ಭಾನುವಾರ, ಜೂನ್ 13, 2021
28 °C

ಸತಿ ಸುಲೋಚನಾ ನಡೆದ ಹಾದಿಯಲ್ಲಿ...

ಗಂಗಾಧರ ಮೊದಲಿಯಾರ್ Updated:

ಅಕ್ಷರ ಗಾತ್ರ : | |

ಸತಿ ಸುಲೋಚನಾ ನಡೆದ ಹಾದಿಯಲ್ಲಿ...

ಕನ್ನಡ ಚಿತ್ರರಂಗದ 78 ವರ್ಷಗಳ ಇತಿಹಾಸದಲ್ಲಿ ಇದುವರೆಗೆ ಮೂರುಸಾವಿರ ಚಿತ್ರಗಳು ತಯಾರಾಗಿವೆ. ಆದರೂ ಎಂಥ ಚಿತ್ರ ನಿರ್ಮಿಸಬೇಕು, ಪ್ರೇಕ್ಷಕನಿಗೆ ಎಂತಹ ಚಿತ್ರ ಬೇಕಾಗಿದೆ ಎನ್ನುವ ಮರ್ಮ ನಿರ್ಮಾಪಕರಿಗೆ ಇನ್ನೂ ಅರ್ಥವಾಗಿಲ್ಲವಂತೆ. ಚಿತ್ರವೊಂದು ಗ್ಯಾರಂಟಿ ಯಶಸ್ವಿಯಾಗುತ್ತೆ ಎನ್ನುವುದನ್ನು ಯಾರೂ ಖಚಿತವಾಗಿ ಹೇಳಲು ಆಗುವುದಿಲ್ಲ ಎಂದೇ ಎಲ್ಲರೂ ಹೇಳುತ್ತಾರೆ. ಕನ್ನಡದ ಮೊದಲ ವಾಕ್ಚಿತ್ರ `ಸತಿ ಸುಲೋಚನಾ~ ವನ್ನು ತಯಾರಿಸುವಾಗ ನಿರ್ಮಾಪಕರಿಗಾಗಲಿ, ನಿರ್ದೇಶಕರಿಗಾಗಲಿ ಯಾವ ಗೊಂದಲವೂ ಇರಲಿಲ್ಲ. ಆಗ ಜನ ನಾಟಕಗಳ ಚೌಕಟ್ಟಿನ ಕಥಾಸೂತ್ರಗಳಿಗೆ ಹೊಂದಿಕೊಂಡು ಬಿಟ್ಟಿದ್ದರು.

ರಂಗಭೂಮಿಯಲ್ಲಿಯಂತೆಯೇ ಸಿನಿಮಾದವರೂ ಮಹಾಕಾವ್ಯಗಳ ಉಪಕಥೆಗಳನ್ನೇ ಆಶ್ರಯಿಸುವುದು, ಆ ಮೂಲಕ ದೃಶ್ಯಮಾಧ್ಯಮದ ಪುಳಕವನ್ನು ಸೃಷ್ಟಿಸುವುದು ಅಭ್ಯಾಸವಾಗಿಬಿಟ್ಟಿತ್ತು. ಎಲ್ಲದರಲ್ಲೂ ಮೊದಲನೆಯದು ಎನ್ನುವ ದಾಖಲೆ ನಿರ್ಮಿಸುವ ಹಂಬಲವೂ ಇರಲಿಲ್ಲ.ಮಾರ್ಚ್ 3 ಬಂತೆಂದರೆ ಅದು ಕನ್ನಡದ ಮೊದಲ ವಾಕ್ಚಿತ್ರ ಬಿಡುಗಡೆಯಾದ ದಿನ ಎಂಬುದು ನೆನಪಾಗುತ್ತದೆ. 78 ವರ್ಷಗಳ ಹಿಂದೆ (1934) ಸುಮಾರು 40 ಸಾವಿರ ರೂಪಾಯಿ ವೆಚ್ಚದಲ್ಲಿ ತಯಾರಾದ ಕನ್ನಡದ ಮೊದಲ ವಾಕ್ಚಿತ್ರ ಆರುವಾರಗಳ ಕಾಲ ಯಶಸ್ವಿಯಾಗಿ ಪ್ರದರ್ಶನಗೊಂಡದ್ದು, ಕನ್ನಡ ಚಿತ್ರರಂಗದ ಉತ್ತಮ ಆರಂಭವಾಗಿಯೇ ಕಾಣುತ್ತದೆ. ಅಂದು ಅಲ್ಲಿ ಹಾಕಿಕೊಟ್ಟ ಸೂತ್ರವೇ 78 ವರ್ಷಗಳ ನಂತರವೂ ಚಾಲ್ತಿಯಲ್ಲಿದೆ. ಈಗ ಒಬ್ಬ ನಟನ ಸಂಭಾವನೆಯೇ 3 ಕೋಟಿ ಮೀರುತ್ತಿದೆ. ಚಿತ್ರನಿರ್ಮಾಣದ ವೆಚ್ಚ 7 ಕೋಟಿ ದಾಟುತ್ತಿದೆ. ಆದರೆ ಬಂಡವಾಳ ವಾಪಸು ಬರುವ ಬಗ್ಗೆ ಯಾರಿಗೂ ನಂಬಿಕೆಯಿಲ್ಲ. ಇಷ್ಟೆಲ್ಲಾ ಹಣ ಇದ್ದರೂ ಒಳ್ಳೆಯ ಕತೆ ಹೆಣೆಯಲು ಸಿನಿಮಾದವರಿಗೆ ಸಾಧ್ಯವಾಗುತ್ತಿಲ್ಲ.ಇವರಿಗೆ ಇಂದೂ `ಸತಿ ಸುಲೋಚನಾ~ ಹಾಕಿಕೊಟ್ಟ ಸೂತ್ರವೇ ನೆರವಾಗುತ್ತಿದೆ. ಮೊದಲ ವಾಕ್ಚಿತ್ರದ ನಾಯಕಿ ಸುಲೋಚನ ಪಡಬಾರದ ಪಾಡು ಪಡುತ್ತಾ ತೆರೆಯ ಮೇಲೆ ಕಣ್ಣೀರು ಸುರಿಸುತ್ತಾ ಸಹಗಮನ ಮಾಡುತ್ತಾಳೆ. ಆ ಪಾತ್ರದ ಜೊತೆ ಜನರೂ ಕಣ್ಣೀರು ಸುರಿಸುತ್ತಿದ್ದರಂತೆ. ಮುಂದೆ ಕನ್ನಡ ಚಿತ್ರರಂಗದಲ್ಲಿ ಕಣ್ಣೀರು ಗಲ್ಲಾಪೆಟ್ಟಿಗೆ ಸೂತ್ರವಾಗಿದ್ದು ಹೀಗೆ. ಅಲ್ಲದೆ ಒಂದು ಚಿತ್ರದ ನಾಡಿಮಿಡಿತವನ್ನು ಕಂಡುಕೊಂಡದ್ದೂ ಅಲ್ಲೇ.ಎ.ವಿ. ವರದಾಚಾರ್ಯರ `ರತ್ನಾವಳೀ ಥಿಯೇಟ್ರಿಕಲ್ ಕಂಪೆನಿ~ಯ ಮಿತ್ರರು `ವರದಾಚಾರ್ಯ ಮೆಮೋರಿಯಲ್ ಟ್ರಸ್ಟ್~ ನಿರ್ಮಿಸಿಕೊಂಡು 1933ರಲ್ಲಿ ವಾಕ್ಚಿತ್ರ ನಿರ್ಮಾಣಕ್ಕೆ ಮನಸ್ಸು ಮಾಡಿ `ಭಕ್ತ ಧ್ರುವ~ ಚಿತ್ರದ ನಿರ್ಮಾಣ ಕಾರ್ಯ ಆರಂಭಿಸಿದರು. ಅದೇ ಕಾಲಕ್ಕೆ ಎಂ.ವಿ. ಸುಬ್ಬಯ್ಯನಾಯ್ಡು ಹಾಗೂ ಅವರ ನಾಟಕ ತಂಡದಲ್ಲಿದ್ದವರನ್ನು ಅವಲಂಬಿಸಿ `ಸತಿ ಸುಲೋಚನ~ ವಾಕ್ಚಿತ್ರ ತಯಾರಿಕೆ ಆರಂಭಿಸಿತ್ತು. ಏಕಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಎರಡು ಪೌರಾಣಿಕ ಚಲನಚಿತ್ರಗಳು ತಯಾರಾಗಲಾರಂಭಿಸಿ ಕನ್ನಡ ವಾಕ್ಚಿತ್ರದ ಉದಯಕ್ಕೆ ನಾಂದಿ ಹಾಕುತ್ತಿದ್ದವು.`ಭಕ್ತ ಧ್ರುವ~ 1933ರಲ್ಲಿ ತಯಾರಿಕೆ ಆರಂಭಿಸಿ ಮೊದಲು ಸೆನ್ಸಾರ್ ಆಗಿದ್ದರೂ ಬಿಡುಗಡೆಯಾದದ್ದು 1934ರ ಏಪ್ರಿಲ್‌ನಲ್ಲಿ. ಇದಕ್ಕೆ ಮೊದಲೇ ಸೌತ್ ಇಂಡಿಯಾ ಮೂವಿಟೋನ್ ಲಾಂಛನದಲ್ಲಿ ತಯಾರಾದ `ಸತಿ ಸುಲೋಚನ~ ಮಾರ್ಚ್ 3, 1934ರಲ್ಲಿ ತೆರೆಕಂಡಿತು. ಆದ್ದರಿಂದಲೇ `ಸತಿ ಸುಲೋಚನ~ ಕನ್ನಡದ ಪ್ರಥಮ ವಾಕ್ಚಿತ್ರ ಎಂಬ ದಾಖಲೆ ಉಳಿಸಿಕೊಂಡಿತು. ಆದರೆ ಚಲನ ಚಿತ್ರರಂಗದ ಇತಿಹಾಸದಲ್ಲಿ ಈ ಎರಡೂ ಚಿತ್ರಗಳೂ ಮಹತ್ವ ಪಡೆಯುತ್ತವೆ. ಕನ್ನಡದ ವಾಕ್ಚಿತ್ರಕ್ಕೆ ನಾಂದಿ ಹಾಡಿದ 1934ನೇ ಇಸವಿಯಲ್ಲಿ ಬಿಡುಗಡೆಯಾದ ಈ ಎರಡೂ ಚಿತ್ರಗಳು ಕನ್ನಡ ಚಿತ್ರ ಇತಿಹಾಸಕ್ಕೆ ಹಲವಾರು ವರ್ಣಮಯ ಗರಿಗಳನ್ನು ಸೇರಿಸಿವೆ. `ಸತಿ ಸುಲೋಚನ~ದ ಬಿಡುಗಡೆಯೊಂದಿಗೆ ಕನ್ನಡ ಚಿತ್ರರಂಗ ಅಸ್ತಿತ್ವಕ್ಕೆ ಬಂದಿತು.ಕನ್ನಡದ ಪ್ರಥಮ ವಾಕ್ಚಿತ್ರ `ಸತಿ ಸುಲೋಚನ~ ತಯಾರಿಸಲು ಮುಂದಾದವರು ಉತ್ತರ ಭಾರತದ ವ್ಯಾಪಾರಸ್ಥ ಚಮನ್‌ಲಾಲ್ ಡೊಂಗಾಜಿ. ನಾಟಕಗಳಲ್ಲಿ ಅಭಿನಯಿಸುವಾಗಲೇ ಆರ್. ನಾಗೇಂದ್ರರಾವ್ ಅವರು ತಮಿಳು, ಹಿಂದಿ ಚಿತ್ರಗಳಲ್ಲಿ ಅಭಿನಯಿಸಿ ಹೆಸರು ಮಾಡಿದ್ದರು. `ಅಲಂ ಅರಾ~ ಬಿಡುಗಡೆಯಾದ ನಂತರವಂತೂ ಕನ್ನಡದಲ್ಲಿ ಒಂದು ವಾಕ್ಚಿತ್ರ ತಯಾರಿಸಬೇಕು ಎಂದು ಹಂಬಲಿಸಲಾರಂಭಿಸಿದರು. ಕೊನೆಗೆ ಬೆಂಗಳೂರಿನಲ್ಲಿ ವ್ಯಾಪಾರಿಗಳಾಗಿದ್ದ ಡೊಂಗಾಜಿ ಅವರು ಚಿತ್ರ ನಿರ್ಮಾಣಕ್ಕೆ ಮುಂದಾದಾಗ, ಒಂದೇ ನಾಟಕ ಮಂಡಳಿಯಲ್ಲಿದ್ದ ಸುಬ್ಬಯ್ಯನಾಯ್ಡು ಅವರಿಗೂ ಪಾತ್ರ ಕೊಡುವುದಾದರೆ ಮಾತ್ರ ಒಪ್ಪುತ್ತೇನೆ ಎಂದರು. ಡೊಂಗಾಜಿ ಅವರು ಒಪ್ಪಿದರು. ನಿರ್ದೇಶನದ ಹೊಣೆಯನ್ನು ವೈ.ವಿ. ರಾವ್ ಅವರಿಗೆ ವಹಿಸಲಾಯಿತು. ಆಂಧ್ರಪ್ರದೇಶದ ಯರಗುಡಪಾಟ ಊರಿನವರಾದ ವೈ.ವಿ. ರಾವ್ ಇದಕ್ಕೆ ಮುನ್ನವೇ `ಹರಿಮಾಯ~ ಸೇರಿದಂತೆ ಹಲವಾರು ಮೂಕಿ ಚಿತ್ರಗಳನ್ನು ನಿರ್ದೇಶಿಸಿದ್ದರು. ಹಾಗೂ ನಾಯಕ ನಟನಾಗಿಯೂ ಬೆಳೆದಿದ್ದರು. ಆನಂತರದ ದಿನದಲ್ಲಿ ವೈ.ವಿ. ರಾವ್ ನಿರ್ದೇಶಿಸಿದ್ದು ಎರಡು ಚಿತ್ರಗಳನ್ನು ಮಾತ್ರ. ಅವು `ಭಾಗ್ಯ ಚಕ್ರ~ (1956) ಹಾಗೂ `ನಾಗಾರ್ಜುನ~ (1961).ಅದುವರೆಗೆ ರಂಗಭೂಮಿಯಲ್ಲಿ ಪೌರಾಣಿಕ ನಾಟಕಗಳೇ ಹೆಚ್ಚು ಜನಪ್ರಿಯವಾಗಿದ್ದವು. ಅದೇ ಸೂತ್ರವನ್ನೇ ವಾಕ್ಚಿತ್ರಕ್ಕೂ ಅಳವಡಿಸಲು ನಿರ್ಧರಿಸಿದ ವೈ.ವಿ. ರಾವ್, ಆಗ ಜನಪ್ರಿಯವಾಗಿದ್ದ ಬೆಳ್ಳಾವೆ ನರಹರಿಶಾಸ್ತ್ರಿಗಳ `ಸತಿ ಸುಲೋಚನ~ ಅರ್ಥಾತ್ `ಇಂದ್ರಜಿತ್ ವಧೆ~ ಪೌರಾಣಿಕ ನಾಟಕವನ್ನೇ ಆಯ್ಕೆ ಮಾಡಿಕೊಂಡರು. ಕತೆ, ಸಂಭಾಷಣೆ, ಹಾಡುಗಳ ಜವಾಬ್ದಾರಿಯನ್ನು ನರಹರಿ ಶಾಸ್ತ್ರಿಗಳಿಗೇ ವಹಿಸಲಾಯಿತು. ಹೀಗಾಗಿ ಆಸ್ಥಾನ ವಿದ್ವಾನ್ ಬೆಳ್ಳಾವೆ ನರಹರಿ ಶಾಸ್ತ್ರಿಗಳು ಕನ್ನಡ ಚಿತ್ರರಂಗದ ಮೊದಲ ಕತೆಗಾರ, ಸಂಭಾಷಣೆ ರಚನೆಕಾರ, ಗೀತರಚನಕಾರರಾದರು.ತುಮಕೂರು ಜಿಲ್ಲೆಯ ಬೆಳ್ಳಾವೆ ಗ್ರಾಮದಲ್ಲಿ ಜನಿಸಿದ ನರಹರಿ ಶಾಸ್ತ್ರಿಗಳು ಬಡತನದಲ್ಲಿ ಹುಟ್ಟಿ ಬೆಳೆದರು. ಚಿಕ್ಕಂದಿನಿಂದಲೇ, ಗುಬ್ಬಿ ಚೆನ್ನಬಸವೇಶ್ವರ ಕೃಪಾಪೋಷಿತ ನಾಟಕ ಸಂಘ ಬೆಳ್ಳಾವೆಯಲ್ಲಿ ಪ್ರದರ್ಶಿಸಿದ್ದ `ಚೋರಕತೆ~ ಮತ್ತು `ಗುಲೇಬಕಾವಳಿ~ ಎಂಬ ನಾಟಕಗಳನ್ನು ಕಂಡು ನಾಟಕಗಳ ಬಗ್ಗೆ ಆಕರ್ಷಿತರಾಗಿದ್ದರು. 1921ರಲ್ಲಿ ಗುಬ್ಬಿ ನಾಟಕ ಮಂಡಲಿಯ ವೀರಣ್ಣನವರಿಗಾಗಿ `ಶ್ರೀ ಕೃಷ್ಣಲೀಲ~ ನಾಟಕ ರಚನೆ. ಅಲ್ಲಿಂದ ಮುಂದೆ, `ಕಂಸವಧ~, `ರುಕ್ಮಿಣೀ ಹರಣ~, `ಮಹಾತ್ಮ ಕಬೀರ್ ದಾಸ್~, `ಸಾಧು ತುಕಾರಾಂ~ ನಾಟಕಗಳನ್ನು ರಚಿಸಿದರು. `ಸದಾರಮೆ~ ಗುಬ್ಬಿ ಕಂಪೆನಿ ಹೆಸರನ್ನೂ ಪ್ರಸಿದ್ಧಿಗೊಳಿಸಿತು. ಒಟ್ಟು 44 ನಾಟಕಗಳನ್ನು ನರಹರಿ ಶಾಸ್ತ್ರಿಗಳು ರಚಿಸಿದ್ದಾರೆ.`ಸತಿ ಸುಲೋಚನ~ದಲ್ಲಿ ಇಂದ್ರಜಿತ್ ಪಾತ್ರ ವಹಿಸಿದ್ದ ಎಂ.ವಿ. ಸುಬ್ಬಯ್ಯನಾಯ್ಡು ಕನ್ನಡ ವಾಕ್ಚಿತ್ರದ ಮೊದಲ ಹೀರೋ. ರಾವಣನ ಪಾತ್ರದಲ್ಲಿ ಆರ್. ನಾಗೇಂದ್ರರಾವ್, ಸುಲೋಚನೆಯಾಗಿ ತ್ರಿಪುರಾಂಬ, ಮಂಡೋದರಿಯಾಗಿ ಮೂಕಿ ಚಿತ್ರಗಳ ಸ್ಟಾರ್ ಆಗಿದ್ದ ಲಕ್ಷ್ಮೀಬಾಯಿ, ನಾರದನಾಗಿ ಸಿ.ಟಿ. ಶೇಷಾಚಲಂ, ರಾಮನಾಗಿ ಸ್ವತಃ ನಿರ್ದೇಶಕ ವೈ.ವಿ. ರಾವ್ ನಟಿಸಿದ್ದರು. ಡಿ.ಎನ್.ಮೂರ್ತಿರಾವ್, ಕಮಲಾಬಾಯಿ ಮೊದಲಾದವರು ತಾರಾಗಣದಲ್ಲಿದ್ದರು.  ಈ ಮೊದಲ ವಾಕ್ಚಿತ್ರ ತಯಾರಿಕೆಗೆ ಮೂರು ತಿಂಗಳು ಹಿಡಿಯಿತು. ಸುಮಾರು ನಲವತ್ತು ಸಾವಿರ ರೂಪಾಯಿ ವೆಚ್ಚ ತಗುಲಿತು. ಚಿತ್ರದಲ್ಲಿ ಟ್ರಿಕ್‌ಶಾಟ್‌ಗಳನ್ನು ಅಳವಡಿಸಿದ್ದುದು ಹಾಗೂ ಯುದ್ಧದ ಸನ್ನಿವೇಶಕ್ಕೆ 2 ಸಾವಿರ ಜನರನ್ನು ಕಲೆ ಹಾಕಿದ್ದುದು ಮೊದಲ ವಾಕ್ಚಿತ್ರದ ಅದ್ದೂರಿತನಕ್ಕೆ ಕಾರಣವಾಗಿದ್ದವು.ಅಭಿನಯಿಸುವುದರ ಜತೆಗೆ ನಾಗೇಂದ್ರರಾವ್ ಅವರು ಮೊದಲ ವಾಕ್ಚಿತ್ರದ ಸಂಗೀತ ನಿರ್ದೇಶಕರೂ ಆಗಿದ್ದರು. ಮುಂಬೈನಲ್ಲಿ ಹಲವಾರು ಮೂಕಿ ಚಿತ್ರಗಳಲ್ಲಿ ಕೆಲಸ ಮಾಡಿದ್ದ ಹೆಸರಾಂತ ಹಾರ್ಮೋನಿಯಂ ವಾದಕ ಎಚ್ . ಆರ್. ಪದ್ಮನಾಭಶಾಸ್ತ್ರಿಗಳು ಸಹಾಯಕ ಸಂಗೀತ ನಿರ್ದೇಶಕರಾಗಿದ್ದರು. ನಾಗೇಂದ್ರರಾವ್ ಅವರು ಮುಂಬೈನಲ್ಲಿ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾಗ ಚಿತ್ರಗಳಿಗೆ ಸಂಗೀತ ನೀಡುವುದರ ಬಗ್ಗೆ ಅರಿತಿದ್ದರಿಂದ ಆಗಾಗ ಪದ್ಮನಾಭ ಶಾಸ್ತ್ರಿಯವರಿಗೆ ಸೂಚನೆಗಳನ್ನು ಕೊಡುತ್ತಿದ್ದರಂತೆ. ಇದನ್ನು ಗಮನಿಸಿದ ನಿರ್ಮಾಪಕರು ಅವರನ್ನೇ ಸಂಗೀತ ನಿರ್ದೇಶನಕ್ಕೆ ನೇಮಿಸಿ ಪದ್ಮನಾಭ ಶಾಸ್ತ್ರಿಯವರಿಗೆ ಕೇವಲ ಹಾರ್ಮೋನಿಯಂ ವಾದನದ ಕೆಲಸವನ್ನು ಮಾತ್ರ ವಹಿಸಿದರಂತೆ. ಹಿನ್ನೆಲೆಗಾಯನ ಪದ್ಧತಿಯೂ `ಸತಿ ಸುಲೋಚನ~ದಿಂದಲೇ ಆರಂಭ. ಲಕ್ಷ್ಮೀಬಾಯಿ, ತ್ರಿಪುರಾಂಬ, ಸುಬ್ಬಯ್ಯನಾಯ್ಡು, ನಾಗೇಂದ್ರರಾವ್ ಎಲ್ಲರಿಗೂ ಹಾಡುವುದು ರಂಗಭೂಮಿಯಿಂದಲೇ ಬಂದಿದ್ದರಿಂದ ಎಲ್ಲರೂ ಈ ಚಿತ್ರದಲ್ಲೂ ಹಾಡಿದರು. ಇದರಲ್ಲಿ ಒಟ್ಟು 16 ಹಾಡುಗಳಿದ್ದವು. ಕನ್ನಡ ಚಿತ್ರರಂಗದ ಮೊದಲ ಹಿನ್ನೆಲೆಗಾಯಕಿ ಲಕ್ಷ್ಮೀಬಾಯಿ. ಅವರು ಹಾಡಿದ ಮೊದಲ ಹಾಡು `ಭಲೇ ಭಲೇ ಪಾರ್ವತಿ ಬಲು ಚತುರೆ~, ಇದು ಅಂದು ಅತ್ಯಂತ ಜನಪ್ರಿಯ ಹಾಡು. ಇದು ಮೊಟ್ಟ ಮೊದಲ ಜನಪ್ರಿಯ ಚಿತ್ರಗೀತೆ.ಸುಮಾರು ಒಂದು ತಿಂಗಳು ರಿಹರ್ಸಲ್ ನಡೆಯಿತು. 1933ರ ಡಿಸೆಂಬರ್‌ನಲ್ಲಿ ಚಿತ್ರತಂಡ ರೈಲಿನಲ್ಲಿ ಕೊಲ್ಲಾಪುರಕ್ಕೆ ಪ್ರಯಾಣ ಮಾಡಿತು. ಅಲ್ಲಿನ `ಛತ್ರಪತಿ ಸಿನಿಟೋನ್~ ಸ್ಟುಡಿಯೋದಲ್ಲಿ ಚಿತ್ರ ನಿರ್ಮಾಣ ಕೆಲಸ ಪ್ರಾರಂಭವಾಯಿತು. ಯುದ್ಧದ ಸನ್ನಿವೇಶವಿರುವ ಚಿತ್ರಗಳ ತಯಾರಿಕೆಗೆ ಕೊಲ್ಲಾಪುರದ ಈ ಸ್ಟುಡಿಯೋ ಪ್ರಸಿದ್ಧವಾಗಿದ್ದರಿಂದ `ಸತಿ ಸುಲೋಚನಾ~ ಸಿನಿಮಾವನ್ನು ಕೊಲ್ಲಾಪುರದಲ್ಲಿ ತಯಾರಿಸಲು ನಿರ್ದೇಶಕ ವೈ.ವಿ. ರಾವ್ ನಿರ್ಧರಿಸಿದ್ದರು. ಮುಂಬೈ, ಕಲ್ಕತ್ತಗಳ ಸ್ಟುಡಿಯೋಗಳಿಗಿಂತ ಕೊಲ್ಲಾಪುರ ಸ್ಟುಡಿಯೋ ಬಾಡಿಗೆ ಕಡಿಮೆ ಇದ್ದುದೂ ಒಂದು ಕಾರಣ. ಚಿತ್ರ ಅರ್ಧದಷ್ಟು ಪೂರ್ತಿಯಾದರೂ ಸಹ ತಯಾರಕರು ಕಲಾವಿದರಿಗೆ ವಾಗ್ದಾನ ಮಾಡಿದ್ದಂತೆ ಸಂಭಾವನೆ ಕೊಡಲಿಲ್ಲ. ಆರ್‌ಎನ್‌ಆರ್, ಸುಬ್ಬಯ್ಯನಾಯ್ಡು ಮುಷ್ಕರ ಹೂಡಿದರು. ಬೇರೆ ಮಾರ್ಗವಿಲ್ಲದೆ ನಿರ್ಮಾಪಕರು ಹಣ ಕೊಟ್ಟರು.`ಸತಿ ಸುಲೋಚನ~ ಆರಂಭಿಸುವ ಮೊದಲೇ ಆರಂಭವಾಗಿದ್ದ `ಭಕ್ತ ಧ್ರುವ~ ಪಾಲುದಾರರ ನಡುವಿನ ಜಗಳದಿಂದ ಸ್ಥಗಿತಗೊಂಡಿತ್ತು. ಹೀಗಾಗಿ 1934ರ ಮಾರ್ಚ್ 3ರಂದು ಮೊಟ್ಟ ಮೊದಲ ವಾಕ್ಚಿತ್ರ ಬೆಂಗಳೂರು ಕೆ.ಆರ್. ಮಾರುಕಟ್ಟೆ ಮುಂದೆ ಇರುವ ಪ್ಯಾರಾಮೌಂಟ್ ಚಿತ್ರಮಂದಿರದಲ್ಲಿ ಬಿಡುಗಡೆಯಾಯಿತು. ಕುಸ್ತಿ, ನಾಟಕ ಹೀಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದ್ದ ಈ ದೊಡ್ಡಣ್ಣ ಹಾಲ್‌ಗೆ ಒಂದು ಬಿಳಿ ತೆರೆ ಅಳವಡಿಸಿ ಅದನ್ನು ಚಿತ್ರಮಂದಿರವನ್ನಾಗಿ ಪರಿವರ್ತಿಸಲಾಗಿತ್ತು. ಕಲಾಸಿಪಾಳ್ಯಂನಲ್ಲಿ 1905ರಲ್ಲಿ ಪ್ಯಾರಾಮೌಂಟ್ ಪ್ರಾರಂಭವಾಯಿತು. ಇದಕ್ಕೆ ಈ ಮುಂಚೆ `ಗಯಟಿ~ ಎನ್ನುವ ಹೆಸರಿತ್ತು. ಇದು ಕರ್ನಾಟಕದ ಮೊಟ್ಟ ಮೊದಲ ಚಿತ್ರಮಂದಿರ. ಶ್ರೇಷ್ಠ ದಾನಿ ದೊಡ್ಡಣ್ಣನವರ ಜಮೀನಿನಲ್ಲಿ ಆರಂಭವಾದ ಈ ಚಿತ್ರಮಂದಿರಕ್ಕೆ ಪ್ಯಾರಾಮೌಂಟ್ ಎಂಬ ಹೆಸರಿದ್ದರೂ ಕನ್ನಡಿಗರು ಅದನ್ನು ದೊಡ್ಡಣ್ಣ ಹಾಲ್ ಎಂದೇ ಕರೆಯುತ್ತಿದ್ದರು. ಈ ವಿಸ್ಮಯ ಕಾಣಲು ಹಳ್ಳಿಗಳ  ಜನ  ಎತ್ತಿನಗಾಡಿಗಳಲ್ಲಿ ಆಗಮಿಸುತ್ತಿದ್ದರು.ಕನ್ನಡದ ಮೊದಲ ವಾಕ್ಚಿತ್ರವನ್ನು ಪ್ರದರ್ಶಿಸಿದ ಕರ್ನಾಟಕದ ಪ್ರಥಮ ಚಿತ್ರಮಂದಿರ ಪ್ಯಾರಾಮೌಂಟ್ 70 ವರ್ಷ ಅಸ್ತಿತ್ವದಲ್ಲಿತ್ತು. 1974ರಲ್ಲಿ ಅದನ್ನು ನೆಲಸಮ ಮಾಡಿ ಅದೇ ಜಾಗದಲ್ಲಿ ಪರಿಮಳ ಮತ್ತು ಪ್ರದೀಪ್(ಮಿನಿ) ಎಂಬ ಎರಡು ಚಿತ್ರಮಂದಿರಗಳನ್ನು ನಿರ್ಮಿಸಲಾಯಿತು. ಈಗ ಅಪ್ಸರ ಚಿತ್ರಮಂದಿರದ ಮುಂದೆ ದೊಡ್ಡಣ್ಣ ಹಾಲ್ ಎಂಬ ಬೋರ್ಡ್ ಹಾಕಲಾಗಿದೆ. ಈಗ ಈ ಭಾಗದಿಂದ ಕನ್ನಡ ಚಿತ್ರಗಳ ಪ್ರದರ್ಶನವೇ ಮಾಯವಾಗಿದೆ. ಭಾರತದ ಮೊಟ್ಟಮೊದಲ ವಾಕ್ಚಿತ್ರ `ಅಲಂ ಅರಾ~ ಪ್ರದರ್ಶಿಸಿದ ಎಲ್ಜಿನ್ ಚಿತ್ರಮಂದಿರ ಬಂದ್ ಆಗಿದೆ. ಹಳೆಯ ನೆನಪುಗಳು ಬರೀ ನೆನಪುಗಳಾಗಿಯೇ ಉಳಿಯುತ್ತಿವೆ.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.