ಗುರುವಾರ , ಮಾರ್ಚ್ 4, 2021
17 °C

ಬೀದರ್‌ನಿಂದ ಬೆಂಗಳೂರುವರೆಗೆ ಹೊಳೆ

ಜಿಎಮ್ಮಾರ್ Updated:

ಅಕ್ಷರ ಗಾತ್ರ : | |

ಬೀದರ್‌ನಿಂದ ಬೆಂಗಳೂರುವರೆಗೆ ಹೊಳೆ

`ಬೀದರ್, ಗುಲ್ಬರ್ಗಾಗಳಲ್ಲಿ ನದಿಗಳು ಉಕ್ಕಿ ಹರಿಯುತ್ತಾ ಇದೇ ಸಾರ್, ಇದರಿಂದಾಗಿ ಜನಜೀವನ ಅಸ್ತವ್ಯಸ್ತವಾಗುವಂತೆ ಕಾಣುತ್ತಿದೆ' ಎಂದು ಪೆಕರ ವರದಿ ಮಾಡಿದಾಗ ಸಂಪಾದಕರು ಬೆಚ್ಚಿಬಿದ್ದರು.`ನಿಮಗೇನಾದ್ರೂ ಬುದ್ಧಿ ಇದೆಯೇನ್ರಿ? ಕರಾವಳಿ, ಮಲೆನಾಡು ಪ್ರದೇಶದಲ್ಲಿ ಆರಿದ್ರಾ ಮಳೆ ಅಬ್ಬರಿಸಿ ಸುರಿಯುತ್ತದೆ, ಅಲ್ಲೆಲ್ಲಾ ಪ್ರಾಬ್ಲಮ್ ಆಗಿ ಜನ ಒದ್ದಾಡ್ತಾ ಇದಾರೆ. ಆದ್ರೆ ಬಿಸಿಲು ಸುರಿಯುತ್ತಿರುವ ಗುಲ್ಬರ್ಗಾ, ಬೀದರ್‌ನಲ್ಲಿ ನದಿಗಳು ಉಕ್ಕಿ ಹರಿಯುತ್ತಿದೆ ಅಂದ್ರೆ ಏನರ್ಥ? ಜೋಕ್ ಮಾಡ್ತಾ ಇದೀರಾ? ಅಲ್ಲೆಲ್ಲಿ ಮಳೆ ಬಂದಿದೆ?' ಎಂದು ಸಂಪಾದಕರು ಡೌಟ್ ವ್ಯಕ್ತಪಡಿಸಿದರು. “ಆದ್ರೆ ರಸ್ತೇಲ್ಲೆಲ್ಲಾ ನೀರು ಹರೀತಿದೆ ಸಾರ್‌” ಎಂದು ಪೆಕರ ಖಚಿತ ದನಿಯಾದರೂ, ತೊದಲುತ್ತಲೇ ಉತ್ತರಿಸಿದ.“ನೀವು ಕಣ್ಣಾರೆ ನೋಡಿದ್ರಾ? ಹಂಡ್ರೆಡ್ ಪರ್ಸೆಂಟ್ ಗ್ಯಾರಂಟೀನಾ?” ಎಂದು ಸಂಪಾದಕರು ಮತ್ತೆ ಮತ್ತೆ ಒತ್ತಿ ಒತ್ತಿ ಕೇಳಿದಾಗ, `ಹೌದು ಸಾರ್, ನಾನ್ ನೋಡ್ದೆ' ಎಂದೇ ಪೆಕರ ಹಟ ಹಿಡಿದ.`ಹಾಗಾದ್ರೆ ಚೆಕ್ ಮಾಡಿ, ಅದೇನು ಕಂಡು ಹಿಡಿದು ವರದಿ ಮಾಡಿ' ಎಂದು ಸಂಪಾದಕರು ಆಣತಿಯಿತ್ತರು.

