ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈದರಾಬಾದ್ ಎನ್‌ಕೌಂಟರ್ | ಇದ್ಯಾವ ಸೀಮೆ ಹೀರೊಯಿಸಂ?

ಎನ್‌ಕೌಂಟರ್‌ ಮಾಡಿದ ಪೊಲೀಸರನ್ನು ಜನ ಈ ಪರಿ ವೈಭವೀಕರಿಸುವುದು ಅಪಾಯಕಾರಿ
Last Updated 9 ಡಿಸೆಂಬರ್ 2019, 1:37 IST
ಅಕ್ಷರ ಗಾತ್ರ

ಕೊಲೆ, ಅತ್ಯಾಚಾರ ಮುಂತಾದ ಅಪರಾಧಗಳನ್ನು ಮಾಡಿದ ವ್ಯಕ್ತಿಗಳನ್ನು ಸೌದಿ ಅರೇಬಿಯಾದಲ್ಲಿ ಸಾರ್ವಜನಿಕವಾಗಿ ತಲೆ ಕಡಿಯುತ್ತಾರೆ, ನೈಜೀರಿಯಾದಲ್ಲಿ ಕಲ್ಲೆಸೆದು ಕೊಲ್ಲುತ್ತಾರೆ, ಸುಡಾನ್‌ನಲ್ಲಿ ಸುಟ್ಟೇ ಬಿಡುತ್ತಾರೆ. ಆದುದರಿಂದ, ದೇಶದಾದ್ಯಂತ ಕುತೂಹಲ ಮತ್ತು ತೀವ್ರ ಆಕ್ರೋಶ ಸೃಷ್ಟಿಸಿದ ಅತ್ಯಾಚಾರ- ಹತ್ಯೆ ಪ್ರಕರಣವೊಂದರ ಆರೋಪಿಗಳನ್ನು ಮೊನ್ನೆ ಹೈದರಾಬಾದ್ ಪೊಲೀಸರು ಗುಂಡಿಟ್ಟು ಕೊಂದದ್ದು ಬಲು ದೊಡ್ಡ ಸಾಹಸ ಅಂತ ಭಾರತೀಯರು ಪೊಲೀಸರನ್ನು ಹಾಡಿ ಹೊಗಳಿದರು, ಆಪಾದಿತರ ಸಾವಿಗೆ ಸಂಭ್ರಮಿಸಿದರು.

ಇಂತಹ ವಿಚಾರಗಳಲ್ಲಿ ಭಾರತಕ್ಕೆ ಸುಡಾನ್, ನೈಜೀರಿಯಾ, ಸೌದಿ ಅರೇಬಿಯಾ ಮುಂತಾದ ‘ಮಹಾನ್ ದೇಶ’ಗಳೇ ಆದರ್ಶವಾಗಬೇಕು ಎಂದು ಭಾರತೀಯರು ಭಾವಿಸಿರುವ ಹಾಗಿದೆ. ಇರಲಿ. ಆದರೆ, ಹೈದರಾಬಾದ್‌ನಲ್ಲಿ ನಡೆದ ಆಪಾದಿತರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಅಂಶವನ್ನು ಗಮನಿಸಿ. ಇಂತಹ ದೇಶಗಳಲ್ಲಿ ಕೂಡಾ ನ್ಯಾಯಾಲಯಗಳು ಆಪಾದಿತರನ್ನು ಅಪರಾಧಿಗಳು ಅಂತ ಅನುಮಾನಾತೀತವಾಗಿ ಪರಿಗಣಿಸಿದ ನಂತರ ಘೋರ ಶಿಕ್ಷೆ ನೀಡುತ್ತಾರೆ.

ಯಾವುದೇ ನಿಕೃಷ್ಟ ದೇಶದಲ್ಲೂ ಆ ಕಡೆಯಿಂದ ನಾಲ್ವರು ಆಪಾದಿತರನ್ನು ಹಿಡಿದುಕೊಂಡು ಬಂದು, ಸಾರ್ವಜನಿಕರ ಆಕ್ರೋಶ ತಣಿಸಲು ಈ ಕಡೆ ಅವರನ್ನು ಹೀಗೆ ಸಲೀಸಾಗಿ ಬಲಿ ಕೊಟ್ಟು ಎನ್‌ಕೌಂಟರ್‌ ಅಂತ ಕಾಗಕ್ಕ- ಗೂಬಕ್ಕನ ಕತೆ ಹೆಣೆಯುವ ಪರಿಪಾಟ ಇದ್ದಂತಿಲ್ಲ. ಇದ್ದರೂ ಅದು ಭಾರತಕ್ಕೆ ಆದರ್ಶವಾಗಬೇಕಾಗಿಯೂ ಇಲ್ಲ. ಹಾಗಂತ ಹೇಳುತ್ತಿರುವುದು ನ್ಯಾಯಮೂರ್ತಿಗಳು ಮತ್ತು ಕೆಲ ಪತ್ರಿಕೆಗಳು ಮಾತ್ರವಲ್ಲ. ಸ್ವತಃ ಪೊಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆಗಳಲ್ಲಿದ್ದ ಎಷ್ಟೋ ಮಂದಿ ಕೂಡಾ ಈ ಎಚ್ಚರಿಕೆಯನ್ನು ಕಾಲಕಾಲಕ್ಕೆ ನೀಡುತ್ತಾ ಬಂದಿದ್ದಾರೆ.

ಎನ್‌ಕೌಂಟರ್ ಎಂದು ಅಧಿಕೃತವಾಗಿ ಕರೆಯಲಾಗುವ ವಿದ್ಯಮಾನ ವಾಸ್ತವದಲ್ಲಿ ಪೊಲೀಸರು ನಡೆಸುವ ಕೊಲೆಯೇ ಆಗಿದೆ ಎನ್ನುವ ಬಗ್ಗೆ ಜನರಲ್ಲಿ ಯಾವುದೇ ಅನುಮಾನ ಉಳಿಯದಷ್ಟು ಎಲ್ಲವೂ ಮಾಮೂಲಿಯಾಗಿರುವ ಈ ಕಾಲದಲ್ಲಿ, ನಮ್ಮ ಮುಂದಿರುವ ಪ್ರಶ್ನೆ ಆಪಾದಿತರ ಮಾನವ ಹಕ್ಕುಗಳ ಹರಣವಾಯಿತು ಎಂಬುದಲ್ಲ. ಅಥವಾ ಅದು ಮಾತ್ರವಲ್ಲ. ಆಪಾದಿತರನ್ನು ಈ ರೀತಿ ಕೊಂದು ಹಾಕುವ ಮೂಲಕ ಪೊಲೀಸರು ಸ್ವತಃ ತಮಗೆ ಅಪಾಯಕಾರಿಯಾಗಬಲ್ಲ ಸನ್ನಿವೇಶವೊಂದನ್ನು ಸೃಷ್ಟಿಸಿಕೊಳ್ಳುತ್ತಿದ್ದಾರೆ.

ಮಹಾನ್ ಸಾಹಸ ಮಾಡಿದ್ದೇವೆ ಅಂತ ಜನರಿಂದ ಲಡ್ಡು- ಜಿಲೇಬಿ ಸ್ವೀಕರಿಸುತ್ತಿರುವ ಖಾಕಿಧಾರಿಗಳು ಒಂದು ವಿಚಾರ ತಿಳಿದುಕೊಳ್ಳಬೇಕು. ಕಾನೂನು ಕಾಲಕಸ- ದಿಢೀರ್ ಬೀದಿನ್ಯಾಯವೇ ಸರಿ ಅಂತ ಈ ರೀತಿಯ ಘಟನೆಗಳ ಮೂಲಕ ಸಮಾಜಕ್ಕೆ ಸಂದೇಶ ರವಾನೆಯಾಗತೊಡಗಿದರೆ, ನಾಳೆ ಇಂತಹದ್ದೇ ಉನ್ಮತ್ತ ಜನಸಮೂಹ ‍ಪೊಲೀಸರ ವಿರುದ್ಧವೂ ತಿರುಗಿಬಿದ್ದೀತು. ಒಂದು ಅಚಾನಕ್ ಅನಾಹುತ ಖಾಕಿಗಳ ಕಡೆಯಿಂದ ಆದರೆ ಸಾಕು; ಒಂದು ಸುಳ್ಳು ಸುದ್ದಿ ಹರಡಿದರೆ ಸಾಕು. ಕಾನೂನುಬದ್ಧ ಆಡಳಿತ ಮುರಿದುಬಿದ್ದು ಕ್ರೋಧಾವಿಷ್ಟ ಜನಸಮೂಹವು ಪರಿಸ್ಥಿತಿಯನ್ನು ನಿಯಂತ್ರಿಸಲು ತೊಡಗಿದರೆ, ಪೊಲೀಸರು ಮತ್ತು ಅವರ ಹೆಂಡತಿ ಮಕ್ಕಳು ಸೇರಿದಂತೆ ಯಾರೂ ಸುರಕ್ಷಿತರಲ್ಲ. ಈ ಕಾರಣಕ್ಕಾಗಿ ‘ಪೊಲೀಸ್ ಬುದ್ಧಿ’ ಮೀರಿ ಯೋಚಿಸಬಲ್ಲ ಪೊಲೀಸ್ ಇಲಾಖೆಯ ಹಿರಿಯರೇ ಇಂತಹ ಟೊಳ್ಳು ಹೀರೊಯಿಸಂ ಬೇಡ ಅಂತ ಎಚ್ಚರಿಸುತ್ತಿರುವುದು.

ತೀರಾ ಸಂಕೀರ್ಣವಾದ ಅಪರಾಧ ಪ್ರಕರಣಗಳ ತನಿಖೆಯಲ್ಲಿ ಯಾರು ನಿಜವಾದ ಹೀರೊಗಳಾಗುತ್ತಾರೆ ಎನ್ನುವುದನ್ನು ಅರಿಯಬೇಕಾದರೆ ‘ಡೆಲ್ಲಿ ಕ್ರೈಂ’ ಎನ್ನುವ ಸಿನಿಮೀಯ ಸಾಕ್ಷ್ಯಚಿತ್ರವೊಂದನ್ನು ನೋಡಬೇಕು. ನಿರ್ಭಯಾ ಪ್ರಕರಣ ಮತ್ತು ಅದರ ತನಿಖೆಯನ್ನು ಈ ಸಾಕ್ಷ್ಯಚಿತ್ರದಲ್ಲಿ ಮರುನಿರ್ಮಿಸಲಾಗಿದೆ. ಪ್ರಕರಣದ ತನಿಖೆ ನಡೆಸಿದ ಐಪಿಎಸ್ ಮಹಿಳೆ ತನಗೆ ಎದುರಾದ ಸವಾಲುಗಳನ್ನು ನಿಭಾಯಿಸಿದ ರೀತಿ, ಕಾನೂನು ಮೀರಿ ವ್ಯವಹರಿಸಿದರೆ ಜೋಕೆ ಅಂತ ಆಕೆ ಸಹೋದ್ಯೋಗಿಗಳನ್ನು ಎಚ್ಚರಿಸುವ ವಿಧಾನ, ಅತೀವವಾದ ಸಾರ್ವಜನಿಕ–ರಾಜಕೀಯ ಒತ್ತಡದ ನಡುವೆ ತನಿಖೆಯನ್ನು ಯಶಸ್ವಿಯಾಗಿ ದಡ ಸೇರಿಸುವಲ್ಲಿ ತೋರಿದ ವೃತ್ತಿಪರತೆ ಎಂತಹವರಲ್ಲಾದರೂ ಆಕೆಯ ಬಗ್ಗೆ ಅಭಿಮಾನ ಮೂಡಿಸುವಂತಿದೆ.

ತನಿಖೆ ನಿಜಕ್ಕೂ ಸಾಕ್ಷ್ಯಚಿತ್ರದಲ್ಲಿ ತೋರಿಸಿದಂತೆಯೇ ನಡೆದಿದ್ದರೆ ಪೊಲೀಸರ ಮಧ್ಯೆ ಎಲ್ಲೋ ಒಂದಿಬ್ಬರು ಮನುಷ್ಯರು ಇನ್ನೂ ಉಳಿದುಕೊಂಡಿದ್ದಾರೆ ಎಂಬ ಸಣ್ಣ ಭರವಸೆ ಮೂಡುತ್ತದೆ. ಎನ್‌ಕೌಂಟರ್ ನಡೆಸದ ಹೊರತು ಅಪರಾಧಿಗಳಿಗೆ ಶಿಕ್ಷೆಯಾಗಲು ಸಾಧ್ಯವೇ ಇಲ್ಲ ಅಂತ ಭಾವಿಸುವವರು ಈ ಸಾಕ್ಷ್ಯಚಿತ್ರವನ್ನೊಮ್ಮೆ ನೋಡಬೇಕು.

ಹೈದರಾಬಾದ್‌ನಲ್ಲಿ ಪೊಲೀಸರು ಕೊಂದು ಹಾಕಿದ್ದು ಭೂಗತ ಜಗತ್ತಿನ ಅಪರಾಧಿಗಳನ್ನಲ್ಲ. ಅಂತಹವರಾಗಿದ್ದರೆ, ಅವರು ಕಿಲಾಡಿ ವಕೀಲರನ್ನು ಹಿಡಿದು ಕಾನೂನಿನ ಕುಣಿಕೆಯಿಂದ ನಿರಂತರವಾಗಿ ತಪ್ಪಿಸಿಕೊಳ್ಳುತ್ತಾ ಪೊಲೀಸರನ್ನು ಹತಾಶೆಗೆ ನೂಕಿದ್ದರು ಎನ್ನುವ ನಿರ್ಧಾರಕ್ಕಾದರೂ ಬರಬಹುದಿತ್ತು. ಈ ನಾಲ್ಕು ಮಂದಿ ಮಾಡಿದ ಅಪರಾಧ ಘೋರವಾದದ್ದೇ. ಆದರೆ ಇವರು ಕಾನೂನು ಪ್ರಕಾರ ಶಿಕ್ಷೆಗೊಳಗಾಗುವ ಎಲ್ಲಾ ಸಾಧ್ಯತೆ ಇತ್ತು. ದೊಡ್ಡ ವಕೀಲರನ್ನು ಬಳಸಿ ಶಿಕ್ಷೆಯಿಂದ ಪಾರಾಗಬಲ್ಲ ಕುಳಗಳಾಗಿರಲಿಲ್ಲ ಇವರು. ಹಾಗಿರುವಾಗ ಅವರನ್ನು ಮುಗಿಸುವಲ್ಲಿ ಸಾರ್ವಜನಿಕ ಒತ್ತಡ ಬಿಟ್ಟರೆ ಇನ್ನೇನಿತ್ತು? ನಿರ್ಭಯಾ ಪ್ರಕರಣದಲ್ಲಿ ಅಗಾಧ ಒತ್ತಡದ ನಡುವೆ ಅಲ್ಲಿನ ಪೊಲೀಸರಿಗೆ ಕಾನೂನು ಪ್ರಕಾರ ಅಪರಾಧಿಗಳಿಗೆ ಮರಣದಂಡನೆ ಕೊಡಿಸಲು ಸಾಧ್ಯವಾಗಿದೆ. ಹೈದರಾಬಾದ್ ಪೊಲೀಸರಿಗೆ ಇಷ್ಟು ಮಾಡಲಾಗದು ಎನ್ನುವುದನ್ನು ಒಪ್ಪಿಕೊಂಡು ಆಪಾದಿತರನ್ನು ಕೊಂದು ಹಾಕಲಾಯಿತೇ ಅಥವಾ ಕೋರ್ಟು-ಕಾನೂನು ಕತ್ತೆಬಾಲ ಎನ್ನುವ ಧಿಮಾಕೇ? ಅದಕ್ಕಿಂತಲೂ ಮುಖ್ಯವಾಗಿ ಈ ನಾಲ್ವರೇ ಅಥವಾ ನಾಲ್ವರಲ್ಲಿ ಎಲ್ಲರೂ ಅಪರಾಧಿಗಳು ಅಂತ ಪೊಲೀಸರು ಹೇಳಿದ್ದನ್ನು ಹೇಗೆ ನಂಬುವುದು?

ವಿಪರೀತ ಸಾರ್ವಜನಿಕ ಒತ್ತಡ ಇದ್ದಾಗ ಪೊಲೀಸರು ಬಡಪಾಯಿಗಳನ್ನು ಹಿಡಿದು ಬಡಿದ ಕತೆಗಳು ದೇಶದೆಲ್ಲೆಡೆ ಅನುರಣಿಸುತ್ತಿವೆ. ಹಾಗಿರುವಾಗ ಇಲ್ಲಿ ಪೊಲೀಸರು ಬಂಧಿಸಿದವರೇ ಅಪರಾಧಿಗಳು ಅಂತ ಎಲ್ಲರೂ ಒಪ್ಪಿಕೊಂಡ ಮರ್ಮವೇನು? ಆಪಾದಿತರ ಸಾಮಾಜಿಕ- ಆರ್ಥಿಕ ಹಿನ್ನೆಲೆ ಸ್ವಲ್ಪ ಭಿನ್ನವಾಗಿದ್ದರೆ ಹೀಗಾಗುತ್ತಿತ್ತೇ? ಪೊಲೀಸರ ಮೇಲೆ ಜನರಿಗೆ ಈ ಮಟ್ಟಿನ ನಂಬಿಕೆ ಬಂದುಬಿಟ್ಟರೆ, ಪೊಲೀಸರು ಈ ಮಟ್ಟಕ್ಕೆ ಸಾರ್ವಜನಿಕ ಒತ್ತಡಕ್ಕೆ ಮಣಿದರೆ ದೇಶವನ್ನು ದೇವರೂ ಕಾಪಾಡಲಾರ.

ಇದೊಂದು ಎನ್‌ಕೌಂಟರ್ ಅಂತ ಬಿಂಬಿಸಲು ಒಂದು ಒಳ್ಳೆಯ ಕತೆಯನ್ನಾದರೂ ಹೆಣೆಯುವ ಅಗತ್ಯ ಪೊಲೀಸರಿಗೆ ತೋರಲಿಲ್ಲ. ‘ಆಪಾದಿತರು ಆಯುಧಗಳನ್ನು ಕಿತ್ತುಕೊಂಡು ನಮ್ಮ ಮೇಲೆರಗಿದರು, ಅದಕ್ಕೆ ಕೊಂದೆವು’ ಎನ್ನುವ ಹೇಳಿಕೆಯ ಸತ್ಯಾಸತ್ಯತೆ ಪುಟ್ಟ ಮಗುವಿಗೂ ಅರ್ಥವಾದೀತು. ಇಂಗ್ಲಿಷ್‌ ಪತ್ರಿಕೆಯೊಂದರ ಶೀರ್ಷಿಕೆ ಮಾರ್ಮಿಕವಾಗಿತ್ತು: ‘ನಾಲ್ವರು ಆಪಾದಿತರು 10 ಮಂದಿ ಪೊಲೀಸರಿಂದ ಎರಡು ಬಂದೂಕುಗಳನ್ನು ಕಿತ್ತುಕೊಂಡಿದ್ದಾರಂತೆ!’ ಪತ್ರಿಕೆಯ ಸಂಪಾದಕೀಯದಲ್ಲಿ ಎತ್ತಿದ ಪ್ರಶ್ನೆ: ‘ಪೊಲೀಸರು ಹೇಳುವ ಕತೆ ಸತ್ಯವಾದರೆ ಅವರು ಅದೆಷ್ಟು ಅದಕ್ಷರಲ್ಲವೇ?’ ಲಾಕಪ್‌ನಲ್ಲಿ ಮೂಳೆ ಮುರಿಸಿಕೊಂಡು ಸುಸ್ತಾದ ಆಪಾದಿತರು ನುರಿತ ಪೊಲೀಸರ ಲಾಠಿ ಮತ್ತು ಗನ್‌ಗಳನ್ನು ಅಷ್ಟೊಂದು ಸುಲಭವಾಗಿ ಕಿತ್ತುಕೊಳ್ಳಬಹುದು ಎಂದಾದರೆ ಪೊಲೀಸರದ್ದು ಅದೆಂಥಾ ಕಾರ್ಯಕ್ಷಮತೆ! ಬಂಧನದಲ್ಲಿ ಇದ್ದವರನ್ನು ಕೊಲ್ಲುವುದು ಯಾವ ಸೀಮೆಯ ಹೀರೊಯಿಸಂ?

ಕೊನೆಯದಾಗಿ ತರ್ಕಕ್ಕಾಗಿ ಪೊಲೀಸರು ಮಾಡಿದ್ದು ಸರಿ ಅಂತಲೇ ಒಪ್ಪಿಕೊಂಡರೂ ವಿಷಯ ಅಲ್ಲಿಗೇ ಕೊನೆಯಾಗುವುದಿಲ್ಲ. ಪೊಲೀಸರು ಮಾಡಿದ್ದು ಸರಿಯಾದರೆ ಕೊಲೆಯಾದ ಆಪಾದಿತನ ಪತ್ನಿಯ ವಾದವನ್ನೂ ಒಪ್ಪಿಕೊಳ್ಳಬೇಕು: ‘ದೇಶದಾದ್ಯಂತ ಅತ್ಯಾಚಾರ ಮತ್ತು ಕೊಲೆಯ ಆಪಾದನೆ ಎದುರಿಸುತ್ತಿರುವ ಅಷ್ಟೂ ಮಂದಿಯನ್ನು ಕೊಂದುಬಿಡಿ. ಆಗ ನಾನು, ನನ್ನ ಗಂಡನ ಕೊಲೆಯನ್ನೂ ಒಪ್ಪಿಕೊಳ್ಳುತ್ತೇನೆ’ ಅಂತ ಆಕೆ ಹೇಳಿರುವುದು ಸಹಜವಾಗಿದೆ. ಎಷ್ಟು ಸಹಜವಾಗಿದೆ ಎಂದರೆ, ಹತ್ಯೆಯಾದ ಹೆಣ್ಣುಮಗಳ ಹೆತ್ತವರು ‘ಮಗಳನ್ನು ಕೊಂದವರನ್ನು ಗಲ್ಲಿಗೇರಿಸಿ’ ಎಂದಷ್ಟೇ ಸಹಜವಾಗಿದೆ. ಅಷ್ಟೂ ಹೆಣಗಳನ್ನು ಮಲಗಿಸಬಲ್ಲ ಹೀರೊ ಒಬ್ಬ ಇದ್ದಾನೆಯೇ? ಇಲ್ಲ ಎಂದಾದಲ್ಲಿ ಕಾನೂನುಬದ್ಧ ನ್ಯಾಯವ್ಯವಸ್ಥೆಯನ್ನು ಗೌರವಿಸಿ, ಸರಿಪಡಿಸಿ.

ಎ. ನಾರಾಯಣ
ಎ. ನಾರಾಯಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT