ಶುಕ್ರವಾರ, ಮೇ 14, 2021
30 °C

ವಿವರಣೆಯ ಶಕ್ತಿ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಒಂದು ಬಾರಿ ರಾಜಕಾರ್ಯದ ಮೇಲೆ ಇರಾನಿನ ಚಕ್ರವರ್ತಿಯ ರಾಯಭಾರಿ ಭಾರತಕ್ಕೆ ಬಂದ. ಸಮಯ ಕೋರಿ ಭಾರತದ ಚಕ್ರವರ್ತಿಯನ್ನು ಭೆಟ್ಟಿಯಾಗಿ ತಾನು ತಂದಿದ್ದ ಕಾಣಿಕೆಗಳನ್ನೆಲ್ಲ ನೀಡಿದ. ತನ್ನ ಚಕ್ರವರ್ತಿಯ ಗೌರವವನ್ನು ತಿಳಿಸಿದ. ಕೆಲಸಕ್ಕಾಗಿ ಬಂದವನು ಒಂದು ವಾರಕಾಲ ಇಲ್ಲಿಯೇ ಇರಬೇಕಾಯಿತು.ದರ್ಬಾರಿನಲ್ಲಿದ್ದಾಗ ಭಾರತದ ಚಕ್ರವರ್ತಿ ವ್ಯವಹರಿಸುವ ನೀತಿಯನ್ನು ಅವನು ಕ್ಲಿಷ್ಟಕರವಾದ ತಕರಾರುಗಳನ್ನು ಪರಿಹರಿಸಿ ನ್ಯಾಯವನ್ನು ನೀಡುವ ರೀತಿಯನ್ನು ಗಮನಿಸಿದ. ಈ ಚಕ್ರವರ್ತಿಯ ಬಗ್ಗೆ ಆತನಿಗೆ ಅಭಿಮಾನ ಮೂಡಿತು. ತಾನು ಮರಳಿ ಇರಾನ್‌ಗೆ ಹೋಗುವ ದಿನ ಮತ್ತೆ ಚಕ್ರವರ್ತಿಯನ್ನು ಕಂಡ. ಭಾರತದ ಚಕ್ರವರ್ತಿಯೂ ಇರಾನಿನ ಚಕ್ರವರ್ತಿಗಾಗಿ ಅನೇಕ ಬೆಲೆಬಾಳುವ ಕಾಣಿಕೆಗಳನ್ನು ನೀಡಿದ, ಗೌರವ ಸೂಚಿಸಿದ. ಅಗ ರಾಯಭಾರಿ ಹೇಳಿದ,  ಖಾವಂದರೇ, ನಾನೂ ಬೇಕಾದಷ್ಟೂ ಜನ ರಾಜರನ್ನು ನೋಡಿದ್ದೇನೆ, ವ್ಯವಹರಿಸಿದ್ದೇನೆ.ಆದರೆ ತಮ್ಮಂತಹವರನ್ನು ಕಾಣಲಿಲ್ಲ. ಒಂದೇ ಮಾತಿನಲ್ಲಿ ತಮ್ಮನ್ನು ವರ್ಣಿಸುವುದಾದರೆ ತಾವು ಪೂರ್ಣಚಂದ್ರ ಇದ್ದ ಹಾಗೆ. ತಮ್ಮನ್ನು ಯಾರಿಗೂ ಹೋಲಿಸುವುದು ಸಾಧ್ಯವಿಲ್ಲ  ಚಕ್ರವರ್ತಿ ಸಂತೋಷಪಟ್ಟ.ರಾಯಭಾರಿ ಪ್ರವಾಸ ಮುಗಿಸಿ ಇರಾನ್ ಸೇರಿದ. ಇವನು ದೇಶವನ್ನು ಮುಟ್ಟುವ ಮೊದಲೇ ಚಾಡಿಯ ಮಾತು ತಲುಪಿತ್ತು. ರಾಯಭಾರಿಯ ಬೆಳವಣಿಗೆಯನ್ನು ಸಹಿಸಲಾರದ ಕೆಲವು ಜನ ಇದ್ದೇ ಇರುತ್ತಾರಲ್ಲ. ಅವರಲ್ಲಿ ಕೆಲವರು ರಾಯಭಾರಿಯ ಜೊತೆಗೇ ಭಾರತಕ್ಕೆ ಬಂದಿದ್ದು, ರಾಯಭಾರಿಯ ಮಾತುಗಳನ್ನು ಕೇಳಿಸಿಕೊಂಡು, ತಕ್ಷಣ ಇರಾನ್‌ಗೆ ರವಾನೆ ಮಾಡಿದ್ದರು. ಸತ್ಯದ ಮಾತುಗಳಿಗೆ ರೆಕ್ಕೆ ಪುಕ್ಕ ಬಂದಿದ್ದವು, ಭಾರೀ ಭಾರೀ ಬಣ್ಣಗಳು ತುಂಬಿದ್ದವು. ರಾಯಭಾರಿ ಭಾರತದ ಚಕ್ರವರ್ತಿಯನ್ನು ಅಗತ್ಯವಿಲ್ಲದೇ ಹೊಗಳುವುದಲ್ಲದೇ ಇಂದಿನ ಚಕ್ರವರ್ತಿಯನ್ನು ಕೀಳಾಗಿ ತೋರಿಸಿದ್ದಾನೆ.ಭಾರತದ ಚಕ್ರವರ್ತಿ ಪೂರ್ಣಚಂದಿರ ಎಂದಾದರೆ ನಮ್ಮ ಇರಾನಿನ ಚಕ್ರವರ್ತಿಗಳು ಅಮಾವಾಸ್ಯೆಯ ಚಂದಿರನೇ? ಹೀಗೆ ಎಷ್ಟೋ ಕಾರ ಹಚ್ಚಿದ ಮಾತುಗಳು ಇರಾನಿನ ಚಕ್ರವರ್ತಿಯನ್ನು ತಲುಪಿದವು. ಅವನ ಕಿವಿಯೂ ಹಿತ್ತಾಳೆಯದೇ, ರೋಷ ಉಕ್ಕು ಬಂತು. ಬರಲಿ ರಾಯಭಾರಿ ದರ್ಬಾರಿಗೆ, ಅವನಿಗೆ ಸರಿಯಗಿ ಬುದ್ಧಿ ಕಲಿಸುತ್ತೇನೆ ಎಂದು ಸಿದ್ದನಾದ ಚಕ್ರವರ್ತಿ.ರಾಯಭಾರಿಗೆ ಈ ವಿಷಯ ತಿಳಿಯದು. ಅತ ತಮ್ಮ ಚಕ್ರವರ್ತಿಯ ದರ್ಬಾರು ಸೇರಿ ಭಾರತದ ಚಕ್ರವರ್ತಿ ಕೊಟ್ಟಿದ್ದ ಬೆಲೆಬಾಳುವ ಕಾಣಿಕೆಗಳನ್ನೆಲ್ಲ ಒಪ್ಪಿಸಿದ. ನಡೆದ ಚರ್ಚೆಯನ್ನು ವಿವರಿಸಿದ. ರಾಜನ ಮುಖ ದುಮು ದುಮು ಉರಿಯುತ್ತಿತ್ತು.  ರಾಯಭಾರಿಗಳೇ, ತಮಗೆ ನಮಗಿಂತ ಭಾರತದ ಚಕ್ರವರ್ತಿಗಳೇ ದೊಡ್ಡವರೆಂದು ಮನವರಿಕೆ ಆದಂತಿದೆ. ಈಗ ನಿಮ್ಮ ಜೀವ ಅಪಾಯದಲ್ಲಿದೆ.ಯಾಕೆಂದರೆ ನೀವು ಭಾರತದಲ್ಲಿ ಹೇಳಿದ ಒಂದು ಮಾತು ನಮ್ಮನ್ನು ಅಪಮಾನಕ್ಕೀಡು ಮಾಡಿದೆ. ನೀವು ಆ ಚಕ್ರವರ್ತಿಗಳನ್ನು ಪೂರ್ಣಚಂದ್ರ ಎಂದಿರಂತೆ. ಹಾಗಾದರೆ ನಾವಾರು? ಅಮಾವಾಸ್ಯೆಯ ಚಂದಿರರೇ? ನಮ್ಮ ಅನ್ನ ಊಟ ಮಾಡಿ ಮತ್ತೊಬ್ಬರನ್ನು ಹೊಗಳುವ ರಾಯಭಾರಿ ನಮಗೆ ಬೇಡ. ಅಂಥವರು ಬದುಕಿರುವುದೂ ಬೇಡ  ಎಂದು ಗುಡುಗಿದ ಚಕ್ರವರ್ತಿ.ಈಗ ರಾಯಭಾರಿಗೆ ಚಕ್ರವರ್ತಿಯ ಕೋಪದ ಕಾರಣ ತಿಳಿಯಿತು. ಆತ ಮಹಾ ಬುದ್ಧಿವಂತ. ತಕ್ಷಣ ನಕ್ಕು ಹೇಳಿದ,  ಪ್ರಭೂ ನಾನು ಹೇಳಿದ್ದು ಸತ್ಯ, ಅವರೇ ಪೂರ್ಣಚಂದಿರರು, ತಾವಲ್ಲ. ಯಾಕೆ ಗೊತ್ತೇ? ಹುಣ್ಣಿಮೆಯ ದಿನ ಚಂದ್ರ ಪೂರ್ಣವಾದರೆ ಮರುದಿನದಿಂದ ಕುಗ್ಗುತ್ತ ಹೋಗಿ ಒಮ್ಮೆ ಇಲ್ಲದಂತಾಗುತ್ತಾನೆ. ಅದರೆ ತಾವು ಮೊದಲದಿನದ ಚಂದ್ರ. ಪ್ರತಿದಿನವೂ ಬೆಳೆಯುತ್ತ, ಪ್ರಕಾಶಮಾನವಾಗುವ ಚಂದ್ರ. ಅದಕ್ಕೇ ಅವರನ್ನು ಪೂರ್ಣಚಂದ್ರ ಎಂದೆ, ಯಾಕೆಂದರೆ ಇನ್ನು ಮುಂದೆ ಅವರ ಶಕ್ತಿ ಕುಂಠಿತವಾಗುತ್ತದೆ ಎಂದರ್ಥ. ಚಕ್ರವರ್ತಿಯ ಮುಖ ಅರಳಿತು. ರಾಯಭಾರಿಗೆ ಭಾರೀ ಬೆಲೆಯ ಬಹುಮಾನವನ್ನು ಕಳುಹಿಸಿದ.ಮಾತು ಬಲ್ಲವ ಬದುಕಿಕೊಳ್ಳುತ್ತಾನೆ. ಅದರಲ್ಲೂ ಮೂರ್ಖರು ಯಜಮಾನರಾಗಿದ್ದಾಗ ಅವರ ಕೆಳಗೆ ಕೆಲಸ ಮಾಡುವವರು ತುಂಬ ಬುದ್ಧಿಶಾಲಿಗಳಾಗಿರಬೇಕಾಗುತ್ತದೆ, ಒಂದು ಮಾತಿಗೆ ಹತ್ತಾರು ಅರ್ಥಗಳನ್ನು ವಿವರಿಸುವ ಶಕ್ತಿ ಹೊಂದಿರಬೇಕಾಗುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.