ಸೋಮವಾರ, ಜನವರಿ 20, 2020
26 °C

ಷೇಕ್ಸ್‌ಪಿಯರ್ ಸಾನೆಟ್‌ಗಳಿಗೆ ರಂಗರೂಪ ನೀಡಿದ ರಾಬರ್ಟ್ ವಿಲ್ಸನ್

ಎಚ್.ಎಸ್.ಶಿವಪ್ರಕಾಶ್ Updated:

ಅಕ್ಷರ ಗಾತ್ರ : | |

ಜಗತ್ತಿನ ರಂಗಭೂಮಿಯ ರಾಜಧಾನಿ ಎಂದು ಕರೆಸಿಕೊಳ್ಳುವ ಬರ್ಲಿನ್‌ನಲ್ಲಿ ಕಳೆದ ಶನಿವಾರ ಒಂದು ಅತ್ಯಂತ ಗಾಢವಾದ ರಂಗಪ್ರಯೋಗ ನಡೆಯಿತು.

 

ಜರ್ಮನಿಯ ವಿಖ್ಯಾತ ಕವಿ, ನಾಟಕಕಾರ ಮತ್ತು ರಂಗಕರ್ಮಿಯಾದ ಬೆರ್ಟೋಲ್ಟ್ ಬ್ರೆಷ್ಟ್ ಸ್ಥಾಪಿಸಿದ `ಬರ್ಲಿನರ್ ಆನ್ ಶಾಂಬಲ್~ ನಾಟಕಗೃಹದ ಪ್ರಧಾನ ರಂಗಮಂಚದಲ್ಲಿ ಅಮೆರಿಕಾದ ಹೆಸರಾಂತ ನಿರ್ದೇಶಕ ರಾಬರ್ಟ್ ವಿಲ್ಸನ್, ಷೇಕ್ಸ್‌ಪಿಯರನ ಸಾನೆಟ್ಟುಗಳನ್ನಾಧರಿಸಿದ ಒಂದು ರಂಗರೂಪವನ್ನು ನೀಡಿದರು.

 ಮೂರು ಗಂಟೆಗಳ ಕಾಲ ತುಂಬಿದ ಪ್ರೇಕ್ಷಕಗೃಹದ ಎಲ್ಲರನ್ನು ಅಲುಗಾಡದಂತೆ ಹಿಡಿದು ಕೂರಿಸಿದ ಈ ಪ್ರಯೋಗ ಮುಗಿದಾಗ ಮುದಗೊಂಡ ಪ್ರೇಕ್ಷಕರು ಸುಮಾರು ಹತ್ತು ನಿಮಿಷಗಳ ಕಾಲ ಎಡೆಬಿಡದ ಕರತಾಡನ ಮಾಡಿದರು. 2009ರಲ್ಲಿ ಇದೇ ಪ್ರಯೋಗ ಇದೇ ರಂಗಮಂಚದಲ್ಲಿ ನಡೆದಿದ್ದು, ಆಗಲೂ ಅಪಾರ ಜನಮೆಚ್ಚುಗೆ ಪಡೆದಿತ್ತು.ವಿಲ್ಸನ್‌ರ ವಿಶಿಷ್ಟ ಪ್ರಯೋಗಗಳ ಬಗೆಗೆ ಎಲ್ಲ ರಂಗಪ್ರೇಮಿಗಳಿಗೂ ಎಲ್ಲಿಲ್ಲದ ಕುತೂಹಲ. ವಿಲ್ಸನ್ ಕೇವಲ ರಂಗತಜ್ಞ ಮಾತ್ರವಲ್ಲ. ಚಿತ್ರಕಲೆ, ಶಿಲ್ಪ, ಸಂಗೀತ ಈ ಎಲ್ಲ ಕಲೆಗಳಲ್ಲಿ ನಿಷ್ಣಾತರಾಗಿದ್ದು ಅವೆಲ್ಲವನ್ನೂ ತಮ್ಮ ರಂಗಪ್ರಯೋಗದೊಳಗೆ ತುಂಬುತ್ತಾರೆ. ಜೊತೆಗೆ ರಂಗಭೂಮಿಯ ಬೆಳಕು ವ್ಯವಸ್ಥೆಯಲ್ಲಿ ಅವರ ಕೈಚಳಕ ಅಮೋಘವಾದುದು.ಅವರ ಪ್ರಯೋಗಗಳಲ್ಲಿ ಬೆಳಕು ಲಿಯೊನಾರ್ಡೋನ ಚಿತ್ರಗಳಲ್ಲಿ ಆಗುವಂತೆ ಒಂದು ಭಾವಗೀತಾತ್ಮಕ ಭಾಷೆಯಾಗಿ ಮಾರ್ಪಡುತ್ತದೆ. ಒಟ್ಟಿನಲ್ಲಿ ತಮಗೆ ಪರಿಣತಿಯಿರುವ ಎಲ್ಲಾ ಕಲೆಗಳನ್ನೂ ಮೇಳೈಸಿ ವಿಲ್ಸನ್ ಒಂದು ದಟ್ಟವಾದ ರಂಗಭಾಷೆಯನ್ನು ಪ್ರತಿ ಪ್ರಯೋಗದಲ್ಲೂ ಸಜೀವಗೊಳಿಸುತ್ತಾರೆ.ಅವರ ಪ್ರಯೋಗಗಳ ಬಗ್ಗೆ ಪರೋಕ್ಷವಾಗಿ ಮಾತ್ರ ತಿಳಿದಿದ್ದ ನನಗೆ ಅದನ್ನು ನೇರವಾಗಿ ನೋಡುವ ಅವಕಾಶ ಮೊದಲ ಬಾರಿ ಸಿಕ್ಕಿತು. ಈ ಅವಕಾಶ ನನ್ನ ತಲೆಮಾರಿನ ಅದೆಷ್ಟೋ ಜನ ರಂಗಕರ್ಮಿಗಳ ಕನಸು.ಇಪ್ಪತ್ತು ವರ್ಷಗಳ ಹಿಂದೆ ಅವರ ಕೆಲವು ಪ್ರಯೋಗಗಳ ಕ್ಯಾಸೆಟ್‌ಗಳನ್ನು ನಾನು ಬರ್ಲಿನ್ ವಿಶ್ವವಿದ್ಯಾಲಯದ ಭಂಡಾರದಲ್ಲಿ ವೀಕ್ಷಿಸಿದ್ದೆ. ವಿಶೇಷವಾಗಿ ಅವರು ಬರ್ಲಿನ್‌ನ ಒಲಿಂಪಿಕ್ ಸ್ಟೇಡಿಯಂನಲ್ಲಿ ಪ್ರಯೋಗ ಮಾಡಿದ ಹಾಫ್ತಸ್ಮಾಲ್ ಕವಿಯ `ಬರ್ತ್ ಆಫ್ ವೀನಸ್~ ಕವಿತೆಯ ರಂಗರೂಪ ನನ್ನನ್ನು ಗಾಢವಾಗಿ ತಟ್ಟಿತ್ತು.

ಪ್ರಕೃತಿಯ ಸಮೃದ್ಧಿಯ ಪುನರಾವರ್ತನೆಯನ್ನು ಕೊಂಡಾಡುವ ಆ ಕವಿತೆಯ ಸಾಲುಗಳನ್ನು ಯುದ್ಧೋತ್ತರ ಜರ್ಮನಿಯ ದಾರಿದ್ರ್ಯದ ಪ್ರತಿಮೆಗಳ ಹಿನ್ನೆಲೆಯಲ್ಲಿ ಕೇಳಿಸಿ ಒಂದು ವಿಚಿತ್ರ ವ್ಯಂಗ್ಯವನ್ನು ಆ ರಂಗಪ್ರಸ್ತುತಿಯ ಮೂಲಕ ಅವರು ಅಭಿವ್ಯಕ್ತಿಸಿದ್ದರು. ಶಬ್ದಕಾವ್ಯ ಮತ್ತು ದೃಶ್ಯಕಾವ್ಯಗಳ ವ್ಯಂಗ್ಯಾತ್ಮಕ ಸಂಬಂಧ ನನ್ನನ್ನು ಬಹಳ ಕಾಡಿತ್ತು. ಈ ಹಿಂದೆ ಷೇಕ್ಸ್‌ಪಿಯರ್, ಬ್ರೆಷ್ಟ್ ಮುಂತಾದ ಹಲವು ನಾಟಕಕಾರರ ಕೃತಿಗಳನ್ನು ವಿಭಿನ್ನ ಬಗೆಗಳಲ್ಲಿ ರಂಗಕ್ಕೆ ತಂದ ವಿಲ್ಸನ್ ಈ ಬಾರಿ ಷೇಕ್ಸ್‌ಪಿಯರನ ನಾಟಕೇತರ ಕೃತಿಯೊಂದನ್ನು ರಂಗಕ್ಕೆ ಅಳವಡಿಸಲು ಎತ್ತಿಕೊಂಡಿದ್ದಾರೆ.

 

ಷೇಕ್ಸ್‌ಪಿಯರನ ಕೃತಿ ಸಮುಚ್ಚಯದಲ್ಲಿ ಆತನ ಸಾನೆಟ್ಟುಗಳಿಗೆ ಒಂದು ಪ್ರಮುಖ ಸ್ಥಾನವಿದೆ. ಅಷ್ಟೇ ಅಲ್ಲದೆ, ಇಡೀ ಯೂರೋಪಿನ ಮತ್ತು ಜಗತ್ತಿನ ಪ್ರೇಮಕಾವ್ಯದ ಇತಿಹಾಸದಲ್ಲಿ ಅದರ ಜಾಗ ಅನನ್ಯವಾದುದು.ಹದಿನಾಲ್ಕು ಸಾಲುಗಳ ರಚನೆಯಾದ ಸಾನೆಟ್ಟು ಮೊದಲು ಹುಟ್ಟಿದ್ದು ಸುಮಾರು ಹದಿಮೂರನೆ ಶತಮಾನದ ಇಟಲಿಯಲ್ಲಿ ಎಂದು ಹೇಳಲಾಗುತ್ತದೆ. ಪೆರ್ಟ್ರಾರ್ಕ್, ಡಾಂಟೆ ಮುಂತಾದವರು ಈ ಪ್ರಕಾರದ ಮೊದಲಿಗರು.ಇಟಲಿಯಾ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಈ ಪ್ರಕಾರ ಎಲಿಜಬೀತನ್ ಯುಗಕ್ಕೆ ಮೊದಲೇ ಇಂಗ್ಲೆಂಡಿನಲ್ಲಿ ಹುಟ್ಟಿತಾದರೂ ಅದು ತನ್ನ ಗರಿಮೆಯನ್ನು ಪಡೆದದ್ದು ಷೇಕ್ಸ್‌ಪಿಯರನ ಪರುಷಸ್ಪರ್ಶದಿಂದ.

 

ಇನ್ನು ಕೆಲವರ ಪ್ರಕಾರ ಸಾನೆಟ್ಟು ಬಂದದ್ದು ಅರಬೀ ಪ್ರಕಾರವಾದ ಗಜಲ್‌ನ ಮೂಲಕ. ಸ್ಪೇನ್‌ಅನ್ನು ನಿಡುಗಾಲ ಆಳಿದ ಅರಬ್ಬರು ಈ ಪ್ರಕಾರವನ್ನು ಯೂರೋಪಿಗೆ ತಂದರಂತೆ. ಈ ಎರಡು ದೃಷ್ಟಿಗಳಲ್ಲಿ ಯಾವುದು ಸರಿಯಾಗಿದ್ದರೂ ಷೇಕ್ಸ್‌ಪಿಯರನ ಅನನ್ಯ ಸ್ಥಾನಕ್ಕೆ ಕೊರೆ ಬರುವುದಿಲ್ಲ.

 

ಕಾರಣ ಇಷ್ಟೆ: ಮೊದಲಿನಿಂದ ಪ್ರೇಮ ಸಾನೆಟ್ಟುಗಳ ಹುರುಳಾಗಿತ್ತೆಂಬುದು ನಿಜವಾದರೂ ಈ ಪ್ರೇಮ ಬಹುಮಟ್ಟಿಗೆ ಆದರ್ಶಗೊಂಡು ಇಹದ ಗಡಿಗಳಾಚೆಗೆ ನುಸುಳಿಹೋಗುತ್ತಿತ್ತು. ದೈವೀಕ ಪ್ರೇಮವಾಗಿ ಮಾರ್ಪಾಟು ಹೊಂದುತ್ತಿತ್ತು.

 

ಹೀಗೆ ಅಲೌಕಿಕವಾಗಿದ್ದ ಪ್ರೇಮದ ವಸ್ತುವನ್ನು ಮನುಷ್ಯಲೋಕದ ನಡುವೆ ನಾವು ನಡೆದಾಡುವ ನೆಲದ ಮೇಲೆ ನಿಲ್ಲಿಸಿದ್ದು ಷೇಕ್ಸ್‌ಪಿಯರನ ವಿಶಿಷ್ಟ ಸಾಧನೆ. ಅಂದಮಾತ್ರಕ್ಕೆ ಷೇಕ್ಸ್‌ಪಿಯರನ ಪ್ರೇಮಕಲ್ಪನೆ ಆದರ್ಶವಿಹೀನವೆಂದಲ್ಲ. ಆದರೆ ಆ ಅದರ್ಶ ಅವನ ಹಿಂದಿನ ಪ್ರೇಮ ಕಾವ್ಯದಲ್ಲಿದ್ದಂತೆ ಆಧ್ಯಾತ್ಮಿಕವಲ್ಲ,  ಮಾನವೀಯವಾದುದು.ಸಾನೆಟ್ ಸಾಹಿತ್ಯದಲ್ಲಿ ಷೇಕ್ಸ್‌ಪಿಯರ್ ತಂದ ಇನ್ನೊಂದು ಗಣನೀಯ ಮಾರ್ಪಾಟು: ಆ ವರೆಗಿನ ಸಾನೆಟ್ ರಚನೆಗಳಲ್ಲೊಬ್ಬ ಆದರ್ಶ ಮಹಿಳೆ ಸಾನೆಟ್ಟಿನ ಕೇಂದ್ರವಾಗಿರುತ್ತಿದ್ದಳು (ಡಾಂಟೆಯ ಕಾವ್ಯದಲ್ಲಿ ಬಿಯಾತ್ರಿಚೆ ಇದ್ದ ಹಾಗೆ; ಆದರೆ ಷೇಕ್ಸ್‌ಪಿಯರನ ಸಾನೆಟ್ಟುಗಳ ನಾಯಕ ಒಬ್ಬ ಗಂಡಸು. ಆತ ಷೇಕ್ಸ್‌ಪಿಯರನ ಆಶ್ರಯದಾತ  ಅರ್ಲ್ ಆಫ್ ಸೌದ್ಯಾಪ್ಟನ್  ಎಂದು ಗುರುತಿಸಲಾಗಿದೆ.ಅವನ ಜೊತೆಗಿನ ತನ್ನ ಪ್ರೇಮವನ್ನು ಷೇಕ್ಸ್‌ಪಿಯರ್ ಮಾನವೀಯ ರೀತಿಯಲ್ಲಿ ಆದರ್ಶವಾಗಿಸುತ್ತಾನೆ. ಬದಲಾಗುತ್ತಿರುವ ಜಗತ್ತಿನಲ್ಲಿ ಪ್ರೇಮದ ನಿರಂತರತೆ ಎಲ್ಲಿದೆ? ಷೇಕ್ಸ್‌ಪಿಯರನ ಉತ್ತರ: ಮಾನವ ಸಂತಾನದಲ್ಲಿ ಅಥವಾ ಪ್ರೇಮವನ್ನು ಕೀರ್ತಿಸುವ ಕಾವ್ಯದಲ್ಲಿ.

 

ತನ್ನ ಪ್ರಿಯನೂ ಧಣಿಯೂ ಆದ ಸೌದ್ಯಾಪ್ಟನ್ನನ ಜೊತೆಗಿನ ತನ್ನ ಆದರ್ಶ ಪ್ರೇಮಕ್ಕೆ ವಿರುದ್ಧವಾದ, ಶುದ್ಧ ಲೈಂಗಿಕವಾದ ಇನ್ನೊಂದು ಪ್ರೇಮದ ಬಗ್ಗೆಯೂ ಷೇಕ್ಸ್‌ಪಿಯರ್ ಹಲವು ಸಾನೆಟ್ಟುಗಳನ್ನು ಬರೆದಿದ್ದಾನೆ. ಆ ತೊಗಲ ತೀಟೆಯ ಗುರಿ ಅವನ ಪ್ರೇಯಸಿ `ಕಪ್ಪು ಹೆಣ್ಣು~ ಇವಳು ಪರಿಶುದ್ಧವಾದ ಲೈಂಗಿಕ  ಜಂತು.`ಎರಡು ಪ್ರೇಮಗಳಿವೆ ನನಗೆ; ಒಂದರಿಂದ ಸಮಾಧಾನ, ಇನ್ನೊಂದರಿಂದ ನಿರಾಶೆ~-ಹೀಗೆಂದು ತನ್ನೆರಡು ವಿಭಿನ್ನ ಬಗೆಯ ಪ್ರೇಮಗಳ ಕುರಿತು ಸಾನೆಟ್ಟೊಂದರಲ್ಲಿ ಹೇಳುತ್ತಾನೆ.ಷೇಕ್ಸ್‌ಪಿಯರ್ ಮತ್ತು ಸೌದ್ಯಾಪ್ಟನ್ನರ ಪ್ರೇಮದ ಸ್ವರೂಪದ ಬಗ್ಗೆ ಹಲವು ಜಟಿಲ ಚರ್ಚೆಗಳು ನಡೆದಿವೆ. ಇದನ್ನು ಸಲಿಂಗರತಿಯ ಸಂಬಂಧವೆಂದೂ ವಾದಿಸಲಾಗಿದೆ.ಸನಾತನ ಗ್ರೀಸಿನಂತೆ ಎಲಿಜಬೀತನ್ ಇಂಗ್ಲೆಂಡಿನಲ್ಲೂ ಸಲಿಂಗರತಿ ಚಾಲ್ತಿಯಲ್ಲಿತ್ತು. ಷೇಕ್ಸ್‌ಪಿಯರನ ಸಮಕಾಲೀನ ನಾಟಕಕಾರ ಕ್ರಿಸ್ಟೊಫರ್ ಮಾರ್ಲೋವನ ಸಾನೆಟ್ಟುಗಳಲ್ಲಿ ತನ್ನ ಗಂಡು ಪ್ರೇಮಿಯ ಬಗೆಗಿನ ಸಲಿಂಗಕಾಮದ ಸ್ಪಷ್ಟ ಸೂಚನೆಗಳಿವೆ.

