ಗುರುವಾರ , ಫೆಬ್ರವರಿ 25, 2021
30 °C

ಭಾಷೆಯ ಕನಸು-ರೂಪಕ

ಓ.ಎಲ್. ನಾಗಭೂಷಣಸ್ವಾಮಿ Updated:

ಅಕ್ಷರ ಗಾತ್ರ : | |

ಭಾಷೆಯ ಕನಸು-ರೂಪಕ

ರೈಲು ಹೈದರಾಬಾದಿಗೆ ಹೋಗುತಿತ್ತು. ಬೆಳಗಿನ ಹೊತ್ತು. ಕಿಟಕಿಯಾಚೆ ಬತ್ತದ ಗದ್ದೆ ನಳನಳಿಸುತಿತ್ತು. ಗದ್ದೆಯಲ್ಲಿ ಕೊಕ್ಕರೆಗಳಿದ್ದವು. ರೈಲಿನಲ್ಲಿದ್ದ ಐದು ವರ್ಷದ ಹುಡುಗ ತಟಕ್ಕನೆ `ಅಮ್ಮಾ, ಅಲ್ಲಿ ನೋಡು! ಬರ್ತ್‌ಡೇ ಕೇಕಿನ ಮೇಲೆ ಕ್ಯಾಂಡಲು ಸಿಕ್ಕಿಸಿದ ಹಾಗೆ ಕಾಣುತ್ತೆ!~ ಅಂದ. ಗೆಳೆಯ ರಾಘವೇಂದ್ರರಾವ್ ಹೇಳಿದ ಈ ಕತೆ ಕೇಳಿ ಬೆರಗುಪಟ್ಟೆ.ನಮ್ಮ ಎಚ್ಚರದ ಬುದ್ಧಿಯು ಗ್ರಹಿಸಲಾಗದ ಸಂಬಂಧಗಳನ್ನೂ ಕಲ್ಪಿಸಿಕೊಳ್ಳುವ ಈ ವಿಧಾನವನ್ನು ರೂಪಕಗಳ ಮೂಲಕ ಚಿಂತಿಸುವ, ಗ್ರಹಿಸುವ ಶಕ್ತಿ ಅನ್ನಬಹುದು. ಮಕ್ಕಳಿಗೆ ಇರುವ ಈ ಶಕ್ತಿ ಅವರು ಹದಿವಯಸ್ಸಿಗೆ ಬರುವ ಹೊತ್ತಿಗೆ ಕುಗ್ಗುತ್ತದಂತೆ.ಆಮೇಲೆ ಏನಿದ್ದರೂ ದಿನ ನಿತ್ಯದ ಸ್ಪಷ್ಟ ಅರ್ಥದ ಮಾತು ಕತೆಯ ಲೋಕ. ಬಾಲ್ಯದ ಮುಗ್ಧ ರೂಪಕಶಕ್ತಿಯನ್ನು ಮತ್ತೆ ಪಡೆವ ತವಕ ಹುಟ್ಟುತ್ತದೆ. ಇಂಥ ಹಂಬಲವು`ಹರೆಯದ ತೆರೆತೆರೆಗಳಲ್ಲಿ

ಅರೆತೆರೆದಿಹ ಮರೆಗಳಲ್ಲಿ

ಎದೆಯ ಮುದದ ತೊರೆಗಳಲ್ಲಿ

ಸುಧೆಯ ಕುಡಿದ ಹಕ್ಕಿ ಜಿಂಕೆ

ಕನಸುಗಳೇ ಬನ್ನಿ~

(ಬೇಂದ್ರೆ, `ಬನ್ನಿ ಬನ್ನಿ ಕನಸುಗಳೇ~) ಎಂದು ವ್ಯಕ್ತವಾಗಬಹುದು.ಬಾಲ್ಯದಲ್ಲಿ ಸಹಜ ಸ್ವಚ್ಛಂದವಾಗಿ ಮಾತಿನಲ್ಲಿ ತಲೆದೋರುತ್ತ ಕೇಳುವವರಲ್ಲಿ ಬೆರಗು ಹುಟ್ಟಿಸುವ ರೂಪಕಗಳು ನಾವು ಬೆಳೆದಂತೆ ಯಾಕೆ ಕಣ್ಮರೆಯಾಗುತ್ತವೆ? ಹೀಗಾಗುವುದಕ್ಕೆ ಮಗು ಭಾಷೆಯ ಮೂಲಕ ಪಡೆಯುವ ಜ್ಞಾನವೇ ಕಾರಣ! ಭಾಷೆಯ ಜ್ಞಾನ ಪಡೆಯುವುದು ಎಂದರೇನು? ತನ್ನ ಸುತ್ತಲೂ ಇರುವ ಜನ ಯಾವುದನ್ನು ಜ್ಞಾನ, ತಿಳಿವಳಿಕೆ, ಮೌಲ್ಯ, ನೀತಿ ಅಂದುಕೊಂಡಿರುತ್ತಾರೋ ಅದನ್ನೆಲ್ಲ ಮಗು ಭಾಷೆಯ ಮೂಲಕ ಒಳಗುಮಾಡಿಕೊಳ್ಳುವುದೇ ತಾನೇ! ಮಗು ಕಲಿಯುವ ಭಾಷೆ ಮಗುವಿನ ಎಚ್ಚರದ ಮನಸ್ಸನ್ನು ತಿದ್ದುತ್ತದೆ, ಆಳಮನಸ್ಸನ್ನೂ ರೂಪಿಸುತ್ತದೆ.

 

ಹೀಗಾಗದಿದ್ದರೆ ಮಗು ಸಮಾಜದ ವ್ಯವಸ್ಥೆಗೆ ಹೊಂದಿಕೊಳ್ಳುವ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವುದಕ್ಕೆ ಆಗುವುದೇ ಇಲ್ಲ. ವ್ಯಕ್ತಿ ತನ್ನೊಡನೆ ತಾನು ಎಂಥ ಸಂಬಂಧ ಇಟ್ಟುಕೊಳ್ಳಬೇಕು, ಅನ್ಯರೊಡನೆ ಎಂಥ ಸಂಬಂಧ ಸೂಕ್ತ ಅನ್ನುವುದೆಲ್ಲ ಭಾಷೆಯ ಮೂಲಕವೇ ನಂಬಿಕೆಯಾಗಿ, ಸತ್ಯವಾಗಿ ಮಗುವಿನ ಮನಸ್ಸಿನಲ್ಲಿ ಕೂರುತ್ತದೆ. ಕೂಸು ಭಾಷಾಲೋಕಕ್ಕೆ ಕಾಲಿಟ್ಟ ಕ್ಷಣದಿಂದಲೇ `ವಾಸ್ತವ~ದಿಂದ ದೂರ ಸರಿಯುವ ಪ್ರಯಾಣವೂ ತೊಡಗುತ್ತದೆ. ಒಂದು ನಿಮಿಷ ಯೋಚನೆಮಾಡಿ ನೋಡಿ. ನಾವು ಕಾಣುವ ಯಾವ ವಸ್ತುವಿಗೂ ನಿಜವಾಗಿ ಹೆಸರಿಲ್ಲ, ನಾವು ಅನುಭವಿಸುವ ಯಾವ ಭಾವಕ್ಕೂ ನಿಜವಾಗಿ ಹೆಸರಿಲ್ಲ. ಕಾಣುವ, ಕಾಣದ ಎಲ್ಲಕ್ಕೂ ಹೆಸರಿಟ್ಟದ್ದು ಮನುಷ್ಯರೇ.

 

ಸುಮಾರು ಆರು ತಿಂಗಳಾಗುವವರೆಗೆ ಕೂಸುಗಳು ಸುಮ್ಮನೆ ನೋಡುವ, ಸುಮ್ಮನೆ ಕೇಳುವ, ಸುಮ್ಮನೆ ಅನುಭವಿಸುವ ಜೀವಗಳು. ಆ ಕೂಸುಗಳ ಪಾಲಿಗೆ ಯಾವ ವಸ್ತುವಿಗೂ ಹೆಸರಿಲ್ಲ, ಯಾವ ಭಾವಕ್ಕೂ ಹೆಸರಿಲ್ಲ. ಕೂಸಿನ ಈ ಸ್ಥಿತಿ ವಾಸ್ತವ (ದಿ ರಿಯಲ್) ಅನ್ನುತ್ತೇವಲ್ಲ ಅದಕ್ಕೆ ತೀರ ಹತ್ತಿರದ್ದು.ಕೂಸು ಭಾಷೆ ಕಲಿಯುವುದೆಂದರೆ ವ್ಯತ್ಯಾಸಗಳನ್ನು ಗುರುತಿಸಿ ಕಲಿಯುವುದು, ಹೆಸರಿಡುವುದನ್ನು ಕಲಿಯುವುದೇ ಅಲ್ಲವೇ? ನಾನು ಬೇರೆ, ನಮ್ಮಮ್ಮ ಬೇರೆ, ನನ್ನ ಸುತ್ತಲಿನ ಜನ ಬೇರೆ, ಆನೆ ಬೇರೆ, ಫ್ಯಾನು ಬೇರೆ ಹೀಗೆ ವ್ಯತ್ಯಾಸಗಳನ್ನು ಕಲಿಯುತ್ತ, ಗುರುತಿಸುತ್ತ ಮಗು ಬೆಳೆಯುತ್ತದೆ.ನಾನು ಅನ್ನುವುದೇ ಮಿಕ್ಕ ಎಲ್ಲರಿಗಿಂತ, ಎಲ್ಲಕ್ಕಿಂತ ಪ್ರತ್ಯೇಕವಾದದ್ದು ಅನ್ನುವುದು ಮಗುವಿಗೆ ಗೊತ್ತಾಗುತಿದ್ದಂತೆ ನನ್ನ ಅಮ್ಮ, ನನ್ನ ಆಟಿಕೆ, ನನ್ನ ತಾತ ಹೀಗೆ ತನ್ನದು ಅನ್ನುವ ಲೋಕವೂ ಹುಟ್ಟಿಕೊಳ್ಳುತ್ತದೆ. ತನ್ನದೆಲ್ಲವೂ ಪೂರಾ ತನ್ನದೇ ಆಗಬೇಕೆಂಬ ಆಸೆಯೂ ಹುಟ್ಟುತ್ತದೆ. ಅದರಲ್ಲೂ ತನ್ನ ಅಮ್ಮ ಪೂರಾ ತನ್ನವಳೇ ಆಗಿರಬೇಕು ಅನ್ನುವ ಆಸೆ. ಹೀಗೆ ಹುಟ್ಟಿದ ಆಸೆ ಎಂದೂ ಈಡೇರಲು ಸಾಧ್ಯವೇ ಇಲ್ಲ.

 

ಮಗು ಬೆಳೆಯುವುದೆಂದರೆ ಯಾವ ಬಗೆಯ ಆಸೆಯನ್ನು ಪೂರೈಸಿಕೊಳ್ಳಬಹುದು, ಯಾವುದನ್ನು ಅಲ್ಲ ಎಂದು ತಿಳಿಯುವುದು ಕೂಡಾ ಹೌದು. ಇದು ತಕ್ಕದ್ದು, ಇದು ಸಲ್ಲದ್ದು, ಇದು ಸರಿ, ಇದು ನಿಷಿದ್ಧ ಅನ್ನುವ ಮೌಲ್ಯಗಳೆಲ್ಲ ಭಾಷೆಯ ಮೂಲಕವೇ ಮಗುವಿನ ಮನಸ್ಸಿನೊಳಗೆ ಇಳಿಯುತ್ತದೆ. ಸುತ್ತಲಿನ ಜನ ಒಪ್ಪುವ ಹಾಗೆ ಬದುಕುವುದನ್ನೂ ವರ್ತಿಸುವುದನ್ನೂ ಮಗು ಕಲಿಯುತ್ತದೆ.ಇದೆಲ್ಲ ನಡೆಯುವುದು ಭಾಷೆಯ ಮೂಲಕವೇ. ಅಮ್ಮ ಪೂರಾ ನನ್ನವಳಾಗದಿದ್ದರೆ ಅಮ್ಮನಂಥದ್ದು ಏನೋ ಇನ್ನೊಂದು ತನ್ನದೇ ಆಗಲಿ ಅನ್ನುವ ಹಂಬಲವೂ ಹುಟ್ಟುತ್ತದೆ. ನಮ್ಮ ಸಮರ್ಥ ಸುಮಾರು ಒಂದು ವರ್ಷದವನಾಗುವ ಹೊತ್ತಿಗೆ ಅವರಮ್ಮನ ಉಡುಪನ್ನೋ ವ್ಯಾನಿಟಿ ಬ್ಯಾಗನ್ನೋ ಬೇರೆಯವರು ಮುಟ್ಟಿದರೆ ರೇಗಿ ರಂಪಾಟ ಮಾಡುತಿದ್ದ. ಅಮ್ಮನ ವಸ್ತುಗಳ ಮೇಲೆ ಅಮ್ಮನಿಗೆ, ತಪ್ಪಿದರೆ ತನಗೆ ಮಾತ್ರ ಅಧಿಕಾರ ಅನ್ನುವ ಹಾಗೆ ಆಡುತಿದ್ದ.ಕೂಸಿನ ಮನಸ್ಸಿನಲ್ಲಿ ನಾನು ಮತ್ತು ಅನ್ಯ ಅನ್ನುವ ತಿಳಿವಳಿಕೆ ಮೂಡುವುದೇ ಭಾಷೆಯ ಮೂಲಕ ಅನ್ನುತ್ತಾರೆ ಕೆಲವು ಮನೋವಿಜ್ಞಾನಿಗಳು. ಸುತ್ತಲ ಜನ, ಸಮಾಜ, ಸಮಾಜವು ಆಚರಿಸುವ ಸಂಸ್ಕೃತಿ ಇವೆಲ್ಲ ಮಗುವಿಗೆ ಅನ್ಯವೇ ಹೌದು.ಆ ಅನ್ಯದ ಶಕ್ತಿ ತನ್ನ ಶಕ್ತಿಗಿಂತ ದೊಡ್ಡದು ಅನ್ನುವುದು ಮಗುವಿಗೆ ತಿಳಿಯುತ್ತ ಹೋಗುತ್ತದೆ. ಸುತ್ತಲಿನ ಜನ, ಸಮಾಜ ಭಾಷೆಯ ಮೂಲಕ ಕಲ್ಪಿಸಿಕೊಂಡಿರುವ ವಾಸ್ತವತೆಗೆ (ರಿಯಾಲಿಟಿ) ಹೊಂದಿಕೊಂಡು ಬದುಕುವುದನ್ನು ಕಲಿಯುತ್ತದೆ. ನಾವು ಯಾವುದನ್ನು ಸಮಾಜ ಅನ್ನುತ್ತೇವೋ ಅದಕ್ಕೆ ವಾಸ್ತವತೆ ಮುಖ್ಯವೇ ಹೊರತು ವಾಸ್ತವವಲ್ಲ.ವಾಸ್ತವತೆ ಅನ್ನುವುದು ನಮ್ಮ ಸುತ್ತಲೂ ನಿಜವಾಗಿ ಇದೆ ಎಂದು ನಾವೇ ಕಲ್ಪಿಸಿ ಕೊಂಡಿರುವ, ನಾವೇ ನಂಬಲು ಬಯಸುವ, ಹಾಗೆ ನಂಬಿ ನಮ್ಮ ವರ್ತನೆಯನ್ನು ತಿದ್ದಿಕೊಳ್ಳುವ ಭ್ರಾಮಕತೆ. ವ್ಯಕ್ತಿತ್ವ ಅನ್ನುತ್ತೇವಲ್ಲ ಅದು ವಾಸ್ತವತೆಯೊಡನೆ ಮಾಡಿಕೊಂಡ ಹೊಂದಾಣಿಕೆ. ವಾಸ್ತವ (ರಿಯಲ್) ಅನ್ನುವುದು ಭಾಷೆಯಲ್ಲಿ ಮೈತಾಳಲು ಒಲ್ಲದ, ಹೇಗೂ ಯಾವ ರೀತಿಯಲ್ಲೂ ವ್ಯಕ್ತಪಡಿಸಲು ಆಗದ, ಸುಮ್ಮನೆ ಇರುವ ಏನೋ ಒಂದು.ಬೆಳಗೆರೆ ಕೃಷ್ಣಶಾಸ್ತ್ರಿಗಳ `ಏಗದಾಗೆಲ್ಲಾ ಐತೆ~ ಪುಸ್ತಕದ ಒಂದು ಪ್ರಸಂಗ: ಮುಕುಂದೂರು ಸ್ವಾಮಿಯ ಬಳಿಗೆ ಬಂದಾತ ಒಬ್ಬ ದೇವರನ್ನು ತೋರಿಸಬಲ್ಲಿರಾ ಎಂದು ಕೇಳಿದಾಗ ಸಾಧ್ಯವಿಲ್ಲ, ನಾನು ಇದೇ ದೇವರು ಎಂದು ಯಾವುದನ್ನು ತೋರಿದರೂ ನೀನು ಇದು ದೇವರಲ್ಲ, ಇದು ನಾಯಿ, ಇದು ಬೆಟ್ಟ, ಇದು ತುಳಸಿ ಗಿಡ ಅನ್ನುತ್ತಾ ಬೇರೆ ಬೇರೆ ಹೆಸರು ಹೇಳುತ್ತೀಯೆ, ಹೆಸರಿಲ್ಲದ್ದನ್ನು ಗುರುತಿಸಲು ಆದಾಗ ದೇವರು ನಿನಗೆ ಕಂಡಾನು ಅನ್ನುವ ಅರ್ಥದ ಮಾತು ಬರುತ್ತದೆ.ಇನ್ನೊಂದು ಪ್ರಸಂಗದಲ್ಲಿ ಇವತ್ತು ಮಂಗಳವಾರ ಎಂದು ಯಾರೋ ಅಂದಾಗ ಮುಕುಂದೂರು ಸ್ವಾಮಿ ಇವತ್ತು ಮಂಗಳವಾರ ಎಂದು ಖಚಿತವಾಗಿ ಹೇಗೆ ಹೇಳುತ್ತೀ ಅನ್ನುತ್ತಾರೆ. ಕ್ಯಾಲೆಂಡರಿನಲ್ಲಿ ಇರುವುದು, ಪೇಪರಿನಲ್ಲಿ ದಿನಾಂಕ ಹಾಕಿರುವುದು, ಇವೆಲ್ಲ ಮನುಷ್ಯರೇ ಕೊಟ್ಟುಕೊಂಡಿರುವ ಹೆಸರೇ ಹೊರತು ಇವತ್ತು ಮಂಗಳವಾರ, ನಿನ್ನೆ ಸೋಮವಾರ ಅನ್ನುವುದಕ್ಕೆ ಏನು ಪುರಾವೆ ಇದೆ? ಸೂರ್ಯನಲ್ಲೇ, ಗಾಳಿಯಲ್ಲೇ, ಗಿಡಮರಗಳಲ್ಲೇ? ಯಾವ ವಾಸ್ತವ ಪುರಾವೆ ಇದೆ? ಅನ್ನುತ್ತಾರೆ. ವಾರ, ತಿಂಗಳು, ಇಸವಿ ಅನ್ನುವುದೆಲ್ಲ ನಾವು, ನಮ್ಮ ಅರ್ಥದ ಅಗತ್ಯಕ್ಕಾಗಿ ರೂಪಿಸಿಕೊಂಡಿರುವ ವಾಸ್ತವತೆ; ದೇವರು ಅಥವ ದೆವ್ವ ಕೂಡಾ ಅಷ್ಟೇ.ವಾಸ್ತವತೆ ಅನ್ನುವುದು, ಅರ್ಥ ಅನ್ನುವುದು ನಮ್ಮ ಅನುಕೂಲಕ್ಕೆ ಕಟ್ಟಿಕೊಂಡ ನಿರ್ಮಾಣಗಳು. ಬೇಂದ್ರೆಯವರ `ಇದ್ಹಾಂಗ ಇತ್ತು ಎಲ್ಲಾ~ ಕವಿತೆಯ ಸಾಲು ನೆನಪಾಗುತ್ತಿದೆ.`ಸತ್ಯದ ನೆರಳೊಂದು

ಸುಳ್ಳೀನ ತಿರುಳಿನ್ಹಾಂಗ

ಮೆರಿದಾಡತಿತ್ತು; ನಾನು

ಹರಿದಾಡಿದಾಗ~

ನಾನು ಅನ್ನುವ ವ್ಯಕ್ತಿತ್ವ ರೂಪುಗೊಂಡ ಹಾಗೆ ಭಾಷೆಯ ಮೂಲಕ ದೊರೆಯುವುದೆಲ್ಲ ಸತ್ಯದ ನೆರಳು, ಅದರೊಳಗಿರುವುದು ಸುಳ್ಳಿನ ತಿರುಳು. ಭಾಷೆಯ ಮೂಲಕವೇ ತನಗೆ ಅನ್ಯವಾಗಿರುವ ವಾಸ್ತವದೊಡನೆ ಒಂದಾಗುವ ಅಸಾಧ್ಯ ಆಸೆ ಆಳಮನಸಿನಲ್ಲಿರುತ್ತದೆ. ಆಳ ಮನಸ್ಸು ಅನ್ನುವುದು ವ್ಯಾಕರಣವಿಲ್ಲದ ಭಾಷೆ, ಕನಸುಗಳೆಲ್ಲ ಎಚ್ಚರದ ಸ್ಥಿತಿಯಲ್ಲಿ ನಮಗೆ ಸಲ್ಲದೆಂದು ತೋರಿ ಅವಿತಿಟ್ಟ ವಿಚಾರಗಳೇ ನಮ್ಮೆದುರು ಕಾಣಿಸಿಕೊಳ್ಳುವ ನೋಟಗಳು, ಒಳ ಬಯಕೆಗಳ ರೂಪಕಗಳು ಅಂದವನು ಫ್ರಾಯ್ಡ; ಮನುಷ್ಯ ವ್ಯಕ್ತಿಗೆ ಸುಪ್ತ ಮನಸ್ಸು ಇರುವ ಹಾಗೆ ಇಡೀ ಸಮುದಾಯಕ್ಕೆ, ಇಡೀ ಮನುಷ್ಯ ಕುಲಕ್ಕೆ ಒಂದು ಸುಪ್ತಚೇತನವಿದೆ, ಅದು ನಮಗೆ ವ್ಯಕ್ತವಾಗುವುದು ಕನಸುಗಳ ಮೂಲಕ, ಕನಸು ಕೂಡ ಐದಂಕದ ನಾಟಕದ ಹಾಗೆ ರಚನೆಗೊಂಡದ್ದು, ಕನಸಿನ ಭಾಷೆಯನ್ನು ಅರಿತುಕೊಂಡರೆ ಇಡೀ ಮನುಷ್ಯಕುಲದ ಐಕ್ಯದ ಅರಿವು ಕೂಡ ಮೂಡುತ್ತದೆ ಅಂದವನು ಕಾರ್ಲ್ ಯೂಂಗ್.ಮನುಷ್ಯರ ಆಳಮನಸ್ಸಿನ ವಿನ್ಯಾಸವೂ ಭಾಷೆಯ ವಿನ್ಯಾಸವೂ ಒಂದೇ ಅಂದವನು ಲಕಾನ್. ರೂಪಕದಲ್ಲಿ ಅರ್ಥವಿಸ್ತಾರ, ಅರ್ಥಾಂತರ ಇರುತ್ತದೆ, ಶಬ್ದಾಂತರದಲ್ಲಿ ವಸ್ತುವಿನ ಒಂದಂಶವನ್ನು ಇಡೀ ವಸ್ತುವಿಗೆ ಅನ್ವಯಿಸುವ ಕೆಲಸ (ಖಾಕಿ ಅಂದರೆ ಪೊಲೀಸು, ಖಾದಿ ಅಂದರೆ ರಾಜಕಾರಣಿ ಇತ್ಯಾದಿ) ನಡೆಯುತ್ತದೆ.ಹೀಗೆಯೇ ಕನಸುಗಳಲ್ಲೂ ನಡೆಯುತ್ತದೆ; ಮನುಷ್ಯರು ಎಚ್ಚರದ ಸ್ಥಿತಿಯಲ್ಲಿ, ಕನಸಿನಲ್ಲಿ ಅಥವಾ ತಮಗೇ ಅರಿವಿಲ್ಲದೆ ಲೋಕದೊಡನೆ ವ್ಯವಹರಿಸುವ ರೀತಿಯ ಪ್ರತಿಫಲನವೇ ರೂಪಕ ಮತ್ತು ಶಬ್ದಾಂತರ; ವ್ಯಕ್ತಿಯಲ್ಲಿ ನಡೆಯುವ ಭಾಷಾ ವಿಕಾಸಕ್ಕೂ, ವ್ಯಕ್ತಿತ್ವ ನಿರ್ಮಾಣಕ್ಕೂ ಸಂಬಂಧವಿದೆ; ಒಳಜಗತ್ತು ಮತ್ತು ಹೊರಜಗತ್ತುಗಳನ್ನು ಮಾನಸಿಕವಾಗಿ ಗ್ರಹಿಸುವಲ್ಲಿ ಪ್ರತಿಯೊಬ್ಬರ ಮನಸ್ಸೂ ರೂಪಕಗಳನ್ನೇ ನೆಚ್ಚಿಕೊಳ್ಳುತ್ತದೆ ಎಂದು ವಿವರಿಸಿದ.`ನಾನು ಹೇಳಬೇಕೆಂದಿದ್ದದ್ದು ಅದಲ್ಲ~ ಎಂದು ಎಷ್ಟೋ ಸಾರಿ ಅನ್ನುತ್ತೇವಲ್ಲ, ಹಾಗಾದರೆ ಹೇಳಬಾರದೆಂದು ಇದ್ದುದನ್ನು ಹೇಳಿದವರು ಯಾರು ಅನ್ನುವ ಪ್ರಶ್ನೆ ತಲೆ ಎತ್ತುತ್ತದೆ. ಮಾತನಾಡುತ್ತಿರುವ ವ್ಯಕ್ತಿ ತನ್ನ ಒಳಗಿನ ರೂಪಕಗಳ ವಿನ್ಯಾಸದ ಮೇಲೆ ನಿಯಂತ್ರಣ ಕಳೆದುಕೊಂಡಾಗ, ವ್ಯಕ್ತಿತ್ವದೊಳಗಿನ ಇನ್ನೊಂದು ವ್ಯಕ್ತಿತ್ವ, ಸುಪ್ತಪ್ರಜ್ಞೆ ಎಂಬ ಪ್ರಭುವಿನ ನಿಯಂತ್ರಣದಲ್ಲಿದ್ದು ನುಡಿಯುತ್ತಿರುತ್ತದೆ, ಆ ಒಳಮನಸ್ಸು ಎಂಬ ಪ್ರಭುವನ್ನು ಕನಸುಗಳಲ್ಲಿ ಅಥವ ಮನೋವಿಶ್ಲೇಷಣೆಯ ಮೂಲಕ ಮಾತ್ರ ಕ್ಷಣ ಮಾತ್ರ ದರ್ಶಿಸಬಹುದು ಅನ್ನುತ್ತಾರೆ. ಕನಸಿನಲ್ಲಿ ನಾವು ಕಟ್ಟಿಕೊಂಡ ವಾಸ್ತವಿಕತೆಯ ಲೋಕ ಇರುವುದಿಲ್ಲ. ಎಚ್ಚರವಾಗಿದ್ದಾಗ ಮುಖ್ಯವೆನಿಸದೆ ಇದ್ದ ಭಾವಗಳು, ಸಂಗತಿಗಳು ರೂಪಕಗಳಾಗಿ ಸುಳಿಯುತ್ತವೆ.ರೂಪಕವಿರದೆ ಜಗತ್ತನ್ನು ಅರ್ಥಮಾಡಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಮತ್ತೆ ಮತ್ತೆ ಮನದಟ್ಟು ಮಾಡುವುದೇ ಕನಸೆಂಬ ರೂಪಕ. ಕನಸು ನಮ್ಮ ದಿನನಿತ್ಯದ ಲೋಕವನ್ನು ಸ್ಫೋಟಿಸುತ್ತದೆ ಒಂದೇ ಸಮ.ವ್ಯತ್ಯಾಸಗಳ ಮೂಲಕವೇ ಲೋಕದ ಅರ್ಥ ಕಟ್ಟಿಕೊಳ್ಳುತ್ತೇವೆ, ಆದರೆ ವಾಸ್ತವದಲ್ಲಿ ನಾವು ಊಹಿಸಲೂ ಸಾಧ್ಯವಿರದ ಸಂಬಂಧಗಳು, ಸಮಾನ ಅಂಶಗಳು ಇರುತ್ತವೆ ಅನ್ನುವುದನ್ನು ಕನಸು ನೆನಪಿಸುತ್ತದೆ. ಕನಸು ಅನ್ನುವುದು ಒಳಮನಸ್ಸು ಸೃಷ್ಟಿಸುವ ರೂಪಕವಾದರೆ, ಭಾಷೆಯಲ್ಲಿನ ರೂಪಕವು ಇಡೀ ಸಮಾಜ, ಚರಿತ್ರೆ, ಸಮೂಹ, ವ್ಯಕ್ತಿಯ ಚೈತನ್ಯಗಳ ಸಂಯೋಗದ ಮೂಲಕ ಮೂಡುವ ಭಾಷೆಯ ಕನಸು.ವ್ಯಕ್ತಿಯ ಎಲ್ಲ ಕನಸುಗಳಿಗೂ ಸೂತ್ರಪ್ರಾಯವಾದ ಮುಖ್ಯ ರೂಪಕ, ಸಮಾಜದ ವಾಸ್ತವತೆಯನ್ನು ನಿಯಂತ್ರಿಸುವ ರೂಪಕ ಇವು ಪ್ರಭು ರೂಪಕಗಳು. ಪ್ರಭುರೂಪಕಗಳನ್ನು ಎಚ್ಚರದ ಬೆಳಕಿಗೆ ತಂದುಕೊಳ್ಳುವುದು ವ್ಯಕ್ತಿಯ ಮತ್ತು ಸಮಾಜದ ಸ್ವಾಸ್ಥ್ಯಕ್ಕೆ ಮುಖ್ಯ.

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.