ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು| ಖಡ್ಗದಿಂದಾಗದ್ದು ಕರುಣೆಯಿಂದಾದೀತು

Last Updated 1 ಜೂನ್ 2020, 3:03 IST
ಅಕ್ಷರ ಗಾತ್ರ

ಮರುಕದುಂಬಿದ ಕಣ್ಣ ನೋಟದೊಳಗಿದ್ದೀತು |
ಬಿರುನುಡಿಯೊಳಿರದೊಂದು ಕೂರಲಗು, ಸಖನೆ ||
ಕರವಾಳಕದಿರದಿಹ ದುರಿತಕಾರಿಯ ಹೃದಯ |
ಕರುಣೆಯಿಂ ಕರಗೀತೊ – ಮಂಕುತಿಮ್ಮ || 296 ||

ಪದ-ಅರ್ಥ: ಮುರುಕದುಂಬಿದ=ಮರುಕ (ಕರುಣೆ)+ತುಂಬಿದ, ಬಿರುನುಡಿಯೊಳಿರ ದೊಂದು=ಬಿರುನುಡಿಯೊಳು+ಇರದೊಂದು, ಕೂರಲಗು=ಹರಿತವಾದ ಕತ್ತಿ, ಕರವಾಳಕದಿರ
ದಿಹ=ಕರವಾಳಕೆ(ಕತ್ತಿಗೆ)+ಅದಿರದಿಹ(ಸ್ಪಂದಿಸದ)

ವಾಚ್ಯಾರ್ಥ: ಒರಟು ಮಾತಿನಲ್ಲಿ ತೋರಿ ಬಾರದ ಹರಿತವಾದ ಅಲಗು, ಕರುಣೆ, ದೈನ್ಯತೆ ತುಂಬಿದ ಕಣ್ಣಿನ ನೋಟದಲ್ಲಿ ಇದ್ದೀತು. ಕತ್ತಿಗೆ ಸ್ಪಂದಿಸದ ಕ್ರೂರಿಯ ಹೃದಯ ಕರುಣೆಯಿಂದ ಕರಗಿತು.

ವಿವರಣೆ: ಇದೊಂದು ಅದ್ಭುತವಾದ ಸತ್ಯ ಘಟನೆ. 24ನೇ ಡಿಸೆಂಬರ್‌, 1999 ರಂದು ಭಾರತದ ಇಂಡಿಯನ್ ಏರ್‌ಲೈನ್ಸ್ IC 814 ವಿಮಾನವನ್ನು ಐದು ಜನ ಮುಸುಕು ಧರಿಸಿದ ಆತಂಕವಾದಿಗಳು ಅಪಹರಿಸಿಕೊಂಡು ಅಫಘಾನಿಸ್ತಾನದ ಕಂದಹಾರಕ್ಕೆ ತೆಗೆದುಕೊಂಡು ಹೋದರು. ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ 217 ಜನರಿಗೆ ನರಕದರ್ಶನ. ಉಗ್ರರು ಸದಾ ಕೈಯಲ್ಲಿ ಎ.ಕೆ. 47 ಬಂದೂಕುಗಳನ್ನು ಹಿಡಿದುಕೊಂಡು ಸಂಶಯ ಬಂದವರನ್ನು ಹೊಡೆಯುತ್ತ, ಕೊಂದು ಬಿಡುತ್ತೇವೆಂದು ಹೆದರಿಸುತ್ತಿದ್ದರು. ಒಬ್ಬ ತರುಣನನ್ನು ಎಲ್ಲರ ಮುಂದೆಯೇ ಬರ್ಬರವಾಗಿ ಕತ್ತಿಯಿಂದ ಇರಿದು ಕೊಂದುಬಿಟ್ಟರು. ಆಗ ಒಬ್ಬ ಹುಡುಗ – ಅವನು ಬುದ್ಧಿಮಾಂದ್ಯನಂತೆ, ಎದ್ದು ನಿಂತ. ಉಗ್ರನೊಬ್ಬ ಓಡಿ ಬಂದು ಬಂದೂಕಿನ ಕಬ್ಬಿಣದ ಹಿಡಿಕೆಯಿಂದ ಅವರ ತಲೆಗೆ ಅಪ್ಪಳಿಸಿದ. ತಲೆಯಿಂದ ರಕ್ತ ಚಿಲ್ಲೆಂದು ಚಿಮ್ಮಿತು. ಪಕ್ಕದಲ್ಲಿ ಕುಳಿತಿದ್ದ ತಾಯಿಯ ಹೃದಯ ಕಿತ್ತು ಬಂದಿತು. ಉಗ್ರನೊಬ್ಬ ಕತ್ತಿ ಹಿರಿದು ಹುಡುಗನ ಕತ್ತು ಕತ್ತರಿಸಲೆಂದೇ ಕೈ ಎತ್ತಿದ. ತಾಯಿಗೆ ಏನಾಗಿರಬೇಕು? ಆಕೆಯ ಬಾಯಿಯಿಂದ ಒಂದು ಮಾತೂ ಬರುತ್ತಿಲ್ಲ. ಕಣ್ಣಿಂದ ನೀರು ಸೋರುತ್ತಿದೆ! ಆಕೆ ದೈನ್ಯದಿಂದ ಕ್ರೂರಿಯನ್ನು ನೋಡಿ, ಕಣ್ಣಿನಿಂದಲೇ ಮಗನ ಪ್ರಾಣವನ್ನು ಬೇಡಿರಬೇಕು. ಏನಾಯಿತೋ? ಆ ಕ್ರೂರಿ ‘ಆಯ್ತು, ಅವನಿಗೆ ತಲೆ ಪಟ್ಟಿ ಕಟ್ಟಿ, ನಿಮ್ಮ ಪಕ್ಕದಲ್ಲೇ ಕೂರಿಸಿಕೊಳ್ಳಿ. ಮೇಲೆ ಏಳುವುದಕ್ಕೆ ಬಿಡಬೇಡಿ’ ಎಂದು ಹೇಳಿ ಅಲ್ಲಿಂದ ಹೊರಟುಹೋದ. ಅವನನ್ನು ಪ್ರತಿಭಟಿಸಲು, ಹೊಡೆಯಲು ಹೋಗಿದ್ದರೆ ಆತ ಕೊಂದೇ ಬಿಡುತ್ತಿದ್ದನೇನೋ. ಅದೇ ಈ ಕಗ್ಗದ ಧ್ವನಿ. ಒಂದು ಹರಿತವಾದ ಖಡ್ಗದಿಂದಾಗದ ಕಾರ್ಯ, ಕರುಣೆ, ದೈನ್ಯ ತುಂಬಿದ ನೋಟದಿಂದ ಆದೀತು. ಆದ್ದರಿಂದ ಬಿರುಸು ಮಾತು, ಒರಟು ನಡೆಯಿಂದಾಗದ್ದು ಮೃದುವಾದ ನಡೆಯಿಂದ, ಪ್ರೀತಿಯಿಂದ ಸಾಧ್ಯವಾದೀತು. ಯಾವಾಗಲೂ ಖಡ್ಗವನ್ನು ಖಡ್ಗದಿಂದಲೇ ಗೆಲ್ಲಲಾಗುವುದಿಲ್ಲ. ಪ್ರೇಮ, ಕರುಣೆ ಅದನ್ನು ಸಾಧಿಸುತ್ತದೆ. ಮಹಾಕ್ರೂರಿಯಾಗಿ, ತಾನು ಕೊಂದ ವ್ಯಕ್ತಿಗಳ ಬೆರಳುಗಳ ಮಾಲೆಯನ್ನು ಮಾಡಿಕೊಂಡು ಅಂಗುಲಿಮಾಲನಾಗಿದ್ದವನನ್ನು ಗೆದ್ದದ್ದು ಮತ್ತೊಂದು ಹರಿತವಾದ ಕತ್ತಿಯಾಗಲಿ, ಮತ್ತಷ್ಟು ಕ್ರೂರವಾದ ಹೃದಯವಲ್ಲ. ಅವನನ್ನು ಗೆದ್ದದ್ದು ಭಗವಾನ್ ಬುದ್ಧನ ಅನ್ಯಾದೃಶವಾದ ಪ್ರೀತಿ, ಕರುಣೆ ತುಂಬಿದ ಹೃದಯ. ಅಂತೆಯೇ ನಾಲ್ಕು ಲಕ್ಷ ಜನ ಸೈನಿಕರನ್ನು ಕಟ್ಟಿಕೊಂಡು ದೇಶದೇಶಗಳನ್ನು ಸುತ್ತುತ್ತ, ಎದುರು ಬಂದವರನ್ನು ಕೊಲ್ಲುತ್ತಾ ತನ್ನ ಮೂವತ್ತಾರನೆಯ ವಯಸ್ಸಿಗೇ ಅರ್ಧ ಪ್ರಪಂಚವನ್ನೇ ಗೆದ್ದಿದ ಅಲೆಕ್ಸಾಂಡರ್ ಸೋತದ್ದು, ಶರಣಾಗತ ಆದದ್ದು ತನಗಿಂತ ಬಲಶಾಲಿಯಾದ ಖಡ್ಗಧಾರಿಗೆ ಅಲ್ಲ. ಆತ ಮನಸೋತದ್ದು ಹೃದಯ ತಟ್ಟಿದ ಅಧ್ಯಾತ್ಮದ ಮಾತಿಗೆ, ಉಪದೇಶಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT