ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುರಣನ | ನೈತಿಕ ಶಿಕ್ಷಣ, ಹೀಗೊಂದು ಮಹಾಮೌನ

ನೈತಿಕವಾಗಿ ಸ್ವತಃ ಸುಧಾರಿಸಿಕೊಳ್ಳಬೇಕಾದವರಿಂದ ನೀತಿ ಪಾಠದ ಸಲಹೆ ಕೇಳಿದೊಡೆಂತಯ್ಯಾ?
Last Updated 18 ಜನವರಿ 2023, 21:07 IST
ಅಕ್ಷರ ಗಾತ್ರ

ಶಾಲೆಯಲ್ಲಿ ಮಕ್ಕಳು ಬಸವಣ್ಣನವರ ಶ್ರೇಷ್ಠ ಬದುಕಿನ ಬಗ್ಗೆ ತಿಳಿದುಕೊಂಡು, ಅವರ ವಚನದಲ್ಲಿರುವ ‘ಹುಸಿಯ ನುಡಿಯಲು ಬೇಡ, ಅನ್ಯರಿಗೆ ಅಸಹ್ಯಪಡಬೇಡ’ ಎಂಬಿತ್ಯಾದಿ ನುಡಿಗಳನ್ನು ಓದಿ ನೈತಿಕ ಮೌಲ್ಯಗಳನ್ನು ಕಲಿಯುತ್ತಾರೆ. ಆದರೆ ಅದೇ ಪಠ್ಯಪುಸ್ತಕದಲ್ಲಿ, ಸಾರ್ವಜನಿಕ ಭಾಷಣಗಳಲ್ಲಿ ಆಕರ್ಷಕವಾಗಿ ಸುಳ್ಳು ಹೇಳುತ್ತಾ, ‘ಅನ್ಯರ ಕುರಿತು ಅಸಹ್ಯಪಡಬೇಕು’ ಎನ್ನುವ ಸಂದೇಶವನ್ನು ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಬಿತ್ತುವ ವ್ಯಕ್ತಿಯೋರ್ವ ಬರೆದ ಬರಹವನ್ನು ಸೇರಿಸಿದರೆ, ಅದನ್ನು ಓದುವ ಮಕ್ಕಳು ಏನು ಕಲಿಯುತ್ತಾರೆ? ಸುಳ್ಳು ಹೇಳಿದರೆ ನಾವು ಕೂಡಾ ಪ್ರಸಿದ್ಧಿಗೆ ಬರಬಹುದು ಎಂದು ತಾನೇ? ಮಕ್ಕಳಿಗೆ ನೈತಿಕ ಶಿಕ್ಷಣ ನೀಡಬೇಕೆಂದು ಉತ್ಸಾಹದಿಂದ ಹೊರಟು ಚಿತ್ರವಿಚಿತ್ರ ಸಲಹೆಗಳನ್ನು ಪಡೆಯುತ್ತಿರುವ ಕರ್ನಾಟಕ ಸರ್ಕಾರಕ್ಕೆ ಈ ಪ್ರಶ್ನೆಯನ್ನು ಯಾರಾದರೂ ಕೇಳಬೇಕಿತ್ತಲ್ಲವೇ?

ಈ ಬೆಳವಣಿಗೆಗಳನ್ನೆಲ್ಲಾ ನೋಡುತ್ತಿರುವಾಗ, 1970-80ರ ದಶಕದಲ್ಲಿ ಶಾಲೆ ಕಲಿಯುತ್ತಿದ್ದಾಗ ಓದಿದ ಪಠ್ಯಗಳಿಂದ ಕಲಿತ ಪಾಠಗಳು ನೆನಪಾಗುತ್ತವೆ:

ಮಾವಿನ ಮರಕ್ಕೆ ಕಲ್ಲೆಸೆಯುತ್ತಿದ್ದ ಶಾಲಾ ಮಕ್ಕಳಿಗೆ ಮರದ ಮಾಲೀಕ ಹೊಡೆಯಲು ಬರುತ್ತಾನೆ. ಉಳಿದ ಮಕ್ಕಳು ಪೆಟ್ಟು ತಿಂದು ಪೆಚ್ಚುಮೋರೆ ಹಾಕಿಕೊಂಡರೆ, ಒಬ್ಬ ಹುಡುಗ ಧೈರ್ಯದಿಂದ ಹೇಳುತ್ತಾನೆ: ‘ನಾನು ಕಲ್ಲೆಸೆದಿಲ್ಲ, ಕಾಯಿ ಕದ್ದಿಲ್ಲ. ಆದುದರಿಂದ ಪೆಟ್ಟು ಕೂಡಾ ತಿನ್ನುವುದಿಲ್ಲ. ಎಂದಿನಂತೆ ದಾರಿಯಲ್ಲಿ ಹೋಗುತ್ತಾ ಅವರ ಜತೆಗಿದ್ದೇನೆ ಅಷ್ಟೇ’. ಒಂದಿಷ್ಟೂ ವಿಚಲಿತನಾಗದೆ ಹೀಗೆ ಹೇಳಿದ ಬಾಲಕನನ್ನು ಕಂಡು ಮಾಲೀಕನೇ ವಿಚಲಿತನಾಗಿ ಆತನನ್ನು ಬಿಟ್ಟುಬಿಡುತ್ತಾನೆ. ಆ ಬಾಲಕ ಲಾಲ್ ಬಹದ್ದೂರ್ ಶಾಸ್ತ್ರಿ. ಮೇಷ್ಟ್ರು ಹೇಳಿದ್ದರು: ‘ನಾವು ತಪ್ಪು ಮಾಡದೇ ಇದ್ದರೆ ನಮಗೆ ಬರುವ ಧೈರ್ಯ ಇದೆಯಲ್ಲ ಅದು ಅತ್ಯಂತ ದೊಡ್ಡ ಧೈರ್ಯ’.

ಕೋರ್ಟಿನಲ್ಲಿ ವಾದ ಮಂಡಿಸುತ್ತಿದ್ದ ವಕೀಲರೊಬ್ಬರ ಬಳಿ ಅವಸರವಸರದಿಂದ ಬಂದ ವ್ಯಕ್ತಿ ಅವರಿಗೊಂದು ಚೀಟಿ ನೀಡುತ್ತಾನೆ. ಚೀಟಿಯನ್ನು ನೋಡಿದ ವಕೀಲರು ಅದನ್ನು ಜೇಬಲ್ಲಿಟ್ಟು ವಾದ ಮುಂದುವರಿಸುತ್ತಾರೆ. ಕಲಾಪ ಮುಗಿದ ನಂತರ, ತಮ್ಮ ಪಾಲಿನ ಕೆಲಸ ಮುಗಿಯಿತು ಎನ್ನುವುದನ್ನು ಖಾತರಿಪಡಿಸಿಕೊಂಡ ಆ ವಕೀಲರು ಚೀಟಿಯಲ್ಲಿ ತಮ್ಮ ಪತ್ನಿ ನಿಧನರಾಗಿರುವ ವಾರ್ತೆ ಇತ್ತೆಂದು ಹೇಳಿ ಅಲ್ಲಿಂದ ಹೊರಡುತ್ತಾರೆ. ಆ ವಕೀಲರೇ ವಲ್ಲಭಭಾಯಿ ಪಟೇಲ್. ‘ಕರ್ತವ್ಯನಿಷ್ಠೆ ಎಂದರೆ ಹೀಗಿರಬೇಕು’ ಅಂತ ಮೇಷ್ಟ್ರು ಹೇಳಿದ್ದ ನೆನಪು.

ಕೆರೆಗೆ ಬಿದ್ದ ಕಬ್ಬಿಣದ ಕೊಡಲಿಯ ಬದಲು ದೇವರು ಚಿನ್ನದ ಕೊಡಲಿ ಕೊಟ್ಟಾಗ ‘ಅದು ನನ್ನದಲ್ಲ’ ಎನ್ನುವ ಮರ ಕಡಿಯುವವನಿಗೆ ದೇವರು ಎಲ್ಲವನ್ನೂ ಕೊಟ್ಟದ್ದು, ಇನ್ನೊಬ್ಬ ಬೇಕೆಂತಲೇ ಕಬ್ಬಿಣದ ಕೊಡಲಿಯನ್ನು ಕೆರೆಗೆ ಹಾಕಿ, ದೇವರು ತಂದುಕೊಟ್ಟ ಚಿನ್ನದ ಕೊಡಲಿಯನ್ನು ತನ್ನದೆಂದು ಸುಳ್ಳು ಹೇಳಿ ಎಲ್ಲವನ್ನೂ ಕಳೆದುಕೊಂಡದ್ದು... ಅದರಿಂದ ಕಲಿತದ್ದು, ದೇವರು ಅಂತ ಒಂದು ಶಕ್ತಿ ಇದ್ದರೆ ಅದು ಸತ್ಯಸಂಧತೆ ಮತ್ತು ಪ್ರಾಮಾಣಿಕತೆ ಮಾತ್ರ ಎಂದು.

ಹಾಗೆಯೇ ಐದನೆಯ ತರಗತಿಯಲ್ಲಿ ಕವಿ ಕಯ್ಯಾರ ಕಿಞ್ಞಣ್ಣ ರೈ ಅವರ ಮೈನವಿರೇಳಿಸುವ ಪದ್ಯವೊಂದಿತ್ತು:

ಇಲ್ಲಿಯೆ ತಾಯ್ನಾಡಿನಲ್ಲಿಯೇ ಹುಟ್ಟುಪೆನು, ಕ್ರಿಮಿ ಕೀಟವಾದರೂ ಕೊರಗುದೋರೆ! ಸ್ವಾತಂತ್ರ್ಯಸ್ವರ್ಗ ಸೋಪಾನ ಸಾವಿರವೇರಿ, ಸೌಖ್ಯನಂದನ ವಿಹಾರ ದೊಳಿಷ್ಟವಿಲ್ಲ; ತಾಯ್ನೆಲದ ಗದ್ದೆಕೆಸರಿನ ತೀರ್ಥದೊಳೆ ಮಿಂದು, ಪುಣ್ಯಪುಳಕಿತನಪ್ಪೆ ನಷ್ಟವಿಲ್ಲ!

ಈ ಪದ್ಯ ವಿವರಿಸಿದ ಮೇಷ್ಟ್ರು ‘ದೊಡ್ಡವರಾದ ಮೇಲೆ ಹಣದಾಸೆಗೆ ಬಿದ್ದು ಅಮೆರಿಕ, ಯುರೋಪ್, ಇಂಗ್ಲೆಂಡ್ ಅಂತ ಹೋಗದೆ, ಈ ದೇಶದಲ್ಲೇ ಸಿಕ್ಕಷ್ಟಕ್ಕೆ ತೃಪ್ತಿಪಟ್ಟು ದೇಶಕಟ್ಟಿ ಎಂದಿದ್ದರು’. ಅದರಲ್ಲಿ ದೇಶಪ್ರೇಮದ ಪಾಠವಿತ್ತು. ಇದ್ದುದರಲ್ಲೇ ಬದುಕು ಎನ್ನುವ ತಾತ್ವಿಕ ಸಂದೇಶವಿತ್ತು. ‘ತೇನ ತ್ಯಕ್ತೇನ ಭುಂಜೀಥಾ’ ಎನ್ನುವ ಉಪನಿಷದ್ ಸಾರವೂ ಅದರಲ್ಲಿತ್ತು ಅಂತ ವರ್ಷಗಳ ನಂತರ ಅನ್ನಿಸಿತ್ತು.

ಹೈಸ್ಕೂಲಿನಲ್ಲಿ ಅಂಬೇಡ್ಕರ್ ಕುರಿತ ಸುದೀರ್ಘ ಪಠ್ಯ ಓದುವಾಗ, ಬದುಕಿನಲ್ಲಿ ಬರುವ ಅವಮಾನಗಳಿಂದ ಜಗ್ಗದೆ ಯಥಾಶಕ್ತಿ ಎದುರಿಸುವ ಹಟ ಬೇಕೆಂಬ ಪಾಠವಾಯಿತು. ಮೇಷ್ಟ್ರು ‘ಗಾಂಧಿ’ ಸಿನಿಮಾ ತೋರಿಸಿದರು. ಅದರಲ್ಲಿ, ಒಂದೇ ಒಂದು ಸೀರೆ ಹೊಂದಿದ್ದ ಹೆಂಗಸೊಬ್ಬರು ಅನುಭವಿಸುವ ಕಷ್ಟ ಕಂಡ ಗಾಂಧೀಜಿ ಮುಂದೆ ಬರೀ ಅರ್ಧ ಪಂಚೆಯನ್ನಷ್ಟೇ ತೊಡಲು ನಿರ್ಧರಿಸಿದ ಕುರಿತು ‘ನಮ್ಮ ಸುತ್ತಲಿರುವವರು ಕಷ್ಟದಲ್ಲಿರುವಾಗ ನಾವು ಆಡಂಬರದಿಂದ ಬದುಕುವುದು ನಮ್ಮಲ್ಲಿ ಕನಿಷ್ಠ ಒಂದು ಪಾಪಪ್ರಜ್ಞೆಯನ್ನಾದರೂ ಹುಟ್ಟಿಸಬೇಕು’ ಎಂದಿದ್ದರು.

ಇವೆಲ್ಲವೂ ನೀತಿ ಪಾಠಗಳು. ಇಂಥವುಗಳು ಎಷ್ಟೋ ಇವೆ. ಇವು ಎಲ್ಲಾ ಕಾಲದ ಪಠ್ಯಪುಸ್ತಕಗಳು ಮತ್ತು ಶಿಕ್ಷಕರು ಬೋಧಿಸುವ ಕಾಲಾತೀತ ಜೀವನಮೌಲ್ಯಗಳು.

ಧರ್ಮಕ್ಕೆ ಸಂಬಂಧಿಸಿದ ನಿರ್ದಿಷ್ಟ ಗ್ರಂಥ, ಗೀತೆ ಬೋಧನೆ ಇತ್ಯಾದಿಗಳು ಪಠ್ಯಪುಸ್ತಕಗಳಾಗಿರಲಿಲ್ಲ. ಹಾಗೆಂದು ಧರ್ಮಗಳನ್ನಾಗಲೀ ಮಹಾಕಾವ್ಯಗಳನ್ನಾಗಲೀ ದೂರವಿಟ್ಟಿರಲಿಲ್ಲ. ಕನ್ನಡ ಪಠ್ಯಪುಸ್ತಕಗಳಲ್ಲಿ ‘ಆರುಣಿ’, ‘ನಚಿಕೇತ’, ‘ಅಷ್ಟಾವಕ್ರ’ ಮುಂತಾದ ಉಪನಿಷದ್ ಕತೆಗಳಿದ್ದವು. ಭೀಮ, ದುರ್ಯೋಧನ, ಏಕಲವ್ಯ, ಕರ್ಣ, ಅಭಿಮನ್ಯು, ಬಲಿ, ಭರತನಂತಹ ಪೌರಾಣಿಕ ಪಾತ್ರಗಳ ಕತೆಗಳೂ ಅಲ್ಲಿದ್ದವು. ಕ್ರೈಸ್ತ, ಪೈಗಂಬರ, ಬುದ್ಧ, ಮಹಾವೀರ, ನಾನಕರ ಬಗೆಗಿನ ಪಾಠಗಳಿದ್ದವು. ಎಲ್ಲವೂ ಏನನ್ನೋ ತಿಳಿಸುತ್ತಿದ್ದವು. ಆದರೆ, ನೈತಿಕತೆ ಮತ್ತು ಮೌಲ್ಯಗಳ ವಿಚಾರದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಕತೆಗಳಿಂದ, ನೈಜ ಸ್ವಾತಂತ್ರ್ಯ ಹೋರಾಟಗಾರರ ಜೀವನಚರಿತ್ರೆಯಿಂದ, ಸಂವಿಧಾನದ ಕುರಿತಾದ ವಿವರಣೆಗಳಿಂದ ಮತ್ತು ವಚನ-ಜನಪದ ಸಾಹಿತ್ಯಗಳಿಂದ ಸಿಗುವಷ್ಟು ಸ್ಪಷ್ಟತೆ ಇನ್ಯಾವುದೇ ಪಠ್ಯಗಳಿಂದ ಸಿಗುತ್ತಿರಲಿಲ್ಲ.

ಭಾರತದ ಸ್ವಾತಂತ್ರ್ಯ ಸಂಗ್ರಾಮ ಬರೀ ಹೋರಾಟವಲ್ಲ. ಅದು ಮೌಲ್ಯಗಳ ಮಹಾಪ್ರವಾಹ. ಸಂವಿಧಾನ ಕೇವಲ ರೀತಿ-ರಿವಾಜುಗಳ, ಕಾನೂನು- ಕಟ್ಟಲೆಗಳ ಕಂತೆಯಲ್ಲ. ಅದು ಉದಾತ್ತ ಮಾನವೀಯ ತತ್ವಗಳ ಮಹಾಪ್ರಸ್ಥಾನ. ಮತ್ತೆ ಕಯ್ಯಾರರ ಕಾವ್ಯದ ಚರಣವೊಂದು ನೆನಪಾಗುತ್ತದೆ:

ವೇದಶಾಸ್ತ್ರಪುರಾಣಕಾವ್ಯೇತಿಹಾಸಗಳ ಜೀರ್ಣಿಸಿದ ಪೂರ್ಣಿಸಿದ ಪಾಂಡಿತ್ಯ ಬೇಡೆ; ಎನ್ನ ತಾಯ್ನಾಡ ನಿರ್ಭಾಗ್ಯ ಸೋದರನೊಡನೆ ನಲ್ವಾತನಾಡುವೆನು ನಿತ್ಯ ನೋಡ...

ಈಗ ಮೌಲ್ಯ, ನೈತಿಕತೆ ಎಂದು ಹುಯಿಲೆಬ್ಬಿಸುವ ಸರ್ಕಾರವೇ ಸ್ವಾತಂತ್ರ್ಯ ಸಂಗ್ರಾಮವನ್ನು ಧಿಕ್ಕರಿಸಿದವರ, ಸಂವಿಧಾನವನ್ನು ಅನುಮಾನಿಸುವವರ, ‘ಹುಸಿಯನುಡಿಯಲು ಬೇಡ’ ಎನ್ನುವ ಮೌಲ್ಯವನ್ನೇ ಅಣಕಿಸುವವರ ಬರಹಗಳನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಿಕೊಳ್ಳುತ್ತದೆ. ಇದು ವಿಪರ್ಯಾಸ. ಪಠ್ಯಪುಸ್ತಕದ ಶುದ್ಧೀಕರಣಕ್ಕಾಗಿ ಹೋರಾಡಿದವರು ಕೂಡ ಉಳಿದ ಅಪಭ್ರಂಶಗಳನ್ನು ಸರಿಪಡಿಸಿಕೊಳ್ಳುವಲ್ಲಿ ತೋರಿದ ದಿಟ್ಟತನವನ್ನು ಈ ಮಹಾಮಾಲಿನ್ಯದ ವಿಚಾರದಲ್ಲಿ ತೋರದೆ ಮೌನ ವಹಿಸಿದ್ದು ಎಲ್ಲದಕ್ಕಿಂತ ದೊಡ್ಡ ವಿಪರ್ಯಾಸ.

ನೈತಿಕ ಶಿಕ್ಷಣದ ಬಗ್ಗೆ ಸಲಹೆ ಕೇಳಲು ಕರೆದಿದ್ದ ಧಾರ್ಮಿಕ ಮುಖಂಡರ ಸಭೆಗೆ ಸರ್ಕಾರ ಆಹ್ವಾನಿಸಿದವರ ಪೈಕಿ ಎಂತೆಂತಹವರೆಲ್ಲಾ ಇದ್ದರು ಎನ್ನುವುದರ ಕುರಿತು ಕ್ಷಣ ಯೋಚಿಸಬೇಕು. ಅಲ್ಲಿ ಅತ್ಯಾಚಾರದ ಆರೋಪ ಎದುರಿಸಿದವರಿದ್ದರು, ಜೈಲು ಸೇರಿದ ಧಾರ್ಮಿಕ ನಾಯಕರೊಬ್ಬರ ಸಮರ್ಥನೆಗೆ ನಿಂತವರಿದ್ದರು, ಸುಳ್ಳು ಹೇಳುವವರನ್ನು ಅಂಗಣಕ್ಕೆ ಕರೆದು ಉಪನ್ಯಾಸ ಏರ್ಪಡಿಸುವವರು ಇದ್ದರು, ಜಾತಿ ಪಾರಮ್ಯವನ್ನು ಪ್ರತಿಪಾದಿಸುವವರೂ ಇದ್ದರು. ಸ್ವತಃ ನೈತಿಕ ಪಾಠ ಕೇಳಿಸಿಕೊಳ್ಳಬೇಕಾದ ಇಂತಹ ವ್ಯಕ್ತಿಗಳು ತಮ್ಮ ಸ್ವಭಾವಕ್ಕನುಗುಣವಾದ ಸಲಹೆಗಳನ್ನು ನೀಡಿದ್ದಾರೆ. ಆ ಸಲಹೆಗಳ ಬಗೆಗಿನ ಚರ್ಚೆ ಏನೇ ಇರಲಿ, ಇಂತಹವರಿಗೆಲ್ಲಾ ಪ್ರಾಮುಖ್ಯ ನೀಡುವುದರ ಮೂಲಕ ವಿದ್ಯಾರ್ಥಿಗಳಿಗೆ ಸರ್ಕಾರ ರವಾನಿಸಿದ ನೈತಿಕ ಸಂದೇಶವಾದರೂ ಎಂತಹದ್ದು ಎಂದು ಕೇಳುವ ಸಾತ್ವಿಕ ಧೈರ್ಯವನ್ನು ಯಾರೂ ತೋರಿಲ್ಲ. ಇದನ್ನು ನೈತಿಕತೆಯ ಮಹಾಮೌನ ಎನ್ನೋಣವೇ? ಮಹಾಪತನ ಎನ್ನೋಣವೇ? ಮೇಲೆ ಹೇಳಿದ ಪಠ್ಯಪುಸ್ತಕ ಮಾಲಿನ್ಯದ ವಿಚಾರದಲ್ಲಿ ಕಂಡ ಮೌನದ ಮುಂದುವರಿಕೆ ಇದು.

ಧಾರ್ಮಿಕ ಪೋಷಾಕಿನಲ್ಲಿರುವ ಈ ಕೆಲ ವ್ಯಕ್ತಿಗಳ ನೈತಿಕತೆಯ ಮಟ್ಟದ ಬಗ್ಗೆ ಏನೂ ತಿಳಿದಿಲ್ಲ ಎನ್ನುವಂತೆ ಸರ್ಕಾರವೇನೋ ನಟಿಸಬಹುದು. ಆದರೆ ಮಾಹಿತಿಯ ಮಹಾಪೂರದ ನಡುವೆ ಬೆಳೆಯುತ್ತಿರುವ ಇಂದಿನ ಮಕ್ಕಳ ಬಳಿ ಪ್ರತಿಯೊಬ್ಬ ಸಾರ್ವಜನಿಕ ವ್ಯಕ್ತಿಯ ನೈತಿಕ ಜಾತಕವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT