ಗುರುವಾರ , ಸೆಪ್ಟೆಂಬರ್ 24, 2020
21 °C

ದೇವರನ್ನು ಕಾಣಬಲ್ಲ ಕಣ್ಣು

ಹಾರಿತಾನಂದ Updated:

ಅಕ್ಷರ ಗಾತ್ರ : | |

ದೇವರ ಬಗ್ಗೆ ಮನುಷ್ಯನಿಗೆ ಎಂದು ಕಲ್ಪನೆ ಮೊಳೆಯಿತೋ – ಅಂದಾಜಿಸುವುದು ಸುಲಭವಲ್ಲ. ಸಾವಿರಾರು ವರ್ಷಗಳಿಂದಲೂ ದೇವರ ಬಗ್ಗೆ ಜಿಜ್ಞಾಸೆ ನಡೆದಿದೆ; ಜಗತ್ತಿನ ಎಲ್ಲ ಸಂಸ್ಕೃತಿಗಳಲ್ಲೂ ಅವನ ಬಗ್ಗೆ ಸಿದ್ಧಾಂತಗಳೂ ಮೂಡಿವೆ. ಅವನನ್ನು (ಅಥವಾ ಅವಳನ್ನು) ಹುಡುಕುವ ಹಂಬಲವೂ ಬಹಳ ಪುರಾತನವಾದುದೇ.

ದೇವರನ್ನು ಹಲವರು ಹಲವು ಸ್ವರೂಪಗಳಲ್ಲಿ ಹುಡುಕುತ್ತಾ ಬಂದಿದ್ದಾರೆ; ಹಲವು ರೂಪಗಳಲ್ಲಿ ಅರಸುತ್ತಾ ಬಂದಿದ್ದಾರೆ. ಆದರೆ ಯಾರಿಗೆ ಅವನು ಸಿಕ್ಕಿದ್ದಾನೆ ಅಥವಾ ಸಿಕ್ಕಿಲ್ಲ – ಎಂದು ಹೇಳುವುದು ಸುಲಭವಲ್ಲವೆನ್ನಿ! ನಮ್ಮ ಕಾಲದಲ್ಲೂ ಈ ಹುಡುಕಾಟವನ್ನು ಹಲವರು ಮಾಡಿದ್ದಾರೆ; ಮಾಡುತ್ತಲೂ ಇದ್ದಾರೆ. ದೇವರೊಂದಿಗೆ ನಂಟನ್ನು ಕುರಿತಂತೆ ಯಶವಂತ ಚಿತ್ತಾಲ ಅವರ ಮಾತುಗಳು ಮನನೀಯವಾಗಿವೆ. ‘ದೇವರು ಮತ್ತು ನನ್ನ ಸಂಬಂಧ ಅನಾದಿಯಂತೆ, ಹಿರಿಯರು ಹೇಳಿದ್ದು. ನನ್ನ ಅವನ ಪರಿಚಯ ಮಾತ್ರ ಇತ್ತೀಚಿನದು: ಸುಮಾರು 30 ವರ್ಷಗಳದ್ದು. ಈ ಕಾಲಾವಧಿಯಲ್ಲಿ ನಮ್ಮಿಬ್ಬರ ಸಂಬಂಧ ಬದಲಿಸುತ್ತ ನಡೆದಿದೆ’ ಎಂದು ಪ್ರಬಂಧವನ್ನು ಆರಂಭಿಸುವ ಅವರು, ನಾಲ್ಕು ಹಂತಗಳಲ್ಲಿ ದೇವರೊಂದಿಗೆ ನಡೆದ ‘ಮುಖಾಮುಖಿ’ಯನ್ನು ಕಟ್ಟಿಕೊಟ್ಟಿದ್ದಾರೆ. ಬಾಲ್ಯದಲ್ಲಿ ಅವರಿಗೆ ಒದಗಿದ ದೇವರ ಪರಿಚಯವನ್ನು ಮಾಡಿಕೊಡುವ ಅವರ ಮಾತುಗಳು ಕಾವ್ಯದಂತೆ ಆಹ್ಲಾದಕರವಾಗಿವೆ:

‘ನನ್ನ ಬಾಲಭಾವಕ್ಕೆ ದೇವರು ಮೊತ್ತಮೊದಲು ಗೋಚರನಾದದ್ದು ನಿರಾಕಾರ, ನಿರ್ಗುಣ ಸ್ವರೂಪದಲ್ಲಿ. ಮನೆಯ ಅಂಗಳದಲ್ಲಿ ತುಳಸೀಕಟ್ಟೆಯ ಇದಿರಿಗೆ ನಡೆಯುತ್ತಿದ್ದ ಭಜನೆಯ ತಾಳ ಢೋಲಕೆಗಳ ಆವಾಜದಲ್ಲಿ; ದೇವರ ಪದಗಳ ರಾಗದಲ್ಲಿ, ಪೂಜೆಯ ಹೊತ್ತಿನ ಗಂಟೆ, ಜಾಗುಟಿಗಳ ನಿನಾದವಾಗಿ; ಚೌತೀ ಹಬ್ಬದ ದಿನ ಜಾಜೀಹೂಗಳಿಂದ ಸಿಂಗರಿಸಿದ ಗಣಪತಿಯ ಮಂಟಪದ ಪರಿಮಳವಾಗಿ; ಹನೇಹಳ್ಳಿಯ ಷಷ್ಠಿತೇರು, ಕುಮಟೆಯ ರಥಸಪ್ತಮಿತೇರು, ಗೋಕರ್ಣದ ಶಿವರಾತ್ರಿಯ ತೇರುಗಳ ಪತಾಕೆಗಳ ಬಣ್ಣವಾಗಿ; ಮಹಾಬಲೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ಅಂಗುಷ್ಠದ ಎತ್ತರದ ಆತ್ಮಲಿಂಗದ ಸುತ್ತಲೂ ನೆಲೆಸಿದ ಮಬ್ಬುಗತ್ತಲೆಯಾಗಿ; ಅಭಿಷೇಕದ ನೀರಿನಿಂದ ಒದ್ದೆಯಾದ ಕಾಲಡಿಯ ನೆಲದ ಗಿಜಿಗಿಜಿಯಾಗಿ; ಮೂಗಿಗೆ ಹೊಡೆಯುವ ಸುರಗೀ ಎಣ್ಣೆಯ ವಾಸನೆಯಾಗಿ; ಕಾರ್ತಿಕೋತ್ಸವದ ದಿವಸ ಗೋಕರ್ಣದಲ್ಲಿ ಉರಿಯುತ್ತಿದ್ದ ಸಾವಿರ ಹಣತೆಗಳ ಬಂಗಾರದ ಬೆಳಕಾಗಿ; ವೆಂಕಟರಮಣದೇವರ ಉತ್ಸವದ ದಿನ ಲೆಕ್ಕವಿಲ್ಲದೇ ಸುಡುತ್ತಿದ್ದ ಪಟಾಕಿ, ಗರ್ನಾಲುಗಳ ವಾಸನೆಯಾಗಿ; ಗಂಗಾಷ್ಟಮಿಯ ದಿನ ನಮ್ಮೂರಿನ ಗಂಗೆಯನ್ನು ಲಗ್ನವಾಗಲು ಗೋಕರ್ಣದಿಂದ ಈಶ್ವರನು ಬಂದ ನಸುಕಿನ ಇಬ್ಬನಿಯಾಗಿ; ದಸರೆಯ ದಿವಸ ಬತ್ತದ ಕದರು ಕೊಯ್ಯಲು ಗೋಕರ್ಣದಿಂದ ಉತ್ಸವದ ಮೂರ್ತಿ ಬಂದಾಗ ಹೊಲ ತುಂಬಿ ನಿಂತ ಬತ್ತದ ಪೈರಾಗಿ; ದೀಪಾವಳಿಯ ನಸುಕಿನ ಅಭ್ಯಂಗಸ್ನಾನವಾಗಿ; ಹಿಂಡಲಕಾಯ ಕಹಿಯಾಗಿ; ದನಗಳ ಹಬ್ಬದ ದಿನ ದನಗಳ ಮೈಮೇಲೆ ಮೂಡಿದ ಶೇಡಿಯ ಚಿತ್ರಗಳಾಗಿ; ತುಳಸೀಮದುವೆಯ ದಿನದ ಕಬ್ಬು, ನೆಲ್ಲಿ, ಹುಣಿಸೆಕಾಯಿಗಳ ತೋರಣವಾಗಿ, ಬಣ್ಣಬಣ್ಣದ ಆಕಾಶಬುಟ್ಟಿಯಾಗಿ; – ಬದುಕು ತನ್ನ ಹೊಟ್ಟೆಯಲ್ಲಿಟ್ಟುಕೊಂಡು ತೋರಿಸಿದೆ ಎನ್ನುವಷ್ಟರಲ್ಲಿ ತಿರುಗಿ ಮುಚ್ಚಿಕೊಳ್ಳುವ ಗೂಢದ ಪ್ರತೀಕವಾಗಿ ಭಾವಗೋಚರನಾಗಿದ್ದ. ನಾನು ಆರು ವರುಷದವನಾಗಿದ್ದಾಗ ಸತ್ತ ಅಜ್ಜ ಹೋದ ಊರಿನವನಾಗಿ; ನನ್ನ ಕಿರಿಯ ತಮ್ಮಂದಿರು ಹುಟ್ಟಿಬರುವ ಮೊದಲು ಇದ್ದ ಊರಿನವನಾಗಿ – ಅದೇ ಕಣ್ತೆರೆಯುತ್ತಿದ್ದ, ಕಾಲಿಡುತ್ತಿದ್ದ ಬಾಲಕನಿಗೆ – ಬಾ, ಹೆದರಬೇಡ ನನ್ನಪ್ಪಿಕೋ, ಎಂತೆಂತಹವೋ ದಿವ್ಯಗಳನ್ನು ನೋಡುವಿಯಂತೆ ಎಂದು ಬದುಕು ಕೊಟ್ಟ ಆಹ್ವಾನವಾಗಿ, ತೋರಿಸಿದ ಭರವಸೆಯಾಗಿ ಬಂದಿದ್ದ. ಬದುಕಿನ ಬಗ್ಗೆ ಇರುವ ಎಲ್ಲ ಸಂವೇದನೆಗಳ ಆರೋಗ್ಯವಾಗಿ ಬಂದಿದ್ದ. ಆದರೆ ನಿರಾಕಾರನಾಗಿದ್ದ.’

ಈ ಮೊದಲ ಹಂತವಾದ ಬಳಿಕ ದೇವರು ‘ಸಗುಣ’ರೂಪದಲ್ಲಿ ಅವರಿಗೆ ಒದಗಿದ್ದು ಎರಡನೆಯ ಹಂತ; ಹೀಗೆ ಕಣ್ಣಿಗೆ ಸಿಕ್ಕವನನ್ನು ಅನಂತರದ ಹಂತದಲ್ಲಿ ಭಂಜಿಸಿದ್ದು; ಕೊನೆಯ ಹಂತದಲ್ಲಿ – ವೈಚಾರಿಕವಾಗಿ, ಪ್ರತಿಮೆಯಾಗಿ ಸಾಕ್ಷತ್ಕಾರಿಸಿಕೊಳ್ಳುವ ಕುತೂಹಲವಾಗಿ ರೂಪುಗೊಂಡವಿಧಾನವನ್ನು ಚಿತ್ತಾಲ ಸೊಗಸಾಗಿ ಕಂಡರಿಸಿದ್ದಾರೆ.

ನಾವಿಲ್ಲಿ ನೋಡಿರುವುದು ದೇವರನ್ನು ‘ಕಾಣಬಲ್ಲ’ ಮೊದಲ ಹಂತ. ಇಂದು ನಾವು ಈ ಹಂತವನ್ನು ಕಳೆದುಕೊಳ್ಳುತ್ತಿದ್ದೇವೆ. ದೇವರನ್ನು ಕಾಣಲು ನಾವು ಮಾಡಬೇಕಾದ ಮೊದಲ ಕೆಲಸ ಎಂದರೆ ಜಗತ್ತನ್ನು ‘ನೋಡುವುದು’. ಇಂಥದೊಂದು ನೋಟವೇ ನಮಗೆ ಇಲ್ಲವಾಗುತ್ತಿದೆ. ನಮ್ಮ ಸುತ್ತಲಿರುವ ಜಗತ್ತಿನ ವಿವರಗಳನ್ನು ಸರಿಯಾಗಿ ನೋಡುವುದನ್ನು ಕಲಿಯಬೇಕು. ಸೃಷ್ಟಿಯ ಒಂದೊಂದು ವಿವರವೂ ದೇವರ ಶರೀರವೇ ಹೌದು. ಆದರೆ ನಮ್ಮ ಮುಂದೆಯೇ ನಿಂತಿರುವ ದೇವರನ್ನು ನಾವು ನೋಡಲು ಕಲಿತಿಲ್ಲ. ಪ್ರಕೃತಿಯಲ್ಲಿರುವ ಸೌಂದರ್ಯ, ನಮ್ಮ ನಿತ್ಯಜೀವನದ ಸಂದರ್ಭಗಳು, ಇಲ್ಲಿಯ ನೋವು–ನಲಿವು – ಎಲ್ಲವೂ ಕೂಡ ದೇವರ ರೂಪಗಳೇ. ಈ ಆಕಾರವನ್ನು ಚಿತ್ತಾಲರು ’ನಿರಾಕಾರ’ ಎಂದು ಕರೆದಿರುವುದನ್ನು ಕೂಡ ನಾವಿಲ್ಲಿ ಗಮನಿಸಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.