ಸೋಮವಾರ, ಜೂನ್ 21, 2021
21 °C

ಶುಭ್ರ ಸಭ್ಯ ವ್ಯಕ್ತಿತ್ವದ ಮಾದರಿ ರಾಹುಲ್ ದ್ರಾವಿಡ್

ರಾಮಚಂದ್ರ ಗುಹಾ Updated:

ಅಕ್ಷರ ಗಾತ್ರ : | |

ವರ್ಷಗಳ ಹಿಂದೆ, ಉಸಿರಾಟ ತೊಂದರೆಗೆ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದೆ. ಅದೊಂದು ಬೆಳಿಗ್ಗೆ ದಿನಪತ್ರಿಕೆಯಲ್ಲಿ ಗಮನ ಸೆಳೆದಿದ್ದು ಮುಖಪುಟದ ಛಾಯಾಚಿತ್ರ. ನೀಳಕಾಯದ ಚೆಂದದ ಯುವಕನೊಂದಿಗೆ ವಾಮನರೂಪಿ.

ಅವರಿಬ್ಬರು ಮಾತನಾಡುತಿದ್ದ ನಿಂತಿದ್ದ ಕ್ಷಣ ಅದು. ಜೊತೆಗಿದ್ದ ನೀಳಕಾಯದ ಯುವಕ ಎದುರಿದ್ದ ಹಿರಿಯನತ್ತ ಗೌರವಪೂರ್ಣ ನೋಟ ಬೀರಿದ್ದ. ವಿಧೇಯತೆ ಆತ್ಮೀಯತೆ ತುಂಬಿದ್ದ ನೋಟವದು. ಆ ಯುವಕ ವಿಧೇಯತೆಯಿಂದ ಬಾಗಿ ಹಿರಿಯನ ಪಾದದ ಕಡೆಗೆ ಕಣ್ಣು ನೆಟ್ಟಿದ್ದ.

ಆ ಚಿತ್ರದಲ್ಲಿ ಇದ್ದದ್ದು ರಾಹುಲ್ ದ್ರಾವಿಡ್ ಹಾಗೂ ಜಿ.ಆರ್.ವಿಶ್ವನಾಥ್. `ವಿಶಿ~ ನಾನು ಬಾಲ್ಯದಿಂದಲೇ ಆರಾಧಿಸಿದ ಹೀರೋ. ಸಭ್ಯ ವ್ಯಕ್ತಿತ್ವ ಹಾಗೂ ಸದ್ಗುಣವುಳ್ಳ ಮನುಷ್ಯ. ನನ್ನದೇ ರಾಜ್ಯವಾದ ಕರ್ನಾಟಕದ ಆಟಗಾರ. ನಾನು ಮೆಚ್ಚಿಕೊಂಡು ಹಸ್ತ ಲಾಘವ ಮಾಡಿದ ಮೊಟ್ಟಮೊದಲ ಕ್ರಿಕೆಟಿಗ. ಅದೇ ರೀತಿಯ ಗೌರವ `ವಿಶಿ~ ಅವರಿಗಿಂತ ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡು ಪಟ್ಟು ಹೆಚ್ಚು ರನ್ ಗಳಿಸಿದ ಯುವಕನ ಮೇಲೆ.ಈ ಇಬ್ಬರೂ ಕ್ರಿಕೆಟಿಗರು ಒಟ್ಟಿಗೆ ಕಾಣಿಸಿಕೊಂಡಿದ್ದು ಅಂಡರ್‌ಪಾಸ್‌ವೊಂದರ ನಾಮಕರಣ ಸಂದರ್ಭದಲ್ಲಿ. ಆ ಅಂಡರ್‌ಪಾಸ್‌ಗೆ ನೀಡಿದ್ದು `ವಿಶಿ~ಯ ಹೆಸರನ್ನು. ಈ ನಾಮಕರಣದ ಕ್ಷಣವನ್ನು ವಿಶಿಷ್ಟವಾಗಿಸಿದ್ದು ರಾಹುಲ್. ಆ ಸಂದರ್ಭವೇ ಪತ್ರಿಕೆಯಲ್ಲಿ ಚಿತ್ರವಾಗಿ ಮೂಡಿತ್ತು.

ಅದನ್ನು ನೋಡಿದ ಮರುದಿನ ನಾನು ದ್ರಾವಿಡ್‌ಗೊಂದು ಇ ಮೇಲ್ ಸಂದೇಶ ಬರೆದೆ. ಅವನೊಂದಿಗೆ ತೀರ ನಿಕಟ ಸಂಪರ್ಕ ಇಲ್ಲದಿದ್ದರೂ ಸ್ವಲ್ಪ ಸಲಿಗೆಯಂತೂ ಇದೆ. ಅದೇ ವಿಶ್ವಾಸದೊಂದಿಗೆ ಬರೆದ ಸಾಲುಗಳಿಗೆ ರಾಹುಲ್‌ನಿಂದ ಬಂದ ಉತ್ತರ ನನ್ನ ಯೋಚನೆಗೆ ಸಮರ್ಪಕ ಸ್ಪಂದನೆ ಎನಿಸಿತ್ತು: `ಬಾಲ್ಯದಲ್ಲಿನ ಆ ದಿನಗಳು ಇನ್ನೂ ನೆನಪಿನಲ್ಲಿ ಹಸಿರಾಗಿವೆ. ಆಗ ಹೈದರಾಬಾದ್ ವಿರುದ್ಧ `ವಿಶಿ~ ಅವರು ರಣಜಿ ಪಂದ್ಯವನ್ನು (ಕ್ರಿಕೆಟ್ ಜೀವನದ ಕೊನೆಯಲ್ಲಿ) ಆಡುವುದನ್ನು ನೋಡಲು ದೌಡಾಯಿಸಿಕೊಂಡು ಹೋಗಿದ್ದೆ. ಆಗ ಕ್ರೀಡಾಂಗಣದಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚು ಪ್ರೇಕ್ಷಕರಿದ್ದರು. ಅಂಥ ಪರಿಸ್ಥಿತಿ ಇಂದಿಲ್ಲವಾಗಿದ್ದು ಬೇಸರ~ ಎಂದು ಬರೆದಿದ್ದ.ರಾಹುಲ್ ಜೊತೆಗಿನ ಆ ಸಂದೇಶ ವಿನಿಮಯ ಹಾಗೂ ವರ್ಷದ ಹಿಂದೆ ನೋಡಿದ್ದ ಚಿತ್ರ ನೆನಪಾಗಿದ್ದು ತೀರ ಇತ್ತೀಚೆಗೆ. ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಪ್ರಕಟಿಸಿದ ರಾಹುಲ್ ದ್ರಾವಿಡ್‌ಗೆ ಗ್ರೇಗ್ ಚಾಪೆಲ್ ತಮ್ಮ ಬರಹದ ಮೂಲಕ ಗೌರವ ಅರ್ಪಿಸಿದ್ದ ಅಂಕಣ ಓದಿದಾಗ.

2006ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದ್ದ ನೆನಪುಗಳು ಅಲ್ಲಿ ತೆರೆದುಕೊಂಡಿದ್ದವು. ಆಸ್ಟ್ರೇಲಿಯಾದವನೊಬ್ಬ ಆಗ ಭಾರತ ತಂಡದ ಮಾರ್ಗದರ್ಶಿ. ಇಪ್ಪತ್ತು ವರ್ಷಗಳ ನಂತರ ಉಪಖಂಡದ ಆಚೆಗೆ ಸರಣಿ ಗೆದ್ದ ಸಂಭ್ರಮವೂ ಸಿಕ್ಕಿತ್ತು. ದ್ರಾವಿಡ್ ಹಾಗೂ ಅನಿಲ್ ಕುಂಬ್ಳೆ ತಂಡದ ಯಶಸ್ಸಿಗೆ ಆ ಸರಣಿಯಲ್ಲಿ ನೀಡಿದ ಕೊಡುಗೆ ಅಪಾರ. ಅದನ್ನೇ ಚಾಪೆಲ್ ಸ್ಮರಿಸಿದ್ದರು.

`ಯಾವೊಂದು ತಂಡವೂ  ಸತ್ವವುಳ್ಳ, ಪುಟಿದೇಳುವ ಚೈತನ್ಯದ ಹಾಗೂ ಸ್ಪರ್ಧಾಗುಣದ ಇಂಥ ಇಬ್ಬರನ್ನು ಹೊಂದಿರಲಿಲ್ಲ. ಇವರಿಬ್ಬರಿಗೂ ತಂಡದ ಹಿತವೇ ಮೊದಲ ಆದ್ಯತೆ. ಇಂಥ ಒಳ್ಳೆಯ ಗುಣಕ್ಕೆ ಬೆಂಗಳೂರಿನ ನೀರು ಕಾರಣವಿದ್ದರೂ ಇರಬಹುದು!~ ಎಂದು ಬರೆದಿದ್ದರು ಚಾಪೆಲ್.ಹಾಗೆ ಇದ್ದರೂ ಇರಬಹುದು. ಏಕೆಂದರೆ ದ್ರಾವಿಡ್‌ಗೆ ಮುನ್ನ ಅದೇ ಗುಣದ ಜಿ.ಆರ್.ವಿಶ್ವನಾಥ್ ಇದ್ದರು. ಅನಿಲ್ ಕುಂಬ್ಳೆಗೂ ಹಿಂದೆ ಭಗವತ್ ಚಂದ್ರಶೇಖರ್ ತಂಡದಲ್ಲಿದ್ದರು. ಕರ್ನಾಟಕದವನಾದ ನಾನು ಇದೇ ಕಾರಣಕ್ಕೆ ಹೆಮ್ಮೆ ಪಡುತ್ತೇನೆ.ಇವರೆಲ್ಲರ ಆಟವನ್ನು ನೋಡುವ ಅದೃಷ್ಟವೂ ನನ್ನದಾಗಿತ್ತು. ಮುಂಬೈನವರಲ್ಲದ ಪ್ರಭಾವಿ ಬ್ಯಾಟ್ಸ್‌ಮನ್ ಒಬ್ಬರನ್ನು ಭಾರತ ತಂಡ ಮೊಟ್ಟ ಮೊದಲ ಬಾರಿಗೆ ಕಂಡಿದ್ದು `ವಿಶಿ~ ರೂಪದಲ್ಲಿ.

ಅವರ ಆಟವನ್ನು ನಾನು ಚಿಕ್ಕವನಿದ್ದಾಗಿನಿಂದ ನೋಡಿದ್ದೇನೆ. ಚಂದ್ರ ಅವರಂತೂ ದೇಶದ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡ ಅತ್ಯಂತ ಸಮರ್ಥ ಸ್ಪಿನ್ ಮೋಡಿಗಾರ. ನಮ್ಮೂರಿನ ಈ ಆಟಗಾರರ ಬಗ್ಗೆ ನನಗೆ ಹೆಮ್ಮೆ. ಏಕೆಂದರೆ ಅವರು ದೇಶಕ್ಕಾಗಿ ಟೆಸ್ಟ್ ಪಂದ್ಯಗಳನ್ನು ಗೆಲ್ಲಿಸಿ ಕೊಟ್ಟವರು. ಅಷ್ಟೇ ಅಲ್ಲ, ತಂಡವನ್ನು ಸೋಲಿನ ಅಪಾಯದಿಂದ ಅನೇಕ ಬಾರಿ ಪಾರು ಮಾಡಿದವರು.

