ಸೋಮವಾರ, ಡಿಸೆಂಬರ್ 9, 2019
17 °C
ಶಬರಿಮಲೆ: ಅಸಮಾನತೆ ವಿರುದ್ಧ ಪ್ರತಿಭಟಿಸಲು ಬಲವಂತದ ಪ್ರವೇಶಕ್ಕಿಂತ ಮನಪೂರ್ವಕ ಬಹಿಷ್ಕಾರವೇ ಸೂಕ್ತ

ಇದು ನಂಬಿಕೆಯ ವಿಚಾರ, ಆದುದರಿಂದ...

Published:
Updated:

ಶಬರಿಮಲೆಗೆ ನಿರ್ದಿಷ್ಟ ವಯಸ್ಸಿನ ಸ್ತ್ರೀಯರು ಹೋಗಬಾರದು ಎನ್ನುವ ನಿರ್ಬಂಧ ಖಂಡಿತವಾಗಿಯೂ ನಂಬಿಕೆಯ ವಿಚಾರ. ಅಯ್ಯಪ್ಪ ಎಂಬ ದೇವರು ಅಥವಾ ದೇವರು ಎಂಬುದಾಗಿ ಕರೆಯಲ್ಪಡುವ ಅಯ್ಯಪ್ಪ ನೈಷ್ಠಿಕ ಬ್ರಹ್ಮಚಾರಿಯಾದ ಕಾರಣ ಆತನಿಗೆ ವಯಸ್ಸಿಗೆ ಬಂದ ಮತ್ತು ವಯಸ್ಸು ಮೀರದ ಸ್ತ್ರೀಯರ ಸೋಂಕು ತಗುಲಬಾರದು ಎನ್ನುವ ಕಾರಣಕ್ಕೆ ಈ ನಿಷೇಧ ಎನ್ನುವ ತರ್ಕವೂ ನಂಬಿಕೆಯ ವಿಚಾರ. ನಂಬಿಕೆ ಅಂದಮೇಲೆ ನಂಬಿಕೆ. ಅದರಲ್ಲಿ ಸರಿ-ತಪ್ಪುಗಳ ಪ್ರಶ್ನೆ ಇಲ್ಲ, ತಾರ್ಕಿಕ-ಅತಾರ್ಕಿಕದಪ್ರಶ್ನೆ ಇಲ್ಲವೇ ಇಲ್ಲ. ನಂಬಿಕೆಯ ಹೆಸರಲ್ಲಿ ಕೊಲೆ, ಸುಲಿಗೆ, ಅತ್ಯಾಚಾರ ಅಥವಾ ಇನ್ಯಾವುದೇ ಅಪರಾಧ ಕೃತ್ಯಗಳು ನಡೆಯುವುದಿಲ್ಲ ಎಂದಾದರೆ ಅವರವರ ನಂಬಿಕೆ ಅವರ
ವರಿಗೆ. ಇಷ್ಟನ್ನು ಒಪ್ಪಿಕೊಂಡ ಮೇಲೂ ನಂಬಿಕೆಗಳು ಮತ್ತು ಸಂವಿಧಾನದತ್ತವಾದ ವ್ಯಕ್ತಿ ಸ್ವಾತಂತ್ರ್ಯ, ಸಮಾನತೆ ಇತ್ಯಾದಿ ಮೌಲ್ಯಗಳು ಮುಖಾಮುಖಿಯಾದಾಗ ಕೂದಲು ಸೀಳುವ ವಿವಿಧ ರೀತಿಯ ವಾದಗಳನ್ನು ಮಂಡಿಸಬಹುದು. ಅದುಶಬರಿಮಲೆಯ ವಿಚಾರದಲ್ಲೂ ನಡೆಯುತ್ತಿದೆ. ಮನುಷ್ಯನನ್ನು ಸೃಷ್ಟಿಸಿರಬಹುದಾದ ದೇವರು ಮತ್ತು ಮನುಷ್ಯ ಸೃಷ್ಟಿಸಿದ ದೇವರುಗಳ ನಡುವಣ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವ ಮಂದಿಯ ಸಂಖ್ಯೆ ಒಂದು ಸಮಾಜದಲ್ಲಿ ಕಡಿಮೆ ಇದ್ದಷ್ಟೂ ಆ ಸಮಾಜದಲ್ಲಿ ಇಂತಹ ಸಂಘರ್ಷಗಳು ಹೆಚ್ಚು ಹೆಚ್ಚು ನಡೆಯುತ್ತಿರುತ್ತವೆ.

1929ರ ಡಿಸೆಂಬರ್ 4ರಂದು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಸರ್ಕಾರ ಸತಿ ಪದ್ಧತಿಯನ್ನು ನಿಷೇಧಿಸಿತು. ಸತಿ ಕೂಡಾ ಒಂದು ಆಚಾರವಾಗಿತ್ತು, ಒಂದು ಸಂಪ್ರದಾಯವಾಗಿತ್ತು, ಒಂದು ನಂಬಿಕೆಯಾಗಿತ್ತು. ಇದರ ನಿಷೇಧಕ್ಕೆ ಭಾರತೀಯ ಸಮಾಜದ ಬೇರೆ ಬೇರೆ ವರ್ಗಗಳ ಮಂದಿಯಿಂದ ಮೂರು ರೀತಿಯ ಪ್ರತಿಕ್ರಿಯೆಗಳು ಬಂದದ್ದು ಚರಿತ್ರೆಯಲ್ಲಿ ದಾಖಲಾಗಿದೆ. ಮೊದಲನೆಯ ವರ್ಗದ ಪ್ರಕಾರ ಸತಿ ಪದ್ಧತಿ ಯಾವ ಅರ್ಥದಲ್ಲಿ ನೋಡಿದರೂ ಅಮಾನವೀಯ ಮತ್ತು ಅದನ್ನು ಕಂಪನಿ ಸರ್ಕಾರ ನಿಷೇಧಿಸಿದ್ದು ಸರಿ. ಇನ್ನೊಂದು ವರ್ಗ ಇದಕ್ಕೆ ತದ್ವಿರುದ್ಧವಾದ ನಿಲುವು ತಳೆದಿತ್ತು. ಈ ವರ್ಗದವರ ಪ್ರಕಾರ ಸತಿ ಪದ್ಧತಿ ಹಿಂದೂ ಸಮಾಜದ ಸಾಂಪ್ರದಾಯಿಕ ಆಚರಣೆಯಾದುದರಿಂದ ಅದರ ನಿಷೇಧ ತಪ್ಪು. ‘ನಮ್ಮ ನಂಬಿಕೆಯನ್ನು ನಿಷೇಧಿಸಲು ಕಂಪನಿ ಸರ್ಕಾರಕ್ಕೆ ಏನು ಅಧಿಕಾರವಿದೆ’ ಎನ್ನುವ ಪ್ರಶ್ನೆಯನ್ನು ಅವರು ಎತ್ತಿದ್ದರು. ಈ ಧರ್ಮ ಸಂರಕ್ಷಕ ವರ್ಗ ಎಷ್ಟು ವ್ಯಗ್ರವಾಗಿತ್ತು ಎಂದರೆ ಸತಿ ನಿಷೇಧಕ್ಕೆ ಕಾರಣರಾಗಿದ್ದ ಭಾರತೀಯ ಸಮಾಜ ಸುಧಾರಕ ರಾಜಾರಾಮ್ ಮೋಹನ್ ರಾಯ್ ಅವರು ಕಲ್ಕತ್ತಾ ಬೀದಿಗಳಲ್ಲಿ ಓಡಾಡುವಾಗ ಅಂಗರಕ್ಷಕರನ್ನು ಇರಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದಿತ್ತು ಎಂದು ಅವರ ಜೀವನಚರಿತ್ರಕಾರರು ಬರೆದಿದ್ದಾರೆ.

ಕುತೂಹಲಕಾರಿಯಾಗಿದ್ದದ್ದು ಮೂರನೆಯ ವರ್ಗ ತಳೆದಿದ್ದ ಅಭಿಪ್ರಾಯ. ಈ ವರ್ಗದವರ ಪ್ರಕಾರ ಸತಿ ಪದ್ಧತಿತಪ್ಪು ಮತ್ತು ಅದು ಮುಂದುವರಿಯಬಾರದು. ಆದರೆ ಅದನ್ನು ಸರ್ಕಾರ ನಿಷೇಧಿಸಿದ್ದು ಕೂಡಾ ತಪ್ಪು. ಮೇಲ್ನೋಟಕ್ಕೆ ವಿರೋಧಾಭಾಸಕಾರಿ ಎಂದು ಕಾಣುವ ಈ ಅಭಿಪ್ರಾಯದ ಹಿಂದೆ ಸಮಾಜದಲ್ಲಿ ಇದ್ದ ನ್ಯೂನತೆಗಳಿಗೆ ಸಮಾಜವೇ ಪರಿಹಾರ ಕಂಡುಕೊಳ್ಳಬೇಕೇ ಹೊರತು ಸರ್ಕಾರ ಹೊರಗಿ
ನಿಂದ ಹಸ್ತಕ್ಷೇಪ ಮಾಡಬಾರದು ಎನ್ನುವ ನಿಲುವನ್ನು ಕಾಣಬಹುದು. ಸಮಾಜದಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ಗುಮಾನಿಯಿಂದ ನೋಡಬೇಕು ಎನ್ನುವ ಆಶಯವನ್ನು ಈ ನಿಲುವು ಹೊಂದಿದೆ ಎನ್ನುವುದು ನಿಜವಾದರೂ ಸತಿಯಂತಹ ಬರ್ಬರ ಆಚಾರಗಳ ವಿಚಾರದಲ್ಲಿ ಈ ಉದಾರವಾದವನ್ನು ಒಪ್ಪಿಕೊಳ್ಳುವುದು ಕಷ್ಟ. ಆದುದರಿಂದಲೇ ಭಾರತದ ಸಾಮಾಜಿಕ ಕಟ್ಟಳೆಗಳ ವಿಚಾರದಲ್ಲಿ ಬಹುಮಟ್ಟಿಗೆ ಅಂತರವನ್ನು ಕಾಯ್ದುಕೊಂಡಿದ್ದ ಕಂಪನಿ ಸರ್ಕಾರ ಸತಿಯ ವಿಚಾರದಲ್ಲಿ ಮಾತ್ರ ರಾಜಾರಾಮ್ ಮೋಹನ್ ರಾಯ್ ಅವರ ಪ್ರಯತ್ನಕ್ಕೆ ಕಾನೂನಿನ ಮೂಲಕ ಕೈಜೋಡಿಸಿದ್ದು.

ಸತಿ ಸಹಗಮನದ ಆಚರಣೆಯನ್ನು ಮತ್ತು ಶಬರಿಮಲೆಯಲ್ಲಿ ಸ್ತ್ರೀಯರ ಪ್ರವೇಶಕ್ಕಿರುವ ನಿರ್ಬಂಧವನ್ನು ಒಂದೇ ರೀತಿಯಲ್ಲಿ ಕಾಣಲಾಗದು ಎಂಬುದನ್ನು ಒಪ್ಪಿಕೊಳ್ಳೋಣ. ಸತಿಸಹಗಮನ ಪರೋಕ್ಷವಾದ ಕೊಲೆ, ಆದುದರಿಂದ ಅಲ್ಲಿದ್ದದ್ದು ಅಪರಾಧ- ನ್ಯಾಯದ ವಿಚಾರ. ಶಬರಿಮಲೆಯಲ್ಲಿ ವಿವಾದಕ್ಕೆ ಕಾರಣವಾಗಿರುವುದು ಲಿಂಗ-ಆಧಾರಿತ ಸಮಾನತೆಯ ವಿಚಾರ. ಸತಿಯ ವಿಚಾರದಲ್ಲಿ ಮಧ್ಯಪ್ರವೇಶಿಸಲು ಅಂದಿನ ಸರ್ಕಾರಕ್ಕೆ ಇದ್ದ ನೈತಿಕ ಸಮರ್ಥನೆ ಮತ್ತು ಕಾನೂನಿನ ಸ್ಪಷ್ಟತೆಯು ಶಬರಿಮಲೆಯ ವಿಚಾರದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್‌ಗಾಗಲೀ, ಸರ್ಕಾರಕ್ಕಾಗಲೀ ಇಲ್ಲ ಎನ್ನುವುದನ್ನೂ ಒಪ್ಪಿಕೊಳ್ಳೋಣ. ಇಲ್ಲಿ ಮುಖ್ಯವಾಗುವುದು ಎರಡೂ ವಿವಾದಗಳಿಗೆ ಎರಡು ವಿಭಿನ್ನ ಕಾಲಘಟ್ಟದಲ್ಲಿ ಕಂಡುಬಂದ ಪ್ರತಿಕ್ರಿಯೆಗಳು. ಸ್ತ್ರೀಯರನ್ನು ಅಕ್ಷರಶಃ ಕ್ರೂರವಾಗಿ ಹತ್ಯೆ ಮಾಡುವ ಕಂದಾಚಾರವೊಂದನ್ನು ನಿಲ್ಲಿಸಲು ಹೊರಟಾಗ ಸಂಪ್ರದಾಯದ ಹೆಸರಿನಲ್ಲಿ ಹಿಂಸಾತ್ಮಕವಾಗಿ ಪ್ರತಿಭಟಿಸಲು ನಾಚದ ಸಮಾಜ, ಒಂದು ಸೀಮಿತವಾದ ಅಸಮಾನತೆಯ ಆಚರಣೆಯನ್ನು ನಿಲ್ಲಿಸುತ್ತೇವೆ ಎಂದು ಹೊರಟವರ ವಿರುದ್ಧ ಸಂಪ್ರದಾಯದ ಹೆಸರಿನಲ್ಲಿ ಸಹಜವಾಗಿಯೇ ಪ್ರತಿಭಟಿಸಿದೆ. ಈ ನಡುವೆ 190 ವರ್ಷಗಳು ಸಂದು ಹೋಗಿವೆ, ಈ ಅವಧಿಯಲ್ಲಿ ಸ್ವಾತಂತ್ರ್ಯ ಬಂದಿದೆ, ಸಂವಿಧಾನ ಜಾರಿಯಾಗಿದೆ, ತಂತ್ರಜ್ಞಾನ ಬೆಳೆದಿದೆ, ಪ್ರಜಾತಂತ್ರ ಆಳಕ್ಕಿಳಿದಿದೆ ಎಂಬಿತ್ಯಾದಿ ಅಂಶಗಳೆಲ್ಲವೂ ಇಲ್ಲಿ ನಗಣ್ಯವಾಗಿ ಹೋದದ್ದು ಭಾರತೀಯ ಸಮಾಜದ ಅನುಕೂಲಸಿಂಧು ಚಲನಶೀಲತೆಗೆ ಕನ್ನಡಿ ಹಿಡಿಯುತ್ತದೆ ಎಂದಷ್ಟೇ ಹೇಳಬಹುದು.

ಸಮಾನತೆ ಎನ್ನುವುದು ಕಾನೂನಿನ ದೃಷ್ಟಿಯಲ್ಲಿ ಮುಖ್ಯವಾದಷ್ಟೇ ಧರ್ಮದ ದೃಷ್ಟಿಯಲ್ಲೂ ಮುಖ್ಯ. ಶಬರಿಮಲೆಯಲ್ಲಿ ಸಂಪ್ರದಾಯವಾದಿಗಳ ಪರ ವಾದ ಮಂಡಿಸುವ ವಕೀಲರು ‘ನಾವು ಸಮಾನತೆಗೆ ವಿರುದ್ಧವಾಗಿಲ್ಲ’ ಎನ್ನುತ್ತಾರೆ. ‘ನಾವು ಇಲ್ಲಿನ ಸಂಪ್ರದಾಯವನ್ನಷ್ಟೇ ಪಾಲಿಸುತ್ತೇವೆ’ ಎನ್ನುತ್ತಾರೆ. ‘ನಿಮ್ಮ ಸಂಪ್ರದಾಯದಲ್ಲಿ ಲಿಂಗ-ಆಧಾರಿತ ತಾರತಮ್ಯ ಇದೆಯಲ್ಲಾ’ ಎಂದಾಗ ‘ಬ್ರಹ್ಮಚಾರಿಯಾದ ಅಯ್ಯಪ್ಪ ದೇವರಿಗೆ ಪ್ರತ್ಯುತ್ಪಾದನಾ ಸಾಮರ್ಥ್ಯವಿರುವ ಸ್ತ್ರೀಯರ ಸೋಂಕು ತಗುಲಬಾರದು’ ಎನ್ನುತ್ತಾರೆ. ‘ದೇವರಿಗೆ ಹಾಗೆಲ್ಲಾ ಸೋಂಕು ತಟ್ಟುತ್ತದೆಯೇ, ದೇವರ ಬ್ರಹ್ಮಚರ್ಯವು ಮಾನವ ಸ್ತ್ರೀಯರ ಸೋಂಕಿನಿಂದ ವಿಚಲಿತಗೊಳ್ಳುತ್ತದೆಯೇ, ಹೀಗೆಲ್ಲಾ ವಾದಿಸುವುದರಿಂದ ಅಯ್ಯಪ್ಪ ದೇವರನ್ನೇ ಹುಲು ಮನುಷ್ಯರ ಮಟ್ಟಕ್ಕಿಳಿಸಿದ ಹಾಗಾಯ್ತಲ್ಲಾ’ ಎಂದರೆ, ‘ನಿಮ್ಮ ದೇವರ ಕಲ್ಪನೆಯೇ ಸರಿ ಇಲ್ಲ’ ಎನ್ನುತ್ತಾರೆ. ‘ನಮ್ಮ ದೇವರು ಹಾಗೇನೇ ಇರುವುದು’ ಎನ್ನುತ್ತಾರೆ. ‘ನಮ್ಮ ಧರ್ಮಗ್ರಂಥಗಳ ಪ್ರಕಾರ ಮನುಷ್ಯ ದೇವರಾಗುತ್ತಾನೆ, ದೇವರು ಮನುಷ್ಯರಂತೆ ಇರುತ್ತಾನೆ’ ಎನ್ನುತ್ತಾರೆ. ಧರ್ಮ ಗ್ರಂಥಗಳು ಅಂತ ಪುರಾಣಕತೆಗಳನ್ನು ಮತ್ತು ಸ್ಥಳ ಪುರಾಣಗಳನ್ನು ಉದಾಹರಿಸುತ್ತಾರೆ.

ಅದು ಅವರ ನಂಬಿಕೆ. ಅಥವಾ ಅವರು ನ್ಯಾಯಾಲಯದ ಮುಂದೆ ಯಾರನ್ನು ಪ್ರತಿನಿಧಿಸುತ್ತಾರೋ ಅವರ ನಂಬಿಕೆ. ಆದರೆ ತಾವು ಜೋತುಬಿದ್ದ ನಂಬಿಕೆಯನ್ನು ಈ ರೀತಿ ಒರಟೊರಟಾಗಿ ಸಮರ್ಥಿಸಿಕೊಳ್ಳುವುದರಿಂದ ಅವರು ಯಾವ ಧರ್ಮದ ಹೆಸರಿನಲ್ಲಿ ಇದನ್ನೆಲ್ಲಾ ಮಾಡುತ್ತಿದ್ದಾರೋ ಆ ಧರ್ಮದ ಸಂರಕ್ಷಣೆಯಾಗುವುದಿಲ್ಲ ಎನ್ನುವ ಅಂಶವನ್ನು ಅವರು ಪರಿಗಣಿಸಿದಂತಿಲ್ಲ. ಅಥವಾ ಅಷ್ಟನ್ನು ತಿಳಿದುಕೊಳ್ಳಲು ಅವರ ನಂಬಿಕೆ ಅವರಿಗೆ ಅಡ್ಡಬರುತ್ತದೆ. ನಿರ್ದಿಷ್ಟ ಸ್ಥಳದ ನಂಬಿಕೆ ಏನಾದರೂ ಇರಲಿ, ನಿಜವಾದ ಧರ್ಮದಲ್ಲಿ, ಧರ್ಮ ಪ್ರತಿಪಾದಿಸುವ ದೇವರ ಪರಿಕಲ್ಪನೆಯಲ್ಲಿ ಇಂತಹ ಸ್ತ್ರೀ-ಪುರುಷ ಭೇದಕ್ಕೆ, ಇಂತಹ ಶುದ್ಧಿ-ಮಲಿನತೆಯ ಕಟ್ಟುಪಾಡುಗಳಿಗೆಲ್ಲಾ ಅವಕಾಶವಿಲ್ಲ ಎಂದು ವಾದಿಸುವ ಒಬ್ಬನೇ ಒಬ್ಬ ಧಾರ್ಮಿಕ ನಾಯಕನ ಧ್ವನಿ ಇಡೀ ವಿವಾದದ ಹಿನ್ನೆಲೆಯಲ್ಲಿ ಕ್ಷೀಣವಾಗಿಯಾದರೂ
ಕೇಳಿಸದೇ ಹೋದದ್ದು ಧರ್ಮ ಯಾವ ಸ್ಥಿತಿಯಲ್ಲಿದೆ ಎನ್ನುವುದನ್ನು ಸೂಚಿಸುತ್ತದೆ. ಶಬರಿಮಲೆಗೆ ಹೋಗುವ ಹಾದಿಗುಂಟ ಕೆಲ ದಿನಗಳಿಂದ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸುತ್ತಿದ್ದರೆ ಧರ್ಮದ ರಕ್ಷಣೆ ಎಂಥೆಂಥವರ ಕೈಯ್ಯಲ್ಲಿ, ಎಂಥೆಂಥವರ ಸುಪರ್ದಿಯಲ್ಲಿ ಆಗುತ್ತಿದೆ ಎನ್ನುವುದು ವೇದ್ಯವಾಗುತ್ತದೆ.

ಇನ್ನು, ಇಂತಹ ವಿವಾದಾತ್ಮಕ ಆಚರಣೆಗಳ ಹಿನ್ನೆಲೆಯಲ್ಲಿ ಸ್ತ್ರೀ-ಸಮಾನತೆ, ಜಾತಿ ಸಮಾನತೆ ಮುಂತಾದವುಗಳನ್ನು ಪ್ರತಿಪಾದಿಸುವವರು ಯೋಚಿಸಬಹುದಾದ ಒಂದು ವಿಚಾರವಿದೆ. ಸಮಾನತೆಯ ಪ್ರಶ್ನೆ ಇರುವುದು ಇಂತಹ ನಂಬಿಕೆಗಳನ್ನು ಹೊಂದಿದ ಸ್ಥಳಗಳನ್ನು ಒತ್ತಾಯಪೂರ್ವಕವಾಗಿ ಪ್ರವೇಶಿಸುವುದರಲ್ಲಿ ಅಲ್ಲ. ಅಥವಾ ಯಾವುದೋ ನಿರ್ದಿಷ್ಟ ಸಮುದಾಯಗಳಿಗೆ ಮಾತ್ರ ಸೀಮಿತವಾದದ್ದು ಎಂದು ಪರಿಗಣಿಸಲ್ಪಡುವ ಕಾರ್ಯಕ್ರಮಗಳಲ್ಲಿ ಬಲವಂತದಿಂದ ಪಾಲ್ಗೊಂಡು ಹಕ್ಕು ಪ್ರತಿಪಾದಿಸುವುದರಲ್ಲಿ ಅಲ್ಲ.
ಸಮಾನತೆಯ ಪ್ರತಿಪಾದನೆಯು ಉದ್ಧಟತನದ ಸಂಘರ್ಷದ ಮೂಲಕವಾಗಲೀ, ಅಸಹಾಯಕತೆಯ ಗೋಗರೆತದ ಮೂಲಕವಾಗಲೀ ಆಗಬಾರದು. ಶಬರಿಮಲೆಯಲ್ಲಿ ಸಮಾನತೆಯನ್ನು ಪ್ರತಿಪಾದಿಸುವವರು ಮಾಡಬಹುದಾದ ಸ್ವಾಭಿಮಾನದ ಕೆಲಸ ಅಂದರೆ ಆ ಕ್ಷೇತ್ರವನ್ನು ಬಹಿಷ್ಕರಿಸುವುದು ಮತ್ತು ಸಮಾನತೆಯನ್ನು ಗೌರವಿಸುವವರೆಲ್ಲರೂ ಈ ಬಹಿಷ್ಕಾರದಲ್ಲಿ ಪಾಲ್ಗೊಳ್ಳಿರಿ ಅಂತ ಜಾಗೃತಿ ಸೃಷ್ಟಿಸುವುದು. ‘ನಿಮ್ಮ ದೇವರು ಸ್ತ್ರೀಯರಿಂದ ಅಷ್ಟೊಂದು ವಿಚಲಿತನಾಗುವವನು ಎಂದಾಗಿದ್ದರೆ, ನಿಮ್ಮ ದೇವರಿಗೆ ಆತನ ಸೃಷ್ಟಿ
ಯಲ್ಲೇ ಮಲಿನತೆ ಕಂಡರೆ, ಅಂತಹ ದೇವರನ್ನು ನೀವೇ ಪೂಜಿಸಿ’ ಎನ್ನುವುದು ಹೋರಾಟ. ‘ಸ್ತ್ರೀ ಹಿಂಸೆಗೆ ಹೇಸದ ಭಕ್ತ ಸಮೂಹವನ್ನು ಇಷ್ಟೊಂದು ಸಂಖ್ಯೆಯಲ್ಲಿ ಹೊಂದಿರುವ ನಿಮಗೂ ನಿಮ್ಮ ಆರಾಧಾನಾಲಯಕ್ಕೂ ನಾವು ಬರುವುದಿಲ್ಲ’ ಎನ್ನುವ ನಿಲುವು ತಳೆದರೆ ಅದು ಸಮಾನತೆಯ ಹೋರಾಟ ಮಾತ್ರವಲ್ಲ, ದೇವರನ್ನು ಅವರ ಭಕ್ತರುಗಳು ಎಂದುಕೊಂಡವರಿಂದ ರಕ್ಷಿಸುವ ಮಾರ್ಗ ಕೂಡಾ.

ಪಂಕ್ತಿಭೇದ, ಮಡೆಸ್ನಾನ ಇತ್ಯಾದಿಗಳ ವಿಷಯದಲ್ಲೂ ಅಷ್ಟೇ. ‘ನಿಮ್ಮ ಜತೆ ಕುಳಿತು ಊಟ ಮಾಡಲು ನಮಗೆ ಇಷ್ಟವಿಲ್ಲ’ ಎಂದು ಪ್ರತಿಪಾದಿಸುವ ವರ್ಗದ ಜತೆ, ‘ಇಲ್ಲ ಇಲ್ಲ ನಾವು ನಿಮ್ಮ ಜತೆಯಲ್ಲೇ ಕುಳಿತು ತಿನ್ನಬೇಕು ಅಥವಾ ನೀವು ನಮ್ಮೊಂದಿಗೆ ಬಂದು ಕುಳಿತುಕೊಳ್ಳಬೇಕು’ ಎಂದು ದುಂಬಾಲು ಬೀಳುವುದೇಕೆ? ‘ದೇವರೆದುರು ಕೂಡಾ ಸಂಪ್ರದಾಯದ ನೆಪದಲ್ಲಿ ನಮ್ಮನ್ನು ಸಹಿಸಿಕೊಳ್ಳದವರ ಜತೆ ನಾವ್ಯಾಕೆ ಸಹಪಂಕ್ತಿ ಬಯಸಬೇಕು’ ಎನ್ನುವ ಪ್ರಶ್ನೆಯನ್ನು ಎತ್ತಿದರೆ ಅದು ಹೋರಾಟ. ಇಂತಹ ನಂಬಿಕೆಯನ್ನು ಪೋಷಿಸುವ ಸ್ಥಳಗಳಿಗೆ ಹೋಗಬೇಡಿ ಎನ್ನುವ ಜನಜಾಗೃತಿ ಮೂಡಿಸುವಲ್ಲಿ ಸಫಲರಾದರೆ ಅದು ಹೋರಾಟ. ‘ನಿಮ್ಮ ದೇವರು ನಿಮ್ಮ ಸೃಷ್ಟಿ, ನಮಗೆ ಬೇಕಾದ ದೇವರನ್ನು ನಾವು ಸೃಷ್ಟಿಸಿಕೊಳ್ಳುತ್ತೇವೆ’ ಎನ್ನುವುದು ಸರಿಯಾದ ನಿಲುವು. ಇದು ಕೇರಳದ ನಾರಾಯಣ ಗುರುಗಳ ನಿಲುವಾಗಿತ್ತು. ಅದನ್ನವರು ಮಾಡಿದರು. ಅಂತಹ ಕೇರಳದಲ್ಲಿ ಇಂದು ಶಬರಿಮಲೆಗೆ ಹೋಗಬಾರದು ಎಂದು ಬೊಬ್ಬಿಡುವ ಮಹಿಳೆಯರಿದ್ದಾರೆ, ಶಬರಿಮಲೆಗೆ ಹೋಗಬೇಕು ಎಂದು ಕಾದಿರುವ ಮಹಿಳೆಯರು ಒಂದಷ್ಟು ಮಂದಿ ಇರಬಹುದು- ಈ ಎರಡೂ ವರ್ಗದವರಿಂದಲೂ ಆಗದ ಧರ್ಮ ಸುಧಾರಣೆ, ಸಮಾಜ ಸುಧಾರಣೆ ಆಗಬಹುದಾಗಿರುವುದು ‘ಈ ರೀತಿಯ ಜೀವ-ವಿರೋಧಿ, ದೇವ-ವಿರೋಧಿ ನಂಬಿಕೆಗಳನ್ನೆಲ್ಲಾ ಆವಾಹಿಸಿಕೊಂಡಿರುವ ಒಂದು ಸಂಸ್ಥೆಗೆ, ಒಂದು ಸ್ಥಳಕ್ಕೆ ಹೋಗುವುದಿಲ್ಲ’ ಎನ್ನುವ ನಿಲುವು ತಳೆಯಬಲ್ಲವರಿಂದ ಮತ್ತು ಹೋಗುವುದರಲ್ಲಿ ಅರ್ಥ ಇಲ್ಲ ಎನ್ನುವ ಜಾಗೃತಿ ಸೃಷ್ಟಿಸಬಲ್ಲವರಿಂದ. ಈ ರೀತಿಯ ಹೋರಾಟ ಸಂವಿಧಾನವಿರೋಧಿ ಸಾಮಾಜಿಕ ಆಚಾರಗಳಿಗೆ ಆರ್ಥಿಕ ಪರಿಹಾರ ಕಂಡುಕೊಳ್ಳುವ ಮಾರ್ಗ ಕೂಡಾ. ಯಾವಾಗ ಈ ಎಲ್ಲಾ ಪವಿತ್ರ ಸ್ಥಳಗಳಿಗೆ ಜನಪ್ರವಾಹ ಮತ್ತು ಧನಪ್ರವಾಹ ಕಡಿಮೆಯಾಗುತ್ತದೋ ಆಗ ಆಚಾರಗಳೂ ಬದಲಾಗಬಹುದು. ಇದಕ್ಕೆ ಪೂರಕವಾಗಿ, ಸರ್ಕಾರ ಇಂತಹ ಸಂಸ್ಥೆಗಳ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು ಎನ್ನುವುದಕ್ಕಿಂತ ಇಂತಹ ಸ್ಥಳಗಳಿಗೆ ಸರ್ಕಾರವು ತೆರಿಗೆ ಹಣ ನೀಡಬಾರದು ಎನ್ನುವ ನಿಲುವು ತಳೆಯುವುದು ಹೆಚ್ಚು ಸೂಕ್ತ. ನಂಬಿಕೆಯನ್ನು ಬೆಂಬಲಿಸುವ ದೊಡ್ಡ ಜನವರ್ಗ ಇದೆ ಎಂದು ತಾನೇ ಕೇರಳದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ‘ಭಕ್ತ’ರ ಬೆಂಬಲಕ್ಕೆ ನಿಂತದ್ದು. ಜನಬೆಂಬಲ ಇನ್ನೊಂದು ಕಡೆ ಇದೆ ಎಂದಾಗ ಧರ್ಮದ ರಾಜಕೀಯವೂ ಬದಲಾಗಬಹುದು.

ಒಟ್ಟು ಪ್ರಕರಣದಲ್ಲಿ ಪ್ರಜ್ಞಾವಂತ ನಾಗರಿಕರನ್ನು ಹೊಂದಿದ ಕೇರಳ ಅದೆಂತಹ ಕೀರ್ತಿ ಸಂಪಾದಿಸಿತು? ಸ್ತ್ರೀ-ಹಿಂಸೆಗಿಳಿದು ದೇವರನ್ನು ಸಂರಕ್ಷಿಸಲು ಮುಂದಾದ ಮಂದಿ ತಮ್ಮ ಧರ್ಮಕ್ಕೆ ಎಂತಹ ಕೀರ್ತಿ ತಂದರು? ಎಲ್ಲದಕ್ಕಿಂತ ಮುಖ್ಯವಾಗಿ ಪ್ರಾಯದ ಹೆಂಗಸರನ್ನು ಕಂಡರೆ ದೇವರ ಬ್ರಹ್ಮಚರ್ಯ ಕೆಟ್ಟೀತು ಎನ್ನುವಲ್ಲಿ ದೇವರಿಗೆ ಎಂತಹ ಉನ್ನತೋನ್ನತ ಕೀರ್ತಿ ಬಂತು? ಈ ಪ್ರಶ್ನೆಗಳನ್ನು ಎತ್ತಿ
ಕೊಂಡು ಒಂದು ಕ್ಷಣವಾದರೂ ಸಾವಧಾನವಾಗಿ ಯೋಚಿಸುವ ಮಂದಿ ದೇವರ ಸ್ವಂತ ನಾಡಿನಲ್ಲಿ, ಪ್ರಪಂಚದ ಉದಾತ್ತ ಧರ್ಮದಲ್ಲಿ ಮತ್ತು ಶ್ರದ್ಧಾ-ಭಕ್ತಿ ಸಮನ್ವಿತರಾಗಿ 41 ದಿನ ವ್ರತ ನಡೆಸಿ ದೇಹ ಮತ್ತು ಮನಸ್ಸನ್ನು ನಿರ್ಮಲಿನಗೊಳಿಸಿಕೊಳ್ಳುವ ಕರಿವಸ್ತ್ರಧಾರಿ ಅಯ್ಯಪ್ಪ ಭಕ್ತ ವೃಂದದಲ್ಲಿ ಯಾರಾದರೂ ಇದ್ದಾರು ಎಂದು ಆಶಿಸೋಣ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು