ಶನಿವಾರ, ಮೇ 21, 2022
20 °C

ಹಿಮಾಲಯದಲ್ಲಿ ತಪ್ಪು ಹೆಜ್ಜೆಗಳು, ವಿನಾಶಕ್ಕೆ ನಾಂದಿ

ರಾಮಚಂದ್ರ ಗುಹಾ Updated:

ಅಕ್ಷರ ಗಾತ್ರ : | |

ಹಾತ್ಮ ಗಾಂಧಿ ಅವರ ಬ್ರಿಟಿಷ್ ಶಿಷ್ಯೆ ಮೀರಾ ಬೆನ್ ಅವರು ಉತ್ತರಾಖಂಡ ಹಿಮಾಲಯದಲ್ಲಿ 1940ರ ದಶಕದಲ್ಲಿ ಆಶ್ರಮವೊಂದನ್ನು ಸ್ಥಾಪಿಸಿದರು. ಗಿರಿಶ್ರೇಣಿಗಳಲ್ಲಿ ಪಯಣಿಸುತ್ತಿದ್ದಾಗ, ಬಾಂಜ್ ಓಕ್‌ನ ಕಾಡುಗಳನ್ನು ಚಿರ್‌ಪೈನ್‌ನ ಏಕಸಂಸ್ಕೃತಿಯ ಕಾಡುಗಳಾಗಿ ಪರಿವರ್ತಿಸುವ ಅರಣ್ಯ ಇಲಾಖೆಯ ಪ್ರಯತ್ನಗಳಿಂದ ಅವರು ದಿಗಿಲುಗೊಂಡಿದ್ದರು.

ಈ ಕ್ರಮದ ಹಿಂದಿದ್ದ ಮುಖ್ಯ ಪ್ರೇರಣೆ ವಾಣಿಜ್ಯ ಉದ್ದೇಶ. ಕೈಗಾರಿಕಾ ಟಿಂಬರ್ ಹಾಗೂ ರೆಸಿನ್ (ಪ್ಲಾಸ್ಟಿಕ್ ತಯಾರಿಕೆಗೆ ಅಗತ್ಯವಾದ ಮರದಿಂದ ಒಸರುವ ದ್ರವ್ಯ ಪದಾರ್ಥ) ಮೂಲವಾಗಿ ಚಿರ್‌ಮರಗಳಿಗೆ ಬಹಳ ಬೇಡಿಕೆಯಿತ್ತು. ಆದರೆ ಸ್ಥಳೀಯ ರೈತಸಮುದಾಯದ ಹಿತಗಳಿಗೆ ಇದು ವಿರುದ್ಧವಾಗಿತ್ತು. ಏಕೆಂದರೆ ಅವರಿಗೆ ಇಂಧನ, ಮೇವಿನ ಅಮೂಲ್ಯ ಮೂಲವಾಗಿದ್ದುದು ಬಾಂಜ್.1952ರಲ್ಲಿ ಬರೆದ `ಸಮ್‌ಥಿಂಗ್ ರಾಂಗ್ ಇನ್ ದಿ ಹಿಮಾಲಯ' ಎಂಬ ಲೇಖನದಲ್ಲಿ, ಬಾಂಜ್ ಜಾಗದಲ್ಲಿ ಚಿರ್‌ಮರಗಳನ್ನು ನೆಡುವುದು ಸಾಮಾಜಿಕವಾಗಿ ಅನ್ಯಾಯವಾದದ್ದು ಹಾಗೂ ಪರಿಸರ ದೃಷ್ಟಿಯಿಂದ ತಪ್ಪು ಮಾರ್ಗದರ್ಶನದಿಂದ ಕೂಡಿದ್ದು ಎಂದು ಮೀರಾ ಬೆನ್ ಎಚ್ಚರಿಸಿದ್ದರು. ಓಕ್ ಅರಣ್ಯಗಳಿಂದಾಗಿ ಹುಲುಸಾಗಿ ಕೆಳಗೆ ಬಿದ್ದ ಉದುರೆಲೆಗಳು ಮುಂಗಾರು ಮಳೆಯ ನೀರನ್ನು ಹೀರಿಕೊಂಡು `ಸುಂದರವಾದ ಸಿಹಿಯಾದ ತಂಪಾದ ನೀರಿನ ಬುಗ್ಗೆ'ಗಳನ್ನು ಸೃಷ್ಟಿಸುತ್ತವೆ.

ಹಳ್ಳಿಗರಿಗೂ ಇವೇ ಕುಡಿಯುವ ನೀರಿನ ಮುಖ್ಯ ಮೂಲ. ಆದರೆ ಚಿರ್‌ಅರಣ್ಯಗಳಲ್ಲಿ ಬರೀ ಬರಿದಾದ ಇಳಿಜಾರುಗಳು, ಜೊತೆಗೆ ಅದರ ಮೇಲೊಂದಿಷ್ಟು ಪೈನ್ ಮುಳ್ಳುಗಳು. ಪೈನ್ ಮರಗಳು ಹೆಚ್ಚಿದ್ದ ಕಡೆಯೆಲ್ಲಾ ಮಣ್ಣು ಹಾಗೂ ಕ್ಲ್ಲಲುಬಂಡೆ ಚೂರುಗಳ ರಾಶಿಯೊಂದಿಗೆ ನೀರು ಇಳಿಜಾರುಗಳಲ್ಲಿ ಹರಿದು ಹೋಗುತ್ತಿತ್ತು. ಇದರಿಂದ ಪ್ರವಾಹ ಉಂಟಾಗುತ್ತಿತ್ತು.ಅರಣ್ಯ ಇಲಾಖೆ ತನ್ನ ನೀತಿಯನ್ನು ಬದಲು ಮಾಡಿಕೊಂಡು ಪೈನ್ ಬದಲಿಗೆ ಓಕ್ ಮರಗಳಿಗೇ ಉತ್ತೇಜನ ನೀಡಬೇಕೆಂದು ಮೀರಾ ಬೆನ್ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದರು. `ಹಿಮಾಲಯಗಳ ದಕ್ಷಿಣ ಇಳಿಜಾರುಗಳಲ್ಲಿ ಬಾಂಜ್ ಅರಣ್ಯಗಳು, ಪ್ರಕೃತಿಯ ಮುಖ್ಯ ನೆಲೆ. ಅವುಗಳನ್ನು ನಾಶಪಡಿಸುವುದೆಂದರೆ, ಹೃದಯವನ್ನೇ ಕತ್ತರಿಸಿ ಹೊರಗೆ ತೆಗೆದಂತೆ. ಆ ಮೂಲಕ ಪ್ರಕೃತಿಯ ರಚನೆಗೇ ವಿನಾಶದ ಕೊಡಲಿ ಏಟು ಹಾಕಿದಂತೆ' ಎಂದು ಅವರು ಬರೆದಿದ್ದರು.ಈ ಗಾಂಧಿವಾದಿಯ ಎಚ್ಚರಿಕೆ ಮಾತುಗಳನ್ನು ನಿರ್ಲಕ್ಷಿಸಲಾಯಿತು. ಅರಣ್ಯ ಇಲಾಖೆ ಬಾಂಜ್‌ಗೆ ಉತ್ತೇಜನ ನೀಡಲಿಲ್ಲ. ಪೈನ್ ಅರಣ್ಯಗಳ ಭಾರಿ ಕಾರ್ಯಕ್ರಮವನ್ನೂ ಅದು ಆರಂಭಿಸಿತು. 1950 ಹಾಗೂ 1970ರ ಮಧ್ಯೆ, ಪರ್ವತಪ್ರದೇಶದ ಅರಣ್ಯಗಳಿಂದ ಬಯಲು ಪ್ರದೇಶಗಳ ಕಾರ್ಖಾನೆಗಳಿಗೆ ಚಿರ್‌ಪೈನ್ ಮರದ ಸರಬರಾಜು ವಾರ್ಷಿಕ 87,000 ದಿಂದ 200,000 ಕ್ಯೂಬಿಕ್ ಮೀಟರ್‌ಗಳಿಗೆ ಹೆಚ್ಚಾಯಿತು.1970ರಲ್ಲಿ, ಸಾರ್ವಜನಿಕ ಸ್ಮೃತಿಯಲ್ಲಿ ಅತಿ ಆತಂಕಕಾರಿ ಎನಿಸುವಂತಹ ಪ್ರಮಾಣದ ಪ್ರವಾಹಕ್ಕೆ ಅಲಕನಂದಾ ಕಣಿವೆ ಸಾಕ್ಷಿಯಾಯಿತು. ಇದು ಸುಮಾರು 100 ಚದರ ಕಿ.ಮೀ. ಭೂಮಿಯನ್ನು ಮುಳುಗಿಸಿಬಿಟ್ಟಿತು. ಸೇತುವೆ, ರಸ್ತೆಗಳು ಕೊಚ್ಚಿಹೋದವು. ಮನೆಗಳು, ಬೆಳೆಗಳು ನಾಶವಾದವು. ಗಂಗಾ ಕಾಲುವೆ ಕಟ್ಟಿಕೊಂಡಿದ್ದರಿಂದ ಬಯಲು ಪ್ರದೇಶಗಳಲ್ಲೂ ಇದರ ಪರಿಣಾಮ ಘೋರವಾಗಿಯೇ ಇತ್ತು. ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿ ಸುಮಾರು 9.5 ದಶಲಕ್ಷ ಎಕರೆ ಭೂಮಿಗೆ ನೀರಾವರಿ ಇಲ್ಲದಂತಾಯಿತು.ಅರಣ್ಯಗಳು ಬೋಳಾದ ಪ್ರದೇಶಗಳಲ್ಲೇ ಪ್ರಮುಖ ಭೂ ಕುಸಿತಗಳು ಸಂಭವಿಸಿವೆ ಎಂಬುದನ್ನು 1970ರ ಪ್ರವಾಹದ ಹಾವಳಿಯಲ್ಲಿ ನಲುಗಿದ ಗ್ರಾಮಸ್ಥರು ಗಮನಿಸಿದ್ದರು. ಒಂದೆಡೆ ಭೂ ಕೊರೆತ ಹಾಗೂ ಪ್ರವಾಹ, ಮತ್ತೊಂದೆಡೆ ಮರಗಳ ಮಾರಣ ಹೋಮಗಳ ನಡುವಿನ ಸಂಬಂಧವನ್ನು ರೈತಾಪಿವರ್ಗ ಗುರುತಿಸಿತ್ತು ಎಂಬುದರ ಬಗ್ಗೆ ಗಾಂಧಿವಾದಿ ಸಾಮಾಜಿಕ ಕಾರ್ಯಕರ್ತ ಚಂಡೀ ಪ್ರಸಾದ್ ಭಟ್ ಬರೆದಿದ್ದರು. ಜನರ ಈ ಅರಿವನ್ನಾಧರಿಸಿ ಚಿಪ್ಕೊ ಆಂದೋಲನವನ್ನು ಭಟ್ ಆರಂಭಿಸಿದರು. ಇದರಿಂದ ಹಿಮಾಲಯದ ಅರಣ್ಯ ನಾಶದ ಸಮಸ್ಯೆ ರಾಷ್ಟ್ರ ಹಾಗೂ ನಂತರ ಜಗತ್ತಿನ ಗಮನವನ್ನೇ ಸೆಳೆದುಕೊಂಡಿತು.ಚಿಪ್ಕೊ ಆಂದೋಲನದ ಪರಿಣಾಮವಾಗಿ, 1000 ಮೀಟರ್ ಎತ್ತರದ ಪ್ರದೇಶಗಳಲ್ಲಿರುವ ಮರಗಳನ್ನು ಕಡಿಯುವುದನ್ನು ಸರ್ಕಾರ ನಿಲ್ಲಿಸಿತು. ಆದರೆ ಗಿರಿಶ್ರೇಣಿಯ ಮೇಲೆ ಇತರ ಒತ್ತಡಗಳು ಮುಂದುವರಿದವು. ಅಯೋಧ್ಯಾ ಆಂದೋಲನದಿಂದಾಗಿ ಹೆಚ್ಚಿದ ಧಾರ್ಮಿಕ ಪ್ರಜ್ಞೆ ಹಾಗೂ ಖರ್ಚು ಮಾಡಲು ಹೆಚ್ಚು ಹಣ ಇರುವಂತಹ ಮಧ್ಯಮ ವರ್ಗದ ಬೆಳವಣಿಗೆಯನ್ನು 1980 ಹಾಗೂ 1990ರ ದಶಕ ಕಂಡಿತು. ಹೀಗಾಗಿ ಹೆಚ್ಚು ಹೆಚ್ಚು ಜನರಿಗೆ ಉತ್ತರಾಖಂಡದ ದೇವಾಲಯಗಳಿಗೆ ಭೇಟಿ ನೀಡುವ ಆಸಕ್ತಿ ಹೆಚ್ಚಿತು.

ಆದರೆ ಈ ಯಾತ್ರಾರ್ಥಿಗಳು ಹಿಂದಿನ ಕಾಲದಲ್ಲಿ ಕಾಲ್ನಡಿಗೆಯಲ್ಲಿ ಬರುತ್ತಿದ್ದ ಯಾತ್ರಾರ್ಥಿಗಳಂತಲ್ಲ. ಬಸ್‌ಗಳು, ಕಾರುಗಳು, ಎಸ್‌ಯುವಿಗಳಲ್ಲಿ ಬರುವಂತಹವರು ಇವರು. ಈ ಯಾತ್ರಾರ್ಥಿಗಳ ಅಗತ್ಯಗಳನ್ನು ಪೂರೈಸುವುದಕ್ಕಾಗಿ, ನದಿ ದಂಡೆಗಳಿಗೆ ಅಪಾಯಕಾರಿಯಾಗುವಷ್ಟು ಹತ್ತಿರದ ಸ್ಥಳಗಳಲ್ಲಿ ಹೋಟೆಲ್‌ಗಳು, ಊಟ ವಸತಿಗಳ ಮನೆಗಳನ್ನು ಸಾಲು ಸಾಲಾಗಿ ನಿರ್ಮಿಸಲಾಯಿತು. ಪ್ರವಾಸಿಗರ ಪ್ರವಾಹವೂ ರಸ್ತೆಗಳ ಮೇಲೆ ಒತ್ತಡ ಹೆಚ್ಚಿಸಿತು. ಕಸದ ಗುಡ್ಡೆಗಳ ಏರಿಕೆಗೆ ಕಾರಣವಾಯಿತು.1998ರಲ್ಲಿ ಉತ್ತರಾಖಂಡ ರಾಜ್ಯ ರಚನೆಯಾಯಿತು. ಎರಡು ವರ್ಷಗಳ ನಂತರ, ಭೂಕುಸಿತದ ಬೆದರಿಕೆಗಳಿಂದಾಗಿ ಗಿರಿಶ್ರೇಣಿಗಳಲ್ಲಿನ ಪರಿಸರದ ಸ್ಥಿತಿಗತಿ ಬಗ್ಗೆ ಅಧ್ಯಯನ ವರದಿಯೊಂದನ್ನು ಸಿದ್ಧಪಡಿಸಲು ತಂಡವೊಂದನ್ನುಕೇಂದ್ರ ಕೃಷಿ ಸಚಿವಾಲಯ ರಚಿಸಿತು. ಈ ಅಧ್ಯಯನವನ್ನು ಮೂವರು ಅನುಭವಿ ವ್ಯಕ್ತಿಗಳು ಕೈಗೊಂಡರು. ಅಹಮದಾಬಾದ್‌ನ ಸ್ಪೇಸ್ ಅಪ್ಲಿಕೇಷನ್ಸ್ ಸೆಂಟರ್, ಫಿಸಿಕಲ್ ರಿಸರ್ಚ್ ಲ್ಯಾಬೊರೇಟರಿಯ ಇಬ್ಬರು ವಿಜ್ಞಾನಿಗಳು ಹಾಗೂ ಗೋಪೇಶ್ವರದ ದಶೌಲಿ ಗ್ರಾಮ ಸ್ವರಾಜ್ಯದಲ್ಲಿ ಕೆಲಸ ಮಾಡುವ ಸಾಮಾಜಿಕ ಕಾರ್ಯಕರ್ತರೊಬ್ಬರು ಈ ಅಧ್ಯಯನ ತಂಡದಲ್ಲಿದ್ದರು.ಉಪಗ್ರಹ ಅಂಕಿಅಂಶಗಳ ದಕ್ಷ ಬಳಕೆಯ ಜೊತೆಗೆ, ವಿಸ್ತಾರವಾದ ಕ್ಷೇತ್ರಕಾರ್ಯವನ್ನಾಧರಿಸಿದ 60ಕ್ಕೂ ಹೆಚ್ಚು ಪುಟಗಳ ಸಂಶೋಧನಾ ವರದಿಯನ್ನು ಈ ಮೂವರು ಲೇಖಕರು (ಎಂ.ಎಂ. ಕಿಮೊಥಿ, ನವೀನ್ ಜುಯಾಲ್ ಹಾಗೂ ಓಂಪ್ರಕಾಶ್ ಭಟ್) ಸಚಿವಾಲಯಕ್ಕೆ ಸಲ್ಲಿಸಿದರು. ಈ ಗಿರಿಶ್ರೇಣಿಗಳ ಸೂಕ್ಷ್ಮ ಪರಿಸರದ ಬಗ್ಗೆ ಈ ವರದಿಯಲ್ಲಿ ಒತ್ತಿ ಹೇಳಲಾಗಿದೆ. ಉತ್ತರಾಖಂಡ ವಿಶ್ವದಲ್ಲೇ ಭೂಕಂಪಕ್ಕೆ ಒಳಗಾಗಬಹುದಾದ ಅಪಾಯದಲ್ಲಿರುವ ಸೂಕ್ಷ್ಮ ಪ್ರದೇಶಗಳಲ್ಲಿ ಒಂದು. 

ಇಲ್ಲಿ 200 ವರ್ಷಗಳ ಅವಧಿಯಲ್ಲಿ  122 ಬಾರಿ  ಭೂಕಂಪಗಳಾಗಿದ್ದು ಈ ಕುರಿತ ದಾಖಲೆಗಳನ್ನು ಕಾಪಾಡಿಕೊಂಡುಬರಲಾಗಿದೆ. ಈ ಪ್ರದೇಶದಲ್ಲಿನ ಇತರ ನೈಸರ್ಗಿಕ ಅಪಾಯಗಳೆಂದರೆ ಕಾಡಿನ ಬೆಂಕಿ ಹಾಗೂ ಹಿಮಕುಸಿತ. ಜೊತೆಗೆ ಭೂ ಕುಸಿತದ ಸಮಸ್ಯೆಯೂ ಇದೆ. ಕೆಲವೊಮ್ಮೆ  ಇದು ನೈಸರ್ಗಿಕ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಇದು ಮಾನವ ನಿರ್ಮಿತ. ಏಕೆಂದರೆ ದಟ್ಟ ಅರಣ್ಯಗಳ ಇಳಿಜಾರುಗಳಲ್ಲಿ ಕಾಡಿನ ವಿನಾಶ  ಅವ್ಯಾಹತವಾಗಿದೆ.

ರಸ್ತೆ ನಿರ್ಮಾಣದಲ್ಲಿ ಅತಿಯಾದ ಡೈನಮೈಟ್ ಬಳಕೆ, ಬಂಡೆಗಳಲ್ಲಿನ ಬಿರುಕುಗಳನ್ನು ಹೆಚ್ಚಿಸಿದೆ. ಇಳಿಜಾರುಗಳಲ್ಲಿ ಕೊಚ್ಚಿಹೋದ ಭಗ್ನಾವಶೇಷಗಳು ನದಿಗೆ ಸೇರಿ ನದಿ ಹರಿವಿಗೆ ತಡೆಯೊಡ್ಡಿ ತಾತ್ಕಾಲಿಕ  ಸರೋವರಗಳ ನಿರ್ಮಾಣಕ್ಕೆ ಕಾರಣವಾಗುತ್ತದೆ. ಭಾರಿ ಮಳೆಯಿದ್ದಾಗ, ಅಣೆಕಟ್ಟುಗಳು ಒಡೆದು ನೀರು ಕೊಚ್ಚಿಹೋಗಿ ಮನೆ, ಹೊಲಗಳನ್ನೆಲ್ಲಾ ನಾಶ ಮಾಡಿದ್ದೂ ಇದೆ.1970ರ ಪ್ರವಾಹಕ್ಕೂ ಮೂಲವಾಗಿದ್ದು, ಅದರ ಹಿಂದಿನ ದಶಕದಲ್ಲಿ ಕೈಗೊಳ್ಳಲಾಗಿದ್ದ ರಸ್ತೆ ನಿರ್ಮಾಣ ಹಾಗೂ ವಾಣಿಜ್ಯ ಅರಣ್ಯೀಕರಣದ ಬೃಹತ್ ವಿಸ್ತರಣೆ. ಇದು ಅಲಕನಂದಾದ ಅನೇಕ ಉಪನದಿಗಳಲ್ಲಿ ಅವಶೇಷಗಳ ಸಂಗ್ರಹಕ್ಕೆ ಕಾರಣವಾಗಿತ್ತು. 1970ರ ಜುಲೈ ಮೂರನೇ ವಾರದಲ್ಲಿ ಭಾರಿ ಮೇಘ ಸ್ಫೋಟ ಸಂಭವಿಸಿ ಸುಮಾರು 275 ಮಿಲಿಮೀಟರ್ ಮಳೆ ಒಂದೇ ದಿನದಲ್ಲಿ ಬಿದ್ದಿತ್ತು. ಈ ಹಿಂದೆಂದೂ ಇರದಷ್ಟು ಪ್ರಮಾಣದಲ್ಲಿ ನದಿಗೆ ನೀರು ಹರಿದು ಬಂದ ಪರಿಣಾಮವಾಗಿ ಅಣೆಕಟ್ಟುಗಳು ಕೊಚ್ಚಿಹೋಗಲು ಕಾರಣವಾಗಿದ್ದವು.ಹಿಂದಿನ ಹಾಗೂ ಸದ್ಯದ ಪರಿಸ್ಥಿತಿಯ ವಿಶ್ಲೇಷಣೆ ಆಧಾರದ ಮೇಲೆ ಕಿಮೊಥಿ, ಜುಯಾಲ್ ಹಾಗೂ ಭಟ್ ಅವರು ಈ ಮುನ್ಸೂಚನೆಗಳನ್ನು ನೀಡಿದ್ದರು: `ಹಳೆಯ ದುರಂತಗಳಿಗೆಲ್ಲಾ ಹೋಲಿಸಿದರೆ ಮುಂದೆ ಸಂಭವಿಸಬಹುದಾದ ಮಿಂಚಿನ ಪ್ರವಾಹ ಅತಿ ದೊಡ್ಡ ಪ್ರಮಾಣದಲ್ಲಿ ಜನರು ಹಾಗೂ ವಸತಿ ಪ್ರದೇಶಗಳಿಗೆ ಹಾನಿ ಮಾಡಲಿದೆ.

ಹೀಗಾಗಿ ನದಿ ಪಕ್ಕದಲ್ಲಿ ವಸತಿ ಹಾಗೂ ವಾಣಿಜ್ಯ ಉದ್ದೇಶಗಳ ಕಟ್ಟಡ ನಿರ್ಮಾಣಗಳಿಗೆ ಅವಕಾಶ ನೀಡಬಾರದು. ವಿಶೇಷವಾಗಿ ನದಿ ತಟದ ಮನರಂಜನೆಯ ರೆಸಾರ್ಟ್‌ಗಳ ಹೆಚ್ಚಳವನ್ನು ನಿಗಾ ವಹಿಸಿ ನಿಯಂತ್ರಿಸಬೇಕು. 1970ರ ದಶಕದಲ್ಲಾದ ಪ್ರಮಾಣದ ದುರಂತ ಮತ್ತೆ ಸಂಭವಿಸಿದಲ್ಲಿ ಸುಮಾರು ಐದು ಪ್ರಮುಖ ಪಟ್ಟಣಗಳು ಹಾಗೂ ನದಿ ದಂಡೆಗಳಿಗೆ ಹತ್ತಿರವಾಗಿ ಬೆಳೆದಿರುವ ಪ್ರದೇಶಗಳಿಗೆಲ್ಲಾ ದೊಡ್ಡ ಬೆದರಿಕೆ ಆಗಲಿದೆ.'ಅಂತಹ ದುರಂತಕ್ಕೆ ಮೊದಲೇ ಎಚ್ಚೆತ್ತುಕೊಂಡು ಸನ್ನದ್ಧವಾಗಿರಲು ಉಪಗ್ರಹ ತಂತ್ರಜ್ಞಾನಗಳ ನೆರವಿನೊಂದಿಗೆ ಭೂಕುಸಿತ, ಬಿರುಕುಗಳ ಬಗ್ಗೆ ತೀವ್ರ ನಿಗಾ ವಹಿಸಲು ಈ ವಿಜ್ಞಾನಿಗಳು ಶಿಫಾರಸು ಮಾಡಿದ್ದರು. ಇಂತಹ ನಿಗಾ ವ್ಯವಸ್ಥೆಯನ್ನು ಮುಂಗಾರು ಪೂರ್ವ ಹಾಗೂ ಮುಂಗಾರಿನ ನಂತರದ ಅವಧಿಯಲ್ಲಿ ತೀವ್ರಗೊಳಿಸಬೇಕೆಂದೂ ಸಲಹೆ ನೀಡಿದ್ದರು. ಎರಡನೆಯದಾಗಿ ಹಾನಿಗೀಡಾಗಿರುವ ಇಳಿಜಾರುಗಳನ್ನು ಗುರುತಿಸಿ ಸ್ಥಳೀಯ ಮರಗಳನ್ನು ಬೆಳೆಸುವ ಮೂಲಕ ಹಾಗೂ ಚೆಕ್‌ಡ್ಯಾಂ, ಒತ್ತಾಸೆಯಾಗುವ ಗೋಡೆಗಳ ನಿರ್ಮಾಣಗಳ ಮೂಲಕ ಸ್ಥಿರೀಕರಣಕ್ಕೂ ಗಮನ ಕೊಡಬೇಕು.

ಮೂರನೆಯದಾಗಿ ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ಸ್ಥಳೀಯ ಜನರಿಗೆ ತರಬೇತಿ ನೀಡಬೇಕು ಎಂದೂ ಸಲಹೆ ನೀಡಿದ್ದರು. ಮುಂದೆ ಬರಬಹುದಾದ ವಿಪತ್ತುಗಳನ್ನು ನಿರ್ವಹಿಸುವುದಕ್ಕಾಗಿ ಗ್ರಾಮ ಪಂಚಾಯಿತಿಗಳು, ಯುವಜನ ಹಾಗೂ ಮಹಿಳಾ ಸಂಘಟನೆಗಳನ್ನು ಸನ್ನದ್ಧವಾಗಿರಿಸುವ ಉದ್ದೇಶ ಇಲ್ಲಿತ್ತು.ಸರ್ಕಾರಕ್ಕೆ ಸಲ್ಲಿಸಲಾದ ಅನೇಕ ವೈಜ್ಞಾನಿಕ ವರದಿಗಳಂತೆ ಇದೂ ಕೂಡ ಜನಸಾಮಾನ್ಯರಿಗೆ ಸಿಗುವಂತಹದ್ದಾಗಿರಲಿಲ್ಲ. ಉತ್ತರಾಖಂಡದಲ್ಲಿ ಭೀಕರ ಪ್ರವಾಹದ ನಂತರ ಕಳೆದ ವಾರವಷ್ಟೇ ನನಗೆ ಇದರ ಪ್ರತಿ ಸಿಕ್ಕಿತು. ಆದರೆ ಅದನ್ನು ಈಗ ಓದುತ್ತಿರುವಾಗ ಅನೇಕ ಪ್ರಶ್ನೆಗಳು ಹುಟ್ಟುತ್ತವೆ. ಈ ದೂರದೃಷ್ಟಿಯಳ್ಳ ವರದಿಯನ್ನು, ಈ ವರದಿ ತಯಾರಿಕೆಗೆ ಆದೇಶಿಸಿದ ಕೇಂದ್ರ ಕೃಷಿ ಸಚಿವಾಲಯದವರು ಓದಿದ್ದಾರೆಯೆ?

ಈ ವರದಿಯನ್ನು ಕೇಂದ್ರ ಸಚಿವಾಲಯ, ಉತ್ತರಾಖಂಡದ ರಾಜ್ಯ ಸರ್ಕಾರಕ್ಕೆ ಕಳುಹಿಸಿತ್ತೆ? ಅಲ್ಲಿ ಅದನ್ನು ಯಾರಾದರೂ ಓದಿದ್ದರೆ? ಓದಿದ್ದರೆ  ವಿಜ್ಞಾನಿಗಳು ಸಲಹೆ ನೀಡಿದಂತಹ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಏನಾದರೂ ಪ್ರಯತ್ನಗಳಾಗಿದ್ದವೆ? ವರದಿಯಲ್ಲಿ ಅಷ್ಟೊಂದು ಭಾರಿ ಪ್ರಮಾಣದ ಸಾಕ್ಷ್ಯಗಳಿದ್ದರೂ, ಅಲಕನಂದಾ ಕಣಿವೆಯಾದ್ಯಂತ ಅಷ್ಟೊಂದು ರಸ್ತೆ, ಕಟ್ಟಡ, ಹೋಟೆಲ್‌ಗಳ ವಿಸ್ತರಣೆಗೆ ರಾಜ್ಯ ಸರ್ಕಾರ ಏಕೆ ಅವಕಾಶ ನೀಡಿತು?ಕೃಷಿ ಸಚಿವಾಲಯದ ಈ ವರದಿಯಂತಹದ್ದೇ ಅನೇಕ ಎಚ್ಚರಿಕೆಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕಡೆಗಣಿಸಿವೆ. ಚಂಡೀ ಪ್ರಸಾದ್ ಭಟ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೀಗೆ ಹೇಳಿದರು: `ಭಾಗೀರಥಿ ಹಾಗೂ ಅಲಕಾನಂದಾ ಯಾವಾಗಲೂ ಸೂಕ್ಷ್ಮವಾದ ಪ್ರವಾಹ ಭೀತಿ ಇರುವಂತಹ ನದಿಗಳೇ. ಭೂಕುಸಿತಗಳು, ದೇವದಾರು ಮರಗಳನ್ನು ಕಡಿಯುವುದು ಹಾಗೂ ಅಭಿವೃದ್ಧಿಯ ಹೆಸರಲ್ಲಿ ಪರ್ವತಶ್ರೇಣಿಗಳಲ್ಲಿ ಡೈನಮೈಟ್ ಸಿಡಿಸುವುದು...

ಹೀಗೆ ಅಸಂಖ್ಯ ಸಂದರ್ಭಗಳಲ್ಲಿ ಆಗುತ್ತಿರುವ ಹಾನಿಯ ಬಗ್ಗೆ ಅಧಿಕಾರಿಗಳಿಗೆ ಹೇಳಿದ್ದೇವೆ. ಸ್ಥಳೀಯ ಪತ್ರಿಕೆಗಳೂ ಇವನ್ನು ವರದಿ ಮಾಡಿವೆ. ಆಡಳಿತ ಯಂತ್ರವನ್ನೂ  ನಾವು ಎಚ್ಚರಿಸಿದ್ದೇವೆ. ಆದರೂ ಏನೂ ಮಾಡಲಾಗಲಿಲ್ಲ'. ಕಳೆದ ತಿಂಗಳು ಉತ್ತರಾಖಂಡದಲ್ಲಿ ಉಂಟಾದ ಪ್ರವಾಹಕ್ಕೆ ಪ್ರಕೃತಿ ಕಾರಣ. ಆದರೆ ಅದರ ಪರಿಣಾಮ ತೀವ್ರಗೊಳ್ಳಲು ಮನುಷ್ಯನ ಕೈವಾಡ ಕಾರಣ. ಜೂನ್ 15ರ ಬೃಹತ್ ಮೇಘ ಸ್ಫೋಟ ಅನಿರೀಕ್ಷಿತವಾದದ್ದು.

ಏಕೆಂದರೆ ಈ ಪರ್ವತ ಶ್ರೇಣಿಗಳಲ್ಲಿ ಮುಂಗಾರು ಆಗಮಿಸುವುದು ಜುಲೈ ಆರಂಭದ್ಲ್ಲಲಿ. ಹೀಗಿದ್ದೂ ಪರಿಸರ ದೃಷ್ಟಿಯಿಂದ ಅತಿ ಸೂಕ್ಷ್ಮವಾದ ಪ್ರದೇಶದಲ್ಲಿ ಅನಿಯಂತ್ರಿತ ಕಟ್ಟಡ ನಿರ್ಮಾಣ ಚಟುವಟಿಕೆ ವಿಸ್ತರಣೆಯೇ ವಿನಾಶದ ಪ್ರಮಾಣ ಹೆಚ್ಚಾಗಲು ಮುಖ್ಯ ಕಾರಣ. ಉತ್ತರಾಖಂಡದಲ್ಲಿ  ನಿಧಾನವಾಗಿ ನೋವಿನಿಂದ ಹೊರಬರುತ್ತಾ ಪುನರ್ವಸತಿ ಕಾರ್ಯಕ್ರಮ ಆರಂಭವಾಗುತ್ತಿದ್ದಂತೆಯೇ, ಹಿಮಾಲಯದ ಇತರ ಭಾಗಗಳಲ್ಲಿನ ಎಚ್ಚರಿಕೆಯ ಸಂಕೇತಗಳಿಗೆ ಗಮನ ನೀಡಲು ರಾಜಕಾರಣಿಗಳ ಮೇಲೆ ಒತ್ತಡವನ್ನು  ಹೇರಬೇಕು.

ಅರುಣಾಚಲ ಪ್ರದೇಶ ರಾಜ್ಯದಲ್ಲಿ, ಪರಿಸರ ಅಥವಾ ಸಾಮಾಜಿಕ ಪರಿಣಾಮಗಳನ್ನೇನೂ ಪರಿಗಣಿಸದೆ ಅನೇಕ ಬಹು ದೊಡ್ಡ ಅಣೆಕಟ್ಟು ಯೋಜನೆಗಳಿಗೆ ಅಂಗೀಕಾರ ನೀಡಲಾಗಿದೆ. ಇದೂ ಕೂಡ ಭಾರಿ ಮುಂಗಾರು ಮಳೆ ಬೀಳುವ ಪ್ರದೇಶ. ಅತಿ ವೇಗವಾಗಿ ಹರಿಯುವ ನದಿಗಳು, ಕಾಡಿನ ಕಡಿದಾದ ಇಳಿಜಾರು ಪ್ರದೇಶಗಳು ಇಲ್ಲೂ ಇವೆ. ಅಣೆಕಟ್ಟುಗಳ ನಿರ್ಮಾಣ ಅರಣ್ಯ ನಾಶ, ಮಣ್ಣಿನ ಸವಕಳಿ ಹೆಚ್ಚಿಸಿ ನೈಸರ್ಗಿಕವಾಗಿ ನೀರು ಹರಿದುಹೋಗುವ ವ್ಯವಸ್ಥೆಗೆ ಅಡ್ಡಿಪಡಿಸುತ್ತದೆ. ಇದು ಪ್ರವಾಹದ ಸಾಧ್ಯತೆ ಹೆಚ್ಚಿಸುತ್ತದೆ. ಇದರಿಂದ ಅನೇಕ ಹಳ್ಳಿಗಳನ್ನೂ ಸ್ಥಳಾಂತರಗೊಳಿಸುವಂತಾಗಬಹುದು.ಈ ಯೋಜನೆಗಳ ಅಲ್ಪಾವಧಿ ಲಾಭಗಳನ್ನು (ಬಹುತೇಕ ಗುತ್ತಿಗೆದಾರರು ಹಾಗೂ ನಗರ ಗ್ರಾಹಕರಿಗೆ ಸೇರುವಂತಹದ್ದು) ಅವುಗಳ ಅಲ್ಪ ಹಾಗೂ ದೀರ್ಘಾವಧಿ ಪರಿಣಾಮಗಳ ದೃಷ್ಟಿಯಿಂದ ತೂಗಿ ನೋಡಬೇಕು. ಉತ್ತರಾಖಂಡದ ಈ ಭೀಕರ ದುರಂತದ ಹಿನ್ನೆಲೆಯಲ್ಲಿ ವಿವೇಕದ ಕೆಲಸ ಎಂದರೆ ಹಿಮಾಲಯದಾದ್ಯಂತ ಎಲ್ಲಾ ಅಣೆಕಟ್ಟು ನಿರ್ಮಾಣ ಹಾಗೂ ಗಣಿಗಾರಿಕೆ ಯೋಜನೆಗಳ ಮೇಲೆ ನಿಷೇಧಕ್ಕೆ ಕರೆ ನೀಡುವುದು.

ಅಲ್ಲದೆ ಇಂತಹ ಯೋಜನೆಗಳನ್ನು ಅವುಗಳ ನಿಜವಾದ ಅರ್ಹತೆಗಳ ಆಧಾರದ ಮೇಲೆ ವಸ್ತುನಿಷ್ಠವಾಗಿ ಮೌಲ್ಯಮಾಪನ ಮಾಡಲು ವೈಜ್ಞಾನಿಕ ತಜ್ಞರು ಹಾಗೂ ಸಮಾಜ ವಿಜ್ಞಾನಿಗಳ ತಂಡದಿಂದ ಅಧ್ಯಯನ ನಡೆಸುವುದೂ ಬಹುಶಃ ಒಳ್ಳೆಯದು.

ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.