ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಸಂಧಾನ | ಮೋದಿ ಕಣ್ಣು ಚುನಾವಣೆ ಮ್ಯಾಲೆ!

ದೊಡ್ಡ ಗೆರೆ ಎಳೆದು ಸಮಸ್ಯೆ ಚಿಕ್ಕದು ಮಾಡುವ ಮಾಯ್ಕಾರ
Published 29 ಸೆಪ್ಟೆಂಬರ್ 2023, 0:30 IST
Last Updated 29 ಸೆಪ್ಟೆಂಬರ್ 2023, 0:30 IST
ಅಕ್ಷರ ಗಾತ್ರ

ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಅವತಾರಪುರುಷ ಎಂದು ನಂಬುವ ಬಹಳಷ್ಟು ಜನ ನಮ್ಮ ದೇಶದಲ್ಲಿದ್ದಾರೆ. ವಿಷಯ ಅದಲ್ಲ. ಮೋದಿ ಅವರ ಇತ್ತೀಚಿನ ನಡೆಯನ್ನು ಗಮನಿಸಿದರೆ, ಅವರ ಕಟು ಟೀಕಾಕಾರರು ಕೂಡ ಈ ಮಾತನ್ನು ಒಪ್ಪುವ ಹಂತಕ್ಕೆ ಬಂದಿದ್ದಾರೆ. ಭಾರತದಲ್ಲಿ ಮೋದಿ ಎಷ್ಟೊಂದು ಪ್ರಭಾವಶಾಲಿ ಎಂದರೆ, ಅವರು ನಮ್ಮ ಕನಸುಗಳನ್ನು ಮರೆಸಬಲ್ಲರು. ನಮ್ಮ ಹೊಟ್ಟೆಪಾಡಿನ ಆದ್ಯತೆಯನ್ನೂ ಬದಿಗೆ ಸರಿಸಬಲ್ಲರು. ನಮ್ಮ ಉದ್ಯೋಗದ ಆಕಾಂಕ್ಷೆಯನ್ನೂ ಮಸುಕಾಗಿಸಬಲ್ಲರು. ದೇಶದ ಮುಂದೆ ಯಾವುದೇ ಸಮಸ್ಯೆ ಎಷ್ಟೇ ಪ್ರಬಲವಾಗಿದ್ದರೂ ಒಂದೆರಡು ದಿನಗಳಲ್ಲಿಯೇ ಅದನ್ನು ಕಿತ್ತೊಗೆಯಬಲ್ಲರು. ಅವರ ಮುಂದೆ ಯಾವುದೇ ಸವಾಲುಗಳನ್ನು ಇಟ್ಟರೂ ಅವುಗಳನ್ನು ಕ್ಷಣಮಾತ್ರದಲ್ಲಿ ಮರೆಮಾಚಬಲ್ಲರು. ಮಾತಿನ ಮೋಡಿಯಲ್ಲಿ ನಮ್ಮನ್ನು ನಾವು ಮರೆಯುವಂತೆ ಮಾಡಬಲ್ಲರು. ಸಣ್ಣ ಗೆರೆಯ ಪಕ್ಕ ದೊಡ್ಡ ಗೆರೆಯನ್ನು ಎಳೆಯಬಲ್ಲ ಮಾಯ್ಕಾರ ಅವರು.

ಮೋದಿ ಬಗ್ಗೆ ಮೇಲೆ ಹೇಳಿದ ಯಾವ ಮಾತುಗಳೂ ಅತಿಶಯೋಕ್ತಿಯಲ್ಲ. ‘ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಎಲ್ಲಿ ಸ್ವಾಮಿ?’ ಎಂದು ಕೇಳಿದರೆ, ‘ಅಯೋಧ್ಯೆಯಲ್ಲಿ 2024ರ ಜನವರಿಯಲ್ಲಿ ರಾಮಮಂದಿರ ಉದ್ಘಾಟನೆ’ ಎಂದರು. ‘ಬೆಲೆ ಏರಿಕೆಯನ್ನು ಯಾವಾಗ ತಡೀತೀರಿ’ ಎಂದರೆ, ‘ಭಾರತವನ್ನು ಹಿಂದೂರಾಷ್ಟ್ರ ಮಾಡ್ತೀನಿ’ ಎಂದರು. ಈಗ ಎರಡು– ಮೂರು ತಿಂಗಳ ಹಿಂದೆ ಮಣಿಪುರದ ಗಲಾಟೆ ಎಷ್ಟು ದೊಡ್ಡ ಸಮಸ್ಯೆಯಾಗಿತ್ತು. ನಮ್ಮ ದೇಶದ ಮತ್ತು ವಿದೇಶದ ಮಾಧ್ಯಮಗಳಲ್ಲಿ ಅದರದ್ದೇ ಸುದ್ದಿಗಳು ತುಂಬಿ ತುಳುಕುತ್ತಿದ್ದವು. ಈಗ ನೋಡಿ ಯಾರೂ ಮಣಿಪುರದ ಸುದ್ದಿಯನ್ನೇ ಮಾತನಾಡುತ್ತಿಲ್ಲ. ಹಾಗಂತ ಮಣಿಪುರದಲ್ಲಿ ಶಾಂತಿ ನೆಲೆಯಾಗಿದೆಯೇ? ಜನಾಂಗೀಯ ದ್ವೇಷ ಕಡಿಮೆಯಾಗಿದೆಯೇ? ಮಣಿಪುರದ ಜನತೆ ನೆಮ್ಮದಿಯಿಂದ ಇದ್ದಾರೆಯೇ ಎಂದು ಕೇಳಿದರೆ ಉತ್ತರ ನಕಾರಾತ್ಮಕವಾಗಿಯೇ ಇದೆ. ಅಲ್ಲಿ ಇನ್ನೂ ಹಿಂಸೆ
ತಾಂಡವವಾಡುತ್ತಿದೆ.

ಮಣಿಪುರದ ಗಲಭೆ ಬಗ್ಗೆ ಪ್ರಧಾನಮಂತ್ರಿಯವರು ಸಂಸತ್ತಿನಲ್ಲಿ ಹೇಳಿಕೆ ನೀಡಬೇಕು ಎಂಬ ಒಂದೇ ಕಾರಣಕ್ಕೆ ಮೋದಿ ಅವರ ವಿರುದ್ಧ ಅವಿಶ್ವಾಸ ನಿರ್ಣಯವನ್ನೂ ಮಂಡಿಸಲಾಯಿತು. ಆದರೂ ಮೋದಿ ಆ ಬಗ್ಗೆ ಹೆಚ್ಚೇನೂ ಮಾತನಾಡಲಿಲ್ಲ. ಮಣಿಪುರಕ್ಕೆ ಭೇಟಿಯನ್ನೂ ನೀಡಲಿಲ್ಲ. ಹಾಗಂತ ಅವರು ಸುಮ್ಮನಿದ್ದಾರೆ ಎಂದಲ್ಲ. ಬುಟ್ಟಿಯಿಂದ ‘ಒಂದು ದೇಶ ಒಂದು ಚುನಾವಣೆ’ ಐಡಿಯಾ ಹೊರಬಿಟ್ಟರು. ಈ ಬಗ್ಗೆ ಅಧ್ಯಯನ ನಡೆಸಲು ಹಿಂದಿನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ನೇತೃತ್ವದಲ್ಲಿ ಸಮಿತಿ ರಚಿಸುವುದಾಗಿ ಪ್ರಕಟಿಸಿದರು. ಅಲ್ಲಿಗೆ ಮಣಿಪುರದ ವಿಷಯ ಮರೆಯಾಯ್ತು. ಏಕಕಾಲಕ್ಕೆ ಚುನಾವಣೆ ಎಂಬುದು ಬುಸುಗುಡತೊಡಗಿತು.

ಅಷ್ಟರಲ್ಲಿಯೇ ವಿರೋಧ ಪಕ್ಷಗಳು ಒಂದಾಗಿ ‘ಇಂಡಿಯಾ’ ಒಕ್ಕೂಟ ರಚಿಸಿಕೊಂಡವು. ದೇಶದಲ್ಲಿ ಒಂದು ಸಣ್ಣ ಸಂಚಲನ ಉಂಟಾಯಿತು. ಮೋದಿಯವರು ವಿಚಲಿತರಾಗಲಿಲ್ಲ. ಒಂದು ಸಣ್ಣ ಡೋಸ್ ಕೊಟ್ಟರು. ಅವರು ಹೆಚ್ಚೇನೂ ಮಾಡಿರಲಿಲ್ಲ. ರಾಷ್ಟ್ರಪತಿ ಔತಣಕೂಟದ ಆಹ್ವಾನ ಪತ್ರಿಕೆಯಲ್ಲಿ ಪ್ರೆಸಿಡೆಂಟ್ ಆಫ್ ಇಂಡಿಯಾ ಬದಲು ಪ್ರೆಸಿಡೆಂಟ್ ಆಫ್ ಭಾರತ ಎಂದು ಅಚ್ಚು ಹಾಕಿಸಿದ್ದರು ಅಷ್ಟೆ. ಮುಂದಿನದೆಲ್ಲಾ ಅವರ ನಿರೀಕ್ಷೆಯಂತೆಯೇ ನಡೆಯಿತು. ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ನೀಡುವ ಬಗ್ಗೆ ಮತ್ತು 370ನೇ ವಿಧಿ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಆರಂಭವಾಯಿತು. ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿದ ನಂತರವೂ ಅಲ್ಲಿನ ಪರಿಸ್ಥಿತಿ ಹೇಳಿಕೊಳ್ಳುವಷ್ಟು ಏನೂ ಬದಲಾಗಲಿಲ್ಲ. ಮೋದಿ ಏನೂ ವಿಚಲಿತರಾಗಲಿಲ್ಲ. ಅವರ ಬುಟ್ಟಿಯಿಂದ ಇನ್ನೊಂದು ಹಾವು ಹೊರಬಂತು. ಜನರೆಲ್ಲಾ ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಚರ್ಚೆ ಮಾಡಲು ಆರಂಭಿಸಿದರು. ಈಗ ಏನಿದ್ದರೂ ಮೋದಿಯವರದ್ದು ಕ್ರಿಯೆ, ವಿರೋಧ ಪಕ್ಷಗಳದ್ದು ಬರೀ ಪ್ರತಿಕ್ರಿಯೆ ಅಷ್ಟೆ.

‘ನಮ್ಮದೇನೂ ರಾಮರಾಜ್ಯವಲ್ಲ. ರಾಮರಾಜ್ಯ ಮಾಡಬೇಕು ಎನ್ನುವುದು ನಮ್ಮ ಕನಸು ಅಷ್ಟೆ. ಅದಕ್ಕಾಗಿಯೇ ಒಂದಲ್ಲ ಒಂದು ಸಮಸ್ಯೆ ಸೃಷ್ಟಿಯಾಗುತ್ತಲೇ ಇರುತ್ತದೆ. ನಮ್ಮ ದೇಶದ ಕೆಲವು ಪ್ರದೇಶಗಳನ್ನು ಚೀನಾ ಆಕ್ರಮಿಸಿಕೊಂಡಿದೆ. ಈ ಬಗ್ಗೆ ಪ್ರಧಾನಿ ಮೋದಿ ಏನನ್ನೂ ಮಾಡುತ್ತಿಲ್ಲ, ಏನೂ ಹೇಳುತ್ತಿಲ್ಲ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹರಿಹಾಯಲು ಆರಂಭಿಸಿದರು. ಇತರ ಕೆಲವು ಮುಖಂಡರೂ ಅವರಿಗೆ ಸಾಥ್ ನೀಡಲು ಆರಂಭಿಸಿದರು.

ಅವತಾರ ಪುರುಷನಿಗೆ ಇವೆಲ್ಲಾ ಒಂದು ಸಮಸ್ಯೆಯೇ? ಸಂಸತ್ತಿನ ವಿಶೇಷ ಅಧಿವೇಶನ ಕರೆಯುವ ಪ್ರಕಟಣೆ
ಇದ್ದಕ್ಕಿದ್ದಂತೆಯೇ ಹೊರಬಿತ್ತು. ಏತಕ್ಕಾಗಿ ವಿಶೇಷ ಅಧಿವೇಶನ ಎಂಬುದು ಮೊದಲು ಸ್ಪಷ್ಟ ಇರಲಿಲ್ಲ. ನಂತರ ಗೊತ್ತಾಯಿತು, ಮಹಿಳಾ ಮೀಸಲಾತಿ ಮಸೂದೆಗೆ ಅನುಮೋದನೆ ಪಡೆಯುವುದಕ್ಕೆ ಈ ಅಧಿವೇಶನ ಎಂದು. ಲೋಕಸಭೆ ಮತ್ತು ವಿಧಾನ ಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಸ್ಥಾನ ಮೀಸಲಿಡುವ ಮಸೂದೆಗೆ ಲೋಕಸಭೆ ಮತ್ತು ರಾಜ್ಯಸಭೆ ಅನುಮೋದನೆ ನೀಡಿದವು. ದೇಶದೆಲ್ಲೆಡೆ ಈ ಬಗ್ಗೆ ಚರ್ಚೆ ಆರಂಭವಾಯಿತು. ಮಹಿಳಾ ಮೀಸಲಾತಿಯಾಗಲೀ ಒಂದು ದೇಶ ಒಂದು ಚುನಾವಣೆಯಾಗಲೀ 2024ರ ಲೋಕಸಭಾ ಚುನಾವಣೆಗೆ ಅನ್ವಯವಾಗುವುದಿಲ್ಲ ಎನ್ನುವುದು ನಂತರ ಬಹಿರಂಗವಾಯಿತು. ಆದರೂ ಅವು ತಮ್ಮ ಉದ್ದೇಶವನ್ನು ಸಾಧಿಸಿಕೊಂಡವು.

ಹೊಸದಾಗಿ ನಿರ್ಮಿಸಲಾದ ಸಂಸತ್ ಭವನದಲ್ಲಿ ಕಾರ್ಯಕಲಾಪ ನಡೆಸುವ ಬಗ್ಗೆ ದೆಹಲಿಯಲ್ಲಿ ಸಂಭ್ರಮ ಮೂಡಿರುವಾಗಲೇ ಕೆನಡಾದಲ್ಲಿ ಖಾಲಿಸ್ತಾನ್‌ ಟೈಗರ್ ಫೋರ್ಸ್ (ಕೆಟಿಎಫ್) ಮುಖ್ಯಸ್ಥ ಹರದೀಪ್‌ ಸಿಂಗ್ ನಿಜ್ಜರ್ ಹತ್ಯೆಯಾಯಿತು. ಈ ಹತ್ಯೆಯನ್ನು ಭಾರತ ಸರ್ಕಾರದ ಏಜೆಂಟರೇ ಮಾಡಿದ್ದಾರೆ ಎಂಬರ್ಥದಲ್ಲಿ ಕೆನಡಾ ಪ್ರಧಾನಿ ಆರೋಪಿಸಿದರು. ಜೊತೆಗೆ ಭಾರತೀಯ ರಾಯಭಾರಿಗಳನ್ನು ಉಚ್ಚಾಟಿಸಿಯೂ ಆಗಿತ್ತು. ಜಿ–20 ಮುಖಂಡರ ಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಭೇಟಿಯಾಗಿ ಮಾತುಕತೆ ನಡೆಸಿದ ಕೆಲವೇ ದಿನಗಳಲ್ಲಿ ಎರಡೂ ದೇಶಗಳ ರಾಜತಾಂತ್ರಿಕ ಸಂಬಂಧ ಹದಗೆಟ್ಟಿತು.

ಈ ಇಕ್ಕಟ್ಟಿನ ಸಂದರ್ಭದಲ್ಲಿಯೇ ಹೊಸ ಸಂಸತ್ ಭವನದಲ್ಲಿ ಸದಸ್ಯರಿಗೆ ನೀಡಿದ ಸಂವಿಧಾನದ ಪ್ರಸ್ತಾವನೆ ಪ್ರತಿಯಲ್ಲಿ, ‘ಜಾತ್ಯತೀತ ಮತ್ತು ಸಮಾಜವಾದ’ ಪದಗಳು ಮಾಯವಾಗಿದ್ದವು. ಈ ಪದಗಳನ್ನು ಹೊಂದಿರದಿದ್ದ ಸಂವಿಧಾನದ ಮೂಲ ಪ್ರತಿಯನ್ನು ಅವರಿಗೆ ನೀಡಲಾಗಿತ್ತು. ಜೊತೆಗೆ ಮಹಿಳಾ ಮೀಸಲಾತಿ ಮಸೂದೆಯೂ ಮಂಡನೆಯಾಯಿತು. ಎಂದಿನಂತೆ ಜನರ ಗಮನವೆಲ್ಲಾ ಆ ಕಡೆಗೆ ಹರಿಯಿತು.

ಇದೆಲ್ಲಾ ಹೋಗಲಿ. 2014 ಮತ್ತು 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯು ದೇಶದಲ್ಲಿ ನಿರುದ್ಯೋಗ ಸಮಸ್ಯೆ ಬಗೆಹರಿಸುವ ಭರವಸೆ ನೀಡಿತ್ತು. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಆಸೆಯನ್ನೂ ತೋರಿಸಿತ್ತು. ಅಲ್ಲದೆ ಬೆಲೆ ಏರಿಕೆ ತಡೆಯುವುದಾಗಿ ಹೇಳಿಕೊಂಡಿತ್ತು. 2024ರ ಚುನಾವಣೆಗೂ ಇದೇ ಭರವಸೆಗಳು ಹೊರಬರಬಹುದು. ಆದರೆ ಹಿಂದಿನ 9 ವರ್ಷಗಳಲ್ಲಿ ಈ ಎರಡೂ ಭರವಸೆಗಳು ಹುಸಿಯಾಗಿವೆ. ಆದರೂ ನಾವೇನ್ ಕಮ್ಮಿ ಇಲ್ಲ. ಜಿ–20 ಸಮ್ಮೇಳನವನ್ನು ಯಶಸ್ವಿಯಾಗಿ ಮಾಡಿ ಇಡೀ ವಿಶ್ವ ನಮ್ಮ ಕಡೆ ನೋಡುವಂತೆ ಮಾಡಿದ್ದೇವೆ. 2024ರ ಜನವರಿಯಲ್ಲಿಯೇ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಯನ್ನೂ ಮಾಡುತ್ತೇವೆ. ನೋಡ್ತಾ ಇರಿ, 2029ರ ವೇಳೆಗೆ ನಾವು ವಿಶ್ವಗುರು ಆಗೇ ಆಗ್ತೀವಿ. ಬೆಲೆ ಏರಿದರೇನು, ರಾಮ ನಗ್ತಾ ನಿಂತಿರುತ್ತಾನಲ್ಲ. ಅವನ ನಗುವಿನಲ್ಲಿ ನಮ್ಮ ಕಣ್ಣೀರು ಕರಗಿ ಹೋಗ್ತದಲ್ಲ.

ಮೋದಿಯವರೇ ನಮ್ಮ ಮುಂದೆ ಬಹಳಷ್ಟು ವಿಷಯಗಳನ್ನು ಇಟ್ಟಿದ್ದಾರೆ. ಅದು ಸಾಲದೆಂಬಂತೆ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಪುತ್ರ ಉದಯನಿಧಿ ಸನಾತನ ಧರ್ಮ ಕುರಿತ ವಿವಾದವನ್ನೂ ನಮ್ಮ ಮುಂದಿಟ್ಟಿದ್ದಾರೆ. ಅದನ್ನೂ ಬಿಜೆಪಿಯವರು ಯಶಸ್ವಿಯಾಗೇ ಬಳಸಿಕೊಳ್ಳುತ್ತಿದ್ದಾರೆ. ಇದೊಂದು ತರಹ ನಗುವವರ ಮುಂದೆ ಎಡವಿಬಿದ್ದ ಹಾಗಿದೆ. ಇದನ್ನೆಲ್ಲಾ ನೋಡಿದರೆ ಮತದಾರರು ಕೂಡ ಎನ್.ಎಸ್.ಲಕ್ಷ್ಮೀ ನಾರಾಯಣ ಭಟ್ಟರ ಕವಿತೆಯಂತೆ ‘ಹಿಂದೆ ಹೇಗೆ ಚಿಮ್ಮುತಿತ್ತು ಕಣ್ಣ ತುಂಬ ಪ್ರೀತಿ! ಈಗ ಯಾಕೆ ಜ್ವಲಿಸುತಿದೆ ಏನೋ ಶಂಕೆ ಭೀತಿ!’ ಎಂದು ಕೇಳಬಹುದೇನೊ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT