ಶನಿವಾರ, ಮಾರ್ಚ್ 6, 2021
28 °C

ದುಷ್ಟ ದೊರೆ ದುರುಳ ಪಡೆ ದಯೆಗೆ ತಾವೆಲ್ಲಿ?

ಸುಧೀಂದ್ರ ಬುಧ್ಯ Updated:

ಅಕ್ಷರ ಗಾತ್ರ : | |

ದುಷ್ಟ ದೊರೆ ದುರುಳ ಪಡೆ ದಯೆಗೆ ತಾವೆಲ್ಲಿ?

ಬಹುಶಃ ಅಮೆರಿಕದ ಅಧ್ಯಕ್ಷ ಟ್ರಂಪ್ ಮತ್ತು ವಿದೇಶಾಂಗ ಕಾರ್ಯದರ್ಶಿ ಟಿಲ್ಲರ್ಸನ್ ಈ 15 ದಿನಗಳಲ್ಲಿ ನಿರಾಳ ನಿದ್ದೆ ತೆಗೆದಿರುವುದು ಅನುಮಾನ. ಆದರೆ ಕೆಲವು ಕಠಿಣ ನಿರ್ಧಾರಗಳನ್ನಂತೂ ತಳೆದಿದ್ದಾರೆ. ಈ ಎರಡು ವಾರಗಳಲ್ಲಿ ಅಮೆರಿಕ ರಾಜತಾಂತ್ರಿಕವಾಗಿ ನಾಲ್ಕಾರು ದಿಟ್ಟ ಹೆಜ್ಜೆಗಳನ್ನು ಮುಂದಿಟ್ಟಿದೆ. ಆ ಕಾರಣದಿಂದಲೇ ಟ್ರಂಪ್ ಆಡಳಿತದ ಬಗ್ಗೆ ಇದ್ದ ಕೆಲವು ಅಭಿಪ್ರಾಯಗಳೂ ಬದಲಾಗಿವೆ. ಇತ್ತೀಚಿನ ಮುಖ್ಯ ಬೆಳವಣಿಗೆಗಳನ್ನಷ್ಟೇ ಗಮನಿಸುವುದಾದರೆ, ಡೊನಾಲ್ಡ್ ಟ್ರಂಪ್ ಮೊದಲ ಬಾರಿಗೆ ಚೀನಾ ಅಧ್ಯಕ್ಷರೊಂದಿಗೆ ಮುಖಾಮುಖಿಯಾದರು. ಔತಣ ಕೂಟದಲ್ಲಿ ಕ್ಸಿ ಜಿನ್ ಪಿಂಗ್ ಅವರಿಗೆ ಚಾಕೊಲೇಟ್ ಕೇಕ್ ನೀಡುತ್ತಲೇ ಸಿರಿಯಾ ಮೇಲೆ ಕ್ಷಿಪಣಿ ದಾಳಿ ಮಾಡುತ್ತಿರುವ ವಿಷಯ ತಿಳಿಸಿದರು. ಚೀನಾ ಅಧ್ಯಕ್ಷರ ಗಂಟಲಲ್ಲಿ ಕೇಕ್ ಇಳಿಯುತ್ತಿರುವಾಗ ತಲೆಯಲ್ಲಿ ದಕ್ಷಿಣ ಚೀನಾ ಸಮುದ್ರ ಬಿಕ್ಕಟ್ಟಿಗೆ ಟ್ರಂಪ್ ಹೇಗೆ ಪ್ರತಿಕ್ರಿಯಿಸಬಹುದು ಎಂಬ ಪ್ರಶ್ನೆ ಹಾದು ಹೋಗಿರಬಹುದು. ಅತ್ತ ಅಮೆರಿಕದ ಕ್ಷಿಪಣಿಗಳು ಸಿರಿಯಾದ ವಾಯುನೆಲೆ ಪ್ರವೇಶಿಸುತ್ತಲೇ ರಷ್ಯಾ ಸೆಟೆದುಕೊಂಡಿತು. ಈ ಬಿಸಿ ಆರುವ ಮುನ್ನವೇ, ಐಎಸ್ ಉಗ್ರರ ಅಡಗುದಾಣದ ಮೇಲೆ ಶಕ್ತಿ ಶಾಲಿ ಬಾಂಬ್ ಎಸೆದಿರುವುದಾಗಿ ಪೆಂಟಗನ್ ಹೇಳಿತು. ದೂರದಿಂದಲೇ ಅಣ್ವಸ್ತ್ರ ಪರೀಕ್ಷೆ, ಕ್ಷಿಪಣಿ ದಾಳಿ ಎಂದು ಉತ್ತರ ಕೊರಿಯಾ ಕೂಗು ಹಾಕಿತು.

ಈ ಎಲ್ಲ ಬೆಳವಣಿಗೆಗಳಿಂದ ಟ್ರಂಪ್ ಮುಖ ಮತ್ತೊಮ್ಮೆ ಹೊಸದಾಗಿ ಕಂಡದ್ದಂತೂ ದಿಟ. ಇಷ್ಟು ದಿನ ಟ್ರಂಪ್ - ಪುಟಿನ್ ಸಖ್ಯ, ಚುನಾವಣೆಯಲ್ಲಿ ರಷ್ಯಾ ಕೈವಾಡ ಎಂಬ ಚರ್ಚೆ ನಡೆಯುತ್ತಿತ್ತು. ಇದೀಗ ಅದು ಬಿದ್ದು ಹೋಗಿದೆ. ಬಾಂಬುಗಳ ಮಹಾತಾಯಿ ಸಿಡಿದದ್ದರಿಂದ ‘ಅಮೆರಿಕ ಮೊದಲು’ ಎನ್ನುತ್ತಿದ್ದ ಟ್ರಂಪ್, ಜಗತ್ತಿನ ಬೇನೆಯನ್ನು ತಲೆಗೆ ಕಟ್ಟಿಕೊಂಡು ಯುದ್ಧಕ್ಕೆ ಇಳಿಯುವರೇ ಎಂಬ ಪ್ರಶ್ನೆ ಮೂಡಿದೆ. ಮಾನವೀಯ ನೆಲೆಯಲ್ಲಿ ‘ಬ್ಯೂಟಿಫುಲ್ ಬೇಬಿಸ್’ ಎಂದು ಉದ್ಗರಿಸಿ, ಸಿರಿಯಾದ ವಾಯು ನೆಲೆ ಧ್ವಂಸಗೊಳಿಸಿದ್ದೇನೋ ಸರಿ, ಆದರೆ ಮುಂದೇನು ಎಂಬ ಪ್ರಶ್ನೆ ಮೂಡಿದೆ. ಈ ಎಲ್ಲವೂ ಪುಟಗಟ್ಟಲೇ ಚರ್ಚಿಸುವ ವಿಷಯ. ಹಾಗಾಗಿ ಅಮೆರಿಕ ಕಗ್ಗಂಟು ಎಂದುಕೊಂಡಿರುವ ಸಿರಿಯಾ ಸಮಸ್ಯೆಯನ್ನಷ್ಟೇ ಈ ಅಂಕಣದಲ್ಲಿ ನೋಡೋಣ. 

ಸಿರಿಯಾದ ಇಂದಿನ ಪರಿಸ್ಥಿತಿಗೆ ಮುಖ್ಯವಾಗಿ ಮೂರು ಕಾರಣಗಳಿವೆ. ದುರಾಡಳಿತ, ಮತೀಯ ಬಣಗಳ ಕದನ ಮತ್ತು ಜಿಹಾದ್ ಪ್ರೇರಿತ ಭಯೋತ್ಪಾದನೆ. ಹಾಗೆ ನೋಡಿದರೆ, ಸಿರಿಯಾದಲ್ಲಿ ತೂಫಾನಿನ ಸದ್ದು 70ರ ದಶಕದಿಂದಲೂ ಕೇಳುತ್ತಲೇ ಬಂದಿದೆ. ಅಂದಿನ ಅಧ್ಯಕ್ಷ ಹಫೀಸ್ ಅಲ್ ಅಸಾದ್, ಸೇನೆಯ ಮೂಲಕವೇ ಜನರನ್ನು ತಮ್ಮ ಮುಷ್ಟಿಯಲ್ಲಿ ಇರಿಸಿಕೊಂಡವರು. ಉಗ್ರರ ಮೂಲಕ ನೆರೆರಾಷ್ಟ್ರಗಳನ್ನು ಕೆಣಕುವುದರಲ್ಲಿ ನಿಷ್ಣಾತರಾಗಿದ್ದವರು. 2000ನೇ ಇಸವಿಯಲ್ಲಿ ಅವರು ತೀರಿಕೊಂಡ ಬಳಿಕ ವಿದೇಶದಲ್ಲಿ ಕಲಿಯುತ್ತಿದ್ದ ಬಷರ್ ಅಲ್ ಅಸಾದ್, ತಂದೆಯ ಸ್ಥಾನಕ್ಕೆ ಬಂದು ಕುಳಿತರು. 2003ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಬುಷ್ ಇರಾಕ್ ಮೇಲೆ ಯುದ್ಧ ಸಾರಿದ್ದೇ, ಅಮೆರಿಕ ತನ್ನ ಮೇಲೂ ಎರಗಬಹುದು ಎಂಬ ಭಯ ಅಸಾದ್ ಅವರಲ್ಲಿ ಮೊಳೆಯಿತು. ಹಾಗಾಗಿ ತನ್ನ ಯುವಕರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಿ, ಅಮೆರಿಕ ಸೇನೆಯ ವಿರುದ್ಧ ಹೋರಾಡಲು ಅಣಿಗೊಳಿಸುವುದು ಸಿರಿಯಾದ ಮುಖ್ಯ ಧ್ಯೇಯವಾಯಿತು. ಇರಾನ್ ಮತ್ತು ಸಿರಿಯಾ, ಲೆಬನಾನ್ ಮೂಲದ ಹೆಜ್ಬೊಲ್ಲಾ ಮತ್ತು ಗಾಜಾದ ಹಮಾಸ್ ಇಸ್ಲಾಮಿಕ್ ಉಗ್ರ ಸಂಘಟನೆ ಜೊತೆ ಕೈ ಜೋಡಿಸಿ ಅಮೆರಿಕವನ್ನು ವಿರೋಧಿಸಲು ‘ಆಕ್ಸಿಸ್ ಆಫ್ ರೆಸಿಸ್ಟೆನ್ಸ್’ ಕೂಟ ರಚಿಸಿಕೊಂಡವು. ಅರಬ್ ಜಗತ್ತಿನ ಬಹುಸಂಖ್ಯಾತರ ಪ್ರತಿನಿಧಿಗಳು ನಾವು ಎಂದು ಈ ಕೂಟ ಹೇಳಿಕೊಂಡಿತು.

‘ಅಮೆರಿಕಕ್ಕೆ ಮಾರಕ ಎನಿಸದ ಹೊರತು ನಮ್ಮ ಸಂಪತ್ತು ಮತ್ತು ಸೈನಿಕರ ರಕ್ತವನ್ನು ಇತರ ದೇಶಗಳಲ್ಲಿ ವ್ಯಯಿಸುವುದು ವ್ಯರ್ಥ’ ಎಂಬ ಭಾವನೆ ಅಮೆರಿಕನ್ನರಲ್ಲಿ ಗಟ್ಟಿಯಾದಾಗ, ಇರಾಕ್‌ನಿಂದ ಸೇನೆ ವಾಪಸ್ಸು ಕರೆಸಿಕೊಳ್ಳುವ ಆತುರವನ್ನು ಬುಷ್ ಮಾಡಿದರು. ಇದರ ನಡುವೆಯೇ ಅರಬ್ ಜಗತ್ತಿನಲ್ಲಿ ದುರಾಡಳಿತ ಮತ್ತು ಸರ್ವಾಧಿಕಾರದ ವಿರುದ್ಧ ಹೊಸದೊಂದು ಕ್ರಾಂತಿ ಆರಂಭವಾಯಿತು. ‘ಅರಬ್ ಸ್ಪ್ರಿಂಗ್’ ಹೆಸರಿನಲ್ಲಿ ಟುನೀಸಿಯಾದಲ್ಲಿ ಹೊತ್ತಿಕೊಂಡ ಕಿಡಿ, ಲಿಬಿಯಾ, ಈಜಿಪ್ಟ್, ಯೆಮನ್, ಸಿರಿಯಾ ಮತ್ತು ಇರಾಕಿಗೂ ಹಬ್ಬಿತು. ಟುನೀಸಿಯಾ ಮತ್ತು ಈಜಿಪ್ಟ್ ನಾಗರಿಕರು ಬಂಡೆದ್ದಾಗ, ಅಲ್ಲಿನ ಆಡಳಿತಗಾರರು ದುರ್ಬಲರು ಈ ಹೋರಾಟಗಳಿಂದ ತನಗೇನೂ ತೊಂದರೆಯಾಗದು ಎಂದು ಅಸಾದ್ ನಂಬಿದ್ದರು. ಆದರೆ ಕೆಲದಿನಗಳಲ್ಲೇ ಸಿರಿಯಾ ಬಂಡುಕೋರರ ಗುಂಪು ಅಸಾದ್ ಪದಚ್ಯುತಿಗೆ ಆಗ್ರಹಿಸಿತು.

ತನ್ನ ವಿರೋಧಿಗಳನ್ನು ಮಟ್ಟಹಾಕಲು ಅಸಾದ್ ತಂದೆಯ ಮಾರ್ಗವನ್ನೇ ಅನುಸರಿಸಿದರು. ಜೈಲಿನಲ್ಲಿದ್ದ ಪಾತಕಿಗಳನ್ನು ಹೊರಬಿಟ್ಟು ಜನರ ಮೇಲೆ ದಾಳಿ ಮಾಡಿಸಲಾಯಿತು. ಅಸಾದ್ ವಿರುದ್ಧ ಪ್ರತಿಭಟನೆ ಬೆಳೆದಂತೆ, ಇರಾನ್ ಬೆದರಿತು. ಇರಾನ್ - ಸಿರಿಯಾ ನಂಟಿಗೆ ದೀರ್ಘ ಇತಿಹಾಸವಿದೆ. ಇರಾನ್ ತನ್ನ ಶತ್ರು ರಾಷ್ಟ್ರಗಳ ವಿರುದ್ಧ ಪರೋಕ್ಷ ಯುದ್ಧಕ್ಕೆ ಉಗ್ರರನ್ನು ಬಳಸುತ್ತದೆ. ಆ ಉಗ್ರರಿಗೆ ಅಸ್ತ್ರಗಳು ರವಾನೆಯಾಗುವುದೇ ಸಿರಿಯಾ ಮೂಲಕ. ಇರಾನ್ ಪರ ಒಲವಿರುವ ಹೆಜ್ಬೊಲ್ಲಾ ಮತ್ತು ಹಮಾಸ್ ಉಗ್ರರಿಗೆ ಸಿರಿಯಾ ಬಿಲ ಇದ್ದಂತೆ. ಹಾಗಾಗಿ ಅಸಾದ್ ಆಳ್ವಿಕೆ ಉಳಿಸಿಕೊಳ್ಳಲು ಇರಾನ್ ಸಹಕಾರ ನೀಡಿತು. ಇರಾನ್ ಅಸಾದ್ ಬೆಂಬಲಕ್ಕೆ ನಿಲ್ಲುತ್ತಿದ್ದಂತೆ, ಇತರೆ ಸುನ್ನಿ ರಾಷ್ಟ್ರಗಳು ಕೆರಳಿದವು. ಸಿರಿಯಾದ ಪ್ರಜೆಗಳು ಬಹುತೇಕ ಸುನ್ನಿ ಮುಸ್ಲಿಮರು. ಶಿಯಾ ಮುಸ್ಲಿಮರ ಉಪಪಂಗಡ ‘ಅಲಾವೈಟ್ಸ್’ಗೆ ಸೇರಿದ ಅಸಾದ್ ಸರ್ಕಾರಕ್ಕೆ ಶಿಯಾ ರಾಷ್ಟ್ರ ಇರಾನ್ ಬೆಂಬಲ ಸೂಚಿಸಿದ್ದು, ತೈಲ ಸಂಪನ್ಮೂಲದಿಂದ ಶ್ರೀಮಂತಿಕೆ ಹೊಂದಿರುವ, ಸುನ್ನಿ ರಾಷ್ಟ್ರ ಸೌದಿ ಅರೇಬಿಯಾಕ್ಕೆ ಪಥ್ಯವಾಗಲಿಲ್ಲ. ಇರಾನ್ ವಿರುದ್ಧದ ತನ್ನ ಶೀತಲ ಸಮರದಲ್ಲಿ ಸಿರಿಯಾವನ್ನೂ ಸೇರಿಸಿಕೊಂಡಿತು. ಸಿರಿಯಾದ ಬಂಡುಕೋರರಿಗೆ ಅಸ್ತ್ರಗಳ ನೆರವು ನೀಡಿತು. ಕತಾರ್ ಲಕ್ಷ ಲಕ್ಷ ಡಾಲರ್ ಮೊತ್ತವನ್ನು ಬಂಡುಕೋರರ ಪರ ವ್ಯಯಿಸಿತು. ಅರಾಜಕತೆ, ನಾಗರಿಕ ಯುದ್ಧ ಬೆಳೆದಂತೆ ಅವಕಾಶಕ್ಕಾಗಿ ಕಾಯುತ್ತಿದ್ದ ಅಲ್ ಖೈದ ತನ್ನ ಜಾಲ ವಿಸ್ತರಿಸಲು, ಯುವಕರನ್ನು ಉಗ್ರ ಚಟುವಟಿಕೆಗಳತ್ತ ಸೆಳೆಯತೊಡಗಿತು. ಅಸಾದ್ ವಿರೋಧಿ ಬಣದೊಂದಿಗೆ, ತನ್ನ ಅಂಗಸಂಸ್ಥೆ ಜಬಾತ್ ಅಲ್ ನುಸ್ರವನ್ನು ಜೋಡಿಸಿ ಪ್ರತಿಭಟನೆಗೆ ಹಿಂಸಾರೂಪ ನೀಡಿತು. ಇಸ್ಲಾಮಿಕ್ ಉಗ್ರರು ಒಂದೊಂದೇ ನಗರವನ್ನು ವಶಕ್ಕೆ ತೆಗೆದುಕೊಂಡು ಅಸಾದ್ ಆಡಳಿತಕ್ಕೆ ತಲೆನೋವು ತಂದರು.

ಹೀಗೆ ಮಧ್ಯಪ್ರಾಚ್ಯದ ಶಿಯಾ-ಸುನ್ನಿ ಹಗೆ ಉದ್ದೀಪನಗೊಳ್ಳುವಾಗ, ಅಮೆರಿಕ ಮತ್ತು ರಷ್ಯಾ ಸಿರಿಯಾ ಅಂಗಳಕ್ಕೆ ಧುಮುಕಿದವು. ರಾಜಕೀಯ ತಂತ್ರಗಾರಿಕೆಯ ದೃಷ್ಟಿಯಿಂದ ಅಮೆರಿಕಕ್ಕೆ ಸಿರಿಯಾ ಮುಖ್ಯ. ಕಾರಣವಿಷ್ಟೇ ಟರ್ಕಿ, ಕತಾರ್, ಸೌದಿ ಅರೇಬಿಯಾ, ಕುವೈತ್ ಇವು ಅಮೆರಿಕದ ಮಿತ್ರ ರಾಷ್ಟ್ರಗಳು. ಆದರೆ ಸಿರಿಯಾ ಅಮೆರಿಕದ ಮರ್ಜಿಗೆ ಎಂದೂ ಮಣಿದಿಲ್ಲ. ಜೊತೆಗೆ ಇರಾನ್ ಜೊತೆಗಿನ ಸಿರಿಯಾದ ಅತಿಯಾದ ಗೆಳೆತನ ಅಮೆರಿಕವನ್ನು ಹಲವು ಬಾರಿ ಕೆರಳಿಸಿತ್ತು. ಹಾಗಾಗಿ ಅಸಾದ್ ವಿರುದ್ಧ ಬಂಡುಕೋರರಿಗೆ ಬೆಂಬಲವಾಗಿ ಅಮೆರಿಕ ನಿಂತಿತು. ಅಮೆರಿಕಕ್ಕೆ ಪ್ರತಿಯಾಗಿ ರಷ್ಯಾ ಇರದಿದ್ದರೆ ಜಾಗತಿಕ ರಾಜಕೀಯ ರಂಗ ಕಳೆಕಟ್ಟುವುದು ಹೇಗೆ? ರಷ್ಯಾ ಸಿರಿಯಾದ ಕೈ ಹಿಡಿಯಿತು. ರಷ್ಯಾ ಮತ್ತು ಸಿರಿಯಾ ಸಖ್ಯ ಹೊಸದೇನಲ್ಲ. 60ರ ದಶಕದಲ್ಲಿ ಅಮೆರಿಕದೊಂದಿಗೆ ಶೀತಲ ಸಮರ ಜಾರಿಯಲ್ಲಿದ್ದಾಗ ಸಿರಿಯಾದ ಸೇನೆಯನ್ನು ನವೀಕರಿಸಲು ಸೋವಿಯತ್ ಸಹಕರಿಸಿತ್ತು. ಮಧ್ಯಪ್ರಾಚ್ಯದ ಮಟ್ಟಿಗೆ ರಷ್ಯಾದ ನಂಬಿಕಸ್ತ ಗೆಳೆಯನಾಗಿ ಸಿರಿಯಾ ಇತ್ತು. ಗೆಳೆತನದ ಜೊತೆಗೆ ರಷ್ಯಾಗೆ ಸಿರಿಯಾ ವಿಷಯದಲ್ಲಿ ಆರ್ಥಿಕ ಮತ್ತು ಸಾಮರಿಕ ಹಿತಾಸಕ್ತಿ ಇದೆ. ರಷ್ಯಾ ತನ್ನ ಸೇನಾ ನೆಲೆಯನ್ನು ಸಿರಿಯಾದ ಬಂದರು ನಗರ ಟಾರ್ಟರಸ್ ನಲ್ಲಿ ಹೊಂದಿದೆ. ಮೆಡಿಟರೇನಿಯನ್ ಪ್ರದೇಶದಲ್ಲಿ ರಷ್ಯಾ ಹೊಂದಿರುವ ಏಕೈಕ ಸೇನಾ ನೆಲೆ ಅದು. ರಷ್ಯಾ ಉತ್ಪಾದಿಸುವ ಯುದ್ಧೋಪಕರಣಗಳಿಗೆ ಸಿರಿಯಾ ಪ್ರಮುಖ ಗ್ರಾಹಕ ಎನ್ನುವುದು ಹಣದ ಲೆಕ್ಕಾಚಾರ. ಹಾಗಾಗಿ ರಷ್ಯಾ ಅಸಾದ್ ಆಳ್ವಿಕೆಗೆ ಬೆಂಬಲ ನೀಡಿತು. ಹೀಗೆ ಮೊದಲಿಗೆ ಆಡಳಿತದ ವಿರುದ್ಧ ಎದ್ದ ಜನಾಕ್ರೋಶ, ನಾಗರಿಕ ಯುದ್ಧದ ರೂಪ ಪಡೆದು ಕೊನೆಗೆ ಅದನ್ನೂ ಮೀರಿ ಪ್ರಾಂತೀಯ ಕದನವಾಗಿ ಅಮೆರಿಕದ ಮಿತ್ರ ರಾಷ್ಟ್ರಗಳು ಮತ್ತು ಇರಾನ್ ನಡುವಿನ ಪರೋಕ್ಷ ಯುದ್ಧವಾಗಿ ಬದಲಾಯಿತು.

ಇದೀಗ ರಾಸಾಯನಿಕ ದಾಳಿಯ ವಿಷಯದಲ್ಲೂ ಈ ಬಣಗಳ ಒಡಕು ಎದ್ದು ಕಾಣುತ್ತಿದೆ. ಈ ದಾಳಿಯಲ್ಲಿ ‘ಸಾರಿನ್’ ಎಂಬ ರಾಸಾಯನಿಕ ಬಳಕೆಯಾಗಿದೆ. ದಾಳಿಗೆ ಅಸಾದ್ ನೇರಹೊಣೆ ಎಂದು ಅಮೆರಿಕ ವಾದಿಸಿದೆ. ಬ್ರಿಟನ್, ಜರ್ಮನಿ, ಜಪಾನ್, ಇಸ್ರೇಲ್ ಟ್ರಂಪ್ ನಿಲುವನ್ನು ಸಮರ್ಥಿಸಿಕೊಂಡಿವೆ. ಆದರೆ ಅಸಾದ್ ರಾಸಾಯನಿಕ ದಾಳಿಯ ಹಿಂದಿದ್ದಾರೆ ಎಂಬುದನ್ನು ರಷ್ಯಾ ಮತ್ತು ಇರಾನ್ ಒಪ್ಪಿಕೊಳ್ಳಲು ಸಿದ್ಧವಿಲ್ಲ. ಹಾಗಾಗಿ ಈ ಜಟಾಪಟಿ ಸದ್ಯಕ್ಕೆ ಮುಗಿಯುವುದಿಲ್ಲ. ಈಗಾಗಲೇ ಸಿರಿಯಾದ ಒಳಬೇಗುದಿ ಆರಂಭವಾಗಿ ಆರು ವರ್ಷಗಳು ಕಳೆದಿವೆ. ಈ ಅವಧಿಯಲ್ಲಿ, ಅಂದಾಜು 5 ಲಕ್ಷ ಮಂದಿಯನ್ನು ಹತ್ಯೆಮಾಡಲಾಗಿದೆ. ಗಾಯಗೊಂಡ ನಾಗರಿಕರ ಸಂಖ್ಯೆಯನ್ನು ಖಚಿತವಾಗಿ ಹೇಳುವುದು ಕಷ್ಟ. ಸಿರಿಯಾ ತೊರೆದು ನೆರೆ ರಾಷ್ಟ್ರಗಳಿಗೆ ದಂಡು ದಂಡು ವಲಸೆ ಮುಂದುವರೆದಿದೆ. ಇತರೆಡೆ ಪ್ರವೇಶ ಸಿಗದವರು ಅತಂತ್ರರಾಗಿದ್ದಾರೆ. ಇದೆಲ್ಲಾ ಕೊನೆಗೊಳ್ಳುವುದು ಯಾವಾಗ? ಸ್ಪಷ್ಟ ಚಿತ್ರಣ ಕಾಣುತ್ತಿಲ್ಲ.

ಇನ್ನು, ಸಿರಿಯಾದಲ್ಲಿ ರಾಸಾಯನಿಕ ದಾಳಿ ನಡೆದಿರುವುದು ಇದೇ ಮೊದಲೇನೂ ಅಲ್ಲ. 2013ರಲ್ಲೂ ಅಸಾದ್ ಆಡಳಿತ ರಾಸಾಯನಿಕ ಅಸ್ತ್ರ ಬಳಸಿತ್ತು. ಆಗ ಅಸಾದ್ ಆಡಳಿತವನ್ನು ಕೊನೆಗೊಳಿಸುವತ್ತ ಅಮೆರಿಕ ಚಿಂತಿಸುತ್ತದೆ ಎಂಬ ಮಾತು ಬಂದಿತ್ತು. ಆದರೆ ಒಬಾಮಾ ಭಾಷಣದಿಂದ ಒಂದು ಹೆಜ್ಜೆಯೂ ಮುಂದೆ ಹೋಗಲಿಲ್ಲ. ಆಗ ರಷ್ಯಾ ಮಧ್ಯಪ್ರವೇಶಿಸಿ ರಾಸಾಯನಿಕ ಅಸ್ತ್ರ ನಿಷೇಧದ ಅಂತರರಾಷ್ಟ್ರೀಯ ಕರಾರಿಗೆ (Chemical weapons convention-1997) ಅಸಾದ್ ಬದ್ಧವಾಗುವಂತೆ ನೋಡಿಕೊಂಡಿತು. ಆದರೆ ಅಸಾದ್ ಆಡಳಿತ ನಾಗರಿಕರನ್ನು ಹಿಂಸಿಸುವ, ಆಹಾರ ಅಭಾವ ಸೃಷ್ಟಿಸುವ, ಭಯ ಉಂಟುಮಾಡುವ ತನ್ಮೂಲಕ ಆಡಳಿತ ವಿರೋಧಿ ನಿಲುವನ್ನು ಮಟ್ಟಹಾಕುವ ಕೆಲಸವನ್ನು ಮುಂದುವರೆಸಿತು. ಹಾಗಾಗಿ ಜನ ವಿರೋಧ ಕಟ್ಟಿಕೊಂಡಿರುವ ಅಸಾದ್ ಆಳ್ವಿಕೆಯ ಬಗ್ಗೆ ಅಮೆರಿಕ ಮತ್ತು ರಷ್ಯಾ ತಮ್ಮ ನಿಲುವನ್ನು ಸ್ಪಷ್ಟಪಡಿಸಿಕೊಳ್ಳಬೇಕಿದೆ. ‘ಅಸಾದ್ ಆಡಳಿತದ ಭವಿಷ್ಯವನ್ನು ಸಿರಿಯಾ ಜನ ನಿರ್ಧರಿಸಲಿದ್ದಾರೆ’ ಎಂದು ಇತ್ತೀಚೆಗೆ ಟಿಲ್ಲರ್ಸನ್ ಹೇಳಿದ್ದಾರೆ. ಹಾಗಾದರೆ ಸಿರಿಯಾದಲ್ಲಿ ಆಡಳಿತ ಬದಲಾವಣೆಯಾಗುತ್ತದೆಯೇ? ರಷ್ಯಾ ಮತ್ತು ಸಿರಿಯಾದ ನೆರೆ ರಾಷ್ಟ್ರಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಮೆರಿಕ ಮುಂದಡಿ ಇಡಬೇಕಾಗುತ್ತದೆ.

ಅಷ್ಟಾದರೆ ಸಾಲದು, ಸಿರಿಯಾವನ್ನು ಮೂರು ತುಂಡು ಮಾಡಿ, ಒಂದು ಭಾಗವನ್ನು ಸುನ್ನಿ ಮುಸ್ಲಿಮರ ಆಡಳಿತಕ್ಕೆ ಬಿಟ್ಟು ವಿಶ್ವಸಂಸ್ಥೆ ಕೆಲಕಾಲ ಮೇಲುಸ್ತುವಾರಿ ನಡೆಸಬೇಕು, ಇನ್ನೊಂದು ಭಾಗದಲ್ಲಿ ಅಸಾದ್ ಮುಂದುವರೆಯಲಿ ಎಂದು ರಷ್ಯಾ ಮತ್ತು ಇರಾನ್ ಬಯಸುವುದಾದರೆ ಅಡ್ಡಿಯಿಲ್ಲ, ಮೂರನೆಯ ಭಾಗವನ್ನು ಕರ್ಡ್ಸ್ ಸಮುದಾಯಕ್ಕೆ ಬಿಟ್ಟುಕೊಡಬೇಕು ಎಂಬ ಅಭಿಪ್ರಾಯ ಜಾಗತಿಕ ಚಾವಡಿಯಲ್ಲಿ ಚರ್ಚೆಯಾಗುತ್ತಿದೆ. ಆ ಮೂಲಕ ಸಿರಿಯಾದಲ್ಲಿ ಮುಂದುವರೆದಿರುವ ಹಿಂಸೆಯನ್ನು ತಡೆಯಬಹುದು, ಐರೋಪ್ಯ ಒಕ್ಕೂಟದಲ್ಲಿ ಸಿರಿಯಾ ವಲಸಿಗರಿಂದ ಎದ್ದಿರುವ ತಳಮಳ ತಪ್ಪಿಸಬಹುದು ಎಂಬುದು ಲೆಕ್ಕಾಚಾರ. ನ್ಯಾಟೋ ಮತ್ತು ಅರಬ್ ಲೀಗ್ ಮೂಲಕ ಇದರ ಅನುಷ್ಠಾನ ಕಷ್ಟವೇನಲ್ಲ ಎಂದು ಹೇಳಲಾಗುತ್ತಿದೆ.  ಸಿರಿಯಾದ ನಾಗರಿಕ ಯುದ್ಧ ಮುಂದುವರಿದರೆ, ಮಧ್ಯಪ್ರಾಚ್ಯ ಅಸ್ಥಿರಗೊಳ್ಳುತ್ತದೆ. ಐಎಸ್ ಉಗ್ರರು ನೆಲೆ ವಿಸ್ತರಿಸಿಕೊಳ್ಳಲು ಸಹಾಯವಾಗುತ್ತದೆ. ನಿನ್ನೆಯಷ್ಟೇ ಸಿರಿಯಾ ಬಳಿ ಇನ್ನೂ 3 ಟನ್ ನಷ್ಟು ರಾಸಾಯನಿಕ ಅಸ್ತ್ರವಿದೆ ಎಂಬುದನ್ನು ಇಸ್ರೇಲ್ ಅಧಿಕಾರಿಗಳು ಹೇಳಿದ್ದಾರೆ. ಒಂದೊಮ್ಮೆ ಅದು ನಿಜವಾದರೆ, ಈ ಆರು ವರ್ಷಗಳ ಕದನ ಕೊಂಚ ಹದ ತಪ್ಪಿದರೂ ಮಹಾದುರಂತದಲ್ಲಿ ಅಂತ್ಯಗೊಳ್ಳಬಹುದು. ಹಾಗಾಗದಿರಲಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.