹಾದಿಯಲ್ಲಿ ಇದೆ ಎನ್ನುವುದು ಪಾಶ್ಚಿಮಾತ್ಯ ದೇಶಗಳ

ಅಪಪ್ರಚಾರ ಆಗಿದೆ’ ಎಂದು ಹೇಳಿಕೊಂಡಿದ್ದರು.

‘ಚೌಸೆಸ್ಕೊ ತಮ್ಮ ಭಾಷಣ ಮುಗಿಸುತ್ತಿದ್ದಂತೆ ಕಿವಿಗಡಚಿಕ್ಕುವ ಚಪ್ಪಾಳೆ ಸದ್ದು ದೀರ್ಘ ಸಮಯದವರೆಗೆ ಕೇಳಿಬಂದಿತು’ ಎಂದೂ ಅವರು ತಮ್ಮ ವಾದಕ್ಕೆ ಸಮರ್ಥನೆ ನೀಡಿದ್ದರು. ಶ್ಲಾಘನೆಯ ಕರತಾಡನ ಮೊದಲು ನಿಲ್ಲಿಸುವ ವ್ಯಕ್ತಿಗೆ ಯಾವ ಶಿಕ್ಷೆ ಕಾದಿದೆ ಎನ್ನುವುದನ್ನು ಪ್ರಶ್ನಿಸುವ ಧೈರ್ಯ ಸಭಿಕರಲ್ಲಿ ಯಾರೊಬ್ಬರಿಗೂ ಇದ್ದಿರಲಾರದು.

ಈ ಘಟನೆ ನಡೆದ ಎಂಟು ತಿಂಗಳ ನಂತರ ನಾನು ಮತ್ತೆ ಮಾಸ್ಕೊಗೆ ಮರಳಿದ್ದೆ. ಕಮ್ಯುನಿಸ್ಟರ ಆದರ್ಶವಾದಿಗಳು ಮತ್ತು ಪ್ರಮುಖರ ಪ್ರತಿಮೆಗಳನ್ನು ಕ್ರೇನ್‌ಗಳ ಮೂಲಕ ನಿರ್ಮೂಲನೆ ಮಾಡುತ್ತಿರುವುದಕ್ಕೆ ಸಾಕ್ಷಿಯಾಗಿದ್ದೆ. ದ್ವಿತೀಯ ಮಹಾಯುದ್ಧದ ಕೆಲ ಖ್ಯಾತನಾಮರು ಮಾತ್ರ ಈ ಘಟನೆಗಳಿಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದರು.

ಸಿದ್ಧಾಂತವೊಂದು ತನ್ನ ಮಹತ್ವ ಕಳೆದುಕೊಂಡಾಗ ಅದರಿಂದ ಬಿಡುಗಡೆ ಹೊಂದುವುದರಲ್ಲಿಯೇ ಒಳಿತು ಅಡಗಿದೆ. ಪ್ರತಿಮೆಗಳ ಮೂಲಕವೇ ತಮ್ಮ ಕ್ರೂರ ಸರ್ವಾಧಿಕಾರತ್ವದ ಸಾಮ್ರಾಜ್ಯ ಕಟ್ಟಿ ಬೆಳೆಸಿದ್ದ ಪ್ರಜಾಪೀಡಕರ ಪ್ರತಿಮೆಗಳೂ ನಾಶಗೊಳ್ಳಬೇಕು ಎಂದು ಬಯಸುವುದು ಅಪೇಕ್ಷಣೀಯ.

ಪಶ್ಚಿಮ ಬಂಗಾಳವನ್ನು 34 ವರ್ಷಗಳ ಕಾಲ ಆಳಿದ ಎಡಪಕ್ಷಗಳು ರಾಜ್ಯದ ಅರ್ಥ ವ್ಯವಸ್ಥೆಯನ್ನು ಹಾಳು ಮಾಡಿದ್ದವು. ಸರ್ಕಾರವು ಪ್ರಜಾಪ್ರಭುತ್ವ ಮತ್ತು ಉದಾರವಾದ ಧೋರಣೆ ಅನುಸರಿಸುತ್ತಿರುವುದಾಗಿ ತೋರ್ಪಡಿಸಿಕೊಂಡಿದ್ದರೂ ಸಮಾಜ ಘಾತುಕರು ಮತ್ತು ಸುಲಿಗೆಕೋರರ ದೊಡ್ಡ ಪಡೆಯನ್ನೇ ಸೃಷ್ಟಿಸಿತ್ತು. ಈ ಪಡೆಯು ಪ್ರತಿಪಕ್ಷಗಳು ದನಿಎತ್ತದಂತೆ ಮಾಡಿತ್ತು.

ಕೇರಳವು ಸಮತಾವಾದದ ಮನೋಧರ್ಮ ಹೊಂದಿದ್ದರೂ, ಐದು ವರ್ಷಗಳಿಗೊಮ್ಮೆ ಎಡಪಕ್ಷಗಳ ಮತ್ತು ಕಾಂಗ್ರೆಸ್‌ನ ಸರ್ಕಾರಗಳನ್ನು ಬದಲಿಸುವ ಮೂಲಕ ಒಂದು ಬಗೆಯಲ್ಲಿ ಸಮತೋಲನ ಕಾಯ್ದುಕೊಂಡಿದೆ. ಉಳಿದಂತೆ ಪಂಜಾಬ್‌ನಿಂದ ಮಹಾರಾಷ್ಟ್ರ, ‌‌‌ಬಿಹಾರ ಹಾಗೂ ಅಸ್ಸಾಂವರೆಗೆ ದೇಶದ ಇತರ ರಾಜ್ಯಗಳಲ್ಲಿ ಎಡಪಕ್ಷಗಳ ಅಸ್ತಿತ್ವವೇ ಕಂಡು ಬರುವುದಿಲ್ಲ. 2004ರ ಸಾರ್ವತ್ರಿಕ ಚುನಾವಣೆಯಲ್ಲಿ ಮಾತ್ರ ಎಡಪಕ್ಷಗಳು 59 ಸೀಟುಗಳನ್ನು ಗೆಲ್ಲುವ ಮೂಲಕ ರಾಷ್ಟ್ರೀಯ ಶಕ್ತಿಯಾಗಿ ಬೆಳೆದಿದ್ದವು.

ಅಲ್ಲಿಂದಾಚೆಗೆ ಕಮ್ಯುನಿಸ್ಟರ ಪತನ ಆರಂಭಗೊಂಡಿತು. ರಾಷ್ಟ್ರೀಯ ರಾಜಕೀಯ ಶಕ್ತಿಯಾಗಿ ಅವರ ಬಲ ಕುಂದುತ್ತ ಸಾಗಿತ್ತು. ಆದರೆ, ಒಂದು ಕ್ಷೇತ್ರದಲ್ಲಿ ಮಾತ್ರ ಅವರು ಸಂಪೂರ್ಣ ಮತ್ತು ಶಾಶ್ವತ ಗೆಲುವು ದಾಖಲಿಸಿದ್ದಾರೆ. ದೇಶದ ಆರ್ಥಿಕ ಚಿಂತನೆ ಮತ್ತು ರಾಜಕೀಯ ಆರ್ಥಿಕತೆ ಮೇಲೆ ಅವರು ತಮ್ಮದೇ ಆದ ವಿಶಿಷ್ಟ ಮುದ್ರೆ ಒತ್ತಿದ್ದಾರೆ. ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಸಮತಾವಾದದ ಆರ್ಥಿಕತೆ ಮತ್ತು ಬಡತನ ನಿರ್ಮೂಲನೆಯ ರಾಜಕೀಯವೇ ಅಸ್ತಿತ್ವ ಉಳಿಸಿಕೊಳ್ಳಲು ಇರುವ ಏಕೈಕ ಮಾರ್ಗೋಪಾಯವಾಗಿದೆ ಎನ್ನುವುದನ್ನು ಬಿಜೆಪಿ ಮತ್ತು ಕಾಂಗ್ರೆಸ್ ಒಳಗೊಂಡಂತೆ ಎಲ್ಲ ರಾಜಕೀಯ ಪಕ್ಷಗಳು ಒಪ್ಪಿಕೊಳ್ಳುತ್ತವೆ.

ಎಡಪಕ್ಷಗಳು ಅವನತಿಯ ಹಾದಿಯಲ್ಲಿವೆ. ಎಡಪಂಥೀಯ ವಿಚಾರಧಾರೆಯ ಪ್ರಾತಿನಿಧಿಕ ಪ್ರತಿಮೆಗಳನ್ನು ಒಡೆದು ಹಾಕಲಾಗುತ್ತಿದೆ. ಆದರೆ ಎಡಪಂಥೀಯ ನಿಯಮಗಳನ್ನು ಮಾತ್ರ ಅಲ್ಲಗಳೆಯುವಂತಿಲ್ಲ.

ಭಾರತದಲ್ಲಿ ಸಮತಾವಾದವು ಈಗಲೂ ಜನಪ್ರಿಯವಾಗಿರುವುದಕ್ಕೆ ಕಾರಣಗಳೇನು. ಕೆಲ ರಾಜ್ಯಗಳಲ್ಲಿ ಕಮ್ಯುನಿಸ್ಟರು ಪದೇ ಪದೇ ಅಧಿಕಾರಕ್ಕೆ ಬರುವುದು ಏಕೆ ಎಂದು ಕೆಲವರು ಪ್ರಶ್ನಿಸುತ್ತಾರೆ. ಕೆಲ ದೇಶಗಳಲ್ಲಿನ ಕಮ್ಯುನಿಸ್ಟರು ಜನರ ರಾಜಕೀಯ ಮತ್ತು ಆರ್ಥಿಕ ಸ್ವಾತಂತ್ರ್ಯ ದಮನ ಮಾಡಿದ್ದಾರೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿನ ಸಮತಾವಾದವು ಭಿನ್ನವಾಗಿದೆ. ಭಾರತದಲ್ಲಿನ ಎಡಪಕ್ಷಗಳು ಜನರ ರಾಜಕೀಯ ಸ್ವಾತಂತ್ರ್ಯವನ್ನು ಕಾಯ್ದುಕೊಂಡು ಬರುತ್ತಿವೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜನರ ರಾಜಕೀಯ ಅಧಿಕಾರವನ್ನು ಕಸಿದುಕೊಳ್ಳಲಾಗಿತ್ತು. ಜನರು ಹೋರಾಟ ಮಾಡಿ ಅದನ್ನು ಮರಳಿ ಪಡೆದುಕೊಂಡಿದ್ದಾರೆ. ಆದರೆ, ಅಲ್ಲಿಂದಾಚೆಗೆ ದೇಶದಲ್ಲಿ ಆರ್ಥಿಕ ಸ್ವಾತಂತ್ರ್ಯದ ಪರೀಕ್ಷೆ ನಡೆದಿಲ್ಲ. ನಾವು ಎಂತಹ ಸಮಾಜವಾದ ಕಳೆದುಕೊಂಡಿದ್ದೇವೆ ಎನ್ನುವುದು ನಮಗಿನ್ನೂ ಅನುಭವಕ್ಕೆ ಬಂದಿಲ್ಲ.

ನಿಜ, ನಾವು ಈಗ ನಕಲಿ ಸಮಾಜವಾದದ ರಾಜಕೀಯ ಆರ್ಥಿಕ ಧೋರಣೆ ಅಳವಡಿಸಿಕೊಂಡಿದ್ದೇವೆ. ಅದೊಂದೇ ಈಗ ನಮಗಿರುವ ನಿಜವಾದ ರಾಷ್ಟ್ರೀಯ ಸಿದ್ಧಾಂತವಾಗಿದೆ. ಎಡಪಕ್ಷಗಳ ಸುಭದ್ರ ಕೋಟೆ ಧ್ವಂಸ ಮಾಡಿದ್ದಕ್ಕೆ ಪಕ್ಷವೊಂದು ವಿಜಯೋತ್ಸವದ ಉನ್ಮಾದದಲ್ಲಿ ಇದ್ದರೆ, ಅದರ ಕಾರ್ಯಕರ್ತರು ಲೆನಿನ್‌ ಪ್ರತಿಮೆ ಧ್ವಂಸಗೊಳಿಸುವಲ್ಲಿ ಮಗ್ನರಾಗಿದ್ದಾರೆ. ಅವರೆಲ್ಲ ದ್ವೇಷಿಸುವ ನಿರಂಕುಶ ಪ್ರಭುತ್ವವೇ ಈಗಲೂ ಅಂತಿಮ ನಗೆ ಬೀರುತ್ತಿದೆ ಎನ್ನುವುದು ಅವರ ಗಮನಕ್ಕೆ ಬಂದಿಲ್ಲ. 1924ರಲ್ಲಿಯೇ ಲೆನಿನ್‌ ಮೃತಪಟ್ಟಿದ್ದರು. ಅವರದ್ದೇ ದೇಶವು ಅವರ ಸಿದ್ಧಾಂತಕ್ಕೆ 1990ರಲ್ಲಷ್ಟೇ ತಿಲಾಂಜಲಿ ನೀಡಿತು. ಆದರೆ, ಭಾರತದಲ್ಲಿ ಅದಿನ್ನೂ ಪ್ರಶ್ನಾತೀತವಾಗಿಯೇ ಉಳಿದಿದೆ.

(ಲೇಖಕ ‘ದಿ ಪ್ರಿಂಟ್‌’ನ ಸಂಸ್ಥಾಪಕ ಹಾಗೂ ಪ್ರಧಾನ ಸಂಪಾದಕ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.