ಭಾನುವಾರ, ಮೇ 9, 2021
19 °C

ಮೂರ್ತಿ ಮತ್ತು ಅಮೂರ್ತತೆಗಳ ನಡುವೆ

ಎಚ್.ಎಸ್.ಶಿವಪ್ರಕಾಶ್ Updated:

ಅಕ್ಷರ ಗಾತ್ರ : | |

ಮೂರ್ತಿ ಮತ್ತು ಅಮೂರ್ತತೆಗಳ ನಡುವೆ

ಎರಡು ಸಾವಿರ ವರ್ಷಗಳ ಭಾರತೀಯ ಪರಂಪರೆ­ಗಳಲ್ಲಿ ಎಲ್ಲ ಬಗೆಯ ವಿಶ್ವಾಸ­ಗ­ಳಿಗೂ ಜಾಗ ಕೊಡಲಾಗಿದೆ. ನಮ್ಮ ಧಾರ್ಮಿಕ ಪರಂ­ಪರೆ ಏಕಮುಖವಲ್ಲವೆನ್ನುವುದೇ ಅದರ ಪ್ರಧಾನ ವೈಶಿಷ್ಟ್ಯ. ಪುಷ್ಪದಂತಾ­ಚಾ­ರ್ಯನ ‘ಶಿವ­ಮಹಿಮ್ನಾ ಸ್ತೋತ್ರ’ದಲ್ಲಿ  ‘ಋಜು ಕುಟಿಲ ನಾನಾ ಪಥಜುಷಾಂ ನೃಣಾನೇಕೋ ಗಮ್ಯ­ಸ್ತ್ವ­ಮಸಿ ನದೀನಾಂ ಸಾಗರಂ ಇವ’ ಎನ್ನ­ಲಾಗಿದೆ.ಹೇಗೆ ನೇರವಾದ, ಕುಟಿಲವಾದ ದಾರಿ­ಗಳನ್ನು ಕ್ರಮಿಸಿ ನದಿಗಳು ಸಾಗರವನ್ನೇ ಕೊನೆಗೆ ಸೇರು­ತ್ತವೋ ಹಾಗೆಯೇ ಉಪಾಸನೆಯ ಎಲ್ಲ ಮಾರ್ಗ­ಗ­ಳೂ ಒಂದೇ ಗುರಿಯನ್ನು ತಲುಪುತ್ತವೆ ಎಂಬುದು ಆ ಮಾತಿನ ಅರ್ಥ. ಸ್ವಾಮಿ ವಿವೇಕಾ­ನಂ­ದರು ತಮ್ಮ ಇತಿಹಾಸಪ್ರಸಿದ್ಧ ಷಿಕಾಗೊ ಭಾಷಣ­­ದಲ್ಲಿ ಭಾರತೀಯ ಪರಂ­ಪರೆಯ ವೈಶಿಷ್ಟ್ಯ­ವನ್ನು ವಿವರಿಸಲು ಉಲ್ಲೇಖಿಸಿದ್ದು ಈ ವಾಕ್ಯವನ್ನೇ.ಯಹೂದಿ ಮೂಲದ ಧರ್ಮಗಳ ದೃಷ್ಟಿಗೂ ಭಾರ­ತೀಯ ಧರ್ಮಗಳ ಮೂಲದೃಷ್ಟಿಗೂ ಇರುವ ಒಂದು ಮೂಲಭೂತ ವ್ಯತ್ಯಾಸವನ್ನು ಮರೆ­ಯುವ ಹಾಗಿಲ್ಲ. ಯಹೂದಿ ಮೂಲದ ಧಾರ್ಮಿಕ ಕಲ್ಪನೆಯ ಪ್ರಕಾರ ದೇವರಿಗೊಂದು ಮಾನವರೂಪಿ ಆಕಾರ ನೀಡುವುದು ಪಾಪ.ಆದ್ದರಿಂದ ಮೂರ್ತಿಗಳನ್ನು ಮುರಿಯುವುದು, ದೇಗುಲಗಳನ್ನು ಕೆಡಹುವುದು ಅವರಿಗೆ ಧಾರ್ಮಿಕ ಕರ್ತವ್ಯ. ಈ ಮತಾಂಧ ದೃಷ್ಟಿಯಿಂದ ಏಷ್ಯಾದಲ್ಲಿ, ದಕ್ಷಿಣ ಅಮೆರಿಕದಲ್ಲಿ, ಆಫ್ರಿಕಾ­ದಲ್ಲಿ ಅದೆಷ್ಟೋ ದೇವತಾಮೂರ್ತಿಗಳು ನೆಲ ಕಚ್ಚಿದವು. ಆದರೆ ಸ್ವತಃ ಮೂರ್ತಿಭಂಜಕರೂ ಸಂಕೇತಗಳಿಂದ ಬಿಡುಗಡೆ ಹೊಂದಲಿಲ್ಲ. ಅಮೂರ್ತ ಸಂಕೇತಗಳ ಅರಾಧನೆಗೆ ಅವರು ಮುಂದಾ­ದುದರಿಂದ ಈ ಅಮೂರ್ತ ಸಂಕೇತ­ಗಳೇ ಮೂರ್ತಿಯ ಸ್ಥಾನವನ್ನು ಆಕ್ರಮಿಸಿ­ದವು. ಕ್ರೈಸ್ತ ಧರ್ಮದಲ್ಲಿ ಮೂರ್ತಿ ಆರಾಧನೆ ಹಿಂಬಾ­ಗಿ­ಲಿನಿಂದ ಹಿಂತಿರುಗಿತು. ಯೂರೋ­ಪಿನ ಮಾತೃ­ದೇವತೆಗಳು ರೋಮನ್ ಕ್ಯಾಥೊಲಿಸಿಸಂನ ವರ್ಜಿನ್ ಮರಿಯಾಳ ಮೂರ್ತಿ­ಗಳ ರೂಪದಲ್ಲಿ ಆರಾಧಿತವಾಗ­ತೊಡ­ಗಿದವು.ಶಿಲುಬೆಯೇರಿದ ಯೇಸುವಿನ ಪ್ರತಿಮೆಗಳು ಕ್ರೈಸ್ತರಿಗೆ ಪವಿತ್ರ ಮೂರ್ತಿ­ಗ­ಳಾದವು. ಮುಂದೆ ಇಂಗ್ಲೆಂಡಿನಲ್ಲಿ ಪ್ಯೂರಿಟನ್ನರು ಮೇಲುಗೈ ಪಡೆದಾಗ ಅವರು ರೋಮನ್ ಕ್ಯಾಥೊಲಿಕರನ್ನು ಮೂರ್ತಿಪೂಜಕ­ರೆಂದು ನಿಂದಿಸಿದರು. ಆದರೆ ಅವರೂ ಶಿಲುಬೆ­ಯನ್ನು ಪವಿತ್ರವೆಂದು ಒಪ್ಪಿಕೊಳ್ಳುವುದರಿಂದ ಅವರೂ ಸಾಂಕೇತಿಕತೆಯನ್ನು ಬಿಡಲಾಗಲಿಲ್ಲ. ಅವಸ್ಥಾತ್ರಯಗಳನ್ನು ದಾಟುವ ತನಕ ನಾಮ-ರೂಪಗಳ ವಾಸನೆ ನಮ್ಮನ್ನು ಬಿಡುವುದಿಲ್ಲ.ಭಾರತದ ನಿರೀಶ್ವರವಾದಿ ಧರ್ಮಗಳಾದ ಬೌದ್ಧ ಮತ್ತು ಜೈನ ಧರ್ಮಗಳಲ್ಲೂ ಮೂರ್ತಿ­ಪೂಜೆ­ಯಿದೆ. ಎಲ್ಲ ಬೌದ್ಧರಿಗೂ ಬುದ್ಧಮೂರ್ತಿ­ಗಳು ಪವಿತ್ರ ಮತ್ತು ಪೂಜನೀಯ. ಥೇರವಾದಿ ಬೌದ್ಧಧರ್ಮ ಪ್ರಧಾನವಾದ ಶ್ರೀಲಂಕಾ, ಮ್ಯಾನ್ಮಾರ್ ಮುಂತಾದ ಕಡೆ ಬೌದ್ಧ ವಿಹಾರ­ಗಳಲ್ಲಿ ಸುಂದರ ಬುದ್ಧ ಮೂರ್ತಿಗಳು ಕಂಗೊಳಿ­ಸು­ತ್ತವೆ. ಅವು ಬೌದ್ಧಧರ್ಮೀಯರ ಶ್ರದ್ಧೆಯ ಕೇಂದ್ರ­ಗಳಾಗಿವೆ. ಮಹಾಯಾನ ಬೌದ್ಧಧರ್ಮ ಪ್ರಧಾನ­ವಾದ ಚೀನಾ, ಜಪಾನ್ ಮುಂತಾದ ದೇಶಗಳಲ್ಲಿ ಮೂರ್ತಿಪೂಜೆಯ ಮಹತ್ವ ಇನ್ನೂ ಹೆಚ್ಚಿನದು.ಬುದ್ಧನೆಂದರೆ ಅದು ಮಾನ­ವಾಂತ­ರಂಗದ ಒಂದು ಜಾಗೃತ ಹಂತವೆಂದು ಹೇಳುವ ಜೆನ್ ಪಂಥದ ಬೌದ್ಧ ಮಂದಿರಗಳಲ್ಲೂ  ಬುದ್ಧತ್ವದ ಹಲವು ಆಯಾಮಗಳನ್ನು ಸಂಕೇತಿ­ಸುವ ಸ್ತ್ರೀ-ಪುರುಷ ದೇವತಾಮೂರ್ತಿಗಳು ಬುದ್ಧಮೂರ್ತಿಗಳೊಂದಿಗೆ ಪೂಜಿತವಾಗುತ್ತವೆ. ನಾರಾ­ದಲ್ಲಿರುವ ಜಗತ್ ಪ್ರಸಿದ್ಧ ಬೌದ್ಧ ವಿಹಾರ­ದಲ್ಲಿ ಬುದ್ಧನ ಬೃಹತ್ ಮರದ ಪ್ರತಿಮೆ ಆರಾಧನೆಯ ವಸ್ತುವಾದರೆ, ಕ್ಯೋತೋ ನಗರದ ಪವಿತ್ರಚಿಲುಮೆಯ ದೇವಸ್ಥಾನದಲ್ಲಿ ಬುದ್ಧನ ಕರುಣೆಯ ಸ್ತ್ರೀರೂಪವಾದ ಕ್ವೆಂಗಾನ್ ದೇವ­ತೆಯ ಪೂಜೆ ನಡೆಯುತ್ತಾ ಬಂದಿದೆ. ಜೈನ­ಮಂದಿ­ರ­­ಗಳಲ್ಲಿ ಆ ಪರಂಪರೆಯ ಅಗ್ಗಳ­(ಶ್ರೇಷ್ಠ)ರಾದ ತೀರ್ಥಂಕರರ ಮನೋಹರ ಮೂರ್ತಿಗಳು ಜೈನರ ಧಾರ್ಮಿಕ ಶ್ರದ್ಧೆಯ ಆಗರಗಳಾಗಿವೆ.