 

ಆದರೆ ಷೇಕ್ಸ್‌ಪಿಯರನಲ್ಲಿ ತನ್ನ ನಾಯಕನ ಸೌಂದರ‌್ಯದ ಬಣ್ಣನೆಯಿರುವುದು ದಿಟವಾದರೂ ಅದರಲ್ಲಿ ಸಲಿಂಗಪ್ರೇಮದ ಸೂಚನೆಗಳು ಅಷ್ಟು ಬಲವಾಗಿಲ್ಲ. ತನ್ನ ಇನಿಯನ ಪ್ರೇಮದಿಂದ ಗಡೀಪಾರಾದ ಮೇಲೆ ಅವನೊಂದಿಗಿನ ತನ್ನ ನಂಟನ್ನು ಷೇಕ್ಸ್‌ಪಿಯರ್ `ನಿಷ್ಠಾವಂತ ಮನಸುಗಳ ಮದುವೆ~ ಎಂದು ಗುರುತಿಸುತ್ತಾನೆ.ಗಂಡಸರ ನಡುವಿನ ಗಾಢ ಸಂಬಂಧಗಳೆಲ್ಲವನ್ನೂ ಸಲಿಂಗರತಿಯ ಅಡಿಯಲ್ಲಿ ತರುವುದಾದರೆ ಸ್ನೇಹವೆಂಬ ಕಾವ್ಯದ ಮುಖ್ಯವಸ್ತು ನಾಪತ್ತೆಯಾಗಿ ಬಿಡುತ್ತದೆ. ಆದರೆ ತಮ್ಮ ರಂಗ ಅಳವಡಿಕೆಯಲ್ಲಿ ಸ್ವಘೋಷಿತ ಸಲಿಂಗಕಾಮಿಯಾದ ವಿಲ್ಸನ್ ಸಲಿಂಗರತಿಯ ಅರ್ಥಗಳಿಗೆ ವಿಶೇಷ ಒತ್ತನ್ನು ನೀಡಿದ್ದಾರೆ ಅನ್ನುವುದು ಗಮನಾರ್ಹ.ಇದು ಒಂದು ವ್ಯಾಖ್ಯಾನವಾಗಿ ಅದೆಷ್ಟು ಸರಿ, ಹೇಳುವುದು ಕಠಿಣ. ಆದರೆ ಈ ಓದಿನಿಂದ ಈ ರಂಗ ಅಳವಡಿಕೆಗೆ ಲಾಭವಾಗಿದೆ. ಆದಿಮ ಪ್ರೇಮದ ಲಿಂಗಮೂಲವಾದ ಚೌಕಟ್ಟುಗಳಿಂದ ಅದನ್ನು ಬಿಡುಗಡೆ ಮಾಡಿ, ಪ್ರೇಮದ ಆದಿಮತೆಯನ್ನು ಧ್ವನಿಸುವದರಲ್ಲಿ ಈ ಪ್ರದರ್ಶನ ಯಶಸ್ವಿಯಾಗಿದೆ.ಷೇಕ್ಸ್‌ಪಿಯರನ ಸಾನೆಟ್ಟುಗಳ ಸರಣಿ ನಾಟಕಕೃತಿಯಾಗಿ ರಚನೆಯಾಗಿಲ್ಲ, ನಿಜ. ಆದರೆ, ಅದರಲ್ಲಿ ನಾಟಕೀಯತೆಯ ಅಂಶಗಳು ಯಥೇಚ್ಛವಾಗಿವೆ. ಅದರ ಕೇಂದ್ರದಲ್ಲಿ ಒಂದು ಸ್ವಾರಸ್ಯಕಾರಿಯಾದ ಪ್ರೇಮ ತ್ರಿಕೋನದ ಕಥೆಯಿದೆ. ಇಲ್ಲಿ ಕವಿ, ಗಂಡುಪ್ರೇಮಿ, ಕಪ್ಪು ಹೆಣ್ಣು, ಎದುರಾಳಿ ಕವಿ ಈ ನಾಲ್ಕು ಮಾನವ ಪಾತ್ರಗಳಿವೆ.

 

ಅಲ್ಲದೆ ಸರ್ವಭಕ್ಷಕನಾದ ಕಾಲರಾಯನೂ ಇಲ್ಲಿನ ಒಂದು ಪಾತ್ರವೆಂದು ಹೇಳಲಾಗಿದೆ. ಸಾನೆಟ್ಟು ಸರಣಿಯ ಕತೆ ಬಿಚ್ಚಿಕೊಳ್ಳುತ್ತಾ ಹೋದ ಹಾಗೆ ಈ ಪಾತ್ರಗಳು ಅತ್ಯಂತ ತೀವ್ರವಾದ ನಾಟಕೀಯ ಗಳಿಗೆಗಳನ್ನು ಹಾದು ಹೋಗುತ್ತವೆ.

 

ಸಾನೆಟ್ಟುಗಳನ್ನು ಒಂದು ನಾಟಕದ ಸ್ವಗತ ಮತ್ತು ಸಂಭಾಷಣೆಗಳ ಸರಣಿಯಂತೆ ನೋಡಲೂ ಸಾಧ್ಯ. ಆದರೆ ತಮ್ಮ ಪ್ರಯೋಗದಲ್ಲಿ ವಿಲ್ಸನ್ ಈ ಕೃತಿಯ ಎಲ್ಲ ನಾಟಕೀಯ ಅಂಶಗಳನ್ನು ತ್ಯಜಿಸಿ ತಮ್ಮ ಪ್ರಯೋಗಕ್ಕೆ ಶುದ್ಧಾಂಗವಾದ ರಂಗ ಸ್ವರೂಪವನ್ನು ತಂದಿದ್ದಾರೆ.ನಮ್ಮಲ್ಲಿ ನಾಟಕೀಯತೆಯನ್ನೇ ರಂಗ ಸ್ವರೂಪವೆಂದು ವಾದಿಸುವವರಿದ್ದಾರೆ. ಸಾಂಪ್ರದಾಯಿಕ ನಾಟಕೀಯತೆಯನ್ನು ದೂರ ಬಿಸುಟ ಅಬ್ಸರ್ಡ್ ಮುಂತಾದ ಆಧುನಿಕ ನಾಟಕಗಳ ಪ್ರಭಾವ ನಮ್ಮ ಆಧುನಿಕ ನಾಟಕಕಾರರ ಮೇಲೂ ಆಯಿತು.ಆದರೆ, ಅವರು ಸಾಂಪ್ರದಾಯಿಕ ನಾಟಕಗಳ ಜಾಡನ್ನು ಪೂರ್ತಿ ಬಿಟ್ಟುಕೊಡಲಿಲ್ಲ. ಆದರೆ ಪರಿಶುದ್ಧ ಪ್ರಯೋಗಶೀಲ ರಂಗನಿರ್ದೇಶಕ ವಿಲ್ಸನ್‌ರ ರಂಗತಂತ್ರಗಳು ನಾಟಕದ ಮೂಲ ಅಂಶಗಳಾದ ಕಥನ, ಪಾತ್ರ, ಸಂಘರ್ಷ ಈ ಎಲ್ಲಕ್ಕೂ ಎಳ್ಳುನೀರು ಬಿಟ್ಟಿವೆ.ಆಧುನಿಕ ಅಮೂರ್ತಕಲೆ ಸ್ಥಳೈಕ್ಯದ ನಿಯಮವನ್ನು, ಆಧುನಿಕ ಕಾದಂಬರಿ ಕಥನದ ಚೌಕಟ್ಟನ್ನು, ಆಧುನಿಕ ವಾಸ್ತು ಕೇಂದ್ರೀಯತೆಯನ್ನು, ಆಧುನಿಕ ಸಂಗೀತ ಸಂಯೋಜನೆಯನ್ನು, ಆಧುನಿಕ ಕಾವ್ಯ ಛಂದಸ್ಸನ್ನು ಬಿಟ್ಟು ಕೊಟ್ಟ ಹಾಗೆ.ವಿಲ್ಸನ್ನರ ಈ ಪ್ರಯೋಗದಲ್ಲಿ ಕತೆಯಿಲ್ಲ. ಪಾತ್ರಗಳಿಲ್ಲ. ಬದಲಿಗೆ ಪ್ರತಿಮೆಗಳಿವೆ, ಶಬ್ದಗಳಿವೆ, ಚಲನೆಗಳಿವೆ, ಆಕೃತಿಗಳಿವೆ, ಲಯಗಳಿವೆ, ದೇಶಗಳಿವೆ. ಸ್ಥಿರ ವ್ಯಕ್ತಿತ್ವದ ಕಲ್ಪನೆಗೆ ಹೊರತಾಗಿ ಗಂಡಸರು ಹೆಣ್ಣುಪಾತ್ರಗಳನ್ನೂ ಹೆಂಗಸರು ಗಂಡುಪಾತ್ರಗಳನ್ನೂ ವಹಿಸುತ್ತಾ ಹೋಗುತ್ತಾರೆ.ಆಧುನಿಕ ವಿವರಗಳು ಪ್ರಾಚೀನ ವಿವರಗಳೊಂದಿಗೆ ಕಲೆಸಿ ಹೋಗುತ್ತವೆ. ಈ ನಡುವೆ ಸಾನೆಟ್ಟುಗಳನ್ನಾಧರಿಸಿದ ದೃಶ್ಯಾವಳಿಗಳ ನಡು ನಡುವೆ ಬೊಂಬೆ ಬಿಲ್ಲು ಬಾಣ ಹಿಡಿದ ಕಾಮದೇವ ಕ್ಯುಪಿಡ್ ಮತ್ತೆ ಮತ್ತೆ ಬಂದು ಹೋಗುತ್ತಿರುತ್ತಾನೆ.ಸಾನೆಟ್ಟುಗಳನ್ನು ದೃಶ್ಯ ಮಾಧ್ಯಮಕ್ಕೆ ಅಳವಡಿಸುವ ಸರಳ ತಂತ್ರವೂ ಇಲ್ಲಿಲ್ಲ. ಬದಲಿಗೆ ಹಲವಾರು ರಂಗಾಭಿವ್ಯಕ್ತಿ ಸಾಧ್ಯತೆಗಳ ನಡುವೆ, ಪರಿಕರಗಳ ನಡುವೆ ಸಾನೆಟ್ಟುಗಳ ಪಠಣ, ನರ್ತನ, ಗಾಯನ - ಎಲ್ಲಾ ಬಂದು ಹೋಗುತ್ತವೆ. ಈ ಎಲ್ಲ ರಂಗಕ್ರಿಯೆಗಳ ಮೂಲಕ ಹಲವು ಕಲೆಗಳ ಸೇರುದಾಣವಾದ ರಂಗಭೂಮಿ ಒಂದು ಭಿನ್ನವಾದ ಸಂರಚನೆಯನ್ನು ಪಡೆದುಕೊಳ್ಳುತ್ತದೆ.ಈ ರೀತಿಯ ಅಮೂರ್ತ ರಂಗಕಲೆ ಜನಸಾಮಾನ್ಯರನ್ನೂ ಆಳವಾಗಿ ಮುಟ್ಟಬಲ್ಲದು ಎಂಬುದಕ್ಕೆ  ಆ ಸಂಜೆಯ ಪ್ರೇಕ್ಷಕ ಗೃಹದ ಎಡೆಬಿಡದ ಕರತಾಡನ ದ್ಯೋತಕವಾಗಿತ್ತು. ಈ ಕೃತಿ ವಿಲ್ಸನ್ನರ ಹಿಂದಿನ ಪ್ರಯೋಗಗಳ ಹಾಗೆ ವಿದ್ವಜ್ಜನ ಮನ್ನಣೆ ಪಡೆಯುವುದರ ಬಗ್ಗೆಯೂ ಅನುಮಾನವಿಲ್ಲ.ಆದರೆ ಸರ್ಕಾರ, ರಂಗಶಾಲೆಗಳು, ಅನುದಾನಗಳು, ಸಂಸ್ಥೆಗಳು-ಇವೆಲ್ಲವುಗಳ ಹೊರಗೆ ನಿಂತು ಕಲ್‌ಸ್ರೂಹೆ ಎಂಬ ಸಣ್ಣ ನಗರದಲ್ಲಿ ಸಣ್ಣ ಪ್ರಮಾಣದಲ್ಲಿ ಅತ್ಯಂತ ಅರ್ಥಪೂರ್ಣ ರಂಗಪ್ರಯೋಗ ಮಾಡುತ್ತಿರುವ ನನ್ನ ಆತ್ಮೀಯ ಗೆಳೆಯ ಥೋರ್ಸ್‌ಟನ್ ಕ್ರೇಲೋಸ್‌ಗೆ ಈ ರೀತಿಯ ರಂಗಭೂಮಿಯ ಬಗ್ಗೆ ಎಷ್ಟು ಗೌರವವಿದೆಯೋ ಅಷ್ಟೇ ಅನುಮಾನಗಳಿವೆ.ಕಾಫ್ಕಾನ ಪತ್ರಗಳ ಮತ್ತು ದಿನಚರಿಗಳ ಆಧಾರದ ಮೇಲೆ ಅತ್ಯಂತ ಜನಪ್ರಿಯವಾಗುತ್ತಿರುವ, ಈಗಾಗಲೇ ನೂರಕ್ಕೂ ಹೆಚ್ಚು ಪ್ರದರ್ಶನ ಕಂಡಿರುವ ನಾಟಕದ ನಿರ್ದೇಶಕನಾದ ಆತ ಹೀಗೆನ್ನುತ್ತಾನೆ:`ವಿಲ್ಸನ್ ಮಹಾನ್ ಗಟ್ಟಿಗನೆಂಬುದರ ಬಗ್ಗೆ ಎರಡು ಮಾತಿಲ್ಲ. ಆತ ನಮ್ಮೆಲ್ಲರಿಗೆ ದೊಡ್ಡ ಸವಾಲು. ಆದರೆ ಆ ರೀತಿಯ ಶ್ರೀಮಂತ ರಂಗಭೂಮಿಗೆ ಬರ್ಲಿನ್‌ನಂಥ ಮಹಾನಗರ ಬೇಕು, ಆನ್‌ಶ್ಯಾಂಬಲ್‌ನಂಥ ವ್ಯವಸ್ಥಿತ ಜಾಗ ಬೇಕು, ಅದನ್ನು ನಡೆಸುವುದಕ್ಕೆ ಸರ್ಕಾರದ ಅಥವಾ ದುಡ್ಡಿನ ದೊಡ್ಡಪ್ಪಗಳ ಲಕ್ಷಾಂತರ ಯೂರೋಗಳ ಅನುದಾನ ಬೇಕು.

 

ತರಬೇತಿ ಪಡೆದ ರಂಗಕರ್ಮಿಗಳ, ಮ್ಯಾನೇಜರುಗಳ, ಇತರ ಸಿಬ್ಬಂದಿ ವರ್ಗದ ಜಟಿಲ ವ್ಯವಸ್ಥೆ ಬೇಕು. ಇಷ್ಟೆಲ್ಲ ಆದ ಮೇಲೆ ರಂಗಭೂಮಿ ನಿಮ್ಮ ಬಾಲಿವುಡ್ ಸಿನಿಮಾದ ಹಾಗೆ ತನ್ನ ಕಲಾಸ್ವರೂಪವನ್ನು ತ್ಯಜಿಸಿ ಒಂದು ಬೃಹತ್ ಉದ್ಯಮದ ಸ್ವರೂಪವನ್ನು ಪಡೆಯುತ್ತದೆ.ಆದರೆ ರಂಗಭೂಮಿಯ ಶಕ್ತಿಯಿರುವುದು ಅದರ ಸರಳತೆ ಮತ್ತು ಸ್ವಾತಂತ್ರ್ಯಗಳಲ್ಲಿ. ಆ ಬೃಹತ್ ಉದ್ದಿಮೆಯ ಬೆಳವಣಿಗೆಯನ್ನು ಯಾರೂ ತಡೆಯಲಾಗುವುದಿಲ್ಲ.ಆದರೆ ಜನರ ನಡುವೆ ಹೋಗಿ ನಮ್ಮ ಸ್ವಾತಂತ್ರ್ಯವನ್ನು ಬಿಟ್ಟುಕೊಡದೆ ನಾಟಕವಾಡಿಸಬೇಕೆಂದುಕೊಂಡಿರುವ ನಮ್ಮಂಥ ಕಿರಿಯರು, ಸರ್ಕಾರ, ಅನುದಾನಗಳಿಂದ ದೂರ ಉಳಿದು ಹಾಸಿಗೆಯಿದ್ದಷ್ಟು ಕಾಲುಚಾಚುವ ನಮ್ಮಂಥ ಫಕೀರರು ಕ್ರಮಿಸಬೇಕಾದ ಹಾದಿ ಖಂಡಿತಾ ಅದಲ್ಲ.~ಈ ಬಗ್ಗೆ ನಾನೂ ಆಲೋಚಿಸುತ್ತಿದ್ದೇನೆ. ಕನ್ನಡಮ್ಮನ ಮಕ್ಕಳಾದ ನನ್ನ ಸರೀಕ ರಂಗಕರ್ಮಿಗಳೂ ಆಲೋಚಿಸುತ್ತಾರೆಂದು ಹಾರೈಸುತ್ತೇನೆ.

 (ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)

ಪ್ರತಿಕ್ರಿಯಿಸಿ (+)