ಗುರುವಾರ , ಏಪ್ರಿಲ್ 2, 2020
19 °C

ದುರುದ್ದೇಶದ ಸ್ನೇಹ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

prajavani

ಹಿಂದೊಮ್ಮೆ ಬೋಧಿಸತ್ವ ಕೃಷಿಕ ಬ್ರಾಹ್ಮಣನ ಮನೆಯಲ್ಲಿ ಜನ್ಮತಾಳಿದ. ಅವನು ದೊಡ್ಡವನಾದ ಮೇಲೆ ಮದುವೆಯಾಗಿ ತಾನಿದ್ದ ಹಳ್ಳಿಯ ಪೂರ್ವದಲ್ಲಿ ಹಿರಿಯರಿಂದ ಬಳುವಳಿಯಾಗಿ ಬಂದಿದ್ದ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದ. ಅವನ ಹೊಲದ ಬದಿಯಲ್ಲಿ ಒಂದು ಸುಂದರವಾದ ಕೆರೆ ಇತ್ತು. ಒಂದು ದಿನ ಮುಖ ತೊಳೆಯಲೆಂದು ಬೋಧಿಸತ್ವ ಕೆರೆಗೆ ಬಂದಾಗ ಒಂದು ದೊಡ್ಡ ಬಂಗಾರ ವರ್ಣದ ಏಡಿ ಕಾಣಿಸಿತು. ಆತ ಅದನ್ನು ಎತ್ತಿಕೊಂಡು ತನ್ನ ಹೊದಿಕೆಯಲ್ಲಿ ಇಟ್ಟುಕೊಂಡ. ಅದೂ ಪ್ರತಿರೋಧ ತೋರದೆ ಸುಮ್ಮನಿದ್ದಿತು. ಅದನ್ನು ತನ್ನ ಜೊತೆಗೆ ಹೊಲಕ್ಕೆ ಕರೆದೊಯ್ದ. ಮತ್ತೆ ಸಂಜೆ ಮನೆಗೆ ಹೋಗುವಾಗ ಏಡಿಯನ್ನು ಕೆರೆಯಲ್ಲಿ ಬಿಟ್ಟು ಹೋದ.

ಪ್ರತಿದಿನವೂ ಇದೇ ರೂಢಿಯಾಯಿತು. ಬೋಧಿಸತ್ವ ಕೆರೆಗೆ ಹೋಗುವಷ್ಟರಲ್ಲಿ ಏಡಿ ದಂಡೆಗೆ ಬಂದು ಕುಳಿತಿರುತ್ತಿತ್ತು. ಅವರಿಬ್ಬರ ನಡುವೆ ವಿಶೇಷವಾದ ಸ್ನೇಹ ಬೆಳೆಯಿತು. ಹೊಲದ ಬದಿಯಲ್ಲಿ ಒಂದು ತಾಳೆಮರವಿತ್ತು. ಅದರಲ್ಲಿ ಒಂದು ಕಾಗೆಯ ದಂಪತಿ ವಾಸವಾಗಿದ್ದವು. ಹೆಣ್ಣು ಕಾಗೆ ನಿತ್ಯವೂ ಈ ಬ್ರಾಹ್ಮಣನನ್ನು ನೋಡುತ್ತಿತ್ತು. ಅದಕ್ಕೊಂದು ವಿಚಿತ್ರವಾದ ಆಸೆ ಮೂಡಿತು. ತಾನು ಹೇಗಾದರೂ ಮಾಡಿ ಆ ಬ್ರಾಹ್ಮಣನ ಕಣ್ಣುಗಳನ್ನು ತಿನ್ನಬೇಕೆಂಬುದು ಆ ಆಸೆ. ಆದರೆ ಅದನ್ನು ತೀರಿಸಿಕೊಳ್ಳುವುದು ಹೇಗೆ? ಅದಕ್ಕೊಂದು ಪರಿಹಾರ ಕಾಣಿಸಿತು.

ತಾಳೆಮರದಿಂದ ಸ್ವಲ್ಪ ದೂರದಲ್ಲಿ ಒಂದು ಹುತ್ತ. ಅದರಲ್ಲೊಂದು ಭಾರೀ ಕೃಷ್ಣ ಸರ್ಪವಿತ್ತು. ಅದನ್ನು ಮೆಚ್ಚಿಸಿದರೆ ಅದು ಬ್ರಾಹ್ಮಣನನ್ನು ಕಚ್ಚಿ ಸಾಯಿಸುತ್ತದೆ. ಆಮೇಲೆ ತಾನು ಅವನ ಕಣ್ಣುಗಳನ್ನು ತಿನ್ನಬಹುದು. ಹೀಗೆ ಚಿಂತಿಸಿ ಹೆಣ್ಣು ಕಾಗೆ ಕೃಷ್ಣಸರ್ಪದ ಸೇವೆ ಮಾಡತೊಡಗಿತು.

ದಿನಗಳು ಕಳೆದವು. ಬೋಧಿಸತ್ವನ ಹೊಲದಲ್ಲಿ ಬೆಳೆ ಬೆಳೆದು ನಿಂತಿತು. ಏಡಿ ಇನ್ನೂ ಬಲಿಷ್ಠವಾಯಿತು. ಒಂದು ದಿನ ಸರ್ಪ ಕಾಗೆಯನ್ನು ಕೇಳಿತು, ‘ನೀನು ನನ್ನ ಸೇವೆಯನ್ನು ತಪ್ಪದೇ ಮಾಡುತ್ತಿದ್ದೀ. ನಾನು ನಿನಗೆ ಏನು ಮಾಡಲಿ?’ ಕಾಗೆ, ‘ಸರ್ಪಗುರು, ನನಗೆ ಆ ಬ್ರಾಹ್ಮಣನ ಕಣ್ಣುಗಳನ್ನು ತಿನ್ನುವ ಆಸೆಯಾಗಿದೆ. ಅದಕ್ಕೆ ನೀನು ಅವನನ್ನು ಕಚ್ಚಿದರೆ ಅವನು ಸಾಯುತ್ತಾನೆ. ಆಗ ಅವನ ಕಣ್ಣುಗಳನ್ನು ತಿನ್ನಬಹುದು’. ‘ಇಷ್ಟು ಸೇವೆ ಮಾಡಿ ನನಗೆ ನೀನು ಪ್ರಿಯಳಾಗಿದ್ದಿ, ನಾನು ಇಂದೇ ಅವನನ್ನು ಕಚ್ಚಿಬಿಡುತ್ತೇನೆ’ ಎಂದಿತು ಸರ್ಪ.

ಅಂದು ಸಂಜೆ ಮನೆಗೆ ಹೋಗುವಾಗ, ಪ್ರತಿದಿನದಂತೆ ಏಡಿಯನ್ನು ಕೆರೆಯಲ್ಲಿ ಬಿಡಲು ಹೊರಟ ಬೋಧಿಸತ್ವ. ದಾರಿಯಲ್ಲಿ ಕುಳಿತಿದ್ದ ಸರ್ಪ ಅವನ ಕಾಲಿಗೆ ಬಲವಾಗಿ ಕಚ್ಚಿತು. ಕ್ಷಣದಲ್ಲೇ ಬೋಧಿಸತ್ವ ವಿಷವೇರಿ ಸತ್ತು ಬಿದ್ದ. ಅವನ ಎದೆಯ ಮೇಲೆ ಕುಳಿತಿದ್ದ ಏಡಿ ಇದನ್ನು ಕಂಡಿತು.

ಆಗ ಕಾಗೆ ಬೋಧಿಸತ್ವನ ಕಣ್ಣನ್ನು ತಿನ್ನಲು ಬಂದಿತು. ಇದೇ ತನ್ನ ಸ್ನೇಹಿತನ ಸಾವಿಗೆ ಕಾರಣವಿರಬೇಕೆಂದು ತನ್ನ ಒಂದು ಕೊಂಡಿಯಿಂದ ಅದರ ಕತ್ತನ್ನು ಹಿಡಿದು, ‘ಹೇಳು ಯಾಕೆ ಹೀಗೆ ಮಾಡಿದೆ?’ ಎಂದು ಕೇಳಿತು. ಆಗ ಕಾಗೆ ಹೋಗುತ್ತಿದ್ದ ಸರ್ಪವನ್ನು ಕಂಡು, ‘ಸರ್ಪಗುರು ನನ್ನನ್ನು ಕಾಪಾಡು’ ಎಂದು ಕೂಗಿತು. ಸರ್ಪ ಹತ್ತಿರಕ್ಕೆ ಬಂದಾಗ ಏಡಿ ತನ್ನ ಇನ್ನೊಂದು ಕೊಂಡಿಯಿಂದ ಅದನ್ನು ಗಪ್ಪನೆ ಹಿಡಿದು, ‘ನನ್ನ ಮಿತ್ರನನ್ನು ಉಳಿಸುತ್ತೀಯೋ ಅಥವಾ ನಿನ್ನನ್ನು ಕತ್ತರಿಸಿಬಿಡಲೋ?’ ಎಂದು ಕೇಳಿತು. ಆಗ ಸರ್ಪ ಬೋಧಿಸತ್ವನ ವಿಷವನ್ನು ಪೂರ್ತಿಯಾಗಿ ಹೀರಿಕೊಂಡಿತು. ಬೋಧಿಸತ್ವ ಎದ್ದು ಕುಳಿತ. ಏಡಿ ತನ್ನ ಎರಡೂ ಕೊಂಡಿಗಳಲ್ಲಿ ಸಿಕ್ಕಿದ್ದ ಕಾಗೆ ಮತ್ತು ಸರ್ಪಗಳನ್ನು ತುಂಡರಿಸಿ ಕೊಂದು ಬಿಟ್ಟಿತು.

ಕೆಟ್ಟ ಉದ್ದೇಶಗಳಿಗಾಗಿ ಸ್ನೇಹ ಮಾಡಬಾರದು. ಹಾಗೆ ಮಾಡಿದರೆ ಇಬ್ಬರೂ ತೊಂದರೆಗೆ ಗುರಿಯಾಗುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)