ಬುಧವಾರ, ಮಾರ್ಚ್ 3, 2021
22 °C

ಯಕ್ಷರ ಕಲೆಯಲ್ಲಿ ಕಿನ್ನರನ ಹೆಜ್ಜೆಗಳು

ಬನ್ನಂಜೆ ಸಂಜೀವ ಸುವರ್ಣ Updated:

ಅಕ್ಷರ ಗಾತ್ರ : | |

ಯಕ್ಷರ ಕಲೆಯಲ್ಲಿ ಕಿನ್ನರನ ಹೆಜ್ಜೆಗಳು

ನನ್ನ ಆಸರೆದಾತರೂ ಗುರುಗಳೂ ಆಗಿದ್ದ ಗುಂಡಿಬೈಲು ನಾರಾಯಣ ಶೆಟ್ಟರ ಪೂರ್ವಾನುಮತಿ ಇಲ್ಲದೆ ಹುಲಿ ವೇಷ ಹಾಕಿದ್ದು ತಪ್ಪಾಯಿತು ಎಂದು ಮನಸ್ಸಿನೊಳಗೆ ಅನ್ನಿಸತೊಡಗಿತ್ತು. ಆದರೆ, ಅವರೇ ಕರೆಸಿದ ಕಾರಣ, ಬಾಲ ಬಿಚ್ಚಿ ಮೆಲ್ಲನೆ ಮರೆಯಿಂದ ತೆರೆದುಕೊಂಡು ಅವರ ಮನೆಯಂಗಳಕ್ಕೆ ಕಾಲಿಟ್ಟೆ. ನಾನು ಉಂಡು ಮಲಗುತ್ತಿದ್ದ ಮನೆಯಲ್ಲವೆ, ಅದು! ನಾನೇ ಮಡಚಿಟ್ಟ ತುಂಡು ಚಾಪೆ ಗೋಣಿ ಸಮೇತವಾಗಿ ನನ್ನನ್ನು ಅಣಕಿಸುತ್ತ ಜಗಲಿಯ ಮೂಲೆಯಲ್ಲಿ ಮಲಗಿತ್ತು. “ನೀನು ಭಾರಿ ಹುಲಿ ವೇಷ ಕುಣಿಯುವಿಯಂತೆ, ನಿನ್ನ ಕುಣಿತವನ್ನು ನಾನೂ ನೋಡಬೇಕು” ಎಂದರು ನಾರಾಯಣ ಶೆಟ್ಟರು. ಡಣ್ಡಕ್ ಡರ‌್ಡಕ್ ಎನ್ನುತ್ತ ತಾಸೆ ವಾದ್ಯದವರು ಆವೇಶದಿಂದ ಬಾರಿಸುತ್ತಿದ್ದಂತೆ ತಧೀಂ ತಕಧೀಂ ತಕಿಟ ತಕಧೀಂ ಅಷ್ಟತಾಳದ ನಡೆಯಲ್ಲಿ ಹೆಜ್ಜೆಗಳನ್ನು ಹಾಕತೊಡಗಿದೆ. ಕುಣಿತ ಆರಂಭವಾಗಿ ಮೂರ‌್ನಾಲ್ಕು ನಿಮಿಷ ಕಳೆದಿರಬಹುದು, ಬೆನ್ನ ಮೇಲೆ ರಪ್ಪನೆ ಕೋಲಿನೇಟು ಬಿತ್ತು. ವಾದ್ಯವಾದನಗಳೆಲ್ಲ ಸ್ತಬ್ಧ!ನಾನು ಹಿಂತಿರುಗಿ ನೋಡಿದಾಗ ಗುರುಗಳು ಕೋಲು ಹಿಡಿದುಕೊಂಡು ರೌದ್ರರಸದ ಸಂಚಾರಿ ಭಾವದಲ್ಲಿ ನಿಂತಿದ್ದರು. ಇನ್ನು ನಿಂತರೆ ಸತ್ತೇ ಹೋಗುತ್ತೇನೆಂದು ತಿಳಿದದ್ದೇ, ಬಾಲ ಮಡಚಿಕೊಂಡು ಓಟ ಕಿತ್ತೆ. ಬೆಕ್ಕಿನಂತೆ ಓಡುತ್ತಿರುವ ಹುಲಿಯನ್ನು ನೋಡಿ ನಗುವ ಧೈರ್ಯ ಯಾರಿಗೂ ಇರಲಿಲ್ಲ. ಗುರುಗಳು ಆಜ್ಞಾಪಿಸಿದರು, “ಅವನನ್ನು ಕರೆತನ್ನಿ”. ಆದೇಶ ಬಂದ ಮೇಲೂ ಹೋಗದಿದ್ದರೆ ಭವಿಷ್ಯದಲ್ಲಿ ಆ ಮನೆಯ ಆಸರೆಯನ್ನೇ ಶಾಶ್ವತವಾಗಿ ಕಳೆದುಕೊಳ್ಳುತ್ತೇನೆಂಬ ಭೀತಿಯಲ್ಲಿ ಸದ್ದಿಲ್ಲದ ಹೆಜ್ಜೆಯಲ್ಲಿ ಅಂಗಳಕ್ಕೆ ಮರಳಿದೆ. “ಯಾರಲ್ಲಿ... ಸೀಮೆ ಎಣ್ಣೆ ಡಬ್ಬಿ ತನ್ನಿ” ಗುರುಗಳು ಹುಲಿಯಂತೆ ಗರ್ಜಿಸಿದರು.“ಈಗಲೇ ಸೀಮೆ ಎಣ್ಣೆಯಿಂದ ಬಣ್ಣ ತೆಗೆಯಬೇಕು... ಹುಲಿಯ ವೇಷ ಹಾಕಿಕೊಂಡು ಯಕ್ಷಗಾನದ ಹೆಜ್ಜೆ ಹಾಕುತ್ತಾನೆ! ಯಕ್ಷಗಾನದಲ್ಲೇನಾದರೂ ಸಾಧನೆ ಮಾಡಲಿ ಎಂದು ನಾನು ಭಾವಿಸಿದರೆ ಇವನದ್ದು ಹುಲಿಯ ವೇಷವಂತೆ, ಹುಲಿಯ ವೇಷ! ಇವನು ಉಪವಾಸ ಬಿದ್ದು ಸಾಯಬೇಕು... ಇವತ್ತಿನಿಂದ ಇವನಿಗೆ ಊಟ ಹಾಕಬಾರದು” ಎಂದು ಆಜ್ಞಾಪಿಸುತ್ತ ಒಳಗೆ ನಡೆದು ಬಿಟ್ಟರು. “ಇವನಿಗೆ ಬಣ್ಣ ಹಚ್ಚಲು ದುಡ್ಡು ಕೊಟ್ಟವರಾರು... ನೀನು ಕೊಟ್ಟಿದ್ದೀಯೇನೆ?” ಎಂದು ಪತ್ನಿಗೆ ಗದರಿಸುತ್ತಿದ್ದುದು ಒಳಗಿನಿಂದ ಕೇಳಿಸುತ್ತಿತ್ತು.ಕುರುವಾಗಿಲಿನಿಂದ ಗುರುಗಳ ಪತ್ನಿ ನನ್ನತ್ತ ನೋಡಿ, “ಅಯ್ಯ್! ನಮ್ಮ ಮನೆಯಂಗಳಕ್ಕೆ ಕುಣಿದುಕೊಂಡು ಬರಬಾರದು ಅಂದಿದ್ದೆ. ನಾನು ನಿನಗೆ ಹದಿನೈದು ರೂಪಾಯಿ ಕೊಟ್ಟದ್ದೇ ತಪ್ಪಾಯಿತು. ಎಲ್ಲ ಕೆಡಿಸಿಬಿಟ್ಟೆ” ಎಂದು ಗೊಣಗಿದರು.ಬಣ್ಣ ತೆಗೆಯದೆ ವಿಧಿಯಿಲ್ಲ. ಸೀಮೆಎಣ್ಣೆ ಮೈಗೆ ತಾಗಿದಾಗ ಉರಿಯೋ ಉರಿ. ಅರೆಬಣ್ಣದ ಮೈಯಲ್ಲಿ ಹಟ್ಟಿಯ ಮೂಲೆಯಲ್ಲಿ ಕುಳಿತಾಗ ಸಂಜೆಯ ಪರದೆ ಮೆಲ್ಲನೆ ಇಳಿಯಲಾರಂಭಿಸಿತ್ತು. ರಾತ್ರಿಯಾದರೂ ಮನೆಯೊಳಗಿನಿಂದ ಊಟಕ್ಕೆ ಕರೆಯುವ ಲಕ್ಷಣ ಕಾಣಿಸಲಿಲ್ಲ. ಮಧ್ಯರಾತ್ರಿಗೆ ಇನ್ನು ಕೆಲವೇ ತಾಸು.ಹಸಿವಿನ ಯಾತನೆಯಲ್ಲಿ ನಿದ್ದೆಯೂ ಸುಳಿಯುತ್ತಿರಲಿಲ್ಲ. ಅಷ್ಟರಲ್ಲಿ ಕಿರುವಾಗಿಲು ಕಿರ‌್ರನೆ ತೆರೆದುಕೊಂಡಿತು. ಅಮ್ಮನಂತಿದ್ದ ಮನೆಯೊಡತಿ, “ನಾನು ಊಟ ಕೊಟ್ಟದ್ದನ್ನು ಕೂಡ ಅವರಲ್ಲಿ ಹೇಳಿ ನನಗೆ ಮತ್ತೆ ಬೈಗಳು ತಿನ್ನಿಸಬೇಡ ಪುಣ್ಯಾತ್ಮ... ಈಗ ಉಂಡು ಮಲಗಿ ಬಿಡು” ಎಂದು ಅನ್ನಸಾರು ಹಾಕಿದ ಬಟ್ಟಲನ್ನು ಕೊಟ್ಟು ಒಳಗೆ ನಡೆದರು.ಹುಲಿಯ ವೇಷವನ್ನು ಯಕ್ಷಗಾನದ ಹೆಜ್ಜೆಗಳಲ್ಲಿ ಕುಣಿಯಬಾರದು, ಯಕ್ಷಗಾನದ ರಂಗಸ್ಥಳದಲ್ಲಿ ಹುಲಿಯ ಹೆಜ್ಜೆ ಹಾಕಬಾರದು! ಆಯಾ ಕಲೆಯನ್ನು ಆಯಾ ಕಲೆಯ ಅನನ್ಯತೆಯೊಂದಿಗೆ ಉಳಿಸಿಕೊಳ್ಳುವ ಹೊಸ ಎಚ್ಚರವೊಂದು ನನಗರಿವಿಲ್ಲದಂತೆಯೇ ಮೂಡಿದ ಕ್ಷಣವದು. ಯಾವುದೇ ಕಲೆ ಅನನ್ಯವಾಗಿದ್ದರೆ ಮಾತ್ರ ಅದನ್ನು ಬೇರೆ ಕಲೆಯೊಂದಿಗೆ ಅನನ್ಯವಾಗಿ ಗುರುತಿಸಬಹುದು. `ಸ್ವಂತಿಕೆ' ಮತ್ತು `ಮುಕ್ತತೆ'ಯನ್ನು ಸಮನ್ವಯಗೊಳಿಸುವ ಅರೆಬರೆ ತಿಳಿವಳಿಕೆಯೊಂದು ನನ್ನಲ್ಲಿ ಮೂಡಿದ ಬಳಿಕ, ಇವತ್ತಿಗೂ ನಾನು ಇಡುತ್ತಿರುವ ಹೆಜ್ಜೆ ಯಾವುದು ಎಂದು ಮತ್ತೊಮ್ಮೆ ಪರಿಶೀಲಿಸತೊಡಗುತ್ತೇನೆ. ನನ್ನ ಬದುಕಿಗೆ ದಾರಿ ತೋರಿದ ಎಷ್ಟೊಂದು ಹೆಜ್ಜೆಗಳಿವೆ! ಗುಂಡಿಬೈಲು ನಾರಾಯಣ ಶೆಟ್ಟರದ್ದು, ಮೆಟ್ಕಲ್ ಕೃಷ್ಣಯ್ಯ ಶೆಟ್ಟರದ್ದು, ಮಾರ್ಗೋಳಿ ಗೋವಿಂದ ಸೇರೆಗಾರರದ್ದು, ಮಟಪಾಡಿ ವೀರಭದ್ರ ನಾಯಕರದ್ದು, ಹಾರಾಡಿ ನಾರಾಯಣ ಗಾಣಿಗರದ್ದು, ವಿದುಷಿ ಮಾಯಾರಾಯರದ್ದು, ಬಿ.ವಿ. ಕಾರಂತರದ್ದು ಮತ್ತು ಶಿವರಾಮ ಕಾರಂತರದ್ದು...

***

ಯಾವ ಹೆಜ್ಜೆಗಳಿವು! ಅಂಥ ಇಳಿವಯಸ್ಸಿನಲ್ಲಿಯೂ ಪಾದರಸದಂತೆ ಚಲಿಸುತ್ತಿರುವ ಅವರ ಪಾದಗಳನ್ನೊಮ್ಮೆ ನೋಡಿದೆ. ಯಕ್ಷಗಾನದ ಎಲ್ಲ ತಾಳಗಳಿಗೂ ಹೊಂದಿಕೊಳ್ಳಬಹುದಾದ ವಿಶಿಷ್ಟ ಹೆಜ್ಜೆಗಳು ಶಿವರಾಮ ಕಾರಂತರದು!ಅವರೇ ಹೇಳಿಕೊಳ್ಳುತ್ತಿದ್ದಂತೆ ಅದು ಕಿನ್ನರ ನೃತ್ಯ. ಯಕ್ಷರ ನಡುವೆ ಬೇರೆಯೇ ಆಗಿ ಕಿನ್ನರನಂತೆ ಮೆರೆಯುತ್ತಿದ್ದರು ಶಿವರಾಮ ಕಾರಂತರು! ಶಿವರಾಮ ಕಾರಂತರ ವ್ಯಕ್ತಿತ್ವವೇ ಹಾಗೆ, ಆನೆ ನಡೆದ ಹಾಗೆ! ತನ್ನ ದಾರಿಯನ್ನು ತಾನೇ ನಿರ್ಮಿಸುವಂಥ ಮಾರ್ಗರೂಪಕ!ಆಂಗಿಕ ಮಾತ್ರವಲ್ಲ, ಆಹಾರ್ಯದಲ್ಲೂ ತಮ್ಮ ಯಕ್ಷಗಾನ ಪ್ರಯೋಗ ಭಿನ್ನವಾಗಿ ನಿಲ್ಲಬೇಕೆಂದು ಬಯಸಿದ್ದರು. ಹಾಗಾಗಿ ಸಾಂಪ್ರದಾಯಿಕ ವೇಷಭೂಷಣಗಳಲ್ಲಿನ ದೋಷಗಳನ್ನು ಸೂಕ್ಷ್ಮವಾಗಿ ಗಮನಿಸಿದರು. ನಾವು ಕಲಾವಿದರು ಕುಣಿಯುವಾಗ ಲೋಹದಿಂದ ತಯಾರಿಸಿದ ಕಾಲ್ಗಡಗವೂ ಗೆಜ್ಜೆಯೂ ಪರಸ್ಪರ ಘರ್ಷಿಸಿ ಟಕ ಟಕ ಶಬ್ದವಾಗುತ್ತಿತ್ತು. ಇದು ಅಪಶ್ರುತಿಯಲ್ಲಿರುತ್ತಿತ್ತು. ತಾಳ- ಮದ್ದಲೆ- ಚೆಂಡೆಗಳ ಶ್ರುತಿಗೆ ಹೊಂದುವಂಥ ಗೆಜ್ಜೆಯನ್ನೂ ಕಾರಂತರ ಮಾರ್ಗದರ್ಶನದಲ್ಲಿಯೇ ಸಿದ್ಧಗೊಳಿಸಲಾಗಿದ್ದರೂ ಕಡಗ-ನೂಪುರಗಳು ಘರ್ಷಿಸುವ ಸಮಸ್ಯೆ ಹಾಗೆಯೇ ಉಳಿದಿತ್ತು. ಒಮ್ಮೆ ರಿಹರ್ಸಲ್‌ಗೆ ಶಿವರಾಮ ಕಾರಂತರು ಬಂದಾಗ ಅವರ ಕೈಯಲ್ಲಿ ಉರುಟಾದ ವಸ್ತುವನ್ನು ಗಮನಿಸಿದೆವು. ನೋಡಿದರೆ ಹೊಸ ಕಾಲ್ಗಡಗ!ಮೂರ‌್ನಾಲ್ಕು ಸೆಣಬಿನ ಚೀಲದ ತುಂಡುಗಳನ್ನು ಜೊತೆಯಾಗಿರಿಸಿ ಮೇಣದಿಂದ ಪರಸ್ಪರ ಅಂಟಿಸಿ, ಮೇಲೆ ಕೆಳಗಿನ ಎರಡೂ ಅಂಚುಗಳಿಗೆ ದಪ್ಪನೆಯ ಹಗ್ಗ ಸುತ್ತಿ, ಇಡೀ ರಚನೆಗೆ ಬೆಳ್ಳಿ ಬಣ್ಣವನ್ನು ಹಚ್ಚಿ, ತಾವೇ ತಯಾರಿಸಿದ ಕಾಲ್ಗಡಗವನ್ನು ತಂದು ನನ್ನ ಕೈಗೆ ಕೊಟ್ಟರು. “ಇದನ್ನು ಕಾಲಿಗೆ ಕಟ್ಟು... ಗೆಜ್ಜೆಯೂ ಕಡಗವೂ ತಾಗಿ ಅಪಶ್ರುತಿಯ ಶಬ್ದ ಹೇಗೆ ಬರುತ್ತದೆ ನೋಡೋಣ” ಎಂದರು. ಹೌದಲ್ಲ! ಈಗ ಟಕ ಟಕ ಸದ್ದಿನ ಸಮಸ್ಯೆಯಿಲ್ಲ. ನೋಟಕ್ಕೂ ಅಭಾಸವಾಗದೆ, ಲೋಹದ ಕಡಗದಂತೆಯೇ ಇತ್ತು. ಕಾಲಿಗೆ ಅಂಟಿಕೊಂಡಂತೆ ರೂಪಿಸಿದ ರಚನೆಯಾದುದರಿಂದ ಕುಣಿತದ ನಡುವೆ ಕಟ್ಟು ಬಿಚ್ಚಿದರೂ ಬಿದ್ದು ಹೋಗುವ ಸಾಧ್ಯತೆ ಇರಲಿಲ್ಲ, ಹಳೆಯ ಕಾಲ್ಗಡಗದಂತೆ.ಒಮ್ಮೆ ಶಿವರಾಮ ಕಾರಂತರು ಯಕ್ಷಗಾನ ಕೇಂದ್ರದ ಮುಂದೆ ಕಾರು ನಿಲ್ಲಿಸಿ, ನನ್ನನ್ನು ಕರೆಸಿದರು, “ಕಾರಿನಲ್ಲಿ ಕುಳಿತುಕೋ, ಲೋಹದ ಪಾತ್ರೆಗಳ ಅಂಗಡಿಗೆ ಹೋಗಬೇಕು” ಎಂದರು. ಅಂಥ ಒಂದು ಅಂಗಡಿಗೆ ಹೋಗಿ ಅಲ್ಯುಮಿನಿಯಂನ ಎರಡು ಚಿಕ್ಕ-ದೊಡ್ಡ ಗಾತ್ರಗಳ ತಂಬಿಗೆಗಳನ್ನು ಪಡೆದು, ಮೇಜಿನ ಮೇಲೆ ಒಂದರ ಮೇಲೊಂದು ಕವಚಿ ಇಟ್ಟರು. ಬೋಗುಣಿಯಂಥ ಸಣ್ಣ ತಟ್ಟೆಯನ್ನು ಪಡೆದು ಮೇಲಿನ ತಂಬಿಗೆಯ ಮೇಲಿಟ್ಟರು. ಇಡೀ ರಚನೆ ಕಿರೀಟದ ಆಕಾರ ಪಡೆಯುತ್ತಿದ್ದುದನ್ನು ನಾನು ಸೋಜಿಗದಿಂದ ನೋಡುತ್ತಿದ್ದೆ. `ಒಂದು ವಾರ ಕಳೆದು ಮನೆಗೆ ಬಾ' ಎಂದು ಹೊರಟುಹೋದರು.ಅವರು ಸೂಚಿಸಿದ ದಿನ ಸಾಲಿಗ್ರಾಮದ ಅವರ ಮನೆಗೆ ಹೋದೆ. ಮೂರು ಪಾತ್ರೆಗಳನ್ನು ಬೈಂಡಿಂಗ್ ವಯರ್‌ನಲ್ಲಿ ಬಿಗಿದು ಸಿದ್ಧ ಮಾಡಿಟ್ಟಿದ್ದರು. ತಂತಿಯಲ್ಲಿ ಬಿಗಿದು ಕಟ್ಟುವುದು ಸಾಧ್ಯವಾಗದ ಕಾರಣ ಮೂರೂ ಪಾತ್ರೆಗಳು ಅಲ್ಲಾಡುತ್ತಿದ್ದವು. “ಉಡುಪಿಗೆ ಹೋಗಿ ನಟ್-ಬೋಲ್ಟ್ ತಾ” ಎಂದರು. ನಾನು ಅವರು ಹೇಳಿದ ಅಳತೆಯ ನಟ್-ಬೋಲ್ಟ್‌ಗಳನ್ನು ಒಯ್ದು ಕೊಟ್ಟೆ. ಪಾತ್ರೆಗಳಿಗೆ ತೂತು ಮಾಡಿ ನಟ್-ಬೋಲ್ಟ್‌ಗಳ ಮೂಲಕ ಒಂದಕ್ಕೊಂದು ಬಿಗಿಯಾಗಿ ಹಿಡಿದುಕೊಳ್ಳುವಂತೆ ಮಾಡಿದರು. “ಇದಕ್ಕೆ ಬಂಗಾರವರ್ಣದ ಬೇಗಡೆ ಅಂಟಿಸಿ ಎರಡು ದಿನದಲ್ಲಿ ಸಿದ್ಧಗೊಳಿಸಲು ಗಜಾನನನಿಗೆ ಹೇಳು” ಎಂದು ನನ್ನ ಕೈಯಲ್ಲಿ ಆ ಹಗುರವಾದ ಕಿರೀಟದ ಆಕೃತಿಯನ್ನು ಇಟ್ಟರು. ಅಲ್ಲಿಯವರೆಗೂ ಭಾರವಾದ ಮರದ ಕಿರೀಟಗಳನ್ನು ತಲೆಯಲ್ಲಿ ಹೊರುತ್ತಿದ್ದವನಿಗೆ ಇದು ಹೊಸ ಅನುಭವ!ಕಿರೀಟದ ಆಕೃತಿಯನ್ನೊಮ್ಮೆ ಪರಿಶೀಲಿಸಿದ ಕಲಾಕಾರ ಗಜಾನನ ಭಂಡಾರಿ ಹೊಸ ಸಮಸ್ಯೆಯನ್ನು ಮುಂದಿಟ್ಟರು, `ಮರಕ್ಕಾದರೆ ಬೇಗಡೆ ಅಂಟಿಸಬಹುದು. ಅಲ್ಯುಮಿನಿಯಂಗೆ ಕಷ್ಟ'. ಆದರೆ, ಇದನ್ನು ಕಾರಂತರೊಂದಿಗೆ ಹೇಳುವುದು ಇನ್ನೂ ಕಷ್ಟ.ಕಿರೀಟಕ್ಕೆ ಬೇಗಡೆಯನ್ನು ಹಚ್ಚುವ ಅಂಟನ್ನು ತಯಾರಿಸುವುದೊಂದು ದೀರ್ಘ ಪ್ರಕ್ರಿಯೆ. ಐದು ಮುದ್ದೆ ಗೋಂದು ಮೇಣದೊಂದಿಗೆ ಒಂದು ಮುದ್ದೆಯಷ್ಟು ಹಲಸಿನ ಮೇಣವನ್ನು ಬಿಸಿನೀರಿನಲ್ಲಿ ಕುದಿಸುವುದರಿಂದ ತೊಡಗಿ ಗಾಳಿಗುಳ್ಳೆಗಳು ಬಾರದ ಹಾಗೆ ಬೇಗಡೆಯನ್ನು ಮರದ ಕಿರೀಟಕ್ಕೆ ಅಂಟಿಸುವವರೆಗೆ ಅದೊಂದು ಪರಿಶ್ರಮದ ಕೌಶಲ. ಇಂಥ ಮೇಣ ಸವರಿ ಮರಕ್ಕೆ ಅಂಟಿಸಿದ ಕಾಗದವನ್ನು ಕೆತ್ತಿ ತೆಗೆಯಬೇಕಲ್ಲದೆ, ಎಂದಿಗೂ ಅದು ಎದ್ದು ಬರುವುದೇ ಇಲ್ಲ. ಮರಕ್ಕೆ ಅಂಟಿಸಬಹುದು, ಅಲ್ಯುಮಿನಿಯಂಗೆ ಈ ಮೇಣವನ್ನು ಬಳಸುವುದು ಸಾಧ್ಯವಿಲ್ಲ ಎಂದು ಗಜಾನನರು ಹೇಳುವಾಗ ಗುರುಗಳ ಸಿಟ್ಟಿನ ಮುಖವೇ ಕಂಡಂತಾಗಿ ಚಿಂತೆಯಲ್ಲಿ ಬಿದ್ದೆ.`ಎಲ್ಲಿದೆ ಕಿರೀಟ ತಾ' ಎಂದಾಗ ನಾನು ಅಲ್ಯುಮಿನಿಯಂ ಪಾತ್ರೆಗಳನ್ನು ಜೋಡಿಸಿದ ಆಕೃತಿಯನ್ನು ಶಿವರಾಮ ಕಾರಂತರ ಕೈಗೆ ಕೊಟ್ಟೆ. ಅವರೇ ಸ್ವತಃ ಗೋಂದು ಮೇಣವನ್ನು ಅಲ್ಯುಮಿನಿಯಂ ಪಾತ್ರೆಗಳ ಮೇಲೆ ತಿಕ್ಕತೊಡಗಿದರು. ತಿಕ್ಕಿ ತಿಕ್ಕಿ ಅದು ದೊರಗಾಯಿತು. `ಈಗ ಇದಕ್ಕೆ ಬೇಗಡೆ ಅಂಟಿಸಿ' ಎಂದರು. ಹೌದಲ್ಲ, ಈಗ ಬೇಗಡೆ ಎಷ್ಟು ಚೆನ್ನಾಗಿ ಅಂಟುತ್ತಿದೆ! ನಮಗೇಕೆ ಇದು ಮೊದಲೇ ಹೊಳೆಯಲಿಲ್ಲ.`ಚಿತ್ರಾಂಗದಾ' ಕಥಾನಕದಲ್ಲಿ ಮಹಾಶೇಷನ ಪಾತ್ರವನ್ನು ರೂಪಿಸುವಾಗ ಅದಕ್ಕೆ ಹೊಂದುವ ಕಿರೀಟದ ಕಲ್ಪನೆ ಶಿವರಾಮ ಕಾರಂತರ ಮನಸ್ಸಿನಲ್ಲಿ ಮೂಡಿತು. ತತ್‌ಕ್ಷಣ ಒಂದಷ್ಟು ಥರ್ಮೊಕೋಲ್‌ಗಳನ್ನು ಸಂಗ್ರಹಿಸಿ ತರಲು ಆದೇಶಿಸಿದರು. ಆಗೆಲ್ಲ ಉಡುಪಿಯಲ್ಲಿ ಥರ್ಮೋಕೋಲ್‌ನ ಲಭ್ಯತೆ ಕಡಿಮೆ. ಭಟ್ಕಳದಿಂದ ತರಿಸಿ ಸಂಗ್ರಹಿಸಿ ಕೊಟ್ಟೆವು. ಹಾವಿನ ಹೆಡೆಗಳನ್ನು ಕಿರೀಟವಾಗಿ ಹೇಗೆ ರೂಪಿಸಬೇಕೆಂದು ಗಜಾನನ ಭಂಡಾರಿಯವರಿಗೆ ನಿರ್ದೇಶಿಸಿದರು. ಅದಾಗಿ ಒಂದು ದಿನ ನಾನೂ ಗಜಾನನರೂ ಹೊಸದಾಗಿ ತಯಾರಿಸಿದ ಕಿರೀಟವನ್ನು ಹಿಡಿದುಕೊಂಡು ಸಾಲಿಗ್ರಾಮದ ಗುರುಗಳ ಮನೆಗೆ ಹೋದೆವು.ಹೆಡೆಗಳು ಹರಡಿದಂತಿದ್ದು ಅವರಿಗದು ಸರಿ ಕಾಣಿಸಲಿಲ್ಲ. ಕೊಂಚ ಬದಲಾವಣೆಯನ್ನು ಸೂಚಿಸಿ ಮತ್ತೊಮ್ಮೆ ತರುವಂತೆ ಸೂಚಿಸಿದರು. ಹಾಗೆ ಆರೇಳು ದಿನ ಅವರ ಮನೆಗೆ ಓಡಾಡಿದೆವು. ಯಾವುದೂ ಪೂರ್ಣ ಒಪ್ಪಿಗೆಯಾಗಲಿಲ್ಲ. ಕೊನೆಗೊಂದು ಸಲ ಸಾಲಿಗ್ರಾಮದ ಮನೆಯಿಂದ ಬುಲಾವ್ ಬಂತು. ಅಲ್ಲಿ ಹೋದಾಗ ಹೊಸದೊಂದು ಕಿರೀಟ ಸಿದ್ಧಗೊಂಡಿತ್ತು. ನಮ್ಮ ಕೈಲಾಗದೆಂದು ನಿರ್ಧರಿಸಿ ಅವರೇ ತಯಾರಿಸಿದ್ದರು! ನಾವು ರೂಪಿಸಿದ ಕಿರೀಟಕ್ಕಿಂತ ಅದು ಎಷ್ಟೋ ಚೆನ್ನಾಗಿದೆಯೆಂದು ನಮಗೇ ಅನ್ನಿಸಿತು. ಯಾವುದೇ ಕೆಲಸವನ್ನು ಯಾರಾದರೂ `ಆಗುವುದಿಲ್ಲ' ಎಂದು ಹೇಳಿದರೆ, `ಯಾಕೆ ಆಗುವುದಿಲ್ಲ?' ಎಂದು ಸ್ವತಃ ಅದನ್ನು ಕೈಗೆತ್ತಿಕೊಳ್ಳುತ್ತಿದ್ದ ಶಿವರಾಮ ಕಾರಂತರು ನನ್ನ ಬದುಕಿಗೇ ನಿಜವಾದ ಪಾಠವಾದರು. ಚೆಂಡೆ, ಮದ್ದಲೆಗಳ ಮುಚ್ಚುಗೆಯಿಂದ ತೊಡಗಿ ವೇಷಭೂಷಣಗಳ ತಯಾರಿಯವರೆಗೆ, ನನ್ನ ಮನೋಧರ್ಮಕ್ಕೆ ಒಗ್ಗದಿದ್ದರೆ ನಾನೇ ಅವನ್ನೆಲ್ಲ ಮಾಡುವುದಕ್ಕೆ ಸಿದ್ಧನಾಗಿದ್ದೆ.ಹಲವು ಕ್ಷೇತ್ರಗಳಲ್ಲಿ ಹರಡಿಕೊಂಡ ಪರ್ವತ ಪ್ರತಿಭೆ ಕಾರಂತರದು. ಅವರ ಮನಸ್ಸನ್ನು ಓದುವುದಕ್ಕೆ ನನ್ನಂಥವರಿಗೆ ಕಷ್ಟವೆನಿಸುತ್ತಿತ್ತು. ಅಂಥ ಸಂದರ್ಭದಲ್ಲೆಲ್ಲಾ `ಹೀಗಿರಬೇಕು' ಎಂದು ಚಿತ್ರ ಬರೆದು ತೋರಿಸುತ್ತಿದ್ದರು. ಅವರ ಕಲ್ಪನೆಯ ಚಿತ್ರಕ್ಕೆ ಉಸಿರು ಕೊಡುವುದೊಂದು ಸವಾಲೇ ಆಗಿತ್ತು.

***

ಉಂಗುಷ್ಠದ ಚಿತ್ರವನ್ನು ಪೂರ್ಣ ದೇಹವಾಗಿಸಬೇಕಾದರೆ ದೈತ್ಯ ಕಲ್ಪನೆ ಬೇಕು; `ಚಿತ್ರಪಟ ರಾಮಾಯಣ'ದ ಶೂರ್ಪನಖಿಯಂತೆ! ಹಾಂ, ನೆನಪಾಯಿತು, `ಚಿತ್ರಪಟ ರಾಮಾಯಣ' ಪ್ರಸಂಗ. ಆಡಿತೋರಿಸಿದವರು, ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ವಿದ್ಯಾರ್ಥಿಗಳು. ಉಡುಪಿ ಯಕ್ಷಗಾನ ಕೇಂದ್ರದ ಹಳೆವಿದ್ಯಾರ್ಥಿಯೂ ನಾಡಿನ ಪ್ರಸಿದ್ಧ ರಂಗನಿರ್ದೇಶಕರೂ ಆಗಿರುವ ಚಿದಂಬರ ರಾವ್ ಜಂಬೆಯವರ ನಿರ್ದೇಶನದ ಚಿತ್ರಪಟ ರಾಮಾಯಣ ಯಕ್ಷಗಾನ-ನಾಟಕಕ್ಕಾಗಿ ಹೆಜ್ಜೆಗಳನ್ನು ಕಲಿಯಲು ಎನ್‌ಎಸ್‌ಡಿಯ ಅಂತಿಮ ವರ್ಷದ ವಿದ್ಯಾರ್ಥಿಗಳು ನಮ್ಮ ಯಕ್ಷಗಾನ ಕೇಂದ್ರಕ್ಕೆ ಬಂದಿದ್ದರು. ಅವರೆಲ್ಲ ರಂಗಭೂಮಿಯ ಶಿಸ್ತನ್ನು ಮೊದಲೇ ಅಳವಡಿಸಿಕೊಂಡವರು.ಇಪ್ಪತ್ತು ದಿನಗಳಲ್ಲಿ ನಾನು ಹೇಳಿಕೊಟ್ಟ ಹೆಜ್ಜೆಗಳನ್ನು ಎಷ್ಟೊಂದು ಕ್ಷಿಪ್ರವಾಗಿ ಕಲಿತುಬಿಟ್ಟರೆಂದರೆ, ಅವರ ನಾಟ್ಯಾಭಿನಯಕ್ಕೆ ನಾನು ಸೋಜಿಗಪಡುವಂತಾಯಿತು. ತರಬೇತಿ ಮುಗಿಯುವ ಹಂತದಲ್ಲಿ ಎನ್‌ಎಸ್‌ಡಿ ನಿರ್ದೇಶಕಿ ಅನುರಾಧಾ ಕಪೂರ್‌ಕೂಡ ನಮ್ಮ ಕೇಂದ್ರಕ್ಕೆ ಬಂದಿದ್ದರು. ಹೊಸ್ತೋಟ ಮಂಜುನಾಥ ಭಾಗವತರ ವಿರಚಿತ ಪದ್ಯಸಾಹಿತ್ಯವನ್ನು ಡಾ. ತಿಪ್ಪೇಸ್ವಾಮಿಯವರು ಹಿಂದಿಗೆ ಭಾಷಾಂತರಿಸಿದ್ದರು. ಈ ಕೃತಿಯನ್ನು ಕೊರಿಯೋಗ್ರಫಿಯ ಹಿನ್ನೆಲೆಯಿರುವ ರಂಗ ಕಲಾವಿದರು ಅದ್ಭುತ ಪರಿಣಾಮದೊಂದಿಗೆ ರಂಗದ ಮೇಲೆ ತಂದಿದ್ದರು! `ಚಿತ್ರಪಟ ರಾಮಾಯಣ' ಚೀನಾದ ಬೀಜಿಂಗ್‌ನಲ್ಲಿ ನಡೆಯುವ ಅಂತರರಾಷ್ಟ್ರೀಯ ರಂಗೋತ್ಸವಕ್ಕೆ ಆಯ್ಕೆಯಾದಾಗ ನಾನೂ ಆ ತಂಡದೊಂದಿಗೆ ತೆರಳಿ, ಅಲ್ಲಿಯೂ ಚೆಂಡೆಧ್ವನಿ ಅನುರಣಿಸಿ ಬಂದೆ. ಅದು 2008.ಚಿತ್ರ ಎಂದಾಗ ರಾವಣನ ಚಿತ್ರ ಮಾತ್ರವಲ್ಲ, ಕೋಳಿಯ ಚಿತ್ರವೂ ನೆನಪಾಗುತ್ತದೆ. ಇದೊಂದು ಘಟನೆಯನ್ನು ಹೇಳಿಬಿಡುತ್ತೇನೆ. ಬೀಜಿಂಗ್‌ನ ಹೊಟೇಲ್‌ಗಳಲ್ಲಿ ಕಪ್ಪೆಯ, ಹಾವಿನ ಪಾಕ ಬಿಟ್ಟರೆ ಬೇರೇನೂ ಇರಲಿಲ್ಲ. ಕೋಳಿಯ ಅಡುಗೆಯೇನಾದರೂ ಸಿಗುತ್ತದೋ ಎಂದು ಒಂದು ಹೊಟೇಲ್‌ನಲ್ಲಿ ಕೇಳಿದೆವು. ನಮಗೆ ಚೀನಿ ಭಾಷೆ ಬರುವುದಿಲ್ಲ, ಅವರಿಗೆ ಇಂಗ್ಲಿಷ್, ಹಿಂದಿ ಗೊತ್ತಿಲ್ಲ. ಸಂಜ್ಞೆಯಲ್ಲಿಯೇ ಸಂವಹನ. `ಕೋಳಿ'ಯನ್ನು ಸಂಕೇತದಲ್ಲಿ ಅವರಿಗೆ ಅರ್ಥಮಾಡಿಸಲು ಸಾಧ್ಯವಾಗಲೇ ಇಲ್ಲ. ಕೊನೆಗೆ ನಮ್ಮ ತಂಡದಲ್ಲಿದ್ದವರೊಬ್ಬರು ಕೋಳಿಯ ಚಿತ್ರ ಬರೆದು ತೋರಿಸಿದಾಗ ಹೊಟೇಲಿನವರಿಗೆ ಅರ್ಥವಾಯಿತು. `ಅದು ಇದೆ' ಎಂದರು ಸನ್ನೆಯಲ್ಲಿ. ಅವರ ಮನವೊಲಿಸಿ ನಾವೇ ಅಡುಗೆಮನೆಗೆ ಹೋಗಿ ಅಲ್ಲಿದ್ದ ಅಕ್ಕಿಯನ್ನು ತೋರಿಸಿ ಅದನ್ನು ಬೇಯಿಸಿಕೊಡುವಂತೆ ಹೇಳಿ ಹೊಟ್ಟೆ ತುಂಬಿಸಿಕೊಂಡೆವು.ರಂಗ ಕಲೆಯಲ್ಲಿ, ಚಿತ್ರ ಕಲೆಯಲ್ಲಿ ಸಂವಹನಕ್ಕೆ ಶಾಬ್ದಿಕ ಭಾಷೆ ಅನಿವಾರ್ಯವೇನೂ ಅಲ್ಲ. ಅದಲ್ಲದಿದ್ದರೆ ನಾನು ಯಕ್ಷಗಾನದ ಹೆಜ್ಜೆಗಳಲ್ಲಿ ದೇಶದ ಗಡಿಯಾಚೆಗಿನ ದಾರಿ ತುಳಿಯಲು ನನಗೆ ಹೇಗೆ ಸಾಧ್ಯವಾಗುತ್ತಿತ್ತು!(ಸಶೇಷ) ನಿರೂಪಣೆ: ಹರಿಣಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.