ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂವಿಧಾನಿಕ ಮೌನವೊಂದಕ್ಕೆ ಮಾತು ನೀಡಲು ಯತ್ನಿಸಿದ ‘ಕೇಶವಾನಂದ ಭಾರತಿ’ ತೀರ್ಪು

ಹಳೆಯ ತೀರ್ಪೊಂದರ ಆಳ ಹುಡುಕುತ್ತಾ...
Last Updated 14 ಸೆಪ್ಟೆಂಬರ್ 2020, 2:34 IST
ಅಕ್ಷರ ಗಾತ್ರ

‘ಹಿಸ್ ಹೋಲಿನೆಸ್ ಕೇಶವಾನಂದ ಭಾರತಿ ಶ್ರೀಪಾದಗಳ್ವರು ಅಂಡ್ ಅದರ್ಸ್ ವರ್ಸಸ್ ದ ಸ್ಟೇಟ್ ಆಫ್ ಕೇರಳ ಅಂಡ್ ಅನದರ್ (1973)...’

ಭಾರತದ ಸಾಂವಿಧಾನಿಕ ಕಾನೂನುಗಳ ಆಸಕ್ತರನ್ನು ಹಲವು ಪರಿಗಳಲ್ಲಿ ಕಾಡಿ ದಣಿಸಿರುವ ಕೇಶವಾನಂದ ಭಾರತಿ ಪ್ರಕರಣದ ತೀರ್ಪಿನ ಅಧಿಕೃತ ಶಿರೋನಾಮೆ ಯಥಾವತ್ತಾಗಿ ಮೇಲಿನ ಪದಗಳ ರೂಪದಲ್ಲಿದೆ. ತೀರ್ಪಿಗೆ ಎಡನೀರು ಮಠದ ಮುಖ್ಯಸ್ಥ ಕೇಶವಾನಂದ ಭಾರತಿಯವರ ಹೆಸರು ಬಂದದ್ದು ಒಂದು ಆಕಸ್ಮಿಕ. ಕನ್ನಡದ ಮಣ್ಣು ಕಾಸರಗೋಡಿನ ಎಡನೀರು ಮಠದ ಭಕ್ತರು ಬಳಸುವ ‘ಶ್ರೀಪಾದಂಗಳವರು’ ಎಂಬ ಪದ ಸುಪ್ರೀಂ ಕೋರ್ಟಿನ ಹಿಂದಿ ಭಾಷಿಗರ ಕೈಯಲ್ಲಿ ‘ಶ್ರೀಪಾದಗಳ್ವರು’ ಎಂದು ರೂಪಾಂತರವಾದದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ಕಳೆದ 47 ವರ್ಷಗಳಲ್ಲಿ ಈ ದೇಶ ಆ ತೀರ್ಪನ್ನು ಅರ್ಥೈಸಿಕೊಳ್ಳಲು ಪಡುತ್ತಿರುವ ಕಷ್ಟ, ಅದರ ಶಿರೋನಾಮೆಯನ್ನು ಓದುವಲ್ಲಿ ಸುಪ್ರೀಂ ಕೋರ್ಟಿನ ಸಿಬ್ಬಂದಿ ವರ್ಗ ಅನುಭವಿಸಿದ ತಡವರಿಕೆಯಿಂದಲೇ ಸಾಂಕೇತಿಕವಾಗಿ ಪ್ರಾರಂಭವಾಗುತ್ತದೆ ಅನ್ನಿಸುತ್ತದೆ.

ಬೌದ್ಧಿಕ ಜಿಜ್ಞಾಸೆ ಮತ್ತು ಸೃಜನಶೀಲ ಕಲೆಗಳ ನಡುವೆ ಹೆಚ್ಚು ಗಾಢವಾದ ಸಂಬಂಧ ಇರುವ ಇನ್ಯಾವುದಾದರೂ ಒಂದು ದೇಶದಲ್ಲಾಗಿದ್ದರೆ, ರೋಚಕವಾದ ಹಿನ್ನೆಲೆ-ಮುನ್ನೆಲೆ ಇರುವ ಇಂತಹದ್ದೊಂದು ತೀರ್ಪಿನ ಬಗ್ಗೆ ಈಗಾಗಲೇ ಒಂದೆರಡು ಅದ್ಭುತ ಸಿನಿಮಾಗಳು ತಯಾರಾಗಿ ಒಂದಷ್ಟು ಆಸ್ಕರ್ ಪುರಸ್ಕಾರಗಳನ್ನು ಬಾಚಿಕೊಂಡಾಗುತ್ತಿತ್ತೋ ಏನೋ. ಕೇಶವಾನಂದ ಭಾರತಿ ತೀರ್ಪಿನ ಕಾಲ, ಅದರ ಮೂಲ, ಅದು ಪ್ರತಿನಿಧಿಸಿದ ಬಹುಮುಖಿ ಸಂಘರ್ಷಗಳ ಆಳ-ಅಗಲ ಮತ್ತು ಅದರ ಸುತ್ತ ಮೇಳೈಸಿದ ವರ್ಣರಂಜಿತ ವ್ಯಕ್ತಿತ್ವಗಳ ಜಾಲವನ್ನೆಲ್ಲಾ ಬೆರೆಸಿ ಹದ ಮಾಡಿದರೆ ಸಾರ್ವಕಾಲಿಕ ಸತ್ವವುಳ್ಳ ಸಿನಿಮಾ ಒಂದನ್ನು ಮಾಡಬಲ್ಲಷ್ಟು ಸರಕು ಅದರಲ್ಲಿದೆ. ಸಿನಿಮಾದ ವಿಷಯ ಹಾಗಿರಲಿ, ಈ ತೀರ್ಪಿನ ಕುರಿತು ಕನ್ನಡದ ಮಾಧ್ಯಮಗಳಲ್ಲಿ ಒಂದು ಸಣ್ಣಮಟ್ಟಿನ ಚರ್ಚೆಯಾದರೂ ನಡೆಯಲು ಕೇಶವಾನಂದ ಭಾರತಿಯವರು ಹೋದ ವಾರ ತೀರಿಕೊಳ್ಳುವವರೆಗೆ ಕಾಯಬೇಕಾಯಿತು. ಅದೂ ಯಾವ ಬಗೆಯ ಚರ್ಚೆ ಎನ್ನುತ್ತೀರಿ?

ಕೆಲವರು ತೀರ್ಪನ್ನು ಜ್ಞಾಪಿಸಿಕೊಳ್ಳುವ ನೆಪದಲ್ಲಿ ಇಂದಿರಾ ಗಾಂಧಿಯವರ ಅಂದಿನ ಸರ್ವಾಧಿಕಾರಿ ಆಡಳಿತದ ಬಗ್ಗೆ ಮತ್ತೊಂದು ಸುತ್ತು ವಾಗ್ದಾಳಿ ನಡೆಸಿ ತೀರ್ಪನ್ನು ಬೇಕಾಬಿಟ್ಟಿ ಹೊಗಳಿದರು. ಈ ತೀರ್ಪಿನಿಂದಾಗಿ ಸಂವಿಧಾನ ಉಳಿಯಿತು ಎಂದರು. ಇನ್ನು ಕೆಲವರು ನ್ಯಾಯಾಂಗದ ಇಂದಿನ ಪ್ರವೃತ್ತಿಯ ಬಗ್ಗೆ ಗಮನ ಸೆಳೆದು, ತೀರ್ಪನ್ನು ಪ್ರಜಾತಂತ್ರವಿರೋಧಿ ಅಂತ ಏಕಾಏಕಿ ತೆಗಳಿದರು. ಈ ತೀರ್ಪಿನಿಂದಾಗಿ ಜನರ ಸಾರ್ವಭೌಮತ್ವವನ್ನು ಪ್ರತಿನಿಧಿಸುವ ಸಂಸತ್ತಿನ ಮೇಲೆ ಸುಪ್ರೀಂ ಕೋರ್ಟ್ ಸವಾರಿ ಮಾಡುವಂತಾಯಿತು ಎಂದರು.

ತೀರ್ಪಿನಿಂದಾಗಿ ಸಂವಿಧಾನ ಉಳಿಯಿತು ಅಂತ ವಾದಿಸುವವರು, ತೀರ್ಪು ಬಂದ ಎರಡೇ ವರ್ಷಗಳಲ್ಲಿ ಸಂವಿಧಾನವನ್ನೇ ಕಾರಾಗೃಹದಲ್ಲಿಟ್ಟು ತುರ್ತುಪರಿಸ್ಥಿತಿ ಹೇರಲಾಯಿತು ಎನ್ನುವುದನ್ನು ಮರೆಯುತ್ತಾರೆ. ಹಾಗೆಯೇ ಸಂವಿಧಾನ ಏನಾದರೂ ಹೇಳಲಿ, ನಾವು ನಮಗೆ ಬೇಕಾದ ಹಾಗೆ ಅಧಿಕಾರ ಚಲಾಯಿಸುತ್ತೇವೆ ಎನ್ನುವ ವರ್ತಮಾನದ ಉಡಾಫೆಯು ಸರ್ವಾಧಿಕಾರದಿಂದ ದೇಶವನ್ನು ರಕ್ಷಿಸಲು ಕೇಶವಾನಂದ ಭಾರತಿ ಪ್ರಕರಣದ ತೀರ್ಪು ಸೃಷ್ಟಿಸಿದ ‘ಸಂವಿಧಾನದ ಮೂಲ ಸಂರಚನೆಯ ನಿಯಮ’ಕ್ಕೆ ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ಮರೆಯುತ್ತಾರೆ. ಇನ್ನು ಈ ತೀರ್ಪಿನಿಂದಾಗಿ ಸಂಸತ್ತಿನ ಪರಮಾಧಿಕಾರಕ್ಕೆ ಗಾಸಿಯಾಯಿತು ಅಂತ ಮರುಗುವವರು, ಈ ದೇಶದಲ್ಲಿ ಸಂಸತ್ತು ಎನ್ನುವುದು ಒಂದು ಮಿಥ್ಯೆ, ಸಂಸತ್ತಿನ ಹೆಸರಿನಲ್ಲಿ ಬಹುತೇಕ ನಿರ್ಣಯಗಳನ್ನು ತೆಗೆದುಕೊಳ್ಳುವುದು ಬಹುಮತ ಪಡೆದ ರಾಜಕೀಯ ಪಕ್ಷ ಎನ್ನುವುದನ್ನು ಮರೆಯುತ್ತಾರೆ.

ಈ ತೀರ್ಪಿನ ಮೂಲದಲ್ಲಿ ಇರುವುದು ಶಾಸಕಾಂಗ (ಅರ್ಥಾತ್ ಸಂಸತ್ತು) ಮತ್ತು ನ್ಯಾಯಾಂಗದ ನಡುವೆ ಏರ್ಪಟ್ಟ ಸಂಘರ್ಷ. ಸಂಸತ್ತು ತಾನು ಈ ದೇಶದ ಜನರ ಸಾರ್ವಭೌಮ ಅಧಿಕಾರವನ್ನು ಪ್ರತಿನಿಧಿಸುವ ಸಂಸ್ಥೆಯಾದ ಕಾರಣ, ತನಗೆ ಯಾವುದೇ ರೀತಿಯ ಕಾನೂನುಗಳನ್ನು ಮಾಡುವ ಮತ್ತು ಹಾಗೆ ಮಾಡಲು ಸಂವಿಧಾನ ಅಡ್ಡಿಯಾದರೆ ಸಂವಿಧಾನವನ್ನೇ ತಿದ್ದುಪಡಿ ಮಾಡುವ ಪರಮಾಧಿಕಾರ ಇದೆ ಎಂದು ಭಾವಿಸಿತ್ತು. ಅದೇ ವೇಳೆ, ನ್ಯಾಯಾಂಗವು ತಾನು ಸಂವಿಧಾನದ ರಕ್ಷಣೆಯ ಹೊಣೆ ಹೊತ್ತಿರುವುದರಿಂದ ಸಂವಿಧಾನವನ್ನು ಸಂಸತ್ತು ಮನಬಂದಂತೆ ಬದಲಿಸುವ ಅಧಿಕಾರ ಚಲಾಯಿಸಲು ಬಿಡಬಾರದು ಎನ್ನುವ ನಿಲುವಿಗೆ ಬದ್ಧವಾಗಿತ್ತು.

ಈ ಮುಖಾಮುಖಿಯಲ್ಲಿ ಒಮ್ಮೆ ಸಂಸತ್ತಿನ ಕೈ ಮೇಲಾಗುವುದು, ಒಮ್ಮೆ ನ್ಯಾಯಾಂಗವು ಸಂಸತ್ತಿನ ಅಧಿಕಾರಕ್ಕೆ ನಿರ್ಬಂಧಗಳನ್ನು ಹೇರುವುದು, ಮತ್ತೊಮ್ಮೆ ನ್ಯಾಯಾಂಗದ ಅಧಿಕಾರವನ್ನು ಸಂಸತ್ತು ಮೊಟಕುಗೊಳಿಸುವುದು ಹೀಗೆಲ್ಲಾ ನಡೆಯುತ್ತಲೇ ಇತ್ತು. ಮೇಲ್ನೋಟಕ್ಕೆ ಇದು ಸಂಸತ್ತು ಮತ್ತು ನ್ಯಾಯಾಂಗದ ಘರ್ಷಣೆಯಾದರೂ ಇದಕ್ಕೊಂದು ವರ್ಗ ಸಂಘರ್ಷದ ಆಯಾಮವೂ ಇದೆ. ಯಾಕೆಂದರೆ, ಈ ಸಂಘರ್ಷಕ್ಕೆ ಮೂಲ ಕಾರಣ ಭೂಸುಧಾರಣಾ ಕಾಯ್ದೆಗಳು. ಸರ್ಕಾರವು ಜಮೀನ್ದಾರರ ಭೂಮಿ ವಶಪಡಿಸಿಕೊಂಡು ಭೂರಹಿತರಿಗೆ ಹಂಚಲು ಮುಂದಾದಾಗ ಭೂಮಾಲೀಕರು ತಮ್ಮ ಸಂವಿಧಾನದತ್ತ ಮೂಲಭೂತ ಹಕ್ಕನ್ನು ರಕ್ಷಿಸಿ ಅಂತ ನ್ಯಾಯಾಂಗಕ್ಕೆ ಮೊರೆ ಇಡುತ್ತಾರೆ. ಕೇಶವಾನಂದ ಭಾರತಿಯವರದ್ದೂ ಇಂತಹದ್ದೇ ಒಂದು ಮೊಕದ್ದಮೆ. ಸಂವಿಧಾನ ನೀಡಿದ ಹಕ್ಕುಗಳನ್ನು ರಕ್ಷಿಸುವುದು ತನ್ನ ಹೊಣೆ ಎಂದು ನ್ಯಾಯಾಂಗ ತಳೆದ ನಿಲುವುಗಳಿಂದ ಭೂಮಾಲೀಕರಿಗೆ ಅನುಕೂಲವಾಗುತ್ತಿತ್ತು. ಸರ್ಕಾರಕ್ಕೆ ಇದು ಪಥ್ಯವಾಗುತ್ತಿರಲಿಲ್ಲ. ಬಡವರ ನೆರವಿಗೆ ಧಾವಿಸಲು ನ್ಯಾಯಾಂಗ ಅಡ್ಡಿಯಾಗುತ್ತಿದೆ ಎನ್ನುವ ನಿಲುವನ್ನು ಸರ್ಕಾರ ತಳೆಯಿತು.

ಮೂಲಭೂತ ಹಕ್ಕುಗಳ ಸಂರಕ್ಷಣೆಯು ವ್ಯಕ್ತಿ ಸ್ವಾತಂತ್ರವನ್ನು ಎತ್ತಿಹಿಡಿಯುವ ಉದ್ದೇಶ ಹೊಂದಿದ್ದರೆ ಅದನ್ನು ಮೊಟಕುಗೊಳಿಸಿ ಮಾಡುವ ಭೂಮಿಯ ಮರುಹಂಚಿಕೆಯು ಸಾಮಾಜಿಕ ನ್ಯಾಯದ ವಿಚಾರ. ಆದ್ದರಿಂದ ಇದು ವ್ಯಕ್ತಿ ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯಗಳ ಪರಿಕಲ್ಪನೆಗಳ ನಡುವಣ ಸಂಘರ್ಷವೂ ಆಗುತ್ತದೆ. ಮೂಲಭೂತ ಹಕ್ಕುಗಳ ಮೂಲಕ ವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವುದು ಸಂವಿಧಾನದ ಮೂರನೆಯ ಭಾಗ. ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವುದು ಸಂವಿಧಾನದ ನಾಲ್ಕನೆಯ ಭಾಗ: ರಾಜ್ಯ ನಿರ್ದೇಶನ ತತ್ವಗಳು. ಈ ಹಿನ್ನೆಲೆಯಲ್ಲಿ ಇದು ಸಂವಿಧಾನದ ಒಂದು ಭಾಗವು ಇನ್ನೊಂದು ಭಾಗದ ಜತೆ ಸೆಣಸಿದ ಪ್ರಕರಣವೂ ಹೌದು. ಆದುದರಿಂದ ಇಲ್ಲಿ ಯಾರು ಸರಿ-ಯಾರು ತಪ್ಪು ಎನ್ನುವ ವಿಚಾರಕ್ಕೆ ಅಷ್ಟೊಂದು ಸುಲಭದಲ್ಲಿ ಬರಲಾಗುವುದಿಲ್ಲ.

ಮೂಲ ಸಂವಿಧಾನವು 368ನೇ ವಿಧಿಯ ಪ್ರಕಾರ, ಸಂವಿಧಾನವನ್ನು ತಿದ್ದುಪಡಿ ಮಾಡುವ ಸಂಸತ್ತಿನ ಅಧಿಕಾರಕ್ಕೆ ಯಾವುದೇ ರೀತಿಯ ನಿರ್ಬಂಧ ವಿಧಿಸಿಲ್ಲ. ಯಾವುದನ್ನು ಎಷ್ಟು ತಿದ್ದುಪಡಿ ಮಾಡಬಹುದು, ಯಾವುದನ್ನು ಮಾಡಬಾರದು ಎನ್ನುವಲ್ಲಿ ಸಂವಿಧಾನವು ಮೌನ ವಹಿಸಿದೆ. ಹಾಗೆಂದು, ಸಂಸತ್ತು ತಾನು ಸಂವಿಧಾನವನ್ನು ಹೇಗೆ ಬೇಕಾದರೂ ತಿದ್ದುಪಡಿ ಮಾಡುತ್ತೇನೆ ಅಂತ ನಿಲುವು ತಾಳಿದರೆ ಅದು ಅಪಾಯಕಾರಿ. ನಾಳೆ ಚುನಾವಣೆಯೇ ಬೇಡ ಅಥವಾ ಮೂಲಭೂತ ಹಕ್ಕುಗಳೇ ಬೇಡ ಅಂತ ಬಹುಮತ ಹೊಂದಿದ ಪಕ್ಷವೊಂದು ನಿರ್ಣಯಿಸಿಬಿಟ್ಟರೆ? ನ್ಯಾಯಾಲಯವು ಹೀಗಾಗದಂತೆ ನೋಡಿಕೊಳ್ಳಬೇಕು ಅಂತ ಸದುದ್ದೇಶದಿಂದ ಬಯಸಬಹುದು. ಆದರೆ ಸಂವಿಧಾನ ನೀಡದ ಅಧಿಕಾರವನ್ನು ನ್ಯಾಯಾಂಗ ಚಲಾಯಿಸಲು ನ್ಯಾಯಾಂಗಕ್ಕೆ ಅನುವು ಮಾಡಿಕೊಡುವುದು ಕೂಡಾ ಅಷ್ಟೇ ಅಪಾಯಕಾರಿ.

ಕೇಶವಾನಂದ ಭಾರತಿ ಪ್ರಕರಣದ ತೀರ್ಪು ಇಲ್ಲೊಂದು ಸಮತೋಲನ ಸ್ಥಾಪಿಸಲು ಯತ್ನಿಸುತ್ತದೆ. ಮೂಲಭೂತ ಹಕ್ಕುಗಳೂ ಸೇರಿದಂತೆ ಸಂವಿಧಾನದ ಯಾವುದೇ ಭಾಗವನ್ನು ತಿದ್ದುಪಡಿ ಮಾಡಲು ಸಂಸತ್ತಿಗೆ ಪರಮಾಧಿಕಾರ ಇದೆ ಅಂತ ಮೊದಲಿಗೆ ಈ ತೀರ್ಪು
ಸ್ಪಷ್ಟಪಡಿಸುತ್ತದೆ. ಅದೇ ಉಸಿರಿಗೆ, ಅಂತಹ ತಿದ್ದುಪಡಿಗಳು ಸಂವಿಧಾನದ ಮೂಲ ಸಂರಚನೆಗೆ ಧಕ್ಕೆ ತರಬಾರದು ಅಂತ ಸಂಸತ್ತಿನ ಅಧಿಕಾರವನ್ನು ಹದ್ದುಬಸ್ತಿನಲ್ಲಿಡುವ ಕೆಲಸವನ್ನೂ ಮಾಡುತ್ತದೆ. ಆದರೆ, ಸಂವಿಧಾನದ ಮೂಲ ಸಂರಚನೆ ಎನ್ನುವ ಪರಿಕಲ್ಪನೆಯು ಸಂವಿಧಾನದಲ್ಲೇ ಪ್ರಸ್ತಾಪವಾಗಿಲ್ಲ. ಅದೇನು ಎನ್ನುವುದರ ಬಗ್ಗೆ ಸ್ಪಷ್ಟತೆಯೂ ಇಲ್ಲ. ಅದರ ಅಸ್ತಿತ್ವ ಇರುವುದು ನ್ಯಾಯಾಂಗದ ವಿವೇಚನೆಯಲ್ಲಿ. ಸಂಸತ್ತಿಗಿಲ್ಲದ ವಿವೇಚನೆ ಮತ್ತು ವಿವೇಕವು ನ್ಯಾಯಾಂಗಕ್ಕೆ ಇದೆ ಅಂತ ಹೇಗೆ ಭಾವಿಸುವುದು? ಗೊತ್ತಿಲ್ಲ.

ಸದ್ಯಕ್ಕೆ ಸಂಸತ್ತಿನ ಅನಿಯಂತ್ರಿತಾಧಿಕಾರಕ್ಕಿಂತ ನ್ಯಾಯಾಂಗದ ವಿವೇಚನಾಧಿಕಾರ ಕಡಿಮೆ ಅಪಾಯಕಾರಿ ಎಂಬ ಒಂದು ಅಲಿಖಿತ ಒಪ್ಪಂದಕ್ಕೆ ದೇಶ ಬಂದು ನಿಂತಿದೆ. ಈ ನಂಬಿಕೆ ಅಲುಗಾಡುವಲ್ಲಿಯವರೆಗೆ ಕೇಶವಾನಂದ ಭಾರತಿ ಪ್ರಕರಣದ ತೀರ್ಪು ಪ್ರಸ್ತುತವಾಗಿ ಉಳಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT