ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರವಿಂದ ಚೊಕ್ಕಾಡಿ ಅಂಕಣ| ಶಿಕ್ಷಣ ನೀತಿ: ಬೇಕು ಗುಣಾತ್ಮಕ ಸಿದ್ಧತೆ

ಹೊಸ ಶಿಕ್ಷಣ ನೀತಿಯ ಉದಾತ್ತ ಧ್ಯೇಯದ ಸಾಧನೆಗೆ ಶಿಕ್ಷಣ ವ್ಯವಸ್ಥೆ ಸನ್ನದ್ಧಗೊಳ್ಳಲಿ
Last Updated 27 ನವೆಂಬರ್ 2022, 19:35 IST
ಅಕ್ಷರ ಗಾತ್ರ

2020ರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲಿ ಅನುಷ್ಠಾನಗೊಳಿಸ ಬೇಕಾದಂತಹ ಸಂದರ್ಭದಲ್ಲಿ, ಶಾಲೆಗಳಿಗೆ ಬಣ್ಣ ಹೊಡೆಸುವ ವಿಷಯದ ಕುರಿತಾಗಿ ಚರ್ಚೆಗಳು ನಡೆಯುತ್ತಿವೆ. ಖಂಡಿತವಾಗಿಯೂ ಶಾಲೆಗಳಿಗೆ ಬಣ್ಣ, ಸುರಕ್ಷತೆ, ಶೌಚಾಲಯದಂತಹ ಮೂಲ ಸೌಕರ್ಯಗಳ ಅಗತ್ಯವಿದೆ. ಕೊರತೆ ಇರುವ ಹುದ್ದೆಗಳಿಗೆ ಸಿಬ್ಬಂದಿಯ ನೇಮಕಾತಿಯಂತಹ ಆಡಳಿತಾತ್ಮಕ ಸಿದ್ಧತೆಗಳ ಅಗತ್ಯವೂ ಇದೆ. ಆದರೆ ಗುಣಾತ್ಮಕವಾದ ಅಗತ್ಯಗಳು ಸುಲಭದಲ್ಲಿ ಅರಿವಿಗೆ ಬರುವುದಿಲ್ಲ. ಉದಾಹರಣೆಗೆ, 2020ರ ರಾಷ್ಟ್ರೀಯ ಶಿಕ್ಷಣ ನೀತಿಯ ಧ್ಯೇಯಗಳಲ್ಲಿ ವಾರ್ಷಿಕ ಪರೀಕ್ಷೆಯ ರೂಪದಲ್ಲಿರುವ ಮೌಲ್ಯಮಾಪನದ ಮಹತ್ವ ಕಡಿಮೆಯಾಗಬೇಕು. ಮಗುವಿನ ಅಭಿವ್ಯಕ್ತಿಯ ಸಾಮರ್ಥ್ಯ, ವರ್ತನೆ, ಗ್ರಹಿಸುವ ಶಕ್ತಿ, ಚಿಂತನೆಯ ಮಟ್ಟ ಗಳೆಲ್ಲವನ್ನೂ ಅಳೆಯುವ ರೂಪಣಾತ್ಮಕ ಮೌಲ್ಯಮಾಪನವು ಹೆಚ್ಚಾಗಬೇಕು ಎನ್ನುವುದು ಸೇರಿದೆ. ಸಮರ್ಥ ಪೌರರನ್ನು ರೂಪಿಸಲು ಇದು ಅಗತ್ಯವೂ ಹೌದು. ಇದೆಲ್ಲ ಆಗಬೇಕಾದರೆ ಗುಣಾತ್ಮಕ ಸಿದ್ಧತೆಗಳು ಅಗತ್ಯ.

ಅರವಿಂದ ಚೊಕ್ಕಾಡಿ
ಅರವಿಂದ ಚೊಕ್ಕಾಡಿ

ಸರ್ವ ಸಮಾನತೆ ಭಾವನೆಯ ಶಿಕ್ಷಣವನ್ನು ಪಡೆಯುವ ಉದಾತ್ತ ಧ್ಯೇಯವನ್ನು ಹೊಸ ಶಿಕ್ಷಣ ನೀತಿಯು ಹೇಳುತ್ತದೆ. ಆದರೆ ಆ ರೀತಿಯ ಶಿಕ್ಷಣವನ್ನು ನೀಡಬೇಕಾದರೆ ಆಗಬೇಕಾದ ಪೂರ್ವಸಿದ್ಧತೆಗಳು
ಮೂಲ ಸೌಕರ್ಯ ಅಥವಾ ಆಡಳಿತಾತ್ಮಕವಾಗಿ ಇದ್ದರಷ್ಟೇ ಸಾಲುವುದಿಲ್ಲ. ಶಿಕ್ಷಣದಲ್ಲಿ ಪ್ರಮುಖ ಪಾತ್ರ ವಹಿಸುವ ಪಾಲಕರು, ಶಿಕ್ಷಕರು ಮತ್ತು ಶೈಕ್ಷಣಿಕ ಆಡಳಿತದ ಮನೋಧರ್ಮದಲ್ಲೇ ಉನ್ನತೀಕರಣ ಆಗಬೇಕಾಗುತ್ತದೆ.
ಸಮಾನತೆಯು ಪ್ರತಿಯೊಬ್ಬ ವ್ಯಕ್ತಿಯಲ್ಲೂ ಇರುವ ಸಾಮರ್ಥ್ಯದ ವ್ಯತ್ಯಾಸವನ್ನು ನಿರಾಕರಿಸಲು ಬರುವುದಿಲ್ಲ. ಇದನ್ನು ಶಿಕ್ಷಣ ನೀತಿಯೂ ಗಮನಿಸಿದ್ದು, ಸಾಮರ್ಥ್ಯ ಆಧಾರಿತವಾದ ಕಲಿಕೆ ಮತ್ತು ಮೌಲ್ಯಮಾಪನಕ್ಕೆ ಒತ್ತು ಕೊಟ್ಟಿದೆ. ಈಗಿನ ಪರೀಕ್ಷಾ ಕ್ರಮದ ದೋಷವನ್ನು ಗುರುತಿಸಿದ್ದು, ರೂಪಣಾತ್ಮಕವಾದ ಮೌಲ್ಯಮಾಪನವನ್ನು ಜಾರಿಗೆ ತರಲು ಬಯಸಿದೆ.

ಆದರೆ, ತಾತ್ವಿಕವಾಗಿ ಹೇಗೇ ವಿವರಿಸಿಕೊಂಡರೂ ಸರ್ವ ಶಿಕ್ಷಣ ಅಭಿಯಾನ ಬಂದ ನಂತರ ಪರೀಕ್ಷೆಯು ಅದಕ್ಕಿಂತ ಹಿಂದೆ ಇದ್ದ ಪರಿಸ್ಥಿತಿಗಿಂತ ಬಲಿಷ್ಠವಾಗಿದ್ದು, ಅಂಕ ಗಳಿಕೆಗೆ ಬಹಳ ಮಹತ್ವ ಬಂದಿದೆ. ಸರ್ವ ಶಿಕ್ಷಣ ಅಭಿಯಾನಕ್ಕಿಂತ ಮೊದಲು, ಪರೀಕ್ಷೆಯಲ್ಲಿ ಒಂದೆರಡು ಅಂಕಗಳು ಕಡಿಮೆಯಾದರೂ, ಅದು ಬಹಳ ಅವಮಾನಕಾರಿ ಎಂಬ ಸಾಮಾಜಿಕ ಮನೋಭಾವವಾಗಲಿ, ಜಿಲ್ಲಾವಾರು ಫಲಿತಾಂಶದ ಏರುಪೇರಿಗೆ ಇಡೀ ಜಿಲ್ಲೆಯನ್ನೇ ಮೂದಲಿಸುವ ಪರಿಪಾಟವಾಗಲಿ ಇರಲಿಲ್ಲ. ಪಠ್ಯಪುಸ್ತಕದ ಅಭ್ಯಾಸ ಮಾಡಬೇಕಾಗಿತ್ತು. ತರಗತಿಗೆ ‘ಗೈಡ್’ಗಳನ್ನು ಕೊಂಡೊಯ್ಯಬಾರದೆಂಬ ನಿಯಮವಿತ್ತು. ಪರೀಕ್ಷೆಗಳು ವಿದ್ಯಾರ್ಥಿಗಳ ವಿಕಾಸಕ್ಕೆ ಸೂಕ್ತವಾಗಿಲ್ಲ ಎಂದು ಶಿಕ್ಷಣ ನೀತಿಯಲ್ಲಿ ಗುರುತಿಸಲ್ಪಟ್ಟ ನಂತರ ಶಿಕ್ಷಣ ನೀತಿಗೆ ತದ್ವಿರುದ್ಧ
ವಾಗಿ ಪರೀಕ್ಷೆಗೆ ಅತಿಯಾದ ಮಹತ್ವ ಬಂದಿದೆ. ಪಠ್ಯಗಳ ಪ್ರಾಮುಖ್ಯ ಕಡಿಮೆಯಾಗಿ ಗೈಡ್‌ಗಳು, ಪ್ರಶ್ನೋತ್ತರ ಗಳು, ಪ್ರಶ್ನೆಕೋಠಿಗಳಂತಹ ಕೋಚಿಂಗ್‌ನ ರೀತಿಯ ಸಾಧನಗಳೇ ಶಿಕ್ಷಣವನ್ನು ಆಳುತ್ತಿವೆ ಮತ್ತು ಈ ಪದ್ಧತಿಯನ್ನು ಇಡೀ ವ್ಯವಸ್ಥೆ ಒಪ್ಪಿಕೊಂಡುಬಿಟ್ಟಿದೆ!

ಶಿಕ್ಷಣ ನೀತಿಯು ಕೋಚಿಂಗ್‌ನಂತಹ ಪದ್ಧತಿಗಳನ್ನು ತೊಡೆದುಹಾಕಲು, ಪರೀಕ್ಷೆಗಳ ಮಹತ್ವವನ್ನು ಕುಗ್ಗಿಸಿ ವಿದ್ಯಾರ್ಥಿಗಳ ಸಾಮರ್ಥ್ಯ ವರ್ಧನೆಗೆ ಸಹಾಯಕವಾದ ರೂಪಣಾತ್ಮಕ ಮೌಲ್ಯಮಾಪನಕ್ಕೆ ಮಹತ್ವ ಕೊಟ್ಟಿದೆ. ಹಾಗಿರುವಾಗ ಇಡೀ ವ್ಯವಸ್ಥೆಯನ್ನು ರೂಪಣಾತ್ಮಕ ಮೌಲ್ಯಮಾಪನವನ್ನು ಸ್ವೀಕರಿಸುವ ಮನಃಸ್ಥಿತಿಗೆ ಸಜ್ಜು ಗೊಳಿಸಬೇಕು. ಕಲಿಕೆಯಲ್ಲಿ ಅಂಕಗಳಿಗಿಂತ ಕಲಿಕೆಯಲ್ಲಿ ತೊಡಗುವ ಪ್ರಕ್ರಿಯೆಯಲ್ಲಿ ತೋರಿಸುವ ದಕ್ಷತೆ ಮುಖ್ಯವಾಗಿದೆ ಎನ್ನುವುದನ್ನು ಅರ್ಥ ಮಾಡಿಸುವುದು ಸುಲಭದ ವಿಷಯವಲ್ಲ.

ಎರಡನೆಯದಾಗಿ, ರೂಪಣಾತ್ಮಕ ಮೌಲ್ಯಮಾಪನ ದಲ್ಲಿ ಶಿಕ್ಷಕರ ವೈಯಕ್ತಿಕ ಸಾಮರ್ಥ್ಯ, ದಕ್ಷತೆ, ದೃಷ್ಟಿಕೋನ, ವಿದ್ಯಾರ್ಥಿಯನ್ನು ಅರ್ಥ ಮಾಡಿಕೊಳ್ಳುವ ರೀತಿಗಳೆಲ್ಲವೂ ಮಹತ್ವ ಪಡೆಯುತ್ತವೆ. ಇಲ್ಲಿ ಸಾರ್ವತ್ರಿಕ ಮಾನದಂಡದಲ್ಲಿ ಮೌಲ್ಯಮಾಪನ ನಡೆ ಯುವುದಕ್ಕಿಂತ ಹೆಚ್ಚಾಗಿ ವಿದ್ಯಾರ್ಥಿಯ ವೈಯಕ್ತಿಕತೆ ಯನ್ನು ಗಮನದಲ್ಲಿ ಇರಿಸಿಕೊಂಡೇ ಮೌಲ್ಯಮಾಪನವನ್ನು ಮಾಡಬೇಕು. ಈ ಪದ್ಧತಿಗೆ ಶಿಕ್ಷಕರು ಸಿದ್ಧಗೊಳ್ಳಬೇಕು. ಅಷ್ಟು ಮಾತ್ರ ಅಲ್ಲ, ಈ ಪದ್ಧತಿ ಯಶಸ್ವಿಯಾಗ ಬೇಕಾದರೆ ಶಿಕ್ಷಕರಿಗೆ ಬಹಳಷ್ಟು ನಿರಾಳತೆ ಇರಬೇಕು. ಕಲಿಕಾ ಪ್ರಕ್ರಿಯೆಯಲ್ಲೇ ಶಿಕ್ಷಕರು ಪೂರ್ಣವಾಗಿ ತೊಡಗಿ ಕೊಳ್ಳುವಂತೆ ಆಗಬೇಕು. ಎಂಟು ಶಿಕ್ಷಕರು ಇರಬೇಕಾದ ಶಾಲೆಗೆ ನಾಲ್ವರು ಶಿಕ್ಷಕರನ್ನು ಇರಿಸಿಕೊಂಡು, ಆಡಳಿತಾತ್ಮಕ ಕೆಲಸಗಳನ್ನೆಲ್ಲ ಶಿಕ್ಷಕರ ತಲೆಗೆ ಹೊರಿಸಿ ರೂಪಣಾತ್ಮಕ ಮೌಲ್ಯಮಾಪನದ ಯಶಸ್ಸನ್ನು ಬಯಸಿದರೆ, ಏನನ್ನೂ ಮಾಡದೆಯೇ ದಾಖಲೆಯನ್ನು ಒದಗಿಸುವುದು ಕೂಡ ಈ ಬಗೆಯ ಮೌಲ್ಯಮಾಪನದಲ್ಲಿ ಸುಲಭವಾಗುತ್ತದೆ. ಶಿಕ್ಷಕರಿಗೆ ಜ್ಞಾನ ಇರಬೇಕು. ಕೆಲಸ ಮಾಡುವ ಮನಸ್ಸು, ಬೇಕಾದ ಔದ್ಯೋಗಿಕ ಪರಿಸರ, ಕೆಲಸ ಮಾಡಲು ಬೇಕಾದಷ್ಟು ಸಮಯ ಮೂರೂ ಇದ್ದಾಗ ಸಾಮರ್ಥ್ಯ ಆಧಾರಿತ ಕಲಿಕೆ ಯಶಸ್ಸು ಪಡೆಯುತ್ತದೆ. ಇದಕ್ಕೆ ಸೂಕ್ತ ವಾಗುವಂತೆ ಶಿಕ್ಷಣ ವ್ಯವಸ್ಥೆಯನ್ನು ಸನ್ನದ್ಧಗೊಳಿಸಬೇಕು.

ಹೊಸ ಶಿಕ್ಷಣ ನೀತಿಯು ಮಗುವಿಗೆ ಮೂರು ವರ್ಷವಾಗುವಾಗ ಪೂರ್ವ ಪ್ರಾಥಮಿಕ ಹಂತವನ್ನು ಪ್ರಾರಂಭಿಸುತ್ತದೆ. ಅಂದರೆ ಅಂಗನವಾಡಿಯ ಮೂಲ ಸೌಕರ್ಯಗಳು, ಅಂಗನವಾಡಿ ಕಾರ್ಯಕರ್ತೆಯರ ಸಂಖ್ಯೆ, ಸೌಲಭ್ಯ, ಮಕ್ಕಳ ನಿರ್ವಹಣಾ ಜ್ಞಾನದ ಮಟ್ಟ ಮೂರನ್ನೂ ಉನ್ನತೀಕರಿಸಬೇಕಾಗುತ್ತದೆ. ಒಂದು ವಾರದ ತರಬೇತಿಯಲ್ಲಿ ಇದೆಲ್ಲ ಆಗುವುದಿಲ್ಲ. ಎರಡು– ಮೂರು ವರ್ಷಗಳ ಆಡಳಿತಾತ್ಮಕ, ಭೌತಿಕ ಮತ್ತು ಬೌದ್ಧಿಕ ಸಿದ್ಧತೆ ಆಗಬೇಕಾಗುತ್ತದೆ.

ತಂತ್ರಜ್ಞಾನದ ಅಳವಡಿಸುವಿಕೆ ಮತ್ತು ಸಂವಹನ ಸಾಮರ್ಥ್ಯದ ದಕ್ಷತೆಯ ಹೆಚ್ಚಳ ವ್ಯಾಪಕವಾಗಿ ಆಗಬೇಕು ಎನ್ನುತ್ತದೆ ಶಿಕ್ಷಣ ನೀತಿ. ಇಂದಿನ ದಿನಗಳಲ್ಲಿ ತಂತ್ರಜ್ಞಾನವೂ ಒಂದು ಪ್ರಭಾವಶಾಲಿ ಸಂವಹನ ಪದ್ಧತಿಯಾಗಿದೆ. ಅಂದರೆ ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನ ವನ್ನು ಸಮರ್ಥವಾಗಿ ಬಳಸುವುದನ್ನು ಸಿಬ್ಬಂದಿಗೆ ಮತ್ತು ವಿದ್ಯಾರ್ಥಿಗಳಿಗೆ ಕಲಿಸುವ ಸಿಬ್ಬಂದಿ ಬೇಕಾಗುತ್ತದೆ. ಸಂವಹನ ಸಾಮರ್ಥ್ಯದ ದಕ್ಷತೆಯ ಹೆಚ್ಚಳವು ಬಲು ಸೂಕ್ಷ್ಮವಾದ ಅನೇಕ ಶೈಕ್ಷಣಿಕ ಅಂಶಗಳನ್ನು ಹೊಂದಿದೆ. ಉದಾಹರಣೆಗೆ, ಒಬ್ಬ ವಿದ್ಯಾರ್ಥಿಗೆ ಪರೀಕ್ಷೆಯಲ್ಲಿ ಕೆಲವು ಅಂಕಗಳು ಕಡಿಮೆ ಬಂದರೆ ಅಥವಾ ಅನುತ್ತೀರ್ಣ ಗೊಂಡರೆ ಅದು ವಿದ್ಯಾರ್ಥಿಯ ವಿಷಯ ಜ್ಞಾನದ ಕೊರತೆಯನ್ನು ಸೂಚಿಸುವುದಿಲ್ಲ. ಇರುವ ಜ್ಞಾನವನ್ನು, ಪ್ರಶ್ನೆಯು ಬಯಸುವ ರೀತಿಯಲ್ಲಿ ಅಕ್ಷರಗಳ ಸಂಕೇತದ ಮೂಲಕ ಹೇಳಲು ಸಾಧ್ಯವಾಗಲಿಲ್ಲ ಎನ್ನುವುದನ್ನಷ್ಟೇ ಸೂಚಿಸುತ್ತದೆ. ಅಂದರೆ ಅಲ್ಲಿ ಸಮಸ್ಯೆ ಇರುವುದು ಭಾಷೆಯನ್ನು ಬರಹ ರೂಪದಲ್ಲಿ ಅಭಿವ್ಯಕ್ತಪಡಿಸುವ ವಿಚಾರ ಮಾತ್ರ. ಜ್ಞಾನದ ಸಮಸ್ಯೆ ಅಲ್ಲ.

ಸಂವಹನ ಸಾಮರ್ಥ್ಯ ಎಂದಾಗ ಭಾಷೆ, ತಂತ್ರಜ್ಞಾನ, ಧ್ವನಿ, ಆಂಗಿಕ ಅಭಿವ್ಯಕ್ತಿ, ಭಾವಾಭಿವ್ಯಕ್ತಿ- ಹೀಗೆ ಹಲವು ಸಂಗತಿಗಳು ಒಳಗೊಳ್ಳುತ್ತವೆ. ಭವಿಷ್ಯದ ಭಾರತವನ್ನು ಜಾಗತಿಕ ಮಟ್ಟದಲ್ಲಿ ಸನ್ನದ್ಧಗೊಳಿಸ
ಬೇಕಾದರೆ ಸರ್ವಾಂಗೀಣ ಸಂವಹನ ಸಾಮರ್ಥ್ಯ ಇರಬೇಕಾದ್ದನ್ನು ಶಿಕ್ಷಣ ನೀತಿಯು ಸಮರ್ಪಕವಾಗಿಯೇ ಅರ್ಥ ಮಾಡಿಕೊಂಡಿದೆ. ಆದರೆ ಅದು ಅನುಷ್ಠಾನಕ್ಕೆ ಬರಬೇಕಾದರೆ, ಭಾಷಾ ಪಠ್ಯದ ಪಠ್ಯಕ್ರಮ, ಪಠ್ಯವಸ್ತು, ಬೋಧನಾ ಪದ್ಧತಿ, ಮೌಲ್ಯಮಾಪನ ವಿಧಾನಗಳೆಲ್ಲ ದರಲ್ಲೂ ಪರಿಷ್ಕರಣೆ ಆಗಬೇಕಾಗುತ್ತದೆ. ಪಾಠ ಪುಸ್ತಕದ ಬಣ್ಣ ಯಾವುದಿರಬೇಕು ಎನ್ನುವ ಶೈಲಿಯ ವ್ಯರ್ಥಾಲಾಪದ ಚರ್ಚೆಗಳು ಶಿಕ್ಷಣಕ್ಕೆ ಯಾವ ಕೊಡುಗೆಯನ್ನೂ ಕೊಡುವುದಿಲ್ಲ. ಕನಿಷ್ಠಪಕ್ಷ ಶಿಕ್ಷಣದ ಕುರಿತ ಸರಿಯಾದ ದಿಕ್ಕಿನ ಸಾರ್ವಜನಿಕ ಚರ್ಚೆಯನ್ನಾದರೂ ಹುಟ್ಟು
ಹಾಕಬೇಕಾದದ್ದು ಇಂದಿನ ತುರ್ತು ಅಗತ್ಯವಾಗಿದೆ.

2020ರ ಶಿಕ್ಷಣ ನೀತಿಯನ್ನು ಪದವಿ ಹಂತದಲ್ಲಿ ಜಾರಿಗೊಳಿಸಿದ್ದರ ಪರಿಣಾಮವಾಗಿ ಹುಟ್ಟಿಕೊಂಡಿರುವ ಸಮಸ್ಯೆ ಮತ್ತು ಸವಾಲುಗಳನ್ನು ನಿರ್ವಹಿಸಲು ಬೇಕಾದ ವ್ಯವಸ್ಥೆಯನ್ನೇ ಇನ್ನೂ ರೂಪಿಸಲು ಸಾಧ್ಯವಾಗಿಲ್ಲ. ಪದವಿಯ ವಿದ್ಯಾರ್ಥಿಗಳು ಯುವಕ ಯುವತಿಯರು. ಅವರೇ ಒಂದಷ್ಟು ನಿಭಾಯಿಸಿಕೊಳ್ಳಬಲ್ಲರು. ಆದರೆ ಮೂರು ವರ್ಷದ ಮಕ್ಕಳ ವಿಚಾರ ಹಾಗಲ್ಲ. ತಕ್ಕಷ್ಟು ಸಿದ್ಧತೆ ಗಳಾಗದೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತಂದರೆ ಇದ್ದದ್ದೂ ಇಲ್ಲದ ಹಾಗಾಗುವ ಸಾಧ್ಯತೆಯಿದೆ. ಆದ್ದರಿಂದ ಈ ದಿಸೆಯಲ್ಲಿ ಸಶಕ್ತ ಸಾರ್ವಜನಿಕ ಚರ್ಚೆ ವ್ಯಾಪಕವಾಗಿ ನಡೆದು ಅದರ ಆಧಾರದಲ್ಲಿ ಆಡಳಿತಾತ್ಮಕ ಮತ್ತು ಶೈಕ್ಷಣಿಕ ಸಿದ್ಧತೆಗಳು ಆಗಬೇಕಾದ ಅಗತ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT