ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉನ್ನತಿಯ ದರ್ಶನವಾದ ಚೇತನ

Last Updated 23 ಆಗಸ್ಟ್ 2019, 20:15 IST
ಅಕ್ಷರ ಗಾತ್ರ

ಹಿಂದೆ ವಾರಾಣಸಿಯನ್ನು ಬ್ರಹ್ಮದತ್ತ ಆಳುತ್ತಿದ್ದಾಗ ಬೋಧಿಸತ್ವ ಸಮೀಪದ ಹಳ್ಳಿಯೊಂದರಲ್ಲಿ ಬ್ರಾಹ್ಮಣನ ಮನೆಯಲ್ಲಿ ಜನಿಸಿದ. ಅವನು ತಕ್ಷಶಿಲೆಗೆ ಹೋಗಿ ಯೋಗ್ಯಗುರುಗಳಿಂದ ಸಕಲ ಶಾಸ್ತ್ರಗಳನ್ನು ಕಲಿತು ಬಂದ. ಅವನ ಹೆಸರು ಕೊಮಾಯಪುತ್ತ. ಅವನು ಬೆಳೆದಂತೆ ಸಂಸಾರದ ಸೆಳೆತದಿಂದ ಪಾರಾಗಿ ಹಿಮಾಲಯಕ್ಕೆ ಹೋದ. ಅಲ್ಲಿ ಋಷಿ ಪ್ರವ್ರಜ್ಯವನ್ನು ಪಡೆದು ಏಕಾಂಗಿಯಾಗಿ ತಿರುಗಾಡುತ್ತ ಧ್ಯಾನವನ್ನು ಸಾಧಿಸುತ್ತಿದ್ದ.

ಹಿಮಾಲಯದ ಇನ್ನೊಂದು ಜಾಗದಲ್ಲಿ ಐದು ನೂರು ತಪಸ್ವಿಗಳು ಆಶ್ರಮ ಕಟ್ಟಿಕೊಂಡು ನೆಲೆಯಾಗಿದ್ದರು. ಅವರಿಗೆ ಅತ್ಯಂತ ಸಾಧಕರಾದ ಗುರು ಇರಲಿಲ್ಲ. ಹೀಗಾಗಿ ಅವರು ಬರೀ ಕ್ರೀಡೆಯಲ್ಲಿಯೇ ಮಗ್ನರಾಗಿದ್ದರು. ಅವರು ಕಸಿಣಕರ್ಮವೆಂಬ ಯೋಗದ ವಿಧಿಗಳನ್ನು ಕಲಿತಿರಲಿಲ್ಲ. ಈ ತಪಸ್ವಿಗಳು ಯಾವಾಗಲೂ ಕಾಡಿನಲ್ಲಿ ತಿರುಗಾಡುತ್ತ ಒಳ್ಳೆಯ ಹಣ್ಣು ಹಂಪಲಗಳನ್ನು ಸಂಗ್ರಹಿಸಿ ತಿಂದು, ಉತ್ತಮ ಜೇನನ್ನು ಕುಡಿದು, ನೀರಿನಲ್ಲಿ ಈಜಾಡಿ ಸಂತೋಷದಿಂದ ಕಾಲ ಕಳೆಯುತ್ತಿದ್ದರು. ಬುದ್ಧಧರ್ಮದಲ್ಲಿ ಪ್ರವ್ರಜಿತರಾಗಿದ್ದರೂ ದುಃಖದ ನಿತ್ಯತೆ, ಅವುಗಳಿಂದ ಪಾರಾಗುವ ವಿಧಾನ, ವಿಪಶ್ಯನ ಇಂಥ ವಿಷಯಗಳ ಬಗ್ಗೆ ಯೋಚನೆಯನ್ನೇ ಮಾಡುತ್ತಿರಲಿಲ್ಲ.

ಈ ಆಶ್ರಮದ ಬಳಿಯ ತೋಟದಲ್ಲೊಂದು ಕೋತಿ ಇತ್ತು. ತಪಸ್ವಿಗಳನ್ನು ನೋಡಿ, ನೋಡಿ ಅದೂ ಕ್ರೀಡಾಪ್ರಿಯವೇ ಆಗಿತ್ತು. ಅದು ಆಶ್ರಮಕ್ಕೆ ಬಂದು ತಪಸ್ವಿಗಳೊಡನೆ ಕಾಲಕಳೆಯುತ್ತ, ತನ್ನ ಮಂಗಚೇಷ್ಟೆಗಳನ್ನು ಅವರಿಗೆ ತೋರುತ್ತಿತ್ತು. ಅದರ ಹಾರಾಟ, ಹಲ್ಲು ಕಿಸಿಯುವಿಕೆ, ವಿಚಿತ್ರ ಆಟಗಳು ತಮಾಷೆಯನ್ನು ಇಷ್ಟಪಡುವ ತಪಸ್ವಿಗಳಿಗೆ ತುಂಬ ಇಷ್ಟವಾಗುತ್ತಿತ್ತು. ಕೆಲವು ವರ್ಷಗಳವರೆಗೆ ಪರಿಸ್ಥಿತಿ ಹೀಗೆಯೇ ಮುಂದುವರಿಯಿತು. ನಂತರ ತಪಸ್ವಿಗಳು ಹಿಮಾಲಯದಿಂದ ಕೆಳಗಿಳಿದು ತಪ್ಪಲಿಗೆ ಬಂದರು.

ಸ್ವಲ್ಪ ದಿನಗಳ ನಂತರ ಬೋಧಿಸತ್ವ ಇರಲು ಆ ಖಾಲಿಯಾದ ಆಶ್ರಮಕ್ಕೆ ಬಂದ. ಅವನು ಅತ್ಯಂತ ನಿಷ್ಠೆಯಿಂದ, ಶ್ರದ್ಧೆಯಿಂದ ಧ್ಯಾನವನ್ನು ಮಾಡುತ್ತಿದ್ದ. ಆಶ್ರಮಕ್ಕೆ ಯಾರೋ ಬಂದದ್ದನ್ನು ಕಂಡು ಕೋತಿ ಓಡಿ ಬಂದಿತು. ತಪಸ್ವಿಯನ್ನು ನೋಡಿ ಅದಕ್ಕೆ ಸಂತೋಷವಾಯಿತು. ಅವನ ಮುಂದೆಯೂ ತನ್ನ ಚೇಷ್ಟೆಗಳನ್ನು ತೋರಿಸಿತು. ಬೋಧಿಸತ್ವ ಚಿಟಿಕೆ ಬಾರಿಸಿ ಕೋತಿಯನ್ನು ಹೊರಗೆ ಹೋಗಲು ಹೇಳಿದ. ಹೋಗುವ ಮುಂದೆ ಒಂದು ಮಾತು ಹೇಳಿದ, ‘ನೀನು ಕೋತಿಯಾಗಿರಬಹುದು. ಆದರೆ ಪ್ರವ್ರಜಿತರೊಂದಿಗೆ, ತಪಸ್ವಿಗಳೊಂದಿಗೆ ಇರುವ ನೀನು ಸದಾಚಾರಿಯಾಗಿರಬೇಕು. ನೀನು ಕೂಡ ಕಾಯಾ, ವಾಚಾ, ಮನಸಾ ಸಂಯಮಿಯಾಗಬೇಕು, ಧ್ಯಾನ ಮಾಡಬೇಕು’ ಕೋತಿ ಇವನನ್ನು ಗಮನಿಸುತ್ತಲೇ ಇತ್ತು. ಅವನನ್ನು ನೋಡುತ್ತ ತನ್ನ ಸ್ವಭಾವವನ್ನೇ ಬದಲಿಸಿಕೊಂಡಿತು. ನಿಧಾನಕ್ಕೆ ಒಂದು ವರ್ಷದಲ್ಲಿ ಅದೂ ಶೀಲವಂತವಾಯಿತು. ಕೆಲ ದಿನಗಳಲ್ಲಿ ಬೋಧಿಸತ್ವ ಅಲ್ಲಿಂದ ಬೇರೆಡೆಗೆ ಹೊರಟು ಹೋದ.

ಮತ್ತೆ ಮೊದಲಿದ್ದ ತಪಸ್ವಿಗಳು ಮರಳಿ ಆಶ್ರಮಕ್ಕೆ ಬಂದಾಗ ಕೋತಿಯಲ್ಲಿ ಆದ ಬದಲಾವಣೆಯನ್ನು ಕಂಡು ಆಶ್ಚರ್ಯಪಟ್ಟರು. ಮತ್ತೆ ತಮಾಷೆ ತೋರಿಸು ಎಂದು ಕೇಳಿದರು. ಆಗ ಕೋತಿ, ‘ನಾನು ಅತ್ಯಂತ ಜ್ಞಾನಿಯಾದ ಕೊಮಾಯಪುತ್ತನಿಂದ ವಿಶುದ್ಧಿಯನ್ನು, ಧ್ಯಾನವನ್ನು ಪಡೆದಿದ್ದೇನೆ. ಈಗ ನಾನು ಮೊದಲಿನಂತೆ ಇಲ್ಲ. ಶೀಲವಂತನಾಗಿ, ಸದಾಚಾರಿ ಯಾಗಿದ್ದೇನೆ. ನೀವೂ ಹಾಗೆಯೇ ಆದರೆ ತಮಗೆ ಒಳ್ಳೆಯದು’ ಎಂದಿತು. ತಪಸ್ವಿಗಳಿಗೆ ನಾಚಿಕೆಯಾಗಿ ತಮ್ಮನ್ನು ಬದಲಾಯಿಸಲು ಪ್ರಯತ್ನಿಸಿದರು.

ಒಂದು ಬಾರಿ ಮನುಷ್ಯನ ಚೇತನ, ಜ್ಞಾನದ, ತಿಳಿವಳಿಕೆಯ ಎತ್ತರದ ಮಜಲನ್ನು ತಲುಪಿದರೆ ಮತ್ತೆ ಕೆಳಗಿಳಿದು ಕನಿಷ್ಠ ಕೆಲಸಗಳನ್ನು ಮಾಡಲಾರದು. ಹಾಗೆ ಮೇಲೆ ಹೋಗುವ ಪ್ರಯತ್ನ ಸದಾ ನಡೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT