ಶುಕ್ರವಾರ, ಮೇ 20, 2022
21 °C

ಮೊದಲ ಅಭಿಪ್ರಾಯ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಶಾಲೆಯ ವಾರ್ಷಿಕೋತ್ಸವಕ್ಕೆ ಇನ್ನು ಎರಡೇ ದಿನ ಉಳಿದಿದ್ದವು. ಮಾಡುವ ಕೆಲಸಗಳು ಬಹಳಷ್ಟಿದ್ದವು. ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದ ಜವಾಬ್ದಾರಿ ಹೊತ್ತಿದ್ದ ಸರೋಜಾ ಮೇಡಂ ಸುತ್ತಮುತ್ತ ನೋಡಿದರು. ಇಡೀ ವರ್ಷ ಬೇರೆ ಬೇರೆ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆಲ್ಲ ಸರ್ಟಿಫಿಕೇಟುಗಳು ಸಿದ್ಧವಾಗಿವೆ. ಅವುಗಳಿಗೆ ಪ್ರಾಂಶುಪಾಲರ ಸಹಿ ಮಾಡಿಸಬೇಕು. ತಕ್ಷಣ ಇಂಟರ್‌ಕಾಂನಲ್ಲಿ ಪ್ರಾಂಶುಪಾಲರಿಗೆ ಫೋನ್ ಮಾಡಿ ಕೇಳಿದರು,  ಸರ್, ಸುಮಾರು ಇನ್ನೂರು ಸರ್ಟಿಫಿಕೇಟುಗಳಿಗೆ ನಿಮ್ಮ ಸಹಿಯಾಗಬೇಕು. ತಮಗೆ ಸಮಯವಿರದಿದ್ದರೆ ರಬ್ಬರ್ ಸ್ಟಾಂಪು ಹಾಕಿಸಿಬಿಡಲೇ. ಪ್ರಾಂಶುಪಾಲರು,  ಪರವಾಗಿಲ್ಲ, ನಾನು ಬಿಡುವಾಗಿದ್ದೇನೆ. ಯಾರೊಡನೆಯೋ ಅವುಗಳನ್ನು ಕಳುಹಿಸಿಕೊಡಿ, ಸಹಿ ಮಾಡಿ ಕಳುಹಿಸುತ್ತೇನೆ  ಎಂದರು. ಸರೋಜ ಅತ್ತಿತ್ತ ನೋಡಿದರು. ಅಲ್ಲಿ ಸ್ವಯಂಸೇವಕನಾಗಿ ಓಡಾಡುತ್ತಿದ್ದ ಸುಧಾಕರ ಕಂಡ. ಅವನು ಒಂಬತ್ತನೇ ತರಗತಿಯ ವಿದ್ಯಾರ್ಥಿ. ಅವನ ಕೈಯಲ್ಲಿ ಆ ಸರ್ಟಿಫಿಕೇಟುಗಳನ್ನು ಕೊಟ್ಟು ಪ್ರಾಂಶುಪಾಲರ ಸಹಿ ಹಾಕಿಸಿಕೊಂಡು ಬರುವಂತೆ ಹೇಳಿ ಕಳುಹಿಸಿದರು.ಸುಧಾಕರ ಪ್ರಾಂಶುಪಾಲರ ಕೊಠಡಿಯ ಬಾಗಿಲು ತಟ್ಟಿ ಸರ್ಟಿಫಿಕೇಟ ಬಗ್ಗೆ ಹೇಳಿದ. ಆಗ ಅವರು,  ಹೌದು ಅವುಗಳನ್ನು ಇಲ್ಲಿ ತಾ. ನೀನು ಇಲ್ಲೆೀ ಇರು, ಸಹಿ ಮಾಡಿ ಕೊಟ್ಟುಬಿಡುತ್ತೇನೆ. ಇಲ್ಲವಾದರೆ ಇವು ಉಳಿದ ಕಾಗದಗಳೊಂದಿಗೆ ಸೇರಿ ಹೋಗಿಬಿಡುತ್ತವೆ ಎಂದರು. ಸುಧಾಕರ  ಸರಿ ಸರ್  ಎಂದು ನಿಂತುಕೊಂಡ. ಪ್ರಾಂಶುಪಾಲರು ಒಂದಾದ ಮೇಲೆ ಒಂದರಂತೆ ಸರ್ಟಿಫಿಕೇಟುಗಳನ್ನು ಸಹಿ ಮಾಡತೊಡಗಿದರು. ಸುಧಾಕರ ಪ್ರಾಂಶುಪಾಲರ ಕೊಠಡಿಯ ಒಳಭಾಗವನ್ನು ನೋಡಿದ್ದು ಇದೇ ಮೊದಲ ಸಲ. ಸುತ್ತ ಕಣ್ಣು ತಿರುಗಿಸಿ ನೋಡಿದ. ಪ್ರಾಂಶುಪಾಲರು ಇನ್ನೂ ಸಹಿ ಮಾಡುತ್ತಲೇ ಇದ್ದರು. ಕೊಠಡಿಯೊಳಗೆ ಬಂದಾಗ ಇದ್ದ ಭಯ ಕೊಂಚ ಮಾಯವಾಗಿತ್ತು. ನೇರವಾಗಿ ನಿಂತಿದ್ದ ಸುಧಾಕರ ದೇಹದ ಭಾರವನ್ನು ಒಂದೇ ಕಾಲ ಮೇಲೆ ಹಾಕಿ ಸೊಟ್ಟ ನಿಂತ. ತಲೆ ಕೆರೆದುಕೊಂಡು ನೋಡಿದ, ಸಹಿ ಮಾಡುವುದು ನಡೆದೇ ಇತ್ತು. ಅವನಿಗೆ ಬೇಜಾರಾಗುತ್ತಿತ್ತು. ಒಂದು ಕಾಲನ್ನು ಊರಿ ಮತ್ತೊಂದು ಕಾಲಿನ ಬೂಟಿನ ತುದಿಯಿಂದ ನೆಲದ ಮೇಲೆ ಚಿತ್ರ ಬಿಡಿಸಲಾರಂಭಿಸಿದ. ಸಹಿ ಮಾಡುತ್ತಿದ್ದ ಪ್ರಾಂಶುಪಾಲರು ಕಡೆಗಣ್ಣಿನಿಂದ ಸುಧಾಕರನನ್ನೊಮ್ಮೆ ನೋಡಿದರು. ಅವನು ಎತ್ತರದ ಆಳು. ಹಾಕಿಕೊಂಡಿದ್ದ ಪ್ಯಾಂಟು ಮುದ್ದೆಯಾಗಿದೆ, ಒಳಗೆ ಸೇರಿಸಿದ್ದ ಷರ್ಟು ಒಂದಷ್ಟು ಹೊರಗೆ ಬಂದಿದೆ, ತಲೆ ಕೆದರಿದೆ. ಸುಮ್ಮನೆ ನಿಲ್ಲದೇ ಒಂಟಿಗಾಲಿನ ಮೇಲೆ ನಿಂತು ಏನೇನೋ ಮಾಡುತ್ತಿದ್ದಾನೆ. ಈ ಹುಡುಗ ಕೊಂಚ ಬೇಜವಾಬ್ದಾರಿ ಎನ್ನಿಸಿತು. ಸರ್ಟಿಫಿಕೇಟುಗಳಿಗೆ ಸಹಿ ಮಾಡಿ ಕೊಟ್ಟು ಕಳುಹಿಸಿದರು.ನಂತರ ಸರೋಜರಿಗೆ ಫೋನ್ ಮಾಡಿ,  ಆ ಹುಡುಗ ಯಾರು. ಯಾವ ಕ್ಲಾಸು  ಎಂದು ಕೇಳಿದರು. ಆಕೆ, ಯಾಕೆ ಸರ್, ಏನಾದರೂ ತಪ್ಪು ಮಾಡಿದನೇ.  ಎಂದರು ಆತಂಕದಿಂದ. ಇಲ್ಲ, ತಪ್ಪೇನೂ ಮಾಡಲಿಲ್ಲ. ಆದರೆ, ಹುಡುಗ ತುಂಬ ಆಲಸಿ, ಶಿಸ್ತು ಇಲ್ಲ. ಅವನಿಗೆ ಸ್ವಲ್ಪ ಸರಿಯಾಗಿ ಬುದ್ಧಿ ಹೇಳಬೇಕು  ಎಂದರು ಪ್ರಾಂಶುಪಾಲರು. ಆಗ ಸರೋಜ ಹೇಳಿದರು. ಸುಧಾಕರ ಹಾಗಿಲ್ಲ ಸರ್. ಆತ ಬಹಳ ಒಳ್ಳೆಯ ಹುಡುಗ.ಅಲ್ಲದೇ ತುಂಬ ಪ್ರಾಮಾಣಿಕ ಸ್ವಯಂಸೇವಕ. ಯಾವ ಕೆಲಸ ಕೊಟ್ಟರೂ ಮಾಡುತ್ತಾನೆ. ಅಭ್ಯಾಸದಲ್ಲೂ ಮುಂದಿದ್ದಾನೆ. ಹೌದೇ. ಅವನನ್ನು ನೋಡಿದರೆ ಹಾಗೆ ಎನ್ನಿಸುವುದಿಲ್ಲ  ಎಂದರು ಪ್ರಾಂಶುಪಾಲರು. ಇಬ್ಬರ ಅಭಿಪ್ರಾಯವೂ ಸರಿ. ಪ್ರಾಂಶುಪಾಲರು ಸುಧಾಕರನನ್ನು ಮೇಲಿಂದ ಮೇಲೆ ನೋಡುವುದು ಅಸಾಧ್ಯ. ಅವರು ಕಂಡ ಮೊದಲ ನೋಟದಲ್ಲೆೀ ಅಭಿಪ್ರಾಯ ಮೂಡಿಸಿಕೊಂಡರು. ಆದರೆ, ಶಿಕ್ಷಕಿ ಸರೋಜ ಆ ಹುಡುಗನನ್ನು ದಿನವೂ ನೋಡುವುದರಿಂದ ಅಭಿಪ್ರಾಯ ತಿದ್ದಿಕೊಂಡು ಪರಿಶೀಲಿಸಲು ಸಾಧ್ಯವಿತ್ತು. ನಮ್ಮ ಬದುಕಿನಲ್ಲೂ ಹಾಗೆಯೇ. ಈ ರಭಸದ ಪ್ರಪಂಚದಲ್ಲಿ ನಮಗೆ ಜನರನ್ನು ಬಹಳಷ್ಟು ಬಾರಿ ಗಮನಿಸುವ ಅವಕಾಶ ದೊರಕದೇ ಮೊದಲ ನೋಟದಲ್ಲಿ ಅವರ ಬಗ್ಗೆ ಅಭಿಪ್ರಾಯ ಮೂಡಿಸಿಕೊಳ್ಳುತ್ತೇವೆ. ಒಬ್ಬ ಆಟೊ  ಡ್ರೈವರ್ ಮೋಸ ಮಾಡಿದರೆ ಎಲ್ಲ ಆಟೊ ಡ್ರೈವರುಗಳೂ ಹಾಗೆಯೇ ಎನ್ನುತ್ತೇವೆ. ಒಂದು ಹೋಟೆಲ್‌ನಲ್ಲಿ ಒಬ್ಬ ಸರಬರಾಜು ಮಾಡುವ ಹುಡುಗ ನಗುನಗುತ್ತ ಸೇವೆ ಸಲ್ಲಿಸಿದರೆ ಹೋಟೆಲ್ ಬಹಳ ಚೆನ್ನಾಗಿದೆ ಎನ್ನುತ್ತೇವೆ. ನಮ್ಮ ಬಗ್ಗೆ ಮತ್ತೊಬ್ಬರಿಗೆ ಒಳ್ಳೆಯ ಅಭಿಪ್ರಾಯ ಬರಬೇಕಾದರೆ ನಮಗಿರುವುದು ಒಂದೇ ಅವಕಾಶ, ಅದು ಮೊದಲನೇ ಅಭಿಪ್ರಾಯ.ಆದ್ದರಿಂದ ನಾವು ವ್ಯವಹರಿಸುವಾಗ ಮೊದಲನೇ ಅವಕಾಶದಲ್ಲೆೀ ನಮ್ಮ ಬಗ್ಗೆ ಒಳ್ಳೆಯಭಿಪ್ರಾಯ ಬರುವಂತೆ, ವಿನಯದಿಂದ, ಮೃದುವಾಗಿ, ಪ್ರೀತಿಯಿಂದ, ಆತ್ಮೀಯತೆಯಿಂದ, ವಿಶ್ವಾಸದಿಂದ ಪ್ರತಿ ಹೆಜ್ಜೆ ಇಡುವುದು ಬಹಳ ಒಳ್ಳೆಯದು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.