ಗುರುವಾರ , ಡಿಸೆಂಬರ್ 3, 2020
19 °C

ವೈರಿಗಳೂ ಮೆಚ್ಚುವಂತೆ ನೌಕಾಪಡೆಯ ಹಿನ್ನಡೆಗಳು

ನಾಗೇಶ್ ಹೆಗಡೆ Updated:

ಅಕ್ಷರ ಗಾತ್ರ : | |

ವೈರಿಗಳೂ ಮೆಚ್ಚುವಂತೆ ನೌಕಾಪಡೆಯ ಹಿನ್ನಡೆಗಳು

ತನ್ನ ಎಡವಟ್ಟು ಕೆಲಸದಿಂದ ತನಗೇ ನಷ್ಟ ಮಾಡಿಕೊಳ್ಳುವುದಕ್ಕೆ ಇಂಗ್ಲಿಷ್‌ನಲ್ಲಿ ಅನೇಕ ನುಡಿಕಟ್ಟುಗಳಿವೆ. ಕ್ರಿಕೆಟ್‌ನಲ್ಲಿ ಬ್ಯಾಟ್ ಹಿಡಿದ ದಾಂಡುಗಾರನೊಬ್ಬ ಸ್ಟಂಪ್ ಮೇಲೆ ಬಿದ್ದು ‘ಹಿಟ್ ವಿಕೆಟ್’ ಮಾಡಿಕೊಳ್ಳುವುದು, ಹಾಕಿ/ ಫುಟ್‌ಬಾಲ್ ಕ್ರೀಡೆಯಲ್ಲಿ ಗೋಲ್‌ಕೀಪರ್ ಸ್ವತಃ ‘ಓನ್ ಗೋಲ್’ ಮಾಡಿಕೊಂಡು ತನ್ನದೇ ಟೀಮಿಗೆ ಹಾನಿ ಉಂಟು ಮಾಡುವುದು; ಬಂದೂಕು ಹಿಡಿದಿರುವ ವ್ಯಕ್ತಿ ಪರಾಮಶಿಯಿಂದ ತನ್ನ ಕಾಲಿಗೆ ತಾನೇ ಗುಂಡು ಹೊಡೆದುಕೊಳ್ಳುವುದು- ಹೀಗೆ ಎಷ್ಟೊಂದಿವೆ. ನಮ್ಮ ಹೆಮ್ಮೆಯ ರಕ್ಷಣಾ ಇಲಾಖೆ, ಅದರಲ್ಲೂ ವಿಶೇಷವಾಗಿ ನೌಕಾದಳವಂತೂ ಇಂಥ ಭಾನಗಡಿಗಳಲ್ಲಿ ಸಾಕಷ್ಟು ಕುಖ್ಯಾತಿ ಪಡೆದಿದೆ. ಇದರ ಈಚಿನ ಕತೆ ಏನೆಂದರೆ ‘ಐಎನ್‌ಎಸ್ ಬೆಟ್ವಾ’ ದುರಂತ.ಮುಂಬೈ ಬಂದರಿನಲ್ಲಿ ಶಸ್ತ್ರಾಸ್ತ್ರಗಳ ಕ್ಷಿಪಣಿಗಳನ್ನು ಹೊತ್ತು ನಿಂತಿದ್ದ ‘ಬೆಟ್ವಾ’ ಯುದ್ಧನೌಕೆ ಡಿಸೆಂಬರ್ 5ರ ಮಟಮಟ ಮಧ್ಯಾಹ್ನ ಪಲ್ಟಿ ಹೊಡೆಯಿತು. ಇಬ್ಬರು ಯೋಧರು ಮೃತಪಟ್ಟು ಇನ್ನೂ 15 ಮಂದಿ ಗಾಯಗೊಂಡರು. ಧ್ವಜಸ್ತಂಭ ಸಮೇತ ಹಡಗಿನ ಮಹತ್ವದ ಅಂಗಾಂಗಗಳೆಲ್ಲ ಧ್ವಂಸವಾಗಿ, ಅದನ್ನು ಎತ್ತಿ ನಿಲ್ಲಿಸುವ ಮಹಾಯತ್ನ ಇದೀಗ ಆರಂಭವಾಗಿದೆ. ಪೂರ್ತಿ ಎತ್ತಿ ನಿಲ್ಲಿಸಲು ಎರಡು ವರ್ಷಗಳೇ ಬೇಕು. ಆಗಲೂ ಸುಸ್ಥಿತಿಗೆ ಬಂದೀತೊ ಗುಜರಿಗೆ ಹಾಕಬೇಕಾಗಿ ಬರುತ್ತದೊ ಗೊತ್ತಿಲ್ಲ.ಏನೋ ಸಮುದ್ರದಲ್ಲಿ ವಾರ್ದಾ ಮಾದರಿಯ ಸುಂಟರಗಾಳಿ ಎದ್ದು ಭಾರಿ ಅಲೆ ಬಂದಿದ್ದರಿಂದ ಅಥವಾ ವೈರಿಯ ಅನಿರೀಕ್ಷಿತ ಸರ್ಜಿಕಲ್ ದಾಳಿಯಿಂದ ಹೀಗಾಯಿತು ಎನ್ನುವಂತೆಯೂ ಇಲ್ಲ. ದಾಳಿಯೂ ಇರಲಿಲ್ಲ, ಬಿರುಗಾಳಿಯೂ ಬೀಸಿರಲಿಲ್ಲ, ವಿಸ್ಫೋಟಕ ಕೃತ್ಯವೂ ಆಗಿರಲಿಲ್ಲ. ಆದರೆ ಹೀಗೂ ಆದೀತೆಂದು ನಂಬಲೂ ಸಾಧ್ಯವಿಲ್ಲದ ಮಟ್ಟಿಗೆ, ಹೇಳಿಕೊಳ್ಳಲು ಮುಜುಗರವಾಗುವಂಥ ಎಡವಟ್ಟು ಕೆಲಸ ನಡೆದು ಹೋಯಿತು.ಏನಾಗಿತ್ತೆಂದರೆ ದೂರ ಸಮುದ್ರದಲ್ಲಿ ತೇಲುತ್ತಿದ್ದ ಈ ಹಡಗನ್ನು ಚೊಕ್ಕಟಗೊಳಿಸಲೆಂದು ಮುಂಬೈಯ ಒಣ ಬಂದರಿಗೆ ತರಲಾಗಿತ್ತು. ಸಮುದ್ರಕ್ಕೆ ಹೊಂದಿರುವ ವಿಶಾಲ ತೊಟ್ಟಿಯೊಳಗೆ ಹಡಗನ್ನು ತಂದು, ಅದರ ಡೆಕ್ಕಿನ ಮೇಲೆ ಭಾರೀ ತೂಕದ ಬಟ್ಟುಗಳನ್ನು ಪೇರಿಸುತ್ತ ಹೋಗುತ್ತಾರೆ. ಆ ಒತ್ತಡಕ್ಕೆ ತೊಟ್ಟಿಯ ಬಹುತೇಕ ನೀರೆಲ್ಲ ಸಮುದ್ರಕ್ಕೆ ಸರಿದು ಹೋಗಿ ಹಡಗು ತಳಕ್ಕಿಳಿಯುತ್ತದೆ. ತೊಟ್ಟಿಯಲ್ಲಿ ಮಿಕ್ಕುಳಿದ ನೀರನ್ನು ಪಂಪ್‌ನಿಂದ ಹೊರಕ್ಕೆ ಚೆಲ್ಲಿ ಹಡಗನ್ನು ನಗ್ನ ನಿಲ್ಲಿಸುತ್ತಾರೆ. ವ್ಯಾಪಾರಿ ಹಡಗುಗಳ ಹಾಗೆ ಯುದ್ಧದ ಹಡಗಿನ ತಳಭಾಗ ಚಪ್ಪಟೆ ಇರುವುದಿಲ್ಲ.ಬದಲಿಗೆ V ಆಕಾರದಲ್ಲಿರುತ್ತದೆ. ಹಾಗಾಗಿ ನೀರು ಖಾಲಿ ಮಾಡುವ ಮೊದಲು ಅದರ ಎಡಬಲಕ್ಕೆ ಆಧಾರ ಕಂಬಗಳನ್ನು ನಿಲ್ಲಿಸಲೇಬೇಕು. ಅದಾದಮೇಲೆ ಹಡಗಿನ ತಳಭಾಗಕ್ಕೆ ಅಂಟಿಕೊಂಡ ಪಾಚಿಯನ್ನು, ಮೃದ್ವಂಗಿಗಳನ್ನು, ತುಕ್ಕುಕಲೆಗಳನ್ನು ಕೆರೆಸಿ ತೆಗೆದು ಮತ್ತೆ ಬಣ್ಣ ಬಳಿಯುತ್ತಾರೆ. ನಂತರ ಒಣ ತೊಟ್ಟಿಗೆ ಹಡಗಿನ ಸುತ್ತ ನೀರನ್ನು ತುಂಬಿಸಿ, ಹಡಗಿನ ಮೇಲಿದ್ದ ತೂಕದ ಗಟ್ಟಿಬಟ್ಟುಗಳನ್ನು ಒಂದೊಂದಾಗಿ ತೆಗೆದು ಮೆಲ್ಲಗೆ ಹಡಗು ತಾನಾಗಿ ತೇಲುವಂತೆ ಮಾಡಬೇಕು. ಆ ಹಂತದಲ್ಲಿ ಅದು ಹೇಗೆ ಪಲ್ಟಿ ಹೊಡೆಯಿತು?ಹಡಗು ಮತ್ತೆ ತೇಲುವ ಮೊದಲೇ ಆಧಾರ ಸ್ತಂಭಗಳನ್ನು ಕಳಚಿಬಿಟ್ಟರೆ? ಅಥವಾ ಕೆಲವು ಸ್ತಂಭಗಳು ತಾವಾಗಿ ಕುಸಿದವೆ? ಅಥವಾ ಆಧಾರ ಸ್ತಂಭಗಳೆಲ್ಲ ಸುಸ್ಥಿತಿಯಲ್ಲೇ ಇದ್ದು, ಅವುಗಳ ಮೇಲಿಟ್ಟ ತೂಕದ ಬಟ್ಟುಗಳನ್ನು ತೆಗೆಯುವಾಗ ಸಮತೋಲ ತಪ್ಪಿತೆ? ಹಾಗೇನಾದರೂ ಆಗಿದ್ದರೆ ಅದು ಇನ್ನೂ ನಾಚಿಕೆಗೇಡು. ಹಳ್ಳಿಯ ಹೈದನೂ ಚಕ್ಕಡಿ ಗಾಡಿಗೆ ತೂಕ ಹೇರುವಾಗ ಅಥವಾ ಇಳಿಸುವಾಗ ಹಿಮ್ಮೊಗ ಮುಮ್ಮೊಗ, ಎಡಬಲಕ್ಕೆ ಗಾಡಿ ವಾಲದಂತೆ ನೋಡಿಕೊಳ್ಳುತ್ತಾನೆ. ಹಡಗನ್ನು ನೋಡಿಕೊಳ್ಳುತ್ತಿದ್ದ ಸಿಬ್ಬಂದಿಗೆ ಅಷ್ಟನ್ನೂ ಮಾಡಲು ಸಾಧ್ಯವಿರಲಿಲ್ಲವೆ? ಅವರೆಲ್ಲ ಸ್ವಂತದ ಸಮತೋಲ ಕಾಯ್ದುಕೊಳ್ಳದಷ್ಟು ಮೈಮರೆತಿದ್ದರೆ ಅಥವಾ  ವಿಪರೀತ ದಣಿದಿದ್ದರೆ?ಎರಡು ವರ್ಷಗಳ ಹಿಂದೆಯೂ ಇದೇ ಹಡಗು ಬೇರೊಂದು ಎಡವಟ್ಟು ಮಾಡಿಕೊಂಡಿತ್ತು. ಅದರ ಕತೆ ಹೀಗಿದೆ: ನೌಕಾಪಡೆಗಳ ಹಡಗಿನ ಚೂಪುತಳದಲ್ಲಿ ಪುಟ್ಟ ಗುಮ್ಮಟದಂಥ ಸಾಧನವೊಂದು ಇರುತ್ತದೆ. ಬಾವಲಿಯ ಹಾಗೆ ಇದರಿಂದ ಶ್ರವಣಾತೀತ ಧ್ವನಿತರಂಗಗಳು ಹೊಮ್ಮುತ್ತಿರುತ್ತವೆ.  ಸುತ್ತ ಏನಾದರೂ ಅಡೆತಡೆ ಇದ್ದರೆ ಚಾಲಕನ ಎದುರಿನ ಪರದೆಯ ಮೇಲೆ ಸ್ಕ್ಯಾನ್ ಚಿತ್ರಗಳ ಮೂಲಕ ಅದು ಮುನ್ಸೂಚನೆ ನೀಡುತ್ತಿರುತ್ತದೆ. ಆ ಸಾಧನವೇ ಯಾವುದೋ ಬಂಡೆಗೆ ಜಪ್ಪಿ ನುಚ್ಚುನೂರಾಯಿತು!ಅದು ಸರಿಯಾಗಿ ಕೆಲಸ ಮಾಡುತ್ತಿತ್ತೊ ಇಲ್ಲವೊ ಅಥವಾ ಚಾಲಕ ತನ್ನೆದುರಿನ ಪರದೆಯ ಮೇಲೆ ಅದರ ಸಿಗ್ನಲ್‌ಗಳನ್ನು ಅಲಕ್ಷ್ಯ ಮಾಡಿದನೊ ಅಂತೂ ಬಾವಲಿಯೇ ಗೋಡೆಗೆ ಡಿಕ್ಕಿ ಹೊಡೆದಂತೆ ಢಮಾರಾಯಿತು. ಅದನ್ನು ರಿಪೇರಿ ಮಾಡಿ ಎರಡು ವರ್ಷಗಳ ನಿರಂತರ ಓವರ್‌ಹಾಲಿಂಗ್ ಮಾಡಿಸಿ, ಆಮೇಲೆ ಅದರ ತಳಭಾಗವನ್ನು ಚೊಕ್ಕಟಗೊಳಿಸುವ 40 ದಿನಗಳ ಕೆಲಸ ಮುಗಿಯುತ್ತಲೇ ಈ ದುರಂತ ಸಂಭವಿಸಿತು.ಯೋಗಾಯೋಗ ನೋಡಿ:  ಡಿಸೆಂಬರ್ 4ರಂದು ‘ನೇವಿ ಡೇ’ (ನೌಕಾದಳ ದಿನ) ಎಂದು ಆಚರಿಸುತ್ತಾರೆ. ಅದರ ಮರುದಿನ ಬೆಟ್ವಾ ಭಾನಗಡಿ ತಾನೆ? ಮೂರು ವರ್ಷಗಳ ಹಿಂದೆ 2013ರಲ್ಲಿ ನೇವಿ ದಿನದಂದೇ ವಿಶಾಖಪಟ್ಟಣದ ಬಂದರಿನಲ್ಲಿ ‘ಐಎನ್ನೆಸ್ ಕೊಂಕಣ್’ ಹಡಗಿಗೆ ಬೆಂಕಿ ಹೊತ್ತಿಕೊಂಡಿತು. ಸಮುದ್ರತಳದಲ್ಲಿ ಅಡಗಿಸಿರುವ ಸ್ಫೋಟಕಗಳ ಪತ್ತೆ ಮಾಡಬಲ್ಲ ಈ ಮಾದರಿಯ ಆರು ‘ತಳಶೋಧಕ’ ಹಡಗುಗಳನ್ನು ಸೋವಿಯತ್ ರಷ್ಯ ನಮಗೆ ಮಾರಿದೆ. ನದಿಮುಖದ ಸಮುದ್ರ ತಳದಲ್ಲಿ ವೈರಿಗಳು ಹೂತಿಟ್ಟು ಹೋಗಿರಬಹುದಾದ ಸ್ಫೋಟಕಗಳನ್ನು ಹುಡುಕಿ ನಿಷ್ಕ್ರಿಯಗೊಳಿಸುವುದು ಇವುಗಳ ಕೆಲಸ. ತನ್ನೊಳಗಿನ ದೌರ್ಬಲ್ಯಗಳನ್ನು ಗುರುತಿಸಿ ಅಪಾಯದ ಮುನ್ನೆಚ್ಚರಿಕೆ ಕೊಡಬಲ್ಲ ತಂತ್ರಜ್ಞಾನ ಈ ಬಗೆಯ ನೌಕೆಗಳಲ್ಲಿ ಇರುವುದಿಲ್ಲ.ತೇಲುತ್ತಿರುವ ಹಡಗುಗಳೇನೊ ಹೊಗೆಬೆಂಕಿ ಉಗುಳುತ್ತ ಸುತ್ತೆಲ್ಲ ಸಿಗ್ನಲ್ ಕೊಡುತ್ತವೆ. ಜಲಾಂತರ್ಗಾಮಿಗಳ ಕತೆ ಏನು? 2013ರ ಆಗಸ್ಟ್ ತಿಂಗಳಲ್ಲಿ ಮುಂಬೈ ಬಂದರಿನಲ್ಲಿ ನೌಕಾದಳದ ‘ಐಎನ್ನೆಸ್ ಸಿಂಧೂರಕ್ಷಕ್’ ಹೆಸರಿನ ಸಬ್‌ಮರೀನ್ ನೀರೊಳಗೆ ಮುಳುಗಿ ನಿಂತಿದ್ದ ಸ್ಥಿತಿಯಲ್ಲೇ ಸ್ಫೋಟಗೊಂಡು ಎಲ್ಲ 18 ಯೋಧರನ್ನು ಬಲಿ ತೆಗೆದುಕೊಂಡಿತ್ತು. ನೀರೊಳಗೇ ಕ್ಷಿಪಣಿಯಂತೆ ಸಾಗಿ ದೂರದ ಬಂದರುಗಳನ್ನು ಉಡಾಯಿಸಬಲ್ಲ ಟಾರ್ಪಿಡೊಗಳು ಅದರಲ್ಲಿದ್ದವು.ಜೊತೆಗೆ ಇನ್ನಿತರ ಭಾರೀ ಶಸ್ತ್ರಾಸ್ತ್ರಗಳನ್ನು ತುಂಬಿಕೊಂಡಿದ್ದ 2300 ಟನ್ ತೂಕದ ಇದು ಏಕಕಾಲಕ್ಕೆ ಹತ್ತಾರು ಬಾರಿ ಸ್ಫೋಟಗೊಂಡು ಸುತ್ತೆಲ್ಲ ಸುನಾಮಿ ಎಬ್ಬಿಸಬಹುದಿತ್ತು. ಅಕ್ಕಪಕ್ಕದಲ್ಲಿ ಅವಿತಿದ್ದ ಇತರ ಜಲಾಂತರ್ಗಾಮಿಗಳಿಗೆ ಧಕ್ಕೆ ತರಬಹುದಿತ್ತು. ಸದ್ಯ ಅಂಥದ್ದೇನೂ ಆಗಲಿಲ್ಲ. ಭಗ್ನಗೊಂಡ ಹಡಗನ್ನು ಮೇಲೆತ್ತಿ ಗುಜರಿಗೆ ಹಾಕಲೆಂದೇ 240 ಕೋಟಿ ರೂಪಾಯಿಗಳ ಗುತ್ತಿಗೆ ಪಡೆದ ವಿದೇಶೀ ಕಂಪನಿ ಹತ್ತು ತಿಂಗಳ ಕಾಲ ಕೊಸರಾಡಿ ರಾಡಿ ಎಬ್ಬಿಸಿತು.ಸ್ಫೋಟಕ್ಕೆ ಕಾರಣ ಏನೆಂಬುದಕ್ಕೆ ತನಿಖೆ ನಡೆದು ಕಡತದಲ್ಲಿ ಸೇರಿತು. ಪರಮಾಣು ಇಂಧನವಿಲ್ಲದ ಅತ್ಯಂತ ಶಕ್ತಿಶಾಲಿ ಹಡಗುಗಳ ವರ್ಗಕ್ಕೆ ಸೇರಿದ ಇದೇ ‘ಸಿಂಧೂರಕ್ಷಕ್’ದಲ್ಲಿ ಹಿಂದೆ 2010ರಲ್ಲಿ ಮತ್ತೊಂದು ಅವಘಡ ಸಂಭವಿಸಿತ್ತು. ಬ್ಯಾಟರಿ ಕಕ್ಷೆಯಲ್ಲಿ ಜಲಜನಕ ಅನಿಲ ಸೋರಿದ್ದರಿಂದ ಒಬ್ಬ ಯೋಧ ಸತ್ತು ಇನ್ನಿಬ್ಬರು ಗಾಯಗೊಂಡಿದ್ದರು. ಭಾರೀ ಸ್ಫೋಟಕ ಶಕ್ತಿಯುಳ್ಳ ಜಲಜನಕ ಇಂಧನ ಪೂರ್ತಿಯಾಗಿ ಅಂದು ಢಮಾರ್ ಎಂದಿದ್ದಿದ್ದರೆ ಈ ಎರಡನೆಯ ಸ್ಫೋಟ ಸಂಭವಿಸುತ್ತಿರಲಿಲ್ಲ.ಸಿಂಧೂರಕ್ಷಕ್ ಹಡಗಿನ 2013ರ ಮಹಾಸ್ಫೋಟ ಒಂದು ರೀತಿಯಲ್ಲಿ ಸರಣಿ ಸ್ಫೋಟದ ಆರಂಭ ಎಂತಲೇ ಹೇಳಬಹುದು. ಅಂದರೆ ಅದರ ನಂತರದ ಏಳು ತಿಂಗಳುಗಳಲ್ಲಿ ವಿವಿಧ ಕಡೆಗಳಲ್ಲಿ ಐಎನ್ನೆಸ್ ಹಡಗುಗಳ ಚಿಕ್ಕದೊಡ್ಡ ಒಟ್ಟು ಹನ್ನೊಂದು ಅವಘಡಗಳು ಸಂಭವಿಸಿದವು (ಐಎನ್ನೆಸ್ ಅಂದರೆ ಇಂಡಿಯನ್ ನೇವಿ ಶಿಪ್‌.   ನಮ್ಮ ಮಿಲಿಟರಿಗೆ ಸೇರಿದ್ದು). ಯುದ್ಧವಿಮಾನಗಳನ್ನು ಹೊತ್ತೊಯ್ಯುವ ಐಎನ್ನೆಸ್ ವಿರಾಟ್, ಐಎನ್ನೆಸ್ ಕೊಂಕಣ್, ಐಎನ್ನೆಸ್ ತಲ್ವಾರ್, ಐಎನ್ನೆಸ್‌ ರಕ್ಷಕ್, ಐಎನ್ನೆಸ್ ತರ್ಕಶ್, ಐಎನ್ನೆಸ್ ಬೆಟ್ವಾ, ಐಎನ್ನೆಸ್ ವಿಪುಲ್, ಐಎನ್ನೆಸ್ ಸಿಂಧುಘೋಷ್, ಐಎನ್ನೆಸ್‌ ಐರಾವತ್, ಐಎನ್ನೆಸ್‌ ಸಿಂಧುರತ್ನ, ಐಎನ್ನೆಸ್‌ ಕೋಲ್ಕತ್ತ ಇವೆಲ್ಲವೂ ಯಾವುದೋ ಮಿಲಿಟರಿ ದಾಳಿಗೆ ಸಿಲುಕಿದ ಹಾಗೆ ನಲುಗಿದವು. ಕ್ರಿಕೆಟ್‌ನ ಹನ್ನೊಂದು ಆಟಗಾರರು ಹಿಟ್‌ವಿಕೆಟ್ ಮಾಡಿಕೊಂಡು ಪೆವಿಲಿಯನ್‌ಗೆ ಮರಳಿದರೆ ಹೇಗಿರುತ್ತದೆ? ನೌಕಾದಳದ ಮುಖ್ಯಸ್ಥ ಅಡ್ಮಿರಲ್ ಡಿ.ಕೆ. ಜೋಶಿ ಈ ದುರಂತಗಳ ನೈತಿಕ ಹೊಣೆ ತನ್ನದೆಂದು ಹೇಳಿ ತಮ್ಮ ಪದವಿಗೆ ರಾಜೀನಾಮೆ ಕೊಟ್ಟರು. ಸರಣಿ ಮುಗಿಯಿತೆ? ಇಲ್ಲ.ಆ ಸರಣಿಯಲ್ಲಿ 12ನೆಯ ಅವಘಡ ಬಹು ಮಹತ್ವದ್ದಾಗಿದ್ದರೂ ಅದನ್ನು ಇಲ್ಲಿ ಸೇರ್ಪಡೆ ಮಾಡುವಂತಿಲ್ಲ. ಏಕೆಂದರೆ ಭಾರತೀಯರೇ ನಿರ್ಮಿಸುತ್ತಿರುವ ಪರಮಾಣು ಇಂಧನ ಚಾಲಿತ ಆ ಜಲಾಂತರ್ಗಾಮಿ ನೀರಿಗೆ ಇನ್ನೂ ಇಳಿದಿರಲಿಲ್ಲ. ವಿಶಾಖಪಟ್ಟಣದ ನೀರಂಚಿನ ಫ್ಯಾಕ್ಟರಿಯಲ್ಲಿ ಅದರ ಒಂದು ಸಿಲಿಂಡರಿಗೆ ಒತ್ತಡದಲ್ಲಿ ಅನಿಲವನ್ನು ತುಂಬುತ್ತಿದ್ದಾಗ ಮುಚ್ಚಳ ಸಿಡಿದು 24ರ ಯುವಕ ಅಮರ್ ಸ್ಥಳದಲ್ಲೇ ಸಾವಪ್ಪಿದ. ಇನ್ನಿಬ್ಬರಿಗೆ ಗಂಭೀರ ಗಾಯಗಳಾದವು. ಹಾಗೆ ನೋಡಿದರೆ, ಲೆಕ್ಕದ ಪ್ರಕಾರ ಅದು 13ನೆಯ ದುರ್ಘಟನೆ ಎನ್ನಬೇಕು.ಏಕೆಂದರೆ ಅದಕ್ಕೆ ಒಂದು ದಿನ ಮುಂಚೆ ಮುಂಬೈಯ ಮಝಗಾಂವ್ ಬಂದರಿನಲ್ಲಿ ಹೀಗೆ ನಿರ್ಮಾಣ ಹಂತದಲ್ಲಿದ್ದ ಯುದ್ಧನೌಕೆಯ ವಿಷಾನಿಲ ಸಿಲಿಂಡರ್ ಸೋರಿ, ನೌಕೆಯ ಕಮಾಂಡರ್ ಸಾವಪ್ಪಿದ್ದು ವರದಿಯಾಗಿತ್ತು. ಅವೆಲ್ಲ ಬಿಡಿ; ಹಿಂದಿನ, ಅದಕ್ಕೂ ಹಿಂದಿನ ಕತೆಗಳನ್ನು ಕೆದಕಲು ಹೋದರೆ ಅದಕ್ಕೆ ಕೊನೆ ಮೊದಲಿಲ್ಲ. ಇಷ್ಟಕ್ಕೂ ವರದಿಯಾದ ದುರಂತಗಳಿಗೆ ಹೋಲಿಸಿದರೆ ನೀರಿಗಿಳಿಯುವ ಮೊದಲೇ ಸುರಕ್ಷಿತವಾಗಿ ಗುಜರಿಗೆ ಸೇರಿದ ಹಡಗುಗಳ ಕತೆಗಳೇ ರೋಚಕವಾಗಿವೆ. ವೈರಿಗಳೂ ಮೆಚ್ಚುವಂಥ ಘಟನೆಗಳು ಅವು! ಜಗತ್ತಿನ ಐದನೇ ಅತಿ ದೊಡ್ಡ ನೌಕಾಬಲ ಎಂಬ ಖ್ಯಾತಿ ಪಡೆದು 160 ಹಡಗುಗಳನ್ನು ನಮ್ಮ ಜಲಸೇನೆ ಮುನ್ನಡೆಸುತ್ತಿದೆ ಎಂದ ಮೇಲೆ ಅಲ್ಲೊಂದು ಇಲ್ಲೊಂದು ಅಪಘಾತ, ವೈಫಲ್ಯ ಇದ್ದದ್ದೇ; ಅದರಲ್ಲೂ ಬಹುತೇಕ ಹಡಗುಗಳು ಮುದಿಯಾಗಿವೆ ಎಂಬ ಕಾರಣವನ್ನು ಮಿಲಿಟರಿ ವಕ್ತಾರರು ಆಗಾಗ ಕೊಡುತ್ತಿರುತ್ತಾರೆ. ಅದೇ ಕಾರಣ ಮುಂದೊಡ್ಡಿ ಹೊಸ ಹೊಸ ಹಡಗುಗಳ ನಿರ್ಮಾಣ ಮತ್ತು ಖರೀದಿ ನಡೆಯುತ್ತಲೇ ಇದೆ.ಅವುಗಳಲ್ಲೂ ಇಂಥ ಅಸಾಮಾನ್ಯ ಘಟನೆಗಳು ನಡೆಯುತ್ತಲೇ ಇವೆ. ಅವಕ್ಕೆಲ್ಲ ಕಾರಣಗಳನ್ನು ಪ್ರತ್ಯೇಕವಾಗಿ ವಿವರಿಸಬೇಕಿಲ್ಲ. ಪ್ರಮುಖ ಆಕ್ಷೇಪಣೆ ಏನೆಂದರೆ ತರಬೇತಿ ಪಡೆದ ಸಿಬ್ಬಂದಿಯ ಬದಲು ರಿಪೇರಿಯ ಕೆಲಸಕ್ಕೆ ಸೈನ್ಯದ ಹೊರಗಿನ ಜನರನ್ನು ಬಹುದೊಡ್ಡ ಪ್ರಮಾಣದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಕಳೆದವಾರದ ಐಎನ್ನೆಸ್ ಬೆಟ್ವಾ ದುರಂತಕ್ಕೂ ಹೊರಗಿನ ಜನರೇ ಕಾರಣ ಎನ್ನಲಾಗುತ್ತಿದೆ.ಇನ್ನೇನು ಭಾರತೀಯ ನೌಕಾಪಡೆಗೆ ಹೊಸ ಯೌವನ ಬರತೊಡಗಿದೆ. ಇದೀಗ ₹ 30  ಸಾವಿರ ಕೋಟಿ ವೆಚ್ಚದಲ್ಲಿ ಬೆಟ್ವಾ ಮಾದರಿಯ ಸುಧಾರಿತ 12 ತಳಶೋಧಕ ಹಡಗುಗಳನ್ನು ‘ಮೇಕಿನ್ ಇಂಡಿಯಾ’ ಯೋಜನೆಯಲ್ಲಿ ಗೋವಾದಲ್ಲೇ ನಿರ್ಮಿಸಲು ದಕ್ಷಿಣ ಕೊರಿಯಾದ ಕಂಗ್ನಮ್ ಕಂಪನಿ ಜೊತೆ ಒಪ್ಪಂದವಾಗಿದೆ. ಹೊಸ ಪರಮಾಣು ಚಾಲಿತ ಜಲಾಂತರ್ಗಾಮಿ ಹಡಗುಗಳನ್ನು ರಷ್ಯದಿಂದ ಖರೀದಿಸಿ, ಅದರಲ್ಲಿ ಪರಮಾಣು ಕ್ಷಿಪಣಿಗಳನ್ನು ಹೂಡುವ ಕೆಲಸ ಭರದಿಂದ ನಡೆಯುತ್ತಿದೆ. ಚಿಕ್ಕಪುಟ್ಟ ಅವಘಡಗಳಿಗೆ ಅವಕಾಶವೇ ಇಲ್ಲದಂಥ ಹೊಸ ಯುಗಕ್ಕೆ ಕಾಲಿರಿಸುತ್ತಿದ್ದೇವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.