ಇಷ್ಟು ಆದೇಶ ಸಿಕ್ಕಿದ್ದೇ ತಡ, ಪೆಕರ ಕಾರ್ಯ ಪ್ರವೃತ್ತನಾದ, ನದೀ ಮೂಲ, ಹೆಣ್ಣಿನ ಮೂಲ ಇನ್ಯಾವುದ್ಯಾವುದೋ ಮೂಲಗಳನ್ನು ಹುಡುಕಬಾರದು ಎಂದು ಹೇಳುತ್ತಾರೆ. ಆದರೆ ನಮ್ಮ ಪೆಕರ ರಸ್ತೆಯಲ್ಲಿ ಕೋಡಿ ಹರಿಯುತ್ತಿದ್ದ ನೀರಿನ ಮೂಲವನ್ನೇ ಹುಡುಕುತ್ತಾ ಹೊರಟ.ಪೆಕರನ ಕೆಲಸ ಸುಲಭವೇ ಆಯಿತು. ಅಲ್ಲೊಂದು ಬಹಿರಂಗ ಅಭಿನಂದನಾ ಸಭೆ ನಡೆಯುತ್ತಿತ್ತು. ಮಾಜಿ ಮುಖ್ಯಮಂತ್ರಿ (ಮಾ.ಮು.) ಕರಮ್‌ಜೀ ಅವರು ಒಂದೇ ಸಮನೆ ಕಣ್ಣೀರಧಾರೆ ಹರಿಸುತ್ತಿದ್ದರು. ಅದನ್ನು ಕಂಡು ಅವರ ಪುತ್ರ ನೂತನ ಶಾಸಕರಾಗಿದ್ದವರು ಕೂಡ ಕಣ್ಣೀರಧಾರೆ ಹರಿಸಲಾರಂಭಿಸಿದರು. ನೀರು ಕೋಡಿಯಾಗಿ ರಸ್ತೆಗಳಲ್ಲಿ ಹರಿಯಲಾರಂಭಿಸಿತ್ತು.

ಮಾ.ಮು. ಏಕೆ ಅತ್ತರು ಎಂಬುದನ್ನು ತಿಳಿದುಕೊಂಡು ಅವರನ್ನು ಸಂದರ್ಶಿಸಲು, ಪೆಕರ ಕಾದು ನಿಂತ.`ಸಾರ್ ಮಾ.ಮು.ಗಳಾಗಿ ತಾವು ಜನರ ಮುಂದೆ ಏಕೆ ಅಳ್ತಾ ಇದ್ರಿ?'

`ಒಂಬತ್ತು ಸಲ ಶಾಸಕನಾಗಿದ್ದೆ. ಮುಖ್ಯಮಂತ್ರಿಯೂ ಆದೆ. ಆದರೆ ಈ ಕ್ಷೇತ್ರದ ಜನರ ಸೇವೆ ಮಾಡಲಾಗಲಿಲ್ಲ. ಜನರಿಗೆ ಯಾವ ಸೌಕರ್ಯಗಳನ್ನೂ ಮಾಡಿಕೊಡಲಾಗಲಿಲ್ಲವಲ್ಲ ಅಂತ ಅಳು ಬಂತು'

`ಮೊದಲನೆಯ ಸಲ ಆಯ್ಕೆಯಾದ ಶಾಸಕರು, ಆಸ್ತೀನಾ ಡಬಲ್ ಮಾಡ್ಕೊಂಡಿದಾರೆ. ಸ್ವಿಸ್ ಬ್ಯಾಂಕಿನಲ್ಲೆಲ್ಲಾ ದುಡ್ಡಿಟ್ಟಿದ್ದಾರೆ, ನೀವು ಒಂಬತ್ತು ಸಲ ಆಯ್ಕೆಯಾಗಿದ್ರೂ.....'`ನಾನು ಒಂಬತ್ತು ಸಲಾನೂ ಮಿನಿಸ್ಟ್ರಾಗಿ ಕೆಲಸ ಮಾಡಿದ್ದೇನೆ. ಇಡೀ ರಾಜ್ಯಕ್ಕೆ ಅನುಕೂಲ ಮಾಡಿದ್ದೀನಿ. ನನ್ನ ಕ್ಷೇತ್ರಕ್ಕೆ ಏನೂ ಮಾಡಲಾಗಲಿಲ್ಲ. ಈಗ ನನ್ನ ಮಗನನ್ನ ಜನ ಆಯ್ಕೆ ಮಾಡಿದ್ದಾರೆ. ಕೇಂದ್ರ-ರಾಜ್ಯ ಸೇರಿ ಕೆಲಸ ಮಾಡಿದಂತಾಗುತ್ತದೆ. ಲೋಕಸಭೆ ಎಲೆಕ್ಷನ್ ಬರ‌್ತಾ ಇದೆ. ನಮ್ ಜೋಡಿ ಹೀಗೇ ಮುಂದುವರೆದ್ರೆ ಬಹಳ ಕೆಲ್ಸ ಆಗುತ್ತೆ'

`ಆದರೂ ನೀವು ಮತ್ತು ಗರ್ಗೇಜಿ ಇಬ್ಬರೂ ನಲವತ್ತು ವರ್ಷದಿಂದ ಒಂದೇ ಕ್ಷೇತ್ರವನ್ನು ಹೀಗೆ ಅಪ್ಪ ಮಕ್ಕಳ ಕ್ಷೇತ್ರ ಮಾಡ್ಕಂಡು, ಬೇರೆಯವರಿಗೆ ಅವಕಾಶ ಕೊಡ್ತಿಲ್ಲ ಎಂಬ ಆಪಾದನೆ ಇದೆಯಲ್ಲಾ?' ಕೆರಳಿದರು ಕರಮ್‌ಜೀ. `ನೀವು ಮೀಡಿಯಾದವರೇ ಹೀಗೆ, ಎಲ್ಲಾದರೂ ಒಂದು ಕಡೆ ಕಡ್ಡಿ ಆಡಿಸ್ತೀರಾ. ಇದೇ ಮಾತನ್ನು ನೀವು ದೊಡ್ಡಗೌಡರಿಗೆ ಕೇಳಿ, ದೆಹಲಿ ಮೇಡಮ್‌ಗೆ ಕೇಳಿ, ದಾವಣಗೆರೆ ಶಾ.ಶಿ.ರಪ್ಪ ಅವರನ್ನು ಕೇಳಿ' ಎಂದು ರೇಗಿದರು.`ಬೇಜಾರ್ ಮಾಡ್ಕೊಬೇಡಿ ಸಾರ್, ಒಂಬತ್ತು ಸಲ ಆಯ್ಕೆಯಾಗಿ ಬಂದ್ರೂ ಕ್ಷೇತ್ರಕ್ಕೆ ಸೇವೆ ಮಾಡಲು ಆಗಲಿಲ್ಲ ಅಂದ್ರಿ. ಮುಖ್ಯಮಂತ್ರಿಯಾದ್ರೂ ಮಾಡಕ್ಕಾಗಲಿಲ್ವ?'`ನಾನ್ಯಾವ್ ಮುಖ್ಯಮಂತ್ರೀರಿ? ಆ ದೊಡ್ಡಗೌಡರು ಬುಗುರಿ ಆಡಿಸ್ದಂತೆ ಆಡಿಸಿದ್ರು. ಅವರು ಹೇಳ್ತಾ ಇದ್ರು ನಾನು ಮಾಡ್ತಾ ಇದ್ದೆ'`ಆದ್ರೂ ನೀವು ಮುಖ್ಯಮಂತ್ರಿಗಳಾಗಿದ್ದಾಗ ನಿಮಗೆ ಶಾಸ್ತ್ರ ಹೇಳೋವರಿಗೆಲ್ಲಾ, ನಿಮ್ಮ ಮನೆ ಕೆಲಸದವರಿಗೆಲ್ಲಾ ಬಿಡಿಎ ಸೈಟು, ರಾಜ್ಯೋತ್ಸವ ಪ್ರಶಸ್ತಿ ಧಾರಾಳವಾಗಿ ಕೊಟ್ರಿ ಅಂತ ಆಪಾದನೆ ಇದೆ ಸಾರ್'`ಮೀಡಿಯಾದವರಿಗೆ ಬೇರೆ ಕೆಲಸ ಇಲ್ಲ. ಕಡ್ಡೀನ ಗುಡ್ಡ ಮಾಡ್ತೀರ. ನಾನು ನನ್ನ ಕ್ಷೇತ್ರದ ಜನರಿಗೆ ಕೊಟ್ರೆ ತಪ್ಪೇನು. ಅಷ್ಟೂ ಕೆಲಸ ಮಾಡದಿದ್ರೆ ಹೇಗೆ? ಒಂಬತ್ತು ಸಲ ಶಾಸಕನಾಗಿ ಆಯ್ಕೆಯಾಗಿದ್ದರೂ ನಾನು ಏನೂ ಕೆಲಸ ಮಾಡಲಾಗಲಿಲ್ಲ ಅಂದ್ರೆ, ಅದ್ಕೆ ಈ ರೀತಿ ಆಪಾದನೆಗಳು ಬರ‌್ತಾವೇ ಎನ್ನುವ ಭಯವೇ ಕಾರಣ'ಸುಸ್ತಾದ ಪೆಕರ, ಗಡಿದಾಟಿ ಗುಲ್ಬರ್ಗಕ್ಕೆ ಬಂದಾಗ ಗರ್ಗೇಜಿ ಮನೆ ಮುಂದಿನ ರಸ್ತೆಯಲ್ಲಿ ನೀರು ಹರಿಯುತ್ತಿತ್ತು. ಕಾರಣ ಕಂಡು ಹಿಡಿಯಲು ಮುಂದಾದಾಗ, ಗರ್ಗೇಜಿಯವರೂ ಕಣ್ಣೀರು ಹಾಕುತ್ತಿದ್ದರು. `ಯಾಕ್ಸಾರ್?!' ಎಂದ ಪೆಕರ ಆಶ್ಚರ್ಯದಿಂದ. ನೀವು ಕೇಂದ್ರ, ನಿಮ್ಮ ಸನ್ನು ರಾಜ್ಯ, ಆದ್ರೂ ಏನಾಯ್ತು ಸಾರ್' ಎಂದ.`ಸಿಎಂ ಮಾಡಿ ಅಂದ್ರೆ ರೈಲ್‌ಕೊಟ್ರಲ್ರಿ? ನಲವತ್ತು ವರ್ಷದಿಂದ ನಾನು ಆಯ್ಕೆ ಆಗ್ತಾನೇ ಇದೀನಲ್ಲಾ ಅದಕ್ಕಾದ್ರೂ ಬೆಲೆ ಬೇಡ್ವೆ'`ಇಡೀ ದೇಶಕ್ಕೇ ರೈಲ್ ಬಿಡಬಹುದಲ್ಲಾ ಸಾರ್, ಪವರ್ ಜಾಸ್ತೀನೇ ಅಲ್ವಾ?'

`ಕ್ಷೇತ್ರಕ್ಕೆ ಏನೂ ಮಾಡಕ್ಕಾಗಲ್ಲವಲ್ಲ'

`ನಲವತ್ತು ವರ್ಷದಿಂದ ಜನರಿಗೆ ಏನ್ ಮಾಡಿದೀರಿ ಸಾರ್'

`ದೊಡ್ಡ ವಿವಿ ಮಾಡಿದೀನಿ. ನನ್ನದೇ ಅದು. ಅದಕ್ಕೆ ನೂರ‌್ಕೋಟಿ ಅನುದಾನ ತಂದಿದೀನಿ'

`ರೈಲ್ ವಿವಿ ಮಾಡಿಬಿಡಿ ಸಾರ್. ಜಾಸ್ತಿ ಅನುದಾನ ಸಿಗುತ್ತೆ'.`ಸಿ.ಎಂ. ಆಗಿದ್ರೆ ಇನ್ನೂ ಬಹಳ ಮಾಡಬಹುದಿತ್ತು'. `ಈಗಾಗ್ಲೆ ಕೊರಟಗೆರೆಯಲ್ಲಿ ಡಾ. ಜಿಪ ಅವರು ಡಿಸಿಎಂ ಮಾಡಿ ಅಂತ ಕಣ್ಣೀರಾಕ್ತಾ ಇದಾರೆ. ನೀವು ಸಿಎಂ ಮಾಡಿ ಅಂತ ಕಣ್ಣೀರುಹಾಕ್ತಾ ಇದೀರಿ. ನನ್ನನ್ನ ಸಚಿವ ಮಾಡಿ ಅಂತ ಡಿಕು ಶಿಮಾರ್ ಅವರು ಕಣ್ಣೀರಾಕ್ತಾ ಇದಾರೆ, ಹೀಗಾದ್ರೆ ಅಯ್ಯ ಅವರು ಸರ್ಕಾರ ನಡೆಸೋದಾದ್ರೂ ಹೇಗೆ ಸಾರ್' ಎಂದು ಪೆಕರ ವೇದಾಂತ ಹೇಳಿ ಮುಂದೆ ನಡೆದ.ಬೀದರ್‌ನಿಂದ ಬೆಂಗಳೂರಿಗೆ ಬಂದರೂ ಪೆಕರನ ಕಣ್ಣಿಗೆ ನೀರು ಹರಿಯುವ ದೃಶ್ಯ ಮರೆಯಾಗಲೇ ಇಲ್ಲ. ಇದೇನು ಬೆಂಗಳೂರು ಪ್ರೆಸ್‌ಕ್ಲಬ್‌ನಿಂದ ವಿಧಾನಸೌಧದವರೆಗೆ ಪ್ರಳಯವಾಯ್ತೇನೋ ಎನ್ನುವಂತೆ ನೀರು ಹರಿಯುತ್ತಿತ್ತು. ಕುಡಿಯುವ ನೀರು ಇಲ್ಲದೆ ಜನ ಒದ್ದಾಡ್ತಾ, ಬಾಟಲಿ ನೀರು ಕುಡಿಯುತ್ತಿದ್ದಾರೆ.

ಬೇರೆ ಕಡೆ ಮಳೆ ಅಬ್ಬರಿಸಿ, ಜಲಾಶಯಗಳು ತುಂಬ್ತಾ ಇದೆ. ಬೆಂಗಳೂರಿಗೆ ಮಾತ್ರ ಮಳೆ ಬರ‌್ತಾ ಇಲ್ಲ, ಆದ್ರೆ ಮಿರಾಕಲ್ ತರಹ ವಿಧಾನಸೌಧದ ಮುಂದೆ ಮಾತ್ರ ಎಲ್ಲಿಂದ ನೀರು ಹೀಗೆ ಹರೀತಿದೆ ಎಂದು ಪೆಕರ ಸಂಶೋಧನೆ ಆರಂಭಿಸಿ, ಪ್ರೆಸ್‌ಕ್ಲಬ್ ಮುಂದೆ ಬಂದು ನಿಂತ.ಅಲ್ಲ ಪ್ರತಿಪಕ್ಷದ ನಾಯಕರಾದ ಮಾರಸ್ವಾಮಿಗಳು ಒಂದೇ ಸಮನೆ ಅಳ್ತಾ ಇದ್ದರು. `ರಪ್ಪ ಅವರು ನಡೆಸಿದ ಅಕ್ರಮಗಳನ್ನು ಬಯಲಿಗೆ ತಂದರೂ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿಲ್ಲ. ಈ ವಿಷಯದಲ್ಲಿ ತೆಪ್ಪಗಿದ್ದ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ನಾವ್ ಇನ್ನೂ ಐದ್ ವರ್ಷ ಸಿಎಂ ಆಗೋಕೆ ಕಾಯಬೇಕಾ?' ಎಂದು ಒಂದೇ ಸಮನೆ ಅತ್ತರು.

ಒಂದು ಕಣ್ಣಿನ ಬದಲು ಎರಡು ಕಣ್ಣಿನಲ್ಲಿ ಅತ್ತರೆ, ನೀರು ವಿಧಾನಸೌಧದವರೆಗೆ ಹರಿಯದೇ ಇದ್ದೀತೆ ಎಂದುಕೊಂಡು ಪೆಕರ ಆಫೀಸಿನತ್ತ ಹೆಜ್ಜೆ ಹಾಕಿದ.

-ಜಿಎಮ್ಮಾರ್ .

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.