ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸುವನ್ನು ಸೆಳೆಯುವ ಎಳೆಗಳು

Last Updated 4 ನವೆಂಬರ್ 2018, 20:36 IST
ಅಕ್ಷರ ಗಾತ್ರ

ಸೆಳೆಯುತಿರುವುದದೊಂದು ಹೊರಬೆಡಗಿನೆಳೆಗಳೆ |
ನ್ನೊಳಗಿನಸುವೆಲ್ಲವನು ಕಟ್ಟಿನೀಂ ಬಿಗಿದು ||
ಎಳೆದಾಟವೇಂ ಋಣಾಕರ್ಷಣೆಯೊ? ಸೃಷ್ಟಿ ವಿಧಿ |
ಯೊಳತಂತ್ರವೋ? ನೋಡು – ಮಂಕುತಿಮ್ಮ || 51 ||

ಪದ-ಅರ್ಥ: ಸೆಳೆಯುತಿರುವುದದೊಂದು=ಸೆಳೆಯುತಿರುವುದು+ಅದೊಂದು, ಎನ್ನೊಳಗಿನಸುವೆಲ್ಲವನು= ಎನ್ನೊಳಗಿನ+ಅಸು(ಪ್ರಾಣ)+ಎಲ್ಲವನು, ಋಣಾಕರ್ಷಣೆಯೋ+ಋಣದ+ಆಕರ್ಷಣೆಯೋ.

ವಾಚ್ಯಾರ್ಥ: ಬೆಡಗಿನ ಹೊರಜಗತ್ತಿನ ಎಳೆಗಳು ನನ್ನ ಪ್ರಾಣವನ್ನು ಕಟ್ಟಿ ಬಿಗಿದು ಸೆಳೆಯುತ್ತಿವೆ. ಅದರ ಎಳೆದಾಟ ನನ್ನ ಪೂರ್ವದ ಋಣಗಳನ್ನು ತೀರಿಸುವ ಪರಿಯೋ ಅಥವಾ ವಿಧಿಯ ಹಾಗೂ ಸೃಷ್ಟಿಯ ಒಳತಂತ್ರವೊ ಎನ್ನುವುದನ್ನು ಪರೀಕ್ಷಿಸಿ ನೋಡು.

ವಿವರಣೆ: ಇದೊಂದು ನಮ್ಮನ್ನು ತುಂಬ ಚಿಂತನೆಗೆ ಹಚ್ಚಬಹುದಾದ ಕಗ್ಗ. ಮನಸ್ಸು ನಮ್ಮೊಳಗಿದೆ. ಬೆಡಗಿನಿಂದ ಕಣ್ಣು ಕೋರೈಸುವ ಜಗತ್ತು ಹೊರಗಿದೆ. ಎರಡರ ಸ್ಥಾನಗಳೂ ಬೇರೆಬೇರೆಯಾಗಿವೆ. ಆದರೂ ಹೊರಗಿನ ಬೆಡಗಿನ ಜಗತ್ತಿನ ಎಳೆಗಳು ನನ್ನ ಮನಸ್ಸನ್ನು ಕಟ್ಟಿ ಎಳೆದಾಡಿ ಬಿಡುತ್ತವಲ್ಲ? ಇದು ಹೇಗೆ ಮತ್ತು ಏಕೆ? ಮನಸ್ಸು ಹಾಗೂ ಪ್ರಪಂಚದ ಮಧ್ಯವರ್ತಿಗಳಾಗಿ ನಮ್ಮ ಇಂದ್ರಿಯಗಳಿವೆ.

ಕಣ್ಣು ಜಗತ್ತಿನ ಸೊಬಗನ್ನು ನೋಡುತ್ತದೆ, ಕಿವಿ ಇಂಪಾದ ಧ್ವನಿಗಳನ್ನು ಕೇಳುತ್ತದೆ, ನಾಲಿಗೆ ಪದಾರ್ಥಗಳ ರುಚಿ ಅನುಭವಿಸುತ್ತದೆ. ಹೀಗೆಯೇ ಪಂಚೇಂದ್ರಿಯಗಳು ಪ್ರಪಂಚದೊಂದಿಗೆ ಸಂಯೋಗ ಮಾಡುತ್ತವೆ. ಅದರಿಂದಾಗುವುದು ವಿಷಯದ ಸಂಗ. ಒಂದು ಬಾರಿ ಸಂಗವಾಯಿತೋ ಅದು ಆಕರ್ಷಣೆಯಾಗುತ್ತದೆ, ಅಪೇಕ್ಷೆಯಾಗುತ್ತದೆ. ಮುಂದೆ ಅದು ಕಾಮವಾಗುತ್ತದೆ. ಅಪೇಕ್ಷಿಸಿದ ವಸ್ತು ದೊರೆಯದಾಗ ಕೋಪ ಹುಟ್ಟುತ್ತದೆ, ಮೋಹ ಅತಿಯಾಗುತ್ತದೆ. ಹಾಗಾದಾಗ ಮತಿಭ್ರಮಣೆಯಾಗಿ ನಾಶಕ್ಕೆ ಕಾರಣವಾಗುತ್ತದೆ. ಇದನ್ನು ಸುಂದರವಾಗಿ ಭಗವದ್ಗೀತೆ ಹೇಳುತ್ತದೆ –

ಧ್ಯಾಯತೋ ವಿಷಯಾನ್ ಪುಂಸ: ಸಂಗಸ್ತೇಷೂಪಜಾಯತೇ |
ಸಂಗಾತ್ ಸಂಜಾಯತೇ ಕಾಮ: ಕಾಮಾತ್ ಕ್ರೋಧೋಭಿಜಾಯತೇ ||

‘ಮನುಷ್ಯ ವಿಷಯದ ಬಗ್ಗೆ ಧ್ಯಾನ ಮಾಡುತ್ತಿದ್ದರೆ ಅದರ ಬಗ್ಗೆ ಕಕ್ಕುಲಾತಿ ಮೂಡುತ್ತದೆ, ಕಕ್ಕುಲಾತಿಯಿಂದ ಕಾಮ ಉಂಟಾಗುತ್ತದೆ, ಕಾಮ ಇಡೇರದಿದ್ದಾಗ ಕ್ರೋಧ ಹುಟ್ಟುತ್ತದೆ.’ ಮುಂದೆ ಆಗುವುದೆಲ್ಲ ಮನುಷ್ಯನ ಮನಸ್ಸನ್ನು ಎಳೆದಾಡಿ ಬಳಲಿಸುವ ಕಾರ್ಯವೇ. ರಾವಣನ ಮನಸ್ಸನ್ನು ಸೀತೆಯ ರೂಪ ಸೆಳೆದದ್ದು, ಸೀತೆಯ ಮನಸ್ಸನ್ನು ಬಂಗಾರದ ಜಿಂಕೆ ಎಳೆದದ್ದು, ತಪಸ್ಸಿನಲ್ಲಿ ಮಗ್ನನಾಗಿದ್ದ ವಿಶ್ವಾಮಿತ್ರನ ಮನಸ್ಸು ಮೇನಕೆಗೆ ಸಮರ್ಪಿತವಾಗಿದ್ದು ಇವೆಲ್ಲ ಆ ಆಕರ್ಷಣೆಗಳೇ. ಇವುಗಳನ್ನೆಲ್ಲ ವಿಧಿ ತನ್ನ ದಾಳವನ್ನಾಗಿ ಬಳಸಿಕೊಂಡು ತನ್ನ ಉದ್ದೇಶವನ್ನು ಪೂರೈಸಿಕೊಂಡಿತು ಎನ್ನಬಹುದು.

ವಿಧಿ ಸೃಷ್ಟಿಯನ್ನು ಯೋಜಿಸಿಕೊಂಡು ತನಗೆ ಬೇಕಾದಂತೆ ವ್ಯಕ್ತಿಗಳನ್ನು ಸೆಳೆದುಕೊಳ್ಳುತ್ತದೆ. ಅದಕ್ಕೆ ಇಂದ್ರಿಯಗಳು ಸಹಕಾರಿಯಾಗುತ್ತವೆ. ಆದ್ದರಿಂದ ಅವುಗಳನ್ನು ಸಂಯಮದಿಂದ ನಿಗ್ರಹಿಸುವುದು ಮಾತ್ರ ಎಳೆದಾಟದಿಂದ ಪಾರಾಗುವ ವಿಧಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT