ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಧಾ ಎಂಬ ತಾಯಿ, ನರ್ಮದೆಯ ಮಗಳು

Last Updated 22 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಪ್ರಧಾನಿಯವರ ಹುಟ್ಟು ಹಬ್ಬದ ಕೊಡುಗೆಯಾಗಿ ದೈತ್ಯ ಸರ್ದಾರ್ ಸರೋವರ ತುಂಬಿಸುವ ನಿರ್ಧಾರ ಹೊರಬಿದ್ದಿತ್ತು. ಮಧ್ಯಪ್ರದೇಶದ ನರ್ಮದಾ ಕಣಿವೆಯ ನೂರಾರು ಆದಿವಾಸಿ ಗ್ರಾಮಗಳು ಜಲಸಮಾಧಿ ಹೊಂದುವ ದುರಂತವನ್ನು ಸನಿಹದಿಂದ ಕಂಡು ವರದಿ ಮಾಡಲು ನಿರ್ಧರಿಸಿತ್ತು ''ಪ್ರಜಾವಾಣಿ''.

ಮಧ್ಯಪ್ರದೇಶದ ಬಡ್ವಾನಿ ಜಿಲ್ಲಾ ಕೇಂದ್ರದಲ್ಲಿನ  ನರ್ಮದಾ ಬಚಾವೊ ಆಂದೋಲನದ ಕಾರ್ಯಾಲಯ ಮೂರು ದಶಕಗಳಿಂದ ನರ್ಮದಾ ಹೋರಾಟದ ಮೆದುಳು-ಗುಂಡಿಗೆ ಎರಡೂ ಹೌದು. ಇಂದೂರಿನಿಂದ ನಾಲ್ಕೂವರೆ ತಾಸುಗಳ ನಡು ಮುರಿಯುವ ಬಸ್ ಪ್ರಯಾಣದ ನಂತರ ಮೇಧಾ ಪಾಟ್ಕರ್ ಜೊತೆಗೆ ಮೂರು ದಿನಗಳ ಕಾಲ ನರ್ಮದಾ ಕಣಿವೆ ಸಂಚಾರದಲ್ಲಿ 'ಪ್ರಜಾವಾಣಿ' ಕಂಡುಂಡ ಸತ್ಯಗಳು ಅನೇಕ.

ಜಲಾಶಯ ನಿರ್ಮಾಣ ಪೂರ್ಣಗೊಂಡ ನಂತರ  ‘ಊರು ಮನೆ ಖಾಲಿ ಮಾಡಿರಿ, ಇಲ್ಲವಾದರೆ ತೂಬಿನ ಬಾಗಿಲು ತೆರೆದು ನೀರು ಬಿಡುತ್ತೇವೆ...ಮುಳುಗಿ ಹೋಗ್ತೀರಿ ನೋಡಿ’ ಎಂದು 1961ರಲ್ಲಿ ಹಿಮಾಚಲದ ಪೋಂಗ್ ಜಲಾಶಯದ ಮುಳುಗಡೆ ಸಂತ್ರಸ್ತರನ್ನು ಹೆದರಿಸಿದ್ದವರು ಭಾರತ ಸರ್ಕಾರದ ಹಣಕಾಸು ಮಂತ್ರಿ ಮೊರಾರ್ಜಿ ದೇಸಾಯಿ.

ಚೌಕಾಶಿಗೆ ಅವಕಾಶವೇ ಇಲ್ಲ, ದೇಶದ 'ಅಭಿವೃದ್ಧಿ' ಗಾಗಿ ಖಾಲಿ ಮಾಡಲೇಬೇಕು ಎಂಬ ಪ್ರಭುತ್ವದ ತಣ್ಣಗಿನ ಕ್ರೂರ ಕಾಠಿಣ್ಯವು ಅಂದಿನಿಂದ ಇಂದಿನ ತನಕ ಅಣರೇಣುವಿನಷ್ಟೂ ಕರಗಿಲ್ಲ. ಆ ಪಕ್ಷ, ಈ ಪಕ್ಷವೆಂಬ ಭೇದ ಭಾವ ಇಲ್ಲ, ''ರಾಷ್ಟ್ರೀಯ ಅಭಿವೃದ್ಧಿ''ಯ ಮಾತು ಬಂದಾಗ ಪ್ರಭುತ್ವ ಯಾರದಾದರೇನು, ಅದರ ಹೃದಯ ಅದೇ ಕಗ್ಗಲ್ಲು.

