ಶನಿವಾರ, ಮೇ 8, 2021
27 °C

ಸಾಹಿತ್ಯ ಪರಿಷತ್ತು ಮತ್ತು ಕನ್ನಡದ ಭವಿಷ್ಯ

ಎಚ್.ಎಸ್.ಶಿವಪ್ರಕಾಶ್ Updated:

ಅಕ್ಷರ ಗಾತ್ರ : | |

ಕೆಲವು ದಿವಸಗಳ ಹಿಂದೆ ಜರ್ಮನಿಯ ರೊಮಾನಿ ಭಾಷಿಕರ ಅಧ್ಯಾಪಕ ಸಂಘದವರು ನನ್ನನ್ನು ನೋಡಲು ಬಂದಿದ್ದರು. ಆ ಭಾಷಿಕರು ಮೂಲತಃ ಇಂಡೋ-ಆರ್ಯನ್ ಭಾಷಾ ಗುಂಪಿಗೆ ಸೇರಿದವರು.

 

`ಮತ್ತೆ ಭಾರತದೊಂದಿಗೆ ಸಂಬಂಧ ಬೆಳೆಸುವುದು ಹೇಗೆ~ ಎಂದು ಚರ್ಚಿಸಲು ಅವರು ಬಂದಿದ್ದರು. ಅವರ ಮೂಲ ನೆಲೆ ಪಂಜಾಬ್, ಹರಿಯಾಣಾ ಮತ್ತು ರಾಜಸ್ತಾನ ಮುಂತಾದ ಉತ್ತರ ಭಾರತದ ಎಡೆಗಳು. ಶತಮಾನಗಳ ಹಿಂದೆ ಅವರು ತಮ್ಮ ಮೂಲಬೀಡಿನಿಂದ ಪಶ್ಚಿಮದ ಕಡೆ ವಲಸೆ ಹೊರಟು ಪಾಕಿಸ್ತಾನ, ಆಫ್ಘಾನಿಸ್ತಾನ, ಸ್ಲೊವೇನಿಯಾ, ಸರ್ಬಿಯಾ, ಹಂಗೆರಿ, ಜರ್ಮನಿ, ಫಿನ್‌ಲ್ಯಾಂಡ್, ನಾರ್ವೆ, ಸ್ವೀಡನ್ ಮುಂತಾದ ಪ್ರದೇಶಗಳಲ್ಲಿ ನೆಲೆಸಿದರು. ಇಂದಿಗೂ ಅವರ ಭಾಷೆಗೆ ಲಿಪಿಯಿಲ್ಲ.ತಾವು ನೆಲೆಸಿದ ದೇಶಗಳ ಲಿಪಿಗಳನ್ನೇ ಬಳಸಿ ಹೇರಳ ಸಾಹಿತ್ಯ ರಚನೆ ಮಾಡಿದ್ದಾರೆ. ಅಲ್ಲದೆ, ಅತ್ಯಂತ ಶ್ರೀಮಂತವಾದ ಮೌಖಿಕ ಸಾಹಿತ್ಯ ಪರಂಪರೆಗಳನ್ನೂ ಸೃಷ್ಟಿಸಿದ್ದಾರೆ. ದೂರದೂರದ ಪ್ರದೇಶಗಳಲ್ಲಿ ಹರಿದು ಹಂಚಿ ಹೋಗಿರುವ ರೊಮಾನಿ ಭಾಷಿಕರು ಆಯಾ ಪ್ರಾದೇಶಿಕ ಭಾಷೆಗಳ ಪ್ರಭಾವದಿಂದಾಗಿ ಹಲವು ಉಪಭಾಷಾ ಪ್ರಬೇಧಗಳನ್ನು ಮಾಡಿಕೊಂಡಿದ್ದರೂ ಬೇರೆ ಬೇರೆ ಪ್ರಾದೇಶಿಕ ಗುಂಪುಗಳು ತಮ್ಮ ಸಾಮಾನ್ಯ ಭಾಷೆಯ ಮೂಲಕ ಪರಸ್ಪರ ಸಂವಹನವನ್ನು ಇನ್ನೂ ಉಳಿಸಿಕೊಂಡಿದ್ದಾರೆ.

 

ತಾವು ನೆಲೆಸಿದ ನಾಡುಗಳ ಭಾಷೆಗಳನ್ನು ವ್ಯವಹಾರಕ್ಕೋಸುಗ ಸ್ಥಳೀಯ ಭಾಷೆಗಳನ್ನು ಕಲಿತರೂ ತಮ್ಮ ಭಾಷೆಯನ್ನು ಇನ್ನೂ ಮರೆಯದೆ ಜೋಪಾನವಾಗಿ ಕಾಪಾಡಿಕೊಂಡು ಬಂದಿರುವುದು ಒಂದು ಅಚ್ಚರಿ ಮತ್ತು ಸಾಧನೆ.ಈ ಜನಾಂಗದವರು ಸ್ಥಳೀಯ ಪ್ರಭಾವಗಳಿಗೆ ಸಿಕ್ಕು ಕೆಲವರು ಕ್ರೈಸ್ತಧರ್ಮಕ್ಕೆ, ಕೆಲವರು ಇಸ್ಲಾಂಗೆ ಮತಪರಿವರ್ತನೆ ಹೊಂದಿದ್ದಾರೆ. ಇತ್ತೀಚೆಗೆ ಧರ್ಮವಿರಹಿತರ ಸಂಖ್ಯೆ ಆಧುನಿಕ ಪ್ರಭಾವದಿಂದ ಹೆಚ್ಚುತ್ತಿದೆಯಂತೆ. ಈ ಜನಾಂಗದವರನ್ನು ಕಟ್ಟಿ ಹಿಡಿದಿರುವ ಸೂತ್ರವೆಂದರೆ ಭಾಷೆಯೊಂದೇ.ವಿದೇಶಗಳಿಗೆ ಇತ್ತೀಚೆಗೆ ಬಂದು ನೆಲೆಸಿರುವ ನಮ್ಮ ಕನ್ನಡಮ್ಮನ ಮಕ್ಕಳಿಗೆ ಈ ತೆರನ ಭಾಷಾಭಿಮಾನ ಏಕಿಲ್ಲ ಎಂಬ ಪ್ರಶ್ನೆ ನನ್ನನ್ನು ಕಾಡತೊಡಗಿತು. ಜೊತೆಗೆ ಇನ್ನೊಂದು ಪ್ರಶ್ನೆ: ಚರಿತ್ರೆಯಲ್ಲಿ ಸದಾ ವಿಭಜಕವಾಗಿರುವ ಜಾತಿ, ಧರ್ಮಗಳನ್ನು ಅವುಗಳ ಪಾಡಿಗೆ ಬಿಟ್ಟು ಕನ್ನಡಭಾಷೆಯೊಂದನ್ನೇ ಸಮಸ್ತ ಕನ್ನಡಿಗರನ್ನು ಒಟ್ಟುಗೂಡಿಸುವ ಶಕ್ತಿಯನ್ನಾಗಿ ಮಾಡಿಕೊಳ್ಳಬಹುದೆ?ಮೊದಲ ಪ್ರಶ್ನೆಗೆ ಮೊದಲು ಎರಡನೆಯದನ್ನು ಎತ್ತಿಕೊಳ್ಳೋಣ. ಭಾಷೆಗಳೇ ಜನಸಮುದಾಯಗಳ ಏಕತಾ ಸೂತ್ರಗಳಾದುದಕ್ಕೆ ಇತಿಹಾಸದಲ್ಲಿ ಉದಾಹರಣೆಗಳಿವೆ.

`ಸಿಲಪ್ಪದಿಗಾರಂ~ ಪ್ರಕಾರ ಸನಾತನ ತಮಿಳು ಸಂಸ್ಕೃತಿಯ ಬೀಡಾದ ಪೂಹಾರ್ ನಗರದಲ್ಲಿ ಶೈವ, ವೈಷ್ಣವ, ಬೌದ್ಧ, ಜೈನ, ಗ್ರೀಕ್ ಮತ್ತು ರೋಮನ್ ಧರ್ಮಗಳು ಸಮಾನಾಂತರವಾಗಿ ಬಾಳುತ್ತಿದ್ದವು.ಆದರೆ ಜನರ ನಡುವಿನ ಏಕತಾಸೂತ್ರವಾಗಿದ್ದು ಭಾಷೆಯೊಂದೇ. ಸನಾತನಯುಗದ ತಮಿಳು ಸಮಾಜದ ಉದ್ದಕ್ಕೂ ಇಡೀ ತಮಿಳಹಂ ಅನ್ನು ಮೂವೇಂದರ್ (ಚೋಳ, ಪಾಂಡ್ಯ, ಚೇರರು) ಆಳುತ್ತಿದ್ದರು. ಅಂದರೆ ರಾಜಕೀಯ ಏಕತೆ ಇರಲಿಲ್ಲ.  ಎಲ್ಲ ಪ್ರದೇಶಗಳ ತಮಿಳು ಭಾಷಿಕರಿಗೆ ಸಾಮಾನ್ಯವಾಗಿದ್ದುದು ಭಾಷಿಕ ಸಂಸ್ಕೃತಿಯೊಂದೇ.

 

ಚೀನಾದ ಇತಿಹಾಸದಲ್ಲಿ ಆ ವಿಶಾಲ ಭೂವಲಯವನ್ನು ಒಟ್ಟಿಗಿರಿಸುವುದರಲ್ಲಿ ಭಾಷೆಯ ಪಾತ್ರ ಅತ್ಯಂತ ಮಿಗಿಲಾದುದು. ಇವತ್ತು ಇಂಗ್ಲಿಷ್ ಭಾಷೆ ಜಗತ್ತಿನ ಎಲ್ಲ ಪ್ರದೇಶಗಳನ್ನು ಒಗ್ಗೂಡಿಸುವಲ್ಲಿ ತನಗಿಂತ ವ್ಯಾಪಕವಾದ ಇತರ ಭಾಷೆಗಳನ್ನು ಹಿಂದೆ ಹಾಕಿದೆ. ಆದರೆ ಇಂಗ್ಲಿಷ್ ನೀಡುತ್ತಿರುವುದು ಭಾಷಿಕ ಏಕತೆಯನ್ನೇ ಹೊರತು ರಾಜಕೀಯ, ಧಾರ್ಮಿಕ, ಸೈದ್ಧಾಂತಿಕ ಏಕತೆಯನ್ನಲ್ಲ.

 

ಕನ್ನಡನಾಡಿನಲ್ಲಿ ಆಡಲಾಗುತ್ತಿರುವ ಇತರ ಭಾಷೆಗಳನ್ನು ಬಗ್ಗುಬಡಿಯದೆ, ಧರ್ಮಗಳ ಪರಸ್ಪರ ವೈಷಮ್ಯವನ್ನು ಕೆರಳಿಸದೆ, ಸರ್ವ ಜನಾಂಗದ ಶಾಂತಿಯ ತೋಟವಾದ ಕರ್ನಾಟಕದಲ್ಲಿ ಸಹಸ್ರಮಾನಕ್ಕಿಂತ ದೀರ್ಘ ಇತಿಹಾಸವುಳ್ಳ ಕನ್ನಡ ಭಾಷಿಕ ಸಂಸ್ಕೃತಿಯನ್ನು ಸಜ್ಜುಮಾಡಲು ಸಾಧ್ಯವಿರಲೇಬೇಕು.ಕನ್ನಡ ನವೋದಯದ ಪಿತಾಮಹರ ಕನಸೂ ಇದೇ ಆಗಿತ್ತು. ಅಂದು ಆಂಗ್ಲೀಕರಣದ ಅಪಾಯದ ನಡುವೆ ಕನ್ನಡಿಗರನ್ನು ಕನ್ನಡ ಒಗ್ಗೂಡಿಸಿತು. ಇಂದು ಗೋಳೀಕರಣದ ಸಂದಿಗ್ಧದಲ್ಲಿ ಕನ್ನಡದ ಮೂಲಕ ಕನ್ನಡಿಗರಿಗೆ ಒಂದು ಸಾಮಾನ್ಯ ವರ್ತಮಾನ, ಭವಿಷ್ಯಗಳನ್ನು ರೂಪಿಸಬೇಕಾಗಿದೆ.ಈಗ ಇದರ ಜೊತೆಗೆ ತಳುಕು ಹಾಕಿಕೊಂಡಿರುವ ಮೊದಲ ಪ್ರಶ್ನೆಗೆ ಬರೋಣ. ಇದು ಕನ್ನಡಾಭಿಮಾನದ ಪ್ರಶ್ನೆ. ನವೋದಯ ಕಾಲದಲ್ಲಿ ವಸಾಹತುಶಾಹಿ ವಿರೋಧದ ಜರೂರಿ ಕನ್ನಡಾಭಿಮಾನಕ್ಕೆ ವಸ್ತುನಿಷ್ಠ ಬುನಾದಿಯಾಗಿತ್ತು.ಮುಂದೆ ಅರುವತ್ತು ಎಪ್ಪತ್ತರ ದಶಕಗಳಲ್ಲಿ ಕನ್ನಡಪರ ಹೋರಾಟಗಳು ಸುರುವಾದಾಗ ಇನ್ನೊಂದು ರೀತಿಯ ಆಧಾರವಿತ್ತು. ಕನ್ನಡಿಗರು ಕನ್ನಡನಾಡಿನಲ್ಲಿ ತಲೆಯೆತ್ತಿ ನಡೆಯಲಾಗದ ಒಂದು ವಿಚಿತ್ರ ಸನ್ನಿವೇಶದಲ್ಲಿ ಆ ಬೆಳವಣಿಗೆಗಳಾದವು. ಹಿಂದಿನ ವಸ್ತುನಿಷ್ಠ ಕಾರಣಗಳು ಇಂದು ಪ್ರಸ್ತುತವಲ್ಲ.ಇಂದು ಕನ್ನಡ ಭಾಷಿಕರನ್ನು ಕಾಡುತ್ತಿರುವ ಪೀಡೆಗಳು ಎರಡು ತೆರನವು. ಮೊದಲನೆಯದು ಗೋಳೀಕರಣ ಈಯುತ್ತಿರುವ ಸಪಾಟು ಮಾರ್ಕೆಟ್ ಸಂಸ್ಕೃತಿ. ಇನ್ನೊಂದು, ಮೊದಲಿನಿಂದಲೂ ಇದ್ದು ಕಳೆದೆರಡು ದಶಕಗಳ ನಮ್ಮ ಜೀವಂತ ಚರಿತ್ರೆಯಲ್ಲಿ ಕನ್ನಡ ಸಮುದಾಯವನ್ನು ಚೂರುಚೂರು ಮಾಡುತ್ತಿರುವ ಮತ, ಧರ್ಮ, ಜಾತಿ, ಉಪಜಾತಿಗಳ ವೈಷಮ್ಯ. ಇಂತಹ ಸಂದರ್ಭದಲ್ಲಿ ಧರ್ಮನಿರಪೇಕ್ಷತೆಯ ಬುನಾದಿಯನ್ನು ಒಂದು ವೈಚಾರಿಕ ಶೂನ್ಯಾವಕಾಶದಲ್ಲಿ ನಿಲ್ಲಿಸುವ ಬದಲು ಸರ್ವಧರ್ಮಗಳ ಸುಂದರ ತೋಟವಾಗಿರುವ ಕನ್ನಡ ಭಾಷಿಕ-ಸಾಹಿತ್ಯಿಕ ಸಂಸ್ಕೃತಿಯ ಮೇಲೆ ಯಾಕೆ ನಿಲ್ಲಿಸಬಾರದು?ಮೇಲಿನ ಎರಡು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವಲ್ಲಿ ಕನ್ನಡ ಪರವಾದ ಸಂಸ್ಥೆಗಳ, ಸಂಘಟನೆಗಳ ಮತ್ತು ಸಮಸ್ತ ಕನ್ನಡಿಗರ ಸಹಕಾರ ಅನಿವಾರ್ಯ. ಕನ್ನಡ ಪ್ರಾಧಿಕಾರ, ಅಕಡೆಮಿಗಳು, ಸಂಘಟನೆಗಳು, ವಿಶ್ವವಿದ್ಯಾಲಯಗಳ ಕನ್ನಡ ವಿಭಾಗಗಳು ಎಲ್ಲವೂ ಈ ಮಹತ್ಕಾರ್ಯದ ಬೇರೆಬೇರೆ ಆಯಾಮಗಳಲ್ಲಿ ತೊಡಗಿಸಿಕೊಂಡಿವೆಯಾದರೂ ಈ ಎಲ್ಲ ಪ್ರಯತ್ನಗಳನ್ನು ಒಗ್ಗೂಡಿಸಿ ಪರಸ್ಪರ ಪೂರಕವಾಗಿಸುವ ಇಂದಿನ ಸಮಗ್ರ ದರ್ಶನವೊಂದರ, ಸಮಗ್ರ ಕಾರ್ಯಪ್ರಣಾಳಿಯೊಂದರ ಅಗತ್ಯವಿದೆ.ಜೊತೆಗೆ ಹಲವು ಸಂಸ್ಥೆಗಳ ಪ್ರಯತ್ನಗಳನ್ನು ಕ್ರೋಡೀಕರಿಸುವ ಕನ್ನಡಪರ ಸಂಸ್ಥೆಯೊಂದು ಬೇಕಾಗುತ್ತದೆ.ಈಗ ಮತ್ತೊಂದು ಚುನಾವಣೆಗೆ ಸಜ್ಜಾಗುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತು ಎಲ್ಲ ಕನ್ನಡಪರ ಚಿಂತನೆಗಳ, ಪ್ರಯತ್ನಗಳ, ಕಾರ್ಯಕ್ರಮಗಳ ಒಕ್ಕೂಟವಾಗಿ ಕಾರ್ಯ ನಿರ್ವಹಣೆ ಮಾಡುವ ಸಾಧ್ಯತೆಗಳನ್ನು ಹೊಂದಿದೆ.ಕನ್ನಡ ಸಾಹಿತ್ಯ ಪರಿಷತ್ತು ಸುರುವಾಗಿದ್ದು ಹಲವು ಭಾಷಿಕ ಪ್ರದೇಶಗಳಲ್ಲಿ ಹಂಚಿಹೋಗಿದ್ದ ಸಮಸ್ತ ಕನ್ನಡಿಗರನ್ನು ಒಗ್ಗೂಡಿಸುವ ಉದ್ದೇಶದಿಂದಲೇ. ಕನ್ನಡಿಗರು ಹೇಗೆ ಹರಿದು ಹಂಚಿ ಹೋಗಿದ್ದರೆಂಬುದರ ಬಗ್ಗೆ ಕವಿ ಕೆ. ಎಸ್ ನರಸಿಂಹಸ್ವಾಮಿಯವರ ಒಂದು ಕವಿತೆ ನನಗೆ ನೆನಪಾಗುತ್ತಿದೆ. ಬಹುಶಃ ಈ ಕವಿತೆ ಅವರ ಸಮಗ್ರಕಾವ್ಯದಲ್ಲಿ  ಬಂದಿಲ್ಲ.ನನ್ನ ಶಾಲಾದಿನಗಳಲ್ಲಿ ಪುಟ್ಟಣ್ಣಶೆಟ್ಟಿ ಟೌನ್‌ಹಾಲಿನಲ್ಲಿ ಕರ್ನಾಟಕ ಸರ್ಕಾರದವರು ಏರ್ಪಡಿಸಿದ್ದ ರಾಜ್ಯೋತ್ಸವ ಕವಿ ಸಮ್ಮೇಳನದಲ್ಲಿ ಕೆ. ಎಸ್. ನ ಅವರು ಈ ಕವಿತೆಯನ್ನು ಓದಿದ್ದು ನನಗೆ ಸ್ಪಷ್ಟವಾಗಿ ನೆನಪಿದೆ. ಆಗ ಬೇರೆ ಯಾವ ಕವಿಗಳಿದ್ದರು ಎಂಬುದು ನೆನಪಾಗುತ್ತಿಲ್ಲ. ಆ ಕವಿತೆಯ ಮೊದಲ ಸಾಲುಗಳು ಹೀಗಿದ್ದವು:ಒಬ್ಬನ ಜೇಬಿನಲ್ಲಿ,

ಒಬ್ಬನ ಒಳ ಅಂಗಿಯಲ್ಲಿ,

ಇನ್ನೊಬ್ಬನ ಕೋಟಿನಲ್ಲಿ

ಹಂಚಿದ್ದ ಕರ್ನಾಟಕ ಒಂದಾಯಿತು.ಇತರ ಕವಿಗಳು ಓದಿದ್ದ ವೈಭವೀಕರಣಗಳ ನಡುವೆ ಕೆ ಎಸ್ ನ ಅವರ ಸಹಜೋಕ್ತಿ ಕೇಳುಗರಿಂದ ಅಪಾರ ಕರತಾಡನವನ್ನು ಪಡೆದು, ಕವಿಗಳು ಆ ಸಾಲನ್ನು ಕೇಳುಗರ ಅಪೇಕ್ಷೆಯ ಮೇರೆಗೆ ಇನ್ನೊಮ್ಮೆ ಓದುವಂತೆ ಮಾಡಿತು.ಮೋಕ್ಷಗುಂಡಂ ವಿಶ್ವೇಶ್ವರಯ್ಯ, ನಾಲ್ವಡಿ ಕೃಷ್ಣರಾಜ ಒಡೆಯರ್ ಮುಂತಾದವರ ಸ್ಫೂರ್ತಿ, ಚಿಂತನೆ ಮತ್ತು ಪ್ರಯತ್ನಗಳಿಂದ ಸಣ್ಣದಾಗಿ ಉಗಮವಾದ ಈ ಸಂಸ್ಥೆ ಈಗ ಕನ್ನಡಿಗರ ಬಹುದೊಡ್ಡ ಸಂಸ್ಥೆಯಾಗಿ ಬೆಳೆದು ನಿಂತಿದೆ.            ಬಿ ಎಂ ಶ್ರೀ, ಎ. ಎನ್.ಮೂರ್ತಿರಾವ್, ಕರ್ಪೂರ ಶ್ರೀನಿವಾಸ ರಾವ್, ಬಿ. ಶಿವಮೂರ್ತಿಶಾಸ್ತ್ರಿ, ಗೋಪಾಲಕೃಷ್ಣರಾವ್, ಪ್ರೊ.ಎಲ್.ಎಸ್. ಶೇಷಗಿರಿರಾವ್, ಎನ್. ಬಸವಾರಾದ್ಯ,          ಜಿ. ನಾರಾಯಣ, ಜಿ. ವೆಂಕಟಸುಬ್ಬಯ್ಯ,     ಪ್ರೊ. ಜಿ. ಎಸ್. ಸಿದ್ಧಲಿಂಗಯ್ಯ, ಗೊ.ರು.ಚ, ಚಂಪಾ ಮುಂತಾದ ಹಲವು ಗಣ್ಯರು ಈ ಸಂಸ್ಥೆಯನ್ನು ಉಪಾಧ್ಯಕ್ಷರಾಗಿ ಅಧ್ಯಕ್ಷರಾಗಿ, ಕಾರ್ಯದರ್ಶಿಗಳಾಗಿ ಹಲವು ದಿಶೆಗಳಲ್ಲಿ ಬೆಳೆಸಿದ್ದಾರೆ.ಪರಿಷತ್ತು ತನ್ನ ಹಲವು ಸಾಧನೆಗಳ ಪಥದಲ್ಲಿ ಆಗಾಗ ತಪ್ಪುಹಾದಿಗಳಲ್ಲಿ ಹೆಜ್ಜೆಯಿಟ್ಟಿದ್ದೂ ಇತಿಹಾಸದ ಒಂದು ಭಾಗ. ಜಾತೀಯತೆಯ ಆಪಾದನೆಗಳು ಕೇಳಿಬಂದಿವೆ. ಯಾವ ಜಾತಿಯ ಎಷ್ಟು ಮಂದಿ ಸದಸ್ಯರಿದ್ದಾರೆ ಎಂಬುದು ಕೆಲವು ಸಲ ಚುನಾವಣೆಯ ನಿರ್ಣಯವನ್ನು ನೀಡಿದೆ. ಹಣಕಾಸಿನ ಅವ್ಯವಹಾರದ ದೂರು ಕೇಳಿಬಂದಿದೆ.ಒಮ್ಮೆ ಕರ್ನಾಟಕ ಸರ್ಕಾರ ಆಡಳಿತಾಧಿಕಾರಿಯನ್ನು ನೇಮಿಸಿದ ಘಟನೆಯೂ ನಮ್ಮ ಮುಂದಿದೆ. ಈಗಂತೂ ಪರಿಷತ್ತಿನ ಚುನಾವಣೆ ಒಂದು ವಿಧಾನಸಭಾ ಚುನಾವಣೆಯ ಸ್ವರೂಪವನ್ನು ಪಡೆದಿದೆ ಎಂದು ದೂರಲಾಗುತ್ತಿದೆ. ಹೇಳಲಾಗುತ್ತದೆ. ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆ ಯಾವಾಗಲೂ ಸಾಹಿತ್ಯಿಕ ಅರ್ಹತೆಯ ಆಧಾರದ ಮೇಲೆ ನಡೆಯುವುದಿಲ್ಲ ಎಂಬುದು ಹಲವರ ಅಂಬೋಣ.ಆದರೆ ಈ ಎಲ್ಲಾ ದುರದೃಷ್ಟಕರ ಬೆಳವಣಿಗೆಗಳ ನಡುವೆಯೂ ಪರಿಷತ್ತು ಕನ್ನಡದ ಏಳಿಗೆಗಾಗಿ ಮೀಸಲಾಗಿರುವ ಬಹುದೊಡ್ಡ ಸಂಸ್ಥೆಯಾಗಿದೆಯೆಂಬುದನ್ನು ಮರೆಯಲಾಗುವುದಿಲ್ಲ.ಹಲವು ಘಟ್ಟಗಳ ಶ್ರೀಮಂತ ಕನ್ನಡ ಸಾಹಿತ್ಯದ ಅನರ್ಘ್ಯ ರತ್ನಗಳನ್ನು ಎಲ್ಲರಿಗೂ ಎಟಕುವ ಬೆಲೆಯಲ್ಲಿ ಪ್ರಕಟಿಸಿದ್ದು, ಕನ್ನಡಿಯಲ್ಲಿನ ಗಂಟಾಗಿದ್ದ ಕನ್ನಡ ನಿಘಂಟನ್ನು ಸಾಧ್ಯ ಮಾಡಿದ್ದು, ಕನ್ನಡ ಪರೀಕ್ಷೆಗಳನ್ನು ನಡೆಸಿದ್ದೂ ಸಂಶೋಧನೆಗೆ ಕುಮ್ಮಕ್ಕು ಕೊಟ್ಟಿದ್ದು, ಕನ್ನಡ ಪ್ರೇಮಕ್ಕೆ ಸಾರ್ವಜನಿಕರ ನಡುವೆ ಒಂದು ಸಾಂಸ್ಥಿಕ ರೂಪು ನೀಡಿದ್ದು ಪರಿಷತ್ತಿನ ಮುಖ್ಯ ಸಾಧನೆಗಳಾಗಿವೆ.ಇಷ್ಟಾದರೂ ಪರಿಷತ್ತು ಕನ್ನಡದ ಇಂದಿನ ಅಗತ್ಯಗಳಿಗೆ ಎಚ್ಚೆತ್ತುಕೊಳ್ಳದಿದ್ದರೆ ಅದು ಪೋಷಿಸುತ್ತಿರುವ ಕನ್ನಡಾಭಿಮಾನ, ಕನ್ನಡೋತ್ಸಾಹ ಕೇವಲ ಔಪಚಾರಿಕವಾಗುವ ಅಪಾಯವಿದೆ. ಉತ್ಸಾಹದ ಜೊತೆಗೆ ಸದಭಿರುಚಿಯ ನಿರ್ಮಾಣವೂ ಪರಿಷತ್ತಿನ ಮುಖ್ಯ ಧ್ಯೇಯವೆಂಬುದನ್ನು ಮರೆಯಲಾಗದು.

 

ಅಲ್ಲದೆ ಕರ್ನಾಟಕದಲ್ಲೇ ಕುಗ್ಗುತ್ತಿರುವ ಕನ್ನಡ ಬಳಕೆಗೆ ಹೊಸ ವಿಸ್ತಾರವನ್ನು ನೀಡುವ ಸಮರ್ಥ ಯೋಜನೆಗಳನ್ನು ತರಬೇಕಾಗಿದೆ. ಕೇವಲ ಭಾವುಕವಲ್ಲದ, ನೇತ್ಯಾತ್ಮಕವಲ್ಲದ, ಇತರ ಭಾಷೆಗಳನ್ನು ವಿರೋಧಿಸದ, ತನ್ನ ಭಾಷೆಯನ್ನು ಬಿಟ್ಟುಕೊಡದ ಹೊಸ ಕನ್ನಡಾಭಿಮಾನವನ್ನು ಬೆಳೆಸಬೇಕಾಗಿದೆ. ಶಿಕ್ಷಣದ ಎಲ್ಲ ಹಂತಗಳಲ್ಲಿ ಕನ್ನಡ ಮಾಧ್ಯಮವನ್ನು ಜಾರಿಗೊಳಿಸುವ ಅದೇ ಸಮಯದಲ್ಲಿ ಇಂದು ಅತ್ಯಗತ್ಯವಾಗಿರುವ ಇಂಗ್ಲಿಷನ್ನೂ ಕಲಿಸುವ ವ್ಯವಸ್ಥೆಯಾಗಬೇಕಾಗಿದೆ.ಕವಿರಾಜ ಮಾರ್ಗಕಾರನ ಕಾಲದಲ್ಲಿ ಕನ್ನಡದ ಸೀಮೆ ಕಾವೇರಿ-ಗೋದಾವರಿಗಳ ನಡುವೆ ಸೀಮಿತವಾಗಿತ್ತು. ಆದರೆ ಆಧುನಿಕ ಕಾಲದಲ್ಲಿ ಕರ್ನಾಟಕ ಕನ್ನಡಿಗರ ಮೂಲನೆಲೆಯಾದರೂ ಕನ್ನಡಿಗರು ವಿಶ್ವದಾದ್ಯಂತ ಹರಡುತ್ತಿರುವುದರಿಂದ ಕನ್ನಡಿಗರ ಕಲ್ಪನೆ ಅಟ್ಲಾಂಟಿಕ್ ಮತ್ತು ಪೆಸಿಫಿಕ್ ಸಾಗರಗಳವರೆಗೆ, ಉತ್ತರ ಧ್ರುವದಿಂದ ದಕ್ಷಿಣಧ್ರುವದವರೆಗೆ ವ್ಯಾಪಿಸಿದೆ.ಹೀಗಾಗಿ ನಮ್ಮ ಕನ್ನಡ ಕಲ್ಪನೆಯೂ ಹಿಗ್ಗಬೇಕಾಗಿದೆ. ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು ಎಲ್ಲಾದರೂ ಇರಲಿ, ಕನ್ನಡವಾಗುವಂತೆ ಪ್ರೇರೇಪಿಸಬೇಕಾಗಿದೆ.ಈ ಗುರುತರವಾದ ಹೊಣೆಯನ್ನು ನಿರ್ವಹಿಸುವಲ್ಲಿ ಮುಂದಿನ ಅಧ್ಯಕ್ಷರು ಸಫಲರಾಗಲಿ.

(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.