ಶನಿವಾರ, ಮೇ 8, 2021
25 °C

ಭೀಕರ ಹತ್ಯೆ ಮತ್ತು ಆತಂಕದ ಪ್ರತಿಕ್ರಿಯೆಗಳು

ನಟರಾಜ್ ಹುಳಿಯಾರ್ Updated:

ಅಕ್ಷರ ಗಾತ್ರ : | |

ಭೀಕರ ಹತ್ಯೆ ಮತ್ತು ಆತಂಕದ ಪ್ರತಿಕ್ರಿಯೆಗಳು

ಪ್ರೊ.ಎಂ.ಎಂ. ಕಲಬುರ್ಗಿಯವರ ಮೇಲೆ ನಡೆದ ಭೀಕರ ಹಲ್ಲೆ ಎಲ್ಲರಲ್ಲೂ ದಿಗ್ಭ್ರಮೆ ತಂದಿದೆ. ಅದರ ಜೊತೆಗೇ ಈ ಸಾವನ್ನು ಕುರಿತು ಕೆಲವು ಬರಹಗಾರರು ಊಹೆಗಳ ಆಧಾರದ ಮೇಲೆ ಮಾಡುತ್ತಿರುವ ತಕ್ಷಣದ ಪ್ರತಿಕ್ರಿಯೆಗಳು ನನ್ನಲ್ಲಿ ಇನ್ನಷ್ಟು ದಿಗ್ಭ್ರಮೆ ಹುಟ್ಟಿಸಿವೆ.ಕಲಬುರ್ಗಿಯವರ ಹತ್ಯೆಯ ಸುದ್ದಿ ಬಂದ ಕೆಲವೇ ಗಳಿಗೆಗಳಲ್ಲಿ ಲೇಖಕ ಮಿತ್ರರು ಫೋನಿನಲ್ಲಿ ಕಾರಣಗಳನ್ನು ಊಹಿಸತೊಡಗಿದ್ದನ್ನು ಕೇಳುತ್ತಿರುವಂತೆ, ಇದು ಕನ್ನಡ ಸಾಹಿತ್ಯಲೋಕ ಪ್ರತಿಕ್ರಿಯಿಸುವ ಮುಖ್ಯ ಮಾದರಿಯಾಗಲಿದೆ ಎಂಬುದು ಖಾತ್ರಿಯಾಗತೊಡಗಿತು: ‘ಹೀಗೆ ಪೋಲೀಸರ ಪ್ರಾಥಮಿಕ ವರದಿಯೂ ಇಲ್ಲದೆ ಸುದ್ದಿಗಳನ್ನು ಹಬ್ಬಿಸುತ್ತಾ ಹೋದರೆ ಜನರಲ್ಲಿ ಅನಗತ್ಯ ಭಯ ಮೂಡಿಸಿದಂತಾಗುತ್ತದೆ.ಇವತ್ತು ಬೆಳಗ್ಗೆ ಟೆಲಿವಿಷನ್ನಿನವರೇ ಇನ್ನೂ ಸಂಯಮ ತೋರಿಸುತ್ತಿರುವಾಗ ನಾವು ಊಹೆಗಳನ್ನು ತೇಲಿಬಿಡುವುದು ಎಲ್ಲವನ್ನೂ ದಿಕ್ಕು ತಪ್ಪಿಸುತ್ತದೆ. ಅನೇಕ ಸಲ ಪೋಲೀಸರು ಕೂಡ ಅಪರಾಧದ ಸುಳಿವು ಸಿಕ್ಕದಿದ್ದರೆ, ಈ ಸುದ್ದಿಗಳ ಜಾಡನ್ನೇ ಊಹಾ

ಕಲ್ಪನೆಯಾಗಿಟ್ಟುಕೊಂಡು ಅದನ್ನೇ ಬೆನ್ನು ಹತ್ತುವ ಸಾಧ್ಯತೆ ಇರುತ್ತದೆ. ಮೊನ್ನೆ ತಾನೇ ರಾಜಕೀಯ ಪಕ್ಷಗಳು ತೀರ್ಥಹಳ್ಳಿಯ ನಂದಿತಾ ಸಾವಿನ ಪ್ರಕರಣ, ಡಿ.ಕೆ.ರವಿ, ರವೀಂದ್ರನಾಥ್ ಪ್ರಕರಣದಲ್ಲಿ ಕರ್ನಾಟಕವನ್ನು ದಾರಿ ತಪ್ಪಿಸಿ, ಸತ್ಯ ಹೊರಬಿದ್ದ ಮೇಲೆ ಬಾಯಿ ಹೊಲಿದುಕೊಂಡವು.ತನಿಖೆಯಲ್ಲಿ ಫ್ರೀ ಹ್ಯಾಂಡ್ ಇದ್ದಾಗಲೆಲ್ಲ ಪೊಲೀಸರು ದಕ್ಷವಾಗಿ ಪ್ರಕರಣಗಳನ್ನು ಭೇದಿಸಿದ್ದಾರೆ. ಆದ್ದರಿಂದ ಈ ಪ್ರಕರಣದಲ್ಲಿ ನಮ್ಮ ತಲೆಗೆ ತೋಚಿದ ‘ಮನೋವಿಶ್ಲೇಷಣೆ’ ಮಾಡಬಾರದು’ ಎಂದು ಗೆಳೆಯರಿಗೆ ಹೇಳತೊಡಗಿದೆ. ಆದರೆ ಸತ್ಯ ಬೇಗ ಹೊರ ಬರಬೇಕು, ತನಿಖೆ ಚುರುಕಾಗಬೇಕು ಎಂಬುದಕ್ಕೆ ಒತ್ತು ಕೊಡದ ಬರಹಗಾರರು ಬಸವಣ್ಣನವರ ಸಾವಿನಿಂದ ಹಿಡಿದು ಎಲ್ಲವನ್ನೂ ತಂದು ಈ ಹತ್ಯೆಗೆ ಹೋಲಿಸತೊಡಗಿದರು. ಕೆಲವರಂತೂ ಮುಂದೆ ಯಾರೆಲ್ಲ ಹತ್ಯೆಯಾಗಲಿದ್ದಾರೆ ಎಂದು ಪಟ್ಟಿ ಕೊಡತೊಡಗಿದರು.ಈ ‘ಅತಿ ಪ್ರತಿಕ್ರಿಯೆ’ಯಿಂದ ಇಡೀ ಚರ್ಚೆ ದಾರಿ ತಪ್ಪಲಿದೆಯಲ್ಲವೆ ಎಂದು ಹಲವು ಲೇಖಕರನ್ನು ಕೇಳಿದೆ. ಕೆಲವರು ಖಾಸಗಿಯಾಗಿ ಈ ಮಾತನ್ನು ಒಪ್ಪಿದರೂ ಸಮೂಹ ಮಾಧ್ಯಮಗಳಲ್ಲಿ ಮಾತ್ರ ಊಹೆಗಳನ್ನೇ ತೇಲಿಬಿಡತೊಡಗಿದರು. ಅವರ ಆತಂಕ ನಿಜವಿರಬಹುದು. ಆದರೆ ಈ ಬಗೆಯ ಪ್ರಕರಣಗಳನ್ನು ಆಳವಾಗಿ ನೋಡದೆ, ಏಕಾಏಕಿ ಶತ್ರುಗಳನ್ನು ಸೃಷ್ಟಿ ಮಾಡುತ್ತಾ ಹೋದರೆ, ಕೋಮುಗಲಭೆಗಳನ್ನು ಹುಟ್ಟು ಹಾಕುವವರ ಜಾಡಿಗೆ ನಾವೂ ಬೀಳುತ್ತೇವೆ ಎನ್ನಿಸತೊಡಗಿತು.ಈ ಮಾತನ್ನು ಹೇಳಲು ಕಾರಣವಿದೆ. ಎಲ್ಲದಕ್ಕೂ ಮುಸ್ಲಿಮರು ಕಾರಣ ಎನ್ನುವ ಕೋಮುವಾದಿಗಳಂತೆಯೇ, ಎಲ್ಲದಕ್ಕೂ ಮನುವಾದಿಗಳು ಕಾರಣ ಎನ್ನುವವರು ಕೂಡ ಬೇಜವಾಬ್ದಾರಿಯಾಗಿರಬಲ್ಲರು. ಇಂಥ ವಿಷ ಗಳಿಗೆಗಳಲ್ಲಿ ನಮ್ಮ ಎಲ್ಲ ಪಂಥ, ಊಹೆಗಳನ್ನು ಮೀರಿ ವಿವರಗಳನ್ನು ಎಚ್ಚರದಿಂದ ಗಮನಿಸಬೇಕಾಗುತ್ತದೆ. ಈ ಮಾತನ್ನು ಹೇಳಿದರೆ, ಪ್ರಗತಿಪರ ಸಂಘಟನೆಯೊಂದರ ಲೇಖಕರೊಬ್ಬರು ‘ನಾವೂ ಈ ಸಂದರ್ಭದಲ್ಲಿ ಒಂದು ಸ್ಟ್ರ್ಯಾಟಿಜಿ ಮಾಡಬೇಕಾಗುತ್ತದೆ’ ಎಂದರು.ಒಂದು ಸುಳ್ಳನ್ನು ತಕ್ಷಣದ ಊಹೆಯಿಂದ ಅಥವಾ ಮತ್ತೊಂದು ಸುಳ್ಳಿನಿಂದ ಹಾಕುವುದು ಜಾಣತನದಂತೆ ಕಾಣಬಹುದು; ಆದರೆ ಹಾಗೆ ಮಾಡುವುದರ ಮೂಲಕ ನಾವು ಕೂಡ ಮೂಲಭೂತವಾದಿಗಳಂತೆ ಸತ್ಯಶೋಧನೆಯ ಕಣ್ಣು ಕಳೆದುಕೊಳ್ಳುತ್ತೇವೆ. ಸ್ವತಃ ಕಲಬುರ್ಗಿಯವರು ಸಂಶೋಧನೆಯಲ್ಲಿ ಪಾಲಿಸಿದ ಸತ್ಯನಿಷ್ಠೆಯ ನೈತಿಕ ನಿಯಮಗಳನ್ನು ನಾವು ಮರೆಯಬಾರದು. ಇಂಥ ಸಂದರ್ಭಗಳಲ್ಲಿ ಹಾಗೆ ‘ಸಂಶೋಧನೆ’ ಮಾಡುತ್ತಾ ಕೂರಲಾಗದು, ನಿಜ.ಆದರೆ ನಮ್ಮ ಕಣ್ಣೆದುರು ತೇಲಿಬರುವ ಆತಂಕಗಳ ಆಧಾರದ ಮೇಲೆ ತಕ್ಷಣದ ಸತ್ಯಗಳನ್ನು ಬಿತ್ತುವುದು ಕೂಡ ಅಪಾಯಕರ. ಅತಿಪ್ರತಿಕ್ರಿಯೆಯಿಂದ ತಪ್ಪಾಗುವಂತೆ ಅತಿ ಆತ್ಮಪರೀಕ್ಷೆಯಿಂದ ಕೂಡಿರುವ ನನ್ನ ಈ ಬರಹದ ಧ್ವನಿಯೂ ತಪ್ಪಾಗಿರಬಹುದು. ಆದರೂ ತಕ್ಕಮಟ್ಟಿನ ಆಧಾರವಿರುವ ಕ್ಲೂ ಸಿಕ್ಕುವತನಕ ಕೊಂಚ ಸಂಯಮದಿಂದ ಪ್ರತಿಕ್ರಿಯಿಸುವುದು ಎಲ್ಲರ ಹೊಣೆಯಾಗಿರಬೇಕು ಎಂಬುದಷ್ಟೇ ನನ್ನ ಬಿನ್ನಹ.ಈ ವಾದವಿವಾದಗಳ ನಡುವೆ, ಕಲಬುರ್ಗಿಯವರ ಸಾವಿನಿಂದಾಗಿ ಆ ಬಗೆಯ ವಿಶಿಷ್ಟ ವಿದ್ವಾಂಸ ಮಾರ್ಗದ, ಕಡು ಸಂಶೋಧನಾ ನಿಷ್ಠೆಯ ಕೊನೆಯ ಕೊಂಡಿಯೊಂದು ಕಳಚಿ ಹೋದದ್ದರ ಬಗ್ಗೆ ಅಪಾರ ವಿಷಾದ ಎಲ್ಲರನ್ನೂ ಮುತ್ತುತ್ತದೆ. ತಮ್ಮ ಸಂಶೋಧನೆಯನ್ನು ಒಪ್ಪದವರು ಅಥವಾ ಜೊತೆಯವರು ಕಷ್ಟ ಕೊಟ್ಟಂತೆಲ್ಲ ಇನ್ನಷ್ಟು ಶ್ರಮವಹಿಸಿ ಬೌದ್ಧಿಕ ಕೆಲಸ ಮಾಡಿ ಆ ದುಷ್ಟರನ್ನು ಮರೆಯುವ ಅಥವಾ ಮಣಿಸುವ ದಾರಿಯನ್ನು ಕಲಬುರ್ಗಿ ಹುಡುಕಿಕೊಂಡರು. ಅವರ ಮೊದಲ ಭೇಟಿಯಲ್ಲೇ ಈ ಅಂಶ ನನ್ನನ್ನು ತಟ್ಟಿತು.ನಾನು ಕಲಬುರ್ಗಿಯವರನ್ನು ಫಾರ್ಮಲ್ ಆಗಿ ಭೇಟಿಯಾಗಿದ್ದು ಕೇವಲ ಎರಡು ವರ್ಷಗಳ ಕೆಳಗೆ; ಧಾರವಾಡದಲ್ಲಿ ಪದ್ಮರಾಜ ದಂಡಾವತಿಯವರು ಪರಿಚಯಿಸಿದಾಗ. ‘ಸಾರ್! ನಿಮಗೆ ಇಲ್ಲಿನ ಯೂನಿವರ್ಸಿಟಿ ಮಂದಿ ಕಾಟ ಕೊಟ್ಟಂತೆ ಇವರಿಗೂ ಕಾಟ ಕೊಟ್ಟಿದ್ದಾರೆ!’ ಎಂದು ದಂಡಾವತಿ ನಗುತ್ತಾ ಹೇಳಿದಾಗ, ಕಲಬುರ್ಗಿ ಥಟ್ಟನೆ ಹೇಳಿದ್ದು ನನಗೆ ನೆನಪಿದೆ: ‘ಅಂಥಾ ಮಂದೀ ಕೈಯಾಗ  ಏನೂ ಆಗೂದುಲ್ಲ. ಅವೇ ನಾಶ ಆಗ್ತಾವ!’ಎರಡು ವರ್ಷಗಳ ಕೆಳಗೆ  ಅನಂತಮೂರ್ತಿಯವರ ಮಾತೊಂದನ್ನು ಕಲಬುರ್ಗಿಯವರು ತಪ್ಪಾಗಿ ಉಲ್ಲೇಖಿಸಿದ ಪ್ರಕರಣದಲ್ಲಿ ನಾನು ಅವರನ್ನು ಕಟುವಾಗಿ ಟೀಕಿಸಿದಾಗ ‘ನೀ ನನ್ನ ಖಾಲೀ ಅಟ್ಯಾಕ್ ಮಾಡ್ತೀಯ’ ಎಂದು ರೇಗಿದರು; ಆದರೆ ಅದೇ ಆಸುಪಾಸಿನಲ್ಲಿ ‘ಕಟ್ಟೀಮನಿ ಟ್ರಸ್ಟಿನ ಯುವ ಸಮಾವೇಶವನ್ನು ನೀನು ಉದ್ಘಾಟಿಸಬೇಕು’ ಎಂದು ಕರೆದರು. ಇವೆರಡನ್ನೂ ಒಟ್ಟಾಗಿ ನೋಡಿದರೆ ಅವರ ವ್ಯಕ್ತಿತ್ವದೊಳಗಿದ್ದ ವಸ್ತುನಿಷ್ಠತೆಯ ಅರಿವಾಗುತ್ತದೆ.ತಮ್ಮನ್ನು ಟೀಕಿಸಿದ ಕಿರಿಯ ಲೇಖಕನ ಜೊತೆ ಜಗಳವಾಡಲು ಅವರು ಸಿದ್ಧರಿದ್ದರು; ಆದರೆ ಆ ಘಟ್ಟದಲ್ಲಿ ತಾವು ಇಷ್ಟಪಡದಿದ್ದ ಲೇಖಕನನ್ನು ತಮ್ಮ ಸಮಾರಂಭದಿಂದ ದೂರವಿಡಬೇಕು ಎಂಬ ಸಣ್ಣತನ ಅವರಲ್ಲಿರಲಿಲ್ಲ. ವಿಮರ್ಶಕನೊಬ್ಬ ತಮ್ಮ ಪುಸ್ತಕವನ್ನು ಟೀಕಿಸಿದ್ದಕ್ಕೇ ಅವನ ಮೇಲೆ ಕೆಂಡ ಕಾರುವ ಲೇಖಕ, ಲೇಖಕಿಯರನ್ನು ಕಂಡಿರುವ ನನಗೆ ಕಲಬುರ್ಗಿಯವರ ಈ ಪ್ರತಿಕ್ರಿಯೆ ಆದರ್ಶ ಮಾದರಿಯಂತೆ ಕಾಣುತ್ತದೆ.     

 

‘ಸಂಶೋಧನೆಯಲ್ಲಿ ಸತ್ಯವನ್ನೇ ಬರೆಯಬೇಕೆಂಬ ಪ್ರಜ್ಞೆ ಗಟ್ಟಿಗೊಳ್ಳುತ್ತಾ ಹೋಗಿ, ಜೀವನದಲ್ಲಿಯೂ ಸತ್ಯವನ್ನೇ ಬಾಳಬೇಕೆಂಬ ನಿಲುವು ಸಂಶೋಧಕನಲ್ಲಿ ಬೆಳೆಯುತ್ತದೆ. ಸಂಶೋಧನೆಯ ಸಂಗದ ಪರಿಣಾಮವಿದು. ಸಂಶೋಧಕ ಸಂಶೋಧನೆಯನ್ನು ರೂಪಿಸಿದರೆ ಸಂಶೋಧನೆಯೇ ಮರಳಿ ಅವನನ್ನು ರೂಪಿಸುತ್ತದೆ’ ಎನ್ನುವ ಕಲಬುರ್ಗಿಯವರನ್ನು ಸಂಶೋಧನೆಯೇ ರೂಪಿಸಿದಂತಿದೆ.ಸತ್ಯವನ್ನು ಬರೆಯುವ ಹಾಗೂ ಸತ್ಯಕ್ಕೆ ಹತ್ತಿರವಾಗಿ ಬದುಕುವ ಕಷ್ಟಗಳನ್ನು ಕುರಿತ ಪ್ರಶ್ನೆಗಳು ಕಲಬುರ್ಗಿಯವರ ಬರಹಗಳಲ್ಲಿ ಸದಾ ಎದುರಾಗುತ್ತವೆ. ಈ ಅಂಶ ಕಲಬುರ್ಗಿಯವರ ‘ಕೆಟ್ಟಿತ್ತು ಕಲ್ಯಾಣ’ ನಾಟಕದಲ್ಲೂ ಬರುತ್ತದೆ. ಬಸವಣ್ಣ ಹೇಳುತ್ತಾನೆ: ‘ನನ್ನ ಕಣ್ಣ ಮುಂದ ಈಗ ಎರಡು ಪ್ರಶ್ನೆಗಳಾವ. ಕೆಟ್ಟ ವ್ಯವಸ್ಥೆಯೊಂದಿಗಿ ಹೊಂದಿಕೊಂಡು ವರ್ತಮಾನದಾಗ ಬದುಕಬೇಕೋ, ಕೆಟ್ಟವ್ಯವಸ್ಥೆಯನ್ನು ಪ್ರತಿಭಟಿಸಿ ಭವಿಷ್ಯತ್ತಿನ್ಯಾಗ ಬದುಕಬೇಕೋ?’ಕಲಬುರ್ಗಿಯವರ ಬದುಕು, ಸಂಶೋಧನೆಗಳೆರಡರಲ್ಲೂ ಈ ಸವಾಲು ಎದುರಾಗಿದ್ದನ್ನು ಪತ್ರಿಕೆಯೊಂದರ ವರದಿಗಾರರು ದಾಖಲಿಸಿದ್ದಾರೆ: ‘1989ರಲ್ಲಿ ಕಲಬುರ್ಗಿಯವರು ಬಸವಾಧ್ಯಯನ ಪೀಠದ ನಿರ್ದೇಶಕರಾಗಿದ್ದಾಗ ‘ಮಾರ್ಗ’ದ ಮೊದಲ ಸಂಪುಟ ಬಂತು.  ಆ ಪುಸ್ತಕದಲ್ಲಿ ಚೆನ್ನಬಸವಣ್ಣನವರ ಬಗ್ಗೆ ಬರೆದ ಲೇಖನದ ಕುರಿತು ಹುಬ್ಬಳ್ಳಿಯ ಮಠವೊಂದರಲ್ಲಿ ಆಕ್ಷೇಪ ವ್ಯಕ್ತವಾದಾಗ, ಆ ಭಾಗಗಳನ್ನು ಕಲಬುರ್ಗಿ ಹಿಂದಕ್ಕೆ ಪಡೆಯಬೇಕಾಯಿತು. ಆ ಸಂದರ್ಭದಲ್ಲಿ ಕಲಬುರ್ಗಿ ನೊಂದು ಹೇಳಿದ ಮಾತು:  ‘ನಾನು ನನ್ನ ಕುಟುಂಬದ ಸಲುವಾಗಿ ಆ ಕೆಲಸ ಮಾಡಿದೆ.ಆದರೆ ಅಂದು ನಾನು ಬೌದ್ಧಿಕ ಆತ್ಮಹತ್ಯೆ ಮಾಡಿಕೊಂಡೆ’. ಆಗ ‘ನಾನು ಇನ್ನು ಮುಂದೆ ಲಿಂಗಾಯತ ಸಾಹಿತ್ಯದ ಬಗ್ಗೆ, ಬಸವ ತತ್ವಗಳ ಬಗ್ಗೆ ಯಾವುದೇ ಸಂಶೋಧನೆ ಮಾಡುವುದಿಲ್ಲ’ ಎಂದು ಅವರು ಹೇಳಿದ್ದರೂ ಅವರ ಮೂಲ ಕ್ಷೇತ್ರ ಅವರ ಬೆನ್ನು ಬಿಡಲಿಲ್ಲ. ಇದಾದ ನಂತರವೂ  ಗಂಭೀರ ಸಂಶೋಧನೆ ನಡೆಸುತ್ತಾ ಆಧುನಿಕಪೂರ್ವ ಕನ್ನಡ ಅಧ್ಯಯನದ ಅನೇಕ ಮುಖ್ಯ ಸಮಸ್ಯೆಗಳನ್ನು ಅವರು ಬಿಡಿಸಿದರು. ರಾಮಲಿಂಗಪ್ಪ ಬೇಗೂರು ಹೇಳುವಂತೆ ‘ಕಲಬುರ್ಗಿಯವರ ಪಠ್ಯ ವಿಶ್ಲೇಷಣೆ ಹಾಗೂ ಜನಪ್ರಿಯ ಪವಾಡಗಳನ್ನು ಅವರು ಒಡೆಯುವ ರೀತಿ ಇವತ್ತಿಗೂ ಮಾದರಿಯಾಗಿವೆ.ತಮ್ಮ ಸಂಶೋಧನಾ ಸಿದ್ಧಾಂತದ ಮಿತಿಗಳನ್ನು ಅವರು ತಮ್ಮ ಸಂಶೋಧನೆಯ ಹಾದಿಯಲ್ಲಿ ಮೀರುತ್ತಾರೆ’. ನಿರಂತರ ಸಂಶೋಧಕರಾದ ಕಲಬುರ್ಗಿ ‘ಬಹುಶಃ ನನ್ನ ತಲೆಮಾರಿನ ಇತರ ಸಂಶೋಧಕರಿಗಿಂತ ಪರಿಸರವು ನನ್ನ ಕಾಲ ಕೆಳಗೆ ತೋಡಿದ ಅಗ್ನಿಕುಂಡವೇ ದೊಡ್ಡವೆಂದು ತೋರುತ್ತದೆ. ಆದರೆ ಕಾಲ ಕೆಳಗಿನ ಬೆಂಕಿಗಿಂತ ಕಣ್ಣುಮುಂದಿನ ಬೆಳಕು ದೊಡ್ಡದೆಂಬ ನನ್ನ ನಂಬಿಕೆ ನನ್ನನ್ನು ಈವರೆಗೆ ಉಳಿಸಿ, ಬೆಳೆಸಿದೆಯೆಂದು ಭಾವಿಸಿದ್ದೇನೆ’ ಎಂದು ಬರೆಯುತ್ತಾರೆ.ಕಲಬುರ್ಗಿಯವರು ಸಾಹಿತ್ಯ ಕೃತಿಗಳನ್ನು ಗ್ರಹಿಸುವುದಕ್ಕಿಂತ, ಸಾಹಿತ್ಯಕೃತಿಗಳ ಒಳಗೆ ಬಿಟ್ಟು ಹೋದ ಕೊಂಡಿಗಳ ಬಗ್ಗೆ ಅವರು ಹೇಳುವುದು ಹೆಚ್ಚು ಸತ್ಯವೆಂದು ನನಗೆ ಅನಿಸುತ್ತಿತ್ತು. ಸಂಶೋಧನೆಯಲ್ಲಿ ಎಲ್ಲರ ಹಾಗೆ ಅವರೂ ಎಡವಿದರೂ, ಅವರು ನಮ್ಮನ್ನು ಹಾದಿ ತಪ್ಪಿಸಲಾರರು ಎಂಬ ನಂಬಿಕೆ ನನ್ನಲ್ಲಿತ್ತು. ಒಬ್ಬ ಲೇಖಕ ಓದುಗರಲ್ಲಿ ಈ ಬಗೆಯ ವಿಶ್ವಾಸ ಹುಟ್ಟಿಸುವುದು ಸುಲಭವಲ್ಲ. ಅದು ಹೇಗೋ ಏನೋ, ಪ್ರಾಚೀನ ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಯ ವಿಚಾರದಲ್ಲಿ ಕಲಬುರ್ಗಿ ಹೇಳುವುದು ಹೆಚ್ಚು ಅಥೆಂಟಿಕ್ ಎಂಬ ನಂಬಿಕೆ, ಅವರು ಸಂಪಾದಿಸಿದ ವಚನಗಳ ಆವೃತ್ತಿಯೇ ಹೆಚ್ಚು ಅಧಿಕೃತವಿರಬಹುದು ಎಂಬ ವಿಶ್ವಾಸ ನನ್ನೊಳಗೆ ಉಳಿದುಬಿಟ್ಟಿದೆ. ತಮ್ಮ ಪ್ರಧಾನ ಸಂಪಾದಕತ್ವದಲ್ಲಿ ವಿವಿಧ ಸಂಪಾದಕರು ಸಂಪಾದಿಸಿರುವ ಸಮಗ್ರ ವಚನ ಸಂಪುಟಗಳಲ್ಲಿರುವ ಇಪ್ಪತ್ತು ಸಾವಿರ ವಚನಗಳನ್ನು ಆರಿಸುವಲ್ಲಿ ಕೊನೆಯ ಪಕ್ಷ ಮೂವತ್ತು ಸಾವಿರ ವಚನಗಳನ್ನಾದರೂ ಕಲಬುರ್ಗಿ ನಿಕಟವಾಗಿ ಓದಿದ್ದಾರೆ. ಈಚೆಗೆ ಆಯ್ದ ಎರಡು ಸಾವಿರ ವಚನಗಳನ್ನು ಹದಿನೈದು ಭಾಷೆಗಳಲ್ಲಿ ಪ್ರಕಟಿಸುವ ಯೋಜನೆಯನ್ನೂ ಕಲಬುರ್ಗಿ ಮುಗಿಸಿದ್ದರು. ಈ ಯೋಜನೆಯಲ್ಲಿದ್ದ ಅಗ್ರಹಾರ ಕೃಷ್ಣಮೂರ್ತಿ ಹೇಳುವಂತೆ ‘ವಚನಗಳ ಪಾಕೆಟ್ ಎಡಿಷನ್ ತರುವ ಬಯಕೆ ಕೂಡ ಕಲಬುರ್ಗಿಯವರಿಗಿತ್ತು’.ಅವರು ಎರಡು ವರ್ಷಗಳಲ್ಲಿ 15 ವಚನ ಸಂಪುಟಗಳ ಸಂಪಾದನೆಯ ಗಡುವು ಹಾಕಿಕೊಂಡರೆ, ಅದು ಆ ಅವಧಿಯಲ್ಲಿ ಮುಗಿಯುತ್ತಿತ್ತು. ವೀರಶೈವ ಪುಣ್ಯಪುರುಷಮಾಲೆಯಲ್ಲಿ ವರ್ಷಕ್ಕೆ ಹತ್ತರಂತೆ 10 ವರ್ಷಗಳಲ್ಲಿ 100 ಪುಸ್ತಕ ತರಬೇಕೆಂಬ ಯೋಜನೆಯೂ 10 ವರ್ಷದಲ್ಲಿ ಮುಗಿಯಿತು. ಕಾಲಬದ್ಧವಾಗಿ ಕನ್ನಡದ ಕೆಲಸ ಮಾಡಿ ಮುಗಿಸುತ್ತಿದ್ದ ಕಲಬುರ್ಗಿಯವರ ಮಾದರಿ ಹೊಸ ತಲೆಮಾರುಗಳ ಸಂಶೋಧಕರಲ್ಲಿ ಬೆಳೆಯಲಿ. ನಮ್ಮ ಪೊಲೀಸರು ಕೂಡ ಕಾಲಮಿತಿಯಲ್ಲಿ ತಮ್ಮ ಕೆಲಸ ಮುಗಿಸಿ ಸತ್ಯವನ್ನು ಹೊರತರಲಿ. ಅಲ್ಲಿಯವರೆಗೂ ಕಾಯುವ ತಾಳ್ಮೆ ಎಲ್ಲರಲ್ಲೂ ಇರಲಿ.

 

ಕೊನೆ ಟಿಪ್ಪಣಿ: ಸಂಶೋಧನೆ ಮತ್ತು ಸೃಜನಶೀಲತೆ


ಸಂಶೋಧನೆಯ ಗದ್ಯದಲ್ಲಿ ಮಂಡಿಸಲಾಗದ ಗ್ರಹಿಕೆಗಳನ್ನು ಹೇಳಲು ಕಲಬುರ್ಗಿ ನಾಟಕ ಪ್ರಕಾರದ ಮೊರೆ ಹೊಕ್ಕ ಘಟ್ಟ ಕೂಡ ಕುತೂಹಲಕರ. ನಾಟಕ ಪ್ರಕಾರದ ಸಾಧ್ಯತೆಗಳ ಗ್ರಹಿಕೆಯಿಲ್ಲದೆ, ವಾದ, ಪ್ರತಿವಾದಗಳ ಮಂಡನೆಯಾಗಿರುವ  ಅವರ ‘ಕೆಟ್ಟಿತ್ತು ಕಲ್ಯಾಣ’ ನಾಟಕ ದುರ್ಬಲವಾಗಿದೆ; ಆದರೆ ಇತಿಹಾಸಕಾರರು ಅರಿಯಲಾರದ ಸತ್ಯಗಳನ್ನು ಸೂಚ್ಯವಾಗಿ ಹೇಳಲೆತ್ನಿಸಿದೆ. ಈ ನಾಟಕ ರೂಪಿಸುವಾಗ ಕಲಬುರ್ಗಿಯವರ ಸಂಶೋಧನಾ ಜ್ಞಾನ ಹಲವೆಡೆ ಅವರ ನೆರವಿಗೆ ಬಂದಿದೆ.‘ಹೊಲೆಯರ ಬಾವಿಯಲ್ಲೊಂದು ಎಲು ನೆಟ್ಟಿದ್ದರೆ/ಹೊಲೆಹೊಲೆ ಎಂಬುದೀ ಲೋಕವೆಲ್ಲ./ಹಲುವೆಲುವಿದ್ದ ಬಾಯಿ ಒಲವರವ ನುಡಿದರೆ/ಹೊಲೆಯರ ಬಾವಿಯಿಂದ ಕರಕಷ್ಟ ಕಾಣಾ ರಾಮನಾಥಾ’ ಎಂಬ ದಾಸಿಮಯ್ಯನ ವಚನವನ್ನು ನಾನು ಹಿಂದೊಮ್ಮೆ ಮೇಲ್ಪದರದಲ್ಲಿ ಗ್ರಹಿಸಿದ್ದೆ. ಈ ವಚನದಲ್ಲಿರುವ ಎಲು ನೆಟ್ಟ ವಿವರವನ್ನು ಕಲಬುರ್ಗಿ ಕಲ್ಪನೆಯಿಂದ ಅರ್ಥೈಸಿಕೊಂಡು ಅಥವಾ ಐತಿಹಾಸಿಕ ಆಧಾರದಿಂದ ತಮ್ಮ ನಾಟಕದಲ್ಲಿ ವಿವರಿಸುತ್ತಾರೆ: ಸವರ್ಣೀಯರು ಇದು ಹೊಲಗೇರಿಯ ಬಾವಿ ಎಂದು ಗುರುತಿಸಲು ಆ ಬಾವಿಯ ಮೇಲೆ ಎಲುವಿನ ಹಂದರ ನೇತು ಬಿಡುವ ಪದ್ಧತಿಯನ್ನು ದಾಸಿಮಯ್ಯ ತನ್ನ ವಚನದಲ್ಲಿ ಪ್ರಸ್ತಾಪಿಸುತ್ತಾನೆಂದು ನನಗೆ ಆಗ ಹೊಳೆಯಿತು. ಮೇಲುಕೀಳಿನ ಸಂಕೇತವಾದ ಆ ಎಲುವಿನ ಹಂದರವನ್ನು ಬಸವಣ್ಣ ತೆಗೆದು ಹಾಕಲು ಹೇಳುತ್ತಾನೆ. ಈ ನಾಟಕವನ್ನೇ ಆಕರವಾಗಿಟ್ಟುಕೊಂಡು ವಚನಘಟ್ಟದ ಸಮಾಜ  ಕುರಿತ ಸಂಶೋಧನೆಗಳನ್ನು ಮುಂದುವರಿಸಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.