ಸೋಮವಾರ, ಮಾರ್ಚ್ 8, 2021
19 °C

ಲಂಡನ್‌ನಲ್ಲಿ ಹೊಮ್ಮಿದ `ಮೌನ'ದ ಅಲೆಗಳು

ಬನ್ನಂಜೆ ಸಂಜೀವ ಸುವರ್ಣ Updated:

ಅಕ್ಷರ ಗಾತ್ರ : | |

ಲಂಡನ್‌ನಲ್ಲಿ ಹೊಮ್ಮಿದ `ಮೌನ'ದ ಅಲೆಗಳು

ಅಭಿಮನ್ಯು ಕುಣಿದು ಕುಣಿದು ಸೋತು ಸುಣ್ಣವಾಗಿ ರಂಗಸ್ಥಳದ ಮಧ್ಯದಲ್ಲಿ ನೆಲಕ್ಕೊರಗಿದಲ್ಲಿಗೆ `ಚಕ್ರವ್ಯೆಹ' ಪ್ರಸಂಗ ಮುಕ್ತಾಯದ ಹಂತ ತಲುಪುತ್ತಿತ್ತು. ಆದರೆ, ಆಗ ಪ್ರೇಕ್ಷಕರ ಮನಸ್ಸಿನೊಳಗೆ ಯೋಚನೆಯ ಚಕ್ರ ಸುತ್ತುವುದಕ್ಕೆ ಆರಂಭವಾಗುತ್ತಿತ್ತು. ಶಿವರಾಮ ಕಾರಂತರ ಹೆಚ್ಚುಗಾರಿಕೆ ಇರುವುದೇ ಅಂಥ ಹೃದಯ ತಟ್ಟುವ ದೃಶ್ಯಗಳನ್ನು ಸೃಷ್ಟಿಸುವುದರಲ್ಲಿ. ಸಾಮಾನ್ಯವಾಗಿ ಅಭಿಮನ್ಯು ಸತ್ತಾಗ ವಿರೋಧಿ ಸೈನ್ಯದ ವೀರರೆಲ್ಲ ಕೇಕೆ ಹಾಕಿ ನಗುವುದನ್ನು ಬಯಲಾಟಗಳಲ್ಲಿ ಕಾಣಿಸುತ್ತಾರೆ.ಆದರೆ, ಶಿವರಾಮ ಕಾರಂತರು ನಿರ್ದೇಶಿಸಿದ `ಅಭಿಮನ್ಯು ಕಾಳಗ'ದಲ್ಲಿ ವಿರೋಧಿಗಳ ಹುನ್ನಾರಕ್ಕೆ ಬಲಿಯಾದ ಅಭಿಮನ್ಯು ನೆಲಕ್ಕೆ ಬಿದ್ದ ಮೇಲೆ, ಅವನ ಕಳೇವರದ ಸುತ್ತ ಶತ್ರುಗಳು ಭಾರವಾದ ಹೆಜ್ಜೆಗಳನ್ನಿಟ್ಟುಕೊಂಡು ಪ್ರಲಾಪಿಸುತ್ತ ಚಲಿಸುತ್ತಾರೆ. ಈ ದೃಶ್ಯ ಪ್ರೇಕ್ಷಕರ ಮನಸ್ಸಿನಲ್ಲಿ ನಿಂತುಬಿಟ್ಟು ಗಾಢವಾದ ವಿಷಾದವೊಂದು ಮಡುಗಟ್ಟುತ್ತದೆ. ಮಹಾಭಾರತವನ್ನು ಮತ್ತೊಂದೇ ರೀತಿಯಲ್ಲಿ ನೋಡಬಲ್ಲ ಸಾಧ್ಯತೆಯಿದು.ಈ ಸನ್ನಿವೇಶಕ್ಕೆ ಸಂಬಂಧಿಸಿ ನನಗನ್ನಿಸಿದ ಒಂದು ವಿಚಾರವನ್ನು ಇಲ್ಲಿ ಉಲ್ಲೇಖಿಸಬಯಸುತ್ತೇನೆ. `ಷಡುರಥರು ಒಂದಾಗಿ ಕೊಂದರೈ ಹಸುಳೆಯನು...' ಎಂದು ಭಾಗವತರು ರೂಪಕತಾಳದಲ್ಲಿ ಪದ್ಯವನ್ನು ಹಾಡತೊಡಗುತ್ತಾರೆ. ನೀಲಾವರ ರಾಮಕೃಷ್ಣಯ್ಯನವರು ಅದನ್ನು ಎಂಥ ಶೋಕಭಾವದಲ್ಲಿ ಹಾಡುತ್ತಿದ್ದರೆಂದರೆ ಕೇಳುಗರ ಎದೆಯಲ್ಲಿ ಗೀರಿದಂಥ ಅನುಭವವಾಗುತ್ತಿತ್ತು. ಇಳಿಮದ್ದಲೆಯಲ್ಲಿ ಹೊಮ್ಮುವ ಧೋಂ... ಎಂಬ ಗಂಭೀರ ನಾದ ಮತ್ತು ಅದಕ್ಕೆ ಪೂರಕವಾಗಿ ಚೆಂಡೆಯ ಮಿತನುಡಿತ ಶೋಕವನ್ನು ಸನ್ನಿವೇಶವನ್ನು ಇನ್ನಷ್ಟು ಗಾಢವಾಗಿಸುತ್ತಿದ್ದವು. ಧ್ಧೀಂ... ತೋಂ ತೋಂ ಟಕ್ ಟಕ್ ಟಕ್ ಎಂಬ ನುಡಿತ, ನಮ್ಮ ಪ್ರದೇಶದ ಕೊರಗ ಸಮುದಾಯದವರು ಸಾವಿನ ಸಂದರ್ಭದಲ್ಲಿ ನುಡಿಸುವ ಡೋಲಿನ ದನಿ ಮತ್ತು ಲಯವನ್ನು ಬಹುಮಟ್ಟಿಗೆ ಹೋಲುತ್ತದೆ. ಸಾವಿನ ಸಂದರ್ಭದಲ್ಲಿ ಕೊರಗ ಸಮುದಾಯದವರು ನುಡಿಸುವ ಡೋಲಿನಲ್ಲಿ ಸದ್ದಿಗಿಂತ ಮೌನಗಳೇ ಹೆಚ್ಚು.1990ರ ಮೇ ತಿಂಗಳಿನ ಒಂದು ದಿನ. `ಷಡುರಥರು ಒಂದಾಗಿ ಕೊಂದರೈ ಹಸುಳೆಯನು...' ಎಂದು ಭಾಗವತರು ಹಾಡುತ್ತಿದ್ದಂತೆ ಲಂಡನ್‌ನ ಭಾರತೀಯ ವಿದ್ಯಾಭವನದ ಸಭಾಂಗಣದ ವೇದಿಕೆಯ ಮಧ್ಯದಲ್ಲಿ `ಅಭಿಮನ್ಯು'ವಾದ ನಾನು ಉರುಳಿಬಿದ್ದಿದ್ದೆ. ಮುಂದಿನ ಸಾಲಿನಲ್ಲಿ ಕುಳಿತು ಸ್ವತಃ ಮತ್ತೂರು ಕೃಷ್ಣಮೂರ್ತಿಯವರು ಪ್ರದರ್ಶನವನ್ನು ವೀಕ್ಷಿಸುತ್ತಿದ್ದರು. ರಂಗಸ್ಥಳವೆಲ್ಲ ಕತ್ತಲಾಗಿ, ಭಾಗವತರು ಮಂಗಲ ಪದ್ಯ ಹಾಡುತ್ತಿದ್ದರೂ ಅಲ್ಲಿನ ಪ್ರೇಕ್ಷಕರ ಮನಸ್ಸಿನಲ್ಲಿ ಗಾಢವಾದ ಮೌನದ ಅಲೆಯು ಬಿದ್ದೇಳುತ್ತಿತ್ತು. ಚೌಕಿಗೆ ಬಂದು ಎಲ್ಲರೂ `ಅಭಿಮನ್ಯು ಚೆನ್ನಾಗಿ ಮಾಡಿದ್ದಿ' ಎಂದು ಮೆಚ್ಚುವವರೇ. ನನಗೆ ಮಾತ್ರವಲ್ಲ, ನಮ್ಮ ತಂಡದ ಎಲ್ಲ ಕಲಾವಿದರಿಗೆ ಮೆಚ್ಚುಗೆಯ ಮಹಾಪೂರವೇ ಬಂದಿತು. `ಅದು ಸಲ್ಲಬೇಕಾದದ್ದು ಕಾರಂತರಿಗೆ' ಎಂದುಕೊಂಡು ಆನಂದಪಟ್ಟೆವು.`ಮೌನ'ವನ್ನು ಕಲಾತ್ಮಕವಾಗಿ ಬಳಸಿಕೊಳ್ಳುತ್ತಿದ್ದ ಶಿವರಾಮ ಕಾರಂತರ ಕೌಶಲದ ಪ್ರಭಾವ ನಾನು ಈಗ ನಿರ್ದೇಶಿಸಿದ ಯಕ್ಷಗಾನ ರೂಪಕಗಳ ಮೇಲೂ ಇರಬಹುದು. ಕಾರಂತರ ಪ್ರಭಾವಲಯದಲ್ಲಿಯೇ ಬಹುಕಾಲ ಇದ್ದುದರಿಂದ ಅದರಿಂದ ಹೊರಬರುವುದಕ್ಕೆ ಇವತ್ತಿಗೂ ಸಾಧ್ಯವಾಗಿಲ್ಲ, ಹೊರಬರಬೇಕಾದ ಅಗತ್ಯವೂ ಕಂಡುಬಂದ್ಲ್ಲಿಲ. ಲಂಡನ್‌ನ ಬಿ.ಬಿ.ಸಿ.ಯಲ್ಲಿ ಶಿವರಾಮ ಕಾರಂತರು ಭಾರತೀಯ ಕಲಾ ಪರಂಪರೆಯ ಬಗ್ಗೆ ಭಾಷಣ ಮಾಡಿದರು. ಅವರ ಭಾಷಣದ ಪ್ರಭಾವದಿಂದಲೋ ಏನೋ, ಬಿ.ಬಿ.ಸಿ.ಯಲ್ಲಿ ಒಂದು ಪ್ರದರ್ಶನ ಏರ್ಪಡಿಸುವ ಅವಕಾಶ ದೊರೆಯಿತು. ಅದನ್ನು ಕೂಡ ನಾನು ಎಂದೆಂದಿಗೂ ಮರೆಯದಿರುವುದು ಅಲ್ಲಿ ಎದುರಾದ ತಾಂತ್ರಿಕ ಸವಾಲಿನ ಕಾರಣಕ್ಕಾಗಿ.ನಾವು ಯಕ್ಷಗಾನ ಬ್ಯಾಲೆಯ ಪ್ರದರ್ಶನ ನೀಡಬೇಕಾದ ಆವರಣ ಕೊಂಚ ಭಿನ್ನವಾಗಿದ್ದುದರಿಂದ ಅಲ್ಲಿ ಮತ್ತೊಮ್ಮೆ ರಂಗತಾಲೀಮು ಮಾಡಬೇಕಾಗಿ ಬಂತು. ವೇಷಭೂಷಣಗಳನ್ನು ಧರಿಸದೆ ದಿನವಿಡೀ ಅಲ್ಲಿನ ಸ್ಟುಡಿಯೊದ ತಾಂತ್ರಿಕ ಸಹಾಯಕರ ಮುಂದೆ ನಮ್ಮ ರಿಹರ್ಸಲ್ ಮುಂದುವರಿಯಿತು. ಪ್ರಸಂಗ ಅದೇ; ಚಕ್ರವ್ಯೆಹ. ಭಾಗವತರು ಒಂದು ಕೊಠಡಿಯಲ್ಲಿ ಪದ್ಯ ಹೇಳಬೇಕಾದರೆ ಮದ್ದಲೆ ವಾದಕರಿಗೆ ಇನ್ನೊಂದೇ ಕೊಠಡಿ. ಚೆಂಡೆಯವರಿಗೆ ಮತ್ತೊಂದು.ವೇಷಧಾರಿಗಳಿಗೆ ಹಿಮ್ಮೇಳದವರಾರೂ ಕಾಣಿಸುತ್ತಿರಲಿಲ್ಲ; ಹಿಮ್ಮೇಳದವರಿಗೆ ವೇಷಧಾರಿಗಳೂ ಕೂಡ. ಅಂದಾಜು ಅಳತೆಯಲ್ಲಿ ನಾವು ಕುಣಿಯಬೇಕಾಗಿತ್ತು. ರಿಹರ್ಸಲ್ ಮುಗಿದು ನಿಜಪ್ರದರ್ಶನಕ್ಕೆ ವೇದಿಕೆ ಸಜ್ಜಾಯಿತು. ನಾವು ವೇಷಭೂಷಣಗಳನ್ನು ಧರಿಸಿ ಸಿದ್ಧರಾದೆವು. ಪ್ರದರ್ಶನ ಆರಂಭವಾಯಿತು. ಆದರೆ, ಸ್ಟುಡಿಯೊದ ತಾಂತ್ರಿಕ ನಿರ್ದೇಶಕರಿಗೆ ಅದೇಕೋ ಸಮ್ಮತವಾಗದೆ, `ಆಗಿನ ರಿಹರ್ಸಲ್‌ಗೂ ಈಗಿನ ಪ್ರದರ್ಶನಕ್ಕೂ ಸಾಕಷ್ಟು ವ್ಯತ್ಯಾಸವಿದೆ...' ಎಂದು ಆಕ್ಷೇಪಿಸಿದರು. ಶಿವರಾಮ ಕಾರಂತರಿಗೆ ನಮ್ಮ ಮೇಲೆ ಎಲ್ಲಿಲ್ಲದ ಸಿಟ್ಟು ಬಂದು, ಸುದೀರ್ಘ ಅವಧಿಯ ಅಭ್ಯಾಸ ವ್ಯರ್ಥವಾದ ಅಸಮಾಧಾನದಲ್ಲಿ ಒಂದೆಡೆ ಕುಳಿತುಬಿಟ್ಟರು.ನನಗೆ ಮಾತ್ರ ಈ ವ್ಯತ್ಯಾಸ ಯಾಕೆ ಆಯಿತು ಎಂಬ ಬಗ್ಗೆ ಎರಡು ಸೂಕ್ಷ್ಮ ಕಾರಣಗಳು ಹೊಳೆದಿದ್ದವು. ಒಂದು, ಸ್ಟುಡಿಯೊದ ಮುಖ್ಯ ನಿರ್ದೇಶಕರು ನಮ್ಮ ರಿಹರ್ಸಲ್ ಸಂದರ್ಭದಲ್ಲಿ ಉಪಸ್ಥಿತರಿರದೆ, ಅವರ ಸಹಾಯಕರೇ ಎಲ್ಲವನ್ನೂ ನಿರ್ವಹಿಸಿದ್ದು. ಎರಡು, ನಿಜಪ್ರದರ್ಶನದಲ್ಲಿ ನಾವು ತೊಟ್ಟಿದ್ದ ವೇಷಭೂಷಣಗಳು ರಿಹರ್ಸಲ್ ಸಂದರ್ಭದಲ್ಲಿ ಇರದಿದ್ದುದು.ಆದರೆ, ಈ ಎರಡು ವಿಚಾರಗಳನ್ನು ಹೇಳಿ, ಪ್ರದರ್ಶನದಲ್ಲಿ ವ್ಯತ್ಯಾಸ ಕಂಡ ವಿವರಗಳನ್ನು ಶಿವರಾಮ ಕಾರಂತರಿಗೆ ಹೇಳುವ ಧೈರ್ಯ ನನಗಾಗಲಿ, ಇತರ ಕಲಾವಿದರಿಗಾದರೂ ಇದೆಯೆ? ಅವರು ಎಷ್ಟೊಂದು ಸಿಟ್ಟುಗೊಂಡಿದ್ದಾರೆಂದು ಅವರ ಮೌನವೇ ಸೂಚಿಸುತ್ತಿತ್ತು. ನಾನು ಮೆಲ್ಲನೆ ವಯಲಿನ್ ವಾದಕರಾದ ಎ.ವಿ. ಕೃಷ್ಣಮಾಚಾರ್ (ಪದ್ಮಚರಣ್) ಅವರ ಬಳಿಗೆ ಹೋಗಿ ಈ ಅಂಶಗಳನ್ನು ಮೆಲುದನಿಯಲ್ಲಿ ಅವರಲ್ಲಿ ಉಸುರಿದೆ. ಪದ್ಮಚರಣ್ ಅವರು ಶಿವರಾಮ ಕಾರಂತರ ಬಳಿಗೆ ಹೋಗಿ, `ಸಂಜೀವ ಏನೋ ಹೇಳುತ್ತಿದ್ದ...' ಎಂದು ಗಮನ ಸೆಳೆಯುವ ಪ್ರಯತ್ನ ಮಾಡಿದರು.`ಏನಂತೆ?' ಎಂದರು ಶಿವರಾಮ ಕಾರಂತರು. `ಅಲ್ಲ, ರಿಹರ್ಸಲ್ ಸಂದರ್ಭದಲ್ಲಿ...' ಎಂದು ಪದ್ಮಚರಣ್ ವಿವರಿಸುತ್ತಿದ್ದಂತೆ ಕಾರಂತರಿಗೂ ಮನವರಿಕೆಯಾಯಿತು. ತಾಂತ್ರಿಕ ನಿರ್ದೇಶಕರನ್ನು ಕರೆದು ಈ ವಿಚಾರಗಳ ಬಗ್ಗೆ ಚರ್ಚಿಸಿದರು. ವೇಷಭೂಷಣ ಧರಿಸಿಕೊಂಡು ಮತ್ತೊಂದು ರಿಹರ್ಸಲ್ ಮಾಡಿ ಪ್ರದರ್ಶನಕ್ಕೆ ಸಿದ್ಧಗೊಂಡಾಗ ಎಲ್ಲವೂ ತಿಳಿಯಾಗಿತ್ತು. ಅದಕ್ಕೆ ಮತ್ತೊಂದು ದಿನ ವ್ಯಯವಾಯಿತು. ಆದರೆ, ಅಲ್ಲಿನ ನಿರ್ದೇಶಕರು ತಮ್ಮ ಕ್ಯಾಮೆರಾ ಕೌಶಲದಲ್ಲಿ ಅಂತಿಮವಾಗಿ ಅಭಿಮನ್ಯುವಿನ ಮೇಲೆ ಹಾಸಿದ ಬಟ್ಟೆ ಮೇಲೆ ಸರಿದಂತೆ ಮಾಡಿ, ಚೇತನ ಅನಂತದಲ್ಲಿ ಲೀನವಾಯಿತು ಎಂದೇನೊ ಬಿಂಬಿಸಲು ಪ್ರಯತ್ನಿಸಿದ್ದು ಕಾರಂತರಿಗೆ ಸರಿಬಂದಿರಲಿಲ್ಲವೆಂದು ತೋರುತ್ತದೆ.ಇಂಗ್ಲೆಂಡ್‌ನ ಪ್ರತಿಷ್ಠಿತ ತಾಣಗಳಲ್ಲಿ `ಚಕ್ರವ್ಯೆಹ', `ಪಂಚವಟಿ', `ಗಯಚರಿತ್ರೆ' ಯಕ್ಷಗಾನ ಬ್ಯಾಲೆಗಳನ್ನು ಪ್ರದರ್ಶಿಸಿದೆವು. ಇದರಲ್ಲಿ `ಚಕ್ರವ್ಯೆಹ' ಆಡಿದ್ದೇ ಹೆಚ್ಚು. `ಚಕ್ರವ್ಯೆಹ'ದಲ್ಲಿ ನಾನು ಅಭಿಮನ್ಯುವಾಗಿದ್ದರೆ, `ಪಂಚವಟಿ'ಯಲ್ಲಿ ಜಟಾಯುವಾಗಿದ್ದೆ. `ಗಯಚರಿತ್ರೆ'ಯಲ್ಲಿ ಕೃಷ್ಣನಾಗಿ ಕಾಣಿಸಿದ್ದೆ.ಅಲ್ಲೊಬ್ಬರು ಆಂಗ್ಲಮಹಿಳೆ ಎಂಟು ವರ್ಷಗಳಿಂದ ಭಾರತೀಯ ನೃತ್ಯವನ್ನು ಅಭ್ಯಾಸ ಮಾಡುತ್ತಿದ್ದವರು, ಯಕ್ಷಗಾನದ ಬಗ್ಗೆ ಆಸಕ್ತಿ ಹೊಂದಿ `ಪ್ರಾಥಮಿಕ ಮಟ್ಟದ ತರಬೇತಿ ಕೊಡುವಿರಾ?' ಎಂದು ಕೇಳಿಕೊಂಡು ಬಂದಿದ್ದರು. ಶಿವರಾಮ ಕಾರಂತರು ಆಕೆಗೆ ನೃತ್ಯ ಕಲಿಸಲು ನನ್ನನ್ನು ನಿಯೋಜಿಸಿದರು. ಆ ಮಹಿಳೆಯ ಹೆಸರು ನೆನಪಿಲ್ಲ. ಆಕೆ, ನೃತ್ಯದ ಬಗ್ಗೆ ಎಷ್ಟೊಂದು ಗಂಭೀರವಾಗಿ ಅಧ್ಯಯನ ಮಾಡುತ್ತಿದ್ದಾರೆಂದರೆ ಯಕ್ಷಗಾನದ ಹಿನ್ನೆಲೆ, ನೃತ್ಯ ಕ್ರಮ, ವೇಷಭೂಷಣಗಳ ಬಗ್ಗೆ ಮಹತ್ವದ ಪ್ರಶ್ನೆಗಳನ್ನು ಹಾಕಿದರು.ಅಭಿನಯದಲ್ಲಿ, ಸಂಜ್ಞೆಯಲ್ಲಿ ಸಂವಹನಿಸಬಹುದಾದ ವಿಚಾರಗಳನ್ನು ನಾನೇ ನಿಭಾಯಿಸಿದೆ. ಆದರೆ, ಇಂಗ್ಲಿಷ್‌ನಲ್ಲಿ ವಿವರಿಸಬೇಕಾದಾಗ ನಮ್ಮ ಜೊತೆಗೆ ಬಂದಿದ್ದ ಕಲಾಪೋಷಕರಾದ ಪ್ರಭಾಕರ ಪೈಗಳು, ಪ್ರೊಫೆಸರ್ ಹೆರಂಜೆ ಕೃಷ್ಣ ಭಟ್ಟರು, ಪದ್ಮಚರಣರು ಸಹಾಯ ಮಾಡಿದರು. ನನ್ನ ಅಳಿದುಳಿದ ನೆನಪಿನಲ್ಲಿ ಹೇಳುವುದಾದರೆ ಆಕೆ ಕೇಳಿದ ಕೆಲವು ಪ್ರಶ್ನೆಗಳು ಹೀಗಿದ್ದವು: `ನಿಮ್ಮಲ್ಲಿ ವೇಷಭೂಷಣ ಇಷ್ಟೊಂದು ವೈಭವದಲ್ಲಿರುವಾಗ ಕಾಲುಗಳು ಮಾತ್ರ ಯಾಕೆ ಕೃಶವಾಗಿ ಕಾಣಿಸುತ್ತವೆ? ಕೈ, ಕಾಲುಗಳಿಗೆ ಬಣ್ಣ ಹಾಕುವುದೇಕೆ? ತಲೆಯ ಹಿಂದೆ ವಸ್ತ್ರವನ್ನು (ಪಾಗು) ಇಳಿಬಿಡುವುದೇಕೆ... ಹೀಗೆ.ನಿಜವಾಗಿ ಪಾದ ಮತ್ತು ಕೈಗಳಿಗೆ ರಂಗು ಹಚ್ಚಲು ಆರಂಭಿಸಿದ್ದೇ ಶಿವರಾಮ ಕಾರಂತರು. ಇದು ಅನ್ಯಕಲೆಗಳನ್ನು ಅನುಕರಿಸಿ ಮಾಡಿಕೊಂಡ ಪರಿಷ್ಕಾರವಲ್ಲ. ಮುಖದಲ್ಲಿ ವರ್ಣಿಕೆಯಿದ್ದು ಅದು ಅತಿಮಾನವತೆಯನ್ನು ಬಿಂಬಿಸುತ್ತಿರುವಾಗ ಕೈ, ಪಾದಗಳೇಕೆ ಸಾಮಾನ್ಯ ಮನುಷ್ಯನ ಹಾಗಿರಬೇಕು ಎಂಬುದು ಅವರ ತರ್ಕವಾಗಿತ್ತು. ಕಿರೀಟದ ಹಿಂದೆ ಹಗ್ಗ, ಗಂಟುಗಳು ಕಾಣಿಸಿ ವೇಷದ ಘನತೆಗೆ ಕುಂದುಂಟಾಗುವುದರಿಂದ ವಸ್ತ್ರವನ್ನು (ಪಾಗನ್ನು) ಇಳಿಬಿಡುವಂತೆ ಸೂಚಿಸಿದ್ದರು. ಅದಕ್ಕೆ ಅವರ ಗೆಳೆಯರಾದ ಪ್ರಸಿದ್ಧ ಚಿತ್ರಕಲಾವಿದ ಕೆ.ಕೆ. ಹೆಬ್ಬಾರರ ಕಲಾಕೃತಿಯ ಪ್ರೇರಣೆಯೂ ಇದ್ದಿರಬಹುದೆಂದು ನನ್ನ ಊಹೆ. ಇನ್ನು ಸ್ತ್ರೀವೇಷ ಶಿರೋಭೂಷಣಗಳನ್ನು ಬಳಕೆಗೆ ತಂದದ್ದೇ ಶಿವರಾಮ ಕಾರಂತರು. ಆ ಬಗ್ಗೆ ಮತ್ತೊಮ್ಮೆ ಹೇಳುತ್ತೇನೆ.ಆ ಆಂಗ್ಲ ಮಹಿಳೆ ಶಿವರಾಮ ಕಾರಂತರ ಜೊತೆಗೂ ಕೆಲವು ವಿಚಾರಗಳನ್ನು ಚರ್ಚಿಸಿದ್ದರು. ಭಾಷೆಯ ತೊಡಕಿದ್ದುದರಿಂದ ಅಂಥ ಸಂಭಾಷಣೆಗಳನ್ನು ಸಾಧ್ಯವಾದಷ್ಟು ಗ್ರಹಿಸುವುದಕ್ಕೆ ಪ್ರಯತ್ನಿಸಿದೆನೆಯೇ ಹೊರತು ಎಲ್ಲವೂ ನನಗೆ ಅರ್ಥವಾಯಿತೆಂದು ಹೇಳಲಾರೆ. ನಾವು ನಮ್ಮ ನೆಲದ ಕಲೆಯ ಬಗ್ಗೆ ಮೋಹಭಾವವನ್ನು ಹೊಂದಿರುವಾಗ, ಈ ನೆಲಕ್ಕೆ ಸಂಬಂಧ ಪಡದ ಮಂದಿ ಹೊಸದೃಷ್ಟಿಯಲ್ಲಿ ಅರ್ಥ ಮಾಡಿಕೊಂಡು ಪ್ರಶ್ನೆಗಳನ್ನು ಮಾಡುವಾಗ ನಮಗೂ ಭಿನ್ನ ರೀತಿಯಲ್ಲಿ ಯೋಚಿಸಲು ಪ್ರೇರಣೆಯಾಗುತ್ತದೆ.ಅಂಥ ಅನುಭವ ನನಗೆ ಲಂಡನ್‌ನಲ್ಲಾಯಿತು. ಐಸಿಸಿಆರ್‌ನ ಸಹಯೋಗದಲ್ಲಿ ಬ್ರೆಜಿಲ್‌ನಲ್ಲಿಯೂ ನಮ್ಮ ಕಾರ್ಯಕ್ರಮಗಳು ಯೋಜಿತವಾಗಿದ್ದವು. ಲಂಡನ್‌ನಿಂದ ಬ್ರೆಜಿಲ್‌ಗೆ ಆಕಾಶ ಮಾರ್ಗ ಹಿಡಿದೆವು. ಬ್ರೆಜಿಲ್‌ನ ಪಾರ್ಲಿಮೆಂಟ್ ಭವನದಲ್ಲಿ ನೀಡಿದ ಪ್ರದರ್ಶನ ನನ್ನ ಪಾಲಿಗೆ ಅವಿಸ್ಮರಣೀಯ. ನನ್ನಲ್ಲಿ ಲಭ್ಯವಿರುವ ಟಿಪ್ಪಣಿ ಚೀಟಿಯ ಆಧಾರದಲ್ಲಿ ಹೇಳುವುದಿದ್ದರೆ ಲಂಡನ್ ಮತ್ತು ಬ್ರೆಜಿಲ್‌ನ ವಿವಿಧೆಡೆಗಳಲ್ಲಿ ಒಟ್ಟು 27 ಪ್ರದರ್ಶನಗಳು ಆಯೋಜಿಸಲ್ಪಟ್ಟಿದ್ದವು.ಮರಳಿ ಮಾತೃಭೂಮಿಯ ಹಾದಿಯಲ್ಲಿ ಸಾಗುತ್ತಿರುವಾಗಲೂ ಯಕ್ಷಗಾನದ ಕಲೆಯ ಕುರಿತ ನನ್ನ ಸಾಂಪ್ರದಾಯಿಕ ತಿಳಿವಳಿಕೆ ಮತ್ತು ಶಿವರಾಮ ಕಾರಂತರ ಹೊಸದಾದ ಅರ್ಥವಂತಿಕೆ- ಎರಡೂ ಪರಸ್ಪರ ಮುಖಾಮುಖಿಯಾಗಿ ನನ್ನ ಚಿತ್ತದಲ್ಲಿ ಕೂತುಬಿಟ್ಟಿದ್ದವು. ಫಕ್ಕನೆ ನೆನಪಾಯಿತು, `ಹೇಗೆ ಮುಂದಡಿಯಿಡಲಿ' ಎಂಬ ವಾಕ್ಯಕ್ಕೆ ಶಿವರಾಮ ಕಾರಂತರು ಮಾಡುತ್ತಿದ್ದ ಅಭಿನಯ! ಸಾಂಪ್ರದಾಯಿಕ ಶೈಲಿಯ ಕಲಾವಿದರು ಮುಂದೆ ಮುಂದೆ ಹೆಜ್ಜೆಯಿಟ್ಟು ಅದನ್ನು ಅಭಿನಯಿಸುತ್ತಿದ್ದರೆ ಶಿವರಾಮ ಕಾರಂತರು ಮಾತ್ರ, `ಹೇಗೆ ಮುಂದಡಿಯಿಡಲಿ...' ಎನ್ನುತ್ತ ಹಿಂದೆ ಹಿಂದೆ ಸರಿಯುತ್ತಿದ್ದ ಚಿತ್ರವನ್ನು ಕಣ್ಣೆದುರು ತಂದುಕೊಂಡು ಯಕ್ಷಗಾನದ ಕುರಿತ ಅವರ ಚಿಂತನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದೆ...ನಾನು ಹಿಂದಡಿಯಿಡುವಂತಿರಲಿಲ್ಲ. ಮುಂದಡಿಯಿಡದೆ ಬೇರೆ ದಾರಿಯಿರಲಿಲ್ಲ. ಅದೂ ಮದುವೆಯೆಂಬುದು ಲಘುವಾದ ಸಂಗತಿಯೇ? ನಿಶ್ಚಿತಾರ್ಥವಾಗಿ ಎರಡು ವರ್ಷಗಳಾದರೂ ಕಂಕಣಭಾಗ್ಯ ಒದಗಿಬರಲಿಲ್ಲ. ಗುರುಗಳಾದ ಶಿವರಾಮ ಕಾರಂತರಲ್ಲಿ ನಿವೇದಿಸಿಕೊಳ್ಳೋಣ ಎಂದು ಯೋಚಿಸಿ ಅವರ ಮನೆಗೆ ಬಂದರೆ ಅವರು ವಿಷಯವನ್ನು ತೇಲಿಸಿ, ನನ್ನನ್ನು ಕಳುಹಿಸಿ, ಮನೆಯ ಬಾಗಿಲು ಹಾಕಿಬಿಟ್ಟಿದ್ದರು. ನಾನು ಮಾತ್ರ ಜಗಲಿಯ ಹೊರಗೆ ಗೋಡೆಗೊರಗಿ ಸುಮ್ಮನೆ ನಿಂತುಕೊಂಡಿದ್ದೆ. ಅಷ್ಟರಲ್ಲಿ ಶಿವರಾಮ ಕಾರಂತರಿಗೆ ನಿಕಟರಾಗಿದ್ದ ಅವರ ಕಾರಿನ ಚಾಲಕ ಆನಂದರು ಬಂದರು.ಅವರಿಗೆ ನನ್ನ ಪರಿಚಯವಿದ್ದುದರಿಂದ ಅವರಲ್ಲಿ ನನ್ನ ಸಮಸ್ಯೆ ಹೇಳಿಕೊಂಡೆ. `ನಾನು ಹೇಳಿನೋಡುತ್ತೇನೆ' ಎಂದು ಮತ್ತೆ ಬಾಗಿಲು ತಟ್ಟಿದರು. ನಾನು, ಒಳಗೊಳಗೆ ಹೆದರುತ್ತ ಗೋಡೆಗೆ ಅಂಟಿಕೊಂಡೇ ನಿಂತಿದ್ದೆ. ಮಹಡಿಯ ಮೆಟ್ಟಿಲಲ್ಲಿ ಕೆಳಗಿಳಿಯುತ್ತಿದ್ದ ಕಾರಂತರು ಅಲ್ಲಿಯೇ ನಿಂತುಕೊಂಡು, `ಏನು?' ಎಂದು ಕೇಳಿದರು. `ಸಂಜೀವರಿಗೆ ಏನೋ...' ಎಂದರು ಆನಂದ.`ಅವನು ಈಗ ಮಾತನಾಡಿ ಹೋದ. ಪುನಃ ಏನಂತೆ?' ಎಂದರು ಗಡಸುದನಿಯಲ್ಲಿ. ಸ್ವಲ್ಪ ಹಣದ ಸಹಾಯ ಬೇಕಿತ್ತು ಎಂಬುದನ್ನು ಅವರಿಗೆ ಮನವರಿಕೆ ಮಾಡಿದರು ಆ ಪುಣ್ಯಾತ್ಮ. `ನೀನು ಫಾರಿನ್‌ಗೆಲ್ಲ ಹೋಗಿ ಬಂದಿದ್ದಿ... ವರದಕ್ಷಿಣೆ ಕೇಳಬೇಕಿತ್ತು' ಎಂದರು ನನ್ನನ್ನು ನೋಡುತ್ತ. ಅವರು ವಿನೋದವಾಗಿ ಹೇಳುತ್ತ್ದ್ದಿದರಾದರೂ ನನಗೆ ನಗುವ ಧೈರ್ಯವಿರಲಿಲ್ಲ. `ಎಲ್ಲಿಯ ಹುಡುಗಿ, ಹೇಗೆ ಮದುವೆ ಮಾಡಿಕೊಳ್ಳಬೇಕೆಂದಿದ್ದಿ...' ಎಂದೆಲ್ಲ ವಿಚಾರಿಸಿ, `ಕೃಷ್ಣ ಭಟ್ಟರಲ್ಲಿ ಹೇಳುತ್ತೇನೆ. ಅವರನ್ನು ಭೇಟಿಯಾಗು' ಎಂದರು. ನೆಮ್ಮದಿಯಲ್ಲಿ ಉಸಿರಾಡುತ್ತ ಮರಳಿದೆ. ಯಕ್ಷಗಾನ ಕೇಂದ್ರದ ನಿರ್ದೇಶಕರೂ ನನ್ನ ಹಿತೈಷಿಗಳೂ ಆದ ಹೆರಂಜೆ ಕೃಷ್ಣ ಭಟ್ಟರನ್ನು ಮರುದಿನ ಕಂಡು ಸಹಾಯವನ್ನು ಪಡೆದೆ.ಶಿವರಾಮ ಕಾರಂತರು ಎಂಥ ಆರ್ದ್ರ ಹೃದಯಿಯಾಗಿದ್ದರು ಎಂಬುದರ ಬಗ್ಗೆ ಹೇಳಿಕೊಳ್ಳುವ ಉದ್ದೇಶದಿಂದಷ್ಟೇ ಮೇಲಿನ ಘಟನೆಯನ್ನು ಹಂಚಿಕೊಂಡಿದ್ದೇನೆ. ಡಿಸೆಂಬರ್ 4, 1988ರಂದು ಉಡುಪಿ ಬಳಿಯ ಕೊಡವೂರು ಶಂಕರನಾರಾಯಣ ದೇವಸ್ಥಾನದ ಕಲ್ಯಾಣಮಂಟಪ ನನ್ನ ಮದುವೆಯ ವೇದಿಕೆಯಾಯಿತು. ಆ ದಿನ ಮುಂಜಾವ ಸೈಕಲ್ ತುಳಿದುಕೊಂಡು ಕೊಡವೂರು ಕೃಷ್ಣಮೂರ್ತಿ ರಾಯರ ಮನೆಗೆ ಹೋದೆ. ಕೃಷ್ಣಮೂರ್ತಿ ರಾಯರು ಅನೇಕ ಸಂದರ್ಭಗಳಲ್ಲಿ ನನಗೆ ನೆರವಾದ ಸಹೃದಯಿ. ಎಲ್ಲರ ಶುಭಹಾರೈಕೆಯೊಂದಿಗೆ ಹಸೆಮಣೆ ಏರಿದ್ದೊಂದು ಮಧುರಕ್ಷಣ. `ಗುರುಹಿರಿಯರ ಸಮಕ್ಷ' ಎಂಬುದು ಶುಭಕಾರ್ಯದಲ್ಲೆಲ್ಲ ಬಳಸುವ ವಾಡಿಕೆಯ ಪದಪುಂಜ. ನನ್ನ ಪಾಲಿಗೆ ಅದು ಅಕ್ಷರಶಃ ನಿಜವಾಗಿತ್ತು. ಶಿವರಾಮ ಕಾರಂತರು ಬೆಳಿಗ್ಗೆ ಬೇಗನೆ ಬಂದು ಕಲ್ಯಾಣ ಮಂಟಪದ ಒಂದು ಪಾರ್ಶ್ವದ ಕುರ್ಚಿಯಲ್ಲಿ ಆಸನರಾಗಿದ್ದರು!ನನ್ನ ಗುರುಸ್ಥಾನದಲ್ಲಿದ್ದ ಕೆಮ್ಮಣ್ಣು ಆನಂದರವರು ಒಳ್ಳೆಯ ಲಹರಿಯಲ್ಲಿ ವೇದಿಕೆ ಹತ್ತಿ ಬಂದವರೇ ಕೈಯೆತ್ತಿ ಆಶೀರ್ವದಿಸಿ ಮದುಮಗಳಾದ ವೇದಾವತಿಯಲ್ಲಿ ಮೆಲುದನಿಯಲ್ಲಿ, `ಸಂಜೀವನಿಗೆ ಸ್ವಲ್ಪ ಅಹಂ ಜಾಸ್ತಿ... ನಿಷ್ಠುರವಾಗಿ ಮಾತನಾಡುತ್ತಾನೆ. ಸರಿಯಾಗಿ ನೋಡ್ಕೋಮ್ಮ' ಎಂದು ಹೇಳಿದ್ದು ಮತ್ತು ಅವರು ನನ್ನ ಮೇಲಿನ ಮುಗ್ಧ ವಾತ್ಸಲ್ಯದಲ್ಲಿ ಶುಭಕಾರ್ಯದ ಕೊನೆಯವರೆಗೆ ಇದ್ದು ಹೋದದ್ದು ಕೂಡ ಆಗಾಗ ಕಣ್ಣೆದುರು ಬರುತ್ತದೆ.ಕರುಣಾ, ಭಯಾನಕ, ಹಾಸ್ಯ ಮುಂತಾದ ರಸಗಳ ಸ್ಥಾಯಿ ಅನುಭೂತಿಯ ದಿನಗಳನ್ನು ಕಳೆದ ನನ್ನ ಬದುಕಿನಲ್ಲಿ ಶೃಂಗಾರ ಭಾವ ಸಂಚರಿಸಿದ ಗಳಿಗೆಯದು. ನನ್ನ ಬದುಕಿನ ಕಷ್ಟಸುಖಗಳಲ್ಲಿ ಪಾಲುಪಡೆದುಕೊಳ್ಳುವುದಕ್ಕಾಗಿ ನನ್ನೊಂದಿಗೆ ಹೆಜ್ಜೆ ಹಾಕಿದಳು.ಶೃಂಗಾರ, ಹಾಸ್ಯ, ಕರುಣಾ...

ನವರಸಗಳು ಭಾರತದ ವಿವಿಧ ಕಲೆಗಳಲ್ಲಿ ಹೇಗೆ ಬಿಂಬಿತವಾಗುತ್ತದೆ ಎಂಬುದರ ಪ್ರಾತ್ಯಕ್ಷಿಕೆಯದು. ಉತ್ತರಪ್ರದೇಶದ ರಾಜಧಾನಿಯಾದ ಲಖನೌದ ಯಾವುದೋ ಸಭಾಂಗಣ. ಶಿವರಾಮ ಕಾರಂತರ ನೇತೃತ್ವದಲ್ಲಿ ನಾವು ಯಕ್ಷಗಾನವನ್ನು ಪ್ರತಿನಿಧಿಸಿದ್ದೆವು. ಮಣಿಪುರಿ ತಂಡದೊಂದಿಗೆ ರತನ್ ಥಿಯಾಂ ಇದ್ದರು. ಕೇರಳದ ತಂಡದೊಂದಿಗೆ ನಾರಾಯಣನ್ ಪಣಿಕ್ಕರ್ ಇದ್ದರು. ಇನ್ನೂ ಯಾರ್ಯಾರೆಲ್ಲ ಇದ್ದರು...ನಮ್ಮ ಸರದಿ ಬಂದಾಗ ಯಕ್ಷಗಾನದಲ್ಲಿ ನವರಸಗಳ ಅಭಿನಯವನ್ನು ತೋರಿಸಿದೆವು. ಉಳಿದ ಕಲೆಗಳ ಪ್ರಾತ್ಯಕ್ಷಿಕೆಯನ್ನು ಕಂಡು ಒಂದು ಪ್ರಶ್ನೆ ಮನಸ್ಸಿನಲ್ಲಿ ಕಾಡಲಾರಂಭಿಸಿತ್ತು...

ಆದರೆ, ಕೇಳುವುದು ಹೇಗೆ!

(ಸಶೇಷ) ನಿರೂಪಣೆ: ಹರಿಣಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.