ಕ್ರೈಸ್ತಧರ್ಮಪೂರ್ವ ಯೂರೋಪು ಮತ್ತು ದಕ್ಷಿಣ ಅಮೆರಿಕಗಳಲ್ಲಿ, ಆಫ್ರಿಕಾದಲ್ಲಿ ಇಸ್ಲಾಂ­ಪೂರ್ವ ಅರೇಬಿಯಾ ಅಥವಾ ಮಧ್ಯ ಏಷ್ಯಾದ ಎಡೆಗಳಲ್ಲಿ ಮೂರ್ತಿಪೂಜೆಯಿಲ್ಲದ ಧಾರ್ಮಿಕ ಸಂಸ್ಕೃತಿಗಳು ಇರಲಿಲ್ಲ. ರೋಮ್, ವೆನಿಸ್, ಫ್ಲಾರೆನ್ಸ್ ನಗರಗಳ ಇಂದಿನ ಬಹುತೇಕ ಚರ್ಚು­ಗಳು ಪೇಗನ್ ಧರ್ಮಗಳ ಮೂರ್ತಿಪೂಜಕ ಮಂದಿರ­ಗಳನ್ನು ಕೆಡವಿ ಕಟ್ಟಿದಂಥವು. ರೋಮ್‌ನಲ್ಲಿ ಕ್ರೈಸ್ತಧರ್ಮ ಹಬ್ಬತೊಡಗಿದಾಗ ಹೊಸ­ತಾಗಿ ಕ್ರೈಸ್ತಧರ್ಮ ಸ್ವೀಕರಿಸಿದ ಮತಾಂಧರು ಪೂರ್ವಿಕರ ಪೂಜಾಸ್ಥಾನಗಳನ್ನು ಬರ್ಬರ ರೀತಿಯಲ್ಲಿ ಕೆಡವತೊಡಗಿದರು.ಆಗ ರೋಮ್‌ನ ಸೆನೆಟರನಾಗಿದ್ದ ಸಿಮ್ಮೇಕಸ್ ಎಂಬಾತ ಕ್ರೈಸ್ತ ನಾಯಕರಿಗೊಂದು ಬರೆದ ಪತ್ರದಲ್ಲಿ ಹೀಗೆ ಹೇಳಿದ: ‘ಅಂಥ ಮಹಾನ್ ನಿಗೂಢ ತತ್ವದ ಗುರಿ ತಲುಪಲಿಕ್ಕೆ ಒಂದೇ ಒಂದು ದಾರಿಯಿರಲು ಸಾಧ್ಯವಿಲ್ಲ’.  ‘ಏಕಂ ಸತ್ ವಿಪ್ರಾನಾಂ ಬಹುಧಾ ವದಂತಿ’ (ಸತ್ಯ ಒಂದೇ, ಜ್ಞಾನಿಗಳು ಅದನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ). - ಈ ವೇದೋಕ್ತ ವಾಕ್ಯವನ್ನು ಹೋಲುವ ಆತನ ಮಾತುಗಳು ಮತಾಂಧ ಕಿವಿಗಳಿಗೆ ಕೇಳಿಸಲೇ ಇಲ್ಲ. ಆಕ್ರಮಣಕಾರಿ  ಹಿಂಸೆಯ ಒಂದು ಅಂಗ­ವಾಗಿ ಮೂರ್ತಿಭಂಜನೆ ಎಲ್ಲ ಕಡೆ ನಡೆ­ದವು.  ಆದರೆ ಬೌದ್ಧಧರ್ಮವು ಸ್ಥಾಪಿತ­ವಾದ ದೇಶ­ಗಳಲ್ಲಿ ಈ ರೀತಿ ಮೂರ್ತಿಭಂಜನೆ ನಡೆಯ­ಲಿಲ್ಲ.ಚೀನಾದ ರಾಜರು ಬೌದ್ಧಧರ್ಮವನ್ನು ಸ್ವೀಕರಿಸಿ­ದಾಗ ಅಲ್ಲಿನ ತಾವೋ ಮತ್ತು ಕುಂಗ್-ಫು-ತ್ಸೆ ಧರ್ಮ­ಗಳ ಮಂದಿರಗಳನ್ನೇನೂ ಕೆಡವಲಿಲ್ಲ. ಇದೇ ರೀತಿ ಜಪಾನಿನಲ್ಲಿ ಬೌದ್ಧಪೂರ್ವದ ಷಿಂಟೋ ಮಂದಿರಗಳ ಧ್ವಂಸ ನಡೆಯಲಿಲ್ಲ. ಟಿಬೆಟ್‌ನಲ್ಲಿ ವಜ್ರಯಾನ ಬೌದ್ಧಪಂಥೀಯರು ಆ ಪ್ರದೇಶದ ಬೌದ್ಧಪೂರ್ವ ಬಾನ್ ಧರ್ಮ­ವನ್ನು ದ್ವೇಷಿಸಲಿಲ್ಲ.ಶ್ರೀಲಂಕಾದ ಜನಪದ ಧರ್ಮಗಳನ್ನು ಬೌದ್ಧರು ಶಾಂತಿಯುತವಾಗಿ ತಮ್ಮ ಹೊಸಧರ್ಮದ ಚೌಕಟ್ಟಿನಲ್ಲಿ ಅಳವಡಿಸಿ­ಕೊಂ­ಡರು. ಇಂಥ ಸೈರಣೆ ಮತ್ತು ಹೊಂದಾ­ಣಿಕೆಯ ಮನೋಧರ್ಮ ಭಾರತದ ಜೈನರಲ್ಲೂ ಕಂಡುಬರುತ್ತದೆ. ಸನಾತನ ಧರ್ಮಗಳ ಈ ಹೊಂದಾ­ಣಿಕೆಯ ಮಾದರಿ ಯಹೂದಿ-ಕ್ರೈಸ್ತ ಪರಂ­ಪರೆಯ ಧ್ವಂಸ ಮತ್ತು ದಮನದ ಮಾರ್ಗಕ್ಕಿಂತ ಭಿನ್ನ.ಭಾರತದಲ್ಲಿ ಮೂರ್ತಿಪೂಜೆ ಪ್ರಾಚೀನ. ಅದಕ್ಕೆ ಮೊದಲು ಮತ್ತು ಅದಕ್ಕೆ ಸಮಾನಾಂ­ತರ­ವಾಗಿ ನಿಸರ್ಗದ ಅಂಗಗಳಾದ ಮಲೆಗಳನ್ನು, ನದಿಗಳನ್ನು, ಸರೋವರಗಳನ್ನು, ಕುಲಸಂಕೇತ­ಗಳಾದ ಪ್ರಾಣಿಗಳನ್ನು ಪವಿತ್ರ ಸಂಕೇತಗಳಾಗಿ ಆರಾ­ಧಿಸುವ ಪ್ರತೀತಿಯೂ ಇದೆ.ಇವುಗಳಲ್ಲಿ ಕೆಲವು ಪದ್ಧತಿಗಳು ಇಂದಿಗೂ ಜಾರಿಯಲ್ಲಿವೆ. ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಇಡೀ ಮಲೆ­ಯನ್ನೇ ಶಿವನೆಂದು ಭಕ್ತರು ನಂಬುತ್ತಾರೆ. ಗಂಗೆ, ಯಮುನೆ, ನರ್ಮದೆ, ಕಾವೇರಿ ಮುಂತಾದ ಪ್ರಾಚೀನ ನದಿಗಳನ್ನು  ಇಂದಿಗೂ ಶ್ರದ್ಧಾಳುಗಳು ದೇವಿಯರೆಂದು ಕಲ್ಪಿಸಿ­ಕೊಳ್ಳು­ತ್ತಾರೆ. ಶಿವ-ಶಕ್ತಿಯರ ಕುರುಹುಗಳಾದ ಲಿಂಗ-ಯೋನಿ ಪೂಜೆಗೂ ಪ್ರಾಚೀನ ಇತಿಹಾಸವಿದೆ.ಈ ಉಪಾಸನಾ ಪದ್ಧತಿಗಳಿಗಿಂತ ಹೆಚ್ಚು ಸಂಕೀರ್ಣ­ವಾಗಿ, ಪರಿಷ್ಕೃತವಾಗಿ ವಿಕಸನಗೊಂಡ ತಂತ್ರಾ­ಗಮ ಪರಂಪರೆಯಲ್ಲಿ ಆರಾಧಿಸುವ ದೇವತೆ­ಗಳಿಗೆ ಮೂರು ರೂಪಗಳಿವೆ. ಮೊದಲನೆಯದು ಮಂತ್ರ. ಇದು ದೇವತೆಯ ಶಾಬ್ದಿಕ ರೂಪ. ಎರ­ಡನೆಯದು ಯಂತ್ರ. ಇದು ದೇವತೆಯ ಅಮೂರ್ತ­ರೂಪ. ಮೂರನೆಯದು ಮಂಡಲ. ಇದು ದೇವತೆಯ ಮಾನವರೂಪೀ ಸಂಕೇತ. ಹೀಗೆ ತಾಂತ್ರಿಕ ಪರಂಪರೆಯಲ್ಲಿ ಸಾಕಾರ ನಿರಾಕಾರ­ಗಳನ್ನು ಅಳವಡಿಸಿಕೊಳ್ಳಲಾಗಿದೆ.