ಸೋಮವಾರ, ಜೂನ್ 14, 2021
20 °C

ರಣ ಹೇಡಿತನ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಪ್ರತಿಯೊಂದು ಮನೆಯಲ್ಲಿ ಬೆಳಗಿನ ಸಮಯ ತುಂಬ ಆತಂಕದ, ಒತ್ತಡದ ಸಮಯ. ಅದರಲ್ಲೂ ಚಳಿಗಾಲದಲ್ಲಿ ಮತ್ತಷ್ಟು ಕಷ್ಟ. ಚಳಿಯಲ್ಲಿ ಸಕ್ಕರೆ ನಿದ್ರೆ ಕಾಣುತ್ತ ಮಲಗಿದ್ದ ಕಂದಮ್ಮಗಳನ್ನು ಎಬ್ಬಿಸಲು  ಪಾಲಕರಿಗೆ ಮನಸ್ಸೇ ಇರುವುದಿಲ್ಲ. ಆದರೆ, ಬೇರೆ ವಿಧಿಯಿಲ್ಲ. ಅವರನ್ನು ಎಬ್ಬಿಸಿ ನಿದ್ರೆಗಣ್ಣಿನಲ್ಲೇ ಹಲ್ಲುಜ್ಜಿಸಿ, ಸ್ನಾನಾದಿಗಳನ್ನು ಮುಗಿಸುವಂತೆ ಬೆನ್ನು ಹತ್ತಬೇಕು.ಅಷ್ಟರಲ್ಲಿ ಅವರ ಬೆಳಗಿನ ತಿಂಡಿಗೆ ವ್ಯವಸ್ಥೆಯಾಗಬೇಕು, ಮಧ್ಯಾಹ್ನದ ಊಟದ ಡಬ್ಬಿ ಕಟ್ಟಬೇಕು. ಅವರ ಯುನಿಫಾರ್ಮಗಳ ಇಸ್ತ್ರಿಯಾಗಬೇಕು. ಗಡಿಯಾರ ಓಡು­ತ್ತದೆ. ತಾಯಿ ಅಥವಾ ತಂದೆಯೇ  ವಾಹನದಲ್ಲಿ ಮಕ್ಕಳನ್ನು ಕರೆದುಕೊಂಡು ಶಾಲೆಯ ಹತ್ತಿರ ಬಿಡಬೇಕು. ಆಮೇಲೆ ಸ್ವಲ್ಪ ನಿರಾಳ. ಇದು ಆತಂಕದ ಕೆಲಸ­ವಾದರೂ ಅತ್ಯಂತ ಪ್ರೀತಿಯ ಕೆಲಸ.ಯಾಕೆಂದರೆ ಇದನ್ನೆಲ್ಲ ಮಾಡುವುದು ತನ್ನ ಕರುಳಿನ ಕುಡಿಗಾಗಿ, ಅದರ ಒಳಿತಿಗಾಗಿ. ತಮ್ಮ ಎಲ್ಲ ಕನಸುಗಳನ್ನು ಮಕ್ಕಳ ಭವಿಷ್ಯದ ಆಸೆಯ ಗೂಟಕ್ಕೆ ತೂಗು ಹಾಕಿದ ತಂದೆ ತಾಯಿಯರು. ಶಾಲೆಗೆ ಹೋದ ಮಗ ಅಥವಾ ಮಗಳು ಮನೆಗೆ ಬರುವುದನ್ನೇ ಕಾಯುತ್ತ ತೆರೆದ ಬಾಗಿಲಿನೆಡೆಗೇ ಕಣ್ಣಿಟ್ಟು ಕುಳಿತವರಿಗೆ ತಮ್ಮ ಮಗು ಇನ್ನೆಂದಿಗೂ ಮನೆಯನ್ನು ಸೇರಲಾರದು ಎಂಬ ಆಘಾತದ ಸುದ್ದಿ ಬಂದರೆ ಹೇಗಾಗಬೇಕು?ಉಗ್ರರೆಂದು ಕರೆದು­ಕೊಳ್ಳುವ ರಣಹೇಡಿಗಳ ಗುಂಡಿಗೆ ಛಿದ್ರವಾದ ದೇಹದಿಂದ ಮಕ್ಕಳ ರಕ್ತ­ದೊಂದಿಗೆ ಅವರ ಜೀವ, ತಮ್ಮ ಆಸರೆ, ಸೋರಿಹೋದದ್ದನ್ನು ಕೇಳಿದ ಕರುಳುಗಳು ಬೆಂದು ಹೋಗಿರಬೇಕಲ್ಲ? ಮೊನ್ನೆ ಪೆಶಾವರದಲ್ಲಿ ನಗುನಗುತ್ತಾ ಶಾಲೆಗೆ ಹೋದ ಮಕ್ಕಳ ಮಾರಣ­ಹೋಮ ನಮ್ಮೆಲ್ಲರ ಮನಸ್ಸುಗಳನ್ನು ಕಲಕಿದೆ. ಸುಖ ನಿದ್ರೆ ಮಾಡುವುದು ಅಸಾಧ್ಯವಾಗಿದೆ. ಇದು ಕೆಲವು ಮೂಲಭೂತವಾದ ಪ್ರಶ್ನೆಗಳನ್ನು ತಂದು ನಮ್ಮ ಮುಂದೆ ಸುರಿದಿದೆ.ನಾವು ಮಕ್ಕಳನ್ನು ಶಾಲೆಗೆ ಕಳುಹಿಸುವುದು ಏಕೆ? ನಾವು ನೀಡುತ್ತಿರುವ ಶಿಕ್ಷಣದ ಉದ್ದೇಶ ಏನು? ಹುಟ್ಟಿದಾಗ ಹುಳುವಿನಂತೆ ಅಸಹಾಯಕವಾಗಿದ್ದ ಮಗು ಬೆಳೆದು ಇಪ್ಪತ್ತು -ಇಪ್ಪತ್ತೈದು ವರ್ಷವಾಗುವ ಹೊತ್ತಿಗೆ ಒಬ್ಬ ಸುಸಂಸ್ಕತ ವ್ಯಕ್ತಿಯಾಗಬೇಕೆಂದು ಎಲ್ಲರೂ ಬಯಸುತ್ತೇವೆ. ಇದು ಪ್ರಕೃತಿ, ಸಂಸ್ಕೃತಿಯಾಗುವ ಅಪರೂಪದ ಪ್ರಕ್ರಿಯೆ. ದಯವಿಟ್ಟು ಗಮನಿಸಿ, ಕಲ್ಲು ಪ್ರಕೃತಿಯಾದರೆ, ಶಿಲ್ಪ ಸಂಸ್ಕೃತಿ. ಅಕ್ಕಿ ಪ್ರಕೃತಿ, ಅನ್ನ ಸಂಸ್ಕೃತಿ. ಕೂದಲು ಪ್ರಕೃತಿ - ಅದರ ವಿನ್ಯಾಸ ಸಂಸ್ಕೃತಿ.ಹತ್ತಿ ಪ್ರಕೃತಿ -ಬಟ್ಟೆ ಸಂಸ್ಕೃತಿ, ಧ್ವನಿ ಪ್ರಕೃತಿ -ಗಾಯನ ಸಂಸ್ಕೃತಿ. ಪ್ರಕೃತಿ ತನ್ನಷ್ಟಕ್ಕೆ ತಾನೇ ಸಂಸ್ಕೃತಿಯಾಗುವುದಿಲ್ಲ. ಪ್ರಕೃತಿಯನ್ನು ಸಂಸ್ಕೃತಿ­ಯನ್ನಾಗಿಸುವ ಶ್ರಮ, ವಿಧಾನವೇ ಸಂಸ್ಕಾರ. ಪ್ರಕೃತಿಯಾಗಿದ್ದ ಮಗುವನ್ನು ಸುಸಂಸ್ಕೃತ­­ನನ್ನಾಗಿ ಮಾಡುವ ಸಂಸ್ಕಾರವೇ ಶಿಕ್ಷಣ. ಈ ಸಂಸ್ಕಾರ ಸರಿಯಾಗಿ ದೊರಕದೇ ಹೋದಾಗ ಪಡೆದ ಶಿಕ್ಷಣ ಕೇವಲ ಕಾಗದದ ಪದವಿಯನ್ನು ನೀಡು­ವುದು ಮಾತ್ರವಲ್ಲ. ಅವನನ್ನು ರಾಕ್ಷಸನನ್ನಾಗಿಯೂ ಮಾಡು­ತ್ತದೆ.ಆಗ ಸಮಾಜ­ದಲ್ಲಿ ಇಂಥ ಅಸಹ್ಯವಾದ, ವಿಕೃತವಾದ, ಹಿಂಸೆಯ ಘಟನೆಗಳು ನಡೆಯುತ್ತವೆ. ಹೀಗೆ ನಡೆದಾಗಲೆಲ್ಲ ನಾವು ಸರಿಯಾದ ಸಂಸ್ಕಾರವನ್ನು ನೀಡುವುದರಲ್ಲಿ ಸೋತೆವೇ ಎಂಬ ಪ್ರಶ್ನೆ ಕಾಡುತ್ತದೆ. ನಮ್ಮ ಧರ್ಮ, ಮತಗಳು ಕೇವಲ ವೈಯಕ್ತಿಕವಾದವುಗಳು. ಅವು ನಮ್ಮ ಮನೆ­ಯಲ್ಲಿರಬೇಕು. ಆದರೆ, ಸಮಾಜ ಜೀವನದಲ್ಲಿ ಎಲ್ಲರನ್ನೂ ಪ್ರೀತಿಸುವ, ಯಾರನ್ನೂ ದ್ವೇಷಿಸದ, ಹಿಂಸೆಯನ್ನು ಬಲವಾಗಿ ನಿರಾಕರಿಸುವ ಸಂಸ್ಕಾರವನ್ನು ನೀಡುವುದು ಯಾಕೆ ಸಾಧ್ಯವಾಗಿಲ್ಲ? ನಾನು ಮಕ್ಕಳನ್ನು ದೂರುವುದಿಲ್ಲ.ನಮ್ಮಂತಹ ಹಿರಿಯರು ಮನಸ್ಸನ್ನು ವಿಸ್ತರಿಸಿಕೊಳ್ಳದೇ, ಮಕ್ಕಳ ಮನಸ್ಸಿನಲ್ಲಿ ಜಾತಿ, ಮತಗಳ ವಿಷ ತುಂಬಿದೆವು, ಅವರ ಧಮನಿಧಮನಿಗಳಲ್ಲಿ ಕಾದ ಸೀಸವನ್ನು ಸುರಿದು ದ್ವೇಷದ, ಹಿಂಸೆಯ ಬೆಂಕಿಯಲ್ಲಿ ಬೇಯಿಸಿಬಿಟ್ಟೆವು. ಮಕ್ಕಳ ಮನಸ್ಸನ್ನು ತಿದ್ದಬೇಕಾದ ನಾವೇ ನಮ್ಮನ್ನು ತಿದ್ದಿಕೊಳ್ಳಬೇಕಾದ ಪಾಠ ಇದು.ನಿಮ್ಮ ಮನೆಯ ಕೋಣೆಯಲ್ಲಿ ಹೋಗಿ ಬೆಚ್ಚಗೆ ಮಲಗಿದ್ದ ಮಕ್ಕಳನ್ನು ಗಟ್ಟಿಯಾಗಿ ಅಪ್ಪಿಕೊಳ್ಳಿ. ದ್ವೇಷ ಹಂಚುವ, ಕ್ರೂರತೆಯ ನಂಜಿನ ಹಲ್ಲುಗಳನ್ನು ತೋರುವ ಹೇಡಿಗಳು ಮುಸುಕುಗಳಲ್ಲಿ ಅಡಗಿ ಕುಳಿತಿದ್ದಾರೆ. ತಮ್ಮ ಹೇಡಿತನವನ್ನು ಮತ್ತೆಲ್ಲಿ ಪ್ರದರ್ಶನ ಮಾಡಿಯಾರೋ ತಿಳಿ­ಯದು. ಆದರೆ, ದಯಮಾಡಿ, ಈ ಭಯಂಕರತೆಯ ನಡು­ವೆಯೂ ನಿಮ್ಮ ಮಕ್ಕಳಿಗೆ ಅಹಿಂಸೆಯ ಮಹತ್ವವನ್ನು, ಶಾಂತಿಯ ಅನಿವಾರ್ಯ­ತೆಯ ಬಗ್ಗೆ ಅಗತ್ಯವಾಗಿ, ಸತತವಾಗಿ ಹೇಳಿ. ಹೀಗೆ ಎಲ್ಲರೂ ಮಾಡಿದಾಗ ಮಾತ್ರ ಮುಂದಾ­ದರೂ ಶಾಲೆಗೆ ಹೋದ ಮಕ್ಕಳು ಖಂಡಿತವಾಗಿಯೂ ಮನೆಗೆ ಬಂದೇ ತೀರುತ್ತಾರೆಂಬ ಭದ್ರತೆಯಿಂದ ನಾವೆಲ್ಲ ಬದುಕಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.