ಭಾನುವಾರ, ಮಾರ್ಚ್ 7, 2021
30 °C

ಸಪ್ತಸಿಂಧು, ದಶದಿಗಂತಗಳ ವ್ಯಸನ

ಎಚ್.ಎಸ್.ಶಿವಪ್ರಕಾಶ್ Updated:

ಅಕ್ಷರ ಗಾತ್ರ : | |

ಸಪ್ತಸಿಂಧು, ದಶದಿಗಂತಗಳ ವ್ಯಸನ

ಬಂಡವಾಳ  ಮತ್ತು ವಸಾಹತು ಯುಗ­ಗಳ ಮೊದಲ ಕಾಲದಿಂದ ಇಂದಿನ ತನಕ ಎರಡು ತುಡಿತಗಳು ಜಾಗತಿಕ ಬೆಳವಣಿ­ಗೆ­ಗಳನ್ನು ಪ್ರೇರೇಪಿಸಿವೆ.

ಮೊದಲನೆ­ಯದು ಸಪ್ತ­ಸಿಂಧು, ದಶದಿಗಂತಗಳನ್ನು ಏಕ ರೂಪೀ ಮಾರು­ಕಟ್ಟೆ ಮತ್ತು  ಮಿಲಿಟರಿ ಚೌಕಟ್ಟಿನೊಳಗೆ ಹಿಡಿ­ದಿಡ­­ಬೇಕೆಂಬ ದಮನಕಾರಿ ತೃಷ್ಣೆ. ಇದಕ್ಕೆ ಪ್ರಾಚೀನ ಮತ್ತು ಮಧ್ಯಯುಗೀಯ ಇತಿಹಾಸ ಗಳಲ್ಲಿ ಕೆಲವು ಪೂರ್ವ ಮಾದರಿಗಳಿದ್ದರೂ  ಈ ಪ್ರಕ್ರಿಯೆ ಮತ್ತು ಅದಕ್ಕಡರಿಕೊಂಡ ಸಿದ್ಧಾಂತ­ಗಳು ಕ್ರಮಬದ್ಧವಾಗಿ ರೂಪು ತಾಳಿದ್ದು ಪಡು­ವಣ ನಾಡುಗಳ ವಿಕಸನಯುಗದ–- ಅಂದರೆ ಸುಮಾರು ಹದಿಮೂರನೆಯ ಶತಮಾನದ- ಬಳಿಕ. ಸ್ಪರ್ಧೆ, ಬಲಪ್ರಯೋಗ, ಅತ್ಯಾಚಾರ ಮತ್ತು ಮಾನಸಿಕ ವಶೀಕರಣಗಳು ಈ ಸ್ವಾರ್ಥ­ಪರ ಪ್ರಯತ್ನಗಳ ಸಂಗಾತಿಗಳು.ಇದನ್ನು ಶಿಶು­ನಾಳ ಷರೀಫ ಸಾಹೇಬರು ‘ಜಿಟ್ಟೀಯ ಹುಳಗಳೆ­ದ್ದವು ನೋಡೋ ಇದು ಸೃಷ್ಟಿಯೊಳಗಿನ ಎಲ್ಲ ಅಸರಿಗೆ ಕೇಡೋ’ ಎಂದು ಕಾಲಜ್ಞಾನದ ನಿಗೂಢ ಭಾಷೆಯಲ್ಲಿ ಹೇಳಿದ್ದಾರೆ. ಪರಿಣಾಮ­ವಾಗಿ ಆಧುನಿಕ ಇತಿಹಾಸ ರಕ್ತ, ಸುಲಿಗೆ, ಲೂಟಿ, ಬಲಾತ್ಕಾರ, ವಿಚ್ಛಿದ್ರೀಕರಣಗಳ ಇತಿಹಾಸವಾಗಿ ಮಾರ್ಪಟ್ಟು  ನೆಲ-–ಜಲ-–ಬಾನುಗಳಲ್ಲಿ ಘೋರ­ನೈರಾಶ್ಯಗಳನ್ನು ಕವಿಸಿವೆ. ಇದರ ಮುಂದುವರಿದ ರೂಪವಾದ ಇಂದಿನ ಗೋಳೀಕರಣ, ದುರಂತ­ಗಳನ್ನು ಇನ್ನೂ ಕರಾಳಗೊಳಿಸುತ್ತಿದೆ.ಈ ಪ್ರವೃತ್ತಿಯ ಜೊತೆಗೆ ಹೊಂದಿಕೊಂಡಿ­ದ್ದರೂ ಇದಕ್ಕೆ ಪ್ರತಿಯಾಗಿರುವ ಇನ್ನೊಂದು ಪ್ರಕ್ರಿಯೆಯೂ ಈ ಅವಧಿಯಲ್ಲಿ ಉನ್ಮೇಷ­ಗೊಳ್ಳುತ್ತಿದೆ. ಇದು ಆಧುನಿಕ ಇತಿಹಾಸದ ಸೃಜನಾ­ತ್ಮಕ, ಸ್ವಾತಂತ್ರ್ಯಾತ್ಮಕ ಮತ್ತು ಇತ್ಯಾತ್ಮಕ ಆಯಾಮ. ಕಾಲದೇಶ ವಿವರಗಳಲ್ಲಿ ಚದುರಿ­ಹೋಗುವ, ಕಳೆದುಹೋಗುವ ಅನುಭವ ವೈವಿಧ್ಯ ಮತ್ತು ವೈರುಧ್ಯಗಳನ್ನು ಸುಂದರವಾದ, ಬಂಧುರ­ವಾದ ಲಯ–-ರೂಪಗಳಲ್ಲಿ ಕಟ್ಟಿ ಕೊಡು­ವುದು ಕಲೆ–-ಕಾವ್ಯಗಳ ಕರ್ತವ್ಯವಾಗಿ ರುವ ಕಾರಣ ಅದೇ ಸಮಯದಲ್ಲಿ ಈ ಪ್ರವೃತ್ತಿ ಸ್ವಾತಂತ್ರ್ಯ ಮತ್ತು ಪ್ರತಿಭೆಗಳ ಉದ್ಯೋಗವಾದ ಕಾರಣ ಈ ದಾರುಣಯುಗವನ್ನು ಇತರ ಬಿಡುಗಡೆಯ ಹರಿ­ಕಾರರ ಸಂಗಾತಿಗಳಾದ ಕಲಾಕರ್ಮಿಗಳು ಸೋಸಿ, ಬೆರೆಸಿ, ಕುದಿಸಿ ಹೊಸ ಪಾಕವನ್ನು ಸೃಷ್ಟಿ­ಸುವ ಅವಿರತ ಕಾರ್ಯವನ್ನು ಮಾಡುತ್ತಾ ಬಂದಿ­ದ್ದಾರೆ.ಯಾವುದೋ ಒಂದು ಅನಿವಾರ್ಯ ಕಣ­ದಲ್ಲಿ ಭೂಮ್ಯಾಕಾಶಗಳು ಎರಡು ಹೋಳು­ಗಳಾ­ದಾಗ ಇವನ್ನು ಕೂಡಿಸಲು ಮಂಟೇಸ್ವಾಮಿ ಜನ್ಮತಾಳಿದನೆಂದು ಹೇಳುತ್ತದೆ, ನಮ್ಮ ಭಾಷೆ-, ಸಂಸ್ಕೃತಿಗಳ ಹೆಮ್ಮೆಯ ಅಭಿವ್ಯಕ್ತಿಯಾಗಿರುವ ಮಂಟೇಸ್ವಾಮಿ ಕಾವ್ಯ. ಆದರೆ ಈ ಮಿಥಿಕವು ಕಲಾಕಾವ್ಯಕರ್ಮಿಗಳ ಸತತ ಪ್ರಯತ್ನದ ದ್ಯೋತ­ಕವೂ ಹೌದು.ವಿಚ್ಛಿದ್ರೀಕರಣಗಳ ನಡುವೆ ಜೀವೈಕ್ಯತೆಯನ್ನು ಕೊಂಡಾಡುವ, ವಿನಾಶದ ನಡುವೆ ಕರ್ತಾರ ಶಕ್ತಿ­ಯನ್ನು ಆಚರಿಸುವ ಕಲಾಕಾಯಕ ಮೇಲ್ಕಾ­ಣಿಸಿದ ವಿರುದ್ಧ ಪ್ರವೃತ್ತಿಗಳ ಸ್ಫೋಟಕ ಅಂತರ್‌­ವೈರುಧ್ಯಗಳನ್ನು, ಅವುಗಳು ತಂದುಹಾಕುವ ಅನಿರೀಕ್ಷಿತ ಅಡ್ಡಿ ಆತಂಕಗಳನ್ನು ಎದುರಿಸ­ಬೇಕಾದ್ದು ಅನಿವಾರ್ಯ. ಅಂದರೆ ಈ ಯುಗದ ಕಲೆಗೆ ಬೇಕಾದದ್ದು ಗತಿತಾರ್ಕಿಕ ಪ್ರತಿಭೆಯೇ ಹೊರತು ಸರಳರೂಪೀ ಸಮನ್ವಯೀಕರಣವಲ್ಲ, ಅಥವಾ ವಿಚ್ಛಿದ್ರೀಕರಣವನ್ನು ಮಾರುಕಟ್ಟೆ ಯುಗದ ಮತ್ತಿನಿಂದ ವಿಜೃಂಭಿಸುವ ಆಧುನಿ­ಕೋತ್ತರ ವಿಕಾರವೂ ಅಲ್ಲ. ಆಧುನಿಕ ವಿಶ್ವದ ಮೇರು­ಕೃತಿಗಳು ಉದಾಹರಣೆಗೆ ಸಿಜೇರ್ ವಹಾ­ಯೋನ ‘ಟ್ರಿಲ್ಸೆ’, ಪಿಕಾಸೋನ ‘ಗುಯೆರ್ನಿಕಾ’, ಬ್ರೆಕ್ಟ್‌ನ, ಷೋಯಿಂಕಾನ ಶ್ರೇಷ್ಠ­ತಮ ನಾಟಕಗಳು, ಕಾಫ್ಕಾ, ಸಿಂಗರ್‌, ಯೂಕಿಯೋ ಮಿಷಿಮಾನ ತಲ್ಲಣಕಾರಿ ಕಥನ­ಪ್ರತಿಭೆಗಳು– ಈ ಅಂತರ ವೈರುಧ್ಯಗಳನ್ನು ಗತಿ­ತಾರ್ಕಿಕ ಮತ್ತು ಪರಿವರ್ತನಾತ್ಮಕ ಪ್ರತಿಭಾ ದರ್ಶನ­ಗಳಲ್ಲಿ ಸೃಷ್ಟಿಸಿ ಮರುಸೃಷ್ಟಿಸುತ್ತವೆ.ಈ ಪ್ರವೃತ್ತಿ ಬಹುತೇಕ ಕರ್ತಾರರಲ್ಲಿ ಅಬೋಧ­ಪೂರ್ವವಾಗಿ ಕೆಲಸ ಮಾಡಿದರೆ ಎಲ್ಲೋ ಕೆಲವ­ರಲ್ಲಿ ಒಂದು ಪ್ರಜ್ಞಾಪೂರ್ವಕ ಸೃಜನ ಯಜ್ಞ­ವಾಗು­ತ್ತದೆ. ಅಂತಹ ಭಾರತೀಯ ಪ್ರತಿಭೆಗಳಲ್ಲಿ ಒಬ್ಬರು ಹಿರಿಯ ಬಂಗಾಳಿ ಕವಿ  ಆಲೋಕರಂಜನ ದಾಸಗುಪ್ತ.ಕಳೆದ ಎರಡು ವರ್ಷಗಳಿಂದ ಅವರ ಬಂಗಾಳಿ ಕಾವ್ಯದ ಕನ್ನಡಾನುವಾದದಲ್ಲಿ ತೊಡಗಿ ಈಗ ತಾನೆ ನಾನದನ್ನು ಪುಸ್ತಕರೂಪಕ್ಕೆ ತಯಾರು ಮಾಡು­ವಾಗ  ಮೇಲಿನ ವಿಚಾರಗಳು ನನ್ನ ಮನಸ್ಸಿನಲ್ಲಿ ಮೂಡತೊಡಗಿದವು.

ಕವಿ ಶಂಖಘೋಷರ ಹಾಗೆ ಆಲೋಕ­ರಂಜ­ನರು ಇಂದು ಬಂಗಾಳದ ಅತ್ಯಂತ ಹಿರಿಯ ಕಾವ್ಯ­ಪ್ರತಿಭೆಯೆಂದು ಗುರುತಿಸಲ್ಪಟ್ಟಿದ್ದಾರೆ. ಕಳೆದ ನಾಲ್ಕು ದಶಕಗಳಲ್ಲಿ ಅತ್ಯಂತ ಪ್ರಸಿದ್ಧ ಜೋಯ್ ಗೋಸ್ವಾಮಿಯವರನ್ನೂ ಒಳ­ಗೊಂಡು ಯಾವ ಉತ್ತಮ ಬರಹಗಾರನೂ ಆಲೋಕ­ರಂಜನರ ಪ್ರಭಾವಕ್ಕೆ ಹೊರತಾಗಿಲ್ಲ.೧೯೩೩ರಲ್ಲಿ ಕೋಲ್ಕತ್ತದಲ್ಲಿ ಜನಿಸಿದ ಆಲೋಕರಂಜನರ ತಂದೆ ತಾಯಿಗಳು ಆ ನಂತ­ರದ ಕೆಲವೇ ವರ್ಷಗಳಲ್ಲಿ ಬಾಂಬ್‌ ದಾಳಿಯ ಭೀತಿಯಿಂದ ಇಂದಿನ ಜಾರ್ಖಂಡ್‌ನಲ್ಲಿರುವ ರಿಖಯಾ ಎಂಬ ಆದಿವಾಸಿ ಪ್ರಧಾನ ಷಹರಿಗೆ ವಲಸೆ ಹೋದರು. ಅಲ್ಲಿ ಶಾಲಾ ಶಿಕ್ಷಣವನ್ನು ಶುರು ಮಾಡಿದ ಅವರು ಆ ನಂತರದ ದಿನಗಳಲ್ಲಿ ರವೀಂದ್ರನಾಥರ ಪ್ರಭಾವ ಇನ್ನೂ ಜೀವಂತ­ವಾಗಿದ್ದ ಶಾಂತಿನಿಕೇತನದಲ್ಲಿ ತಮ್ಮ ವಿದ್ಯಾಭ್ಯಾಸ ಮುಂದುವರಿಸಿದರು.ರಿಖಯಾದ ಎಳೆಯ ದಿನಗಳಲ್ಲಿ ಆಲೋಕರಂಜನರು ಆದಿವಾಸಿ ಸಂಸ್ಕೃ­ತಿಯ ದೇಸಿ ಅಂಶಗಳನ್ನು ಹೀರಿಕೊಂಡು ಶಾಂತಿ­ನಿಕೇತನದಲ್ಲಿ ರವೀಂದ್ರರ ವಿಶ್ವಾತ್ಮಕತೆಯನ್ನು ಮೈಗೂಡಿಸಿಕೊಂಡರು. ಈ ಎಲ್ಲದರ ನಡುವೆ ವಂಗ ಸಂಸ್ಕೃತಿ, ಕಥನ, ಕಾವ್ಯ, ಸಂಗೀತಗಳ ಗಣಿ­ಯಾಗಿದ್ದ ಅವರ ತಾಯಿ ಸದಾ ಅವರ ಮೊದಲ ಮತ್ತು ನಿರಂತರ ಗುರುವಾಗಿದ್ದರು. ತರುವಾಯ ಕೋಲ್ಕತ್ತದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ನೊಬೆಲ್ ಪುರಸ್ಕೃತ ಅಮರ್ತ್ಯ ಸೇನ್ ಮತ್ತು ಸಿನಿಮಾ ನಿರ್ದೇಶಕ ದುರ್ಗಾಪ್ರಸಾದರ ಸಹಪಾಠಿಯಾಗಿ, ಆಧುನಿಕ ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಯಾಗಿ ಅಂತರ ರಾಷ್ಟ್ರೀಯ ಆಧುನಿಕ ಕಲೆ ಮತ್ತು ಚಿಂತನೆ­ಗಳನ್ನು ಸೋಸಿ ಕುಡಿದರು. ಅವರು ಮೊದ­ಲಿಗೆ ನೌಕರಿ ಹಿಡಿದಿದ್ದು ಜಾಧವಪುರ ವಿಶ್ವವಿದ್ಯಾಲಯದಲ್ಲಿ, ತುಲನಾತ್ಮಕ ಸಾಹಿತ್ಯದ ಅಧ್ಯಾಪಕರಾಗಿ.ಎಳೆಯವಯಸ್ಸಿನಲ್ಲೇ ಕಾವ್ಯರಚನೆಗೆ ತೊಡ­-ಗಿದ ಅವರು ಪೂರ್ಣರೂಪೀ ಕವಿಯಾಗಿ ಸಾಹಿತ್ಯ­ ಕ್ಷೇತ್ರವನ್ನು ಪ್ರವೇಶಿಸಿದ್ದು ಐವತ್ತರ ದಶಕದಲ್ಲಿ. ಅದು ಬಂಗಾಳಿ ಸಾಹಿತ್ಯದಲ್ಲಿ ಹೊಸತರ ಅನ್ವೇ­ಷಣೆ ತೀವ್ರವಾಗಿ ನಡೆಯುತ್ತಿದ್ದ ಕಾಲ. ರವೀಂದ್ರ ಸರ್ವವ್ಯಾಪೀ ಪ್ರಭಾವಕ್ಕೆ ಒಳಗಾಗಿಯೂ ಬೇರೆ ರೀತಿಯ ಅಭಿವ್ಯಕ್ತಿಗಾಗಿ ಯುವಪ್ರತಿಭೆಗಳು ತುಡಿ­ಯುತ್ತಿದ್ದ ಕಾಲ. ಹೊಸಸಂವೇದನೆಗೆ ಅಭಿವ್ಯಕ್ತಿ­ಯಾಗಿ ‘ಕೃತ್ತಿವಾಸ’ ಎಂಬ ಶಿರೋನಾಮೆಯ ಕಾವ್ಯಾಂದೋಲನ ಪ್ರಾರಂಭವಾಯಿತು. ಆ ಯುಗದ ಹೆಸರಾಂತ ಬರಹಗಾರರಾದ­ ಶಕ್ತಿ ಚಟ್ಟೋಪಾಧ್ಯಾಯ, ಸುನೀಲ್ ಗಂಗೋ­ಪಾಧ್ಯಾಯ ಮುಂತಾದವರು ಚುಕ್ಕಾಣಿ ಹಿಡಿದಿದ್ದ ಈ ಆಂದೋಲನದಲ್ಲಿ ಆಲೋಕ­ರಂಜನರೂ ಸೇರಿಕೊಂಡರು. ಅವರ ಮೊದಲ ಕವಿತಾಸಂಗ್ರಹ ‘ಜೌಬೊನೇರ್ ಬೌಲ್’ ಅಚ್ಚಾಗಿ ಅಂದಿ­ನಿಂದ ಇಂದಿನವರೆಗೆ ಬಂಗಾಳಿಗಳ ಮನಸ್ಸಿ­ನಲ್ಲಿ ಅಚ್ಚಳಿಯದಂತೆ ಸ್ಥಾಪಿತವಾಯಿತು.ಅನಂತರದ ಅವಧಿಯಲ್ಲಿ ಇತರ ಹಲವು ಪದ್ಯ-–ಗದ್ಯ-–ಅನುವಾದ ಕೃತಿಗಳನ್ನು ಆಲೋಕ­ರಂಜನರು ರಚಿಸುತ್ತಾ ಹೋದರು. ಇವುಗಳಲ್ಲಿ ಮುಖ್ಯವಾದುದು ‘ಶೊಪ್ತೊಶಿಂಧು ದೋಶೋ ದಿಗೊಂತೊ’ (ಸಪ್ತಸಿಂಧು, ದಶದಿಗಂತ). ಅದು ಸಮಕಾಲೀನ ವಿಶ್ವಕಾವ್ಯದ ಅಗ್ಗಳ ಕವಿತೆಗಳ ಬಂಗಾಳಿ ಅನುವಾದ. ಶೊಖೋ ಘೋಷ್ ಮತ್ತು ಆಲೋಕರಂಜನರು ಇದನ್ನು ಒಟ್ಟಿಗೆ ಸೇರಿ ತಯಾರಿಸಿದರು. ಇನ್ನೊಂದು ಮುಖ್ಯ ಅನು­ವಾದ ಕೃತಿ ಸೊಫೊಕ್ಲಿಸನ ‘ಅಂತಿಗೊನೆ’ಯ ಬಂಗಾಳಿ ಅನುವಾದ.ಎಪ್ಪತ್ತರ ದಶಕದಲ್ಲಿ ಆಲೋಕರಂಜನರ ಕಾರ್ಯ­ಕ್ಷೇತ್ರ ಜರ್ಮನಿಗೆ ಸ್ಥಳಾಂತರವಾಯಿತು. ಹುಂಬೋಲ್ಟ್ ವಿದ್ವಾಂಸರಾಗಿ ಜರ್ಮನಿಗೆ ಕಾಲಿಟ್ಟ ಆಲೋಕರಂಜನರು ಆ ಬಳಿಕ ಹೈಡ­ಲ್ಬರ್ಗ್ ವಿಶ್ವವಿದ್ಯಾಲಯದ ದಕ್ಷಿಣ ಏಷ್ಯಾ ಸಂಸ್ಥೆ­ಯಲ್ಲಿ ಪ್ರಾಧ್ಯಾಪಕರಾದರು. ಈಗಾಗಲೇ ಜರ್ಮನ್ ಕಾವ್ಯವನ್ನು ಬಂಗಾಳಿಗೆ ತಂದಿದ್ದ ಆಲೋಕ­ರಂಜನರು ಭಾರತ-–ಜರ್ಮನಿಯ ಸಾಂಸ್ಕೃ­ತಿಕ ಮತ್ತು ಸಾಹಿತ್ಯಗಳ ಗಹನ ಅಧ್ಯ­ಯನದ ದ್ವಾರಾ ತಮ್ಮ ಪ್ರತಿಭೆ, -ವಿದ್ವತ್ತುಗಳನ್ನು ಪುನಾರಚಿಸತೊಡಗಿದರು. ಅವರ ‘ಟ್ಯಾಗೋರ್ ಅಂಡ್ ಗಯಟೆ’ ಅತ್ಯಂತ ತಲಸ್ಪರ್ಶಿಯಾದ ಭಾರತ ಮತ್ತು ಯೂರೋಪುಗಳ ಸಂಬಂಧದ ಅಧ್ಯಯನ.ಯೂರೋಪಿನ ರೊಮ್ಯಾಂಟಿಕ್ ಯುಗದ ಮಹಾನ್ ಪ್ರತಿಭೆಗಳಲ್ಲಿ ಒಬ್ಬನಾದ ಗಯಟೆ ‘ವಿಶ್ವಸಾಹಿತ್ಯ’ದ ಕನಸನ್ನು ಮುನ್ನೆಲೆಗೆ ತಂದ. ಈ ಕನಸಿಗೆ ಪ್ರೇರಕಶಕ್ತಿಯಾಗಿದ್ದು ಅನುವಾದಗಳ ಮೂಲಕ ಆತನಿಗೆ ಪರಿಚಯವಾದ ಭಾರತೀಯ ಸಾಹಿತ್ಯ ದರ್ಶನಗಳು– ವಿಶೇಷವಾಗಿ ಕಾಳಿದಾಸನ ‘ಶಕುಂತಲಾ’. ಆ ಬಗ್ಗೆ ಆತ ಒಂದು ಪ್ರಸಿದ್ಧ ಸಾನೆಟ್ಟನ್ನು ರಚಿಸಿದ.ಅದರಲ್ಲಿ ಹೀಗೆಂದ:

ನನ್ನ ಮನಸ್ಸನ್ನು ಮೋಡಿಯಿಂದ ಮುದ-­ಗೊಳಿಸಿ, ಸವಿಯೂಟವನುಣಿಸಿ, ಮನದಣಿಸಿದ ನೀನು ಎಳೆಯ ಸಂವತ್ಸರದ ಕುಸುಮಗಳನ್ನೂ ಸಂವ­ತ್ಸ­ರಾಂತದ ಫಲಗಳನ್ನೂ ­ನಿನ್ನೊಂದು ಹೆಸರಲ್ಲಿ ಹಿಡಿದಿಟ್ಟುರುವೆಯಾ ಶಕುಂತಲಾ?

ಪಶ್ಚಿಮದ ಜಗತ್ತು ವಂಚಿತವಾದ  ಸಾಧ್ಯತೆಗಳ ಒಂದು ಆದರ್ಶಲೋಕವಾಗಿ ಭಾರತವನ್ನು ಪರಿಕಲ್ಪಿಸಿಕೊಂಡ. ಆದರೆ ಮುಂದೆ ಆ ಕನಸು ಭಗ್ನವಾಯಿತು. ಆ ಆದರ್ಶಗಳ ತವರು ಪೂರ್ವದಲ್ಲಾಗಲೀ ಪಶ್ಚಿಮದಲ್ಲಾಗಲೀ ಇಲ್ಲವಾಗಿ ಅದನ್ನು ಸೋಲೊಪ್ಪದ ಕಲ್ಪನೆಯಲ್ಲಿ ರಚಿಸಿಕೊಳ್ಳಬೇಕೆಂಬ ನಿಲುವಿಗೆ ಬಂದು ತಲುಪಿದ.ಇದಕ್ಕೆ ಸಮಾನಾಂತರವಾದ ಯಾನವನ್ನು ರವೀಂದ್ರರೂ ಮಾಡಿದರು. ಯುದ್ಧಪೂರ್ವ ಯುಗದಲ್ಲಿ ರವೀಂದ್ರರು ಜರ್ಮನಿಯನ್ನು ಆದರ್ಶಗಳ ತವರಾಗಿ ಕಂಡರು. ವಿನಾಶಕ ಯುದ್ಧಗಳ, ಯಹೂದಿಗಳ ಸಾಮೂಹಿಕ ಯುದ್ಧಗಳ ಮುಂದಿನ ಇತಿಹಾಸ  ರವೀಂದ್ರರ ಈ ಕನಸನ್ನು ಒಡೆದುಹಾಕಿತು. ಆದರೂ ರವೀಂದ್ರರು ಜರ್ಮನಿಯಲ್ಲಿ ಬರೆಯಲು ಪ್ರಾರಂಭಿಸಿದ ಸಿನಿಮಾಕತೆ ಮುಂದೆ ಬಂಗಾಳಿಯಲ್ಲಿ ಒಂದು ಕಾವ್ಯಾತ್ಮಕ ಕಾದಂಬರಿಯಾಗಿ ಮೂಡಿ, ಅದರಲ್ಲಿ  ಅವರು ಜಗತ್‌ಪರಿವರ್ತಕವಾದ ದೇವಶಿಶುವಿನ ಜನನವನ್ನು ಕೊಂಡಾಡಿದರು.‘ಪಶ್ಚಿಮವೂ ಭಗವಂತನದು; ಪೂರ್ವವೂ ಭಗವಂತನದು’ ಅಂದಿದ್ದ ಗಯಟೆ ಹೀಗೂ ಹೇಳಿದ: ‘ಗೋಳದ ಉತ್ತರ ಮತ್ತು ದಕ್ಷಿಣ ಭಾಗಗಳ ಹಿಮವೆಲ್ಲ ಕರಗಿ ಭಗವಂತನ ಕೈಯಲ್ಲಿ ಒಂದು ಬಿಂದುವಾಗುತ್ತದೆ’.ಈ ದಾರ್ಶನಿಕ ಒಳನೋಟದ ಮುಂದುವರಿಕೆ ಯಾದ ವಿಶ್ವಾತ್ಮಕತೆ ರವೀಂದ್ರರ ಚಿಂತನೆಯ ಮೂಲಕ ಆಲೋಕರಂಜನರನ್ನು ಈಗಾಗಲೇ ಸೆಳೆದಿತ್ತು. ಅವರು ಜರ್ಮನಿಗೆ ಬಂದ ಹೊಸತರಲ್ಲಿ ಜರ್ಮನ್ ನೇತಾರ ವಿಲಿ ಬ್ರ್ಯಾಂಟ್ ಉತ್ತರ ಮತ್ತು ದಕ್ಷಿಣದ ದೇಶಗಳ ನಡುವಿನ ಸಂವಾದವನ್ನು ಚುರುಕುಗೊಳಿಸತೊಡಗಿದ್ದ.ಇದು ಆಲೋಕರಂಜನರ ಸಂವೇದನೆಗೆ ಹೊಸ ಮಗ್ಗುಲನ್ನು ನೀಡಿತು. ಆದರೆ ನಂತರದ ದಶಕಗಳಲ್ಲಿ ಮುಂದುವರಿದ ಶೀತಲಸಮರ, ಮಿಲಿಟರೀಕರಣ, ಹಿಂಸೆ, ನವಶೋಷಣಾ ಪದ್ಧತಿಗಳು ಸಂವಾದ ಮತ್ತು ಏಕತೆಗಳು ಅದೆಷ್ಟು ದುಸ್ತರವೆಂದು ಆಲೋಕರಂಜನರಿಗೆ ಮನವರಿಕೆ ಮಾಡಿಕೊಟ್ಟವು. ಅದೇ ಸಮಯದಲ್ಲಿ ಭಾರತಕ್ಕೆ ವಕ್ಕರಿಸಿದ ತುರ್ತುಪರಿಸ್ಥಿತಿ, ನಕ್ಸಲರ ಹತಾಶ ಹೋರಾಟಗಳು, ಕೆಲವರ ಸಬಲೀಕರಣ ಮತ್ತು ಹಲವರ ದಾರಿದ್ರೀಕರಣ ಆಲೋಕರಂಜನರ ವಿಶ್ವಾತ್ಮಕ ಕಾವ್ಯದ ತುಡಿತಕ್ಕೆ ಹೊಸ ಸವಾಲುಗಳನ್ನೆಸೆದವು.೮೪ರ ಹರೆಯದಲ್ಲಿ ಇನ್ನೂ ಸಕ್ರಿಯವಾಗಿ ಬರೆಯುತ್ತಿರುವ ಆಲೋಕರಂಜನರು ಈ ಸವಾಲುಗಳನ್ನು ಸ್ವೀಕರಿಸುತ್ತಾ ಗತಿತಾರ್ಕಕವಾಗಿ ನಿರ್ವಹಿಸುತ್ತಾ ಆ ಮೂಲಕ ಬಂಗಾಳಿ ಕಾವ್ಯದ ಭಾಷೆ-–ಬಂಧಗಳನ್ನು ನವೀಕರಿಸುತ್ತಾ ಬಂದಿದ್ದಾರೆ. ನಿವೃತ್ತರಾಗಿ ಜರ್ಮನಿಯಲ್ಲಿ ನೆಲೆಸಿದ್ದರೂ ತಾಯ್ನೆಲದಲ್ಲಿ ವರ್ಷದ ಅರ್ಧಭಾಗವನ್ನು ಕಳೆಯುತ್ತಾ ಶೋಷಿತ ಜನತೆ ಮೂಕವೇದನೆಗಳಿಗೆ ದನಿಗೊಡುತ್ತಾ ತಮ್ಮ ಅಪ್ರತಿಹತ ಸಂಘರ್ಷಾತ್ಮಕ ಆಶಾವಾದಿತ್ವವನ್ನು ಸಾಕಾರಗೊಳಿಸುತ್ತಾ ಬಂದಿದ್ದಾರೆ.ಯಥಾಸ್ಥಿತಿವಾದದ ಜೊತೆ ಎಂದೂ ರಾಜಿ ಮಾಡಿಕೊಳ್ಳದ ಅವರು ಎಮರ್ಜೆನ್ಸಿಯಲ್ಲಿ ಇಂದಿರಾ ಗಾಂಧಿ ಅವರು ಭಾಷಣ ನೀಡುತ್ತಿದ್ದಾಗ ‘ನಮ್ಮ ಬಾಯಿಗಳನ್ನು ಯಾಕೆ ಮುಚ್ಚುತ್ತಿದ್ದೀರ?’ ಎಂದು ಪ್ರತಿಭಟಿಸಿದ್ದರು. ಇತ್ತೀಚೆಗೆ ಪ್ರಭಾವೀ ಬರಹಗಾರರಾದ ಅವರನ್ನು ಮನವೊಲಿಸಲೆಂದು ಮಮತಾ ಬ್ಯಾನರ್ಜಿ ಕರೆಸಿದಾಗ ಆಲೋಕರಂಜನರು ಮುಲಾಜಿಲ್ಲದೆ ಹೇಳಿಬಿಟ್ಟರು: ‘ಏನೇ ಹೇಳಿ, ನಾನಂತೂ ಮಾರ್ಕ್ಸ್‌ವಾದಿಯೇ’.ಅವರ ಗತಿತಾರ್ಕಿಕ ಪ್ರತಿಭೆಯ ಕುರುಹಾಗಿ ಈ ಕವಿತೆಯನ್ನು ನೋಡಿ:ಅವ್ವ ಅಂದೊಂದು ದಿವಸ

ಬೆಟ್ಟದಿಕ್ಕಟ್ಟುಗಳ ದಾಟಿಸಿದಳು

ನನ್ನ ಕೈ ಹಿಡಿದು

ಆ ಹಸಿದ ದಾರಿ,

ಆ ತಲುಪಲಾಗದ ಗುರಿ;

ಕಡಗ-–ಕಂಕಣಗಳ ಏಮಾರಿಸಿ ಎಗರಿಸುವ

ಖತರನಾಕ್ ಜೇಬುಗಳ್ಳರ, ಸುಳ್ಳ-–ಖೂಳರ

ಆ ಭೀಕರ ಮೈದಾನ ದಾಟಿಸಿದಳು

ನನ್ನ ಕೈಹಿಡಿದು

ನಾನು ಇವತ್ತು ಈ ರಸ್ತೆಯಲ್ಲಿ ಅವ್ವನನ್ನು ದಾಟಿಸುತ್ತಿದ್ದೇನೆ

ಅವಳ ಕೈಹಿಡಿದು

ಅವ್ವ ಇವತ್ತು ನನ್ನ ಕೂಸು

ಚಾಲೂಕು ಕೈಯಿಂದ ನನ್ನ ನೆರೆಕೂದಲನ್ನು ಮರೆಮಾಡುತ್ತೇನೆ

ಚಾಕುವಿನಷ್ಟೇ ಚೂಪಾದ

ಕಾಮ–-ಕ್ರೋಧ–--ಮದ–-ಮೋಹಗಳ ವ್ಯಾಪಾರಗಾರರ

ಕುಟಿಲಹಾದಿಯನ್ನು ದಾಟಿಬರುತ್ತೇನೆ

ಅವ್ವನಿಗೆ ಇದೊಂದೂ ಗೊತ್ತಾಗುವುದಿಲ್ಲ

ಅವ್ವ ಇವತ್ತು ನನ್ನ ಕೂಸುನಿಮ್ಮ ಅನಿಸಿಕೆ ತಿಳಿಸಿ:

editpagefeedback@prajavani.co.in

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.