ಸೋಮವಾರ, ಮೇ 23, 2022
30 °C

ಸಾಂಸ್ಥಿಕ ಹೂಡಿಕೆದಾರರ ಪ್ರಭಾವ

ಕೆ. ಜಿ. ಕೃಪಾಲ್ Updated:

ಅಕ್ಷರ ಗಾತ್ರ : | |

ವೈವಿಧ್ಯಮಯ ಕಾರಣಗಳಿಂದಾಗಿ ಕಳೆದ ವಾರ ಮುಂಬೈ ಷೇರು ಪೇಟೆ ತೀವ್ರ ಒತ್ತ     ಡ ಎದುರಿಸಿತು. ವಿದೇಶಿ ವಿತ್ತೀಯ ಸಂಸ್ಥೆಗಳ ಚಟುವಟಿಕೆಯೂ ಸಹ ಮಾರಾಟದ ಹಾದಿಯಲ್ಲಿದ್ದವು. ಜಾಗತಿಕ ಪೇಟೆಗಳಲ್ಲಿನ ಅಸ್ಥಿರತೆ, ರೂಪಾಯಿ ಮೌಲ್ಯ ಕುಸಿತ, ಮುಂತಾದ ಕಾರಣಗಳು ಸೂಚ್ಯಂಕಗಳನ್ನು ಕುಸಿಯುವಂತೆ ಮಾಡಿದವು.ಸೋಮವಾರದಂದು ಭಾರತೀಯ ರಿಸ  ರ್ವ್ ಬ್ಯಾಂಕ್ ಪ್ರಕಟಿಸಬಹುದಾದ ಬ್ಯಾಂಕ್ ಬಡ್ಡಿ ದರವು ಈ ವಾರ ಸಂವೇದಿ ಸೂಚ್ಯಂಕವನ್ನು ಚುರುಕುಗೊಳಿಸಿ 16,949 ಪಾಯಿಂಟುಗಳಿಗೆ ಏರಿಕೆ ಕಂಡು 17 ಸಾವಿರದ ಗಡಿಯ ಹತ್ತಿರ ತಲುಪಿಸಿದೆ. ಹೆಚ್ಚಿನ ಕಂಪೆನಿಗಳು ತಮ್ಮ ಫಲಿತಾಂಶ ಹಾಗೂ ಲಾಭಾಂಶಗಳನ್ನು ಘೋಷಿಸಿ ಅವುಗಳಲ್ಲಿ ಕೆಲವು ಪುಸ್ತಕ ಮುಚ್ಚುವ ಪ್ರಕ್ರಿಯೆಯನ್ನು ಸಹ ನಡೆಸಿರುವುದರಿಂದ ಕಾರ್ಪೊರೇಟ್ ವಲಯದಲ್ಲಿ ಹೆಚ್ಚಿನ ಪ್ರಭಾವಿ ಬೆಳವಣಿಗೆಗಳು ಇಲ್ಲವಾಗಿದ್ದವು. ಬ್ಯಾಂಕ್ ಬಡ್ಡಿದರ ಇಳಿಕೆಯ ಅಂಶವೊಂದೇ ಕಾರಣದಿಂದ ಷೇರುಪೇಟೆಯ ಸೂಚ್ಯಂಕಗಳು ಏರಿಕೆ ಕಂಡಿವೆ ಎಂದು ಬಾಹ್ಯಕ್ಕೆ ಕಂಡರೂ, ಷೇರುಗಳ ಬೆಲೆಗಳು ತೀರಾ ಕೆಳಮಟ್ಟಕ್ಕೆ ಕುಸಿದು ಮೌಲ್ಯವರ್ಧಿತ ಕೊಳ್ಳುವಿಕೆಗೆ ಅವಕಾಶವಾಗಿದ್ದು, ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ತಮ್ಮ ದಿಶೆ ಬದಲಿಸಿ ಕೊಳ್ಳುವ ಪ್ರಕ್ರಿಯೆ ಆರಂಭಿಸಿದ್ದು ಹಲವಾರು ಭಾರಿ ಕಂಪೆನಿಗಳು ಏರಿಕೆ ಕಾಣುವಂತೆ ಮಾಡಿದರು. ಗುರುವಾರದಂದು ಟಾಟಾ ಮೋಟಾರ್ಸ್ ಕಂಪೆನಿಯ ಜಾಗತಿಕ ಮಾರಾಟವು ಬಾರಿ ಒತ್ತಡದಿಂದ ರೂ.226ರವರೆಗೂ ಕುಸಿಯಿತು. ಆದರೆ ಶುಕ್ರವಾರ ಪ್ರಕಟವಾದ ಆಕರ್ಷಕ ಜೆಎಲ್‌ಆರ್ ವಾಹನಗಳ ಮಾರಾಟ ನಿರೀಕ್ಷೆಗೂ ಮೀರಿದ ಕಾರಣ ಷೇರಿನ ಬೆಲೆಯು ಶೇ 6 ರಷ್ಟು ಏರಿಕೆ ಪಡೆದು ರೂ.240.05 ರಲ್ಲಿ ಅಂತ್ಯಗೊಂಡಿತು. ಇದು ಪೇಟೆಯಲ್ಲಿನ ಹರಿತ-ತ್ವರಿತದ ಬದಲಾವಣೆಗೆ ಹಿಡಿದ ಕನ್ನಡಿಯಾಗಿದೆ. ಒಟ್ಟಿನಲ್ಲಿ ಹಿಂದಿನ ವಾರ 230 ಅಂಶಗಳಷ್ಟು ಏರಿಕೆ ಕಂಡ ಸೂಚ್ಯಂಕ ತನ್ನೊಂದಿಗೆ ಕೆಳಮಧ್ಯಮ ಶ್ರೇಣಿ ಸೂಚ್ಯಂಕವನ್ನು 25 ಅಂಶಗಳಷ್ಟು ಏರಿಕೆ ಕಾಣುವಂತೆ ಮಾಡಿತು. ಆದರೆ, ಮಧ್ಯಮ ಶ್ರೇಣಿ ಸೂಚ್ಯಂಕ 29 ಅಂಶಗಳ್ಟು ಕುಸಿಯಿತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ರೂ.735 ಕೋಟಿ ಖರೀದಿ ಮಾಡಿದರೆ ಸ್ವದೇಶಿ ಸಾಂಸ್ಥಿಕ ಹೂಡಿಕೆದಾರರು  ರೂ.595 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿದರು. ಪೇಟೆಯ ಬಂಡವಾಳ ಮೌಲ್ಯವು ರೂ.59.76 ಲಕ್ಷ ಕೋಟಿಗೆ ಏರಿದೆ.ಬೋನಸ್ ಷೇರಿನ ವಿಚಾರ

