ಶುಕ್ರವಾರ, ಡಿಸೆಂಬರ್ 6, 2019
21 °C

ಹಿಂದಿ ಹೇರಿಕೆಯ ಹಿಂದೆ ಮುಂದೆ...

Published:
Updated:
ಹಿಂದಿ ಹೇರಿಕೆಯ ಹಿಂದೆ ಮುಂದೆ...

ಇದೆಲ್ಲ ಇಂದು ನಿನ್ನೆಯ ಹೋರಾಟವಲ್ಲ, ಇದಕ್ಕೆ ಬಹಳ ದೊಡ್ಡ ಇತಿಹಾಸ ಇದೆ. ಇದು ಪ್ರಭುತ್ವದ ವಿರುದ್ಧದ ಹೋರಾಟ. ಅದರ ವಿಸ್ತರಣೆಯ ವಿರುದ್ಧದ ಹೋರಾಟ. ಪ್ರಭುತ್ವವೇ ಹಾಗೆ. ಅದು ಆಕ್ರಮಣಕಾರಿಯಾಗಿ ಇರುತ್ತದೆ. ವಿಸ್ತರಿಸುವ ಅದರ ದಾಹಕ್ಕೆ ಕೊನೆ ಎಂಬುದೇ ಇರುವುದಿಲ್ಲ.

ಒಂದು ಸಾರಿ ತನ್ನ ದಾಳಿಯಲ್ಲಿ ಗೆಲುವು ಸಿಗದೇ ಇದ್ದರೆ ಅದು ಮತ್ತೆ ದಾಳಿ ಮಾಡುತ್ತದೆ. ಇನ್ನೊಮ್ಮೆ ಮಾಡುತ್ತದೆ, ಮಗುದೊಮ್ಮೆ ಮಾಡುತ್ತದೆ. ಗೆಲುವು ಸಿಗುವ ವರೆಗೆ ಸಮಯಕ್ಕಾಗಿ ಹೊಂಚು ಹಾಕುತ್ತಲೇ ಇರುತ್ತದೆ. ತನ್ನ ಆಕ್ಟೋಪಸ್‌  ಬಾಹುಗಳನ್ನು ಹೇಗೆ ಚಾಚುತ್ತ ಇರುತ್ತದೆ ಎಂದು ಗೊತ್ತಾಗುವುದೇ ಇಲ್ಲ.

ಬೆಂಗಳೂರಿನ ಮೆಟ್ರೊ ರೈಲಿನಲ್ಲಿ ಹಿಂದಿ ಭಾಷೆ ಬಳಕೆಯನ್ನು ವಿರೋಧಿಸಿ ಕನ್ನಡಿಗರು ಕಳೆದ ವಾರ ಬೀದಿಗೆ ಬಂದಿದ್ದರು. ಅನ್ಯ ಭಾಷಿಕರಿಗೆ ಇದೆಲ್ಲ ‘ಕನ್ನಡಿಗರ ಸಣ್ಣತನ’ ಎಂದು ಅನಿಸಬಹುದು, ಅಸಹನೆಯಂತೆಯೂ ತೋರಬಹುದು.

‘ಅಲ್ಲಿ ಕನ್ನಡ ಇತ್ತು, ಇಂಗ್ಲಿಷ್‌ ಇತ್ತು, ಹಿಂದಿಯೂ ಇತ್ತು. ಏನು ತಪ್ಪು’ ಎಂದೂ ಕೇಳಬಹುದು. ನಿಜ. ಬೆಂಗಳೂರು ಒಂದು ಕಾಸ್ಮೊಪಾಲಿಟನ್‌ ನಗರ. ಇಲ್ಲಿ ಅನ್ಯ ಭಾಷಿಕರೂ ಇರುತ್ತಾರೆ. ಅವರ ಅನುಕೂಲಕ್ಕೆ ಹಿಂದಿಯಲ್ಲಿ ಬರೆದರೆ ಏನು ತಪ್ಪು ಎಂದು ಪ್ರಶ್ನೆ ಮಾಡಲು ಅವಕಾಶ ಇದೆ. ನಾನು ಮೊದಲೇ ಸ್ಪಷ್ಟಪಡಿಸುತ್ತೇನೆ: ನಾನು ಒಂದು ಭಾಷೆಯಾಗಿ ಹಿಂದಿಯ ವಿರೋಧಿ ಅಲ್ಲ. ಹಿಂದಿ ಒಂದು ಅದ್ಭುತವಾದ, ಭಾವಗೀತೆಯಂಥ ಭಾಷೆ. ಅದನ್ನು ಕಲಿತರೆ ಉತ್ತರ ಭಾರತದಲ್ಲಿ ಎಲ್ಲಿ ಬೇಕಾದರೂ, ಯಾವ ಕಷ್ಟವೂ ಇಲ್ಲದೆ ಹೋಗಿ ಬರಬಹುದು ಎಂದು ನನಗೆ ಗೊತ್ತಿದೆ.

ಹಿಂದಿ ಭಾಷೆಯಲ್ಲಿ ಮಾತನಾಡಲು ಬಾರದ ಯಡಿಯೂರಪ್ಪನವರು,  ಸಿದ್ದರಾಮಯ್ಯನವರು ತಮ್ಮ ಹೈಕಮಾಂಡಿನ ಜೊತೆಗೆ ವ್ಯವಹರಿಸುವಾಗ ಎಷ್ಟು ಕಷ್ಟಪಡುತ್ತ ಇರಬಹುದು ಎಂದು ಯಾರಾದರೂ ಅರ್ಥ ಮಾಡಿಕೊಳ್ಳಬಹುದು. ಹಿಂದಿಯಲ್ಲಿ ಚೆನ್ನಾಗಿ ಮಾತನಾಡಲು ಬರುತ್ತಿದ್ದಿದ್ದರೆ ದೇವೇಗೌಡರು ಇನ್ನೂ ಯಶಸ್ವಿಯಾಗಿ ಪ್ರಧಾನಿ ಹುದ್ದೆ ನಿಭಾಯಿಸಬಹುದಿತ್ತು ಎಂದೂ ಅನಿಸುತ್ತದೆ. ಭಾಷೆ ಎನ್ನುವುದು ಸಂಬಂಧಕ್ಕೆ ಒಂದು ಸೇತುವೆ.

ರಾಮಕೃಷ್ಣ ಹೆಗಡೆ ಮತ್ತು ವೀರೇಂದ್ರ ಪಾಟೀಲರಿಗೆ ಒಳ್ಳೆಯ ಹಿಂದಿ ಬರುತ್ತಿತ್ತು.  ಹೆಗಡೆಯವರು ಮುಖ್ಯಮಂತ್ರಿಯಾಗುವುದಕ್ಕಿಂತ ಮುಂಚೆ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಮಲ್ಲಿಕಾರ್ಜುನ ಖರ್ಗೆಯವರು ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕರಾಗಿ ‘ಸಮರ್ಥವಾಗಿ ಕೆಲಸ  ಮಾಡಿದ್ದಾರೆ’ ಎಂದು ಹೆಸರು ಗಳಿಸಲು ಅವರು ಹಿಂದಿಯಲ್ಲಿ ಅಸ್ಖಲಿತವಾಗಿ ಮಾತನಾಡಬಲ್ಲರು ಎಂಬುದೂ ಒಂದು ಕಾರಣ.

ಅನುಮಾನ ಬೇಡ, ಈ ದೇಶದ ಪ್ರಭುತ್ವದ ಭಾಷೆ ಹಿಂದಿ, ಈ ದೇಶದ ಸಂಸತ್ತಿನ ಭಾಷೆ ಹಿಂದಿ. ದೆಹಲಿಗೆ ನೂರು ವರ್ಷ ತುಂಬಿದ ದಿನ ಸೇರಿದ್ದ ಸಂಸತ್‌ ಅಧಿವೇಶನದಲ್ಲಿ ನಾನೂ ಹಾಜರು ಇದ್ದೆ. ಕರ್ನಾಟಕದ ಸಂಸದರೊಬ್ಬರು ಹಿಂದಿ ಬಾರದೆ ವಿಷಯ ಮಂಡಿಸಲು ಎಷ್ಟು ಒದ್ದಾಡಿದರು ಎಂಬುದನ್ನು ಕಣ್ಣಾರೆ  ನೋಡಿದೆ. ಅನಂತಕುಮಾರ್‌ ಕೇಂದ್ರ ರಾಜಕಾರಣದಲ್ಲಿ ಇಷ್ಟು ಎತ್ತರಕ್ಕೆ ಬೆಳೆಯಲು ಅವರು ಚೆನ್ನಾಗಿ ಹಿಂದಿಯಲ್ಲಿ ಮಾತನಾಡಬಲ್ಲರು ಎಂಬುದೂ ಒಂದು ಕಾರಣ.

ಅಂದರೆ ಒಂದು ಸಂಗತಿ ಸ್ಪಷ್ಟ : ಹಿಂದಿ ಬಂದರೆ ನೀವು ಈ ದೇಶದಲ್ಲಿ ಬದುಕಬಲ್ಲಿರಿ, ಎತ್ತರಕ್ಕೆ ಏರಬಲ್ಲಿರಿ. ಇನ್ನೂ ಒಂದು ಸಂಗತಿ ನಿಜ, ಈ ದೇಶದಲ್ಲಿ ಅತಿ ಹೆಚ್ಚು ಜನರು ಹಿಂದಿ ಭಾಷೆಯನ್ನು ಮಾತನಾಡುತ್ತಾರೆ. 2001ರ ಜನಗಣತಿಯಲ್ಲಿ ಲಭ್ಯವಾದ ಅಂಕಿ ಅಂಶಗಳನ್ನೇ ಈ ಕುರಿತು ಉಲ್ಲೇಖಿಸಲಾಗುತ್ತದೆ.

ದೇಶದಲ್ಲಿ ಶೇಕಡ 25ರಷ್ಟು ಜನರು ತಮ್ಮ ಮಾತೃಭಾಷೆ ಹಿಂದಿ ಎಂದು ಹೇಳಿದ್ದಾರೆ. ಇನ್ನು ಶೇಕಡ 16 ರಷ್ಟು ಜನರು ತಮಗೆ ಹಿಂದಿ ಅರ್ಥವಾಗುತ್ತದೆ ಎಂದು ಹೇಳಿದ್ದಾರೆ. ಅಂದರೆ ಹಿಂದಿ ಬಹುಜನರು ಆಡುವ ಭಾಷೆ; ಒಟ್ಟು ಶೇ 41ರಷ್ಟು. ಹಿಂದಿ ಬಿಟ್ಟರೆ ಬಂಗಾಳಿ ಭಾಷೆಯನ್ನು ಮಾತನಾಡುವ ಜನರೇ ಹೆಚ್ಚು (ಶೇ 8.11). ಆದರೂ ಅವರದು ಕೂಡ ಎರಡಂಕಿ ದಾಟದ ಸಂಖ್ಯೆ.

ಕನ್ನಡ ಮಾತನಾಡುವವರು ಕೇವಲ ಶೇಕಡ 3.69. ಲೋಕಸಭೆಯ ಶೇಕಡ 40ರಷ್ಟು ಸೀಟುಗಳು ಹಿಂದಿ ಮಾತನಾಡುವ ಪ್ರದೇಶದಲ್ಲಿಯೇ ಇವೆ! ಆದರೂ ದೇಶದ ಅಧಿಕೃತ 22 ಭಾಷೆಗಳ ಪೈಕಿ ಹಿಂದಿಯೂ ಒಂದು ಭಾಷೆಯಷ್ಟೇ ಹೊರತು ಸಂವಿಧಾನದಲ್ಲಿ ಅದಕ್ಕೆ ವಿಶೇಷ ಸ್ಥಾನವನ್ನೇನೂ ಕೊಟ್ಟಿಲ್ಲ, ಕೊಡಬೇಕು ಎಂಬ  ಹಟಮಾರಿ ಪ್ರಯತ್ನಗಳು ಕೈಗೂಡಿಲ್ಲ.

ಹಿಂದಿಯನ್ನು ಇಡೀ ದೇಶದ ಮೇಲೆ ಹೇರುವ ಪ್ರಯತ್ನವನ್ನು ಈಗಿನ ಬಿಜೆಪಿ ಸರ್ಕಾರವಷ್ಟೇ ಮಾಡುತ್ತಿಲ್ಲ. ಕಾಂಗ್ರೆಸ್‌ ಸರ್ಕಾರವೂ ಇದನ್ನೇ ಮಾಡಿತ್ತು. ಇದು ದೇಶಕ್ಕೆ ಸ್ವಾತಂತ್ರ್ಯ ಬರುವುದಕ್ಕಿಂತ ಮುಂಚಿನಿಂದಲೇ ಆರಂಭವಾಗಿದೆ. ಈ ಹೇರಿಕೆಯ ವಿರುದ್ಧ ಬ್ರಿಟಿಷ್‌ ಆಡಳಿತ ಕಾಲದ ಮದ್ರಾಸ್‌  ಪ್ರಾಂತ್ಯವೊಂದೇ ಏಕಾಂಗಿಯಾಗಿ ಹೋರಾಟ ಶುರು ಮಾಡಿತು. ಅದೂ ಎಂಥ ಹೋರಾಟ ಎಂದರೆ ಜೀವನ್ಮರಣದಂಥ ಹೋರಾಟ. ಆಗಿನ ಮದ್ರಾಸ್‌ ಪ್ರಾಂತ್ಯವೆಂದರೆ ಅದು ಬರೀ ತಮಿಳುನಾಡು ಮಾತ್ರ ಆಗಿರಲಿಲ್ಲ.

ಆ ಪ್ರಾಂತ್ಯದಲ್ಲಿ ಆಂಧ್ರಪ್ರದೇಶದ ಮತ್ತು ಕರ್ನಾಟಕದ ಕೆಲವು ಭಾಗಗಳೂ ಇದ್ದುವು. ಅದು 1938ರಷ್ಟು ಹಿಂದಿನ ಕಥೆ. ರಾಜಾಜಿಯವರು ಮದ್ರಾಸ್‌ ಪ್ರಾಂತ್ಯದ ಮುಖ್ಯಮಂತ್ರಿಯಾಗಿದ್ದರು. ಅವರದು ಕಾಂಗ್ರೆಸ್‌ ನೇತೃತ್ವದ ಸರ್ಕಾರ. 1938ರ ಫೆಬ್ರುವರಿಯಲ್ಲಿ ದೇಶದ ಎಲ್ಲ ಶಾಲೆಗಳಲ್ಲಿ ಹಿಂದಿಯನ್ನು ಕಡ್ಡಾಯ ಭಾಷೆಯಾಗಿ ಕಲಿಸಬೇಕು ಎಂಬ ಆದೇಶವನ್ನು ಹೊರಡಿಸಲಾಯಿತು. ಇದರ ವಿರುದ್ಧ ‘ಹಿಂದಿ ಹೇರಿಕೆ ವಿರೋಧಿ ಆಂದೋಲನ’ ರೂಪುಗೊಂಡಿತು. ರಾಜಾಜಿ ಮನೆ ಮುಂದೆ  ನಡೆದ ಪ್ರತಿಭಟನೆಯಲ್ಲಿ ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

ಅದರಲ್ಲಿ 73 ಮಂದಿ ಮಹಿಳೆಯರೂ ಇದ್ದರು ಎಂಬುದು ವಿಶೇಷ. ತಮಿಳುನಾಡಿನಲ್ಲಿ ಆಗ ಆರಂಭವಾದ ಹಿಂದಿ ವಿರೋಧಿ ಹೋರಾಟ ಈಗಲೂ ನಿಂತಿಲ್ಲ. ತಮಿಳುನಾಡಿನ ಪೆರಿಯಾರ್‌ ಇ.ವಿ.ರಾಮಸ್ವಾಮಿ ನಾಯ್ಕರ್‌, ಮರೈಮಲೈ ಅಡಿಗಳರ್‌ ಎಂಬ ಶೈವ ವಿದ್ವಾಂಸ ಮತ್ತು ಸಿ.ಎನ್‌. ಅಣ್ಣಾದುರೈ ಈ ಹೋರಾಟದ ಮುಂಚೂಣಿಯಲ್ಲಿ ಇದ್ದರು. ತಮಿಳುನಾಡಿನಲ್ಲಿ ಡಿ.ಎಂ.ಕೆ ಪಕ್ಷದ ಉದಯಕ್ಕೆ ಮತ್ತು ಅದರ ಉಚ್ಛ್ರಾಯಕ್ಕೆ ಹಿಂದಿ ವಿರೋಧಿ ಹೋರಾಟವೂ ಕಾರಣವಾಯಿತು. ಕೇಂದ್ರದ ಹಿಂದಿ ಹೇರಿಕೆ ಪ್ರಯತ್ನಗಳ ವಿರುದ್ಧ ತಮಿಳುನಾಡಿನಲ್ಲಿ ಅನೇಕ ಸಮ್ಮೇಳನಗಳು ನಡೆದುವು. ವಿಶೇಷವಾಗಿ ಒಂದು ಮಹಿಳಾ ಸಮ್ಮೇಳನವನ್ನೂ ಸಂಘಟಿಸಲಾಗಿತ್ತು.

ತಮಿಳುನಾಡಿನಲ್ಲಿ ಇಷ್ಟೆಲ್ಲ ಹೋರಾಟದ ನಂತರವೂ ಹಿಂದಿ ಹೇರಿಕೆಯ ಪ್ರಯತ್ನಗಳು ನಿರಂತರವಾಗಿ ಮುಂದುವರಿದಿದ್ದುವು. ಆ ಕ್ಷಣದಲ್ಲಿ ಬಿಟ್ಟಂತೆ  ಮಾಡಿದರೂ ಮತ್ತೆ ಒಂದು ವರ್ಷವೋ, ಎರಡು ವರ್ಷವೋ ಬಿಟ್ಟು ಮತ್ತೆ ಹೇರುವ, ಪರಿಚಯಿಸುವ ಪ್ರಯತ್ನಗಳು ನಡೆದುವು. ಅಣ್ಣಾದುರೈ ಅವರು ಸತತವಾಗಿ ಈ ಹುನ್ನಾರದ ವಿರುದ್ಧ ಧ್ವನಿ ಎತ್ತುತ್ತಲೇ ಇದ್ದರು : ‘ಬಹುಜನರು ಮಾತನಾಡುತ್ತಾರೆ ಎಂದು ಯಾವುದೇ ಒಂದು ಭಾಷೆಯನ್ನು ಇನ್ನೊಬ್ಬರ ಮೇಲೆ ಹೇರಬಾರದು. ಇದಕ್ಕೆ ಅವಕಾಶ ಕೊಟ್ಟರೆ ಹಿಂದಿ ಮಾತನಾಡುವವರು ನಮ್ಮನ್ನು ಆಳುತ್ತಾರೆ, ನಾವು ತೃತೀಯ ದರ್ಜೆ ಪ್ರಜೆಗಳು ಅನಿಸುತ್ತೇವೆ; ಬಹುಸಂಖ್ಯೆಯಲ್ಲಿ ಇವೆ ಎಂಬ ಕಾರಣಕ್ಕಾಗಿ ಕಾಗೆಯನ್ನು ರಾಷ್ಟ್ರೀಯ ಪಕ್ಷಿ ಎನ್ನಲು ಆಗುತ್ತದೆಯೇ’ ಎಂದು ಅವರು ಕೇಳುತ್ತಿದ್ದರು.

ಸ್ವಾತಂತ್ರ್ಯ ಬಂದು ಆಗಿನ್ನೂ ಐದಾರು ವರ್ಷ ಅಷ್ಟೇ ಆಗಿತ್ತು. ಕೇಂದ್ರ ಸರ್ಕಾರದ ಸ್ವಾಮ್ಯದ ಎಲ್ಲ ಕಚೇರಿಗಳಲ್ಲಿ, ರೈಲು ನಿಲ್ದಾಣಗಳಲ್ಲಿ ಹಿಂದಿ ನಾಮಫಲಕಗಳು ಬಂದೇ ಬಿಟ್ಟುವು. ಅದುವರೆಗೆ All India Radio ಆಗಿದ್ದುದು ಆಕಾಶವಾಣಿಯಾಯಿತು. ದೂರದರ್ಶನದಲ್ಲಿ ಬೆಳಿಗ್ಗೆಯಿಂದ ಸಂಜೆ ವರೆಗೆ ಹಿಂದಿ ಕಾರ್ಯಕ್ರಮಗಳು ಪ್ರಸಾರ ಆಗತೊಡಗಿದುವು. ತಮಿಳುನಾಡಿನ ಜನರು ಮತ್ತೆ ಬಂಡೆದ್ದರು. ‘ನಮಗೆ ಈ ಹಿಂದಿ ಕಾರ್ಯಕ್ರಮಗಳು ಏಕೆ ಬೇಕು? ಆಕಾಶವಾಣಿ ಎಂಬ ಹೆಸರು ಏಕೆ ಇಟ್ಟಿರಿ’ ಎಂದು ಕೇಳಿದರು. ಅವರು ಅದನ್ನು ‘ವಾನುಲಿ’ ಎಂದರು. ಕನ್ನಡದಲ್ಲಿ ‘ಬಾನುಲಿ’ ಎಂಬ ಹೆಸರು ಬಂದುದು ಆಗಲೇ!

ತಮಿಳುನಾಡಿನ ಇತಿಹಾಸದಲ್ಲಿ 1965 ತಿರುವು ಬಿಂದುವಿನಂಥ ಘಟನೆ. ಸಂವಿಧಾನದ ನಿರ್ಮಾಪಕರು ಗಣರಾಜ್ಯ ಸ್ಥಾಪನೆಯಾದ 15 ವರ್ಷಗಳ ನಂತರ ಹಿಂದಿ ಭಾಷೆಯ ಸ್ಥಾನಮಾನದ ಬಗೆಗೆ ಪರಿಶೀಲಿಸಬಹುದು ಎಂದು ಹೇಳಿದ್ದರು. ಅಲ್ಲಿಯವರೆಗೆ ಅಂದರೆ 1950ರಿಂದ 15 ವರ್ಷಗಳ ವರೆಗೆ ಹಿಂದಿ ಜೊತೆಗೆ ಇಂಗ್ಲಿಷ್‌ ಕೂಡ ದೇಶದ ಅಧಿಕೃತ ಭಾಷೆ ಆಗಿರುತ್ತದೆ ಎಂದು ಅವರು ಹೇಳಿದ್ದರು. 1965ರಲ್ಲಿ ಹಿಂದಿ ‘ಏಕೈಕ ಅಧಿಕೃತ ಭಾಷೆ’ಯಾಗುವ ಅಪಾಯವಿತ್ತು. ತಮಿಳುನಾಡು ಆ ಅಪಾಯವನ್ನು ಮೊದಲು ಗ್ರಹಿಸಿತು. ‘ಹಿಂದಿಗೆ ಏಕೈಕ ಅಧಿಕೃತ ಭಾಷೆಯ ಸ್ಥಾನಮಾನ ಕೊಡಬಾರದು’ ಎಂದು ಹೋರಾಟ ಆರಂಭ

ವಾಯಿತು. ಹೋರಾಟ ಹಿಂಸೆಗೆ ತಿರುಗಿತು. ಪೊಲೀಸರು ಉಗ್ರವಾಗಿ ಪ್ರತಿಕ್ರಿಯಿಸಿದರು.

ಹೇಗಾದರೂ ಮಾಡಿ ಅವರಿಗೆ ಈ ಹೋರಾಟವನ್ನು ಬಗ್ಗು ಬಡಿಯಬೇಕಿತ್ತು. ತಮಿಳುನಾಡಿನಲ್ಲಿ ಭಕ್ತವತ್ಸಲ ನೇತೃತ್ವದ ಕಾಂಗ್ರೆಸ್‌ ಸರ್ಕಾರವಿತ್ತು. ಗೋಲಿಬಾರು ಮುಂತಾದ ಕಾರಣಗಳಿಂದ 61 ಜನರು ಸತ್ತರು. ಮತ್ತು ಇಬ್ಬರು ಡಿಎಂಕೆ ಕಾರ್ಯಕರ್ತರು ಬೆಂಕಿ ಹಚ್ಚಿಕೊಂಡು ಆತ್ಮಾಹುತಿ ಮಾಡಿಕೊಂಡರು. ಅಲ್ಲಿಗೆ ತಮಿಳುನಾಡಿನಲ್ಲಿ ಕಾಂಗ್ರೆಸ್ಸಿನ ‘ಆತ್ಮಾಹುತಿ’ಯೂ ಆಯಿತು. 1967ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಆ ಪಕ್ಷ ನಿರ್ನಾಮವಾಗಿ ಹೋಯಿತು. ಮುಖ್ಯಮಂತ್ರಿ, ಸಂಪುಟದ ಎಲ್ಲ ಸಚಿವರು ಹಾಗೂ ಪಕ್ಷದ ಅಧ್ಯಕ್ಷರು ಪರಾಜಿತರಾದರು. ಅನೇಕರು ಠೇವಣಿ ಕಳೆದುಕೊಂಡರು. ಡಿಎಂಕೆ ಅಧಿಕಾರಕ್ಕೆ ಬಂತು. ಆ ಹೋರಾಟದ ಕಾರಣವಾಗಿ ಈಗಲೂ ಹಿಂದಿಗೆ ಉಳಿದ ಎಲ್ಲ ಭಾಷೆಗಳ ಸಮಾನ ಸ್ಥಾನವಷ್ಟೇ ಇದೆ.

ಈ ಹೋರಾಟ, ದಕ್ಷಿಣ ಕರ್ನಾಟಕದ ಮೇಲೆ ತೀವ್ರ ಪರಿಣಾಮ ಬೀರಿತು. ಕುವೆಂಪು ಅವರು ಹಿಂದಿ ಹೇರಿಕೆ ವಿರುದ್ಧ ಧ್ವನಿ ಎತ್ತಿದರು. ಅವರು, ‘ಹಿಂದಿ, ಕನ್ನಡವನ್ನು ಕೊಲ್ಲುತ್ತದೆ, ಅದು ನಮಗೆ ಬೇಡ’ ಎಂದರು. ಅವರ ಜೊತೆಗೆ ಕನ್ನಡ ಚಳವಳಿಗಾರರೂ ಧ್ವನಿ ಎತ್ತಿದರು.  ಆದರೆ, ಈ ಕೂಗು ದಕ್ಷಿಣ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿ ಉಳಿಯಿತು.

ಮರಾಠಿ ಹಾಗೂ ಉರ್ದು ಭಾಷೆಗಳ ಗಾಢ ಪ್ರಭಾವಕ್ಕೆ ಒಳಗಾಗಿದ್ದ ಮುಂಬೈ ಹಾಗೂ ಹೈದರಾಬಾದ್‌  ಕರ್ನಾಟಕದಲ್ಲಿ ಹಿಂದಿ ಭಾಷೆ ಬಳಕೆಗೆ ಇದೇ ವಿರೋಧ ಹುಟ್ಟಲಿಲ್ಲ. ಹೀಗಾಗಿ ಹಿಂದಿ ಹೇರಿಕೆ ವಿರುದ್ಧ ಈಗಲೂ ಒಂದು ರಾಜ್ಯವಾಗಿ ಧ್ವನಿ ಎತ್ತುತ್ತಿರುವ ನಾಡು ಎಂದರೆ ತಮಿಳುನಾಡು ಮಾತ್ರ.  ಅಲ್ಲಿ ದೂರದರ್ಶನದಲ್ಲಿ ಹಿಂದಿ ಕಾರ್ಯಕ್ರಮಗಳು ಪ್ರಸಾರ ಆಗುವ ಅವಧಿಯಲ್ಲಿ ತಮಿಳು ಭಾಷೆಯ ಕಾರ್ಯಕ್ರಮಗಳೇ ಪ್ರಸಾರವಾಗುತ್ತವೆ.

ಹಾಗೆಂದು ಕೇಂದ್ರ ಸರ್ಕಾರ ಹಿಂದಿಯನ್ನು ಹೇರುವ, ನುಸುಳಿಸುವ ಪ್ರಯತ್ನದಿಂದ ಹಿಂದೆ ಸರಿಯಲೇ ಇಲ್ಲ. ‘ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ’ ಎಂಬ ಸಂಸ್ಥೆಯನ್ನು ಇದೇ ಕಾರಣಕ್ಕಾಗಿ ಅದು ಹುಟ್ಟಿ ಹಾಕಿತು. ಹಟದಿಂದ ಎನ್ನುವಂತೆ ಅದರ ಕೇಂದ್ರ ಕಚೇರಿಯನ್ನು ಚೆನ್ನೈನಲ್ಲಿ ತೆರೆಯಿತು. ಬೆಂಗಳೂರು ಸೇರಿ ಅನೇಕ ಕಡೆ ಅದರ ಶಾಖೆ ಇವೆ. ಹಿಂದಿ ಭಾಷೆಯನ್ನು ಉತ್ತೇಜಿಸುವ ಸಲುವಾಗಿ ಸಂಸತ್ತಿನ ಒಂದು ಸಮಿತಿಯೇ ಇದೆ.

ಅದು ಮಾಡುವ ಶಿಫಾರಸುಗಳಿಗೆ ರಾಷ್ಟ್ರಪತಿಯವರೇ ಅಂಕಿತ ಹಾಕುತ್ತಾರೆ. ಅಂದರೆ ಸಂಸತ್‌ ಸಮಿತಿ ಮಾಡಿದ ಶಿಫಾರಸುಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು ಮತ್ತು ಅದಕ್ಕೆ ತಕ್ಕ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅರ್ಥ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ, ‘ದಿನಕ್ಕೆ ಒಂದು ಹಿಂದಿ ಪದ’ (ಕಲಿಕೆ) ಎಂಬ ಫಲಕ ತೀರಾ ಈಚಿನ ವರೆಗೆ  ಇರುತ್ತಿತ್ತು. ಹಿಂದಿ ದಿವಸ್‌, ಹಿಂದಿ ಬಳಕೆಗೆ ಪ್ರಶಸ್ತಿ, ಸಮ್ಮಾನ ಇಂಥದೆಲ್ಲ ಹಿಂದಿ ಬಳಕೆಯನ್ನು ಬೆಳೆಸಬೇಕು ಮತ್ತು ಸ್ಥಳೀಯ ಭಾಷೆಯನ್ನು ಅಲಕ್ಷಿಸಬೇಕು ಎಂದೇ ಹೊರತು ಅದಕ್ಕೆ ಬೇರೆ ಯಾವ ಘನ ಉದ್ದೇಶವೂ ಇಲ್ಲ. ಅದರ ಫಲ ಎನ್ನುವಂತೆ, ಕರ್ನಾಟಕದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕನ್ನಡ ಭಾಷೆ ಬಲ್ಲವರನ್ನು ಮಾತ್ರ ನೇಮಕ ಮಾಡಿಕೊಳ್ಳಬೇಕು ಎಂಬ ನಿಯಮ ಸಡಿಲವಾಗಿ ಹೋಗಿದೆ.

ಅಲ್ಲಿ ಈಗ ಹಿಂದಿ ಬಲ್ಲವರಿಗೇ ಮಣೆ. ಅವರನ್ನು ದೇಶದ ಎಲ್ಲ ಬ್ಯಾಂಕುಗಳಲ್ಲಿ ಸೇರಿಸುವ ಕೆಲಸವನ್ನು ಕೇಂದ್ರ ಸರ್ಕಾರ ಅತ್ಯಂತ ಮುತುವರ್ಜಿಯಿಂದ ಮಾಡುತ್ತದೆ. ಕನ್ನಡ ಭಾಷೆ ಬಾರದವರನ್ನು ನೇಮಿಸಿಕೊಂಡ ಬ್ಯಾಂಕುಗಳಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಒಂದು ನೋಟಿಸ್‌ ಜಾರಿ ಮಾಡಬಹುದು ಅಷ್ಟೇ, ಅದಕ್ಕಿಂತ ಹೆಚ್ಚು ಮಾಡಲು ಅದಕ್ಕೆ ಅಧಿಕಾರವೂ ಇಲ್ಲ. ಸರ್ಕಾರಕ್ಕಂತೂ ಇಂಥ ವಿಚಾರಗಳು ಮುಖ್ಯ ಎಂದು ಅನಿಸುವುದೇ ಇಲ್ಲ. ಇದು ಒಂದು ಉದಾಹರಣೆ ಮಾತ್ರ.

ಇದಕ್ಕಿಂತ ಅಪಾಯಕಾರಿಯಾದುದು ಎಂದರೆ ಕೇಂದ್ರೀಯ ವಿದ್ಯಾಲಯಗಳಿಗೆ ನಮ್ಮ ಮಗುವನ್ನು ಸೇರಿಸಿದರೆ ಅದು ಹಿಂದಿಯನ್ನು ಕಡ್ಡಾಯವಾಗಿ ಕಲಿಯಲೇಬೇಕು. ಸ್ಥಳೀಯ ಭಾಷೆಯ ಗಂಧ ಗಾಳಿಯೂ ಅಲ್ಲಿ ಸುಳಿಯುವುದಿಲ್ಲ. ಸಿಬಿಎಸ್‌ಇ ಶಾಲೆಗಳಲ್ಲಿಯೂ ಅದೇ ಪಾಡು. ರೈಲ್ವೆ ಖಾತೆಯ ಸಚಿವರಾಗಿ ನಮ್ಮ ಮಲ್ಲಿಕಾರ್ಜುನ ಖರ್ಗೆಯವರೇ ಇರಲಿ ಅಥವಾ ಡಿ.ವಿ.ಸದಾನಂದಗೌಡರೇ ಇರಲಿ.

ಆ ಇಲಾಖೆಯ ಜಾಹೀರಾತುಗಳು ಮಾತ್ರ  ಹಿಂದಿಯಲ್ಲಿಯೇ ಇರುತ್ತವೆ. ಯಾರಿಗಾದರೂ ಅರ್ಥವಾಗಲಿ, ಆಗದೇ ಹೋಗಲಿ. ಇದನ್ನು ಒಂದು ಭಾಷೆಯ ಅಹಂಕಾರ ಎಂದು ಕರೆಯಬೇಕೇ ಅಥವಾ ದೌರ್ಜನ್ಯ ಎಂದು ಕರೆಯಬೇಕೇ? ರೈಲ್ವೆ ಇಲಾಖೆಯಲ್ಲಿ ನೌಕರಿಗಾಗಿ ಹಿಂದಿಯಲ್ಲಿ ಅರ್ಜಿ ಕರೆದು ಕನ್ನಡ ಅಥವಾ ಒಡಿಯಾ ಪತ್ರಿಕೆಯಲ್ಲಿ ಜಾಹೀರಾತು ಕೊಟ್ಟರೆ ಅಲ್ಲಿನ ಜನರಿಗೆ ಏನು ಅರ್ಥವಾಗುತ್ತದೆ? ಅವರಿಗೆ ಅರ್ಥವಾಗಬಾರದು ಎಂದೇ ಆ ಇಲಾಖೆ ಹಾಗೆ ಮಾಡುತ್ತದೆಯೇ? ಅಂಚೆ ಇಲಾಖೆಯಲ್ಲಿ ಮನಿಯಾರ್ಡರ್‌, ಟೆಲಿಗ್ರಾಂ ನಮೂನೆಗಳು ಹಿಂದಿಯಲ್ಲಿಯೇ ಇರುತ್ತವೆ. ವಾಸ್ತವವಾಗಿ ಅವು ಸ್ಥಳೀಯ ಭಾಷೆಯಲ್ಲಿ ಇರಬೇಕು. ಏಕೆಂದರೆ ಸಂವಿಧಾನದ ಪ್ರಕಾರ ಹಿಂದಿ ಮತ್ತು ಕನ್ನಡ ಭಾಷೆಯ ಅಥವಾ ಯಾವುದೇ ಪ್ರಾದೇಶಿಕ ಭಾಷೆಯ ಸ್ಥಾನಮಾನದಲ್ಲಿ ಯಾವುದೇ ವ್ಯತ್ಯಾಸ  ಇಲ್ಲ.

ಆದರೆ, ವ್ಯತ್ಯಾಸ ಇದೆ ಎಂದು ಈಗಿನ ಕೇಂದ್ರ ಸರ್ಕಾರ ಹೇಳುತ್ತಿದೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರು, ‘ಇನ್ನು ಮುಂದೆ ಪಾಸ್‌ಪೋರ್ಟಿನಲ್ಲಿ ಇಂಗ್ಲಿಷ್‌  ಜೊತೆಗೆ ಹಿಂದಿಯಲ್ಲಿಯೂ ನಿಮ್ಮ ವೈಯಕ್ತಿಕ ಮಾಹಿತಿ ಇರುತ್ತದೆ’ ಎಂದು ಹೇಳಿದ್ದಾರೆ. ಅದಕ್ಕೆ ಅವರು ಕೊಟ್ಟ ಕಾರಣ, ‘ಅರಬ್‌ ಮತ್ತು ಜರ್ಮನಿ ದೇಶಗಳಲ್ಲಿ ಅರೇಬಿಕ್‌  ಹಾಗೂ ಜರ್ಮನ್‌  ಭಾಷೆಯಲ್ಲಿಯೇ ಆಯಾ ವ್ಯಕ್ತಿಯ ಹೆಸರು, ವಿಳಾಸ  ಮುಂತಾದ  ಮಾಹಿತಿ ಇರುತ್ತದೆ’ ಎಂದು. ಭಾರತಕ್ಕೂ ಅರಬ್‌ ದೇಶಗಳಿಗೂ ವ್ಯತ್ಯಾಸ ಇಲ್ಲವೇ? ನಮ್ಮ ದೇಶದಲ್ಲಿ ಕೇವಲ ಹಿಂದಿ ಭಾಷೆಯನ್ನು ಮಾತ್ರ ಮಾತನಾಡುತ್ತೇವೆಯೇ? ಕೇಂದ್ರದ ಧೋರಣೆ ಹೇಗಿದೆ ಎಂದರೆ, ‘ಪಾಸ್‌ಪೋರ್ಟ್‌  ಕೊಡುವವರು ನಾವು, ನಾವು ಕೊಡುವ ಭಾಷೆಯಲ್ಲಿ ನೀವು ಅದನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ನಿಮಗೆ ಪಾಸ್‌ಪೋರ್ಟ್‌ ಕೊಡುವುದೇ ಇಲ್ಲ. ಏನು ಮಾಡುತ್ತೀರಿ’ ಎನ್ನುವಂತೆ!

ಕೇಂದ್ರದ ವಾರ್ತೆ ಮತ್ತು ಪ್ರಸಾರ ಸಚಿವ ವೆಂಕಯ್ಯ ನಾಯ್ಡು  ಗುಜರಾತಿನ ಸಾಬರಮತಿ ಆಶ್ರಮದಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘ಹಿಂದಿ ರಾಷ್ಟ್ರಭಾಷೆ’ ಎಂದಿದ್ದಾರೆ! ವೆಂಕಯ್ಯ ಆಂಧ್ರಪ್ರದೇಶದವರು. ಅವರಿಗೆ ದಕ್ಷಿಣ ಭಾರತದಲ್ಲಿ ನಡೆದ ಹಿಂದಿ ವಿರೋಧಿ ಹೋರಾಟ ತಿಳಿಯದ್ದೇನೂ ಅಲ್ಲ. ಏಕೆಂದರೆ ಮೂಲತಃ ಅವರು ತೆಲುಗು ದೇಶಂ ಪಕ್ಷದಲ್ಲಿ ಇದ್ದವರು; ಅಂದರೆ ತೆಲುಗು ಹೆಮ್ಮೆ ಎತ್ತರಿಸಲು ಹುಟ್ಟಿದ ಪಕ್ಷದಲ್ಲಿ ಇದ್ದವರು. ಅವರೇ ಹೀಗೆ ನಿಜವಲ್ಲದ್ದನ್ನು ಹೇಳುವುದಕ್ಕೆ  ಕಾರಣ ಇರಬಹುದು : ಹಿಂದಿಯನ್ನು ವಿರೋಧಿಸುವುದು ಎಂದರೆ ದೇಶವನ್ನು ವಿರೋಧಿಸುವಂತೆ ಎಂದು ಧ್ವನಿಸುವುದು ಕೇಂದ್ರ ಸರ್ಕಾರದ ಉದ್ದೇಶ ಆಗಿರಬಹುದು. ಹಿಂದಿ ಮೇಲಿನ ಪ್ರೇಮ ಹಿಂದುಸ್ತಾನದ ಮೇಲಿನ ಪ್ರೇಮಕ್ಕೆ ಸಮಾನ ಎಂದೂ ಕೇಂದ್ರ ಸರ್ಕಾರ ಹೇಳುತ್ತ ಇರಬಹುದು. ಇಂಥ ಸಮೀಕರಣಗಳು ಬಹಳ ಅಪಾಯಕಾರಿ.

ಭಾರತ ಅನೇಕ ರಾಜ್ಯಗಳ ಒಂದು ಒಕ್ಕೂಟ.  ಇಲ್ಲಿ ಅನೇಕ ಜಾತಿಗಳು, ಅನೇಕ ಭಾಷೆಗಳು, ಅನೇಕ ಊಟಗಳು, ಅನೇಕ ದೇವರುಗಳು ಎಲ್ಲ ಇವೆ. ಹಾಗಾಗಿಯೇ ಈ ದೇಶ ಇಷ್ಟು ಸುಂದರವಾಗಿದೆ. ಸಂವಿಧಾನದಲ್ಲಿ ಸ್ಥಾನ ಪಡೆದ 22 ಭಾಷೆಗಳನ್ನು ಬಿಟ್ಟರೂ ಜನರು ಬಳಸುವ ಭಾಷೆಗಳು ಇನ್ನೂ ಎಷ್ಟೋ ಸಾವಿರ ಇವೆ. ಅದೆಲ್ಲ ಆಯಾ ಜನರ ಅಸ್ಮಿತೆಗೆ, ಗುರುತಿಗೆ ಸಂಬಂಧಿಸಿದ್ದು. ಆದರೆ, ಪ್ರಭುತ್ವದ ವಿಸ್ತರಣೆಯ ಹಪಹಪಿಯಲ್ಲಿ ಪುಟ್ಟ ಪುಟ್ಟ ಭಾಷೆಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡು ಬಿಡುತ್ತವೋ ಏನೋ?ಮೊದಲು ಮೂರು ಭಾಷೆ ಇದ್ದುದು. ಆಮೇಲೆ ಎರಡು ಆಗಿ ಕೊನೆಯಲ್ಲಿ ಒಂದೇ ಆಗುವುದಿಲ್ಲ ಎಂದು ಹೇಗೆ ನಂಬುವುದು?

 

ಪ್ರತಿಕ್ರಿಯಿಸಿ (+)