 `ವಿಶಿ~ ಮತ್ತು ಚಂದ್ರ ಅವರು ನನಗೆ ಹೃದಯಕ್ಕೆ ಹತ್ತಿರ ಎನಿಸುವುದು ಕೇವಲ ಅವರ ಆಟದ ತಂತ್ರದಿಂದ ಮಾತ್ರವಲ್ಲ, ಅವರ ಗುಣದಿಂದ ಕೂಡ. ಅವರೊಂದಿಗೆ ಆಡಿದವರು ಹಾಗೂ ಎದುರಾಳಿ ತಂಡದವರು ಕೂಡ ಈ ಇಬ್ಬರು ಕ್ರಿಕೆಟಿಗರನ್ನು ಅತ್ಯಂತ ಸರಳ ಹಾಗೂ ಸಜ್ಜನಿಕೆಯ ವ್ಯಕ್ತಿಗಳೆಂದು ಮೆಚ್ಚಿಕೊಂಡಿದ್ದರು. ಇವರಿಬ್ಬರೂ ನನಗೆ ಬಾಲ್ಯದಲ್ಲಿ ಆದರ್ಶವಾಗಿ ಕಂಡವರು.ಈಗ ನಾನು ಮಧ್ಯವಯಸ್ಕ. ಈ ಕಾಲದಲ್ಲಿ ಅದೇ ಭಾವದೊಂದಿಗೆ ಸ್ವೀಕರಿಸಿದ್ದು ದ್ರಾವಿಡ್ ಹಾಗೂ ಕುಂಬ್ಳೆಯನ್ನು. ಒಬ್ಬ ದೇಶದ ಅತ್ಯುತ್ತಮ ಬ್ಯಾಟ್ಸ್‌ಮನ್.  ಅನಿಲ್ ಭಾರತ ಕಂಡ ಅತ್ಯಂತ ಯಶಸ್ವಿ ಬೌಲರ್. `ವಿಶಿ~ ಮತ್ತು ಚಂದ್ರ ನಂತರ ಅದೇ ಗುಣಮಟ್ಟದೊಂದಿಗೆ ಬೆಂಗಳೂರಿನಿಂದ ಮೂಡಿ ಬಂದ ಕ್ರಿಕೆಟ್ ತಾರೆಗಳಾಗಿದ್ದಾರೆ ಇವರಿಬ್ಬರು.`ವಿಶಿ~ ಮತ್ತು ಚಂದ್ರ ಅವರನ್ನು ಕ್ರಿಕೆಟ್ ಸಾಮರ್ಥ್ಯದಿಂದ ಹೇಗೆ ಗೌರವಿಸುತ್ತೇವೊ ಅದೇ ರೀತಿಯಲ್ಲಿ ದ್ರಾವಿಡ್ ಹಾಗೂ ಕುಂಬ್ಳೆಯನ್ನೂ ಒಪ್ಪಿಕೊಳ್ಳುತ್ತೇವೆ. ಆದರೆ ಕಾಲಕ್ಕೆ ತಕ್ಕಂತೆ ಅವರ ವ್ಯಕ್ತಿತ್ವವನ್ನು ಬಣ್ಣಿಸುವಾಗ ಜಿ.ಆರ್.ವಿಶ್ವನಾಥ್ ಮತ್ತು ಬಿ.ಎಸ್.ಚಂದ್ರಶೇಖರ್ ಅವರನ್ನು `ಆಕರ್ಷಕ~, `ಮೃದು~ ಹಾಗೂ `ಭರವಸೆಯ~ ಎಂದು ಹೇಳಲಾಗುತ್ತಿತ್ತು.

ರಾಹುಲ್ ಮತ್ತು ಅನಿಲ್ ವಿಷಯ ಬಂದಾಗ `ಛಲವುಳ್ಳ~ ಹಾಗೂ `ಶ್ರದ್ಧೆಯುಳ್ಳ~ ಎನ್ನುತ್ತೇವೆ. ಗ್ರೇಗ್ ಚಾಪೆಲ್ ಕೂಡ ಇದಕ್ಕೆ ಸಮನಾದ ಪದಗಳನ್ನೇ ಈ ಕ್ರಿಕೆಟಿಗರ ಕುರಿತು ಪ್ರಯೋಗ ಮಾಡಿದ್ದು.ಈ ಎಲ್ಲ ಮಾತುಗಳು ನಗರವೊಂದರ ಸಾಮಾಜಿಕ ವಾತಾವರಣ ಬದಲಾವಣೆಯನ್ನು ಬಿಂಬಿಸುವಂಥವೂ ಆಗಿವೆ. `ವಿಶಿ~ ಮತ್ತು ಚಂದ್ರ ಆಡುತ್ತಿದ್ದ ಕಾಲವು ಮಾವಳ್ಳಿ ಟಿಫಿನ್ ರೂಮ್ ಹಾಗೂ ಸುಂದರವಾಗಿದ್ದ ಕಬ್ಬನ್ ಉದ್ಯಾನವಿದ್ದ ಕಾಲದಲ್ಲಿ. ಆಗ ಬೆಂಗಳೂರಿನಲ್ಲಿ ಹೆಚ್ಚು ಹಸಿರಿತ್ತು. ಆಗ ಎಂ.ಜಿ.ರಸ್ತೆಯಲ್ಲಿ ಕಾರುಗಳಿಗಿಂತ ಅಧಿಕವಾಗಿ ಸಿನಿಮಾ ಹಾಲ್ ಇವೆ ಎಂದೆನಿಸುತಿತ್ತು.

ರಾಹುಲ್ ಹಾಗೂ ಅನಿಲ್ ಆಡುವ ಹೊತ್ತಿಗೆ ಇದೇ ನಗರವು ಇನ್ಫೋಸಿಸ್‌ನಂಥ ದೊಡ್ಡ ಸಾಫ್ಟ್‌ವೇರ್ ಕಂಪೆನಿಗಳ ತಾಣ. ಹಕ್ಕಿಗಳು ಕಾಣದಂಥ ಕಟ್ಟಡಗಳ ಕಾಡು. ಬಸ್, ಜಾಗ್ವಾರ್ ಮತ್ತು ಮೋಟಾರ್ ಬೈಕ್‌ಗಳ ದಟ್ಟಣೆಯಿಂದ ಇಕ್ಕಟ್ಟಾಗಿರುವ ಊರು.ಜಿಆರ್‌ವಿ ಮತ್ತು ಚಂದ್ರಶೇಖರ್ ಪದಾರ್ಪಣೆ ಮಾಡಿದ್ದಾಗ `ಕರ್ನಾಟಕ~ ಮೈಸೂರು ರಾಜ್ಯವಾಗಿತ್ತು. ಆಗ ಸೆಂಟ್ರಲ್ ಕಾಲೇಜ್ ಕ್ರಿಕೆಟ್ ಚಟುವಟಿಕೆಯ ಕೇಂದ್ರ. ಮೈದಾನದ ಸುತ್ತ ಮರಗಳ ಸಾಲು. ಪ್ರೇಕ್ಷಕರು ಮರದ ಹಲಗೆಯ ಅಟ್ಟಣಗೆಯಲ್ಲಿ ಕುಳಿತು ಆಟ ನೋಡುತ್ತಿದ್ದರು.

ದ್ರಾವಿಡ್ ಹಾಗೂ ಕುಂಬ್ಳೆಗೆ ಆಡಿ ಬೆಳೆಯಲು ವೇದಿಕೆಯಾಗಿದ್ದು ಚಿನ್ನಸ್ವಾಮಿ ಕ್ರೀಡಾಂಗಣ. ಅರವತ್ತು ಸಾವಿರ ಜನರು ಕುಳಿತುಕೊಂಡು ಹೊನಲು ಬೆಳಕಿನಲ್ಲಿ ಪಂದ್ಯ ನೋಡುವಷ್ಟು ವ್ಯವಸ್ಥಿತವಾದದ್ದು. ಆಟ ನಡೆಯುವಾಗ ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿಯ ಕಾವಲು.ಟೆಸ್ಟ್ ಸರಣಿಗಳ ಜೊತೆಗೆ ವರ್ಷ ವರ್ಷವೂ ಕ್ಲಬ್ ಹಾಗೂ ರಣಜಿ ಕ್ರಿಕೆಟ್‌ನಲ್ಲಿ ಆಡಿದ `ವಿಶಿ~ಗೆ ಪ್ರಿಯವಾಗಿದ್ದು ಬಿಯರ್. ಅದೇ ಚಂದ್ರ ಅವರದ್ದು ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ಸೊನ್ನೆ ಸುತ್ತಿದ ವಿಶೇಷ. ವರ್ಷಪೂರ್ತಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿದ, ತೆಳು ಮೈಕಟ್ಟು ಹೊಂದಿದ ದ್ರಾವಿಡ್ ಅತ್ಯಧಿಕ ಕ್ಯಾಚ್ ಪಡೆದ ಟೆಸ್ಟ್ ಕ್ರಿಕೆಟಿಗ.ಇಷ್ಟೆಲ್ಲ ಯೋಚಿಸಿದ ನಂತರ ಮತ್ತೆ ನೆನಪಾಗುವುದು ಮೊದಲು ಹೇಳಿದ ಆ ಛಾಯಾಚಿತ್ರ. ಅದೇನೋ ಗೊತ್ತಿಲ್ಲ; ಎಲ್ಲ ದೈಹಿಕ ಸಮಸ್ಯೆಗಳನ್ನು ಮರೆಸುವಂಥ ಶಕ್ತಿ ಆ ಚಿತ್ರದೊಳಗಿತ್ತು. ಅಂಥದೇ ಸಾಮರ್ಥ್ಯ ಜಿ.ಆರ್.ವಿಶ್ವನಾಥ್ ಅವರದ್ದು.

ರಾಹುಲ್ ದ್ರಾವಿಡ್ ಕೂಡ ಅದೇ ರೀತಿಯ ಒಳಿತುಗಳ ಆಗರ. ಬಸವನಗುಡಿಯ ಕಾಫಿ ಶಾಪ್‌ನಲ್ಲಿ ತೋರುವ ವರ್ತನೆಯನ್ನೇ `ವಿಶಿ~ ಕ್ರಿಕೆಟ್ ಅಂಗಳದಲ್ಲಿಯೂ ಉಳಿಸಿಕೊಂಡರು.ಆದರೆ ದ್ರಾವಿಡ್ ಇದೇ ವರ್ತನೆಯನ್ನು ಕಾಲಕ್ರಮೇಣ ಕಲಿತರು. ಜಿಆರ್‌ವಿ ಕಲಿಯದೆಯೇ ತನ್ನೊಳಗೆ ಬೆಳೆಸಿಕೊಂಡಿದ್ದ ಸಹಜ ವರ್ತನೆ ಅದಾಗಿತ್ತು. ಆ ವಿಷಯ ಏನೇ ಇರಲಿ. ಈಗ ಕ್ರಿಕೆಟ್ ಪ್ರೇಮಿಗಳ ಸಂಖ್ಯೆ ಅಪಾರ. ಅವರ ಬಯಕೆಗಳೂ ಹೆಚ್ಚು.

ಇನ್ನೊಂದೆಡೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ವಿಚಿತ್ರ ಆಡಳಿತ. ಹಿಂದೆ ಅಹಂ ಹೊಂದಿದ್ದ ಹವ್ಯಾಸಿ ಆಡಳಿತಗಾರರಿದ್ದರು. ಆದರೆ ಈಗ ವೃತ್ತಿಪರ ದುಷ್ಟರ ಕೂಟವಾಗಿ ಬಿಟ್ಟಿದೆ. ಅದು ಮಾಡರ್ನ್ ಕ್ರಿಕೆಟ್ ಯಶಸ್ಸಿನ ಬೆನ್ನು ಹತ್ತಿದೆ. ಅದರ ಕಾಳಜಿ ಕೇವಲ ಪ್ರಾಯೋಜಕರ ಹಿತದ ಕಡೆಗೆ.ಇಂಥ ಪರಿಸ್ಥಿತಿಯಲ್ಲಿ ದ್ರಾವಿಡ್ ತಮ್ಮನ್ನು ತಾವು ಬದಲಿಸಿಕೊಳ್ಳುವುದು ಅನಿವಾರ್ಯ ಎನಿಸಿತು. ಸಮತೋಲನ ಹಾಗೂ ಸ್ವಯಂ ನಿಯಂತ್ರಣದ ಮೂಲಕ ತಮ್ಮನ್ನು ತಾವೇ ವಿಭಿನ್ನವಾಗಿ ಪ್ರಸ್ತುತಪಡಿಸಿಕೊಂಡರು. ಅವರು ಸಭ್ಯ ಹಾಗೂ ಗೌರವಯುತ ವ್ಯಕ್ತಿ. ಆದರೆ ಎಂದೂ ತಕ್ಷಣವೇ ಪ್ರತಿಕ್ರಿಯೆ ನೀಡುವಂಥವರಾಗಿ ಕಾಣಿಸಿಕೊಳ್ಳಲಿಲ್ಲ.

`ವಿಶಿ~ ಉತ್ಸಾಹದಾಯಕ ಎನ್ನಿಸಬಹುದಾದ ನಿರ್ವಹಣೆ ಹಾಗೂ ಚುಂಬಕ ಎನ್ನಿಸುವ ದ್ರಾವಿಡ್ ವರ್ತನೆ; ಇವೆರಡೂ ವಿಭಿನ್ನ. ಆದ್ದರಿಂದಲೇ ಅವರಾಡಿದ ಕಾಲದಲ್ಲಿ ಒಬ್ಬರು `ಅತಿ ಪ್ರೀತಿಗೆ ಪಾತ್ರರು~ ಇನ್ನೊಬ್ಬರು `ಅಪಾರ ಗೌರವ ಗಳಿಸಿದವರು~.ಬಹುಶಃ ಜಿ.ಆರ್.ವಿಶ್ವನಾಥ್‌ಗಿಂತ ದ್ರಾವಿಡ್, ಬಾಗದ ಗುಣದ ಗಟ್ಟಿಗ ಆಗಿರಬಹುದು. ಇಲ್ಲವೇ ಕಾಲದ ಅಗತ್ಯಕ್ಕೆ ತಕ್ಕಂತೆ ಇಬ್ಬರೂ ಹೊಂದಿಕೊಂಡಿರಬಹುದು. ಅದೇನೇ ಇರಲಿ, ರಾಹುಲ್ ತಮ್ಮ ಹೀರೋ ಎನಿಸಿರುವ `ವಿಶಿ~ಯೊಂದಿಗೆ ಯಾವ ವಿಷಯ ಹಂಚಿಕೊಳ್ಳುತ್ತಾನೆ-ಹಂಚಿಕೊಳ್ಳುವುದಿಲ್ಲ ಎನ್ನುವುದನ್ನು ಸಂದೇಶ ವಿನಿಮಯದ ತುಣುಕೊಂದು ಅನಾವರಣಗೊಳಿಸುತ್ತದೆ.

ಒಂದರ ಹಿಂದೊಂದು ಏಕದಿನ ಸರಣಿ ನಡೆದ ಕಾಲ. ಟೆಲಿವಿಷನ್‌ನಲ್ಲಿ ಪಂದ್ಯಗಳನ್ನು ನೋಡುವಾಗ ನನ್ನ ಗಮನ ಸೆಳೆದಿದ್ದು ಭಾರತ ತಂಡದ ನಾಯಕ ಸ್ಲಿಪ್ ಬದಲು ಮಿಡ್ ಆಫ್‌ನಲ್ಲಿ ಕ್ಷೇತ್ರ ರಕ್ಷಣೆ ಮಾಡುತ್ತಿದ್ದ. ಈ ಕುರಿತು ಆಗ ನಾನು ನಾಯಕನಾಗಿದ್ದ ದ್ರಾವಿಡ್‌ಗೆ ಪತ್ರ ಬರೆದೆ:`ಪ್ರೀತಿಯ ರಾಹುಲ್,

ಭಾರತ ಕ್ರಿಕೆಟ್ ಇತಿಹಾಸ ಕಂಡ ಅತ್ಯಂತ ಉತ್ತಮ ಟೆಸ್ಟ್ ಬ್ಯಾಟ್ಸ್‌ಮನ್. ಸ್ಲಿಪ್‌ನಲ್ಲಿ ಶ್ರೇಷ್ಠ ಕ್ಷೇತ್ರ ರಕ್ಷಕ ಎನ್ನುವುದರಲ್ಲಿಯಂತೂ ಅನುಮಾನವೇ ಇಲ್ಲ. ಸ್ಲಿಪ್‌ನಲ್ಲಿ  ನಿಮ್ಮಂತೆ ಫೀಲ್ಡಿಂಗ್ ಮಾಡುವವರನ್ನು ದೇಶವು ಯಾವುದೇ ಪ್ರಕಾರದ ಕ್ರಿಕೆಟ್‌ನಲ್ಲಿಯೂ ಕಂಡಿಲ್ಲ. ಆದ್ದರಿಂದ ನೀವು ಅಲ್ಲಿಯೇ ಕ್ಷೇತ್ರ ರಕ್ಷಣೆ ಮಾಡಬೇಕು.

ಬೌಲರ್‌ಗಳಿಗೆ ಸಲಹೆ ನೀಡಲು ಅನುಕೂಲ ಆಗಲೆಂದು ನಿಮ್ಮ ಸ್ಥಾನ ಬದಲಿಸಿಕೊಂಡಿರಬಹುದು. ಆದರೆ ತಂಡದ ಹಿತಕ್ಕಾಗಿ ನಿಮಗೆ ಸ್ಲಿಪ್ ಒಳ್ಳೆಯದು. ನಿಮ್ಮಷ್ಟು ಚುರುಕಾಗಿ ಪ್ರತಿಕ್ರಿಯಿಸಲು ಬೇರೆ ಯಾರಿಂದಲೂ ಸಾಧ್ಯವಿಲ್ಲ. ಆರಂಭದ ಕೆಲವು ಓವರುಗಳಲ್ಲಿ ಕ್ಯಾಚ್ ಪಡೆಯುವಲ್ಲಿ ನಿಮ್ಮ ಸ್ಥಾನದಲ್ಲಿ ನಿಂತವರು ವಿಫಲರಾಗುತ್ತಿದ್ದಾರೆ~ಇದಿಷ್ಟು ಅದರಲ್ಲಿನ ವಿಷಯ. ಎರಡು ಮೂರು ದಿನಗಳ ನಂತರ ಉತ್ತರ ಬಂತು. ಆದರೆ ಅದು ನನ್ನ ಕೋರಿಕೆ ಹಾಗೂ ಸಲಹೆಗಾಗಿ ನೀಡಿದ್ದ ಪ್ರತಿಕ್ರಿಯೆ ಅಲ್ಲ.

ಬದಲಿಗೆ ಕೆಲವು ದಿನಗಳ ಹಿಂದಷ್ಟೇ ಪ್ರಕಟವಾಗಿದ್ದ ನನ್ನ ಹೊಸ ಪುಸ್ತಕದ ಕುರಿತು. `ಭಾರತ ಕ್ರಿಕೆಟ್ ತಂಡದ ನಾಯಕನ ಬಗ್ಗೆ ನಿಮ್ಮ ವಿಶ್ಲೇಷಣೆ ಸರಿ. ನನಗೆ ಅನಿಸುತ್ತದೆ ನಮ್ಮ ದೇಶದ ಇತಿಹಾಸ ಗಾಂಧಿವರೆಗೆ ಬಂದು ನಿಂತುಬಿಡುತ್ತದೆ. ಆನಂತರದ 60 ವರ್ಷಗಳಲ್ಲಿ ಅದೆಷ್ಟೆಲ್ಲಾ ನಡೆದಿದೆ. ನಾನು 180 ಪುಟಗಳನ್ನು ಸರಾಗವಾಗಿ ಓದಿಕೊಂಡು ಸಾಗಿದೆ. ಆ ಕುರಿತು ಹಾಗೂ ಅದಕ್ಕಿಂತ ಹೆಚ್ಚಿನದನ್ನು ಮಾತನಾಡಲು ಇಷ್ಟಪಡುತ್ತೇನೆ~ ಎಂದು ಬರೆದ ಉತ್ತರ ನನ್ನಮುಂದೆ ಇತ್ತು.ನನ್ನ ಇ-ಮೇಲ್ ಸಂದೇಶ ಹಾಗೂ ಅದಕ್ಕೆ ಸಿಕ್ಕ ಪ್ರತಿಕ್ರಿಯೆಯನ್ನು ಕ್ರಿಕೆಟ್ ಭಾಷೆಯಲ್ಲಿ ಹೇಳುವುದಾದರೆ ಮಧ್ಯಮ ವೇಗಿಯ ಬೌನ್ಸರ್ ಅನ್ನು ಮುಂಗೈ ತಂತ್ರಗಾರಿಕೆಯಿಂದ ಫ್ಲಿಕ್ ಮಾಡಿ ಬೌಂಡರಿಗೆ ಅಟ್ಟಿದ ಹಾಗೆ. ಶುದ್ಧ ಸಭ್ಯತೆಯೊಂದಿಗೆ ನೀಡಿದ ಮಾತಿನ ಪೆಟ್ಟು.`ಕ್ರಿಕೆಟ್ ತಂತ್ರದ ಬಗ್ಗೆ ಮಾತಾಡದೇ ತೆಪ್ಪಗೆ ಇತಿಹಾಸ ಪುಸ್ತಕ ಬರೆಯುವತ್ತ ಗಮನ ಕೊಡು~ ಎಂದ ಹಾಗಿತ್ತು. ಹೌದು; ನಾನೀಗ ಅದನ್ನೇ ಮಾಡಬೇಕು.

(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in )

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.