*ಇನ್‌ಫೊ ಎಡ್ಜ್ (ಇಂಡಿಯಾ) ಲಿ. ಕಂಪೆನಿಯು ವಿತರಿಸಲಿರುವ 1:1ರ ಅನುಪಾತದ ಬೋನಸ್‌ಗೆ ಜೂನ್ 26 ನಿಗದಿತ ದಿನವಾಗಿದೆ.

*`ಟಿ~ ಗುಂಪಿನ 8-ಕೆ ಮೈಲ್ಸ್ ಸಾಪ್ಟ್‌ವೇರ್ ಸರ್ವಿಸಸ್ ಲಿ. ಕಂಪೆನಿ ವಿತರಿಸಲಿರುವ 2:3ರ ಅನುಪಾತದ ಬೋನಸ್‌ಗೆ 25ನೇ ಜೂನ್ ನಿಗದಿತ ದಿನವಾಗಿದೆ.

*ಆರೆಡ್ರಗ್ಸ್ ಅಂಡ್ ಫಾರ್ಮಸ್ಯುಟಿಕಲ್ಸ್ ಲಿ. ಕಂಪೆನಿ ವಿತರಿಸಲಿರುವ 1:5ರ ಅನುಪಾತದ ಬೋನಸ್ ಷೇರಿಗೆ 26ನೇ ಜೂನ್ ನಿಗದಿತ ದಿನ.ಲಾಭಾಂಶ ವಿಚಾರ

ಮುತ್ತೋಟ್ ಕ್ಯಾಪಿಟಲ್ ಶೇ 35 ಸಿಇಎಸ್‌ಸಿ ಲಿ. ಶೇ 50, ಶ್ರೀ ದಿನೇಶ್ ಮಿಲ್ಸ್ ಶೇ 20.ಮುಖಬೆಲೆ ಸೀಳಿಕೆ ವಿಚಾರ

ಟ್ರೆಂಡಿ ನಿಟ್‌ವೇರ್ ಲಿ. ಕಂಪೆನಿಯು ಜೂನ್ 18 ರಂದು ಷೇರಿನ ಮುಖಬೆಲೆ ಸೀಳಿಕೆ ವಿಚಾರ ಪರಿಶೀಲಿಸಲಿದೆ ಟೆಕ್ಸ್‌ಟೈಲ್ ವಲಯದ ಈ ಕಂಪೆನಿ `ಟಿ~ ಗುಂಪಿನಲ್ಲಿ ವಹಿವಾಟಾಗುತ್ತಿದೆ.ವಿಸ್ಮಯಕಾರಿ ವಹಿವಾಟು ಅಂಕಿ ಅಂಶ

ಷೇರುಪೇಟೆಯು ಎಂತಹ ವಾತಾವರಣದಲ್ಲಿದ್ದರೂ ಹಲವು ವಿಸ್ಮಯ ಮೂಡಿಸುವ ಚಟುವಟಿಕೆಗಳಿದ್ದೇ ಇರುತ್ತವೆ. ಕಳೆದ ಮಂಗಳವಾರದಂದು ಕೈಗಾರಿಕಾ ಉತ್ಪನ್ನ ಸೂಚ್ಯಂಕವು 0.1% ರಲ್ಲಿದೆ ಎಂಬ ಅಂಶವು ಮೂಲತಃ ಉತ್ತೇಜನಕಾರಿಯಾಗಿರುವುದಿಲ್ಲವಾದರೂ ಈ ಅಂಶವು ಬ್ಯಾಂಕ್ ಬಡ್ಡಿದರ ಇಳಿಕೆಗೆ ಪೂರಕವಾದ ಅಂಶವೆಂದು ಪೇಟೆಯಲ್ಲಿ ತೇಜಿ ವಾತಾವರಣ ಮೂಡಿಸಲಾಯಿತು.ಆದರೆ ಗುರುವಾರದಂದು ಪ್ರಕಟವಾದ ಹಣದುಬ್ಬರವು ಶೇ 7.23 ರಿಂದ ಮೇ ತಿಂಗಳಲ್ಲಿ ಶೇ 7.55ಕ್ಕೆ ಹೆಚ್ಚಾಗಿದ್ದು ಈ ಕಾರಣ ಸೂಚ್ಯಂಕವು 202 ಪಾಯಿಂಟುಗಳ ಇಳಿಕೆ ಕಂಡಿತು. ಈ ಬಾರಿ ಅಂಕಿ-ಅಂಶಗಳ ಪ್ರಭಾವಕ್ಕಿಂತ ಲಾಭದ ನಗದೀಕರಣಕ್ಕೆ ಹೆಚ್ಚಿನ ಪ್ರಾಶಸ್ತ್ಯವಿತ್ತು. ಬುಧವಾರದಂದು ಅಲ್ಫಾ ಟ್ರಾನ್ಸ್‌ಫರ‌್ಮರ್ ಕಂಪೆನಿಯು ಆರಂಭದಲ್ಲಿ ಶೇ 20 ರಷ್ಟರ ಏರಿಕೆ ದಾಖಲೆ ನಿರ್ಮಿಸಿತ್ತು. ಆ ಷೇರು ರೂ.20=40 ರಲ್ಲಿ ವಹಿವಾಟಾಗಿತ್ತು ಸೋಜಿಗವೆಂದರೆ ಆ ಸಂದರ್ಭದಲ್ಲಿ ರೂ.18 ರಲ್ಲಿ ಮಾರಾಟಗಾರರಿದ್ದು ರೂ.15/70ಕ್ಕೆ ಕೊಳ್ಳುವವರಿದ್ದರು. ಹೆಚ್ಚಿನ ಪರಿಶೀಲನೆಯಿಂದ ಲಭ್ಯವಾದ ಮಾಹಿತಿ ಎಂದರೆ ರೂ.20.40 ರಲ್ಲಿ ವಹಿವಾಟಾದ ಷೇರುಗಳ ಸಂಖ್ಯೆ ಕೇವಲ ಒಂದು ಷೇರು ಮಾತ್ರ.ಅದೇ ರೀತಿ ಶುಕ್ರವಾರದಂದು ವಹಿವಾಟು ಆರಂಭವಾಗುತ್ತಿದ್ದಂತೆ ಕೋಲ್ಕತ್ತಾದ ಚೇವಿಯಟ್ ಲಿ. ಕಂಪೆನಿಯು ರೂ.371.70 ರಲ್ಲಿ ವಹಿವಾಟಾಯಿತು ಇದು ಶೇ 18.36ರ ಏರಿಕೆ, ಹಿಂದಿನ ದಿನದ ದರಕ್ಕೆ ಹೋಲಿಸಿದಾಗ, ಪಡೆದಿತ್ತು. ಆ ಸಂದರ್ಭದಲ್ಲಿ ಈ ಷೇರಿಗೆ ರೂ. 315 ರಲ್ಲಿ ಕೊಳ್ಳುವವರಿದ್ದರು. ರೂ. 324 ರಲ್ಲಿ ಮಾರಾಟ ಮಾಡುವವರಿದ್ದರು. ರೂ.371.70 ರಲ್ಲಿ ವಹಿವಾಟಾದ ಸಂಖ್ಯೆ ಕೇವಲ 28 ಷೇರುಗಳು ಮಾತ್ರ. ನಂತರದ ವಹಿವಾಟು ರೂ.315.05 ರಲ್ಲಿ 50 ಷೇರುಗಳು ಕೈ ಬದಲಾದವು. ಆದ್ದರಿಂದ ಕೇವಲ ಅಂಕಿ-ಅಂಶಗಳನ್ನಾಧರಿಸಿ ನಿರ್ಧರಿಸುವುದಕ್ಕಿಂತ ಷೇರಿನ ಬೆಲೆಯ ಹಿಂದೆ ಅಡಕವಾಗಿರುವ ವಹಿವಾಟಾದ ಷೇರುಗಳನ್ನು ಗಮನಿಸಿ ದೃಢಪಡಿಸಿಕೊಂಡು ನಿರ್ಧರಿಸುವುದು ಅತ್ಯವಶ್ಯಕ ಅಂಕಿ ಅಂಶಗಳು ಕೇವಲ ದಾಖಲೆಗಾಗಿಯೇ ಹೊರತು ವಹಿವಾಟಿಗೆ ಉಪಯೋಗವಿಲ್ಲ.ಕಂಪೆನಿ ವಿಲೀನ ವಿಚಾರ

ಹೆಂಕೆಲ್ ಇಂಡಿಯಾ ಲಿ.ನ್ನು ಜ್ಯೋತಿ ಲ್ಯಾಬೊರೇಟರೀಸ್ ಲಿ.ನಲ್ಲಿ ವಿಲೀನಗೊಳಿಸಲು ಎರಡು ಕಂಪೆನಿಗಳು ಸಮ್ಮತಿಸಿವೆ. ಜ್ಯೋತಿ ಲ್ಯಾಬೋರೆಟರೀಸ್ ಕಂಪೆನಿಯು 1:1ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ. ಆದ ಕಾರಣ ಕಂಪೆನಿಯ ಷೇರುದಾರರು ಬೋನಸ್ ಷೇರು ವಿತರಿಸಲು ಸಮ್ಮತಿಸಿದರೆ ಪ್ರತಿ 4 ಹೆಂಕೆಲ್ ಇಂಡಿಯಾ ಷೇರಿಗೆ ಒಂದು ಜ್ಯೋತಿ ಲ್ಯಾಬೊರೇಟರೀಸ್ ಷೇರು ವಿತರಿಸಲಾಗುವುದು. ಒಂದು ವೇಳೆ ಬೋನಸ್ ಷೇರು ವಿತರಣೆಗೆ ಷೇರುದಾರರು ಒಪ್ಪಿಗೆ ನೀಡದೆ ಇದ್ದಲ್ಲಿ ಪ್ರತಿ 8 ಹೆಂಕೆಲ್ ಇಂಡಿಯಾ ಷೇರಿಗೆ ಒಂದರಂತೆ. ಜ್ಯೋತಿ ಲ್ಯಾಬೊರೆಟರೀಸ್ ಷೇರು ನೀಡಲಾಗುವುದು. ಅಂದರೆ ಹೆಂಕೆಲ್ ಇಂಡಿಯಾ ಷೇರುದಾರರಿಗೆ ಜ್ಯೋತಿ ಲ್ಯಾಬೊರೆಟರೀಸ್‌ನ ಬೋನಸ್ ಷೇರು ಲಭ್ಯವಾಗುವುದಿಲ್ಲ. ಜ್ಯೋತಿ ಲ್ಯಾಬೊರೆಟರೀಸ್ ಕಂಪೆನಿಯು ಹೆಂಕೆಲ್ ಇಂಡಿಯಾ ಕಂಪೆನಿಯ ಶೇ 83.66 ರಷ್ಟು ಷೇರನ್ನು ಹಾಗೂ ಸಂಪೂರ್ಣ ಆದ್ಯತೆಯ ಷೇರನ್ನು ಹೊಂದಿದೆ.

ವಾರದ ಪ್ರಶ್ನೆ
ಅರ್ಥವೇದ ಸ್ಟಾರ್ ಫಂಡ್ ಯೋಜನೆಯ ಬಗ್ಗೆ ದಯವಿಟ್ಟು ವಿವರಿಸಿ ಈ ಯೋಜನೆಯಡಿ ಹೂಡಬೇಕಾದ ಕನಿಷ್ಠ ಹಣವೇನು?ಉತ್ತರ: ಅರ್ಥವೇದ ಸ್ಟಾರ್ ಯೋಜನೆಯು ಗೃಹ ಸಾಲ ವಲಯದ ಪ್ರಮುಖ ಕಂಪೆನಿ ದಿವಾನ್ ಹೌಸಿಂಗ್ ಫೈನಾನ್ಸ್ ಲಿ. ಮಧ್ಯಮ ಆದಾಯದ ಸಮುದಾಯದವರಿಗೆ ಮನೆ ಒದಗಿಸುವ ದೃಷ್ಠಿಯಿಂದ ಸ್ಥಾಪಿತವಾದ ನಿಧಿಯಾಗಿದೆ. ಈ ನಿಧಿಯನ್ನು ಮಧ್ಯಮ ನಗರಗಳು, ದ್ವಿತೀಯ, ತೃತೀಯ ದರ್ಜೆಯ ಪಟ್ಟಣಗಳಲ್ಲಿನ ನಾಗರೀಕರಿಗೆ ವಸತಿಗಳನ್ನು ನಿರ್ಮಿಸುವ `ಬ್ಯುಲ್ಡರ್~ಗಳೊಂದಿಗೆ ಒಪ್ಪಂದ ಮಾಡಿಕೊಂಡು. ಕನಿಷ್ಠ ಶೇ 51 ರಿಂದ ಶೇ 75 ರವರೆಗೂ ಆ ಯೋಜನೆಯಲ್ಲಿ ತೊಡಗಿಸುವುದು. ಈ ಕಂಪೆನಿಯು ರೂ. 5 ಕೋಟಿಯಿಂದ ರೂ.20 ಕೋಟಿವರೆಗೂ ಪ್ರತಿಯೊಂದು ಯೋಜನೆಯಲ್ಲಿ ಹೂಡಿಕೆ ಮಾಡುವುದು. ಹೂಡಿಕೆಯ ಅವಧಿಯು ಸುಮಾರು 2 ರಿಂದ 3 ವರ್ಷಗಳವರೆಗೂ ಇದ್ದು ಮತ್ತೊಂದು ವರ್ಷ ವಿಸ್ತರಣೆಯೂ ಆಗಬಹುದು. ಅಲ್ಪ ಅಪಾಯದ ಹೂಡಿಕೆ ಅಧಿಕ ಇಳುವರಿ ಆಧಾರಿತ ಗ್ರಾಹಕ ಉಪಯೋಗ ಯೋಜನೆ ಇದಾಗಿದೆ. ಈ ನಿಧಿಯ ಗಾತ್ರವು ಸುಮಾರು ರೂ.200 ರಿಂದ ರೂ.300 ಕೋಟಿಯಾಗಿದೆ.ಈ ನಿಧಿಯಲ್ಲಿ ಸಾರ್ವಜನಿಕ ಹೂಡಿಕೆಗೂ ಅರ್ಥವೇದ ಸ್ಟಾರ್ ಅವಕಾಶ ಕಲ್ಪಿಸಿದೆ. ಇಲ್ಲಿ ಕನಿಷ್ಠ ರೂ.10 ಲಕ್ಷ ಒಮ್ಮೆಲೇ ಹೂಡಿಕೆ ಮಾಡಬಯಸಿದರೆ ಮೊದಲ ಕಂತಲ್ಲಿ ಶೇ 20 ರಷ್ಟು ಮತ್ತು ಮುಂದಿನ 3 ತಿಂಗಳ ಅವಧಿಯಲ್ಲಿ ಶೇ 40ರ ಎರಡು ಕಂತುಗಳಲ್ಲಿ ತೊಡಗಿಸಬಹುದಾಗಿದೆ  ಈ ನಿಧಿಯು ಇದುವರೆಗೂ 13 ಯೋಜನೆಗಳನ್ನು ಹೊಂದಿದ್ದು ಅದರಲ್ಲಿ 6 ಯೋಜನೆಗಳು ಪೂರ್ಣಗೊಂಡಿವೆಯಂತೆ. ಹೂಡಿಕೆದಾರರಿಗೆ ಶೇ 20 ರಿಂದ ಶೇ 45 ರಷ್ಟು ಲಾಭದ ಇಳುವರಿಯಾಗಿದೆ ಎಂದು ಕಂಪೆನಿ ತಿಳಿಸಿದೆ.ಇದುವರೆಗೆ 8 ಕೋಟಿ ರೂಪಾಯಿಗಳ ಅಸಲು ಹಣವನ್ನು ಹಿಂತಿರುಗಿಸಿದ್ದು, ರೂ.34 ಕೋಟಿಯಷ್ಟು ಲಾಭವನ್ನು ಹಂಚಿದೆಯಂತೆ. ಸದ್ಯ ಈ ನಿಧಿಯು 93 ಕೋಟಿ ಹಣ ಹೂಡಿಕೆಯಿಂದ ರೂ.133 ಕೋಟಿ ಪೇಟೆ ಮೌಲ್ಯದ ಹೂಡಿಕೆ ಹೊಂದಿದೆ. ಶೇ 2 ರಷ್ಟು ತ್ರೈಮಾಸಿಕ ನಿರ್ವಹಣಾ ಶುಲ್ಕ ಹಾಗೂ ಶೇ 2 ರಷ್ಟರ ಪ್ರವೇಶ ಶುಲ್ಕವನ್ನು ಸಹ ವಿಧಿಸಲಾಗುವುದು. ಈ ಅರ್ಥವೇದ ಸ್ಟಾರ್ ಯೋಜನೆಯು ಸೆಬಿ ನೋಂದಾಯಿತ ವೆಂಚರ್ ಕ್ಯಾಪಿಟಲ್ ಫಂಡ್ (ಡಿ.ಎಚ್.ಎಫ್.ಎಲ್. ವೆಂಚರ್ ಕ್ಯಾಪಿಟಲ್ ಟ್ರಸ್ಟ್) ಇದಾಗಿದೆ. ಹೂಡಿಕೆ ಮಾಡುವ ಮುನ್ನ ಸಂಪೂರ್ಣ ವಿವರಗಳನ್ನು ತಿಳಿದು ಹೂಡಿಕೆ ಮಾಡಿರಿ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.