ತಂತ್ರಾಗಮ ಸಂಪ್ರದಾಯಗಳಂತೆ ಭಾರ­ತೀಯ ಭಕ್ತಿಪರಂಪರೆಗಳೂ ಸಾಕಾರ-ನಿರಾಕಾರ, ಸಗುಣ-­ನಿರ್ಗುಣ ಧ್ರುವಗಳ ನಡುವೆ ತುಯ್ದಾ­ಡುತ್ತಾ ಬಂದಿವೆ. ಉತ್ತರ ಭಾರತೀಯ ವಿದ್ವಾಂಸರು ಸಗುಣ, ನಿರ್ಗುಣ ಎಂಬ ಎರಡು ಬಗೆಗಳನ್ನು ಭಕ್ತಿಪರಂಪರೆಯಲ್ಲಿ ಗುರುತಿಸು­ತ್ತಾರಾ­ದರೂ ಭಕ್ತಿಗೆ ಮೂರ್ತತೆಯಿಂದ, ಸಂಕೇತ ವ್ಯವಸ್ಥೆಯಿಂದ ಬಿಡುಗಡೆಯಿಲ್ಲ. ಸ್ಥಾವರ ಲಿಂಗಗಳನ್ನು ಬಿಟ್ಟ ವೀರಶೈವರು ಅದರ ಬದಲಿಗೆ ಇಷ್ಟಲಿಂಗೋಪಾಸಕರಾದರು.೧೨ನೇ ಶತಮಾನದ ಹೊತ್ತಿಗೆ ಮಂದಿರ ಪ್ರವೇಶ ಕೆಲವು ವರ್ಗ­ದವರಿಗೆ ಸೀಮಿತವಾದ ಕಾರಣಕ್ಕೆ ಹೀಗಾಗಿರಬಹುದು. ಮಂದಿರ ಪ್ರವೇಶದ ವಿಷಯದಲ್ಲಿ ಹೀಗೆ ಭಿನ್ನಭೇದ ನಡೆದಾಗ ವೀರಶೈವ ಪರಂಪರೆಗಿಂತ ಭಿನ್ನವಾದ ಪ್ರತಿಕ್ರಿಯೆ­ಗಳನ್ನು ಇತರ ಭಕ್ತಿಪಂಥಗಳು ಅನುಸರಿಸಿದವು. ಸ್ವತಃ ವೈದಿಕರಾದರೂ ಶೂದ್ರಗುರುವನ್ನು ಸ್ವೀಕರಿಸಿದ ರಾಮಾನುಜಾಚಾರ್ಯರು ಶೂದ್ರ­ರಿಗೂ ಮಂದಿರ ಪ್ರವೇಶದ ಅವಕಾಶ ಕಲ್ಪಿಸಿ­ದರು.ಇದೇ ರೀತಿಯ ಮುಕ್ತ ಮನಸ್ಸನ್ನು ತೋರಿ­ದವರು ಬಂಗಾಳದ ಚೈತನ್ಯ ಮಹಾಪ್ರಭು. ಮಹಾರಾಷ್ಟ್ರದ ವಾರಕರಿ ಪಂಥದವರು ಮೇಲುವರ್ಣ­ದವರ ಸ್ವತ್ತಾಗಿದ್ದ ದೇವಸ್ಥಾನ­ಗಳಿಗೆ ಪ್ರತಿಯಾಗಿ ಎಲ್ಲರಿಗೂ ದಕ್ಕುವ ಪಂಢರ­ಪುರದ ವಿಠೋಬನ ದೇವಸ್ಥಾನವನ್ನು ತಮ್ಮ ಪಂಥದ ಧಾರ್ಮಿಕ ಕೇಂದ್ರವಾಗಿಸಿಕೊಂಡರು. ಉತ್ತರಭಾರತದ ವಲ್ಲಭಪಂಥೀಯರು ಇದೇ ರೀತಿ ನಾಥಪರಂಪರೆಯ ಶ್ರೀನಾಥ ಮಂದಿರವನ್ನು ತಮ್ಮ ಶ್ರದ್ಧೆಯ ಕೇಂದ್ರವಾಗಿಸಿಕೊಂಡರು.ಹೀಗೆ ಸದಾ ಚಲನಶೀಲವಾಗಿರುವ ಭಾರ­ತೀಯ ಧಾರ್ಮಿಕ ಇತಿಹಾಸದ ಗತಿತಾರ್ಕಿ­ಕತೆಯ ಹಿನ್ನೆಲೆಯಲ್ಲಿ ಮೂರ್ತಿ­ಪೂಜೆಯ ವಿಚಾರವನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಭಾರತೀಯ ಪರಂಪರೆಯಲ್ಲಿ ಮರುಕಳಿಸಿದ ಮೂರ್ತಿಪೂಜೆ ಕುರಿತ  ಟೀಕೆಗಳನ್ನೂ ಇದೇ ಸಂದರ್ಭದಲ್ಲಿಟ್ಟು ನೋಡಬೇಕಾಗಿದೆ. ಅವುಗಳಿಗೂ ಮತ್ತು ಆಧು­ನಿಕ ಕಾಲದ ಪಶ್ಚಿಮಬುದ್ಧಿಯ ಪೆರಿಯಾರ್ ಮಾದರಿಯ ವಿಚಾರವಾದಿ ನಿರಾಕರಣೆಗಳಿಗೂ ಇರುವ ಗುಣಾತ್ಮಕ ವ್ಯತ್ಯಾಸವನ್ನೂ ಅರ್ಥ ಮಾಡಿಕೊಳ್ಳಬೇಕಾಗಿದೆ.ಭಕ್ತಿಸಂತರು ತಮ್ಮ ಪಾಂಥಿಕ ಉತ್ಸಾಹ ಮತ್ತು ಆವೇಶಗಳ ಗಳಿಗೆಗಳಲ್ಲಿ ಜನಪದರ ‘ಬಣಗು ದೈವ’ಗಳನ್ನು ನಿಂದಿಸಿರುವುದು ನಿಜ. ಆದರೆ ಈ ನಿಂದನೆ ಅವರ ಬೋಧನೆಗಳ ಅತ್ಯಂತ ಮಹತ್ತರ ಅಂಶಗಳೆಂದು ನಾವೇಕೆ ತಿಳಿಯ­ಬೇಕು? ಅವರ ಕೆಲವು ಟೀಕೆಗಳಲ್ಲಿ ಇಂದಿ­ನಂತೆ ಹಿಂದೆಯೂ ಮಾನವೀಯ ಕಾರಣಗಳಿದ್ದುದೂ ನಿಜ. ನಿಜದ ನಾಗರ­ವನ್ನು ಕಂಡೊಡನೆ ಕಿರುಚಿ ಕಾಲು­ತೆಗೆ­ಯುವ ಮಂದಿ ಕಲ್ಲುನಾಗರವನ್ನು ಪೂಜಿ­ಸುವ; ಉಣ್ಣದ ಲಿಂಗಕ್ಕೆ ಬೋನವನ್ನಿಟ್ಟು ಹಸಿದ ಜಂಗಮರಿಗೆ ಅನ್ನ ನೀಡದ; ತಾನು ಪೂಜೆ ಮಾಡಿದ ಪವಿತ್ರ ವಿಗ್ರಹವನ್ನು ಅವಸರಕ್ಕೆ ಮಾರಿ­ಕೊಳ್ಳುವ ಬೂಟಾಟಿಕೆಯ ಬಗೆಗಳನ್ನು ಬಸವಣ್ಣ ಟೀಕಿ­ಸಿದ್ದು ಸರಿಯೇ.ಆದರೆ ಇಂಥಾ ಬೂಟಾ­ಟಿಕೆಗೆ ಪ್ರತಿಯಾಗಿ ಬಸವಾದಿಗಳು ಇಷ್ಟಲಿಂಗ ಕೇಂದ್ರಿತ ಪ್ರತಿಸಂಕೇತ ವ್ಯವಸ್ಥೆಯನ್ನು ನಿರ್ಮಿಸಿ­ದರು.ಮುಂದೊಮ್ಮೆ ಇಷ್ಟಲಿಂಗವೂ ಬೂಟಾ­ಟಿಕೆಯ ಸಂಕೇತವಾಗುವ ವ್ಯಂಗ್ಯವನ್ನು ಸ್ವತಃ ವಚನಕಾರರೇ ಗುರುತಿಸಿದ್ದಾರೆ. ‘ಲಾಂಛನಕ್ಕೆ ತಕ್ಕ ನಡೆಯಿಲ್ಲ’ ದವರಿಗೆ ಛೀಮಾರಿ ಹಾಕುತ್ತಾನೆ ಬಸವಣ್ಣ. ಶರಣ ಪರಂಪರೆಯ ಮುಂದುವರಿದ ಘಟ್ಟವಾದ ಮಂಟೇಸ್ವಾಮಿಯ ಕತೆಯಲ್ಲಿ ಇಷ್ಟಲಿಂಗಧಾರಿಗಳ ಆಷಾಢಭೂತಿತನ ವಿಡಂ­ಬನೆ­­ಗೊಳಗಾಗುತ್ತದೆ. ಕಲ್ಯಾಣದ ಜಂಗಮರ ಇಷ್ಟ­ಲಿಂಗಗಳನ್ನು ಕಾಣೆಮಾಡಿದ ಮಂಟೇ­ಸ್ವಾಮಿ ಅವರಿಗೆ ‘ಉಳಿ ಮುಟ್ಟದ ಲಿಂಗದ’ ದೀಕ್ಷೆ ನೀಡುತ್ತಾನೆ.ಹೀಗೆ ಸ್ಥಾವರಲಿಂಗಗಳನ್ನು ಟೀಕಿಸಿದ ವೀರಶೈವರಾಗಲಿ, ಇಷ್ಟಲಿಂಗವನ್ನು ವಿಡಂಬಿಸಿದ ಮಂಟೇ­ಸ್ವಾಮಿಯಾಗಲಿ, ತಮ್ಮ ಕಾಲದ ಮಂದಿರಗಳಲ್ಲಿ ತಲೆಯೆತ್ತುತ್ತಿದ್ದ ಭ್ರಷ್ಟತೆಯನ್ನು ತೊಲಗಿಸಲು ಹಲವಾರು ಸುಧಾರಣೆಗಳನ್ನು ಪ್ರತಿಪಾದಿಸಿದ ರಾಮಾನುಜರಾಗಲಿ, ಪವಿತ್ರ ಸಂಕೇತಗಳ ಬಗ್ಗೆ ಅಸಾಂಪ್ರದಾಯಿಕವಾಗಿ ನಡೆದು­ಕೊಂಡ ಕಾಶಿಯ ತ್ರೈಲಿಂಗಸ್ವಾಮಿ­ಯಂ­ತಹ ಕೆಲವು ಅಘೋರಿಗಳಾಗಲಿ ಪವಿತ್ರತೆಯ ಸಾಂಪ್ರ­ದಾಯಿಕ ಸಂಕೇತಗಳನ್ನು ಆವರಿಸುತ್ತಿದ್ದ ಮನದ ಕಾಳಿಕೆಯನ್ನು ನೀಗಿಸಲು ಹೆಣಗಿದರೇ ಹೊರತು ಪವಿತ್ರತೆಯನ್ನೇ ನಿರಾಕರಿಸಲು ಹೊರ­ಡಲಿಲ್ಲ. ಅವರೆಲ್ಲರ ಸುಧಾರಣೆ, ನಿರಾಕರಣೆಗಳ ಕ್ರಮಗಳು ಪ್ರಧಾನವಾಗಿ ಆಧ್ಯಾತ್ಮಿಕ­ವಾದು­ವೆನ್ನು­ವದನ್ನು ಮರೆಯಲಾಗದು.ಈ ಸ್ವವಿಮರ್ಶಾಪರ, ವಿಕಸನಶೀಲ ಪರಂ­ಪರೆಗೆ ವ್ಯತಿರಿಕ್ತವಾದುದು ಪೆರಿಯಾರ್ ಮಾದ­ರಿಯ ಮೂರ್ತಿಭಂಜನಾಕ್ರಮ. ಅದು ಪಶ್ಚಿಮ­ಬುದ್ಧಿಯ ಭೌತಿಕವಾದಿ ಮಾನವ­ಕೇಂದ್ರಿತ ದೃಷ್ಟಿ­ಯಿಂದ ಪ್ರೇರಿತವಾಗಿದ್ದು, ಭಾರತದ ಬಹು­ಮುಖಿ ಮತ್ತು ಗತಿತಾರ್ಕಿಕ ಪರಂಪರೆಗಳನ್ನು ಕೇವಲ ಬ್ರಾಹ್ಮಣವಾದಿ ದಬ್ಬಾಳಿಕೆಯೆಂದು ಸಾರಾ­­ಸಗಟಾಗಿ ತೀರ್ಪು ನೀಡಿತು.ಮಿಷನರಿಗಳು ಹೇಳಿ­­ದ್ದನ್ನೇ ಇನ್ನೊಂದು ರೀತಿಯಲ್ಲಿ ಹೇಳಿತು, ಅಷ್ಟೆ. ಪೆರಿಯಾರ್ ಮಾದರಿಯ ಮೂರ್ತಿ­ಭಂಜನಾ ಕ್ರಮಗಳು ತಮಿಳುನಾಡನ್ನು ಮೂರ್ತಿ­ಮುಕ್ತ­­ಗೊಳಿಸಲಿಲ್ಲ. ತಮಿಳುನಾಡಿನ ಸುಂದರ ಮಂದಿರಗಳು ಇಂದಿಗೂ ಜನಪ್ರಿಯವಾಗಿ ಕಂಗೊ­ಳಿ­­­ಸುತ್ತಿವೆ. ಜೊತೆಗೆ ಸಮಕಾಲೀನ ಸಿನಿಮಾ ಸ್ಟಾರ್‌ಗಳ ಮೂರ್ತಿಪೂಜೆಯೂ ಆರಂಭ­ವಾಗಿದೆ!ಅದ್ವೈತದ ಹಂತದಲ್ಲಿ ಮೂರ್ತಿಯ ವಾಸನೆಯಿರುವುದಿಲ್ಲ. ಒಡಿಶಾದ ಸಂತಕವಿ ಭೀಮಾ­ಬೋಯಿ ಹೇಳುತ್ತಾನೆ: ‘ಶೂನ್ನ ಮಂದಿರೆ ವಿಹರ..ಊಪರ್ ನೀಚೆ ನಹಿ..’ (ಶೂನ್ಯ­ಮಂದಿರ­ದಲ್ಲಿ ವಿಹರಿಸು. ಅಲ್ಲಿ ಮೇಲೂ ಇಲ್ಲ, ಕೆಳಗೂ ಇಲ್ಲ’). ಆದರೆ ಈ ಸ್ಥಿತಿಯನ್ನು ಎಲ್ಲರೂ ಇಚ್ಛಿಸು­ವುದಿಲ್ಲ. ‘ಏನನುಪ­ಮಿ­ಸುವೆ­ನಯ್ಯ?’ ಎಂಬ ಅಲ್ಲಮನ ವಾಸನಾಮುಕ್ತ ನಿರಮ್ಮಳ ಸ್ಥಿತಿ ಎಲ್ಲ­ರಿಗೂ ಎಟಕುವುದಲ್ಲ.ಇಂದ್ರಿಯವಾಸನೆಯ ಚಿತ್ತ­ವುಳ್ಳ­ವರಿಗೂ ಒಂದು ಆಧ್ಯಾತ್ಮಿಕ ಮಾರ್ಗ ಬೇಕಲ್ಲ. ಅಂಥವರಿಗಾಗಿಯೇ ನಮ್ಮ ಪರಂಪರೆ­ಗಳು ನಾಮ-ರೂಪಗಳ, ಮೂರ್ತಿ-ಸಂಕೇತಗಳ ವ್ಯವ­ಸ್ಥೆ­ಯನ್ನು ಏರ್ಪಡಿಸಿರುವುದು. ಆದ್ದರಿಂದಲೇ ತಮ್ಮ ‘ಅನುಭವಾಮೃತ’ದಲ್ಲಿ ಅದ್ವೈತವನ್ನು ಕೊಂಡಾ­ಡಿದ ಸಂತ ಜ್ಞಾನೇಶ್ವರರು ತಮ್ಮ ಅಭಂಗ­ಗಳಲ್ಲಿ ವಿಠಲನ ಕುರಿತ ದ್ವೈತಭಕ್ತಿಯನ್ನು ಕೀರ್ತಿಸಿದ್ದು. ಮಾನವಚೇತನದ ಮರ್ಮಗಳನ್ನು ಅತ್ಯಂತ ಸೂಕ್ಷ್ಮವಾಗಿ ಅರಿತುಕೊಂಡ ಭಾರ­­ತೀಯ ಧಾರ್ಮಿಕ ಪರಂಪರೆಗಳು ಮೂರ್ತಿ­ಪೂಜೆಯ ದ್ವೈತಕ್ಕೂ ಅಮೂರ್ತ ಅದ್ವೈತಕ್ಕೂ ಸರಿ­ಸಮನಾದ ಸ್ಥಾನ ನೀಡಿವೆ. ಅಲ್ಲಮನೆಂದಂತೆ ‘ಸಾಕಾರ ನಿರಾಕಾರಂ­ಗಳೆರಡೂ ಸ್ವರೂಪಂ­ಗಳು­...­ಉಭಯ­ಕುಳ­ರಹಿತ ನಮ್ಮ ಗೊಗ್ಗೇಶ್ವರನು.’ಏಕತ್ವಕ್ಕೆ ಧಕ್ಕೆ ತರದಂತೆ ದಿಗ್ಭ್ರಮೆಗೊಳಿಸುವ ವೈವಿಧ್ಯಗಳನ್ನು ಒಳಗೊಂಡ ಕಾರಣ ಇಂದು ಭಾರ­ತೀಯ ಪರಂಪರೆಗಳ ಈ ಇತ್ಯಾತ್ಮಕ ಅಂಶ­ಗಳು ಇಂದಿನ ವೈವಿಧ್ಯಮಯವಾದ ಜಗತ್ತಿಗೆ ಮಾದರಿಯಾಗಬಲ್ಲುದೆನ್ನುತ್ತಾನೆ ಮೆಕ್ಸಿಕೊದ ಕವಿ-ಚಿಂತಕ ಅಕ್ತೇವಿಯೋ ಪಾಜ್. ಏಕತ್ವ-ಬಹುತ್ವ­ಗಳ ನಡುವೆ ಏಕರಸತ್ವವನ್ನು ಕಂಡರಸಿ, ಅದನ್ನು ಪ್ರತಿಪಾದಿಸಿದ ಭಾರತೀಯ ಧಾರ್ಮಿಕ ಪ್ರತಿಭೆಯ ವೈಶಾಲ್ಯ ಮತ್ತು ಮಹತ್ವಗಳನ್ನು ನಮ್ಮ ಪ್ರಜಾ­ಸತ್ತಾತ್ಮಕ ಯುಗದಲ್ಲಿ ಉಳಿಸಿ­ಕೊಳ್ಳು­ವುದು ಅಗತ್ಯವಾಗಿದೆ.ಇನ್ನಾದರೂ ಮೂರ್ತಿಗಳ ಮೇಲೆ ಉಚ್ಚೆಹೊಯ್ದ ಹುಡುಗಾಟದ ಪರಾಕ್ರಮಗಳನ್ನು ವಿಜೃಂಭಿಸುವ ಬೇಜವಾಬ್ದಾರಿ ತೀಟೆಗಳನ್ನು ನಮ್ಮ ಬುದ್ಧಿಜೀವಿಗಳು ಕೈಬಿಡಲಿ. ಸರ್ವಜನಾಂಗದ ಸುಂದರ ತೋಟವಾಗಬೇಕಾದ ನಮ್ಮ ನಾಡಿನಲ್ಲಿ ಇತರರ ಆಚರಣೆಗಳ ಬಗೆಗಿನ ಅಲ್ಪತಿಳಿವಳಿಕೆಯ, ಅಸಡ್ಡೆಯ, ಅಸಹನೆಯ ವಿಷಮತೆಯನ್ನು ಹಬ್ಬಿಸದಿರಲಿ ಎಂದು ಹಾರೈಸೋಣ.ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.