ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರ್ತು ಪರಿಸ್ಥಿತಿ ಎನ್ನುವುದೊಂದು ಶಾಶ್ವತ ಸ್ಥಿತಿ

Last Updated 2 ಜುಲೈ 2018, 16:58 IST
ಅಕ್ಷರ ಗಾತ್ರ

ಇಂದಿರಾ ಗಾಂಧಿ ದೇಶದ ಮೇಲೆ ಹೇರಿದ್ದ ತುರ್ತು ಪರಿಸ್ಥಿತಿಯನ್ನು ಅದಕ್ಕೆ 43 ವರ್ಷ ತುಂಬಿದ ನೆಪವೊಡ್ಡಿ ಪ್ರಧಾನಮಂತ್ರಿಯಾಗಿ ಕೇಂದ್ರದ ಪ್ರಮುಖ ಸಚಿವರು ಮತ್ತು ಬಿಜೆಪಿಯ ಪ್ರಭೃತಿಗಳೆಲ್ಲಾ ಸೇರಿ ಹಿಂದಿಲ್ಲ ಮುಂದಿಲ್ಲ ಎಂಬಂತೆ ಕಳೆದ ವಾರ ಮತ್ತೊಮ್ಮೆ ದೇಶಕ್ಕೆ ನೆನಪಿಸಿದರು. ಹೋದ ವರ್ಷ ಸಣ್ಣಗೆ ಪ್ರಾರಂಭವಾದ ತುರ್ತು ಪರಿಸ್ಥಿತಿಯ ಈ ನೆನವರಿಕೆ ಈ ಭಾರಿ ಸ್ವಲ್ಪ ಜೋರಾಗಿಯೇ ನಡೆಯಿತು. ಯಾವುದೇ ಚಾರಿತ್ರಿಕ ಘಟನೆಗೆ ಹತ್ತೋ, ಇಪ್ಪತ್ತೈದೋ, ಐವತ್ತೋ ತುಂಬಿದಾಗ ನೆನಪಿಸಿಕೊಳ್ಳುವುದು ವಾಡಿಕೆ. 43 ವರ್ಷ ತುಂಬಿತು ಅಂತ ಏನನ್ನನಾದರೂ ಸ್ಮರಿಸುವ, ಆಚರಿಸುವ ಸಂಪ್ರದಾಯ ಇಲ್ಲ. ತುರ್ತು ಪರಿಸ್ಥಿತಿಯ ಬಗ್ಗೆ ಹೊಸದಾಗಿ ಭಾರತೀಯರಿಗೆ ನೆನಪಿಸಬೇಕಾದದ್ದು ಏನೂ ಇಲ್ಲ. ಮತ್ತೊಂದು ಚುನಾವಣೆ ಬರುತ್ತಿದೆ. ಹಾಗಾಗಿ ನೆನಪಿರುವ ಎಲ್ಲವನ್ನೂ ಮತ್ತೊಮ್ಮೆ ನೆನಪಿಸಬೇಕಾಗುತ್ತದೆ.

ಕಳೆದ ನಾಲ್ಕು ವರ್ಷಗಳ ಬಿಜೆಪಿಯ ಆಡಳಿತ ಅಕ್ಷರಶಃ ಅಘೋಷಿತ ತುರ್ತು ಪರಿಸ್ಥಿತಿಯನ್ನು ತಂದಿರಿಸಿದೆ ಎನ್ನುವ ವಿರೋಧ ಪಕ್ಷಗಳ ಆಪಾದನೆಗೆ ಪ್ರತಿಯಾಗಿ ಬಿಜೆಪಿ ಹೀಗೆಲ್ಲಾ ಮಾಡಿತು ಎನ್ನುವ ಅಭಿಪ್ರಾಯವಿದೆ. ಆದರೆ ಅಘೋಷಿತ ತುರ್ತು ಪರಿಸ್ಥಿತಿಯ ಆಪಾದನೆಯಲ್ಲಿ ಹೊಸತೇನಿಲ್ಲ. ಅದು ಬಿಜೆಪಿ ಅಧಿಕಾರಕ್ಕೆ ಬಂದಂದಿನಿಂದಲೂ ಕೇಳಿ ಬರುತ್ತಿರುವ ಆಪಾದನೆ. ಆದುದರಿಂದ ಬಿಜೆಪಿ ಈ ಸಲ ಒಮ್ಮೆಗೇ ಆವೇಶ ಬಂದಂತೆ ತುರ್ತು ಪರಿಸ್ಥಿತಿಯನ್ನು ನೆನೆದುಕೊಂಡದ್ದು, ಅದರ ನಾಯಕರೆಲ್ಲ ಮತ್ತೊಮ್ಮೆ ಇಂದಿರಾ ವಿರುದ್ಧ ಗುಟುರು ಹಾಕಿದ್ದು ಸ್ವಲ್ಪ ವಿಚಿತ್ರವಾಗಿ ತೋರಿತು. ‘ಆ ಕಾಲ ಕೆಟ್ಟಷ್ಟು ನಮ್ಮ ಕಾಲ ಕೆಟ್ಟಿಲ್ಲ’ ಎಂಬುದಾಗಿ ಜನರನ್ನು ನಂಬಿಸಬೇಕಾದ ಅನಿವಾರ್ಯ ಬಿಜೆಪಿಗೆ ದಿನೇ ದಿನೇ ಹೆಚ್ಚುತ್ತಿರುವಂತೆ ತೋರುತ್ತಿದೆ.

ತಮಾಷೆಯ ವಿಷಯ ಎಂದರೆ ಬಿಜೆಪಿಯ ‘ಕರಾಳ ದಿನಾಚರಣೆ’ ಮುಗಿಯುವುದಕ್ಕೆ ಮೊದಲೇ ಬಿಜೆಪಿ ಆಳ್ವಿಕೆ ಇರುವ ಉತ್ತರಾಖಂಡ ರಾಜ್ಯದಿಂದ ಬಂದ ಒಂದು ವರ್ತಮಾನ. ಆ ರಾಜ್ಯದ ಮುಖ್ಯಮಂತ್ರಿ ತನ್ನ ಬಳಿ ವರ್ಗಾವಣೆ ಕೇಳಿಕೊಂಡು ಬಂದ ಶಿಕ್ಷಕಿಯೋರ್ವರನ್ನು ಕೆಲಸದಿಂದ ಕಿತ್ತು ಹಾಕಿ, ಬಂಧಿಸುವಂತೆ ಆದೇಶಿಸಿದ ವರ್ತಮಾನ ಅದು. ಅಷ್ಟಕ್ಕೂ ಆ ಶಿಕ್ಷಕಿ ಮಾಡಿದ ತಪ್ಪು ಏನು ಅಂದರೆ ತನ್ನ ವರ್ಗಾವಣೆ ವಿಷಯದಲ್ಲಿ ಅವರು ಮುಖ್ಯಮಂತ್ರಿಯ ಜತೆ ಸಣ್ಣಗೆ ವಾಗ್ವಾದಕ್ಕೆ ಇಳಿದದ್ದು. ತನ್ನ ವಿರುದ್ಧ ಕೊಂಚ ದನಿ ಏರಿಸಿದ ಒಂದೇ ಕಾರಣಕ್ಕೆ ಮುಖ್ಯಮಂತ್ರಿಯೋರ್ವರು ಯಾರನ್ನೋ ಬಂಧಿಸಲು ಆದೇಶಿಸಿಯೇಬಿಡುತ್ತಾರೆ ಎಂದರೆ ಇದು ಯಾವ ಪರಿಸ್ಥಿತಿ? ತುರ್ತಾಗಿ ಯೋಚಿಸಬೇಕಾದ ಪ್ರಶ್ನೆಯಲ್ಲವೇ ಇದು. ಬಿಜೆಪಿಯ ರಾಷ್ಟ್ರ ನಾಯಕರು ಸ್ಮರಿಸಿಕೊಂಡದ್ದು ಚರಿತ್ರೆಯಲ್ಲಿ ಆಗಿಹೋದ ತುರ್ತು ಪರಿಸ್ಥಿತಿಯನ್ನು. ಉತ್ತರಾಖಂಡದ ಘಟನೆ ತೋರಿಸಿದ್ದು ವರ್ತಮಾನದ ತುರ್ತು ಪರಿಸ್ಥಿತಿಯನ್ನು. ಒಂದು ವಿಷಯವನ್ನು ಇಲ್ಲಿ ಸ್ಪಷ್ಟಪಡಿಸಬೇಕು. ಈ ರೀತಿಯ ಸರ್ವಾಧಿಕಾರಿ ಪ್ರವೃತ್ತಿಯ ನಾಯಕತ್ವ ಈಗ ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ಇಂದೊಂದು ಪಕ್ಷಾತೀತ ಮನೋಭಾವ. ಆದುದರಿಂದ ತುರ್ತು ಪರಿಸ್ಥಿತಿಯ ಕುರಿತ ಚರ್ಚೆ ಕೇವಲ ಅಂದಿನ ಘೋಷಿತ ತುರ್ತು ಪರಿಸ್ಥಿತಿ ಅಥವಾ ಇಂದಿನ ಅಘೋಷಿತ ತುರ್ತು ಪರಿಸ್ಥಿತಿಗಷ್ಟೇ ಸೀಮಿತವಾಗಬಾರದು.

ಅಷ್ಟಕ್ಕೂ ತುರ್ತು ಪರಿಸ್ಥಿತಿ ಎಂದರೆ ಏನು? ಅದು ಜನರ ಸಂವಿಧಾನಬದ್ಧ ಹಕ್ಕುಗಳನ್ನು ಸರ್ಕಾರ ಕಸಿದುಕೊಂಡ ಸ್ಥಿತಿ. ಅದು ಸಂವಿಧಾನ, ಕಾನೂನು, ಕೋರ್ಟು, ಕಟ್ಟಳೆ ಇತ್ಯಾದಿ ಎಲ್ಲಾ ಪ್ರಜಾಸತ್ತಾತ್ಮಕ ಸಂಸ್ಥೆಗಳು ಸ್ತಬ್ಧವಾಗಿಬಿಡುವ ಸ್ಥಿತಿ. ಅಧಿಕಾರಸ್ಥರು ಆಡಿದ್ದೇ ಕಾನೂನು, ಮಾಡಿದ್ದೇ ಆಡಳಿತ ಎನ್ನುವ ಸ್ಥಿತಿ. ತುರ್ತು ಪರಿಸ್ಥಿತಿ ಇದು ಎಂದಾದರೆ ಈ ದೇಶ ಈ ಸ್ಥಿತಿಯಿಂದ ಸಂಪೂರ್ಣವಾಗಿ ಮುಕ್ತವಾಗಿದ್ದ ಒಂದೇ ಒಂದು ಗಳಿಗೆಯನ್ನಾದರೂ ಊಹಿಸಲು ಸಾಧ್ಯವೇ? ಒಂದಲ್ಲ ಒಂದು ರೀತಿಯಲ್ಲಿ, ಒಂದಲ್ಲ ಒಂದು ಕಡೆ, ಒಂದಲ್ಲ ಒಂದು ವ್ಯಕ್ತಿಯ ಪಾಲಿಗೆ ಇವುಗಳಲ್ಲಿ ಎಲ್ಲವೂ ಅಥವಾ ಕೆಲವು ಸದಾ ಸತ್ಯವಾಗಿರುತ್ತವೆ. ತುರ್ತು ಪರಿಸ್ಥಿತಿಯಲ್ಲಿ ಏನಾಗಿತ್ತೋ ಅದು ಈ ದೇಶದಲ್ಲಿ ನೂರಾರು ಬಗೆಯಲ್ಲಿ ಆಗುತ್ತಲೇ ಇರುತ್ತದೆ. ಘೋಷಿತ ತುರ್ತು ಪರಿಸ್ಥಿತಿ ಸಾಂವಿಧಾನಿಕವಾಗಿ ಸಂವಿಧಾನವನ್ನು ಕೋಮಾ ಸ್ಥಿತಿಯಲ್ಲಿಡುವ ಮೂಲಕ ಜಾರಿಗೆ ಬರುತ್ತದೆ. ಅಘೋಷಿತ ತುರ್ತು ಪರಿಸ್ಥಿತಿ ಸಂವಿಧಾನ ಸಹಜ ಸ್ಥಿತಿಯಲ್ಲಿರುತ್ತಾ ಸಂವಿಧಾನ ಅಪ್ರಸ್ತುತವಾಗುವ ಸ್ಥಿತಿ. ಅಷ್ಟು ಮಾತ್ರವಲ್ಲ, ಬಿಡಿಬಿಡಿಯಾಗಿ ಜರಗುವ ಜನರ ಹಕ್ಕುಗಳ-ಸ್ವಾತಂತ್ರ್ಯಗಳ ಹರಣದ ಪ್ರಕರಣಗಳು, ಅಧಿಕಾರ ದುರುಪಯೋಗದ ಘಟನೆಗಳು ದೇಶದ ಸಮಷ್ಟಿ ಮನಸ್ಥಿತಿಯನ್ನು ಸ್ವಲ್ಪವೂ ಗಾಸಿಗೊಳಿಸುವುದಿಲ್ಲ. ಇದರಾಚೆಗೆ, ಸರ್ಕಾರಿ ಕಚೇರಿಗ
ಳಲ್ಲಿ, ಪೊಲೀಸ್ ಠಾಣೆಗಳಲ್ಲಿ, ಬಲಿಷ್ಠ ವ್ಯಕ್ತಿಗಳ ಬಗಲಲ್ಲಿ ಸಾಮಾನ್ಯ ಜನರ ಸಾಂವಿಧಾನಿಕ ಹಕ್ಕುಗಳು ಅರ್ಥ ಕಳೆದುಕೊಳ್ಳುವ ಸಾವಿರ ಸಾವಿರ ಘಟನಾವಳಿಗಳೆಲ್ಲಾ ಒಟ್ಟರ್ಥದಲ್ಲಿ ತುರ್ತು ಪರಿಸ್ಥಿತಿಯ ವಿಭಿನ್ನ ರೂಪಗಳೇ ಅಲ್ಲವೇ? ಬಿಡಿ ಬಿಡಿಯಾಗಿ ಕಾಣಿಸಿಕೊಳ್ಳುವ ಇಂತಹ ಪ್ರಕರಣಗಳಿಗೆ ಸ್ಪಂದಿಸುವ ಸಾಮಾಜಿಕ ಸಂಸ್ಕೃತಿಯೇ ಈ ದೇಶದಲ್ಲಿ ದಿನದಿಂದ ದಿನಕ್ಕೆ ಮರೆಯಾಗುತ್ತಿದೆ. ಇಂತಹ ಪ್ರಕರಣಗಳಿಗೆ ಒಂದು ರಾಜಕೀಯ ಆಯಾಮ ಇದ್ದಾಗ ಮಾತ್ರ ಅವು ಗಮನ ಸೆಳೆಯುವುದು. ಸಂವಿಧಾನ ಈ ದೇಶದಲ್ಲಿ ಹಲವರ ಪಾಲಿಗೆ, ಹಲವು ರೀತಿಯಲ್ಲಿ ಸದಾ ಅಪ್ರಸ್ತುತವಾಗಿಯೇ ಇರುತ್ತದೆ. ಸಂವಿಧಾನದ ಅಪ್ರಸ್ತುತತೆಯನ್ನು ಆಯ್ದ ಕೆಲವು ಸಂದರ್ಭದಲ್ಲಿ ಮಾತ್ರ ಪ್ರಶ್ನಿಸುವ ಮೂಲಕ ಅಘೋಷಿತ ತುರ್ತು ಪರಿಸ್ಥಿತಿಗೆ ದೇಶವನ್ನು ಸದಾ ಸನ್ನದ್ಧ ಸ್ಥಿತಿಯಲ್ಲಿಟ್ಟಿರುವಲ್ಲಿ ಎಲ್ಲರ ಪಾಲೂ ಇದೆ.

ತುರ್ತು ಪರಿಸ್ಥಿತಿಯ ಕಾಲದಲ್ಲಿ ಸುಪ್ರೀಂ ಕೋರ್ಟ್‌ನ ಮುಂದೆ ಕುಖ್ಯಾತ ಪ್ರಕರಣವೊಂದು ವಿಚಾರಣೆಗೆ ಬಂದಿತ್ತು. ಅದುವೇ ಎಡಿಎಂ ಜಬಲ್ಪುರ್ ವರ್ಸಸ್ ಎಸ್‌.ಕೆ.ಶುಕ್ಲಾ ಪ್ರಕರಣ ಅಥವಾ ಹೇಬಿಯಸ್ ಕಾರ್ಪಸ್ ಪ್ರಕರಣ. ತುರ್ತು ಪರಿಸ್ಥಿತಿ ಹೇರಿಕೆಯಾದ ಮೇಲೆ ಆಂತರಿಕ ಭದ್ರತಾ ಕಾಯ್ದೆಯಡಿ (ಮಿಸಾ) ಬಂಧಿತರಾದವರು ನ್ಯಾಯಕ್ಕಾಗಿ ಕೋರ್ಟಿಗೆ ಹೋಗುವ ಹಕ್ಕು ಹೊಂದಿದ್ದಾರೆಯೇ ಇಲ್ಲವೇ ಎನ್ನುವ ಪ್ರಶ್ನೆ ಇತ್ಯರ್ಥವಾಗಬೇಕಿತ್ತು. ಐವರು ನ್ಯಾಯ
ಮೂರ್ತಿಗಳ ಸಾಂವಿಧಾನಿಕ ಪೀಠ ಪ್ರಕರಣವನ್ನು ಆಲಿಸುತ್ತಿತ್ತು. ಜನ ಎಲ್ಲಾ ಸಾಂವಿಧಾನಿಕ ಹಕ್ಕುಗಳನ್ನೂ ಕಳೆದುಕೊಂಡಿರುವ ಕಾರಣ ಬಂಧಿತರಿಗೆ ನ್ಯಾಯ ಕೇಳುವ ಹಕ್ಕು ಇಲ್ಲ ಎಂದು ಅಂದಿನ ಅಟಾರ್ನಿ ಜನರಲ್ ನಿರೇನ್ ಡೇ ವಾದಿಸುತ್ತಾರೆ. ಆಗ ಒಬ್ಬ ನ್ಯಾಯಮೂರ್ತಿ ಕೇಳುತ್ತಾರೆ ‘ಅಂದರೆ, ಅಂದರೆ ಸರ್ಕಾರ ಜನರ ಪ್ರಾಣಹರಣ ಮಾಡಿದರೂ ಕೋರ್ಟಿನಲ್ಲಿ ನ್ಯಾಯ ಕೇಳುವ ಹಾಗಿಲ್ಲವೇ?’ ನಿರೇನ್ ಡೇ ಒಂದು ಕ್ಷಣವೂ ತಡವರಿಸದೆ ಉತ್ತರಿಸುತ್ತಾರೆ ‘ಇಲ್ಲ ಮಹಾಸ್ವಾಮಿ, ಪ್ರಾಣಹರಣವಾದರೂ ಪ್ರಶ್ನಿಸುವ ಹಾಗಿಲ್ಲ’. ಸರ್ಕಾರಿ ವಕೀಲರು ಹೀಗೆ ಹೇಳಿದರು ಎನ್ನುವುದಲ್ಲ ವಿಶೇಷ. ನ್ಯಾಯಪೀಠದಲ್ಲಿ ಕುಳಿತಿದ್ದ ಐವರು ನ್ಯಾಯಮೂರ್ತಿಗಳ ಪೈಕಿ ನಾಲ್ವರು ಈ ವಾದವನ್ನು ಒಪ್ಪುತ್ತಾರೆ. ಸರ್ಕಾರದ ವಾದಕ್ಕೆ ಜಯವಾಗುತ್ತದೆ. ಒಬ್ಬ ನ್ಯಾಯಮೂರ್ತಿ ಮಾತ್ರ ಪ್ರತಿಭಟಿಸುತ್ತಾರೆ. ಭಿನ್ನವಾದ ತೀರ್ಪು ನೀಡುತ್ತಾರೆ. ತುರ್ತು ಪರಿಸ್ಥಿತಿಯಲ್ಲ, ಅದೆಂತಹ ಊಹಾತೀತ ಪರಿಸ್ಥಿತಿ ಬಂದರೂ ಜನ ತಮ್ಮ ಪ್ರಾಣದ ಹಕ್ಕನ್ನು ಕಳೆದುಕೊಳ್ಳುವುದಿಲ್ಲ ಎಂದು ತೀರ್ಪು ನೀಡುತ್ತಾರೆ. ಅವರೇ ನ್ಯಾಯಮೂರ್ತಿ ಎಚ್.ಆರ್. ಖನ್ನಾ. ತುರ್ತು ಪರಿಸ್ಥಿತಿಯ ನಂತರ ಖನ್ನಾ ಅವರ ತೀರ್ಪಿನನ್ವಯ ಸಂವಿಧಾನ ಬದಲಾವಣೆ ಆಗಿದೆ. ಈಗ ಅಕಸ್ಮಾತ್ ತುರ್ತು ಪರಿಸ್ಥಿತಿ ಹೇರಿದರೂ ಸಂವಿಧಾನದ 21ನೇ ವಿಧಿಯ ಪ್ರಕಾರ ನೀಡಲಾದ ಜೀವ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಕಸಿದುಕೊಳ್ಳುವ ಹಾಗಿಲ್ಲ. ನ್ಯಾಯಮೂರ್ತಿ ಖನ್ನಾ ಅವರ ಬಗ್ಗೆ ‘ನ್ಯೂಯಾರ್ಕ್ ಟೈಮ್ಸ್’ ಹೀಗೆ ಸಂಪಾದಕೀಯ ಬರೆಯಿತು: ‘ಮುಂದೊಂದು ದಿನ ಭಾರತ ಸ್ವಾತಂತ್ರ್ಯ ಮತ್ತು ಪ್ರಜಾಸತ್ತೆಯನ್ನು ಮರಳಿ ಪಡೆದದ್ದೇ ಆದಲ್ಲಿ ಯಾರಾ
ದರೂ ಈ ನ್ಯಾಯಮೂರ್ತಿಗಳಿಗೊಂದು ಸ್ಮಾರಕ ನಿರ್ಮಿಸುತ್ತಾರೆ’. ಸ್ಮಾರಕ ನಿರ್ಮಿಸುವುದು ಹಾಗಿರಲಿ. ಅವರನ್ನು ನೆನೆಯುವ ಕೆಲಸವನ್ನೂ ಸ್ವಾತಂತ್ರ್ಯವನ್ನು ಮರಳಿ ಪಡೆದ ಭಾರತೀಯರು ಎಲ್ಲೂ ಮಾಡಿದ್ದು ಕಾಣಿಸುವುದಿಲ್ಲ. ದೇಶದ
ಹೀರೊಗಳ ಪೈಕಿ ಹೀಗೊಂದು ನೈತಿಕ ಧೈರ್ಯ ತೋರಿದ ವ್ಯಕ್ತಿ ಸ್ಥಾನ ಪಡೆದಿಲ್ಲ. ವ್ಯಕ್ತಿಸ್ವಾತಂತ್ರ್ಯ ಮತ್ತು ತುರ್ತು ಪರಿಸ್ಥಿತಿಗಳ ವಿಚಾರದಲ್ಲಿ ಭಾರತೀಯ ಮನಸ್ಥಿತಿ ಏನು ಎನ್ನುವುದನ್ನು ಇದು ಇನ್ನೊಂದು ರೀತಿಯಲ್ಲಿ ಸಾರುತ್ತದೆ.

ತುರ್ತು ಪರಿಸ್ಥಿತಿಯನ್ನು ಬೇರೆ ಬೇರೆ ರೀತಿಯಲ್ಲಿ ಪ್ರಯೋಗಿಸಲು ಪ್ರೇರೇಪಿಸುವುದು, ಅಧಿಕಾರಸ್ಥರ ಅಭದ್ರ ಮನಸ್ಥಿತಿ. ಜನ ಅಧಿಕಾರಸ್ಥರನ್ನು ಪ್ರಶ್ನಿಸಿದ ಕೂಡಲೇ ಅವರಲ್ಲಿ ಆ ಅಭದ್ರತೆ ಕಾಣಿಸಿಕೊಳ್ಳುತ್ತದೆ. ಈ ಮನಸ್ಥಿತಿ ಅಧಿಕಾರ
ದೊಂದಿಗೆ ಬರುವ ಒಂದು ರೋಗ. ಇದನ್ನು ನಿಯಂತ್ರಿಸಬೇಕಾದರೆ ಇರುವ ಒಂದೇ ಮಾರ್ಗ ಎಂದರೆ ಜನ ಇದರ ಬಗ್ಗೆ ತೋರಬಹುದಾದ ತೀವ್ರ ಅಸಹನೆ. ಅಧಿಕಾರಸ್ಥರ ಬಗ್ಗೆ, ಅಧಿಕಾರ ದುರುಪಯೋಗದ ಬಗ್ಗೆ ಇಂತಹದ್ದೊಂದು ಅಸಹನೆ ಭಾರತದ ಸಮಾಜದಲ್ಲಿ ಇನ್ನೂ ಹುಟ್ಟಿಲ್ಲ.

ಉತ್ತರಾಖಂಡದಲ್ಲಿ ಶಿಕ್ಷಕಿಯನ್ನು ಬಂಧಿಸಲು ಮುಖ್ಯಮಂತ್ರಿ ಆದೇಶಿಸಿದ ಪ್ರಕರಣದ ಹಿನ್ನೆಲೆಯಲ್ಲಿಯೂ ಇದೇ ಅಭದ್ರತೆ ಕೆಲಸ ಮಾಡಿದ್ದು. ತನ್ನ ಅಧಿಕಾರವನ್ನು ವಿರೋಧ ಪಕ್ಷಗಳು ದೊಡ್ಡದಾಗಿ ಪ್ರಶ್ನಿಸಿದಾಗ ಇಂದಿರಾ ಅವರಲ್ಲೂಇದೇ ಅಭದ್ರತೆ ಮೂಡಿ ತುರ್ತು ಪರಿಸ್ಥಿತಿಗೆ ಹೇತುವಾದದ್ದು. ಈಗ ಇದೆ ಎನ್ನಲಾಗುವ ಅಘೋಷಿತ ತುರ್ತು ಪರಿಸ್ಥಿತಿಯ ಹಿಂದೆ ಕೆಲಸ ಮಾಡುತ್ತಿರುವುದು ಈಗಿನ ಅಧಿಕಾರಸ್ಥರ ಅಭದ್ರತೆ. ಈ ದೇಶದ ಪ್ರಧಾನಿ, ಮುಖ್ಯಮಂತ್ರಿಗಳು, ಮಂತ್ರಿಗಳು ಮುಂತಾದವರಿಗೆ ಯಾರಾದರೂ ಹೇಗಾದರೂ ಅಗತ್ಯವಾಗಿ ತಿಳಿಸಬೇಕಾದ ಒಂದು ವಿಷಯ ಇದೆ. ಅದು ಏನು ಎಂದರೆ ಸಾಮಾನ್ಯ ಜನರ ಪೈಕಿ ಯಾರಾದರೂ ಅವರನ್ನು ಬೈದರೆ ಅಥವಾ ಪ್ರಶ್ನಿಸಿದರೆ ಅದನ್ನು ಕೇಳಿಸಿಕೊಂಡು ಅವರು ಸುಮ್ಮನಿದ್ದರೆ ಅಥವಾ ಮರ್ಯಾದೆ
ಯಿಂದ ಸಮಜಾಯಿಷಿ ನೀಡಿದರೆ ಅದು ಪ್ರಜಾತಂತ್ರ. ಬೈದ ವ್ಯಕ್ತಿಗಳನ್ನು ಬಂಧಿಸಲು ಆದೇಶಿಸಿದರೆ ಅದು ಅಪ್ಪಟ ತುರ್ತು ಪರಿಸ್ಥಿತಿ. ಜನರಿಂದ ಬೈಸಿಕೊಳ್ಳಲು ಮಾನಸಿಕವಾಗಿ ತಯಾರಿದ್ದವರು ಮಾತ್ರ ರಾಜಕೀಯದಲ್ಲಿರಬೇಕು. ಜನರು
ಮಾಲೀಕರು. ಮಾಲೀಕರಾದವರು ಕೆಲವೊಮ್ಮೆ ಬಯ್ಯುತ್ತಾರೆ, ಪ್ರಶ್ನಿಸುತ್ತಾರೆ. ಇದನ್ನು ಕಂಡು ಅಭದ್ರ ಮನಸ್ಥಿತಿಗೆ ಜಾರುವವರು ನಿಜವಾದ ನಾಯಕರಲ್ಲ. ಬೈದ ‘ಮಾಲೀಕ’ರ ಮೇಲೆ ಅಧಿಕಾರದ ಬ್ರಹ್ಮಾಸ್ತ್ರ ಪ್ರಯೋಗಿಸುವ ನಾಯಕರಿದ್ದಷ್ಟು ಕಾಲ ತುರ್ತು ಪರಿಸ್ಥಿತಿ ಒಂದಲ್ಲ ಒಂದು ರೀತಿಯಲ್ಲಿ ಹೊಂಚುಹಾಕುತ್ತಲೇ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT