ಭಾನುವಾರ, ಮಾರ್ಚ್ 7, 2021
19 °C

ರೂಪಾಯಿ ಅಕ್ಕಿಯ ಹಿಂದೆ ರೋಬೊ ರೈತರ ಕೈಬಲ

ನಾಗೇಶ್ ಹೆಗಡೆ Updated:

ಅಕ್ಷರ ಗಾತ್ರ : | |

ರೂಪಾಯಿ ಅಕ್ಕಿಯ ಹಿಂದೆ ರೋಬೊ ರೈತರ ಕೈಬಲ

ಬೊಮ್ಮನಹಳ್ಳಿಯ ಕೃಷ್ಣಪ್ಪ ತನ್ನ ದೈತ್ಯ ಕಾರನ್ನು ರಸ್ತೆಯ ಪಕ್ಕದ ತರಕಾರಿ ಸಂತೆಯ ನಡುವೆ ನುಗ್ಗಿಸಿ ನಾಲ್ವರನ್ನು ಬಲಿಹಾಕಿ ಓಡಿದ ದಿನವೇ ಬ್ರಿಟನ್ನಿನ ರಸ್ತೆಗಳಲ್ಲಿ ಸ್ವಯಂಚಾಲಿತ ರೋಬೊಟ್ ಕಾರುಗಳ ಓಡಾಟಕ್ಕೆ ಅನುಮತಿ ಸಿಕ್ಕಿತೆಂದು ಬಿಬಿಸಿ ಬಿತ್ತರಿಸುತ್ತಿತ್ತು. ಸಂಚಾರ ನಿಯಮಗಳನ್ನು ಶಿಸ್ತಾಗಿ ಪಾಲಿಸುತ್ತ, ತಂತಾನೇ ರಸ್ತೆ ಪಕ್ಕದಲ್ಲಿ ಪಾರ್ಕ್ ಮಾಡಿಕೊಳ್ಳಬಲ್ಲ ಈ ಕಾರುಗಳು ಚಾಲಕನಿಲ್ಲದೆ ಎಂಥ ಇಕ್ಕಟ್ಟಿನ ರಸ್ತೆಗಳಲ್ಲೂ ಯಾರಿಗೂ ತೊಂದರೆ ಕೊಡದೆ ಚಲಿಸುತ್ತವೆ. ಮದ್ಯಪಾನ ಮಾಡುವುದಿಲ್ಲ.ಇತ್ತ ತಮಿಳುನಾಡಿನ ಕೂಡಂಕುಳಂ ಪರಮಾಣು ಸ್ಥಾವರವನ್ನು ಚಾಲೂ ಮಾಡಲು ಕೇಂದ್ರ ಸರ್ಕಾರ ಆದೇಶ ನೀಡಿದ ದಿನವೇ ಅಮೆರಿಕದ ರಕ್ಷಣಾ ಇಲಾಖೆ ತನ್ನ `ಅಟ್ಲಾಸ್' ಹೆಸರಿನ ರೋಬೊಟನ್ನು ಅನಾವರಣ ಮಾಡಿತು. ಆರಡಿ ಮೂರಂಗುಲ ಎತ್ತರದ ಈ  ಮಾನವರೂಪಿ ಯಂತ್ರದ ಹೆಚ್ಚುಗಾರಿಕೆ ಏನೆಂದರೆ ಫುಕುಶಿಮಾ ಮಾದರಿಯ ದುರಂತ ಸಂಭವಿಸಿದಾಗ ಇದು ಪರಮಾಣು ಸ್ಥಾವರದೊಳಕ್ಕೆ ನುಗ್ಗಿ ಸರಣಿ ಸ್ಫೋಟವನ್ನು ತಡೆಯುತ್ತದೆ. ವಿಕಿರಣಭಯಕ್ಕೆ ಬೆದರುವುದಿಲ್ಲ.ಬನ್ನಿ, ಸ್ವಯಂಚಾಲಿತ ಯಂತ್ರಗಳ ಜಗತ್ತಿನಲ್ಲಿ ಓಡಾಡಿ ಬರೋಣ. `ಅಟ್ಲಾಸ್' ಹೆಸರಿನ ಯಂತ್ರಮಾನವನ ರಂಗಪ್ರವೇಶಕ್ಕೆ ಪಾಶ್ಚಿಮಾತ್ಯ ಮಾಧ್ಯಮಗಳು ಭಾರೀ ಪ್ರಚಾರ ಕೊಡುತ್ತಿವೆ. `ರೊಬೊ ಸೇಪಿಯನ್' ಯುಗ ಆರಂಭವಾಯಿತು ಎಂದು ನ್ಯೂಯಾರ್ಕ್ ಟೈಮ್ಸ ಈ ಘಟನೆಯನ್ನು ಬಣ್ಣಿಸಿದೆ. ಮನುಷ್ಯನಿಗೆ `ಹೊಮೊ ಸೇಪಿಯನ್' (ಬುದ್ಧಿವಂತ ಮಾನವ) ಎಂಬ ಹೆಸರಿದ್ದ ಹಾಗೆ, ಯಂತ್ರಗಳಿಗೂ ರೊಬೊ ಸೇಪಿಯನ್ (ಬುದ್ಧಿವಂತ ಯಂತ್ರ) ಎಂಬ ಉಪಾಧಿ ಬಂದಂತಾಗಿದೆ.ಮನುಷ್ಯರಂತೆ ಕೆಲಸ ಮಾಡಬಲ್ಲ ಯಂತ್ರಗಳು ಇಂದು ಅನೇಕ ಅವತಾರಗಳಲ್ಲಿ ಅನೇಕ ರಂಗಗಳಲ್ಲಿ ವಿಜೃಂಭಿಸುತ್ತಿವೆ. ಆಟಿಕೆಗಳಲ್ಲಿ, ಬೊಂಬೆಗಳಲ್ಲಿ ಇವು ಮನುಷ್ಯರ/ಪ್ರಾಣಿಗಳ ರೂಪದಲ್ಲಿದ್ದರೂ ಇತರ ಕ್ಷೇತ್ರಗಳಲ್ಲಿ ರೋಬೊಟ್‌ಗಳಿಗೆ ಕೈಕಾಲು, ತಲೆಮೂಗು ಇರಲೇಬೇಕೆಂದಿಲ್ಲ. ಮೋಟಾರು ವಾಹನಗಳ ಕಾರ್ಖಾನೆಗಳಲ್ಲಿ ಬೆಸುಗೆ ಹಾಕುವ, ಬಣ್ಣ ಬಳಿಯುವ ರೋಬೊಟ್‌ಗಳಿಗೆ ಕಬಂಧನ ಹಾಗೆ ತೋಳು ಮಾತ್ರ ಇರುತ್ತದೆ.ಆಸ್ಪತ್ರೆಗಳಲ್ಲಿ ನೆಲ ಒರೆಸುವ `ರೂಂಬಾ' ಎಂಬ ರೋಬೊಟಂತೂ ತೂಕ ತೋರಿಸುವ ಉರುಟುಮಣೆಯ ಹಾಗಿದೆ. ಜಪಾನಿನಲ್ಲಿ ಹಿರಿಯ ನಾಗರಿಕರ ಸಂಗಾತಿಯಾಗಿ ರೂಪುಗೊಳ್ಳುತ್ತಿರುವ ರೋಬೊಟ್‌ಗಳು ಅನ್ಯಲೋಕದ ಕಾಲ್ಪನಿಕ ಜೀವಿಗಳಂತೆ ಕಾಣುತ್ತವೆ. ರೋಬೊಟ್‌ಗಳದ್ದೇ ಒಲಿಂಪಿಕ್ ಕ್ರೀಡೆಯಲ್ಲಿ ಭಾರ ಎತ್ತುವ, ಫುಟ್‌ಬಾಲ್ ಆಡುವ ಯಂತ್ರಗಳಿಗೆ ತಲೆ ಇರಲೇಬೇಕೆಂದಿಲ್ಲ. ಜಗತ್ತಿನ ಅತಿವೇಗದ ಓಟಗಾರ ಉಸೇನ್ ಬೋಲ್ಟ್ ಜತೆಗೆ ಪೈಪೋಟಿಗೆ ಇಳಿದಿದ್ದ ರೋಬೊಟಿಗೆ ಗಾಲಿಗಳಿದ್ದು ಹಳಿಯ ಮೇಲೆ ಉರುಳುತ್ತಿತ್ತು. ಬಾಹ್ಯಾಕಾಶ ಪಯಣಕ್ಕೆ ಹೊರಡಲಿರುವ ಜಪಾನಿನ `ಕಿರೊಬೊ' ಹೆಸರಿನ ರೋಬೊಟ್‌ಗೆ ಮನುಷ್ಯನದ್ದೇ ರೂಪವಿದ್ದರೂ ಎತ್ತರ ಮಾತ್ರ ಗೇಣಿನಷ್ಟು- ಹೇಳಿಕೇಳಿ ಜಪಾನಿ.  ಇವೆಲ್ಲ ಬಿಡಿ, ಪ್ರದರ್ಶನದ ಆಟಿಕೆಗಳ ವಿಸ್ತೃತ ರೂಪವೆನ್ನಬಹುದು. ಆದರೆ ಕೃಷಿರಂಗಕ್ಕೆ ಇಳಿಯುವ ರೋಬೊಟ್‌ಗಳು ಹಾಗಲ್ಲ. ರೂಪ, ರಂಜನೆಗೆ ಏನೊಂದೂ ಆದ್ಯತೆ ಕೊಡದೆ ಪಕ್ಕಾ ಹಳ್ಳಿಗರ ಹಾಗೆ ದುಡಿಮೆಯೇ ಮೂಲಮಂತ್ರ ಇವುಗಳದ್ದು. ಆಸ್ಟ್ರೇಲಿಯಾದ ಮಿಲ್ಡುರಾ ಪಟ್ಟಣದ ಬಳಿ `ಮ್ಯೋಂಟಿಸ್' ಮತ್ತು `ಶ್ರಿಂಪ್' (ಸೀಗಡಿ) ಹೆಸರಿನ ರೋಬೊಟ್‌ಗಳು ಅಲ್ಲಿನ ವಿಶಾಲ ಸೇಬಿನ ತೋಟಗಳಲ್ಲಿ ತಮ್ಮಷ್ಟಕ್ಕೆ ಅಡ್ಡಾಡತೊಡಗಿವೆ ಉಪಗ್ರಹಗಳಿಂದ ಬರುವ ಜಿಪಿಎಸ್ ನಿರ್ದೇಶನದಂತೆ ತೋಟದ ಉದ್ದಕ್ಕೆ ಅಡ್ಡಕ್ಕೆ ಚಲಿಸುತ್ತ, ಪಕ್ವ ಫಲಗಳನ್ನು ಲೇಸರ್ ಕಿರಣಗಳ ಮೂಲಕ ಗುರುತಿಸುತ್ತಿವೆ. ಎಲೆಗಳನ್ನು ಮೂಸಿ ನೋಡಿ ಆಯಾ ಗಿಡಕ್ಕೆ ನೀರು ಗೊಬ್ಬರ ಎಷ್ಟೆಷ್ಟು ಬೇಕೆಂದು ನಿರ್ಧರಿಸುತ್ತವೆ. `ಮುಂದಿನ ಹಂತದಲ್ಲಿ ಸೇಬಿನ ಗಿಡಗಳಿಗೆ ಒಳಸುರಿಗಳನ್ನು ನೀಡುವ ಹಾಗೂ ಕೊಯ್ಲು ಮಾಡುವ ಪರಿಜ್ಞಾನವನ್ನು ಅವುಗಳಿಗೆ ಅಳವಡಿಸುತ್ತೇವೆ' ಎನ್ನುತ್ತಾರೆ, ಸಿಡ್ನಿ ವಿವಿಯ ಕೃಷಿ ರೋಬೊಟ್ ಸಂಶೋಧನ ವಿಭಾಗದ ಮೇಲ್ವಿಚಾರಕ ಪ್ರೊ. ಸಾಲ್ಹಾ ಸುಕ್ಕಾರಿಯಾ. ಎಷ್ಟು ಬೇಕೊ ಅಷ್ಟೇ ನೀರು ಮತ್ತು ರಸಗೊಬ್ಬರಗಳ ಒಳಸುರಿ ಸಿಗುವುದರಿಂದ ಪೋಲಾಗುವ ಪ್ರಮಾಣ ಕಡಿಮೆಯಾಗುತ್ತದೆ, ಕೃಷಿಭೂಮಿಯ ಮಾಲಿನ್ಯವೂ ತಗ್ಗುತ್ತದೆ ಎಂದು ಈ ಎಂಜಿನಿಯರ್ ಹೇಳುತ್ತಾರೆ.`ಮನುಷ್ಯನಲ್ಲಿ ಕೇವಲ ನಾಲ್ಕು ವರ್ಣಗ್ರಾಹಿ ನರಪುಂಜಗಳಿವೆ; ಆದರೆ ಆಸ್ಟ್ರೇಲಿಯಾದ ಕಡಲಂಚಿನ `ಮ್ಯೋಂಟಿಸ್' ಸೀಗಡಿಗಳಲ್ಲಿ ಹದಿನಾರು ನರಪುಂಜಗಳಿದ್ದು, ನೂರಾರು ವರ್ಣಛಾಯೆಗಳನ್ನು ಗುರುತಿಸುತ್ತವೆ. ನಮ್ಮ ಯಂತ್ರಗಳಿಗೂ ಅದೇ ಮಾದರಿಯ `ಕಣ್ಣು'ಗಳನ್ನು ಜೋಡಿಸಿದ್ದೇವೆ. ಸೇಬಿನ ಕಾಂಡ, ಎಲೆ ಮತ್ತು ಕಾಯಿಗಳಲ್ಲಿ ವ್ಯಕ್ತವಾಗುವ ಅಸಂಖ್ಯ ಬಣ್ಣಗಳನ್ನು ಗುರುತಿಸಿ ಇಡೀ ಮರಕ್ಕೆ ಏನೇನು ಬೇಕು ಎಂಬುದನ್ನು ಅವು ವರದಿ ಮಾಡುತ್ತವೆ' ಎಂದು ವಿವರಿಸುತ್ತಾರೆ. ಸುಕ್ಕಾರಿಯ ನೇತೃತ್ವದಲ್ಲಿ ಹತ್ತಾರು ಬಗೆಯ ಪುಟ್ಟ ಸ್ವಯಂಚಾಲಿತ ವಿಮಾನ (ಡ್ರೋನ್)ಗಳೂ ತಯಾರಾಗಿವೆ. ನೆಲದಿಂದ ಐವತ್ತು ಮೀಟರ್ ಎತ್ತರದಲ್ಲಿ ಸಂಚರಿಸುತ್ತ ಹೊಲದ ಪೈರು, ಮಣ್ಣು ಮತ್ತು ನೀರಿನ ಪಸೆಯ ಪರೀಕ್ಷೆ ಮಾಡುತ್ತಲೇ ಗಿಡಗಳಿಗೆ ಬೇಕಾದ ಪೋಷಕಾಂಶಗಳ ನಕ್ಷೆ ತಯಾರಿಸಬಲ್ಲ ಮಾರುದ್ದ `ಡ್ರೋನ್'ಗಳ ಸಂಚಾರವನ್ನು ರಿಮೋಟ್ ಮೂಲಕವೇ ನಿಯಂತ್ರಿಸಬಹುದಾಗಿದೆ.ಮುಂದುವರೆದ ರಾಷ್ಟ್ರಗಳಲ್ಲಿ ಉಳುಮೆ, ನೀರು ಗೊಬ್ಬರಗಳ ಒಳಸುರಿತ, ಕೊಯ್ಲಿನ ಕೆಲಸಗಳಿಗೆ ಮಹಾಗಾತ್ರದ ಟಿಲ್ಲರ್, ಹಾರ್ವೆಸ್ಟರ್ ಯಂತ್ರಗಳಿಗೆ ಚಾಲಕರ ಅಗತ್ಯವಿಲ್ಲ. ಏಕಕಾಲಕ್ಕೆ ಅನೇಕ ಯಂತ್ರಗಳನ್ನು ರಿಮೋಟ್ ಕಂಟ್ರೋಲ್ ಮೂಲಕ ನಿಯಂತ್ರಿಸಬಹುದಾಗಿದೆ. ರಿಮೋಟನ್ನೂ ಬಳಸದೆ, ಎಂಜಿನ್ನಿಗೆ ಜೋಡಿಸಿದ ಕಂಪ್ಯೂಟರ್‌ಗೇ ಸೂಕ್ತ ನಿರ್ದೇಶನ ಕೊಟ್ಟು ಈ ಯಂತ್ರಗಳಿಂದ ಕತ್ತಲಲ್ಲೂ ಕೆಲಸ ತೆಗೆಯಬಹುದು. ಅವೆಲ್ಲ ಧಾನ್ಯದ ವ್ಯವಸಾಯಕ್ಕೆ ಹೊಂದಿಕೊಂಡಿವೆ ವಿನಾ ತೋಟಗಾರಿಕೆ ಹಾಗೂ ಹಣ್ಣು ತರಕಾರಿಗಳ ಉಸ್ತುವಾರಿಗೆ ಕೈಹಾಕಿರಲಿಲ್ಲ. ಏಕೆಂದರೆ ಅವಕ್ಕೆ ಜಾಸ್ತಿ ಜಾಣತನ, ಜಾಸ್ತಿ ಕೌಶಲ ಬೇಕು.    

 

ಕ್ಯಾಲಿಫೋರ್ನಿಯಾದ ಸ್ಯಾಲಿನಾಸ್ ಕೊಳ್ಳವನ್ನು ಅಮೆರಿಕದ `ಸೊಪ್ಪಿನ ಬಟ್ಟಲು' ಎಂದೇ ಕರೆಯಲಾಗುತ್ತದೆ. ಮುಟ್ಟಿದರೆ ಚಿಂದಿಯಾಗುವ ತೀರ ನವಿರಾದ ಲೆಟಿಸ್, ಪಾಲಕ್, ಈರುಳ್ಳಿ ಮಾದರಿ ಲೀಕ್ ಮುಂತಾದ ಸೊಪ್ಪುಗಳನ್ನು ಸಂಭಾಳಿಸಲು ತುಂಬಾ ನಾಜೂಕಿನ ಕೈಗಳೇ ಕೆಲಸ ಮಾಡಬೇಕಾಗುತ್ತದೆ. ಮೆಕ್ಸಿಕೊ, ಚಿಲಿ, ವೆಸ್ಟ್ ಇಂಡೀಸ್ ಮುಂತಾದ ದೇಶದ ವಲಸೆ ಕೂಲಿಗಳನ್ನೇ ಆಧರಿಸಿದ ಈ ಕೃಷಿಯನ್ನೂ ಈಗ ಯಾಂತ್ರೀಕರಣಗೊಳಿಸಲು ಯತ್ನಗಳು ನಡೆಯುತ್ತಿವೆ.ಉದಾಹರಣೆಗೆ `ಲೆಟಿಸ್‌ಬೋಟ್' ಹೆಸರಿನ ರೋಬೊಟ್‌ಗಳ ಕೆಲಸ ಏನೆಂದರೆ ಪಾಲಕ್ ಸಸ್ಯದಂತೆ ಕಾಣುವ ಗೇಣುದ್ದದ ಲೆಟಿಸ್ ಸಸ್ಯಪಾತಿಗಳ ನಡುವೆ ಇವು ಓಡಾಡಬೇಕು. ಪುಟ್ಟ ಗಿಡದ ಕೆಳಗಡೆ ಮೂತಿ ತೂರಿಸಿ, ಹೊಸ ಕಂದುಗಳನ್ನು ನಾಜೂಕಾಗಿ ಕತ್ತರಿಸಿ ತೆಗೆಯಬೇಕು. ಕೊಳೆತ, ರೋಗಗ್ರಸ್ತ ಎಲೆಗಳಿದ್ದರೆ ಬೇರ್ಪಡಿಸಿ ನಿಗದಿತ ಪ್ರಮಾಣದ ನೀರು, ರಸಗೊಬ್ಬರ ಕೊಡಬೇಕು. ಕೊಯ್ಲಿನ ಸಮಯದಲ್ಲಿ ಒಂದು ಎಲೆಯೂ ತುಂಡಾಗದಂತೆ ಕತ್ತರಿಸಿ ಮೇಲೆತ್ತಿ ಪೆಟ್ಟಿಗೆಯಲ್ಲಿ ಇಡಬೇಕು. ಬೇರಿನೊಂದಿಗೆ ಕಾಂಡವನ್ನು ಕಿತ್ತು ಬೇರೆಡೆ ಒಟ್ಟಬೇಕು.ಕೂಲಿಗಳು ಕ್ಷಣಾರ್ಧದಲ್ಲಿ ಮಾಡಬಹುದಾದ ಈ ಸರಳ ಕೆಲಸಗಳು ರೋಬೊಟ್ ನಿರ್ಮಾತೃಗಳಿಗೆ ಭಾರೀ ಸವಾಲಿನ ಕೆಲಸವೇ ಆಗಿರುತ್ತವೆ. ಸಸ್ಯಭಾಗಗಳ ಗಟ್ಟಿ/ಮಿದು ಭಾಗಗಳನ್ನು ನೇವರಿಸಬಲ್ಲ, ಬಣ್ಣ-ವಾಸನೆ, ತೇವಾಂಶವನ್ನು ಗ್ರಹಿಸಬಹಲ್ಲ ಅತಿ ಸೂಕ್ಷ್ಮ ಸೆನ್ಸರ್‌ಗಳು ಬೇಕು; ಶಕ್ತಿಶಾಲಿ ಕ್ಯಾಮರಾ ಕಣ್ಣುಗಳು ಬೇಕು; ವಿಶೇಷ ಬಗೆಯ ಕಂಪ್ಯೂಟರ್ ಅಲ್ಗೊರಿದಮ್ ಬೇಕು; ಹೂವಿನ ಪಕಳೆಯನ್ನೂ ನಲುಗದಂತೆ ಕೀಳಬಲ್ಲ ಯಾಂತ್ರಿಕ ಬೆರಳುಗಳಿಗೆ ಸ್ಪ್ರಿಂಗು, ಲಿವರ್‌ಗಳು ಬೇಕು. ಮೀಟರ್ ಅಲ್ಲ, ಸೆಂಟಿಮೀಟರ್ ಲೆಕ್ಕದಲ್ಲಿ ದಿಶಾನಿರ್ದೇಶನ ನೀಡಬಲ್ಲ ಜಿಪಿಎಸ್ ವ್ಯವಸ್ಥೆ ಬೇಕು. ವಿಜ್ಞಾನ ತಂತ್ರಜ್ಞಾನದ ಹತ್ತಾರು ಕ್ಷೇತ್ರಗಳ ಪರಿಣತರು ಒಂದಾಗಿ ಅಂಥ ಅಗ್ರೊ-ಬೊಟ್‌ಗಳನ್ನು ನಿರ್ಮಿಸಬೇಕು.ಈ ಸವಾಲನ್ನು ಕೈಗೆತ್ತಿಕೊಂಡಿರುವ ಸ್ಪ್ಯಾನಿಷ್ ಕಂಪನಿಯೊಂದು ಸ್ಟ್ರಾಬೆರಿ ಹಣ್ಣುಗಳನ್ನು ಕೀಳಬಲ್ಲ ಪುಟ್ಟ ಯಂತ್ರವೊಂದನ್ನು ಇದೀಗ ಹೊಲಕ್ಕಿಳಿಸಿ ಪರೀಕ್ಷೆ ಮಾಡುತ್ತಿದೆ. ಈ ಯಂತ್ರಕ್ಕೆ 24 ಕೈಗಳಿವೆ. ಹಣ್ಣಿನ ಬಣ್ಣ, ಗಾತ್ರ, ಪಕ್ವತೆಯನ್ನು ನೋಡಿ ಕೀಳುವ ಸಾಮರ್ಥ್ಯ ಇದಕ್ಕಿದೆ.ಆದರೆ ಗೇಣುದ್ದ ಸ್ಟ್ರಾಬೆರಿ ಗಿಡಗಳ ಒಂದು ಮೈಯ ಹಣ್ಣುಗಳನ್ನು ಮಾತ್ರ ಇದು ಕೀಳಬಲ್ಲದು. ಒತ್ತೊತ್ತಿನ ಎರಡು ಮೂರು ಸಾಲುಗಳಲ್ಲಿನ ಫಸಲಿನ ಕೊಯ್ಲು ಇದಕ್ಕೆ ಸಾಧ್ಯವಿಲ್ಲ. ಆದ್ದರಿಂದ ಈ ಯಂತ್ರದ ಕೆಲಸವನ್ನು ಸುಲಭ ಮಾಡಲೆಂದು ಸ್ಟ್ರಾಬೆರಿ ತೋಟಗಳ ಸ್ವರೂಪವನ್ನೇ ಬದಲಿಸಲಾಗುತ್ತಿದೆ. ಎತ್ತರದ ಮಡಿಗಳಲ್ಲಿ ಒಂದೊಂದೇ ಸಾಲಿನಲ್ಲಿ ಗಿಡಗಳನ್ನು ನಾಟಿ ಮಾಡಬೇಕು. ಇನ್ನೇನು ಪ್ರತಿ ಪೊದೆಯ ಪಕ್ಕದಲ್ಲೇ ಹಣ್ಣುಗಳು ಬರಬೇಕೆಂದೂ ಮಧ್ಯದಲ್ಲಿ ಫಲ ಕೊಡಕೂಡದೆಂದೂ ಗಿಡಗಳಿಗೆ ಆದೇಶ ನೀಡುತ್ತಾರೊ ಏನೊ.ನಾವೆಲ್ಲ ಕ್ರಮೇಣ ಯಂತ್ರಗಳ ದಾಸರಾಗುತ್ತಿರುವ ಹಾಗೆ, ಗಿಡಪೊದೆಗಳೂ ಪ್ರಾಣಿಪಕ್ಷಿಗಳೂ ಯಂತ್ರಗಳ ದಾಸರಾಗುವಂತೆ ಮಾಡಹೊರಟಿದ್ದೇವೆ ನಾವು. ಜಿರಲೆಯ ಮಿದುಳಲ್ಲಿ ಪುಟ್ಟ ಕಂಪ್ಯೂಟರ್ ಬಿಲ್ಲೆಯನ್ನು ಕೂರಿಸಿ, ಮನುಷ್ಯರ ಆದೇಶಕ್ಕೆ ತಕ್ಕಂತೆ ಆ ಜೀವಂತ ಜಿರಲೆ ಓಡಾಡುವಂತೆ ಮಾಡುವಲ್ಲಿ ವಿಜ್ಞಾನಿಗಳು ಈಗಾಗಲೇ ಯಶಸ್ವಿಯಾಗಿದ್ದಾರೆ. ಹಸುಗಳ ಮಿದುಳಿಗೆ ಅಂಥದ್ದೇ ಬಿಲ್ಲೆಯನ್ನು ಕೂರಿಸಿ, ಆ ಹಸು ಎಲ್ಲೆಲ್ಲಿ ಮಾತ್ರ ಮೇಯಬೇಕು, ಯಾವ ಸಮಯಕ್ಕೆ ಹಾಲು ಕರೆಯುವ ಯಂತ್ರದ ಬಳಿಗೆ ಬಂದು ನಿಲ್ಲಬೇಕು ಎಂಬುದನ್ನು ರೋಬೊಟ್‌ಗಳೇ ನಿಯಂತ್ರಿಸುವಂತಾದರೆ- ಅಲ್ಲಿಗೆ ಮನುಷ್ಯ ಬರೀ ಹಣ ಎಣಿಸುವ ಯಂತ್ರವಾಗುತ್ತಾನೆ.1 ರೂಪಾಯಿಗೆ ಕಿಲೊ ಅಕ್ಕಿಯನ್ನು ನೀಡಹೊರಟವರ ನಿಜವಾದ `ಕಳಕಳಿ' ನಮಗೆ ಈಗ ಅರ್ಥವಾಗಬೇಕು. ಭಾರತದ ವಿಶಾಲ ಕೃಷಿ ಭೂಮಿಗೆ ಯಂತ್ರಗಳನ್ನು ಇಳಿಸಲು ಕಾರ್ಪೊರೇಟ್ ಕುಳಗಳು ದಶಕಗಳ ಸಿದ್ಧತೆ ನಡೆಸಿವೆ. ಅಮೆರಿಕದಲ್ಲಿ ನಿಕ್ಸನ್ ಅಧಿಕಾರದಲ್ಲಿದ್ದಾಗ ಕೃಷಿ ಸಚಿವ ಅರ್ಲ್ ಬಝ್ ಎಂಬಾತ ಅಲ್ಲಿನ ರೈತರಿಗೆ `ಗೆಟ್ ಬಿಗ್ ಆರ್ ಗೆಟೌಟ್' ಎಂದು ಆದೇಶ ನೀಡಿದ್ದ. ಹೊಲಕ್ಕೆ ರೈತರ ಬದಲು ಯಂತ್ರಗಳು ಬಂದಿಳಿದವು.ಅಲ್ಲಿ ಈಗ ಕೃಷಿಕರ ಸಂಖ್ಯೆ ಶೇಕಡಾ 2ಕ್ಕೆ ಇಳಿದಿದೆ. ಆ ರಾಷ್ಟ್ರದ `ಒಟ್ಟೂ ರೈತರ ಸಂಖ್ಯೆಗಿಂತ ಜೈಲು ಶಿಕ್ಷೆಗೆ ಗುರಿಯಾದ ಅಪರಾಧಿಗಳ ಸಂಖ್ಯೆಯೇ ಹೆಚ್ಚಿಗೆ ಇದೆ' ಎಂದು ಕೃಷಿಚಿಂತಕ ಡಾ. ದೇವಿಂದರ್ ಶರ್ಮಾ ಹೇಳುತ್ತಾರೆ. ನಮ್ಮಲ್ಲೂ ರೈತರನ್ನು ನಗರಗಳ ಕಡೆಗೆ ಒಕ್ಕಲೆಬ್ಬಿಸುವ ಯತ್ನಗಳು ಮುಗುಮ್ಮೋಗಿ ನಡೆಯುತ್ತಲೇ ಇವೆ. ಇಲ್ಲಿನ ಬಡ, ಅಶಿಕ್ಷಿತ ರೈತರ ಕೃಷಿ ಉತ್ಪಾದನೆ ಅದೆಷ್ಟು ಅದಕ್ಷ ಎಂಬುದಕ್ಕೆ ಅದ್ಭುತ ಅಂಕಿಸಂಖ್ಯೆಗಳು ಯೋಜನಾತಜ್ಞರ ಕಡತಗಳಿಗೆ ಬಂದು ಸೇರುತ್ತಿವೆ. ಹಳ್ಳಿಗಳಲ್ಲಿ ಹರಿದು ಹಂಚಿರುವ ಪ್ರಜಾಸ್ತೋಮವನ್ನು ಒಟ್ಟಿಗೆ ತಂದಿಟ್ಟರೆ ಅವರಿಗೆ ಶಿಕ್ಷಣ, ನೀರು, ರಸ್ತೆ, ಶಕ್ತಿ, ಆಸ್ಪತ್ರೆಗಳ ಸೌಲಭ್ಯವನ್ನು ಕೊಡುವುದು ಸುಲಭವೆಂದು ತಾಕೀತು ಮಾಡಲಾಗುತ್ತಿದೆ. ನೀರನ್ನು ಎಲ್ಲಿಂದ ತರುತ್ತಾರೆಂಬ ಪ್ರಶ್ನೆ ಹೇಗೂ ಇರಲಿ, ವೋಟು ಕೇಳುವುದಂತೂ ತುಂಬ ಸುಲಭವಾಗುತ್ತದೆ.`ನಮ್ಮ ರೈತರನ್ನು ಹಳ್ಳಿಗಳಿಂದ ಹೊರತಂದರೆ ಮಾತ್ರ ಬಡತನದ ಆಳದಿಂದ ಅವರನ್ನು ಮೇಲೆತ್ತಬಹುದು' ಎಂದು ಡಾ. ಮನಮೋಹನ್ ಸಿಂಗ್ ಎರಡು ವರ್ಷಗಳ ಹಿಂದೆ ಹೇಳಿದ್ದರು. `ಹಳ್ಳಿಗರೇ ಹೊರಡಿ!'  ಎಂದು ಅವರು ಬ್ ಮಾದರಿಯ ಒರಟು ಆದೇಶ ನೀಡಿಲ್ಲವಾದರೂ ಪ್ರಭುತ್ವದ ಇಂಗಿತವನ್ನಂತೂ ಪ್ರಕಟಿಸಿದ್ದಾರೆ. ಕೃಷಿಕಾರ್ಮಿಕರು ಹೊಲದಿಂದ ಹೊರಬರಬೇಕು; ರೋಬೊರೈತರಿಗೆ ದಾರಿ ಮಾಡಿಕೊಡಬೇಕು- ಈ ಅಘೋಷಿತ ಪ್ರಣಾಳಿಕೆಯ ಭಾಗವಾಗಿ ರೂಪಾಯಿಗೆ ಕಿಲೊ ಅಕ್ಕಿಯ ಬಾಗಿನ ಬಂದಿದೆ. ಹಣ ಎಣಿಸುವ ಕಾರ್ಪೊರೋಬೊಟ್‌ಗಳು ರಾಜಧಾನಿಗಳಲ್ಲಿ ನೆಲೆಸಲಿವೆ.ಈಗ ಬೊಮ್ಮನಹಳ್ಳಿಯ ಕೃಷ್ಣಪ್ಪನ ಕಿಲ್ಲರ್ ಯಂತ್ರ ತರಕಾರಿ ಮಾರುವವರನ್ನು ಬಲಿಹಾಕಿದರೆ ಬರಲಿರುವ ರೋಬೊಯಂತ್ರಗಳು ಬೆಳೆಗಾರರನ್ನೇ ಗುರಿಯಿಡಬಹುದು.

 ನಿಮ್ಮ ಅನಿಸಿಕೆ ತಿಳಿಸಿ:   editpagefeedback@prajavani.co.in

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.