ಶನಿವಾರ, ಜನವರಿ 18, 2020
21 °C

ಶೇಲ್ ಶಿಲೆಯಿಂದ ತೈಲ ಹಿಂಡುವ ತವಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಶ್ಚಿಮ ಬಂಗಾಲದ `ಇಚ್ಚಾಪುರ~ ಹೆಸರಿನ ಸಣ್ಣ ಊರು ಭಾರತದ ಶಕ್ತಿನಕ್ಷೆಯನ್ನು ಹೊಸದಾಗಿ ಬರೆಯುತ್ತಿದೆ. ದೇಶದ ಮೊತ್ತ ಮೊದಲ `ಫ್ರ್ಯಾಕಿಂಗ್ ಘಟಕ~ ಅಲ್ಲಿ ಕೆಲಸ ಮಾಡತೊಡಗಿದೆ.ಇಷ್ಟು ವರ್ಷ ಕೇವಲ ಬಟ್ಟೆ ಅಂಗಡಿ, ಮಂಡಕ್ಕಿ ಬಟ್ಟಿ, ತರಕಾರಿ ಮಂಡಿಗಳೇ ಮುಂತಾದ ಚಿಲ್ಲರೆ ಚಟುವಟಿಕೆಗಳ ನಿದ್ರಿತ ಊರಾಗಿದ್ದ ಅಲ್ಲಿ ಎರಡು ವರ್ಷಗಳ ಹಿಂದೆ ದೈತ್ಯಗಾತ್ರದ ಬೋರ್‌ವೆಲ್ ಯಂತ್ರಗಳು ಬಂದವು. ಮೊಬೈಲ್ ಅಂಟೆನಾಗಳಿಗಿಂತ ಭಾರೀ ದೊಡ್ಡ ಟವರ್‌ಗಳು ತಲೆ ಎತ್ತಿದವು. ಊರಿನ ಜನರು ಹಿಂದೆಂದೂ ಕಂಡಿರದಿದ್ದ ಮಹಾಗಾತ್ರದ ನೂರಾರು ವಾಹನಗಳು ಲೋಹದ ಪೈಪ್‌ಗಳ ಗುಡ್ಡದೆತ್ತರ ರಾಶಿಗಳನ್ನು ಪೇರಿಸಿದವು.ಹತ್ತಾರು ಎಕರೆ ವಿಸ್ತೀರ್ಣದ ಈಜುಗೊಳಗಳಲ್ಲಿ ನೀರು ತುಂಬಿದವು. ನೆಲದ ರಂಧ್ರದೊಳಕ್ಕೆ ನೀರನ್ನು ಒತ್ತಿ ತೂರಿಸಬಲ್ಲ ಹೊಸಬಗೆಯ ಯಂತ್ರೋಪಕರಣಗಳು ಭಾರೀ ಗದ್ದಲದೊಂದಿಗೆ ಕೆಲಸ ಆರಂಭಿಸಿ, ನೀರನ್ನೆಲ್ಲ ಖಾಲಿ ಮಾಡಿದವು.ವಿದೇಶೀಯರು, ವಿದೇಶಿ ತರಬೇತಿ ಪಡೆದ ಭಾರತೀಯ ತಂತ್ರಜ್ಞರು ಕಿವಿಗೆ ಹತ್ತಿ, ತಲೆಗೆ ಲೋಹದ ಟೋಪಿ ಹಾಕಿಕೊಂಡು ಯಂತ್ರಗಳ ಸುತ್ತ ಹತ್ತುತ್ತ ಇಳಿಯುತ್ತ, ಬೋರ್‌ವೆಲ್ ಒಳಕ್ಕೆ ಸ್ಫೋಟಕಗಳನ್ನು ತೂರಿಸಿ ಪಾತಾಳದಲ್ಲಿ ಡೈನಮೈಟ್ ಸಿಡಿಸಿದರು. ಕಳೆದ ಜನವರಿಯಲ್ಲಿ `ಗ್ಯಾಸ್ ಯಶೆಗೆಲೊ~ (ಬಂತು) ಎಂದು ಹುಯಿಲಿಟ್ಟು ತಾಂತ್ರಿಕ ಸಿಬ್ಬಂದಿ ಸಂಭ್ರಮದಿಂದ ಪಟಾಕಿ ಸಿಡಿಸಿ ಹಬ್ಬ ಆಚರಿಸಿ, ಕಾರ್ಮಿಕರಿಗೆಲ್ಲ ಸಿಹಿ ಹಂಚಿದರು. ಭಾರತದ ಮೊದಲ ಫ್ರ್ಯಾಕಿಂಗ್ (Fracking) ಸಾಹಸ ಯಶಸ್ವಿಯಾಗಿತ್ತು.ಸಾವಿರಾರು ಮೀಟರ್ ಆಳದ ಶಿಲಾಹಾಸುಗಳನ್ನು ಭೂಗರ್ಭದಲ್ಲೇ ಸ್ಫೋಟಿಸಿ, ಅವು ಬಿರುಕು ಬಿಡುವಂತೆ ಮಾಡಿ, ಅಲ್ಲಿಂದ ಸೂಸುವ ಇಂಧನ ಅನಿಲವನ್ನು ಮೇಲಕ್ಕೆ ತೆಗೆಯುವ ಕೆಲಸಕ್ಕೆ `ಫ್ರ್ಯಾಕಿಂಗ್~ ಎನ್ನುತ್ತಾರೆ. ಫ್ರ್ಯಾಕ್ಚರಿಂಗ್, ಅಂದರೆ ಸೀಳುಬಿಡುವಂತೆ ಮಾಡು- ಎಂಬ ಪದದ ರೂಪಾಂತರ ಅದು. ಜಗತ್ತಿನ ತಂತ್ರಜ್ಞಾನ ಚರಿತ್ರೆಗೆ ಹತ್ತು ವರ್ಷಗಳೀಚೆಗಷ್ಟೆ ಸೇರಿಕೊಂಡ ಈ ಪದಕ್ಕೆ ಈಗ ಇನ್ನಿಲ್ಲದ ಪ್ರಾಮುಖ್ಯ ಬರತೊಡಗಿದೆ.ತಾಂತ್ರಿಕ ಪಠ್ಯಪುಸ್ತಕಗಳಲ್ಲಿ ಇದಿನ್ನೂ ಸೇರ್ಪಡೆ ಆಗಬೇಕಾಗಿದೆ. ಬೋರ್‌ವೆಲ್ ಕೊರೆಯುವ ನಮ್ಮ ಡ್ರಿಲ್ಲಿಂಗ್ ಎಂಜಿನಿಯರ್‌ಗಳು ಇದನ್ನು ಹೊಸದಾಗಿ ಕಲಿಯಬೇಕಿದೆ.ಆದರೆ ನೆಲದೊಳಗಿನ ಹೊಸ ಸಂಪನ್ಮೂಲವನ್ನು ಬಗೆದು ತೆಗೆಯುವ ತುರ್ತು ಅದೆಷ್ಟು ಜಾಸ್ತಿ ಇದೆಯೆಂದರೆ, ಹಿಂದೆಲ್ಲ ಹಠಾತ್ತಾಗಿ ಹೊಸ ಚಿನ್ನದ ಗಣಿ ಪತ್ತೆಯಾದಾಗ `ಗೋಲ್ಡ್ ರಶ್~ ಉಂಟಾಗಿ ದೇಶವಿದೇಶಗಳ ಜನರು ನುಗ್ಗಿದ ಹಾಗೆ ಈ ತಂತ್ರಜ್ಞಾನದತ್ತ ದುಡ್ಡಿದ್ದವರೆಲ್ಲ ನುಗ್ಗುತ್ತಿದ್ದಾರೆ. ಬಂಗಾಳ, ಒಡಿಶಾ, ಬಿಹಾರ, ಉತ್ತರ ಪ್ರದೇಶದಲ್ಲಿ ನೆಲವನ್ನು ಖರೀದಿಸಲು ನೂಕುನುಗ್ಗಲು ಆರಂಭವಾಗುತ್ತಿದೆ. ಹೊಸ ಹೊಸ ಭೂ ಹಗರಣಗಳಿಗೆ ರಂಗಸಜ್ಜಿಕೆ ನಡೆಯುತ್ತಿದೆ.ನೆಲದಾಳದ ಕೆಲವು ಶಿಲಾಸ್ತರಗಳಿಂದ ತೈಲ ಮತ್ತು ನೈಸರ್ಗಿಕ ನಿಕ್ಷೇಪವನ್ನು ಎತ್ತುವುದು ನಮಗೆಲ್ಲ ಗೊತ್ತು. ನೂರಾರು ಕೋಟಿ ವರ್ಷಗಳ ಹಿಂದಿನ ಸಸ್ಯ ಅವಶೇಷಗಳು ಹೂಳಿನ ರೂಪದಲ್ಲಿ ಸಾಗರದಂಚಿಗೆ ಸಂಚಯಗೊಂಡು ತೈಲ ಮತ್ತು ಅನಿಲಗಳಾಗಿ ಶಿಲಾಸ್ತರಗಳ ಬಿರುಕುಗಳಲ್ಲಿ ಸೇರಿವೆ.ಗುಜರಾತಿನ ಧೋಲ್ಕಾ ಮತ್ತು ಅಸ್ಸಾಂನ ದಿಗ್ಬೊಯ್ ಹಾಗೂ ಈಚಿನ ಎರಡು ದಶಕಗಳಲ್ಲಿ ಮುಂಬೈ ಆಚಿನ ಸಮುದ್ರದ ಕೆಳಗಿನ `ಬಾಂಬೆ ಹೈ~ಗಳಲ್ಲಿ ರಂಧ್ರ ಕೊರೆದು ನಾವು ತೈಲ ಮತ್ತು ಅನಿಲವನ್ನು ಎತ್ತುತ್ತಿದ್ದೆವು. ಅದರಿಂದೀಚೆ ಕೃಷ್ಣಾ, ಗೋದಾವರಿ ಮತ್ತು ಕಾವೇರಿ ನದಿಗಳು ಸಮುದ್ರ ಸೇರುವಲ್ಲಿ ಕೂಡ ತೈಲ ನಿಕ್ಷೇಪ ಪತ್ತೆಯಾಗಿದೆ.ಇಂಥ ನಿಕ್ಷೇಪಗಳ ಹೊರತಾಗಿ ಕೆಲವು ಬಗೆಯ ಶೇಲ್ ಹೆಸರಿನ ಕರೀ ಕಪ್ಪು ಜಲಜ ಶಿಲೆಗಳ ಸೂಕ್ಷ್ಮ ಬಿರುಕುಗಳಲ್ಲಿ ಕೂಡ ಅನಿಲ ಸಂಚಯವಾಗಿರುವುದು ಮೊದಲಿನಿಂದಲೂ ಗೊತ್ತಿತ್ತು. ನೋಡಲು ಗಟ್ಟಿ ಹಾಸುಬಂಡೆಗಳಂತೆ ಕಾಣುವ ಈ ಕಲ್ಲಿನಿಂದ ಇಂಧನ ಅನಿಲವನ್ನು ಬೇರ್ಪಡಿಸುವ ತಂತ್ರಜ್ಞಾನ ಗೊತ್ತಿರಲಿಲ್ಲ.ಯುರೋಪ್ ಮತ್ತು ಅಮೆರಿಕದ ತೈಲ ಕಂಪೆನಿಗಳು ತಾವು ಗುತ್ತಿಗೆ ಪಡೆದ ತೈಲಖಜಾನೆ ಖಾಲಿಯಾದ ನಂತರ ಶಿಲೆಗಳಲ್ಲಿ ಇದ್ದ ಬದ್ದ ಉಳಿಕೆ ತೈಲವನ್ನು ಎತ್ತಲೆಂದು ಹೊಸ ಹೊಸ ತಂತ್ರಗಳನ್ನು ರೂಪಿಸಿದವು. ನೆಲದ ಮೇಲಿನ ರಂಧ್ರದ ಮೂಲಕ ಗಾಳಿ, ನೀರು, ಕೆಸರು, ಮರಳನ್ನು ಅತಿ ಒತ್ತಡದಿಂದ ಹಾಯಿಸಿ ಇನ್ನಷ್ಟು ತೈಲ ತೆಗೆದರು. ಅದೇ ರಂಧ್ರದ ಮೂಲಕ ಸ್ಫೋಟಕಗಳನ್ನು, ರಸಾಯನ ಮಿಶ್ರಣಗಳನ್ನು ಕೆಳಕ್ಕೆ ಕಳಿಸಿ ಶಿಲಾಹಾಸುಗಳ ಬಿರುಕನ್ನು ದೊಡ್ಡದು ಮಾಡಿ ಮತ್ತಷ್ಟು ತೈಲವನ್ನು ಹೊರಕ್ಕೆ ತೆಗೆದರು.1969ರಲ್ಲಿ ಎಲ್ಲರ ಗಮನ ಚಂದ್ರನ ಕಡೆ ಇದ್ದಾಗ, ಅಮೆರಿಕದ ಕೊಲರಾಡೊ ಪ್ರಾಂತ್ಯದ ರುಲಿಸನ್ ಎಂಬಲ್ಲಿ ನೆಲದಾಳದಲ್ಲಿ ಪರಮಾಣು ಬಾಂಬ್ ಸ್ಫೋಟ ಮಾಡಲಾಯಿತು. ಲಕ್ಷಾಂತರ ಬಿರುಕುಗಳುಂಟಾಗಿ ಯದ್ವಾತದ್ವಾ ತೈಲ ಚಿಮ್ಮಿತು. ಆದರೆ ಸುತ್ತೆಲ್ಲ ವಿಕಿರಣ ಸೂಸಿದ್ದರಿಂದ ಇಂಥ ತಂತ್ರವನ್ನು ಕೈಬಿಟ್ಟು ತೈಲ ತೆಗೆಯಲು ಬೇರೆ ಬಗೆಯ ರಸಾಯನಗಳ ಬಳಕೆ ಹೆಚ್ಚಿತು.ಶಿಲಾಸ್ತರಗಳಿಗೆ ಆಳದಲ್ಲಿ ಅಡ್ಡರಂಧ್ರ ಹಾಕುವ ತಂತ್ರಜ್ಞಾನ ಕಳೆದ ದಶಕದಲ್ಲಿ ಭಾರೀ ಸುಧಾರಣೆ ಕಂಡಿತು. ಸಾವಿರಾರು ಮೀಟರ್ ಆಳದವರೆಗೆ ನೇರವಾಗಿ ರಂಧ್ರ ಕೊರೆದು, ಅಂಥ ರಂಧ್ರದ ತುದಿಯಿಂದ ಬೇರೆ ಬೇರೆ ದಿಕ್ಕುಗಳಿಗೆ ನಾಲ್ಕಾರು ಅಡ್ಡ ರಂಧ್ರ, ಓರೆರಂಧ್ರ ಕೊರೆದು ಅದರ ಮೂಲಕ ಸ್ಫೋಟಕಗಳನ್ನು ರವಾನಿಸಿ ಸಿಡಿಸುವ ವಿಧಾನ ಕರಗತವಾಯಿತು.

 

ತೈಲದ ಲವಲೇಶವೂ ಇಲ್ಲದ ಕರೀ ಶೇಲ್ ಶಿಲೆಗಳನ್ನು ನುಚ್ಚುನೂರಾಗಿಸಿ, ಆ ಆಳಕ್ಕೆ ನೀರು-ಮರಳನ್ನು ಭಾರೀ ಒತ್ತಡದಿಂದ ತೂರಿಸಿ ಶಿಲೆಯೊಳಗಿನ ಅನಿಲವನ್ನು ಹೊರಕ್ಕೆಳೆಯುವ `ಹೈಡ್ರಾಲಿಕ್ ಫ್ರ್ಯಾಕಿಂಗ್~ ವಿಧಾನ ಜಾರಿಗೆ ಬಂತು.

 

ಅಮೆರಿಕ ಫುಲ್ ಖುಷ್. ಆ ವಿಶಾಲ ರಾಷ್ಟ್ರದ ಎಲ್ಲೆಲ್ಲಿ ಶೇಲ್ ಶಿಲೆಗಳಿವೆಯೊ ಅಲ್ಲೆಲ್ಲ ಈ ಹೊಸ ಕಾರ್ಯಾಚರಣೆ ನಡೆಸಿದ್ದೇ ಆದರೆ ತನ್ನ ಶಕ್ತಿ ನಿಕ್ಷೇಪ ಈಗಿನದಕ್ಕಿಂತ ಮೂರು ಪಟ್ಟು ಹೆಚ್ಚುತ್ತದೆ ಎಂದು ಅಂದಾಜು ಮಾಡಿತು. ಭೂಗರ್ಭಕ್ಕೆ ಆಳದಲ್ಲಿ ಏಟು ಹಾಕುವ ಕೆಲಸ ಎಲ್ಲೆಂದರಲ್ಲಿ, ಅಮೆರಿಕದಲ್ಲಿ, ಕೆನಡಾದಲ್ಲಿ ವ್ಯಾಪಕವೆನಿಸಿತು.ನೈಸರ್ಗಿಕ ಅನಿಲವೆಂದರೆ ಪೆಟ್ರೋಲ್, ಡೀಸೆಲ್ ಮತ್ತು ಕಲ್ಲಿದ್ದಲಿಗಿಂತ ಕ್ಷೇಮ. ಅದನ್ನು ಉರಿಸಿದಾಗ ಕರೀ ಹೊಗೆ ಹೊಮ್ಮುವುದಿಲ್ಲ. ಕಾರ್ಬನ್ ಡೈಆಕ್ಸೈಡ್ ಪ್ರಮಾಣವೂ ಶೇಕಡಾ 50ರಷ್ಟು ಕಮ್ಮಿ. ಇತರ ವಿಷಾನಿಲಗಳೂ ನಗಣ್ಯ. ಅಂಥ ಸುರಕ್ಷಿತ ಇಂಧನ ಎಲ್ಲಿದೆಯೆಂದು ಹೊಸದಾಗಿ ಶೋಧಿಸುವ, ಹೊರಕ್ಕೆ ತೆಗೆಯುವ ಕೆಲಸ ಎಲ್ಲ ಸುಧಾರಿತ ದೇಶಗಳಲ್ಲೂ ಭರದಿಂದ ಆರಂಭವಾಯಿತು.ಕಳೆದ ವರ್ಷ ಒಬಾಮಾ ನಮ್ಮ ದೇಶಕ್ಕೆ ಬಂದಾಗ ತಾಂತ್ರಿಕ ನೆರವು ನೀಡುವುದಾಗಿ ಸಹಿ ಹಾಕಿದ ಒಡಂಬಡಿಕೆಗಳಲ್ಲಿ ಸೌರ ವಿದ್ಯುತ್, ಗಾಳಿಯಂತ್ರವೇ ಮುಂತಾದ ಅನೇಕ `ಬದಲೀ ಶಕ್ತಿಮೂಲ~ಗಳ ಪಟ್ಟಿಯಲ್ಲಿ ಶೇಲ್ ಫ್ರ್ಯಾಕಿಂಗ್ ಕೂಡ ಇತ್ತು. ಅದಕ್ಕೆ ಮುನ್ನವೇ ನಮ್ಮ ತೈಲ ಮತ್ತು ನೈಸರ್ಗಿಕ ಅನಿಲ ಕಾರ್ಪೊರೇಶನ್ (ಓಎನ್‌ಜಿಸಿ) ನಮ್ಮ ದೇಶದ ಎಲ್ಲೆಲ್ಲಿ ಈ ಹೊಸ ನಿಕ್ಷೇಪಗಳಿವೆ ಎಂಬುದರ ನಕ್ಷೆ ತಯಾರಿಸಿತ್ತು. ಇಚ್ಚಾಪುರದಲ್ಲಿ ಬಾವಿ ಕೊರೆಯುತ್ತಿತ್ತು.ಭಾರತದಲ್ಲಿ ಶೇಲ್ ಶಿಲಾಸ್ತರಗಳು ವ್ಯಾಪಕವಾಗಿವೆ. ಐವತ್ತು ಕೋಟಿ ವರ್ಷಗಳ ಹಿಂದೆ ಎಲ್ಲೆಲ್ಲಿ ನದಿಗಳು ಹರಿಯುತ್ತಿದ್ದವೊ ಅಲ್ಲೆಲ್ಲ ಶೇಲ್ ಹಾಸುಗಳಿವೆ. ಆಂಧ್ರದ ಕಡಪಾದಿಂದ ಹಿಡಿದು ಪಶ್ಚಿಮ ಬಂಗಾಲದವರೆಗೆ, ಅತ್ತ ಅಸ್ಸಾಂನಿಂದ ಹಿಡಿದು ಇತ್ತ ಗಂಗಾ ಕಣಿವೆಗುಂಟ ದಾಮೋದರ ಕೊಳ್ಳ, ಬಿಹಾರ, ಉತ್ತರ ಪ್ರದೇಶದವರೆಗೆ, ಗುಜರಾತ್, ಮಧ್ಯಭಾರತದ ವಿಂಧ್ಯದ ತಪ್ಪಲು, ದಕ್ಷಿಣದಲ್ಲಿ ಕೃಷ್ಣಾ ಗೋದಾವರಿ. ಅಷ್ಟೇಕೆ, ಇತ್ತ ಭೀಮಾ ಕಣಿವೆಯಲ್ಲಿ ನಮ್ಮ ಗುಲಬರ್ಗಾ, ವಿಜಾಪುರದವರೆಗೂ ಶೇಲ್ ಶಿಲೆಗಳಿವೆ.

 

ಅಂಥ ನಿಕ್ಷೇಪಗಳ ಶೋಧಕ್ಕೆಂದು ಭೂಮಿಯನ್ನು ಖಾಸಗಿ ಕಂಪೆನಿಗಳಿಗೆ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಅಲ್ಲೆಲ್ಲ ಶಿಲಾಬಂಧಿತ ಅನಿಲ ನಿಕ್ಷೇಪ ಇದ್ದುದೇ ನಿಜವಿದ್ದರೆ ನಾವು ಶಕ್ತಿಗಾಗಿ ಹೆಚ್ಚೇನೂ ಪರದಾಡಬೇಕಿಲ್ಲ. ಈಗ ನಮ್ಮದು ಅದೆಂಥ ಇಕ್ಕಟ್ಟಿನ ಸ್ಥಿತಿ ಎಂದರೆ, ನಮಗೆ ಅಗತ್ಯವಿರುವ ಕಚ್ಚಾತೈಲದ ಶೇ 80 ಭಾಗವನ್ನು ವಿದೇಶದಿಂದ ತರಿಸಿಕೊಳ್ಳುತ್ತಿದ್ದೇವೆ.ನಾವು ಗಳಿಸುವ ಡಾಲರ್‌ಗಳ ಅರ್ಧಪಾಲು ತೈಲದ ಆಮದಿಗೇ ಮರಳಿ ಹೋಗುತ್ತಿದೆ. ಈ ಹೊಸ ಅನಿಲ ಭಂಡಾರ ಕೈಗೆಟುಕಿದರೆ ಅಷ್ಟೂ ಡಾಲರನ್ನು ದೇಶದ ವಿಕಾಸಕ್ಕೆ ಬಳಸಬಹುದು. ಅನಿಲದಿಂದ ಈಗಿನ ನಾಲ್ಕು ಪಟ್ಟು ವಿದ್ಯುತ್ ಉತ್ಪಾದಿಸಬಹುದು.ಮನೆಮನೆಗೆ ಅಡುಗೆ ಅನಿಲದ ಪೈಪ್‌ಲೈನ್ ಹಾಕಬಹುದು. ರಸಗೊಬ್ಬರ, ಪ್ಲಾಸ್ಟಿಕ್, ನೈಲಾನ್, ಕೆಮಿಕಲ್‌ಗಳ ಫ್ಯಾಕ್ಟರಿಗಳನ್ನು ಹೆಚ್ಚಿಸಬಹುದು. ದೇಶದ ದಾರಿದ್ರ್ಯವನ್ನು ದಶಕದಲ್ಲೇ ನೀಗಿಸಬಹುದು.ಈ ಸುಂದರ ಕನಸುಗಳನ್ನೆಲ್ಲ ಬದಿಗಿರಿಸಿ, ಈಗ ಈ ತಂತ್ರಜ್ಞಾನದ ವಾಸ್ತವ ಮುಖಗಳನ್ನು ನೋಡೋಣ. ಕಳೆದ ಮೂರು ವರ್ಷಗಳಿಂದ ಅಮೆರಿಕದ ಬಹುತೇಕ ಎಲ್ಲ ಜನಪ್ರಿಯ ಮತ್ತು ವೈಜ್ಞಾನಿಕ ಪತ್ರಿಕೆಗಳಲ್ಲೂ ಫ್ರ್ಯಾಕಿಂಗ್‌ನ ವಿಕಾರಮುಖಗಳ ಅನಾವರಣವಾಗುತ್ತಿದೆ.

 

ಎರಡು ಮೂರು ಸಾವಿರ ಮೀಟರ್ ಆಳಕ್ಕೆ ಕೊರೆಯುವಾಗ ಅಂತರ್ಜಲ ನಿಕ್ಷೇಪಗಳನ್ನು ದಾಟಿಕೊಂಡೇ ರಂಧ್ರವನ್ನು ಕೆಳಕ್ಕೆ ಇಳಿಸಬೇಕಾಗುತ್ತದೆ. ಆಳದಲ್ಲಿ ಎಲ್ಲೆಲ್ಲೋ ಶಿಲೆಗಳು ಬಿರುಕು ಬಿಟ್ಟಾಗ ಅಲ್ಲಿಂದ ಅನಿಯಂತ್ರಿತವಾಗಿ ಹೊಮ್ಮುವ ಅನಿಲ, ಮೇಲಕ್ಕೆ ಬರುತ್ತ ಅಂತರ್ಜಲದಲ್ಲಿ ಲೀನವಾಗುತ್ತದೆ. ಅಲ್ಲಿ ಅಮೆರಿಕದಲ್ಲಿ ಕೆಲವು ಬೋರ್‌ವೆಲ್‌ಗಳಿಂದ ಹೊರ ಬರುವ ನೀರಿಗೆ ಬೆಂಕಿ ಹೊತ್ತಿಕೊಂಡಿದ್ದೂ ಇದೆ. ಹಾಗೆ ಅನಿಲ ಮೇಲೆದ್ದು ಬರುವಾಗ ತನ್ನೊಂದಿಗೆ ವಿಕಿರಣಶೀಲ ದ್ರವ್ಯಗಳನ್ನು, ಭಾರಲೋಹ ಕಣಗಳನ್ನು ಎತ್ತಿ ತಂದಿದೆ.ಕೆಲವೆಡೆ ಫ್ರ್ಯಾಕಿಂಗ್ ಮಾಡಲೆಂದು ನೀರಿನೊಂದಿಗೆ ನಾನಾ ಬಗೆಯ ರಸಾಯನ ದ್ರವ್ಯಗಳನ್ನು ಒತ್ತಿ ಕೆಳಕ್ಕೆ ಕಳಿಸಿದ್ದರಿಂದ ಅವೆಲ್ಲ ಅಂತರ್ಜಲಕ್ಕೆ ಸೇರಿ ರಾಮಾರಂಪವಾಗಿದೆ. ಹೊಸ ಕಾಯಿಲೆಗಳ ಸಂಖ್ಯೆ ಹೆಚ್ಚಿದೆ. ಪ್ರತಿಭಟನೆಗಳು, ದಾವೆಗಳಿಗೆ ಮಣಿದು ಕೆಲವು ಕಂಪೆನಿಗಳು ಸ್ಥಳೀಯ ನಿವಾಸಿಗಳಿಗೆ ದೂರದಿಂದ ಬದಲೀ ನೀರು ಪೂರೈಕೆ ವ್ಯವಸ್ಥೆ ಮಾಡಿದ್ದೂ ಇದೆ.

 

ತಮ್ಮ ಪಾಡಿಗೆ ತಾವಿದ್ದ ಹಳ್ಳಿಗಳಲ್ಲಿ ಇದ್ದಕ್ಕಿದ್ದಂತೆ ಎಲ್ಲೆಲ್ಲೋ ಹೊಸ ರಸ್ತೆಗಳ ಮೂಲಕ ಸಾವಿರಾರು ಟನ್ ರಸಾಯನ ವಸ್ತು, ಮರಳು, ಸ್ಫೋಟಕಗಳನ್ನು ತಂದು ಗುಡ್ಡೆ ಹಾಕಿ, ಅಹೋರಾತ್ರಿ ಗದ್ದಲ ಎಬ್ಬಿಸಿ, ಡೀಸೆಲ್ ವಾಸನೆ ಹೊಮ್ಮಿಸಿ, ಗುಡ್ಡೆಗಟ್ಟಲೆ ಕೆಸರು ಪೇರಿಸಿ, ಜನರ ನೆಮ್ಮದಿಯನ್ನು ಕೆಡಿಸಿದ್ದಕ್ಕೆ ಅನೇಕ ಕಂಪನಿಗಳು ದಂಡ ತೆತ್ತಿವೆ.ಇಲ್ಲವೆ ದುಂಡಾವರ್ತನೆ ತೋರಿ ಜನರ ಸ್ವಾತಂತ್ರ್ಯವನ್ನೇ ದಮನ ಮಾಡಿವೆ. ಇವೆಲ್ಲಕ್ಕಿಂತ ಮುಖ್ಯವಾಗಿ ಅನೇಕ ಕಡೆ ಭೂಕಂಪನಗಳ ಪ್ರಕರಣ ಹೆಚ್ಚಾಗಿದೆ. ಅಮೆರಿಕವೊಂದೇ ಅಲ್ಲ, ಕೆನಡಾ, ಆಸ್ಟ್ರೇಲಿಯಾ, ಬ್ರಿಟನ್, ಫ್ರಾನ್ಸ್, ಜಪಾನ್, ದಕ್ಷಿಣ ಆಫ್ರಿಕಾ ಹೀಗೆ ಫ್ರ್ಯಾಕಿಂಗ್ ಆರಂಭವಾದ ಎಲ್ಲ ಕಡೆ ಪ್ರತಿಭಟನೆ, ಆಕ್ರೋಶ ವ್ಯಕ್ತವಾಗಿದೆ.

 

ಅಮೆರಿಕ ಅಲ್ಲಲ್ಲಿ ನಿಷೇಧ ಹಾಕಲು ಆರಂಭಿಸಿದೆ. ಫ್ರಾನ್ಸ್ ಇತ್ತೀಚೆಗಷ್ಟೆ ಫ್ರ್ಯಾಕಿಂಗ್‌ಗೆ ಎಲ್ಲೆಡೆ ನಿಷೇಧ ಹಾಕಿದೆ.ನಾವಿಲ್ಲಿ ಇಚಾಪುರದಲ್ಲಿ ಅದನ್ನು ಹೊಸದಾಗಿ ಆರಂಭಿಸುತ್ತಿದ್ದೇವೆ. ಕ್ರಮೇಣ ದೇಶದ ಅಸಂಖ್ಯ ಚಿಕ್ಕಪುಟ್ಟ ಗ್ರಾಮಗಳೂ ದೊಡ್ಡ ಕಂಪನಿಗಳ ಇಚ್ಛಾಪುರಗಳಾಗಿ ಮೆರೆಯಬಹುದು.

ಪ್ರತಿಕ್ರಿಯಿಸಿ (+)