ನರ್ಮದಾ ಬಚಾವೊ ಆಂದೋಲನ,  ‘ಆಕಾಶವನ್ನು ಭೂಮಿಗೆ ಇಳಿಸಿಕೊಡಿ’ ಎಂದೇನೂ ಕೇಳುತ್ತಿಲ್ಲ. ‘ನೀರು ನೆರಳನ್ನೂ ಕಿತ್ತುಕೊಂಡು ಹೊಟ್ಟೆಯ ಮೇಲೂ ಹೊಡೆಯಬೇಡಿ’ ಎಂಬುದಷ್ಟೇ ಅದರ ಆಗ್ರಹ. 'ರಾಷ್ಟ್ರೀಯ ಅಭಿವೃದ್ಧಿ'ಗಾಗಿ, ನರ್ಮದಾ ಕಣಿವೆಯ ನೆಲದ ಮಕ್ಕಳು ನೂರಾರು ವರ್ಷಗಳಿಂದ ಕಟ್ಟಿಕೊಂಡ ಬದುಕುಗಳು ಛಿದ್ರವಾಗಿವೆಯಲ್ಲ. ಅದು ತ್ಯಾಗ ಅಲ್ಲದಿದ್ದರೆ ಮತ್ತೇನನ್ನು ಹಾಗೆಂದು ಕರೆಯಲು ಬಂದೀತು? ನೆರಳಿಗೆ ಬದಲಾಗಿ ನೆರಳು, ನೆಲಕ್ಕೆ ಬದಲಾಗಿ ನೆಲ, ನೂರಾರು ವರ್ಷಗಳಿಂದ ಕಟ್ಟಿಕೊಂಡ ಬದುಕಿನ ಬದಲಿಗೆ ಬದುಕು, ನೀರು, ಶಾಲೆ, ವೈದ್ಯಕೀಯ ಸೌಲಭ್ಯ, ರಸ್ತೆ, ಸೇತುವೆಯಂತಹ ಕನಿಷ್ಠ ನಾಗರಿಕ ಸೌಲಭ್ಯಗಳು. ಹಳ್ಳಿಗಳನ್ನು ಜಲಸಮಾಧಿ ಮಾಡುವಷ್ಟು ಸಲೀಸಾಗಿ ಯಾವುದಾದರೂ ಮಹಾನಗರದ ಒಂದೆರಡು ಅಪಾರ್ಟ್‌ಮೆಂಟ್‌ಗಳನ್ನಾದರೂ ಸೇತುವೆ-ರಸ್ತೆಗಾಗಿ ಕೆಡವುವುದಿರಲಿ, ತಡವಲಾದರೂ ಬಂದೀತೇ? ಹಾಹಾಕಾರ ಹಡಕಂಪ ಎದ್ದು ಹೋಗುತ್ತದೆ. ಸಮೂಹ ಮಾಧ್ಯಮಗಳು ಹಗಲಿರುಳೂ ಬೊಬ್ಬಿರಿಯುತ್ತವೆ.

ಕಟ್ಟಕಡೆಗೆ ಪ್ರಭುತ್ವ ಮಂಡಿಯೂರದಿದ್ದರೆ ನೋಡಿ. ಹಳ್ಳಿಗಳ ಸಾರ ಹೀರಿ ಸೊಕ್ಕಿ ಬೆಳೆದಿರುವ ದೈತ್ಯ ನಗರಗಳು ಕೂಡ ಕಡು ಸ್ವಾರ್ಥಿಗಳು. ಅದೇ ಆದಿವಾಸಿಗಳು, ರೈತರು, ಮೀನುಗಾರರು, ಕುಂಬಾರರು, ಕೃಷಿ ಕಾರ್ಮಿಕರು ರೊಟ್ಟಿ ಬುತ್ತಿ ಕಟ್ಟಿಕೊಂಡು ಇದೇ ದೈತ್ಯ ನಗರಗಳಿಗೆ ಬಂದು ಧರಣಿ ನಡೆಸಿದರೂ ಅವರ ಆರ್ತನಾದಕ್ಕೆ ಈ ಮಹಾನಗರಗಳು ತಮ್ಮ ದಿನನಿತ್ಯದ ಆಮೋದ ಪ್ರಮೋದಗಳನ್ನು ತೊರೆದು ಮರುಗಿ ಅವರೊಂದಿಗೆ ಕುಳಿತ ಉದಾಹರಣೆಗಳನ್ನು ಬೆರಳು ಮಡಿಚಿ ಎಣಿಸಿ ನೋಡಿ. ಒಂದಾದರೂ ಇದೆಯೇ?

ಬದಲಿಗೆ ಪ್ರಭುತ್ವವು ಸಾವಿರಾರು ಶಸ್ತ್ರಸಜ್ಜಿತ ಪೊಲೀಸರನ್ನು ಪಹರೆಗೆಂದು ರಸ್ತೆಗೆ ಇಳಿಸುತ್ತದೆ. ವಾಹನಸಂಚಾರ ಅಸ್ತವ್ಯಸ್ತಗೊಂಡರೆ ಮಹಾನಗರಗಳ ಪ್ರಜೆಗಳು ಗೊಣಗುತ್ತಾರೆ, ಶಪಿಸುತ್ತಾರೆ. ತಮ್ಮ ಬದುಕುಗಳೇ ಅಸ್ತವ್ಯಸ್ತ ಆಗಿವೆ ಎಂದು ಗಮನ ಸೆಳೆಯಲು ಬಂದವರ ಎದುರು ವಾಹನಸಂಚಾರ ಅಸ್ತವ್ಯಸ್ತ ಆಗುವುದನ್ನೇ ದೊಡ್ಡದು ಮಾಡಿ ದೂರಲಾಗುತ್ತದೆ. ನೆಲತಾಯಿಯ ಒಲಿಸಿಕೊಂಡು ಅನ್ನ ಬೆಳೆದುಕೊಡುವವರನ್ನು,, ಜಲತಾಯಿಯ ನಮಿಸಿ ಮೀನು ಹಿಡಿದು ತರುವವರನ್ನು ಕೊಳಕರೆಂದು, ಪಾರ್ಕುಗಳಲ್ಲಿ ಕಸ ತುಂಬಿದರೆಂದು ಜರೆಯಲಾಗುತ್ತದೆ.

''ರಾಷ್ಟ್ರಹಿತಕ್ಕಾಗಿ ನೀವು ಕಷ್ಟ ಕಾರ್ಪಣ್ಯಗಳನ್ನು ಸಹಿಸದೆ ವಿಧಿಯಿಲ್ಲ'' ಎಂದು ಸ್ವಾತಂತ್ರ್ಯ ಬಂದ ಮರುವರ್ಷ ಹಿರಾಕುಡ್ ಜಲಾಶಯದ ಮುಳುಗಡೆ ಪ್ರದೇಶದ ಜನರಿಗೆ ಸಂದೇಶ ನೀಡಿದ್ದವರು ಅಂದಿನ ಪ್ರಧಾನಿ ಜವಾಹರಲಾಲ್ ನೆಹರು. ‘ದೇಶಹಿತಕ್ಕೆ ಬಲಿದಾನ’ ಎಂಬ ವೈಭವೀಕೃತ ವಧಾವೇದಿಕೆಯಲ್ಲಿ ವ್ಯವಸ್ಥೆ ಅದಾಗಲೇ ಹಿಂಡಿ ಹಿಪ್ಪೆ ಮಾಡಿರುವ ಜನಸಮುದಾಯಗಳ ಕಷ್ಟ ಕಣ್ಣೀರುಗಳು ಹೇಳ ಹೆಸರಿಲ್ಲದೆ ಆವಿಯಾಗಿ ಹೋಗುತ್ತವೆ.

ಕಳೆದ ಐದು ದಶಕಗಳಲ್ಲಿ ಅಭಿವೃದ್ಧಿ ಯೋಜನೆಗಳಿಗಾಗಿ ಭಾರತದಲ್ಲಿ ನಿರಾಶ್ರಿತರಾದ ಜನರ ಸಂಖ್ಯೆ ಸುಮಾರು ಐದು ಕೋಟಿ ಎಂದು 2011ರಲ್ಲಿ ಜರ್ಮನಿಯ ವಿಶ್ವವಿದ್ಯಾಲಯವೊಂದಕ್ಕೆ ಸುಜಾತಾ ಗಂಗೂಲಿ ಮತ್ತು ನಳಿನ್ ನೇಗಿ ಎಂಬುವವರು ನಡೆಸಿದ ಅಧ್ಯಯನವೊಂದು ತಿಳಿಸಿದೆ. ಹದಿನೆಂಟು ವರ್ಷಗಳಷ್ಟು ಹಳೆಯದಾದ ಮತ್ತೊಂದು ಅಂಕಿ ಅಂಶಗಳ ಪ್ರಕಾರ ದೇಶದಲ್ಲಿನ ಆದಿವಾಸಿ ಜನಸಂಖ್ಯೆಯ ಪ್ರಮಾಣ ಶೇ 8. ಆದರೆ ಅಭಿವೃದ್ಧಿ ಯೋಜನೆಗಳಿಗಾಗಿ ನೆಲ, ನೆರಳು, ಅಡವಿ, ನದಿಯ ತಮ್ಮ ಹುಟ್ಟು ತೊಟ್ಟಿಲ ಸೀಮೆಯನ್ನು ತ್ಯಾಗ ಮಾಡಿದ ಆದಿವಾಸಿಗಳ ಪ್ರಮಾಣ ಶೇ 55ನ್ನು ಮೀರುತ್ತದೆ. ನರ್ಮದಾ ಕಣಿವೆಯ ಇಂತಹ ಆದಿವಾಸಿಗಳ ಪ್ರಮಾಣ ಶೇ 60ರಿಂದ 70ರಷ್ಟು. ಮೊರಾರ್ಜಿ ದೇಸಾಯಿ ಎಚ್ಚರಿಸಿದ ಪೊಂಗ್ ಜಲಾಶಯದ ಮುಳುಗಡೆ ನಿರಾಶ್ರಿತರ ಮರುವಸತಿ ಈವರೆಗೆ ಪೂರ್ಣಗೊಂಡಿಲ್ಲ. ಇದು ಪ್ರಭುತ್ವದ ಎಲ್ಲ ಅಂಗಗಳು ಕೈ ಕಲೆಸಿ ರಕ್ತ ಹರಿಸದೆ, ಉಸಿರು ನಿಲ್ಲಿಸದೆ, ದೇಶವಾಸಿಗಳು ತಮ್ಮದೇ ಸಹದೇಶವಾಸಿಗಳ ವಿರುದ್ಧ ನಡೆಸುವ ಚತುರ ಚಾಲಾಕಿನ ನವನವೀನ ನರಮೇಧವಲ್ಲದೆ ಇನ್ನೇನು? ಈ ಬಡಪಾಯಿ ದೇಶವಾಸಿಗಳ ''ತ್ಯಾಗ ಬಲಿದಾನಗಳು'' ಭವ್ಯ ಭಾರತದ ಅಭಿವೃದ್ಧಿ ಅಧ್ಯಾಯಗಳ ಅಡಿ ಟಿಪ್ಪಣಿಗಳೂ ಆಗಿ ನಮೂದಾಗುವುದಿಲ್ಲ.

ಮೂವತ್ತು ವರ್ಷಗಳಲ್ಲಿ ಸರ್ದಾರ್ ಸರೋವರ ಜಲಾಶಯ ನಿರ್ಮಾಣ ವಿರೋಧಿಸಿ ನರ್ಮದಾ ಬಚಾವೊ ಜನಾಂದೋಲನದ ಆಲೆಗಳೆದ್ದು ಪ್ರಭುತ್ವದ ಹೆಬ್ಬಂಡೆಯನ್ನು ಹಲವು ಬಾರಿ ಅಪ್ಪಳಿಸಿವೆ. ಆದಿವಾಸಿ ಹಳ್ಳಿಗಳನ್ನು ಖಾಲಿ ಮಾಡಿಸಲು ಬುಲ್ಡೋಜರುಗಳೊಂದಿಗೆ ನುಗ್ಗಿದ ಪೊಲೀಸರು ಅಲ್ಲಿನ ಹೆಣ್ಣುಮಕ್ಕಳ ಮೇಲೆ ಲೈಂಗಿಕ ಅತ್ಯಾಚಾರ ನಡೆಸಿರುವ ಪ್ರಕರಣಗಳು ಹಲವಾರು. ಅಂದ ಹಾಗೆ ಅಭಿವೃದ್ಧಿಗೂ ಅತ್ಯಾಚಾರಕ್ಕೂ ಎಲ್ಲಿಂದೆಲ್ಲಿಯ ಸಂಬಂಧ? ಹಾಲಿ ಪ್ರಚಂಡ ಪ್ರಭುತ್ವದ ''ಅಡಿಯಲ್ಲಿ ಅಭಿವೃದ್ಧಿ ಯೋಜನೆ''ಗೆ ಪ್ರತಿರೋಧ ತೋರುವುದೆಂದರೆ ದೇಶದ್ರೋಹವೇ ಸರಿ. ಅರ್ಥಾತ್ ಕಷ್ಟ ಕಣ್ಣೀರು ಕಾರ್ಪಣ್ಯಗಳ ಭಾಷೆಯ ಮೇಲೆ ದೇಶದ್ರೋಹದ ಮೊಹರು ಒತ್ತಲಾಗಿದೆ ಎನ್ನುತ್ತಾರೆ ಖ್ಯಾತ ಸಮಾಜಶಾಸ್ತ್ರಜ್ಞ ಪ್ರೊ.ಶಿವವಿಶ್ವನಾಥನ್.

ಅಭಿವೃದ್ಧಿಯ ಅಸಲಿ ಅರ್ಥವೇನೆಂದು ವಿಶ್ಲೇಷಿಸಿ ಜನರೇ ರಚಿಸಿರುವ ಇತಿಹಾಸ ಭಾರತದಲ್ಲಿ ಯಾವುದಾದರೂ ಇದ್ದರೆ ಅದು ನರ್ಮದಾ ಬಚಾವ್ ಆಂದೋಲನ. ಅಭಿವೃದ್ಧಿ ಎಂಬುದು ಮಧ್ಯಮವರ್ಗ ಜನಸಮುದಾಯದ ಹೊಸ ಧರ್ಮವೇ ಆಗಿ ಹೊರಹೊಮ್ಮಿರುವ ಇಂದಿನ ದಿನಗಳಲ್ಲಿ ಈ ಆಂದೋಲನವನ್ನು ಹೊಸ ಭಾರತವು ನಿರ್ಲಕ್ಷ್ಯ, ನಿರುತ್ತರದ ಹಾಗೂ ಅಳಿಸಿ ಒರೆಸಿ ಹಾಕುವ ಧೋರಣೆಯಿಂದ ನಿರುಕಿಸಿದೆ ಎಂಬ ಶಿವ ವಿಶ್ವನಾಥನ್ ಮಾತುಗಳು ಇತಿಹಾಸದಲ್ಲಿ ದಾರ್ಶನಿಕ ಧ್ವನಿಯಾಗಿ ದಾಖಲಾಗಲಿವೆ.

ಜನಾಂದೋಲನಗಳನ್ನೇ ಹಾಸಿ ಹೊದ್ದು ಜೀವಿಸಿರುವ ತ್ಯಾಗಮಯಿ ಮೇಧಾ ಪಾಟ್ಕರ್. ಆಕೆ ಕಟ್ಟಿ ನಿಲ್ಲಿಸಿದ ಯಾವ ಆಂದೋಲನವೂ ಅಹಿಂಸೆಯ ದಾರಿಯನ್ನು ತ್ಯಜಿಸಿಲ್ಲ. ನರ್ಮದಾ ಬಚಾವ್ ಆಂದೋಲನವಂತೂ ಮೂವತ್ತೆರಡು ವರ್ಷಗಳ ಸುದೀರ್ಘ ಅವಧಿಯಲ್ಲಿ ಒಮ್ಮೆಯೂ ಈ ತತ್ವವನ್ನು ಕೈಬಿಟ್ಟಿಲ್ಲ. ಪ್ರಚಾರ, ಪ್ರದರ್ಶನ, ರ್ಯಾಲಿ, ಧರಣಿ, ಉಪವಾಸ ಸತ್ಯಾಗ್ರಹ, ನ್ಯಾಯಾಲಯದಲ್ಲಿ ಕಾನೂನು ಸಮರಗಳೇ ಈ ಆಂದೋಲನ ಬಿಡದೆ ಹಿಡಿದ ಹತಾರುಗಳು. ಆಂದೋಲನದ ಬಲಿಷ್ಠ ಸಾತ್ವಿಕ ಪ್ರತಿಭಟನೆಯ ನೈತಿಕ ಒತ್ತಡಕ್ಕೆ ವಿಶ್ವಬ್ಯಾಂಕ್ ಮಣಿದು ಕೆಲ ಕಾಲವಾದರೂ ಸರ್ದಾರ್ ಸರೋವರ ಯೋಜನೆಯಿಂದ ಹಿಂದೆ ಸರಿಯಬೇಕಾಯಿತು. ಈ ಯೋಜನೆಯ ಸಾಧಕ ಬಾಧಕಗಳ ಕುರಿತು ವರದಿ ನೀಡಲು ಅಂತಾರಾಷ್ಟ್ರೀಯ ತಜ್ಞರ ಸ್ವತಂತ್ರ ಮರುವಿಮರ್ಶಾ ಸಮಿತಿಯೊಂದನ್ನು ಕೂಡ ನೇಮಕ ಮಾಡಬೇಕಾಯಿತು. ತೆರಬೇಕಿರುವ ಮಾನವ ಮತ್ತು ಪರಿಸರ ಹಾನಿಯ ಬೆಲೆಯನ್ನು ಅಂದಾಜು ಮಾಡದೆ ಈ ಯೋಜನೆಯನ್ನು ಮುಂದುವರೆಸುವುದು ಸೂಕ್ತವಲ್ಲ. ನದೀ ಪಾತ್ರದ ಜನತೆಯೊಡನೆ ಸಮಾಲೋಚಿಸದೆ ಅವರ ಮೇಲೆ ಹೇರಲಾಗಿರುವ ಯೋಜನೆಯಿದು ಎಂದು ಈ ಸಮಿತಿಯ ಅಧ್ಯಕ್ಷ ಬ್ರ್ಯಾಡ್ಫೋರ್ಡ್ ಮೋರ್ಸೆ ಅವರು ವಿಶ್ವಬ್ಯಾಂಕ್ ಗೆ ನೀಡಿರುವ ವರದಿಯಲ್ಲಿ ಹೇಳಿದ್ದಾರೆ.

ನರ್ಮದಾ ಕಣಿವೆಯ ಮುಳುಗಡೆ ಪ್ರದೇಶದಲ್ಲಿ ಪರಿಸರ ಸಂಬಂಧೀ ನೀತಿ ನಿಯಮಗಳನ್ನು ಸಾರಾಸಗಟಾಗಿ ಗಾಳಿಗೆ ತೂರಲಾಗಿದೆ ಎಂಬುದು ಮೇಧಾ ಆರೋಪ. ''ಪರಿಪೂರ್ಣ ಪರಿಸರ ಅನುಮೋದನೆಯೇ ಇಲ್ಲದೆ ಆರಂಭಿಸಲಾದ ಯೋಜನೆಯಿದು. ಸರ್ದಾರ್ ಸರೋವರದ ಪರಿಸರ ಸಂಬಂಧೀ ಇತಿಹಾಸವು ಕಾಯಿದೆ ಕಾನೂನುಗಳ ನಿಯಮಗಳ ಉಲ್ಲಂಘನೆಯ ಇತಿಹಾಸ. ಪರಿಸರ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರವನ್ನೇ ಕಾಣಿಸಿಲ್ಲ. ಆದಿವಾಸಿ ಸೀಮೆಗಳಿಗೆ ರೂಪಿಸಲಾಗುವ ಸಂಪನ್ಮೂಲ ನೀತಿಯಲ್ಲಿ ಅವರ ದನಿ ಇರಲೇಬೇಕು'' ಎಂಬ ಮೋರ್ಸ್ ಸಮಿತಿಯ ಮಾತನ್ನು ಮೇಧಾ ಸಮರ್ಥನೆಯಾಗಿ ಉಲ್ಲೇಖಿಸುತ್ತಾರೆ.

ಮರುವಸತಿಯ ಕುರಿತು ಬಿಜೆಪಿಯ ಕೈಯಲ್ಲೇ ಇರುವ ಕೇಂದ್ರ ಸರ್ಕಾರ, ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ಗುಜರಾತ್ ಸರ್ಕಾರಗಳು ಹೆಣೆದ ಸುಳ್ಳು ಮೋಸ ಮರೆಯ ಜಾಲವನ್ನು ನರ್ಮದಾ ಬಚಾವ್ ಆಂದೋಲನ ಸುಪ್ರೀಂ ಕೋರ್ಟ್ ಮುಂದೆ ನಗ್ನಗೊಳಿಸಿತು.

ಸರ್ದಾರ್ ಸರೋವರ ಜಲಾಶಯ ನಿರ್ಮಾಣ ವೆಚ್ಚ ಹತ್ತು ಪಟ್ಟು ಜಿಗಿದು 90 ಸಾವಿರ ಕೋಟಿ ರುಪಾಯಿ ತಲುಪಿದೆ. ಮೂವತ್ತು ವರ್ಷಗಳಲ್ಲಿ ಕಾಲುವೆ ಕೆಲಸ ಶೇ.30ರಷ್ಟು ಮಾತ್ರ ಪೂರ್ಣಗೊಂಡಿದೆ. ಅಚ್ಚುಕಟ್ಟು ಪ್ರದೇಶದ ಜಮೀನು ಮತ್ತು ಜಲಾಶಯದ ನೀರನ್ನು ಕಾರ್ಪೊರೇಟುಗಳಿಗೆ ಧಾರೆ ಎರೆಯಲಾಗಿದೆ. ಬಾಟಲಿ ನೀರು ಮಾರುವ ಸಂಸ್ಥೆಗಳಿಗೆ ತೀರಾ ಅಗ್ಗದ ದರಕ್ಕೆ ಲಕ್ಷಾಂತರ ಲೀಟರು ನೀರು ಹಂಚಿಕೆ ಮಾಡಲಾಗಿದೆ. ದೆಹಲಿ-ಮುಂಬಯಿ ಇಂಡಸ್ಟ್ರಿಯಲ್ ಕಾರಿಡಾರ್ ನ ಭಾಗವಾಗಿ ಗುಜರಾತಿನಲ್ಲಿ ತಲೆ ಎತ್ತಲಿರುವ ಭಾರೀ ಉದ್ಯಮಪತಿಗಳ ಕೈಗಾರಿಕಾ ಎಸ್ಟೇಟುಗಳಿಗೆ ಈ ನೀರು ಹರಿಯಲಿರುವ ನೀರು ರೈತನ ನೀರಾವರಿ ಮತ್ತು ಬಡವನ ಕುಡಿಯುವ ನೀರಿನ ಹೆಸರಿನಲ್ಲಿ ಸಂಗ್ರಹಿಸಿದ್ದೇ ಆಗಿದೆ.

ಸರ್ದಾರ್ ಸರೋವರದ ನೀರನ್ನು ರೈತನ ಹೊಲಕ್ಕೆ ಹರಿಸಲು 90,389 ಕಿ.ಮೀ. ಉದ್ದದ ಕಾಲುವೆ ನಿರ್ಮಿಸುವುದಾಗಿ ಗುಜರಾತ್ ಸರ್ಕಾರ ಘೋಷಿಸಿತ್ತು. ಈ ಉದ್ದವನ್ನು 71,748 ಕಿ.ಮೀ.ಗಳಿಗೆ ತಗ್ಗಿಸಲಾಗಿದೆ. ಕಾಲುವೆ ಉದ್ದ ತಗ್ಗಿದಷ್ಟೂ ನೀರಾವರಿ ಪ್ರದೇಶ ಸಂಕುಚನಗೊಳ್ಳುತ್ತದೆ. 2017-18ರಲ್ಲಿ 3,856 ಕಿ.ಮೀ.ಗಳಷ್ಟು ಉದ್ದ ಕಾಲುವೆ ನಿರ್ಮಾಣ ನಡೆಯಲಿದೆಯಂತೆ. ನಿರ್ಮಾಣ ಈ ವೇಗದಲ್ಲಿ ಸಾಗಿದರೆ ಕಾಲುವೆ ಕೆಲಸ ಮುಗಿಯಲು ಇನ್ನೂ 11 ವರ್ಷಗಳಾದರೂ ಬೇಕು. ವರ್ಷಕ್ಕೆ ಒಂಬತ್ತು ಸಾವಿರ ಕೋಟಿಯಂತೆ ಒಟ್ಟು 99 ಸಾವಿರ ಕೋಟಿ ರುಪಾಯಿ ವೆಚ್ಚ ಮಾಡಬೇಕು. ಈಗ ನಿರ್ಮಿಸಲಾಗಿರುವ ಕಾಲುವೆಗಳ ಗುಣಮಟ್ಟವು ಕಾಲುವೆಗಳಿಗೇ ಅವಮಾನ ಎನ್ನುತ್ತಾರೆ ಗುಜರಾತಿನ ಮಾಜಿ ಮುಖ್ಯಮಂತ್ರಿ ಸುರೇಶ್ ಮೆಹ್ತಾ.

