ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಮಗನನ್ನು ಕರೆತರುವ ತೀರ್ಮಾನ

Last Updated 9 ಸೆಪ್ಟೆಂಬರ್ 2021, 23:38 IST
ಅಕ್ಷರ ಗಾತ್ರ

ಮೊಮ್ಮಗಳು ಕೃಷ್ಣಾಜಿನ ಹೇಳಿದಳು, ‘ಅಜ್ಜಾ, ಅಲ್ಲಿ ಬದುಕು ಇಲ್ಲಿನ ಹಾಗೆ ಚೆನ್ನಾಗಿಲ್ಲ, ಘೋರ ಕಾನನದಲ್ಲಿ ಅಲೆಯುವ ಅಮ್ಮನ ಕೂದಲು ಕ್ಷೀಣವಾಗಿವೆ. ಆಕೆ ಸೀರೆಯನ್ನು ಬಿಗಿಯಾಗಿ ಕಚ್ಚೆ ಕಟ್ಟಿ, ಮೇಲೆ ಜಿಂಕೆಯ ಚರ್ಮವನ್ನು ಸುತ್ತಿಕೊಂಡು ಅಲೆಯುತ್ತಾಳೆ. ಆಶ್ರಮದಲ್ಲಿ ಎಲ್ಲರೂ ನೆಲದ ಮೇಲೆಯೇ ಮಲಗುತ್ತಿದ್ದೆವು. ಈ ಅರಮನೆಯ ವೈಭವವನ್ನು ಕಂಡಾಗ ಕಾಡಿನ ಕಷ್ಟ ಹೆಚ್ಚೆನಿಸುತ್ತದೆ. ಅಜ್ಜಾ, ಲೋಕದಲ್ಲಿ ತಂದೆ ತಾಯಿಯರಿಗೆ ಮಕ್ಕಳು ಹೆಚ್ಚು ಪ್ರಿಯರಾಗಿರುತ್ತಾರೆಂದು ಕೇಳಿದ್ದೇನೆ. ಆದರೆ ತಾತನಾದ ನಿನಗೆ ಮಾತ್ರ ಮಗನ ಬಗ್ಗೆ ಯಾಕೆ ಪ್ರೀತಿಯಿಲ್ಲ?’. ರಾಜನ ಕಣ್ಣಲ್ಲಿ ನೀರು ಹೊಳೆಯಿತು. ‘ಹೌದು ಮಕ್ಕಳೇ ನಾನು ಬಹು ದೊಡ್ಡ ದುಷ್ಕೃತ್ಯವನ್ನು ಮಾಡಿದ್ದೇನೆ. ನಾನು ಕೆಲವು ಸಿವಿ ಪ್ರಮುಖರ ಮಾತು ಕೇಳಿ ನಿರ್ದೋಷಿಯಾದ ಮಗನನ್ನೇ ದೇಶದಿಂದ ಹೊರಗೆ ಹಾಕಿಬಿಟ್ಟೆ. ನಾನು ಮಾಡಿದ್ದು ಭ್ರೂಣಹತ್ಯೆಯಂಥ ಮಹಾಪಾಪದ ಕೆಲಸ. ಈಗ ನನ್ನ ಬಳಿ ಯಾವ ಧನ, ಧಾನ್ಯ, ಸಂಪತ್ತು ಇದೆಯೋ, ಅದೆಲ್ಲ ವೆಸ್ಸಂತರನದೇ. ಅವನೇ ಮರಳಿ ಬಂದು ಸಿವಿರಾಷ್ಟ್ರವನ್ನು ಆಳಲಿ’ ಎಂದು ಕಣ್ಣೊರೆಸಿಕೊಂಡ.

ಜಾಲಿಕುಮಾರ, ‘ಮಹಾರಾಜಾ, ತಂದೆ- ತಾಯಿಯರು ನಾನು ಹೇಳಿದರೆ ಬರುವವರಲ್ಲ. ಅದಕ್ಕೆ ನೀನೇ ದಯಮಾಡಿ ಅಲ್ಲಿಗೆ ಹೋಗಿ ಅವರನ್ನು ಒಲಿಸಿ ಕರೆ ತನ್ನಿರಿ’ ಎಂದ. ತಕ್ಷಣವೇ ರಾಜ ಆಜ್ಞೆ ಮಾಡಿದ, ‘ಸೇನಾಪತಿಗಳೇ, ಆನೆ, ಕುದುರೆ, ರಥ, ಕಾಲಾಳು ಸೇನೆಯನ್ನು ಸಿದ್ಧಗೊಳಿಸಿ. ನಿಗಮದವರು, ಬ್ರಾಹ್ಮಣರು, ಪುರೋಹಿತರು ನನ್ನನ್ನು ಹಿಂಬಾಲಿಸಲಿ. ನಾನಾ ರೀತಿಯಲ್ಲಿ ಅಲಂಕೃತರಾದ ಅರವತ್ತು ಸಾವಿರ ಯೋಧರು ಶೀಘ್ರದಲ್ಲಿ ಸಿದ್ಧರಾಗಿ ಬರಲಿ. ನೀಲವಸ್ತ್ರಧಾರಿಗಳು, ಪೀತ ವಸ್ತ್ರಧಾರಿಗಳು, ಬಿಳೀ ವಸ್ತ್ರಧಾರಿಗಳು, ಕೆಂಪುಪೇಟಗಳನ್ನು ಧರಿಸಿದವರು, ಬಗೆಬಗೆಯ ಅಲಂಕಾರಗಳೊಡನೆ ತೀವ್ರವಾಗಿ ಬರಲಿ. ದಶದಿಕ್ಕುಗಳು ಬೆಳಗಲಿ. ನಂತರ ಹದಿನಾಲ್ಕು ಸಾವಿರ ಆನೆಗಳು ಬರಲಿ. ಅವುಗಳ ಗವುಸಿನಲ್ಲಿ ಚಿನ್ನವಿರಲಿ. ಅದು ಬಂಗಾರದ ಅಲಂಕಾರದಿಂದ ಬಿಗಿದಿರಲಿ. ಅವುಗಳ ಮೇಲೆ ತೋಮರ, ಅಂಕುಶಗಳನ್ನು ಹಿಡಿದ ಗ್ರಾಮಣಿ ಕುಳಿತಿರಲಿ. ಶ್ರೇಷ್ಠ ಜಾತಿಯ, ಅಜಾನೀಯ, ಶೀಘ್ರಗಾಮಿಗಳಾದ ಹದಿನಾಲ್ಕು ಸಾವಿರ ಕುದುರೆಗಳು ಸಿದ್ಧವಾಗಲಿ. ಅವುಗಳ ಮೇಲೆ ಬಲಶಾಲಿಗಳಾದ ಖಡ್ಗ ಮತ್ತು ಧನುರ್ಧಾರಿಗಳು ಕುಳಿತಿರಲಿ. ನಂತರ ಚೆನ್ನಾಗಿ ಸಜ್ಜಾದ, ಗಟ್ಟಿ ಗಾಲಿಗಳುಳ್ಳ, ಬಂಗಾರದ ಅಲಂಕಾರಗಳನ್ನು ಹೊಂದಿದ ಹದಿನಾಲ್ಕು ಸಾವಿರ ರಥಗಳಿರಲಿ. ಅವುಗಳ ಮೇಲೆ ನಮ್ಮ ರಾಷ್ಟ್ರದ ಧ್ವಜ ಹಾರಾಡುತ್ತಿರಲಿ. ಚರ್ಮದ ಕವಚಗಳನ್ನು ಧರಿಸಿದ, ಧೃಡವಾದ ಪ್ರಹಾರ ಮಾಡುವ ಶಕ್ತಿಯುಳ್ಳ ಧನುರ್ಧಾರಿಗಳು ರಥದಲ್ಲಿ ಕುಳಿತು, ಸಿದ್ಧವಾಗಿ ಬೇಗನೇ ಬಂದು ಸೇರಲಿ’. ಅದೇ ಉತ್ಸಾಹದಲ್ಲಿ ರಾಜ ಅಮಾತ್ಯರಿಗೆ ಹೇಳಿದ, ‘ನನ್ನ ಮಗ ಇಲ್ಲಿಗೆ ಬರಲು ಅನುಕೂಲವಾಗುವಂತೆ ಜೆತುತ್ತರ ನಗರದಿಂದ ವಕಪರ್ವತದವರೆಗೆ ನೆಲವನ್ನು ಸಮತಟ್ಟು ಮಾಡಿಸಿ ಅಷ್ಟಪಥಗಳ ರಸ್ತೆಯನ್ನು ಮಾಡಿಸಿ’. ಮಗನನ್ನು ಕರೆತರುವುದರಲ್ಲಿ ರಾಜನ ಉತ್ಸಾಹ ಮಿತಿ ಮೀರಿತ್ತು. ‌‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT