ಭಾನುವಾರ, ಮೇ 9, 2021
19 °C

ಮನಸ್ಸನ್ನು ಮುಚ್ಚುವ ಧ್ಯಾನದ ಹಾದಿಯಲ್ಲಿ

ಎಚ್.ಎಸ್.ಶಿವಪ್ರಕಾಶ್ Updated:

ಅಕ್ಷರ ಗಾತ್ರ : | |

ಸಾಂಪ್ರದಾಯಿಕ ಧರ್ಮಗಳ ಹಿಡಿತ ಕಡಿಮೆಯಾಗುತ್ತಾ ಬಂದ ಹಾಗೆ ಜಗತ್ತಿನಾದ್ಯಂತ ಧ್ಯಾನಕ್ರಮಗಳ ಜನಪ್ರಿಯತೆ ಹೆಚ್ಚುತ್ತಾಹೋಗುತ್ತಿದೆ. ಎಪ್ಪತ್ತು ಎಂಬತ್ತರ ದಶಕಗಳಲ್ಲಿ ಉತ್ತರ ಅಮೆರಿಕಾದಲ್ಲಿ ಮಹರ್ಷಿ ಮಹೇಶ ಯೋಗಿ ಅವರ `ಟ್ರಾನ್ಸ್‌ಡೆಂಟಲ್ ಮೆಡಿಟೇಷನ್' ಬಹಳ ಜನಪ್ರಿಯವಾಗಿತ್ತು. ಜನಸಾಮಾನ್ಯರು ಮಾತ್ರವಲ್ಲದೆ ಸಿನಿಮಾ ನಟಿಯರು, ಉದ್ಯೋಗಾಧಿಪತಿಗಳು, ವಿಜ್ಞಾನಿಗಳು ಅದರ ಆಕರ್ಷಣೆಗೆ ಬಿದ್ದರು. ಅಲ್ಲದೆ ಈ ಧ್ಯಾನವಿಧಾನದ ಪರಿಣಾಮವನ್ನು ವೈಜ್ಞಾನಿಕ ಆಧಾರದ ಮೇಲೆ ಸಮರ್ಥಿಸುವಂಥ ಪ್ರಯತ್ನಗಳೂ ನಡೆದವು.ಇಪ್ಪತ್ತನೆ ಶತಮಾನದಲ್ಲಿ ವೈಜ್ಞಾನಿಕ ಮೌಲ್ಯಗಳು ಪ್ರಚುರವಾದ ಕಾರಣ ಕ್ರೈಸ್ತಧರ್ಮದ ವಿಶ್ವಾಸಾಧಾರಿತ ಮೌಲ್ಯಗಳ ಬಗ್ಗೆ ಪಶ್ಚಿಮದಲ್ಲಿ  ಅಪನಂಬಿಕೆ ಹಬ್ಬತೊಡಗಿತು. ದೇವರ ಕಲ್ಪನೆಗೆ ಹೊರತಾದ ಮತ್ತು ವ್ಯಕ್ತಿಗತ ಅನುಭವಕ್ಕೆ ಒತ್ತುಕೊಡುವ ಮತ್ತು ಬಹುಮಟ್ಟಿಗೆ ತಾರ್ಕಿಕ ಪಾತಳಿಯ ಮೇಲೆ ನಿಂತ ಬೌದ್ಧ ಧರ್ಮದ ಜನಪ್ರಿಯತೆ ಈ ಬೆಳವಣಿಗೆಗೆ ದಾರಿ ಮಾಡಿಕೊಟ್ಟಿತು. ಆಸ್ತಿಕಧರ್ಮಗಳ ಬುನಾದಿ ಪ್ರಾರ್ಥನೆ; ಆದರೆ ಬುದ್ಧಶಾಸನದಲ್ಲಿ ಧ್ಯಾನವೇ ಪ್ರಧಾನ. ಇಂಥ ಧ್ಯಾನ ಸಂಸ್ಕೃತಿಯನ್ನು ವಿಪುಲವಾಗಿ ಬೆಳೆಸಿದ್ದ ಬೌದ್ಧ ಧರ್ಮ ಪಶ್ಚಿಮದ ನಾಡುಗಳಲ್ಲಿ ಜನಪ್ರಿಯತೆ ಪಡೆದು ಅಧಿಕಸಂಖ್ಯೆಯ ಜನ ಬೌದ್ಧಧ್ಯಾನ ಕ್ರಮಗಳಿಗೆ ಒಲಿದರು. ಇವತ್ತು ಅಮೆರಿಕಾದಲ್ಲಿ ಬೌದ್ಧಧರ್ಮ ಜನಪ್ರಿಯತೆಯಲ್ಲಿ ಎರಡನೆ ಸ್ಥಾನದಲ್ಲಿದೆ. ಥೇರವಾದ ಬೌದ್ಧಧರ್ಮದ ಜೊತೆಗೆ ಧ್ಯಾನಪ್ರಧಾನವಾದ ಜಪಾನಿನ ಝೆನ್, ಟಿಬೆಟ್ಟಿನ ವಜ್ರಾಯಾನ ಜನಮನವನ್ನು ಸೆಳೆದವು.ಪಶ್ಚಿಮದಲ್ಲಿ ವಿವೇಕಾನಂದರು ಶುರು ಮಾಡಿದರೆನ್ನಲಾದ  ಹಿಂದೂ  ಧರ್ಮದ ಆಧ್ಯಾತ್ಮಿಕ ಕ್ರಮಗಳೂ ಪಶ್ಚಿಮದಲ್ಲಿ ನೆಲೆಯೂರಿದವು. ರಾಮಕೃಷ್ಣಾಶ್ರಮದ ಶಾಖೆಗಳು, ಪರಮಹಂಸ ಯೋಗಾನಂದರ ಕ್ರಿಯಾಯೋಗ, ಸ್ವಾಮಿ ರಾಮತೀರ್ಥರ ವೇದಾಂತ, ಸ್ವಾಮಿ ಮುಕ್ತಾನಂದರ ಸಿದ್ಧಯೋಗ, ಸ್ವಾಮಿ ಲಕ್ಷ್ಮಣ ಜೂ ಅವರ ಕಾಶ್ಮೀರ ತಂತ್ರಯೋಗ, ಆಚಾರ್ಯ ರಜನೀಶರ ತಂತ್ರಪದ್ಧತಿ ಇತ್ಯಾದಿಗಳು ತಮ್ಮ ತಮ್ಮ ಮಟ್ಟಕ್ಕೆ ಜನಪ್ರಿಯವಾದವು. ಭಾರತದ ಎಲ್ಲೆಗಳನ್ನು ಎಂದೂ ಬಿಟ್ಟುಹೋಗದ ಸ್ವಾಮಿ ಶಿವಾನಂದರ ವಿಪುಲ ಸಂಖ್ಯೆಯ ಪುಸ್ತಕಗಳ ಮೂಲಕವೂ ಯೋಗದ ಪ್ರಚಾರ ದೊಡ್ಡ ಪ್ರಮಾಣದಲ್ಲಿ ನಡೆಯಿತು. ಅಲ್ಲದೆ ಅವರ ಶಿಷ್ಯರಾದ ಸ್ವಾಮಿ ಸತ್ಯಾನಂದ ಸರಸ್ವತಿ ಮತ್ತುಸ್ವಾಮಿ ವಿಷ್ಣು ದೇವಾನಂದರು ವ್ಯಾಪಕವಾಗಿ ವಿಶ್ವಪರ್ಯಟನೆ ಮಾಡಿ ಆಶ್ರಮಗಳನ್ನು ಕಟ್ಟಿ ಜಗತ್ತಿನಾದ್ಯಂತ ಯೋಗದ ಪ್ರಚಾರ ಮಾಡಿದರು. ಕ್ರೈಸ್ತಧರ್ಮದ ಜಡತೆಯಿಂದ ಮತ್ತು ಆಧುನಿಕ ಭೌತಿಕವಾದಿ ಮೌಲ್ಯಗಳ ಆಧ್ಯಾತ್ಮಿಕ ಶೂನ್ಯತೆಯಿಂದ ಬೇಸತ್ತ ಜನಗಣ ಸುಲಭವಾಗಿ ಈ ಪಂಥಗಳಿಂದ ಆಕರ್ಷಿತರಾದರು. ಪುಟ್ಟಪರ್ತಿ ಸಾಯಿಬಾಬಾ ಅವರಿಗೆ ಪಶ್ಚಿಮದಲ್ಲಿ ಪ್ರಚಾರ ದೊರಕಿದ್ದೂ ಈ ಹಿನ್ನೆಲೆಯಲ್ಲೇ. ಇವತ್ತು ಮಾತಾ ಅಮೃತಾನಂದಮಯಿಯವರಂತ ಸಂತರಿಗೆ ಪಶ್ಚಿಮದಲ್ಲಿರುವ ಜನಪ್ರಿಯತೆ ಅಭೂತಪೂರ್ವವಾದುದು.ಒಟ್ಟಾರೆಯಾಗಿ ಪಶ್ಚಿಮದ ನಾಡುಗಳಲ್ಲಿ ಸಂಭವಿಸಿದ ಸಾಂಪ್ರದಾಯಿಕ ಮೌಲ್ಯಗಳ ಕುಸಿತ, ಕುಟುಂಬಗಳ ಒಡೆಯುವಿಕೆ, ತತ್‌ಪರಿಣಾಮವಾದ ಮಾನಸಿಕ ತಲ್ಲಣಗಳ ವಾತಾವರಣ ಅಲ್ಲಿನ ಚೌಕಟ್ಟಿಗೆ ಹೊಸತಾದ ಆಧ್ಯಾತ್ಮಿಕ ಪ್ರವೃತ್ತಿಗಳಿಗೆ ಸ್ವೀಕೃತಿಯನ್ನುಂಟು ಮಾಡಿತು. ಆದ್ದರಿಂದ ಹಲವು ಸಲ ಈ ಆಧ್ಯಾತ್ಮಿಕ ಪದ್ಧತಿಗಳು ಸ್ಟಂಟುಗಳಾಗಿ ಫ್ಯಾಷನ್ನುಗಳಾಗಿ ಮಾರ್ಪಟ್ಟದ್ದೂ ಉಂಟು. ಇದರಿಂದ ಎಕ್ಸ್‌ಪೋರ್ಟ್ ಕ್ವಾಲಿಟಯ ಗುರುಗಳೂ ದೊಡ್ಡ ಪ್ರಮಾಣದಲ್ಲಿ ಹುಟ್ಟಿಕೊಂಡರು. ಜನರೂ ಅವರಿಗೆ ಬೇಸ್ತು ಬಿದ್ದರು. ಹೀಗೆ ಪಶ್ಚಿಮದ ಜನರನ್ನು ಸೆಳೆದದ್ದು ಕೇವಲ ಭಾರತಮೂಲವಾದ ಆಧ್ಯಾತ್ಮಿಕ ಪದ್ಧತಿಗಳಲ್ಲ. ಜಪಾನಿನ ರಿಂಗೇಕ್ಯೋ ಬೌದ್ಧಧರ್ಮ,ಇಸ್ಲಾಮೀಯ ನಾಡುಗಳ ಸೂಫಿ ಪಂಥಗಳು, ಚೀಣಿ ಯೋಗಕ್ರಮಗಳು ಪ್ರಚಾರಕ್ಕೆ ಬಂದವು. ಅವುಗಳ ನಡುವೆ ಹಲವು ಆಧ್ಯಾತ್ಮಿಕ ಮಿಶ್ರತಳಿಗಳೂ ಪೇಟಂಟುಗಳೂ ತಯಾರಾದವು. ಉದಾಹರಣೆಗೆ ಎಪ್ತತ್ತರ ದಶಕದಲ್ಲಿ ತುಂಬಾ ಪ್ರಭಾವಿಯಾಗಿದ್ದ  ಅಮೆರಿಕದ `ನ್ಯೂ ಲೆಫ್ಟ್' ನಲ್ಲಿ ಇಂತಹ ಎಷ್ಟೋ ವಿಪರ್ಯಾಸಗಳು ನಡೆದವು. ಅಸಾಂಪ್ರದಾಯಿಕ ಕ್ರೈಸ್ತಧರ್ಮದ ಆಚರಣೆಗಳೊಂದಿಗೆ ಈ ನವಪಂಥಗಳನ್ನು ಚೌಚೌ ಮಾಡಿ ಅನೇಕ ಹೊಸ ಪಂಥಗಳನ್ನು ಸೃಜಿಸಲಾಯಿತು. ಉದಾಹರಣೆಗೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ  `ಚರ್ಚ್ ಆಫ್ ಹೋಲಿ ಸ್ಪಿರಿಟ್'ಎಂಬ ಜಾಗವಿದೆ. ಅದರ ವಿಚಾರಗಳನುಸಾರ ಸ್ಪಿರಿಟ್ ಎಂದರೆ ಗುಂಡು. ಅಲ್ಲಿ ಯಾರು ಬೇಕಾದರೂ ಹೋಗಿ ಉಚಿತವಾಗಿ ಗುಂಡನ್ನು ಸೇವಿಸಿ  `ಆಧ್ಯಾತ್ಮಿಕ' ಉನ್ನತಿಯನ್ನು ಪಡೆಯಬಹುದು.ರೂಮಿ ಹೇಳಿದ ಹಾಗೆ ಹುಚ್ಚರ ನಡುವೆಯೇ ಜ್ಞಾನಿಯಿರುವುದು. ಖೋಟಾ ನಾಣ್ಯಗಳಿರುವುದರಿಂದಲೇ ಸಾಚಾ ನಾಣ್ಯಗಳಿರುವುದು. ಪ್ರತಿಯೊಬ್ಬನೂ ತನ್ನ ಬೆಳವಣಿಗೆಯ ಹಂತದನುಸಾರ ಅವುಗಳಲ್ಲಿ ತನಗೆ ಬೇಕಾದ್ದನ್ನು  ಆಯ್ದುಕೊಳ್ಳುತ್ತನೆಂಬುದು ನಿಜವಾದರೂ ಈ ಆಯ್ಕೆಗಳಲ್ಲಿ ಪ್ರಚಾರ, ಜಾಹಿರಾತುಗಳ ಪ್ರಭಾವಗಳೂ ನಿಚ್ಚಳವಾಗಿಯೆ ಇರುತ್ತವೆ. ಜೊತೆಗೆ ಈ ಪಂಥಗಳ ಸ್ವೀಕೃತಿಗೆ ಪೌರಸ್ತ್ಯವಾದೀ ಚಿಂತನೆಯೂ ಕಾರಣವಾಗಿದೆ.ಪಶ್ಚಿಮದ ಆಧ್ಯಾತ್ಮಿಕ ತೃಷೆಯ ಪೂರೈಕೆಗೆ ಅತ್ಯಂತ ದೊಡ್ಡಪ್ರಮಾಣದ ಪರಿಹಾರಗಳನ್ನು ಸರಬರಾಜು ಮಾಡಿರದ ಕೀರ್ತಿ ಬಹುಶಃ ಭಾರತಕ್ಕೇ ಸಲ್ಲಬೇಕು. ಅಲ್ಲದೆ ಪಶ್ಚಿಮದಲ್ಲಿ ಜಯಭೇರಿ ಹೊಡೆದ ಗುರುಗಳು ಮತ್ತವರ ಸಂಸ್ಥೆಗಳು ಪಶ್ಚಿಮಮುಖಿಯಾದ ಸಮಕಾಲೀನ ಭಾರತದಲ್ಲೂ ಜನಪ್ರಿಯತೆ ಪಡೆದದ್ದು ಸಹಜವಾಗಿಯೆ ಇದೆ. ಆಧುನೀಕರಣ ಮತ್ತು ನಂತರದ ಗ್ಲೋಬೀಕರಣಗಳ ಸುತ್ತುನೆಲೆಯಲ್ಲಿ ಭಾರತದಲ್ಲೂ ಸಾಂಪ್ರದಾಯಿಕ ಧರ್ಮಗಳ ಹಿಡಿತ ಸಡಿಲವಾಗುತ್ತಿದೆ. ಧರ್ಮಗಳನ್ನು ರಾಜಕೀಯ ಬಂಡವಾಳವಾಗಿ ಬಳಸುತ್ತಿರುವ ಪಕ್ಷಗಳು, ಸಂಘಟನೆಗಳು ಒತ್ತುಕೊಡುತ್ತಿರುವುದು ಧರ್ಮಗಳ ರಾಜಕಾರಣಕ್ಕೇ ಹೊರತು ಆಧ್ಯಾತ್ಮಿಕತೆಗಲ್ಲ. ಇದೇ ಸನ್ನಿವೇಶದಲ್ಲಿ ಧಾರ್ಮಿಕ ಸಂಸ್ಥೆಗಳ ಉದ್ಯಮೀಕರಣವೂ ಶುರುವಾಗಿದೆ.  ಆಧುನಿಕ ಪಂಥಗಳು ತಮ್ಮ ದ್ವಾರವನ್ನು ಎಲ್ಲ ಜಾತಿಗಳವರಿಗೂ ತೆರೆದಿರುವುದರ ಮಟ್ಟಿಗೆ ಜಾತ್ಯತೀತವಾಗಿರುವುದರಿಂದ ಅನೇಕರಿಗೆ ಅವುಗಳಲ್ಲಿ ಪ್ರವೇಶ, ದೀಕ್ಷೆಗಳನ್ನು ಪಡೆಯುವುದು ಸಾಮಾಜಿಕ ಮೇಲ್ಚಲನೆಯ ಮಾಧ್ಯಮವೂ ಆಗಿದೆ. ಮೇಲುನೋಟಕ್ಕೆ ಜಾತ್ಯತೀತವಾಗಿ ಕಂಡರೂ ಈ ಸಂಸ್ಥೆಗಳು ಸಾಂಪ್ರದಾಯಿಕ ವರ್ಣಾಶ್ರಮಪ್ರಧಾನ  ನಂಬಿಕೆಗಳ ಆಗರವಾಗಿರುವ ಸತ್ಯ ಎಲ್ಲರಿಗೂ ಗೋಚರವಲ್ಲ.ಉದಾಹರಣೆಗೆ ಜಗ್ಗಿ ವಾಸುದೇವ್‌ರಂಥ ಪ್ರಸಿದ್ಧ ಆಧ್ಯಾತ್ಮಿಕ ಗುರುಗಳು ಕಟ್ಟಿರುವ ಸಂಸ್ಥೆಗಳು ಬೃಹತ್ ಉದ್ಯಮಗಳ ರೂಪ ತಳೆಯುತ್ತಿವೆ. ಇಂಥಾ ಪರಿಸ್ಥಿತಿಯಲ್ಲಿ ಹಲವು ಪ್ರಶ್ನಾರ್ಹವಾದ ಸುಳಿಗಳಲ್ಲಿ ಸಿಲುಕಿಕೊಂಡಿರುವ ಆಧ್ಯಾತ್ಮಿಕತೆಯ ನೈತಿಕತೆ ಏನು?ಇದೇ ಪ್ರಶ್ನೆಯನ್ನು ಇನ್ನೊಂದು ಬಗೆಯಲ್ಲಿ ಕೇಳಿದರೆ ಆಧುನಿಕ ಪ್ರಪಂಚದಲ್ಲಿ ಧ್ಯಾನದ ಜರೂರಿಯೇನು? ಈ ಪಂಥಗಳು ಮನೋವಿಕಾಸಕ್ಕೆ ಹಲವು ಮಂತ್ರ-ತಂತ್ರ-ವಿಧಿಗಳನ್ನೂ ಬೋಧಿಸುವುದು ನಿಜವಾದರೂ ಅವುಗಳ ಚರ್ಚೆಗೆ ಸದ್ಯ ನಾವಿಳಿಯುವುದು ಬೇಡ. ಹಲವು ತೆರನ ಧ್ಯಾನಕ್ರಮಗಳ ಹಾದಿಗಳನ್ನು ತುಳಿದಿರುವಂಥ ನನ್ನನ್ನು ಈ ಪ್ರಶ್ನೆ ಕಾಡುತ್ತಿದೆ.ಎಲ್ಲ ಸಮಸ್ಯೆಗಳಿಗೂ ತರ್ಕ ಮತ್ತು ವಿಚಾರಗಳ ಮೂಲಕ ಉತ್ತರ ಕಂಡುಕೊಂಡವರನ್ನು ಈ ಸಮಸ್ಯೆ ಕಾಡುವುದಿಲ್ಲ. ತಮ್ಮ ಜಾತಿಕುಲಗಳ ಆಚರಣೆಗಳನ್ನು, ತಾವು ಪೂರ್ತಿ ನಂಬಿದ ಗುರುಮಠಗಳ ಆಚರಣೆಗಳನ್ನು  ಅನುಕರಣಶೀಲರಾಗಿ ಪಾಲಿಸುವವರನ್ನೂ ಈ ಪ್ರಶ್ನೆ ಕಾಡುವುದಿಲ್ಲ.ಒಂದು ಸೂಫಿ ಕತೆ ನೆನಪಾಗುತ್ತಿದೆ. ಒಬ್ಬನಿದ್ದ. ಅವನಿಗೆ ಒಂದು ದಿನ ಸಿಹಿತಿಂಡಿ ತಿನ್ನಬೇಕೆಂಬ ಖಾಯಿಷ್ ತೀವ್ರವಾಗಿ ಬಂತು. ಆದರೆ ಅವನ ಒಳದನಿ ಪಿಸುಗುಡುತ್ತಿತ್ತು: ಸಿಹಿ ತಿಂದರೆ ನಿನಗೆ ದೊಡ್ಡ ಕೇಡು ಸಂಭವಿಸುತ್ತದೆ. ಅವನಿಗೆ ಸಿಹಿಯ ಬಯಕೆ ಅದೆಷ್ಟು ತೀವ್ರವಾಯಿತೆಂದರೆ ಅವನು ಒಳದನಿಯ ಎಚ್ಚರಿಕೆಯನ್ನು ಗಾಳಿಗೆ ತೂರಿ ಸಿಹಿ ತಿಂದುಬಿಟ್ಟ. ಮರುದಿನ ಅವನ ಮಗನಿಗೆ ಅನಿರೀಕ್ಷಿತ ಸಾವು ಬಂತು. ಈ ಅನುಭವವನ್ನು ಅವನು ತನ್ನ ಮುರ್ಷಿದನಿಗೆ ಹೇಳಿದಾಗ ಆ ಸೂಫಿ ಗುರು ಹೇಳಿದ: “ಈ ಪ್ರಪಂಚದಲ್ಲಿ ತರ್ಕವಿದ್ಯೆಯನ್ನೂ ಮೀರಿದ ಹಲವು ಜ್ಞಾನಗಳಿವೆ.ಅಂಥ ಜ್ಞಾನದಿಂದ ಬಂದ ಎಚ್ಚರಿಕೆಯನ್ನು ನೀನು ನಿಗಾ ಮಾಡಲಿಲ್ಲ”......ಕಾರ್ಕಾರಣದ ಅಧಾರದ ಮೇಲೆ ಅರ್ಥ ಮಾಡಿಕೊಳ್ಳುವ ಘಟನೆಗಳ ಅನುಭವ ನಮ್ಮೆಲ್ಲರಿಗೂ ಆಗುತ್ತಿರುತ್ತದೆ. ಅವಕ್ಕೆ ವಿಚಾರವಂತರೆ ವೈಚಾರಿಕ ಕಾರಣಗಳನ್ನು ಹುಡುಕಿಕೊಳ್ಳುತ್ತಾರೆ. ಬದುಕಿನಲ್ಲಿ ನಡೆಯುವ ತರ್ಕಕ್ಕೆ ಸಿಕ್ಕದ ಘಟನೆಗಳಿಗೆ ಭೌತಿಕ ಕಾರಣ ಹುಡುಕುತ್ತಾರೆ. ಇದು ಸಾಮಾಜಿಕ ವ್ಯವಸ್ಥೆಯೆಂದು ಕೆಲವರು ಬಗೆದರೆ ಇನ್ನು ಕೆಲವರು ಮನೋವೈಜ್ಞಾನಿಕ ಕಾರಣ ಹುಡುಕುತ್ತಾರೆ. ನಂಬಿಗಸ್ಥರಿಗಂತೂ ಸಮಸ್ಯೆಯೇ ಇಲ್ಲ. ಅವರು ಅದನ್ನು ತಮ್ಮ ವಿಧಿಯೆಂದೋ, ಭಗವದಿಚ್ಛೆಯೆಂದೋ ಗ್ರಹಗತಿಯೆಂದೋ ಸಮಾಧಾನ ಪಟ್ಟುಕೊಳ್ಳುತ್ತಾರೆ.ಆದರೆ ಸಿದ್ಧ ಭೌತಿಕ-ತಾರ್ಕಿಕ ಮನೋಭಾವದವರನ್ನಾಗಲಿ ಅಥವಾ  ಸಿದ್ಧನಂಬಿಕೆಗಳಿಗಾತುಕೊಂಡವರನ್ನಾಗಲಿ ಕಾಡದ  ಸವಾಲುಗಳು ತೆರೆದ ಮನದವರನ್ನು ಕಾಡುತ್ತದೆ.ನಮ್ಮ ಬದುಕಿಗಗತ್ಯವಾದ ಕೆಲವು ಪ್ರವೃತ್ತಿಗಳು ನಮಗೆ ತರ್ಕಮೂಲವಾದ ನೆಲೆಗಳಿಂದ ಬಂದವಲ್ಲ. ಉದಾಹರಣೆಗೆ ಸಿಗರೇಟು ಸೇವನೆ ಹಾನಿಕರವೆಂದು ಎಲ್ಲರಿಗೂ ಗೊತ್ತು. ಆದರೆ ಜನ ಸಿಗರೇಟು ಯಾಕೆ ಸೇದುತ್ತಾರೆ? ಕೊಲೆ, ಮಾನಭಂಗ, ಕೋಮುವಾದಿ ಹಿಂಸಾಚಾರಗಳನ್ನು ಮಾಡುವ ಎಲ್ಲರೂ ತಾರ್ಕಿಕವಾಗಿ ಯೋಚಿಸಿ ಈ ಅಪರಾಧಗಳನ್ನು ಮಾಡುವುದಿಲ್ಲ. ಇದೇ ರೀತಿ ಕರುಣೆಯಂಥ ಭಾವನೆ ನಮಗೆ ಬರುವುದು ತರ್ಕಮೂಲವಾಗಲ್ಲ. ವಿಚಾರ ಮತ್ತು ತರ್ಕಗಳ ತೆಕ್ಕೆಗೆ ಸಿಗದ ಮಾನಸಿಕ ಶಕ್ತಿಗಳು ಈ ಸಂದರ್ಭಗಳಲ್ಲಿ ಕೆಲಸ ಮಾಡುತ್ತಿರುತ್ತವೆ.ವಿಚಾರ ಮತ್ತು ತರ್ಕಗಳಿಗೆ ಹೊರತಾದ ಮಾನಸಿಕ ಪ್ರವೃತ್ತಿಗಳನ್ನು ಇತ್ಯಾತ್ಮಕವಾಗಿ ಬೆಳೆಸುವುದಕ್ಕಾಗಿಯೇ ಧ್ಯಾನಕ್ರಮಗಳು ಸೃಷ್ಟಿಯಾಗಿರುವುದು. ಜಗತ್ತಿನ ಬಗ್ಗೆ, ಮನಸಿನ ಬಗ್ಗೆ ಅತ್ಯಂತವಾಗಿ ತರ್ಕಿಸಿರುವ ನಾಸ್ತಿಕವಾದಿ ಬೌದ್ಧರು, ಜೈನರು ಕೂಡಾ ಈ ಕಾರಣದಿಂದಲೇ ಧ್ಯಾನಕ್ಕೆ ಒತ್ತು ನೀಡಿರುವುದು.

ನಮ್ಮ ನಡುವೆ ಇದ್ದ ಅತ್ಯಂತ ವಿಲಕ್ಷಣ ಚಿಂತಕರೂ ಬರಹಗಾರರೂ ಆಗಿದ್ದ ಶಂಕರಮೊಕಾಶಿ ಪುಣೇಕರರು ತಮ್ಮ ಒಂದು ಭಾಷಣದಲ್ಲಿ ಹೇಳಿದರು: ಭಾರತದ ಎಲ್ಲ ದಾರ್ಶನಿಕಪಂಥಗಳೂ ನಾಸ್ತಿಕವಾದಿಯೇ. ಯಾಕೆಂದರೆ ಅವುಗಳಲ್ಲಿ ಯಾವುವೂ ಯಹೂದಿಧರ್ಮಗಳ ರೀತಿಯಲ್ಲಿ ಸೃಷ್ಟಿಕರ್ತ ಭಗವಂತನ ಬಗ್ಗೆ ಮಾತಾಡುವುದಿಲ್ಲ” ಆದ್ದರಿಂದಲೇ ಧ್ಯಾನಕ್ಕೆ ಭಾರತೀಯರಲ್ಲಿ ವಿಶೇಷ ಸ್ಥಾನವಿದೆ. ಧ್ಯಾನಕ್ರಮಗಳಿಗೆ ಇತರ ಸಂಸ್ಕೃತಿಗಳಲ್ಲಿ ಉತ್ತರ ಯೂರೋಪಿನ ನಾರ್ಡಿಕ್ ಜನಾಂಗದ ರೂನ್ ಪರಂಪರೆಯಲ್ಲಿ, ಇಂಗ್ಲೆಂಡು-ಐರ‌್ಲೆಂಡುಗಳ ಬಾರ್ಡಿಕ್ ಪರಂಪರೆಯಲ್ಲಿ, ಮಧ್ಯಯುಗದ ಕ್ಯಾಥೊಲಿಕ್ ಪರಂಪರೆಯಲ್ಲಿ, ಯಹೂದಿಗಳ ಕಬ್ಬಲಾ ಪಂಥಗಳಲ್ಲಿ, ಚೀನಾದ ತಾಓ ಪರಂಪರೆಯಲ್ಲಿ, ಸೂಫಿ ಪಂಥಗಳಲ್ಲಿ, ಪುರಾತನ ಸಂಸ್ಕೃತಿಗಳ ಆಚರಣೆಗಳಲ್ಲಿ ಜಾಗವಿರುವುದು ನಿಜವಾದರೂ ಧ್ಯಾನಕ್ರಮವನ್ನು ಅತ್ಯಂತ ವಿಸ್ತೃತವಾಗಿ, ವಿವರಿಸಿದ ಬುದ್ಧನ  ಸತಿಪಠ್ಠಾನ ಸುತ್ತ, ಆಚಾರ್ಯ ಬುದ್ಧಘೋಷನ  ವಿಸುದ್ಧಿ ಮಾಗ್ಗ ,ಕಾಶ್ಮೀರ ಶೈವ ಪರಂಪರೆಯ  `ವಿಜ್ಞಾನ ಭೈರವ' ದಂಥ ಗ್ರಂಥಗಳು ಇತರ ಪರಂಪರೆಗಳಲ್ಲಿ ಕಾಣಸಿಗುವುದಿಲ್ಲ. ವಿಷಯಕ್ಕೆ ಸಂಬಂಧಿಸಿದ ವ್ಯವಸ್ಥಿತ ಚಿಂತನೆಯನ್ನು ವಿಜ್ಞಾನವೆಂದು ಬಗೆಯುವುದಾದರೆ ಭಾರತೀಯ ಪಂಥಗಳು ಧ್ಯಾನವನ್ನು ಒಂದು ವಿಜ್ಞಾನವನ್ನಾಗಿ ಬೆಳೆಸಿದವು. ಗ್ರಂಥಸ್ಥವಾದ ಪರಂಪರೆಗಳ ಜೊತೆಗೆ ಮೌಖಿಕ ಪರಂಪರೆಗಳಲ್ಲಿರುವ ಧ್ಯಾನವ್ಯವಸ್ಥೆಗಳು ವಿಪುಲವಾಗಿವೆ.ಪ್ರತ್ಯಕ್ಷಾನುಭವದ ಧ್ಯಾನಮಾರ್ಗದ ಅನೇಕ ಸಿದ್ಧರೂಪಗಳನ್ನು ಹಲವು ವಿಕೃತ ರೂಪಗಳನ್ನೂ ಇಂದಿನ ಯೋಗ ಮತ್ತು ಧರ್ಮ ಪಂಥಗಳು ಪ್ರಚಾರ ಮಾಡುತ್ತಿವೆ.ಧ್ಯಾನದ ಮೂಲಕ ಪವಾಡಾತ್ಮಕ ಸಿದ್ಧಿಗಳನ್ನು ವಶಪಡಿಸಿಕೊಳ್ಳಬಹುದೆಂದೂ ನಮ್ಮ ಬದುಕಿನಲ್ಲಿ ಅಭೂತಪೂರ್ವವಾದ ಮಾರ್ಪಾಟುಗಳನ್ನು ತರಬಹುದೆಂದೂ ಸಾರುತ್ತಿವೆ.ಇಂಥ ಅಂತೆ-ಕಂತೆಗಳ ಧ್ಯಾನದ ಆಚರಣೆ ನಮಗೆ ಒಳಿತಿಗಿಂತಾ ಕೇಡನ್ನುಂಟು ಮಾಡುತ್ತಿವೆ.ಮನುಷ್ಯರ ಪ್ರವೃತ್ತಿಗಳು, ರುಚಿಗಳು ಹಲವಾಗಿರುವಂತೆ ಧ್ಯಾನ ಮಾರ್ಗಗಳೂ ಹಲವು. ಆದರೆ ಇಂದು ಬಹುತೇಕ ಯೋಗಪಂಥಗಳು ಇಂದಿನ ಜರೂರಿಗಳಿಗೆ ಒಗ್ಗದ ವೇದಾಂತ-ಪತಂಜಲಿ ಯೋಗದ ಕ್ರಮವನ್ನು ಏಕಮೇವ ಧ್ಯಾನಕ್ರಮವೆಂಬ ಬಗೆಯಲ್ಲಿ ಪ್ರಚಾರ ಮಾಡುತ್ತಿವೆ. ಗೋಯೆಂಕಾರಂಥವರು ಪ್ರಚಾರ ಮಾಡುತ್ತಿರುವ ಬೌದ್ಧ ಧ್ಯಾನಕ್ರಮಗಳೂ ಎಲ್ಲರಿಗೂ ಸರಿಹೊಂದುವಂಥವಲ್ಲ. ಸಾಂಪ್ರದಾಯಿಕವಾಗಿ ಸಣ್ಣಪಂಥಗಳ ಚೌಕಟ್ಟಲ್ಲಿ ನಿರ್ಮಿತವಾದ ಕ್ರಮಗಳು ಪ್ರಪಂಚದ ದಂದುಗಗಳಿಗೆ ಎಷ್ಟರ ಮಟ್ಟಿಗೆ ನೆರವು ನೀಡಬಲ್ಲುವು? ಹಲವು ಸಲ ಧ್ಯಾನವನ್ನು ಜನ ಬದುಕಿನ ಸಮಸ್ಯೆಗಳಿಂದ ಪಲಾಯನ ಮಾಡಲು ಬಳಸಿಕೊಳ್ಳುತ್ತಾರೆ. ಹೀಗಾದಾಗ ದೈಹಿಕ ಮಾನಸಿಕ ವಿಕಾಸವನ್ನುಂಟು ಮಾಡುವುದಕ್ಕೆ ಬದಲಾಗಿ ಬರೀ ಒಂದು ಹವ್ಯಾಸವಾಗಿ ಮನೋವಿಕಾಸಕ್ಕೆ ಅಡ್ಡಿಯೂ ಆಗಬಲ್ಲದು.ಧ್ಯಾನದ ಇತ್ಯಾತ್ಮಕ ಬಳಕೆಗೆ ಇನ್ನೊಂದು ಅಡ್ಡಿಯೆಂದರೆ ಗುರುಗಳ ದಾದಾಗಿರಿ. ಎಲ್ಲ ಕ್ಷೇತ್ರಗಳಲ್ಲಿರುವಂತೆ ಧ್ಯಾನಕ್ಷೇತ್ರದಲ್ಲೂ ಮಾರ್ಗದರ್ಶಕನ ಅಗತ್ಯವಿದೆ. ಆದರೆ ನಮ್ಮ ಆಧ್ಯಾತ್ಮಿಕ ಪರಂಪರೆಗಳಲ್ಲಿ ಗುರುವೆಂದರೆ ಒಬ್ಬ ವ್ಯಕ್ತಿಯಲ್ಲ, ಒಂದು ತತ್ವ. ಆ ತತ್ವವನ್ನು ಯಾರೂ ಪೂರ್ಣವಾಗಿ ಮೈತಾಳಲಾರರು. ಎಲ್ಲರಂತೆ ಗುರುಗಳೂ ಮನುಷ್ಯರೇ ಆಗಿರುವ ಕಾರಣ ಅವರಲ್ಲಿ ಮಾನವ ದೌರ್ಬಲ್ಯಗಳಿರುವುದೂ ಸಹಜ. ಆದರೆ ತಾವು ಎದುರಿಸಲಾಗದ ಎಲ್ಲ ಸಮಸ್ಯೆಗಳಿಗೂ ಗುರುವೇ ಅಂತಿಮ ಉತ್ತರವೆಂದು ಬಗೆದ ಮುಗ್ಧ ಅಥವಾ ಸೋಂಬೇರಿ ಶಿಷ್ಯರು ಕುರುಡುಕುರುಡಾಗಿ ಗುರುವಿನ ಅಂಧಾನುಕರಣೆಗಿಳಿಯುತ್ತಾರೆ. ಶಿಷ್ಯರ ಧನ-ಕನಕ-ವಸ್ತುವಾಹನಗಳ ರುಚಿ ನೋಡಿದ ಗುರುಗಳೂ ಅವರ ಅಂಧಾನುಕರಣೆಗೆ ಕುಮ್ಮಕ್ಕು ಕೊಟ್ಟು ತಮ್ಮ ಬೇಳೆಕಾಳು ಬೇಯಿಸಿಕೊಳ್ಳತೊಡಗುತ್ತಾರೆ. ಇನ್ನಷ್ಟು ಜನ ಗುರುವೆಂದರೆ ಒಬ್ಬ ಅತಿಮಾನವವ್ಯಕ್ತಿತ್ವವೆಂಬ ತಮ್ಮ ಪೂರ್ವಕಲ್ಪನೆಗೆ ಭಂಗ ಬಂದಾಗ ಧ್ಯಾನದ ಬಗ್ಗೆ, ಗುರುಗಳ ಬಗ್ಗೆ ಅತಿಸಿನಿಕರಾಗಿ ತಮಗೆ ಸಿಗಬಹುದಾದ್ದರಿಂದ ವಂಚಿತರಾಗುತ್ತಾರೆ. ಈ ಕ್ಷೇತ್ರದಲ್ಲೂ ಹಂಸಕ್ಷೀರನ್ಯಾಯದ ಅಗತ್ಯವಿದೆ. ಜೊತೆಗೆ ಒಬ್ಬನಿಗೆ ಒಬ್ಬನೇ ಗುರುವೆನ್ನುವುದೂ ಒಂದು ಮೂಢನಂಬಿಕೆ. ಆಚಾರ್ಯ ಅಭಿನವಗುಪ್ತರಿಗೆ, ರಾಮಕೃಷ್ಣಪರಮಹಂಸರಿಗೆ ಒಂದಕ್ಕಿಂತಾ ಹೆಚ್ಚಿನ ಗುರುಗಳಿದ್ದರು.ಆದರೆ ಅಂತಿಮಗುರುವಿರುವುದು ನಮ್ಮ ಅಂತರಂಗದಲ್ಲೇ. ಆದ್ದರಿಂದಲೇ ಬುದ್ಧ ಹೇಳಿದ:  ಆತ್ತಾಹಿ ಆತ್ತನೋ ನಾಥೋ.  (ನಿನಗೆ ನೀನೇ ಗುರು). ಕಾಶ್ಮೀರ ಶೈವಪರಂಪರೆಯಲ್ಲಿ ನಮ್ಮಳಗಿನ ಪರಮಶಿವ ತತ್ವವನ್ನೇ ಗುರುವೆಂದು ನಿರ್ದೇಶಿಸಲಾಗಿದೆ.ವೈರಾಗ್ಯಶೀಲತೆ ಎಲ್ಲರಿಗೂ ಹೊಂದುವ ಗುಣವಲ್ಲ. ಅಲ್ಲದೆ ಧ್ಯಾನದಿಂದ ಲಾಭ ಪಡೆಯಲು ಕೃತಕವಾಗಿ ಆಸೆಗಳನ್ನು ಹತ್ತಿಕ್ಕುವ ಅಗತ್ಯವೂ ಇಲ್ಲ. ಬದುಕಿನ ಚಲುವಿಗೆ ಮನಸ್ಸನ್ನು ಮುಚ್ಚುವ ಧ್ಯಾನಕ್ಕೆ ಇಂದು ಯಾವ ಜಾಗವೂ ಇಲ್ಲ. ಆದರೆ ನಮ್ಮ ವೈಯಕ್ತಿಕ ಮತ್ತು ಸಾರ್ವತ್ರಿಕ ಒಳಿತಿಗೆ ಹಿತವನ್ನುಂಟುಮಾಡಬಲ್ಲ ಧ್ಯಾನಕ್ರಮಗಳು ಹಲವಿವೆ. ಅವುಗಳಲ್ಲಿ ಕೆಲವನ್ನು ಮುಂದಿನ ಅಂಕಣದಲ್ಲಿ ಪರಿಚಯಿಸುತ್ತೇನೆ.

ನಿಮ್ಮ ಅನಿಸಿಕೆ ತಿಳಿಸಿ:editpagefeedback@prajavani.co.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.