ಗುಜರಾತಿನ ನೀರಾವರಿ ಹಿತ ಮತ್ತು ಬರಪೀಡಿತ ಪ್ರದೇಶಗಳ ಹಿತ ಬಲಿಕೊಟ್ಟು ಕೋಕಕೋಲಾ ಕಾರ್ಖಾನೆಗೆ ದಿನಕ್ಕೆ 30 ಲಕ್ಷ ಲೀಟರು ಮತ್ತು ಕಾರು ಉದ್ಯಮಗಳಿಗೆ ನಿತ್ಯ 60 ಲಕ್ಷ ಲೀಟರು ನೀರು ಹಂಚಿಕೆ ಮಾಡಲಾಗಿದೆ ಎಂಬ ಮೇಧಾ ಆಪಾದನೆಯನ್ನು ಗುಜರಾತ್ ಸರ್ಕಾರ ಅಲ್ಲಗಳೆದಿಲ್ಲ. ಮಧ್ಯಪ್ರದೇಶದಲ್ಲಿ ಸರ್ದಾರ್ ಸರೋವರ ಮರುವಸತಿ ಸಂಬಂಧ ಸಾವಿರ ಕೋಟಿ ರುಪಾಯಿಗಳ ಹಗರಣ ಮತ್ತು ಸಾವಿರಾರು ನಕಲಿ ಜಮೀನು ನೋಂದಣಿ ಪ್ರಕರಣಗಳ ಕುರಿತು ನ್ಯಾಯಮೂರ್ತಿ ಶ್ರವಣ ಶಂಕರ ಝಾ ನೇತೃತ್ವದ ಆಯೋಗ ಹೇಳಿರುವ ಮಾತೊಂದನ್ನು ಗಮನಿಸಬೇಕು- ''ಬಡ ಆದಿವಾಸಿಗಳನ್ನು ದಲ್ಲಾಳಿಗಳು ಸುಲಿದು ತಿಂದಿದ್ದಾರೆ. ಅವರ ಜೀವನೋಪಾಯವನ್ನು ಕಿತ್ತುಕೊಳ್ಳಲಾಗಿದ್ದು ದಿನಗೂಲಿಗಳ ದಯನೀಯ ಸ್ಥಿತಿಗೆ ಅವರನ್ನು ತುಳಿಯಲಾಗಿದೆ. ಅವರ ಹಣವನ್ನು ದಲ್ಲಾಳಿಗಳು ನುಂಗಿ ನೊಣೆದಿದ್ದಾರೆ. ಈ ಆಯೋಗದ ಮುಂದೆ ಹಾಜರಾಗಿದ್ದ ನಿರ್ಗತಿಕ ಆದಿವಾಸಿಗಳಿಗೆ ತೊಡಲು ಸರಿಯಾದ ಬಟ್ಟೆ ಕೂಡ ಇರಲಿಲ್ಲ. ಸೊಂಟದ ಮೇಲೆ ಸುತ್ತಿಕೊಂಡ ತುಂಡು ಬಟ್ಟೆ ಬಿಟ್ಟರೆ ಅವರಿಗೆ ಬೇರೇನೂ ಗತಿಯಿರಲಿಲ್ಲ''

ನೆಲ ನಂಬಿದವರ ಬದುಕುಗಳನ್ನು ನದಿಯನ್ನು ಕಾಡು ಕಣಿವೆಗಳನ್ನು ಉಳಿಸಿಕೊಳ್ಳಲು ನಡೆದಿರುವ  ಈ ಐತಿಹಾಸಿಕ ಆಂದೋಲನದ ಹಿಂದೆ ನರ್ಮದೆಯ ಮಗಳಾದ ಮೇಧಾ ಎಂಬ ತಾಯಿ ಸಂಘಟಿಸಿದ ಜನಶಕ್ತಿಯಿದೆ. ಕೆಂಪಾಗಿ ಹರಿಯುತ್ತಿದ್ದಾಳೆ ನರ್ಮದೆ. ಅನ್ಯಾಯವೇ ಕಾನೂನು ಕಾಯಿದೆಗಳ ರೂಪ ಧರಿಸಿ ನಿಂತರೆ ಪ್ರತಿರೋಧಿಸುವುದು ಕರ್ತವ್ಯವಾಗುತ್ತದೆ ಎನ್ನುತ್ತಾರೆ ಮೇಧಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT