ಆಚಾರವಿಲ್ಲದ ನಾಲಗೆ ನೀಚ ಬುದ್ಧಿ ಬಿಡು!

7

ಆಚಾರವಿಲ್ಲದ ನಾಲಗೆ ನೀಚ ಬುದ್ಧಿ ಬಿಡು!

Published:
Updated:

ಕನ್ನಡದ ಪ್ರಸಿದ್ಧ ಸಾಹಿತಿ ಎ.ಎನ್. ಮೂರ್ತಿ ರಾಯರು ‘ದೇವರು ಇಲ್ಲ’ ಎನ್ನುವುದನ್ನು ಪ್ರತಿಪಾದಿಸಲು ತಮ್ಮ ಇಳಿವಯಸ್ಸಿನಲ್ಲಿ ‘ದೇವರು’ ಎಂಬ ಪುಸ್ತಕವನ್ನು ಬರೆದರು. ಆ ಪುಸ್ತಕವನ್ನು ಕೊಂಡ ಯುವತಿಯೊಬ್ಬಳು ಮೂರ್ತಿರಾಯರ ಹಸ್ತಾಕ್ಷರವನ್ನು ಬಯಸಿ ಅವರ ಬಳಿಗೆ ತೆರಳಿ ತನ್ನ ಬಯಕೆ ಹೇಳಿದಳು. ಮೂರ್ತಿರಾಯರು ಪುಸ್ತಕದ ಮೇಲೆ ‘ದೇವರು ನಿನಗೆ ಒಳ್ಳೆಯದು ಮಾಡಲಿ’ ಎಂದು ಬರೆದರಂತೆ. ಅದಕ್ಕೆ ಆ ಯುವತಿಗೆ ಆಶ್ಚರ್ಯ. ‘ದೇವರು ಇಲ್ಲ ಎಂದು ನೀವು ಪುಸ್ತಕ ಬರೆದಿದ್ದೀರಿ. ಆದರೆ ಈಗ ಇದರ ಮೇಲೆ ದೇವರು ನಿನಗೆ ಒಳ್ಳೆಯದು ಮಾಡಲಿ ಎಂದು ಬರೆದಿದ್ದೀರಿ. ಏನು ಇದರ ಮರ್ಮ’ ಎಂದು ಕೇಳಿದಳಂತೆ. ಅದಕ್ಕೆ ಮೂರ್ತಿರಾಯರು ‘ದೇವರು ಇಲ್ಲ ಎನ್ನುವುದು ನನ್ನ ನಂಬಿಕೆ. ದೇವರು ಒಳ್ಳೆಯದು ಮಾಡಲಿ ಎಂದು ಹಾರೈಸುವುದು ನಮ್ಮ ಸಂಸ್ಕೃತಿ’ ಎಂದು ಉತ್ತರಿಸಿದರಂತೆ.

ಮೂರ್ತಿರಾಯರಿಗೇ ಸಂಬಂಧಿಸಿದ ಇನ್ನೊಂದು ಘಟನೆ ಇದೆ. ಮೂರ್ತಿರಾಯರು ದೇವರ ವಿರುದ್ಧ ಪುಸ್ತಕ ಬರೆದಿರುವುದನ್ನು ಯಾರೋ ಒಬ್ಬರು ಪು.ತಿ.ನ. ಅವರಿಗೆ ಹೇಳಿದರಂತೆ. ಪು.ತಿ.ನ. ಅಪಾರ ದೈವ ಭಕ್ತರು. ಹಾಗಾಗಿ ಅವರು ಮೂರ್ತಿರಾಯರಿಗೆ ಚೆನ್ನಾಗಿ ಬೈಯ್ಯುತ್ತಾರೆ ಎಂದು ಈ ವ್ಯಕ್ತಿ ಅಂದು ಕೊಂಡಿದ್ದರು. ಆದರೆ ಪು.ತಿ.ನ., ‘ಹೌದು ದೇವರುಇಲ್ಲ. ಆದರೆ ನಾವು ಮಾಡಿಕೊಳ್ಳಬೇಕು. ನಿಮ್ಮ ಮನೆಯಲ್ಲಿ ಕಾಫಿ ಇರುತ್ತದಾ, ನೀವು ಮಾಡಿಕೊಳ್ಳಬೇಕು ತಾನೆ. ಹಾಗೆಯೇ ದೇವರನ್ನೂ ನಾವು ಮಾಡಿಕೊಳ್ಳಬೇಕು’ ಎಂದು ಉತ್ತರಿಸಿದರಂತೆ.

ಈಗ ಪು.ತಿ.ನ. ಅವರೂ ಇಲ್ಲ. ಮೂರ್ತಿರಾಯರೂ ಇಲ್ಲ. ಇದ್ದಿದ್ದರೆ ದೇವರ ಬಗ್ಗೆ ಹೀಗೆಲ್ಲ ಮಾತನಾಡಲು ಸಾಧ್ಯವೂ ಇರಲಿಲ್ಲ. ದೇವರ ಬಗ್ಗೆ ಹೋಗಲಿ ಮೂಢನಂಬಿಕೆ ಬಗ್ಗೆ ಕೂಡ ಮಾತನಾಡದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ದೇವರ
ಪವಾಡದ ಬಗ್ಗೆ ಈಗ ನಾವು ಏನು ಬೇಕಾದರೂ ಮಾತನಾಡುತ್ತೇವೆ. ದೇವರ ವಿರುದ್ಧ ಮಾತನಾಡಿದರೆ ಅದೊಂದು ದೊಡ್ಡ ಅಪರಾಧ ಎಂದೇ ಭಾವಿಸುತ್ತೇವೆ. ಕೇರಳದಲ್ಲಿ ಪ್ರವಾಹ ಬಂದಿದ್ದಕ್ಕೂ ದೇವರ ಶಾಪವೇ ಕಾರಣ ಎಂದು ಬೊಬ್ಬೆ ಹೊಡೆಯು
ತ್ತೇವೆ. ‘ದೇವರ ನಾಡು ಎಂದೇ ಕರೆಯಲಾಗುವ ಕೇರಳದಲ್ಲಿ ಬಹಿರಂಗವಾಗಿ ಗೋ ಮಾಂಸ ಮಾರಾಟ ಮಾಡಲಾಗುತ್ತದೆ. ಅದಕ್ಕೇ ಅಲ್ಲಿ ಪ್ರವಾಹ ಬಂದು ಜನಜೀವನ ಅಸ್ತವ್ಯಸ್ತವಾಯಿತು’ ಎಂದು ಯಾವ ಸಂಕೋಚವೂ ಇಲ್ಲದೆ ಹೇಳುತ್ತೇವೆ. ಶಬರಿಮಲೆ ದೇವಸ್ಥಾನವನ್ನು ಮಹಿಳೆಯೊಬ್ಬಳು ಪ್ರವೇಶ ಮಾಡಿದ್ದರಿಂದ ಹೀಗಾಯಿತು ಎಂದು ತೀರ್ಪು ಕೊಡುವವರೂ ನಮ್ಮ ನಡುವೆ ಇದ್ದಾರೆ.

ಒಂದು ಕಡೆ ನಾವು ಪ್ರಕೃತಿಯನ್ನೂ ದೇವರು ಎಂದು ಹೇಳಿಕೊಳ್ಳುತ್ತೇವೆ. ಆದರೆ ಪ್ರಕೃತಿ ಮಾತೆಯ ಮೇಲೆ ನಿರಂತರ ನಮ್ಮ ಅತ್ಯಾಚಾರ ನಡೆದೇ ಇರುತ್ತದೆ. ಹೀಗೆ ಪ್ರಕೃತಿಯ ಮೇಲೆ ಮಾನವ ನಡೆಸಿದ ದಾಂದಲೆಯಿಂದಲೇ ಕೇರಳ ಮತ್ತು ಕೊಡಗು ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಯಿತು. ಬೆಟ್ಟ ಗುಡ್ಡಗಳು ಕುಸಿದು ಬಿದ್ದವು ಎನ್ನುವುದನ್ನು ಮರೆತುಬಿಡುತ್ತೇವೆ. ದೇವರಿಗೆ ಸಿಟ್ಟು ಬಂದಿದ್ದರಿಂದಲೇ ಹೀಗೆಲ್ಲಾ ಆಯಿತು ಎಂದು ಯಾರಾದರೂ ಹೇಳಿದರೆ ಅದು ನಮಗೆ ಆಪ್ಯಾಯಮಾನವಾಗುತ್ತದೆ.

ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ಯಾರು ಬೇಕಾದರೂ ಏನನ್ನು ಬೇಕಾದರೂ ಮಾತನಾಡಬಹುದು. ಆದರೆ ಅದಕ್ಕೊಂದು ಆಚಾರ, ವಿಚಾರ ಇರಬೇಕಲ್ಲವೇ? ಈಗ ಅತ್ಯಂತ ಗಂಭೀರ ಪರಿಸ್ಥಿತಿ ಏನೆಂದರೆ ನ್ಯಾಯಯುತವಾಗಿ ಮಾತನಾಡಲೂ ಸ್ವಾತಂತ್ರ್ಯ ಇಲ್ಲ. ನ್ಯಾಯಯುತವಾಗಿ ಮಾತನಾಡಿದವರನ್ನು ಜೈಲಿಗೆ ಅಟ್ಟುವ ಕ್ರಿಯೆ ಆರಂಭವಾಗಿದ್ದು ನಮ್ಮನ್ನು ಗಾಬರಿಗೊಳಿಸುವ ವಿಷಯ, ಯೋಚಿಸಬೇಕಾದ ವಿಷಯ.

ಕೇರಳದಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿ ಕುರಿತಂತೆ ಮೂಢ ನಂಬಿಕೆ ಬಿತ್ತಿದ್ದನ್ನು ಪ್ರಶ್ನೆ ಮಾಡಿದ ಬಂಟ್ವಾಳ ತಾಲ್ಲೂಕಿನ ಸಾಲೆತ್ತೂರು ಅಶ್ರಫ್ ಎಂಬಾತನನ್ನು ಪೊಲೀಸರು ಬಂಧಿಸಿ ಸೆರೆಮನೆಗೆ ಕಳಿಸಿದ್ದರು. ಅಶ್ರಫ್ ವಿರುದ್ಧ ಯಾರೂ ದೂರು ಕೊಟ್ಟಿರಲಿಲ್ಲ. ಪೊಲೀಸರೇ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಅವರನ್ನು ಬಂಧಿಸಿದ್ದರು. ಇಲ್ಲಿ ಅವರು ಹೇಳಿದ ವಿಚಾರ ಯಾವುದು ಎನ್ನುವುದಕ್ಕಿಂತ ಅವರು ಮುಸ್ಲಿಂ ಸಮುದಾಯದವರು ಎನ್ನುವುದೂ ಕಾರಣವಾಗಿರಬಹುದು. ಫೇಸ್ ಬುಕ್ ನಲ್ಲಿ ಬರೆದ ಅಭಿಪ್ರಾಯವನ್ನೇ ಆಧಾರವಾಗಿಟ್ಟುಕೊಂಡು ಅವರನ್ನು ಬಂಧಿಸುವ ಧೈರ್ಯ ಪೊಲೀಸರಿಗೆ ಬಂದಿದ್ದು ಹೇಗೆ? ಯಾರು ಇಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದರು ಎನ್ನುವ ಬಗ್ಗೆ ಎಲ್ಲರೂ ಆಲೋಚಿಸಬೇಕಿದೆ. ಅಶ್ರಫ್ ಯಾರ ಬಗ್ಗೆಯೂ ನಿಂದನಾತ್ಮಕ ಹೇಳಿಕೆಯನ್ನೇನೂ ನೀಡಿರಲಿಲ್ಲ. ಋತುಮತಿಯಾದ ಮಹಿಳೆಯೊಬ್ಬಳು ಶಬರಿಮಲೆ ದೇವಾಲಯ ಪ್ರವೇಶ ಮಾಡಲು ಕೋರ್ಟ್ ಅವಕಾಶ ನೀಡಿದ್ದೇ ಕೇರಳದಲ್ಲಿ ನೆರೆ ಬರಲು ಕಾರಣ ಎಂಬ ಫೇಸ್ ಬುಕ್ ಬರಹಕ್ಕೆ ಆಶ್ರಫ್, ‘ಹಾಗಾದರೆ ಪರಶುರಾಮನ ಸೃಷ್ಟಿಯಾದ ತುಳು ನಾಡಿನಲ್ಲಿ ನೆರೆ ಬರಲು ಕಾರಣವೇನು?’ ಎಂದು ಪ್ರಶ್ನಿಸಿದ್ದರು ಅಷ್ಟೇ. ಅಷ್ಟಕ್ಕೇ ಅವರನ್ನು ಜೈಲಿಗೆ ಕಳಿಸಬಹುದಾದರೆ ಬಾಯಿ ಚಪಲ ತೀರಿಸಿಕೊಳ್ಳುವ ಸಾಕಷ್ಟು ಸಂಖ್ಯೆಯ ಜನ ನಮ್ಮಲ್ಲಿ ಇದ್ದಾರೆ. ಅವರನ್ನೆಲ್ಲಾ ಜೈಲಿಗೆ ಕಳಿಸಲು ನಮ್ಮ ದೇಶದ ಜೈಲುಗಳೂ ಸಾಕಾಗಲಿಕ್ಕಿಲ್ಲ.

ಇತ್ತೀಚೆಗೆ ತಮಿಳುನಾಡಿನಲ್ಲಿಯೂ ಇಂತಹದೇ ಘಟನೆ ನಡೆಯಿತು. ಲೂಯಿಸ್ ಸೋಫಿಯಾ ಎಂಬಾಕೆ ವಿಮಾನದಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷೆ ತಮಿಳುಸಾಯಿ ಸೌದರರಾಜನ್ ಅವರನ್ನು ಕಂಡು ‘ಫ್ಯಾಸಿಸ್ಟ್ ಬಿಜೆಪಿಗೆ ಧಿಕ್ಕಾರ’ ಎಂದು ಕೂಗಿದರು. ಅವರನ್ನೂ ಬಂಧಿಸಲಾಗಿತ್ತು. ಇಲ್ಲಿ ಒಂದು ವ್ಯತ್ಯಾಸ ಎಂದರೆ ಸೋಫಿಯಾ ವಿರುದ್ಧ ತಮಿಳುಸಾಯಿ ಅವರು ಪೊಲೀಸರಿಗೆ ದೂರು ನೀಡಿದ್ದರು. ಒಂದು ಪಕ್ಷದ ವಿರುದ್ಧ ಘೋಷಣೆ ಕೂಗಿದರೆ ಅವರನ್ನು ಬಂಧಿಸಲಾಗುತ್ತದೆ ಎಂದರೆ ಇದು ನಿಜಕ್ಕೂ ಆತಂಕಕಾರಿ ವಿಷಯ.

ನಮ್ಮ ನಾಲಗೆಗೆ ಆಚಾರವೂ ಇಲ್ಲ. ನೀಚ ಬುದ್ಧಿಯನ್ನೂ ಬಿಟ್ಟಿಲ್ಲ. ಚುನಾವಣೆ ಬಂತು ಎಂದರೆ ನಮ್ಮ ನಾಲಗೆ ಏನನ್ನು ಬೇಕಾದರೂ ಆಡುತ್ತದೆ. ಸಿದ್ದರಾಮಯ್ಯ ಅವರು ನರೇಂದ್ರ ಮೋದಿ ಅವರನ್ನು ‘ನರಹಂತಕ’ ಎಂದು ಟೀಕಿಸುತ್ತಾರೆ. ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರರಾವ್ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ‘ಬಫೂನ್’ ಎನ್ನುತ್ತಾರೆ. ಕೇಂದ್ರದ ಹಲವಾರು ಸಚಿವರು ಬೇಕಾಬಿಟ್ಟಿ ಮಾತನಾಡುತ್ತಾರೆ. ಸಿಧು ಪಾಕಿಸ್ತಾನಕ್ಕೆ ಹೋಗಿ ಬಂದ ನಂತರ ಅವರ ತಲೆ ಕಡಿಯುವುದಾಗಿ ಕೆಲವರು ಹೇಳಿಕೆ ನೀಡುತ್ತಾರೆ. ನಮ್ಮ ಅನಂತಕುಮಾರ ಹೆಗಡೆ, ಬಸನಗೌಡ ಪಾಟೀಲ ಯತ್ನಾಳ ಅವರಂತೂ ಬಾಯಿಗೆ ಬಂದಿದ್ದೆಲ್ಲಾ ಮಾತನಾಡುತ್ತಾರೆ.

ಸಂವಿಧಾನಬದ್ಧವಾಗಿ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ಬಸನಗೌಡ ಪಾಟೀಲ ಅವರು ‘ಗಡ್ಡ ಬಿಟ್ಟವರು, ಟೋಪಿ ಹಾಕಿದವರು, ಬುರ್ಖಾ ಧರಿಸಿದವರು ನನ್ನ ಕಚೇರಿ ಮುಂದೆ ಸುಳಿಯಲೇ ಬಾರದು. ನನಗೆ ಮುಸ್ಲಿಮರು ಮತ ಹಾಕಿಲ್ಲ’ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡುತ್ತಾರೆ. ‘ಬುದ್ಧಿಜೀವಿಗಳಿಂದಲೇ ದೇಶಕ್ಕೆ ಅಪಾಯ. ನಾನು ಗೃಹ ಮಂತ್ರಿಯಾದರೆ ಬುದ್ಧಿಜೀವಿಗಳ ಮೇಲೆ ಗುಂಡು ಹಾರಿಸಲು ಆದೇಶ ನೀಡುತ್ತಿದ್ದೆ’ ಎಂದೂ ಅವರು ಹೇಳುತ್ತಾರೆ. ಈಗ ಗೊತ್ತಾಯಿತಲ್ಲ. ಮೂಢನಂಬಿಕೆ ವಿರುದ್ಧ ಮಾತನಾಡಿದ ಮುಸ್ಲಿಂ ಯುವಕನನ್ನು ಸ್ವಯಂ ಪ್ರೇರಣೆಯಿಂದ ಬಂಧಿಸಲು ಪೊಲೀಸರಿಗೆ ಎಲ್ಲಿಂದ ಶಕ್ತಿ ಬಂತು ಅಂತ.

ಇನ್ನೇನು ಲೋಕಸಭೆ ಚುನಾವಣೆ ಹತ್ತಿರಕ್ಕೆ ಬರುತ್ತಿದೆ. ರಾಮ ರಾಮ ಇನ್ನೂ ಏನೇನು ಕೇಳಬೇಕೋ?

ಬರಹ ಇಷ್ಟವಾಯಿತೆ?

 • 53

  Happy
 • 2

  Amused
 • 2

  Sad
 • 0

  Frustrated
 • 8

  Angry

Comments:

0 comments

Write the first review for this !