ಬುಧವಾರ, ಜೂನ್ 3, 2020
27 °C

ಬೇರೆಬೇರೆ ಭಾಷೆ-ಒಂದೇ ಅರ್ಥ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಎಷ್ಟೋ ವರ್ಷಗಳ ಹಿಂದೆ ಬಾಗ್‌ದಾದಿನಲ್ಲಿ ಒಮ್ಮೆ ಒಬ್ಬ ಬಹು ಶ್ರೀಮಂತ ವ್ಯಕ್ತಿ ಧರ್ಮಕ್ಷೇತ್ರಗಳ ದರ್ಶನಕ್ಕೆ ತನ್ನ ಸಂಸಾರದೊಂದಿಗೆ ಪ್ರವಾಸ ಮಾಡುತ್ತಿದ್ದ. ಹಾಗೆ ಹೋಗುತ್ತಿರುವಾಗ ದಾರಿಯಲ್ಲಿ ಸಿಕ್ಕ ಸಂತರಿಗೆ, ದೀನರಿಗೆ, ಬಡವರಿಗೆ ದಾನ ಮಾಡುತ್ತಿದ್ದ.ಹಾಗೊಂದು ದಿನ ಒಂದು ಪಟ್ಟಣದ ಮಧ್ಯಪ್ರದೇಶಕ್ಕೆ ಬಂದ. ಅಲ್ಲಿಂದ ಒಂಟೆ ಸವಾರಿಯಲ್ಲಿ ಮುಂದೆ ಹೋಗಬೇಕಿತ್ತು. ತನ್ನ ಸಾಮಾನುಗಳನ್ನೆಲ್ಲ ಒಂಟೆಗಳ ಮೇಲೆ ಹೇರಬೇಕಿತ್ತಲ್ಲ? ಅತ್ತಿತ್ತ ನೋಡಿದ. ಅಲ್ಲಿ ನಾಲ್ಕು ಜನ ತರುಣರು ಕುಳಿತಿದ್ದರು. ಅವರನ್ನು ಕೈ ಮಾಡಿ ಕರೆದ. ಅವರು ಹತ್ತಿರ ಬಂದಾಗ ಅವರಿಗೆ ಕೆಲಸ ಹೇಳಿದ. ಒಬ್ಬನಿಗೆ ಮಾತ್ರ ಅವನು ಹೇಳಿದ್ದು ತಿಳಿಯಿತು.ಉಳಿದವರಿಗೆ ಆ ಭಾಷೆ ಬರುವುದಿಲ್ಲ. ಆದರೂ ಕೈ ಸನ್ನೆಮಾಡಿ ತಿಳಿಸಿದ. ಅವರು ಸರಸರನೇ ಸಾಮಾನುಗಳನ್ನೆಲ್ಲ ಒಂಟೆಗಳ ಮೇಲೆ ಹೇರಿ ಸಜ್ಜು ಮಾಡಿದರು. ಆತ ಸಂತೋಷದಿಂದ ಅವರಲ್ಲೊಬ್ಬನನ್ನು ಕರೆದು ಒಂದು ಬಂಗಾರದ ನಾಣ್ಯ ಕೊಟ್ಟು, ಅದನ್ನು ನೀವೆಲ್ಲ ಹಂಚಿಕೊಳ್ಳಬೇಕು ಎಂದು ಹೇಳಿದ. ಅವರಿಗೆ ಅಪಾರ ಸಂತೋಷವಾಯಿತು. ಇಷ್ಟು ಹಣವನ್ನು ಅವರು ಅಪೇಕ್ಷಿಸಿದ್ದೇ ಇರಲಿಲ್ಲ. ಶ್ರೀಮಂತ ಹೊರಟು ಹೋದ.

 
 

ಈ ನಾಲ್ಕು ಜನರಲ್ಲಿ ಒಬ್ಬ ಪರ್ಶಿಯಾ ದೇಶದವನು. ಅವನು ಹೇಳಿದ, ‘ಈ ಹಣದಿಂದ ನಾನು ಅಂಗೂರನ್ನು ಪಡೆದು ತಿನ್ನುತ್ತೇನೆ. ನನಗೆ ಅದು ಬಲು ಇಷ್ಟ.’  ಇನ್ನೊಬ್ಬ ಮನುಷ್ಯ ಅರಬ್ಬೀ ದೇಶದವನು. ಅವನು ಹೇಳಿದ, ‘ಸಾಧ್ಯವೇ ಇಲ್ಲ. ಅಂಗೂರ ಯಾರಿಗೆ ಬೇಕು? ನನಗೆ ಬೇಕಾದದ್ದು ಇನಾಬ್. ಅದನ್ನೇ ಪಡೆದು ತಿನ್ನುತ್ತೇನೆ.’ ಮೂರನೆಯವನು ತುರ್ಕಿಸ್ಥಾನದವನು. ಅವನಿಗೆ ಕೋಪ ಏರಿತು. ‘ಏನು ನಿಮಗೆ ಬೇಕಾದನ್ನೇ ನಾನು ತಿನ್ನಬೇಕೇ? ಅದೆಲ್ಲ ಇಲ್ಲ. ನನಗೆ ಉಝಮ್ ಬೇಕು. ಅದನ್ನೇ ತೆಗೆದುಕೊಂಡು ಬರೋಣ’ ಎಂದ ಸಿಟ್ಟಿನಿಂದ.ನಾಲ್ಕನೆಯವನು ಬಿಟ್ಟಾನೆಯೇ? ಅವನು ಗ್ರೀಸ್ ದೇಶದವನು. ಅವನೂ ಏರಿದ ಧ್ವನಿಯಲ್ಲೇ ಕೂಗಿದ, ‘ಊಹೂಂ. ನೀವು ಏನನ್ನಾದರೂ ತಿನ್ನಿ. ನನಗೆ ಮಾತ್ರ ಸ್ಟಾಫಿಲ್ ಬೇಕು. ನನ್ನ ದುಡ್ಡು ಕೊಟ್ಟುಬಿಡಿ. ನನಗೆ ಬೇಕಾದ್ದನ್ನು ತೆಗೆದುಕೊಳ್ಳುತ್ತೇನೆ.’ ನಾಲ್ವರಲ್ಲೂ ಜಗಳ ಪ್ರಾರಂಭವಾಯಿತು. ತಮಗೆ ಬೇಕಾದ್ದನ್ನೇ ಕೊಂಡುಕೊಳ್ಳಬೇಕೆಂಬ ಹಟ. ಮಾತುಮಾತಿಗೆ ಬೆಳೆದು ವಾತಾವರಣ ಬಿಸಿಯಾಯಿತು.ಅಷ್ಟರಲ್ಲಿ ಅಲ್ಲೊಬ್ಬ ಹಿರಿಯ ಬಂದ. ಅವನು ಈ ಜಗಳವನ್ನು ಕಂಡ. ನಿಧಾನವಾಗಿ ಜಗಳದ ಕಾರಣವೇನು ಎಂದು ಕೇಳಿದ. ಅವರು ಹೇಳಿದ್ದನ್ನು ಕೇಳಿ ನಕ್ಕ. ಅವನು ಜ್ಞಾನಿ.  ‘ಆಯಿತಪ್ಪ, ನೀವೆಲ್ಲ ಜಗಳವಾಡಬೇಡಿ. ಆ ಬಂಗಾರದ ನಾಣ್ಯವನ್ನು ನನಗೆ ಕೊಡಿ. ನಿಮಗೆ ಬೇಕಾದುದನ್ನು ನಾನು ತಂದುಕೊಡುತ್ತೇನೆ.’ ಆತ ನಾಣ್ಯವನ್ನು ತೆಗೆದುಕೊಂಡು ಹೋಗಿ ಒಂದು ದೊಡ್ಡ ಬುಟ್ಟಿ ದ್ರಾಕ್ಷಿಯ ಹಣ್ಣುಗಳನ್ನು ತಂದ. ಅದನ್ನು ಅವರ ಮುಂದೆ ಇಟ್ಟು ‘ನೋಡಿ, ನೀವೆಲ್ಲ ಅಪೇಕ್ಷಿಸಿದ್ದು ಇಲ್ಲಿದೆ. ನಿಮ್ಮ ಅಂಗೂರ, ಇನಾಬ್, ಉಝಮ್, ಸ್ಟಾಫಿಲ್ ಇವೆಲ್ಲ ಬೇರೆಬೇರೆ ಭಾಷೆಯ ಪದಗಳು. ಅವುಗಳ ಅರ್ಥ ಒಂದೇ-ದ್ರಾಕ್ಷಿ. ಈಗ ನೀವೆಲ್ಲ ಸಂತೋಷಪಡಿ’ ಎಂದು ಹೇಳಿ ಹೊರಟ. ಅವರು ತಮ್ಮ ಮೂರ್ಖತನಕ್ಕೆ ನಾಚಿ, ನಂತರ ಸಂತೋಷದಿಂದ ದ್ರಾಕ್ಷಿ ತಿಂದರಂತೆ.ಇದೊಂದು ಅದ್ಭುತ ಕಥೆ. ನಮ್ಮ ಹಣೆಯ ಬರಹವೂ ಹಾಗೆಯೇ. ನಮ್ಮ ಜಾತಿ, ನಮ್ಮ ಧರ್ಮ, ನಮ್ಮ ನಂಬಿಕೆಗಳು ಎಂದು ಹಾರಾಡುತ್ತೇವೆ. ಹೋರಾಡುತ್ತೇವೆ, ಸಾಮಾಜಿಕ ಜೀವನವನ್ನು ನರಕ ಮಾಡಿಕೊಳ್ಳುತ್ತೇವೆ. ನಿಜವಾಗಿ ನೋಡಿದರೆ ಯಾವುದೇ ನಿಜವಾದ ಧರ್ಮದ ಮೂಲ ಆಶಯ ಒಂದೇ. ಅದು ಸತ್ಯದ ಅನ್ವೇಷಣೆ, ಆನಂದದ ಅನ್ವೇಷಣೆ. ಮನುಷ್ಯ ಪ್ರಾಣಿ ಈ ಭೂಮಿಯ ಮೇಲೆ ಹುಟ್ಟಿ ಬಂದಂದಿನಿಂದ, ಬಹುಶಃ ಪ್ರಪಂಚದ ಕೊನೆಯವರೆಗೂ ಉಳಿಯಬಹುದಾದದ್ದು ಇದೇ ದ್ರಾಕ್ಷಿ- ಆನಂದದ ಆನ್ವೇಷಣೆ. ಆದರೆ ನಾವು ಬೇರೆ ಬೇರೆ ಧರ್ಮಗಳ ಆಶಯ ಬೇರೆಯಾದದ್ದು ಎಂದು ಭ್ರಮಿಸಿ ಭಿನ್ನತೆಯನ್ನು ತರುತ್ತೇವೆ. ನಮಗೆ ಯಾರು, ಯಾವತ್ತು, ಇದೆಲ್ಲ ಒಂದೇ ಎಂದು ಹೇಳಿಯಾರು? 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.