ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾತ್ರಿ ಸರ್ಕಾರ ಹಗಲೂ ಚಾಲ್ತಿಗೆ ಬರಲಿ ‘ಸ್ವಾಮಿ’

Last Updated 8 ಸೆಪ್ಟೆಂಬರ್ 2018, 19:18 IST
ಅಕ್ಷರ ಗಾತ್ರ

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಧಿಕಾರಕ್ಕೆ ಬಂದು ನೂರು ದಿನಗಳಾಗುತ್ತಿವೆ. ಹೊಸ ಸರ್ಕಾರದ ಸಾಧನೆಯನ್ನು ಅಳೆಯಲು ಇದು ತಕ್ಕ ಸಮಯ ಅಲ್ಲ. ಇನ್ನೂ ಮಧುಚಂದ್ರದ ಕಾಲದಲ್ಲಿಯೇ ಸರ್ಕಾರ ಇದೆ. ಆದರೂ ಮಧುಚಂದ್ರವೂ ಚೆನ್ನಾಗಿಲ್ಲ ಎಂಬ ಭಾವನೆ ಬಂದುಬಿಟ್ಟರೆ ಸಂಸಾರ ಚೆನ್ನಾಗಿರಲ್ಲ.

ನೂರು ದಿನಗಳ ಸಮಯದಲ್ಲಿ ಮುಖ್ಯಮಂತ್ರಿ ಅವರು ಜನಮಾನಸದಲ್ಲಿ ಎಷ್ಟು ನಿಂತಿದ್ದಾರೆ ಎನ್ನುವುದನ್ನು ಪರೀಕ್ಷಿಸಲು ಮೈಸೂರು ಜಿಲ್ಲೆಯ ಒಬ್ಬ ಗ್ರಾಮಸ್ಥರನ್ನು ಪ್ರಶ್ನಿಸಿದೆ. ‘ಕುಮಾರಣ್ಣನ ಸರ್ಕಾರ ಹೆಂಗೈತೆ’ ಎಂದು. ಅದಕ್ಕೆ ಅವರು ‘ಇದು ರಾತ್ರಿ ಸರ್ಕಾರ ಸ್ವಾಮಿ. ರಾತ್ರಿ ವೇಳೆಯೇ ಹೆಚ್ಚು ಸಕ್ರಿಯವಾಗಿರುತ್ತದೆ. ಹಗಲು ಸರ್ಕಾರನೇ ಇಲ್ಲ’ ಎಂದು ಉತ್ತರಿಸಿದರು. ‘ಯಾಕಣ್ಣ ಹಾಂಗಂತೀಯಾ? ರೈತರ ಸಾಲ ಮನ್ನಾ ಮಾಡವ್ರೆ. ರೈತರ ಹೊಲಕ್ಕೆ ಇಳಿದು ನಾಟಿ ಮಾಡವ್ರೆ. ಇನ್ನೇನು ಮಾಡಬೇಕು’ ಎಂದು ಕೇಳಿದೆ. ಅದಕ್ಕೆ ಅವರು ‘ನೀವೂ ಬೋ ಬುದ್ಧಿವಂತ್ರು ಸ್ವಾಮಿ. ಕುಮಾರಣ್ಣ ನಾಟಿ ಮಾಡಿದ್ದು ಅವನ ಮಗನ ಪಿಕ್ಚರ್‍ರಿಗೆ. ಅಷ್ಟೂ ಗೊತ್ತಾಗಲ್ವ ನಿಮ್ಗೆ’ ಎಂದು ಬೈದೇ ಬಿಟ್ಟರು.

ಕುಮಾರಸ್ವಾಮಿ ರೈತರ ಬಗ್ಗೆ ನಿಜವಾದ ಪ್ರೀತಿಯಿಂದಲೇ ನಾಟಿ ಮಾಡಿರಬಹುದು. ಆದರೆ ಗ್ರಾಮೀಣ ಭಾಗದ ಜನರಲ್ಲಿ ಇದೊಂದು ಸಿನಿಮಾ ಶೂಟಿಂಗ್ ಎಂಬ ಭಾವನೆ ಬಂದು ಬಿಟ್ಟರೆ ಅದು ನಾಯಕನೊಬ್ಬನ ಸೋಲು. ಹೌದು, ಗ್ರಾಮಸ್ಥ ಹೇಳಿದ ಮಾತಿನಲ್ಲಿ ಅರ್ಥ ಇದೆ. ರೈತರಿಗೆ ಧೈರ್ಯ ತುಂಬಲು ಮುಖ್ಯಮಂತ್ರಿಯೊಬ್ಬ ಗದ್ದೆಗೆ ಇಳಿದು ನಾಟಿ ಮಾಡಬೇಕಿಲ್ಲ. ನಮ್ಮ ರೈತರಿಗೆ ನಾಟಿ ಮಾಡುವುದು ಹೇಗೆ ಎನ್ನುವುದು ಗೊತ್ತಿದೆ. ಬೆಳೆ ಬೆಳೆಯುವುದು ಹೇಗೆ ಎನ್ನುವುದೂ ಅವರ ಅರಿವಿನಲ್ಲಿ ಇದೆ. ಅವರು ಬೆಳೆದ ಬೆಳೆಗಳಿಗೆ ಸರಿಯಾದ ಮಾರುಕಟ್ಟೆ ಇಲ್ಲ. ಸೂಕ್ತ ಬೆಲೆ ಸಿಗುತ್ತಿಲ್ಲ. ಅದನ್ನು ಒದಗಿಸುವುದು ಮುಖ್ಯಮಂತ್ರಿಯಾದವನ ಕರ್ತವ್ಯವೇ ಹೊರತು ನಾಟಿ ಮಾಡುವುದಲ್ಲ. ಮುಖ್ಯಮಂತ್ರಿ ಬಂದು ನಮ್ಮ ಹೊಲದಲ್ಲಿ ನಾಟಿ ಮಾಡಲಿ ಎಂದು ಈ ರಾಜ್ಯದ ಮತದಾರರು ಯಾರನ್ನೂ ಆಯ್ಕೆ ಮಾಡಿಲ್ಲ. ವಿಧಾನಸೌಧದಲ್ಲಿ ಕುಳಿತು ರೈತರಿಗೆ, ಜನ ಸಾಮಾನ್ಯರಿಗೆ ಅನುಕೂಲವಾಗುವಂತಹ ನೀತಿ ರೂಪಿಸಲಿ, ಸೂಕ್ತವಾದ ಕಾನೂನು ಜಾರಿಗೆ ಬರಲಿ ಎಂದು ಜನರು ರಾಜಕಾರಣಿಗಳನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ.

ಮಂಡ್ಯ ಜಿಲ್ಲೆಯ ಹೊಲದಲ್ಲಿ ನಾಟಿ ಮಾಡಿದ ನಂತರ ಜನರಿಂದ ವಿಪರೀತ ಬೆಂಬಲ ವ್ಯಕ್ತವಾಗಿದೆ. ಎಲ್ಲ ಜಿಲ್ಲೆಗಳಲ್ಲಿಯೂ ಹೀಗೆಯೇ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಇದೊಂದು ಚಟವೇ ಆಗಿರುವಂತೆ ಕಾಣುತ್ತದೆ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಕುಮಾರಸ್ವಾಮಿ ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ಏನನ್ನೂ ನೀಡಿಲ್ಲ ಎಂದು ಉತ್ತರ ಕರ್ನಾಟಕ ಬಂದ್ ಆಚರಿಸುವ ಸಂದರ್ಭದಲ್ಲಿಯೂ ಮುಖ್ಯಮಂತ್ರಿ ‘ಯಾರೂ ಹೆದರಬೇಕಿಲ್ಲ. ಉತ್ತರ ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿಯೂ ತಿಂಗಳಲ್ಲಿ ಒಂದು ಬಾರಿ ವಾಸ್ತವ್ಯ ಮಾಡುತ್ತೇನೆ’ ಎಂದಿದ್ದರು. ಇವೆಲ್ಲ ಹೋರಾಟಗಾರರ ಆಕ್ರೋಶವನ್ನು ತಣ್ಣಗೆ ಮಾಡಲು ಹೇಳುವ ಮಾತುಗಳೇ ವಿನಾ ಪ್ರತಿ ತಿಂಗಳೂ ಉತ್ತರ ಕರ್ನಾಟಕದ ಜಿಲ್ಲೆಯಲ್ಲಿ ವಾಸ್ತವ್ಯ ಮಾಡುವುದು ಅನುಷ್ಠಾನ ಯೋಗ್ಯವಲ್ಲ. ವಿಧಾನಸೌಧದಲ್ಲಿಯೇ ಕುಳಿತು ಉತ್ತರ ಕರ್ನಾಟಕದ ಜನರಿಗೆ ನ್ಯಾಯ ಒದಗಿಸಬಹುದು. ಒದಗಿಸಬೇಕು. ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತವರಿಗೆ ಇದು ಗೊತ್ತಿರಬೇಕು. ಗೊತ್ತಿದೆ ಎಂದು ಜನ ಅಂದುಕೊಂಡಿದ್ದಾರೆ.

ಕುಮಾರಸ್ವಾಮಿ 2006ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಅವರ ಮೊದಲ ನೂರು ದಿನಗಳು ಅತ್ಯಂತ ಚಟುವಟಿಕೆಯಿಂದ ಕೂಡಿದ್ದವು. ಜನರಲ್ಲಿ ಭರವಸೆಯನ್ನು ಮೂಡಿಸಿದ್ದವು. ಆ ತರಹದ ಕ್ರಿಯಾಶೀಲತೆ ಈಗಿನ ನೂರು ದಿನದಲ್ಲಿ ಕಾಣುತ್ತಿಲ್ಲ. ರೈತರ ಸಾಲ ಮನ್ನಾ ಕುರಿತಂತೆ ಅಷ್ಟಿಷ್ಟು ಕೆಲಸವಾಗಿದ್ದು ಬಿಟ್ಟರೆ ಉಳಿದ ಯಾವ ಕ್ಷೇತ್ರದಲ್ಲಿಯೂ ಚಲನೆಯೇ ಕಾಣುತ್ತಿಲ್ಲ. ದೇವಾಲಯಗಳು ಮತ್ತು ಮಠಗಳ ಭೇಟಿಯೊಂದನ್ನು ಬಿಟ್ಟರೆ ಬೇರೆ ಸಾಧನೆ ಕಣ್ಣಿಗೆ ಕಾಣುತ್ತಿಲ್ಲ. ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ 90 ದಿನಗಳಲ್ಲಿ 45 ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. 80 ದಿನಗಳಲ್ಲಿಯೇ ಅವರ ದೇವಾಲಯಗಳ ಭೇಟಿ ಸಂಖ್ಯೆ 40ನ್ನು ಮೀರಿತ್ತು. ನಿಯೋಜಿತ ಮುಖ್ಯಮಂತ್ರಿಯಾಗಿದ್ದಾಗಲೇ ಅವರು 7 ದಿನಗಳಲ್ಲಿ 9 ದೇವಾಲಯಗಳಿಗೆ ಭೇಟಿ ನೀಡಿದ್ದರು. ದೇವೇಗೌಡರ ಕುಟುಂಬದ ದೈವ ಭಕ್ತಿ ಅಪಾರವಾದದ್ದು. ಇದು ಎಲ್ಲರಿಗೂ ಗೊತ್ತಿರುವ ವಿಷಯ.

2018ರ ಜನವರಿಯಲ್ಲಿಯೇ ದೇವೇಗೌಡರ ಕುಟುಂಬ ಶೃಂಗೇರಿಯಲ್ಲಿ 11 ದಿನಗಳ ಅತಿರುದ್ರ ಯಾಗ ಕೈಗೊಂಡಿತ್ತು. ಚುನಾವಣೆಗೆ ಮೊದಲು, ನಂತರ ನವ ಚಂಡಿಕಾ ಯಾಗ, ಸುದರ್ಶನ ಹೋಮ ಮುಂತಾದ ಯಾಗ ಯಜ್ಞಗಳನ್ನೂ ನೆರವೇರಿಸಿತ್ತು. ಇವೆಲ್ಲವೂ ವೈಯಕ್ತಿಕ ನೆಲೆಯಲ್ಲಿ ನಡೆದರೆ ಅದನ್ನು ಯಾರೂ ವಿರೋಧಿಸುವುದಿಲ್ಲ. ವಿರೋಧಿಸಲೂ ಬಾರದು. ಆದರೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಕುಮಾರಸ್ವಾಮಿ ಅವರು ‘ದೇವರ ದಯದಿಂದಲೇ ನಾನು ಮುಖ್ಯಮಂತ್ರಿಯಾಗಿದ್ದೇನೆ. 2006ರಲ್ಲಿಯೂ ಶಬರಿಮಲೆಗೆ ಭೇಟಿ ನೀಡಿ ಬಂದ ಮೇಲೆಯೇ ನಾನು ಮುಖ್ಯಮಂತ್ರಿಯಾದೆ. ಈಗಲೂ ಆ ದೇವರ ಕೃಪೆಯಿಂದ ಮುಖ್ಯಮಂತ್ರಿಯಾಗಿದ್ದೇನೆ’ ಎಂದು ಹೇಳಿಕೆ ನೀಡಿದ್ದಾರೆ. ಇದು ಮಾತ್ರ ರಾಜ್ಯದ ಜನರಿಗೆ ಮಾಡುವ ದ್ರೋಹ. ಅಪಮಾನ ಕೂಡ. ಪ್ರಜಾಪ್ರಭುತ್ವದಲ್ಲಿ ದೇವರ ಆಶೀರ್ವಾದಕ್ಕಿಂತ ಜನರ ಆಶೀರ್ವಾದ ಮುಖ್ಯ. ಹಾಗೆಯೇ ಜನ ನಾಯಕನಾದವನು ದೇವರ ಆಶೀರ್ವಾದ ಪಡೆಯಲು ಪ್ರಯತ್ನಿಸುವುದಕ್ಕಿಂತ ಜನರ ಆಶೀರ್ವಾದ ಪಡೆಯಲು ಹೆಚ್ಚು ಶ್ರಮಿಸಬೇಕು. ದೇವರ ಸೇವೆಗಿಂತ ಜನರ ಸೇವೆ ಮುಖ್ಯ. ಇದನ್ನು ಬಹಳಷ್ಟು ಬೇಗ ಅರ್ಥ ಮಾಡಿಕೊಂಡರೆ ಜನರಿಗೂ ಕ್ಷೇಮ. ರಾಜ್ಯಕ್ಕೂ ಕ್ಷೇಮ.

‘ದೇವಸ್ಥಾನಕ್ಕೆ ತೆರಳಿ ನಾಡಿಗೆ ಒಳಿತಾಗಲಿ ಎಂದು ಬೇಡುವುದರಲ್ಲಿ ತಪ್ಪೇನಿದೆ. ನಾನು ದೇವಾಲಯಕ್ಕೆ ಹೋಗುವುದರಿಂದ ಸುಸೂತ್ರ ಆಡಳಿತಕ್ಕೆ ತೊಂದರೆಯಾಗಿಲ್ಲ’ ಎಂದು ಕುಮಾರಸ್ವಾಮಿ ಅವರು ಸಮರ್ಥಿಸಿಕೊಳ್ಳುತ್ತಾರೆ. ಜನರು ಬಯಸಿದ್ದು ಬರೀ ಸುಸೂತ್ರ ಆಡಳಿತ ಮಾತ್ರ ಅಲ್ಲ. ರಾಜ್ಯದಲ್ಲಿ ಸಚಿವ ಸಂಪುಟ ಇದೆ. ಅಧಿಕಾರಿಗಳು ಎಲ್ಲವನ್ನೂ ನೋಡಿಕೊಳ್ಳುತ್ತಿದ್ದಾರೆ. ಸಚಿವರು ಅವರ ಕೆಲಸವನ್ನು ಮಾಡುತ್ತಿದ್ದಾರೆ ಎಂದರೂ ಮುಖ್ಯಮಂತ್ರಿ ಸ್ವತಃ ಪರಿಶೀಲಿಸುತ್ತಾರೆ ಎಂದರೆ ಅದರ ಗಮ್ಮತ್ತೇ ಬೇರೆ.

1983ರಲ್ಲಿ ರಾಜ್ಯದಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರ ಬಂದಾಗಿನಿಂದಲೂ ರಾಜ್ಯದ ಜನರಲ್ಲಿ ಒಂದು ಭಾವನೆ ಇದೆ. ಪ್ರತಿ ಬಾರಿಯೂ ಈ ಪಕ್ಷದ ಸರ್ಕಾರ ಸರಿ ಇಲ್ಲ ಎಂದು ಜನರು ಬೇರೆ ಪಕ್ಷವನ್ನು ಆಯ್ಕೆ ಮಾಡಿದ್ದಾರೆ. ಆದರೆ ಕೆಲವು ದಿನಗಳ ನಂತರ, ‘ಹಿಂದಿನ ಸರ್ಕಾರವೇ ಚೆನ್ನಾಗಿತ್ತು’ ಎಂಬ ಭಾವನೆ ಜನರಲ್ಲಿ ಬೆಳೆದಿದೆ. ಆದರೆ ಹಿಂದೆಲ್ಲ ಹೊಸ ಸರ್ಕಾರ ಬಂದು 2–3 ವರ್ಷಗಳ ನಂತರ ಜನರಲ್ಲಿ ಇಂತಹ ಭಾವನೆ ಬರುತ್ತಿತ್ತು. ಕುಮಾರಸ್ವಾಮಿ ಸರ್ಕಾರಕ್ಕೆ ನೂರು ದಿನ ಆಗುವುದರೊಳಗೇ ಹಿಂದಿನ ಸರ್ಕಾರವೇ ಚೆನ್ನಾಗಿತ್ತು ಎಂಬ ಭಾವನೆ ಜನರಿಗೆ ಬಂದು ಬಿಟ್ಟರೆ ಅದು ಹೊಸ ಸರ್ಕಾರಕ್ಕೆ ಶುಭ ಸೂಚನೆ ಅಲ್ಲ. ಕುವೆಂಪು ಅವರು ಹೇಳಿದಂತೆ ಮಂದಿರ, ಮಸೀದಿ ಚರ್ಚ್ ಗಳನ್ನು ಬಿಟ್ಟು ಹೊರಬರಬೇಕಿದೆ. ಆಡಳಿತವು ಜನರ ಮನೆಯ ಬಾಗಿಲಿಗೆ ಹೋಗಬೇಕಿದೆ. ಈ ಸರ್ಕಾರ ರಾತ್ರಿ ವೇಳೆಯಲ್ಲಿ ಸಕ್ರಿಯವಾಗಿರುತ್ತದೆ ಎಂಬ ಭಾವನೆಯನ್ನು ತೊಲಗಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT