ಮಂಗಳವಾರ, ಜುಲೈ 14, 2020
24 °C

ಲಾಭ ಗಳಿಕೆಗೆ ಉತ್ತಮ ಅವಕಾಶ

ಕೆ. ಜಿ. ಕೃಪಾಲ್ Updated:

ಅಕ್ಷರ ಗಾತ್ರ : | |

ಲಾಭ ಗಳಿಕೆಗೆ ಉತ್ತಮ ಅವಕಾಶ

ಷೇರುಪೇಟೆಯ ಬೆಳವಣಿಗೆಯನ್ನು ಗಮನಿಸಿದಾಗ ಇಲ್ಲಿ ಕಂಪನಿಗಳ ಸಾಧನೆ ನಗಣ್ಯ, ಬೋಧನೆಗೆ ಹೆಚ್ಚು ಮಾನ್ಯ ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದು ಅರಿವಾಗುತ್ತದೆ. ಹೊಸ ಹಣಕಾಸು ವರ್ಷದ ಮೊದಲೆರಡು ದಿನ ಸಂವೇದಿ ಸೂಚ್ಯಂಕ ಏರಿಕೆ ಕಂಡು ಸಂಭ್ರಮಿಸಿದರೆ ಬುಧವಾರ ಜಾಗತಿಕ ಪೇಟೆಗಳ ಕುಸಿತದ ಕಾರಣ ಸ್ಥಳೀಯವಾಗಿ 351 ಅಂಶಗಳಷ್ಟು ಕುಸಿತದಿಂದ  ವಾತಾವರಣವನ್ನು ಬದಲಿಸಿತು. ಆದರೆ, ಗುರುವಾರ ಜಾಗತಿಕ ಪೇಟೆಗಳು ಏರಿಕೆಯತ್ತ ನಡೆದ ಕಾರಣ ಮತ್ತು ನಿರೀಕ್ಷೆಯಂತೆ ಭಾರತೀಯ ರಿಸರ್ವ್ ಬ್ಯಾಂಕ್ ಬದಲಾವಣೆಯಿಲ್ಲದ ಸಾಲ ನೀತಿ ಪ್ರಕಟಿಸಿದ ಕಾರಣ ಉತ್ತೇಜನಗೊಂಡ ಪೇಟೆ ಅಂದು ಸುಮಾರು 618 ಅಂಶಗಳ ಏರಿಕೆ ಕಾಣುವಂತೆ ಮಾಡಿತು. ಅಂದು ಸಂವೇದಿ ಸೂಚ್ಯಂಕದ 29 ಕಂಪನಿಗಳು ಏರಿಕೆ ಕಂಡಿದ್ದು, ಭಾರ್ತಿ ಏರ್‌ಟೆಲ್‌ ಮಾತ್ರ ಅಲ್ಪ ಹಾನಿ ಕಂಡಿತು.

ಕಳೆದ ವಾರ ಕೆನರಾ ಬ್ಯಾಂಕ್ ತನ್ನ ಅಂಗ ಸಂಸ್ಥೆ ಗೃಹವಲಯದ ಕ್ಯಾನ್ ಫಿನ್ ಹೋಮ್ಸ್ ಷೇರುಗಳನ್ನು ಮಾರಾಟಮಾಡುವ ಪ್ರಕ್ರಿಯೆಯನ್ನು ತಡೆಹಿಡಿದ ಕಾರಣ ಕ್ಯಾನ್ ಫಿನ್ ಹೋಮ್ಸ್ ಷೇರಿನ ಬೆಲೆ ₹460 ರ ಸಮೀಪದಿಂದ ₹426 ರವರೆಗೂ ಇಳಿಕೆ ಕಂಡಿತು.

ಈ ಮಧ್ಯೆ ಕಂಪನಿಯು ತನ್ನ ವಾರ್ಷಿಕ ಸಾಧನೆಯ ಅಂಕಿ ಅಂಶ  ಮತ್ತು ಲಾಭಾಂಶ ಘೋಷಣೆಗೆ 28 ರಂದು ಸಭೆ ಸೇರಲಿದೆ ಎಂಬ ಪ್ರಕಟಣೆಯ ಹಿನ್ನೆಲೆಯಲ್ಲಿ ಷೇರಿನ ಬೆಲೆ ಪುಟಿದೆದ್ದು ₹455 ರವರೆಗೂ ಏರಿಕೆ ಕಂಡು ₹451 ರ ಸಮೀಪ  ವಾರಾಂತ್ಯ ಕಂಡಿತು. ಮಾರ್ಚ್ 15 ರಂದು ಷೇರಿನ ಬೆಲೆ ₹550 ರ ಸಮೀಪದಿಂದ ಇಳಿಕೆ ಪಡೆದು ನಂತರ ಹೆಚ್ಚಿನ ವೇಗದಲ್ಲಿ ಚೇತರಿಕೆ ಕಂಡಿದೆ.

ಈ ಸಂದರ್ಭದಲ್ಲಿ ಗಮನಿಸಬೇಕಾದ ಅಂಶ ಏನೆಂದರೆ ಮಾರಾಟದ ಪ್ರಕ್ರಿಯೆ ನಿಲ್ಲಿಸಲು ಬಿಡ್ ದರಗಳು ಸೂಕ್ತವಲ್ಲ ಎಂದಾದರೆ ಅಲ್ಲಿಂದ ಷೇರಿನ ಬೆಲೆ ಭಾರಿ ಕುಸಿತ ಕಂಡಾಗ ಅದು ಹೆಚ್ಚಿನ ಆಕರ್ಷಕ ಹೂಡಿಕೆಯಾಗಲಿದೆ ಎಂಬುದನ್ನು ಮರೆಯಬಾರದು.

ಮಾರ್ಚ್ ತಿಂಗಳಲ್ಲಿ ಹೆಚ್ಚಿನ ಕಂಪನಿ ಷೇರುಗಳ ಬೆಲೆಗಳು ಭಾರಿ ಕುಸಿತ ಕಂಡವು ಇದಕ್ಕೆ ಪ್ರಮುಖ ಕಾರಣ  ಮ್ಯೂಚುವಲ್‌ ಫಂಡ್ ಮೂಲಕ ಬರುವ ಒಳಹರಿವು ಭಾರಿ ಇಳಿಕೆ ಕಂಡಿದ್ದು, ಜೊತೆಗೆ ವಿತ್ತೀಯ ಸಂಸ್ಥೆಗಳ ಚಟುವಟಿಕೆಯು ಕ್ಷೀಣವಾಗಿರುವುದಾಗಿದೆ.  ಸಾಮಾನ್ಯವಾಗಿ ಮಾರ್ಚ್ ತಿಂಗಳಲ್ಲಿ ಈ ಪರಿಸ್ಥಿತಿ ಇರುತ್ತದೆ. ಇದುವರೆಗೂ ಪೇಟೆಯಿಂದ ಹಿಂದೆ ಸರಿದಿದ್ದ ಹಣವು ಇನ್ನು ಮುಂದೆ ಮರು ಪ್ರವೇಶ ಮಾಡಬಹುದಾಗಿದೆ. ಇದರೊಂದಿಗೆ ಹೊಸ ಹೂಡಿಕೆಯು ಬರುವುದರಿಂದ ಪೇಟೆಯಲ್ಲಿ ಹೆಚ್ಚಿನ ಚಟುವಟಿಕೆ ಕಂಡು ಬರುವ ಸಾಧ್ಯತೆ ಇದೆ.

ಷೇರುಪೇಟೆಗಳಲ್ಲಿ ಸಣ್ಣ ಹೂಡಿಕೆದಾರರಿಗೆ ಅವಕಾಶಗಳು ಲಭ್ಯವಾಗಬೇಕಾದರೆ ಅವರು  ಹಿಂದಿನ ‘ಲಾಯಲ್ಟಿ’ ವಿಧದ ಚಟುವಟಿಕೆಯಿಂದ ಹೊರಬಂದು ಎಲ್ಲಿ 'ರಾಯಲ್ಟಿ' (ಗೌರವಧನ) ದೊರೆಯುತ್ತದೋ ಅತ್ತ ಗಮನಹರಿಸಬೇಕು ಎಂಬುದನ್ನು ಕಳೆದ ವಾರ ಪೇಟೆಯು ಮತ್ತೊಮ್ಮೆ ದೃಢೀಕರಿಸಿದೆ.

ಮಾರ್ಚ್ ಅಂತ್ಯದ ದಿನ ಭಾರಿ ಕುಸಿತದಿಂದ  ಕಮ್ಮಿನ್ಸ್ ಇಂಡಿಯಾ ಷೇರಿನ ಬೆಲೆ ₹ 670.95 ರ ವಾರ್ಷಿಕ ಕನಿಷ್ಠಕ್ಕೆ ಜಾರಿತ್ತು. ಹೊಸ ವರ್ಷದ ಐದು ದಿನಗಳ ವಹಿವಾಟಿನಲ್ಲಿ ₹ 771 ರವರೆಗೂ ಪುಟಿದೆದ್ದಿದೆ. ಆದರೆ ಇದರ ಹಿಂದೆ ಅದೇ ಷೇರಿನ ಬೆಲೆ ಫೆಬ್ರುವರಿ ಅಂತ್ಯದಲ್ಲಿ ಎಂಟು ನೂರು ರೂಪಾಯಿಗಳ ಸಮೀಪವಿದ್ದು,  ಮಾರ್ಚ್ ಮಧ್ಯಂತರದಲ್ಲಿ ₹ 788 ರ ಸಮೀಪದಲ್ಲಿದ್ದು,  ಅಲ್ಲಿಂದ ಇಳಿಕೆ ಕಂಡಿರುವ ಅಂಶವೇ ಷೇರಿನ ಬೆಲೆ ಪುಟಿದೇಳಲು ಪ್ರಮುಖ ಕಾರಣವೆನ್ನಬಹುದು.

ಹೊಸ ಷೇರು: ಇತ್ತೀಚಿಗೆ ಪ್ರತಿ ಷೇರಿಗೆ ₹56 ರಂತೆ ಆರಂಭಿಕ ಷೇರು ವಿತರಣೆ ಮಾಡಿದ ಲೇಮನ್ ಟ್ರೀ ಹೋಟೆಲ್ಸ್ ಲಿಮಿಟೆಡ್  9 ರಿಂದ ಬಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ. ಪ್ರತಿಯೊಂದು ಆರಂಭಿಕ ಷೇರು ಲಾಭಕರ ಎಂಬ ಅಂಶ ಸರಿಯಲ್ಲ. ಹಿಂದಿನ ದಿನಗಳಲ್ಲಿ ನಾವು ಸರ್ಕಾರಿ ವಲಯದ ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ವಿತರಣೆ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ವಹಿವಾಟಾಗಿದ್ದಂತೆ, ಈ ವಾರ ವಹಿವಾಟಿಗೆ ಬಿಡುಗಡೆಯಾದ ಐಸಿಐಸಿಐ ಸೆಕ್ಯುರಿಟೀಸ್ ಲಿಮಿಟೆಡ್ ಕಂಪನಿ ಷೇರು ವಿತರಣೆ ಬೆಲೆಯಾದ ₹520 ನ್ನು ತಲುಪದೆ. ವಾರಾಂತ್ಯವನ್ನು ₹440 ರ ಸಮೀಪ ಅಂತ್ಯ ಕಂಡಿದೆ.

ಮತ್ತೊಂದು ಕಂಪನಿ ಮಿಶ್ರಧಾತು ನಿಗಮ್ ಲಿಮಿಟೆಡ್ ವಿತರಣೆ ಬೆಲೆ ₹90 ರ ಸಮೀಪದಲ್ಲಿ ವಹಿವಾಟಾಗಿರುವುದು,  ಐಪಿಒಗಳಿಗೆ ಕಣ್ಮುಚ್ಚಿ ಅರ್ಜಿ ಸಲ್ಲಿಸದೆ ಕಂಪನಿಯ ಗುಣಮಟ್ಟ ಮತ್ತು ವಿತರಣೆ ಬೆಲೆಗಳನ್ನು ಪರಿಶೀಲಿಸಿ ನಿರ್ಧರಿಸ

ಬೇಕೆಂಬುದು ದೃಢೀಕರಿಸಿದೆ.

ಮುಖಬೆಲೆ ಸೀಳಿಕೆ: ಅಮೃತಾಂಜನ್ ಹೆಲ್ತ್ ಕೇರ್ ಕಂಪನಿ ಷೇರಿನ ಮುಖಬೆಲೆಯನ್ನು ₹2 ರಿಂದ ₹1 ಕ್ಕೆ ಸೀಳಲು ಈ ತಿಂಗಳ 16 ನಿಗದಿತ ದಿನ. ಎನ್‌ಬಿಸಿಸಿ (ಇಂಡಿಯಾ)  ಲಿಮಿಟೆಡ್ ಷೇರಿನ ಮುಖಬೆಲೆಯನ್ನು ₹2 ರಿಂದ ₹1 ಕ್ಕೆ ಸೀಳಲು ಈ ತಿಂಗಳ 26 ನಿಗದಿತ ದಿನ.

ಅಮಾನತು ತೆರವು, ಹೆಸರು ಬದಲಾವಣೆ: ಶ್ರೀ ಶಕ್ತಿ ಎಲ್‌ಪಿಜಿ ಲಿಮಿಟೆಡ್ ಕಂಪನಿ ಡಿಸೆಂಬರ್‌ 2013 ರಿಂದಲೂ ಅಮಾನತುಗೊಂಡಿದ್ದು, ಏಪ್ರಿಲ್ 12 ರಿಂದ ಅಮಾನತು ತೆರವುಗೊಳಿಸಿದ ಕಾರಣ ಅಂದಿನಿಂದ ‘ಟಿ’ ವಿಭಾಗದಲ್ಲಿ  ಶ್ರೀ ಹವೀಶ ಹಾಸ್ಪಿಟಾಲಿಟಿಸ್ ಅಂಡ್ ಇನ್ಫ್ರಾಸ್ಟ್ರಕ್ಚರ್‌ ಲಿ. ಎಂಬ ಹೊಸ ಹೆಸರಿನಿಂದ ವಹಿವಾಟಿಗೆ ಬಿಡುಗಡೆಯಾಗಲಿದೆ.

ಷೇರುಗಳ ಒತ್ತೆ ಪ್ರಮಾಣ: ಹಿಂದಿನ ಸತ್ಯಂ ಕಂಪ್ಯೂಟರ್ ಹಗರಣದ ನಂತರ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ), ಪ್ರವರ್ತಕರು ತಾವು ಅಡ ಇಟ್ಟ ಭಾಗಿತ್ವವನ್ನು ಮಾರ್ಗದರ್ಶಿ ಸೂತ್ರಗಳನ್ವಯ ಪ್ರಕಟಿಸುತ್ತಿರಬೇಕು ಎಂಬ ನಿಯಮ ಜಾರಿಗೆ ತಂದಿದೆ. ಪ್ರವರ್ತಕ ಭಾಗಿತ್ವದಲ್ಲಿ ಉಂಟಾಗುವ ಅಡ ಇಟ್ಟ ಪ್ರಮಾಣದಲ್ಲಿನ ಬದಲಾವಣೆ  ಆ ಕಂಪನಿಯ ಷೇರಿನ ಬೆಲೆ ಮೇಲೆ ನೇರ ಪರಿಣಾಮ ಬೀರುವುದು. ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟಿಗೆ ಲಿಸ್ಟ್ ಆಗಿರುವ 5035 ಕಂಪನಿಗಳಲ್ಲಿ 3074 ಕಂಪನಿಗಳು ಅಡ ಇಟ್ಟ ಪಟ್ಟಿಯಲ್ಲಿ ಸೇರಿವೆ.

ಪ್ರವರ್ತಕರು ಅಡ ಇಟ್ಟ ಷೇರಿನ ಪ್ರಮಾಣ ಹೆಚ್ಚಾದಂತೆ ಷೇರಿನ ಬೆಲೆ ಇಳಿಕೆ ಕಾಣುವುದು. ಕಳೆದ ಡಿಸೆಂಬರ್ ತಿಂಗಳಲ್ಲಿ ವಾರ್ಷಿಕ ಗರಿಷ್ಠ ದಲ್ಲಿದ್ದ ಬಾಂಬೆ ರೇಯಾನ್ ಫ್ಯಾಷನ್ಸ್ ಲಿ. ಕಂಪನಿಯ ಪ್ರವರ್ತಕರು ಅಕ್ಟೋಬರ್‌ 2017 ರಲ್ಲಿ ತಮ್ಮ ಭಾಗಿತ್ವದ ಶೇ 31.93 ರಷ್ಟು ಅಡ ಇಟ್ಟಿದ್ದರು. ಇದರ ಪ್ರಮಾಣವು ಡಿಸೆಂಬರ್ ವೇಳೆಗೆ ಶೇ 53.02ಕ್ಕೆ ಏರಿಕೆ ಕಂಡಿತ್ತು. ಹಾಗಾಗಿ ಷೇರಿನ ಬೆಲೆ ₹232 ರ ಸಮೀಪದಿಂದ ಜಾರುತ್ತಾ ಬಂದು ಸದ್ಯ ₹37 ರ ಸಮೀಪದಲ್ಲಿದೆ. 2018ರ ಮಾರ್ಚ್‌ ಅಂಕಿ ಅಂಶಗಳು ಪ್ರಕಟವಾಗಬೇಕಾಗಿದೆ.

ವಾರದ ಮುನ್ನೋಟ

ಮುಂದಿನ ದಿನಗಳಲ್ಲಿ ಕಂಪನಿಗಳು ತಮ್ಮ ತ್ರೈಮಾಸಿಕ, ವಾರ್ಷಿಕ ಫಲಿತಾಂಶಗಳನ್ನು ಪ್ರಕಟಿಸಲಿದ್ದು, ಅದರೊಂದಿಗೆ ಲಾಭಾಂಶಗಳ ಘೋಷಣೆಯಾಗಲಿದೆ. ಕಂಪನಿಗಳ ಸಾಧನೆ, ಆಶ್ವಾಸನೆ, ಪ್ರಗತಿಯ ಮುನ್ನೋಟಗಳು ಮುಂದಿನ ದಿನಗಳಲ್ಲಿ ಪೇಟೆಗೆ ದಾರಿದೀಪವಾಗಲಿವೆ. ಈ ತಿಂಗಳ 13 ರಂದು ಇನ್ಫೊಸಿಸ್‌,  14 ರಂದು ಗೃಹ ಫೈನಾನ್ಸ್, ಐಸಿಐಸಿಐ ಸೆಕ್ಯುರಿಟೀಸ್ ಫಲಿತಾಂಶ ಪ್ರಕಟಿಸಲಿವೆ.

ಜಾಗತಿಕ ಮಟ್ಟದಲ್ಲಿ ಯಾವುದೇ ನಕಾರಾತ್ಮಕ ಬೆಳವಣಿಗೆಗಳಿಲ್ಲದಿದ್ದರೆ ಭಾರತೀಯ ಪೇಟೆಗಳು ಸಂಭ್ರಮಿಸಲಿವೆ.  ವಿಲೀನ, ಸ್ವಾಧೀನದಂತಹ ಕಾರಣಗಳಿಂದಾಗಿ ಏರಿಳಿತಗಳು ಪ್ರದರ್ಶಿತವಾದಾಗ ಹೂಡಿಕೆದಾರರು ತಮ್ಮ ಅನುಕೂಲಕ್ಕೆ ಪರಿವರ್ತಿಸುವ ನೈಪುಣ್ಯತೆ ಬೆಳೆಸಿಕೊಳ್ಳಬೇಕು.

ರಭಸದ ಏರಿಳಿತ ಪ್ರದರ್ಶಿಸುವ ಕಂಪನಿಗಳಲ್ಲಿ ಚಟುವಟಿಕೆ ನಡೆಸುವಾಗ ಮಿತವಾದ ಪ್ರಮಾಣ ದಲ್ಲಿದ್ದಲ್ಲಿ ಅಪಾಯದ ಮಟ್ಟ ತೀರಾ ಕಡಿಮೆಯಾಗುವುದು.  ವಾರ್ಷಿಕ ಗರಿಷ್ಠದಿಂದ ಹೆಚ್ಚು ಕುಸಿತ ಕಂಡಿದೆ ಎಂಬ ಕಾರಣಕ್ಕಾಗಿ ಷೇರುಗಳನ್ನು ಖರೀದಿಸುವ ಹವ್ಯಾಸವು ಒಳಿತಲ್ಲ. ಗೀತಾಂಜಲಿ ಜೆಮ್ಸ್, ಬಾಂಬೆ ರೇಯಾನ್ ಫ್ಯಾಷನ್ಸ್, ವಕ್ರಾಂಗಿಯಂತಹ ಷೇರುಗಳಲ್ಲಿ ಎಚ್ಚರಿಕೆಯ ನಡೆಯಿರಲಿ.

(ಮೊ: 9886313380, ಸಂಜೆ 4.30 ರನಂತರ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.